Wednesday, April 16, 2014

ಛೇ ಏನರೇ ಮಾಡಿ ಹೊಟ್ಟಿ ಕರಗಸಬೇಕು

ಈ ಹಾಸ್ಯ ಬರಹ 'ಅವಧಿ'ಯಲ್ಲಿ ಪ್ರಕಟವಾಗಿತ್ತು.

http://avadhimag.com/2014/03/29/%e0%b2%9b%e0%b3%87-%e0%b2%8f%e0%b2%a8%e0%b2%b0%e0%b3%87-%e0%b2%ae%e0%b2%be%e0%b2%a1%e0%b2%bf-%e0%b2%b9%e0%b3%8a%e0%b2%9f%e0%b3%8d%e0%b2%9f%e0%b2%bf-%e0%b2%95%e0%b2%b0%e0%b2%97%e0%b2%b8%e0%b2%ac/

---------------------------

ಕನ್ನಡಿ ಎದುರು ನಿಂತ ಗಣೇಶನ ಕಣ್ಣುಗಳು ತನ್ನದೇ ಪ್ರತಿಬಿಂಬದಲ್ಲಿ ಕಾಣುತ್ತಿದ್ದ ಡುಮ್ಮ ಹೊಟ್ಟೆಯನ್ನೇ ಗಾಬರಿಯಿಂದ ಗಮನಿಸುತ್ತಿದ್ದವು. ಎಷ್ಟು ಸಣ್ಣಗಿದ್ದವನು ಹಿಂಗ್ಯಾಕಾದೆ ಅಂತ ಯೋಚಿಸುತ್ತಿರುವಂತೆ, “ಏನ ನೋಡಕೋತ ನಿಂತ್ರಿ ? ” ಅಂತ ಹೆಂಡತಿ ಜಾನು ಎಚ್ಚರಿಸಿದಾಗ, “ಏನೂ ಇಲ್ಲಾ, ಹಂಗ ಸುಮ್ನ ..” ಅಂತೇನೋ ಬಡಬಡಿಸಿ ಕೈಗೆ ಸಿಕ್ಕ ಪ್ಯಾಂಟೊಂದನ್ನು ಏರಿಸಿಕೊಂಡು ಉಸಿರು ಬಿಗಿ ಹಿಡಿದು ಹೊಟ್ಟೆ ಒಳಗೆ ತಂದುಕೊಂಡು, ಹರಸಾಹಸದಿಂದ ಇನ್ ಶರ್ಟ್ ಮಾಡಿಕೊಳ್ಳುವಷ್ಟರಲ್ಲಿ ಒಂಭತ್ತಾಗಿತ್ತು. ಇವತ್ತೇನು ಟಿಫಿನ್ನು ಅಂತ ವಾಸನೆಯಿಂದಲೇ ಗ್ರಹಿಸುವ ವ್ಯರ್ಥ ಪ್ರಯತ್ನ ಮಾಡಿ ಅರ್ಥವಾಗದೇ ಹೆಂಡತಿಯನ್ನು ಪ್ರಶ್ನಾರ್ಥಕವಾಗಿ ನೋಡಲಾಗಿ “ಇಡ್ಲಿ ಮಾಡೇನಿ” ಅಂತ ಅವಳು ಅಂದಾಗ ಅವನ ಮೈ ಝುಮ್ ಅಂತು. ಈ ಥರ ಇಡ್ಲಿ, ದ್ವಾಸಿ ಅಂತೆಲ್ಲ ತಿಂದೇ ತನ್ನ ಈ ಪರಿಸ್ಥಿತಿ ಆಗಿರುವುದು ಅಂತ ಅವನಿಗೆ ಮನದಟ್ಟಾಯ್ತು. ”ಇವತ್ತ್ಯಾಕೊ ಹಸಿವಿಲ್ಲಾ, ಬರೆ ಹಾಲು ಕೊಟ್ಟು ಬಿಡು” ಅಂದಾಗ, ಜಾನು ಮುಖ ಮಾತಾಡದೆನೇ “… ಈಗ ಮಾಡಿದ್ದೇನು ನಾಯಿಗೆ ಹಾಕ್ಲ್ಯಾ?” ಅನ್ನುತ್ತಿರುವಂತೆ ಭಾಸವಾಗಿ, “ಇರ್ಲಿ ಬಿಡು ಒಂದೆರಡು ಇಡ್ಲಿ ಕೊಡು. ನೀ ಮಾಡಿದ ಇಡ್ಲಿ ತಿನ್ನದ ಹೋಗಲಿಕ್ಕೆ ಮನಸ್ಸು ಒಪ್ಪುದಿಲ್ಲಾ ” ಅಂದಾಗ ಜಾನುನ ಮುಖ ನಾಚಿಕೆಯಿಂದ ಮಸಾಲೆ ದೋಸೆಯಂತೆ ಕೆಂಪಗಾಗಿತ್ತು. ಎರಡು ಇಡ್ಲಿ ಅಂದವನು ಹನ್ನೆರಡು ತಿಂದು ಆಬ್ ಅಂತ ತೇಗಿ ಹೊಟ್ಟೆ ಮೇಲೆ ಕೈ ಆಡಿಸಿಕೊಂಡ. ಅದು ಇನ್ನೂ ದೊಡ್ಡದಾಗಿತ್ತು.
ಕಾರಿನಲ್ಲಿ ಕೂತವನ ಹೊಟ್ಟೆಗೆ ಸ್ಟೇರಿಂಗು ತಾಗುತ್ತಿತ್ತು. ’ಛೇ ಏನರೇ ಮಾಡಿ ಹೊಟ್ಟಿ ಕರಗಸಬೇಕು’ ಅಂತ ಅಚಲ ನಿರ್ಧಾರ ಅವನು ಮಾಡಿ ಆಗಿತ್ತು. ಹಾಗೂ ಹೀಗೂ ಬೆಂಗಳೂರಿನ ಹೊಂಡಗಳ ನಡುವಿನ ರಸ್ತೆಯಲ್ಲಿ ತೇಲುತ್ತ ಸಾಗಿದಾಗಲೆಲ್ಲಾ ಹೊಟ್ಟೆ ತುಂಬಿದ ಕೊಡದಂತೆ(?)  ತುಳುಕಿ ತನ್ನ ಅಸ್ತಿತ್ತ್ವವನ್ನು ನೆನಪಿಸುತ್ತಿತ್ತು. ಆಫೀಸಿನ ಕಟ್ಟಡದ ಲಿಫ್ಟಿನ ಹತ್ತಿರ ಹೋದವನಿಗೆ, ಬಳಕುವ ಬಳ್ಳಿ ಲತಾ ’ಹಾಯ್’ ಅಂತ ಕೈ ಮಾಡಿದಾಗ, ಹೊಟ್ಟೆಯ ಬಗ್ಗೆ ಮೂಡಿದ್ದ ಅಸಮಾಧಾನ, ಬೇಸರವೆಲ್ಲಾ ಮಾಯವಾಗಿ ಲವಲವಿಕೆ ಮೂಡಿತ್ತು! ಹತ್ತಿರ ಹೋಗಿ ಕೈ ಕುಲುಕುತ್ತಿದ್ದಂತೆ ಘಂ ಅಂತ ಗಾಳಿಯಲ್ಲಿ ತೇಲಿ ಬಂದ ಅವಳ ಪರ್ ಫ್ಯುಮ್ ವಾಸನೆಗೆ ತಲೆ ತಿರುಗಿ ಝೋಲಿ ತಪ್ಪಿದಂತಾಗಿ ಹೆಂಗೋ ಮಾಡಿ ಸಾವರಿಸಿಕೊಂಡನವನು. ಇವಳು ಪರ್ ಫ್ಯುಮ್ ನಲ್ಲೇ ದಿನಾಲೂ ಸ್ನಾನ ಮಾಡುತ್ತಾಳೇನೊ ಅಂತ ವಿಚಾರಮಗ್ನನಾದನು. ಇಲ್ಲಾಂದರೆ ಅಷ್ಟು ಘಾಟು ವಾಸನೆ ಬರಲು ಹೇಗೆ ಸಾಧ್ಯ?! ಸಧ್ಯ ಲಿಫ್ಟು ಬಂತು,  ಇನ್ನೇನು ಲತಾಳೊಂದಿಗೆ ಉಮೇದಿಯಿಂದ ಒಳಗೆ ನುಗ್ಗಬೇಕೆನ್ನುವಷ್ಟರಲ್ಲಿ ತನ್ನ ಹೊಟ್ಟೆಯ ನೆನಪಾಗಿ ಹಿಂದೆ ಸರಿದನವನು, ಲಿಫ್ಟಿನಲ್ಲಿ ಹೋಗುವ ಬದಲು ಮೆಟ್ಟಿಲೇರಿಯೆ ಹೋಗಿ ಸ್ವಲ್ಪ ಹೊಟ್ಟೆ ಇವತ್ತು ಕರಗಿಸಿಯೇಬಿಡುವುದೆಂಬ ದಿಟ್ಟ ನಿರ್ಧಾರ ತೊಗೊಂಡು ಮೇಲೆ ಹೋಗುತ್ತಿರುವ ಲಿಫ್ಟನ್ನು, ಅದರಲ್ಲಿದ್ದ ಬಳಕುವ ಬಳ್ಳಿಯನ್ನೂ ತ್ಯಾಗ ಮಾಡಿದ.
ಲತಾ ಮಾತ್ರ ಇವನು ಬಹುಶಃ, ಮೇನಕೆಯನ್ನು ತಿರಸ್ಕರಿಸಿದ ವಿಶ್ವಾಮಿತ್ರನ ಅಪರಾವತಾರನೇ ಇರಬೇಕು ಎಂಬಂತೆ ಕೆಕ್ಕರಿಸಿ ನೋಡುತ್ತಿರುವಲ್ಲಿಗೆ ಲಿಫ್ಟಿನ ಬಾಗಿಲು ತಂತಾನೇ ಮುಚ್ಚಿಕೊಂಡು, ಜೀವನಪೂರ್ತಿ ಗಡಿಬಿಡಿಯಲ್ಲಿಯೇ ಇರುವ ಮಾನವ ಜೀವಿಗಳನ್ನು ಹೊತ್ತು ಲಗುಬಗೆಯಿಂದ ಸಾಗಿತು. ಅದಕ್ಕೂ ಅವಸರವೇ, ಪಾಪ! ಇವನ ಆಫೀಸು ಇರುವುದು ಆರನೇ ಮಹಡಿಯಲ್ಲಿ. ಮೊದಲೆರಡು ಮಹಡಿಗಳನ್ನು ತೇನ್ಸಿಂಗ ನನ್ನೂ ನಾಚಿಸುವಂತೆ ಅಬ್ಬರಿಸಿ ನುಗ್ಗಿದವನಿಗೆ ಮುಂದಿನ ನಾಲ್ಕು ಮಹಡಿಗಳನ್ನೇರುವುದರೊಳಗಾಗಿ ತಿಂದ ಇಡ್ಲಿಗಳು ಕರಗಿ ತಲೆ ಸುತ್ತು ಬಂದಿತ್ತು. ಅಂತೂ ಹರ ಸಾಹಸ ಪಟ್ಟು ತನ್ನ ಜಾಗಕ್ಕೆ ತಲುಪಿ ಉಸ್ಸಪ್ಪಾ ಅಂತ ನಿಟ್ಟುಸಿರಿಟ್ಟನು.
ಇವನಿಗೆ ಆ ದಿನ ಕೆಲಸ ಮಾಡಲು ಮನಸ್ಸಿರಲಿಲ್ಲ, ತಲೆಯಲ್ಲಿ ಕೊರಿತಿದ್ದದ್ದು ಬರೀ ಹೊಟ್ಟೆ ಕರಗಿಸುವ ಚಿಂತೆ! ಅಂತರ್ಜಾಲದಲ್ಲೇನಾದರೂ ಟಿಪ್ಸ್ ಇರಲೇಬೇಕಲ್ಲವೇ ಅಂತ ಗೂಗಲ್ ನಲ್ಲಿ “ಹೊಟ್ಟೆ ಕರಗಿಸುವ ಬಗೆ” ಅಂತ ಟೈಪ್ ಮಾಡಿ ಕೂತವನಿಗೆ ನಿರಾಸೆಯಾಗಲಿಲ್ಲ. ಬಗೆ ಬಗೆಯ ಕಸರತ್ತುಗಳನ್ನು ಫೋಟೋದ ಸಮೇತ ವಿವರಿಸಿದ್ದರು. ಆದರೆ ಫೋಟೊದಲ್ಲಿರುವವರೆಲ್ಲ ಬಳಕುವ ಬಳ್ಳಿಗಳೆ! ಹೊಟ್ಟೆ ಇದ್ದವರ ಕಷ್ಟ ಅವರಿಗೇನು ಗೊತ್ತು. ಈ ಪರಿ ಹೊಟ್ಟೆ ಇಟ್ಟುಕೊಂಡು ಆ ಥರ ಕಸರತ್ತು ಮಾಡಲು ಸಾಧ್ಯವೆ ಎನ್ನುವ ಸಾಮಾನ್ಯ ಪರಿಜ್ನ್ಯಾನವೂ ಇಲ್ಲ ದುರುಳರಿಗೆ ಅಂತ ಬೈದುಕೊಂಡಿರುವಾಗಲೆ,  ಬಳಕುವ ಬಳ್ಳಿ ಲತ ಇವನ ಬಳಿ ಬಂದಳು.  ”ಕಾಫಿಗೆ ಬರ್ತೀರಾ” ಅಂತ ವೈಯ್ಯಾರದಿಂದ ಅಹ್ವಾನಿಸಿದಾಗ ತಿರಸ್ಕರಿಸುವ ಧೈರ್ಯ ಅಥವಾ ಮನಸ್ಸು ಯಾರಿಗಿತ್ತು? ಎದ್ದೇ ಬಿಟ್ಟಾ… ಅದು ಇದು ಅಂತ ಹರಟುತ್ತಾ ಕಾಫಿ ಸವಿಯುತ್ತಿರುವಾಗಲೆ ಲತಾ ತಾನು ದಿನಾ ಬೆಳಿಗ್ಗೆ ಐದು ಕಿಲೋಮೀಟರ್ ಸೈಕಲ್ ತುಳಿಯುತ್ತೇನೆ ಅಂತ ಹೇಳಿ ಇವನ ಕಣ್ಣಲ್ಲಿ ಹೊಳಪು ಮೂಡಿಸಿದಳು. ’ಒಹೋ ಇದೋ ಈ ಬಳಕುವ ಬಳ್ಳಿಯ ಗುಟ್ಟು’ ಅಂತ ಮನಸ್ಸಿನಲ್ಲಿ ಯೋಚಿಸಿದವನಿಗೆ ಹೊಟ್ಟೆ ಕರಗಿಸುವುದಕ್ಕೊಂದು ಉಪಾಯ ಸಿಕ್ಕಿತ್ತು.
 
ಅವತ್ತು ಸ್ವಲ್ಪ ಬೇಗನೇ ಮನೆಗೆ ಹೊರಟು ಬಂದವನ ನೋಡಿ ಜಾನು “ಯಾಕ ಇಷ್ಟು ಲೊಗುನೇ ಬಂದ್ರಿ” ಅಂತ ಅಚ್ಚರಿಯಿಂದ ಕೇಳಿದಳು. ಈ ಹೆಂಡತಿಯರೇ ವಿಚಿತ್ರ, ತಡವಾಗಿ ಬಂದರೂ ಅವರಿಗೆ ಕಾರಣ ಬೇಕು, ಬೇಗ ಬಂದರೂ ವಿವರಿಸಬೇಕು!… ”ಇವತ್ತ ಒಂದು ಹೊಸಾ ಸೈಕಲ್ಲು ತೊಗೊಬೇಕು, ಲೊಗೂನ ತಯಾರಾಗು” ಅಂದವನನ್ನು ಇನ್ನೂ ಅಶ್ಚರ್ಯದಿಂದ ನೋಡುತ್ತಿದ್ದವಳಿಗೆ, ಈ ಐಡಿಯಾ ಕೊಟ್ಟದ್ದು ಲತಾ ಅಂತ ಹೇಳುವಷ್ಟು ಮುರ್ಖನೆ ಅವನು? ”ನಾನು ಇನ್ನ ಮ್ಯಾಲೆ ಮುಂಜಾನೆ ಸೈಕಲನ್ಯಾಗ ೫ ಕಿಲೋಮೀಟರು ಓಡಸ್ತೀನಿ. ಮುಂಜಾನೆ ಹಾಲೂ ನಾನ ತರ್ತೀನಿ. ಹೊಟ್ಟಿ ಕರಗಸಬೇಕು ಅಂದ್ರ ಏನಾದ್ರೂ ಮಾಡಬೇಕಲ್ಲ?”
ಜಾನುಗೆ ಖುಷಿಯಲ್ಲಿ ಏನು ಹೇಳಬೇಕೆಂದು ತೋಚಲಿಲ್ಲ. ಒಳ್ಳೆ ಬುಧ್ದಿ ಕೊಟ್ಟ ಸಕಲ ದೇವಗಣಕ್ಕೆ ಮನಸ್ಸಿನಲ್ಲೇ ನಮಿಸಿದಳು. ಸಣ್ಣ ಪುಟ್ಟ ಕೆಲಸಕ್ಕೂ ಕಾರಿನಲ್ಲೇ ಹೋಗುತ್ತಿದ್ದ ಗಂಡ ಇನ್ನು ಮುಂದೆ ಸೈಕಲ್ಲು ತುಳಿಯುತ್ತ ಹೋಗುವುದನ್ನು ಕಲ್ಪಿಸಿಕೊಂಡು ಪುಳಕಗೊಂಡಳು. ತಿಂಗಳಿಗೊಂದು ಎರಡು ಸಾವಿರ ರುಪಾಯಿ ಪೆಟ್ರೋಲು ಉಳಿತಾಯವಾಗುವುದನ್ನು ಅಂದಾಜಿಸಿ ಖುಷಿ ಪಟ್ಟಳು. ಅವತ್ತೇ ಇಬ್ಬರೂ ಮಾರ್ಕೆಟ್ಟಿಗೆ ಹೋಗಿ ಗೇರುಗಳಿರುವ ಹೈಫೈ ಸೈಕಲ್ಲೊಂದನ್ನು ಹದಿನೈದು ಸಾವಿರ ಕೊಟ್ಟು ತಂದೂ ಆಯಿತು. ಬರೀ ಸೈಕಲ್ಲಷ್ಟೆ ಸಾಕೆ? ಕೈಗೊಂದು ಗ್ಲೌಸು, ಪಾದಗಳಿಗೆರಡು ಚಂದನೆಯ ಬೂಟುಗಳು, ತಲೆಗೊಂದು ಹೆಲ್ಮೇಟು… ಅಬ್ಬಬ್ಬಬ್ಬಾ ಒಳ್ಳೆ ಮದುವೆ ತಯಾರಿಯಂಗಿತ್ತು!  ಮನೆಗೆ ತಂದವನೇ ಅದರಲ್ಲಿ ಕೂತು ಬೇರೆ ಬೇರೆ ಯ್ಯಾಂಗಲ್ ನಲ್ಲಿ ಫೋಟೊ ತೆಗೆಸಿಕೊಂಡು, ಫೇಸ್ ಬುಕ್ಕಿನಲ್ಲಿ ಹಾಕಿ ಸ್ನೇಹಿತರಿಂದ ಲೈಕು, ಕಮೆಂಟುಗಳ ಸುರಿಮಳೆಗಳನ್ನ ಕಣ್ತುಂಬಾ ನೋಡಿದವನಿಗೆ ಅವತ್ತು ರಾತ್ರಿ ನಿದ್ದೆ ಬರುವುದೇ ದುಸ್ತರವಾಯ್ತು. ಹಾಗೂ ಹೀಗು ಹೊರಳಾಡಿ ರಾತ್ರಿ ನಿದ್ರಾದೇವಿ ಅವರಿಸಿಕೊಂಡಾದ ಮೇಲೆ, ರಾತ್ರಿಯಲ್ಲಾ ಕನಸಿನಲ್ಲೆಲ್ಲಾ ಸೈಕಲ್ಲೆ!
ಬೆಳಿಗ್ಗೆ ಬೇಗ ಎದ್ದವನೆ ತನ್ನ ತೂಕ ೮೦ ಇರುವುದನ್ನು ಖಚಿತಪಡಿಸಿಕೊಂಡ. ಯಾಕೆಂದರೆ ಒಂದು ತಿಂಗಳ ನಂತರ ಎಷ್ಟು ಕಡಿಮೆಯಾಯಿತೆಂಬುದರ ಅಂದಾಜು ಬೇಕಲ್ಲವೆ? ತದ ನಂತರ ಜೊತೆಗೆ ತಂದ ಎಲ್ಲ ಪರಿಕರಗಳನ್ನು ಧರಿಸಿಕೊಂಡು ಒಳ್ಳೆ ಯುಧ್ಧಕ್ಕೆ ಹೊರಟವನಂತೆ,  ಸೈಕಲ್ಲು ತುಳಿಯುತ್ತ ರೋಡಿನಲ್ಲಿ ಹೋಗುತ್ತಿದ್ದರೆ ಒಂಥರ ನಾಚಿಕೆ! ಉಮೇದಿನಲ್ಲಿ ಸುಮಾರು ಐದು ಕಿಲೋಮೀಟರು ಸೈಕಲ್ಲು ತುಳಿದು ಮನೆಗೆ ಬಂದವನ ಕಾಲುಗಳು ಮಾತಾಡಲು ತೊಡಗಿದ್ದವು.  ಇವನ ಉಮೇದಿ ಎಷ್ಟು ದಿನವೋ ಅಂತ ಅತಂಕದಿಂದಿದ್ದ ಜಾನುಗೆ  ದಿನಾಲು ರೆಗುಲರ್ ಆಗಿ ಸೈಕಲ್ಲು ಹೊಡೆಯಲು ಶುರು ಮಾಡಿ  ಆಶ್ಚರ್ಯ ತಂದನಲ್ಲದೇ, ಯಾವುದಾದರು ಹುಡುಗಿ ಹಿಂದೆ ಬಿದ್ದಿರಬಹುದೆಂಬ ಗುಮಾನಿಯನ್ನೂ ಹುಟ್ಟು ಹಾಕಿದ! ಹಾಗಿರಲಿಕ್ಕಿಲ್ಲ, ತನಗಿಂತ ಪೆದ್ದ ಹುಡಿಗಿ ಹತ್ತಿರದಲ್ಲ್ಯಾರೂ ಇರಲಿಕ್ಕಿಲ್ಲ ಅಂತ ಸಮಾಧಾನ ಮಾಡಿಕೊಂಡಳು! ಅದೂ ಅಲ್ಲದೇ, ದಿನಾಲು ಹಾಲು ತಾನೇ ತಂದು, ಚಹಾ ಕೂಡ ತನ್ನ ಕೈಯಾರೆ ಮಾಡಿಕೊಂಡು ಕುಡಿಯುವ ಗಂಡ ಯಾರಿಗೆ ತಾನೆ ಇಷ್ಟವಾಗುವುದಿಲ್ಲ? ಹೀಗೆ ಒಂದು ತಿಂಗಳು ಕಳೆಯಿತು. ಕಾರಿನ ದುರ್ಬಳಕೆಯೂ ಕಡಿಮೆಯಾಗಿತ್ತು. ಎರಡು ಕೇಜಿ ತೂಕ ಕಡಿಮೆಯಾಗಿದ್ದೂ ಒಂದು ದೊಡ್ಡ ಸಾಧನೆಯೇ ಆಗಿತ್ತು. ಗಂಡ ಹೆಂಡತಿ ಕೂತುಕೊಂಡು ಒಂದು ತಿಂಗಳಲ್ಲಿ ಎಷ್ಟು ಉಳಿತಾಯವಾಗಿರಬಹುದೆಂದು ಲೆಕ್ಕ ಹಾಕಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು!
ಮತ್ತೆ ಒಂದಿಷ್ಟು ಫೋಟೊ ತೆಗೆದು ಬಿಫೋರ್ – ಆಫ್ಟರ್  ಅಂತ ಫೇಸ್ ಬುಕ್ಕಿನಲ್ಲಿ ಹಾಕಿ ಲೈಕುಗಳ ಗಿಟ್ಟಿಸಿಕೊಂಡಾಯ್ತು. ಅದೇನೋ ವಿಚಿತ್ರ, ತಮ್ಮ ಜೀವನದ ಹೆಚ್ಚು ಕಡಿಮೆ ಎಲ್ಲ ಚಟುವಟಿಕೆಗಳನ್ನು ಫೇಸ್ ಬುಕ್ಕಿನಲ್ಲಿ ಹಾಕಿಕೊಂಡು ತೋರಿಸಿಕೊಳ್ಳುವ ಈಗಿನ ಹುಡುಗ ಹುಡುಗಿಯರಿಗೆ, ತಮ್ಮ ಜೀವನವೇ ಅಲ್ಲಿ ಒಂದು ಓಪನ್ ಬುಕ್ ಆಗುವುದು ಅರಿವಿಗೇ ಬರುವುದೇ ಇಲ್ಲ!
ಹೀಗಿರುವಾಗ ಒಂದು ದಿನ…. ರೋಡಿನಲ್ಲಿ ಸೈಕಲ್ಲು ಒಳ್ಳೆ ಸ್ಟೈಲಿನಲ್ಲಿ ಹೊಡೆದುಕೊಂಡು ಹೋಗುತ್ತಿರುವಾಗ, ರೋಡಿನಲ್ಲಿ ಹೊಚ್ಚ ಹೊಸದಾಗಿ ಹಿಂದಿನ ರಾತ್ರಿ ನಿರ್ಮಾಣವಾಗಿದ್ದ ಹೊಂಡದಲ್ಲಿ ತಿಳಿಯದೇ ನುಗ್ಗಿಸಿಬಿಟ್ಟ. ಪರಿಣಾಮವಾಗಿ ಕೈಗೆ ಬಲವಾಗಿ ಪೆಟ್ಟು ಮಾಡಿಕೊಂಡುಬಿಟ್ಟ ಪಾಪ! ಅಂತೂ ಯಾರೋ ಪುಣ್ಣ್ಯಾತ್ಮರು ಅವನನ್ನು ಆಸ್ಪತ್ರೆಗೆ ಸಾಗಿಸಿ, ಹೆಂಡತಿಗೆ ಫೋನು ಮಾಡಿ ವಿಷಯ ತಿಳಿಸಿದರು. ಕೈಯ ಒಳಗಡೆಯ ಕೀಲು ಮುರಿದಿದ್ದರಿಂದ ಅಲ್ಲೊಂದೆರಡು ಮೊಳೆ ಬಡಿಯಲೇಬೇಕಾಯ್ತು!  ಹಂಗೇ ಬಡಿಯಲಾದೀತೆ? ತೋಳಿನ ಮೇಲೆ ಉದ್ದಕ್ಕೊಂದು ಗಾಯ ಮಾಡಿ ಶಸ್ತ್ರ ಪ್ರಯೋಗ ಮಾಡಿದ್ದರು.  ಚಿಕಿತ್ಸೆ ಮಾಡಿದ ಡಾಕ್ಟರು ನೀವು ಇನ್ನೂ ಒಂದು ತಿಂಗಳು ಮನೇಲೇ ರೆಸ್ಟು ತೊಗೊಬೇಕು ಅಂತ ಅಪ್ಪಣೆ ಹೊರಡಿಸಿದರು. ಇನ್ನೇನು ಮಾಡೊದು, ಮಾಡಿದ್ದುಣ್ಣೊ ಮಹರಾಯ ಅಂತ… ಅನುಭವಿಸಲೇಬೇಕಲ್ಲವೇ? ….
ಮನೆಯಲ್ಲಿ ಇದ್ದು ಇದ್ದು ಬೇಜಾರಾದಾಗತೊಡಗಿತು. ಬೇಜಾರು ಕಳೆಯಲು ಅದು ಇದು ಅಂತ ಕುರುಕಲು ಜಂಕ್ ತಿಂಡಿ ತಿನ್ನಲು ಶುರು ಹಚ್ಚಿಕೊಂಡ. ಕಾಲಿಗೂ ಸ್ವಲ್ಪ ಏಟಾಗಿದ್ದರಿಂದ ಅಡ್ಡಾಡುವುದು ಕಷ್ಟವಾಗುತ್ತಿತ್ತು. ಇವೆಲ್ಲ ಕಾರಣಗಳಿಂದ ೨ ಕೇಜಿ ಕಡಿಮೆ ಮಾಡಿಕೊಂಡಿದ್ದ ತೂಕ ೫ ಕೇಜಿ ಹೆಚ್ಚಾಗಿ ೮೩ ಕ್ಕೆ ಬಂದು ಮುಟ್ಟಿತು! ಹೊಟ್ಟೆ ಇನ್ನೂ ದೊಡ್ಡದಾಯ್ತು. ಆಸ್ಪತ್ರೆಯ ಖರ್ಚು ಎಲ್ಲಾ ಸೇರಿ ಸೈಕಲ್ಲು ತಂದು ಉಳಿಸಿದ್ದ ಹಣದ ಹತ್ತು ಪಟ್ಟು ಖರ್ಚಾಗಿತ್ತು. ಈ ಸೈಕಲ್ಲಿನ ಐಡಿಯಾ ಕೊಟ್ಟ ಲತಾ ಮೇಲೆ ಸಿಕ್ಕಾಪಟ್ಟೆ ಕೋಪ ಬಂತವನಿಗೆ. ಹೀಗೆ ಕೋಪದಿಂದಿರುವಾಗಲೇ ಲತಾ ಇವನ ಆರೋಗ್ಯ ವಿಚಾರಿಸಲು ಉಳಿದ ಸಹೋದ್ಯೋಗಿಗಳೊಂದಿಗೆ ಇವನ ಮನೆಗೆ ಬಂದಾಗ, ನೀನು ಕೊಟ್ಟ ಹಾಳು ಐಡಿಯಾದಿಂದಲೇ ಹೀಗಾಗಿದ್ದು ಅಂತ ಅವಳಿಗೆ ಅರುಹಿದನು. ಅದಕ್ಕವಳು ಬಿದ್ದು ಬಿದ್ದು ನಗಲು ಶುರು ಮಾಡಿದಾಗ ಇವನಿಗೆ ಕೆಂಡದಂಥ ಕೋಪ ಬಂತು ಆಗ ಲತಾ ತನ್ನ ಸಹಜ ವೈಯಾರದಿಂದ ಹೇಳಿದಳು “ನಾನು ತುಳಿಯೋದು ಈ ಸೈಕಲ್ಲ್ ಅಲ್ಲಾರಿ, ಮನೇಲೇ ನಿಂತಲ್ಲೆ ತುಳಿಯೋ ಸೈಕಲ್ಲು.  ನೀವು ಅವತ್ತು ನನ್ನ ಮಾತು ಪೂರ್ತಿ ಕೇಳಲೇ ಇಲ್ಲ” ಅಂದಾಗ, ಅವನು ಮಾತು ಬದಲಾಯಿಸಲೇ ಬೇಕಾಯ್ತು! ಅಂತೂ ಹೊಟ್ಟೆ ಕರಗಿಸುವ ಕನಸು ಸಧ್ಯಕ್ಕೆ ಕನಸಾಗಿಯೇ ಉಳಿದಿತ್ತು. ಆದರೆ ಲತಾ ತನ್ನ ಮನೆಗೆ ಹೋದ ಮೇಲೆ ಇವನ ಕೈ, ಕಾಲು ಮುರಿದುಕೊಂಡಿರುವ ಫೋಟೊ ಫೇಸ್ ಬುಕ್ ನಲ್ಲಿ ಹಾಕಿ ಸಿಕ್ಕಾಪಟ್ಟೆ ’ಲೈಕು’ಗಳ ಗಳಿಸಿ ಗಣೇಶನಿಗೊಂದಿಷ್ಟು ’ಮರುಕ’ಗಳ ಸುರಿಮಳೆಗೆ ಕಾರಣಳಾದಳು . ಜಾನುಗೆ ಲತಾಳ ಕೈ ಮುರಿಯುವಷ್ಟು ಸಿಟ್ಟು ಬಂದಿರುವುದ ಗಮನಿಸಿದ ಗಣೇಶ ಅವಳ ಕಣ್ಣು ತಪ್ಪಿಸಿದನು!
ಸ್ವಲ್ಪ ದಿನ ಕಳೆದಂತೆ ಗಾಯವೇನೋ ಮಾಯ್ದಿತ್ತು, ಆದರೆ ಉದ್ದಕ್ಕೆ ಡಾಕ್ಟರ್ ಕೊರೆದು ಹಾಕಿದ್ದ ಹೊಲಿಗೆ ಗುರುತು ಹಾಗೆ ಉಳಿಯಿತು. ಅದೊಂಥರ ಭಯಾನಕವಾಗಿ ಕಾಣುತ್ತಿತ್ತು. ತುಂಬು ತೋಳಿರುವ ಅಂಗಿ ಹಾಕಿದಾಗ ಕಾಣುತ್ತಿರಲಿಲ್ಲವಾದ್ದರಿಂದ ಫುಲ್ ಶರ್ಟ್ ಹಾಕಿಕೊಳ್ಳುವದು ಅನಿವಾರ್ಯವಾಗಿತ್ತವನಿಗೆ. ಒಂದು ದಿನ ಕಚೇರಿಯ ಕೆಲಸ ಮುಗಿಸಿ ಮನೆಗೆ ಬರುವುದು ತಡವಾಯ್ತು. ಅದೂ ಅಲ್ಲದೇ ಮಳೆಗಾಲದ ಸಮಯವಾದ್ದರಿಂದ ರಪ ರಪ ಮಳೆ ಬೇರೆ ಹೊಡೆಯುತ್ತಿತ್ತು. ಕಾರಿನಲ್ಲಿ ವೈಪರ್ ಹಾಕಿಕೊಂಡು, ಯವುದೋ ಹಳೆಯ ಹಾಡೊಂದನ್ನು ಕೇಳುತ್ತಾ ಬರುತ್ತಿದ್ದಾಗಲೇ, ಮನೆಗೆ ಸ್ವಲ್ಪ ಮುಂಚೆ ತಿರುಗುವ ತಿರುವಿನಲ್ಲಿ ಯಾವನೊ ಪುಣ್ಣ್ಯಾತ್ಮ ಎದುರುಗಡೆಯಿಂದ ಬೈಕಿನಲ್ಲಿ ಬಂದವನು ಇವನ ಕಾರಿಗೆ ಹೊಡೆದು ಧುಪ್ ಅಂತ ಬೀಳುವುದಕ್ಕೂ, ಮಳೆ ನಿಲ್ಲುವುದಕ್ಕೂ ಸರಿ ಹೋಯ್ತು. ಕಾರು ನಿಲ್ಲಿಸಿ ಬಿದ್ದವನಿಗೆ ಏನಾಯ್ತೋ ಅಂತ ಗಾಬರಿಯಿಂದ, ಕಾರಿನಿಂದ ಇಳಿದು ಹೊರಗೆ ಬಂದು ನಿಂತ ಗಣೇಶನಿಗೆ, ಬಿದ್ದವನಿಗೆ ಅಷ್ಟೇನು ಏಟಾಗಿಲ್ಲದಿದ್ದದ್ದು ಸಮಾಧಾನ ತಂದಿತ್ತು. ಅದೂ ಅಲ್ಲದೇ ಬೈಕಿನವನದೇ ತಪ್ಪಿದ್ದುದರಿಂದ, ಹಾಗೂ ಅದು ಬೈಕಿನ ಸವಾರನಿಗೆ ಅರಿವಾಗಿದ್ದರಿಂದಲೋ ಏನೊ ಅಲ್ಲಿ ಗಲಾಟೆಯಾಗುವ ಮುನ್ಸೂಚನೆಗಳಿರಲಿಲ್ಲ. ಆದರೆ ಅಲ್ಲಿ ಆಗಲೇ ಜಮಾಯಿಸಿದ್ದ ಎರಡು ಮೂರು ಜನರಿಗೆ ಅದು ಖಂಡಿತ ಇಷ್ಟವಾಗಲಿಲ್ಲ! ಅರೇ ಇಷ್ಟೆಲ್ಲ ಆದ ಮೇಲು ಜಗಳವಾಗಿಲ್ಲವೆಂದರೆ ಹೇಗೆ ಅಂತ  ಅವರಲ್ಲೊಬ್ಬ ಗಣೇಶನಿಗೆ ತರಾಟೆಗೆ ತೆಗೆದುಕೊಂಡು “ಎನಯ್ಯಾ ಹಿಂಗಾ ನೀನು ಕಾರು ಓಡ್ಸೋದು? ಯಾರು ನಿನಗೆ ಲೈಸನ್ಸು ಕೊಟ್ಟಿದ್ದು?” ಅಂತ ವಿಚಾರಣೆಗೆ ಶುರು ಮಾಡಿ ಗಣೇಶನಿಗೆ ತಬ್ಬಿಬ್ಬು ಮಾಡಿಬಿಟ್ಟ.
ಗಣೇಶ ಇದನ್ನು ನಿರೀಕ್ಷೆ ಮಾಡಿಲ್ಲದಿದ್ದರೂ ಇದ್ದುದರಲ್ಲೇ ಸಾವರಿಸಿಕೊಂಡು  ಅದು ಬೈಕಿನವನದ್ದೆ ತಪ್ಪೆಂದು, ತನ್ನ ಕಾರಿಗೇ ಜಾಸ್ತಿ ಏಟಾಗಿರುವುದೆಂದೂ ಸಮಝಾಯಿಷಿ ಕೊಡುವ ಪ್ರಯತ್ನ ಮಾಡುತ್ತಿರುವಂತೆಯೆ, ಆ ಮನುಷ್ಯ ಇನ್ನೂ ಜೋರಾಗಿ ಇವನಿಗೆ ದಬಾಯಿಸಲು ಶುರು ಮಾಡಿ, “ಅದೆಲ್ಲಾ ನಾವು ಕೇಳೋದಿಲ್ಲ. ಇರು ನಮ್ಮ ಜನರನ್ನ ಕರೀತಿನಿ, ಇವನು (ಬೈಕಿನವನು) ನಮ್ಮ ಏರಿಯಾದ ಹುಡುಗ, ಅವನ ಗತಿ ಏನಾಗಬೇಕು?…. ” ಅಂತ ಒದರಾಡಲು ಶುರು ಮಾಡಿದಾಗ, ಗಣೆಶನಿಗೆ ಇವನು ಕಡ್ಡಿಯನ್ನು ಗುಡ್ಡ ಮಾಡುತ್ತಿದ್ದಾನೆಂದು ಮನವರಿಕೆಯಾಯ್ತು. ಅವನು ಇನ್ನೊಂದಿಷ್ಟು ಜನರ ಸೇರಿಸಿ ಗಲಾಟೆ ಮಾಡಿ ತನ್ನ ಹತ್ತಿರ ದುಡ್ಡು ಕಿತ್ತುವದು ಗ್ಯಾರಂಟಿ ಅಂತ ಗೊತ್ತಾಗಿ ಏನು ಮಾಡುವುದೆಂದು ಯೋಚಿಸುತ್ತ ತನ್ನ ಅಂಗಿಯ ಬಲಗೈ ತೋಳು ಏರಿಸಿದಾಗ ತನ್ನ ಗಾಯದ ಭಯಂಕರವಾದ ಕಲೆ ನೋಡಿ ಆ ಕ್ಷಣಕ್ಕೊಂದು ಉಪಾಯ ಹೊಳೆಯಿತವನಿಗೆ. ಕೂಡಲೇ ಪೂರ್ತಿ ತೋಳು ಏರಿಸಿ ತನ್ನ ಗಾಯದ ಕಲೆಯನ್ನು ಆ ಮನುಷ್ಯನಿಗೆ ಕಾಣುವಂತೆ ಕೈ ಮುಂದೆ ಮಾಡಿ, ಸ್ವಲ್ಪ ಜೋರು ದನಿಯಲ್ಲೇ “ಏ ಯಾರನ್ನ ಕರಸ್ತಿ ಕರಸು. ನಾವೂ ಎಲ್ಲಾ ಮಾಡೇ ಇಲ್ಲಿಗೆ ಬಂದಿವಿ… ನಾನೂ ನೋಡೇ ಬಿಡ್ತೀನಿ ಒಂದು ಕೈ” ಅಂತೇನೇನೊ ಬೈಯಲು ಶುರು ಮಾಡಿದ. ಅವನ ಆರ್ಭಟಕ್ಕೂ ಹಾಗೂ ಅವನ ಕೈ ಮೇಲಿರುವ ಉದ್ದನೆಯ ಹೊಲಿಗೆ ಗುರುತು ನೋಡಿ ಆ ಮನುಷ್ಯ ಒಂದು ಕ್ಷಣ ಅಧೀರನಾದ. ಆ ಗಾಯದ ಕಲೆ ನೋಡಿ ಇವನೆಲ್ಲೋ ದೊಡ್ಡ ಮಾಜಿ ರೌಡಿಯೇ ಇರಬೇಕೆಂದೂ, ಇದು ಮಚ್ಚಿನಲ್ಲಿ ಹೊಡೆಸಿಕೊಂಡ ಗುರುತೇ ಅಂತ ಅಂದುಕೊಂಡು ಸ್ವಲ್ಪ ತಣ್ಣಗಾದ. “ಇರಲಿ ಬಿಡಿ ಆಗಿದ್ದು ಆಗಿ ಹೊಯ್ತು..” ಅಂತ ತನ್ನ ಮುಂದಿನ ಯೋಜನೆಗೆ ಬ್ರೇಕು ಹಾಕಿದ. ಗಣೇಶ ಅಂತೂ ಆ ಪರಿಸ್ಥಿತಿಯಿಂದ ಬಚಾವಾಗಿ ಕಾರು ಹತ್ತಿ ಮನೆಗೆ ಬಂದ.
ಸೈಕಲ್ಲು ತಂದದ್ದು ಅವನ ಕೊಬ್ಬು ಕರಗಿಸದಿದ್ದರೂ ಈ ತರಹದ ಒಂದು ದೊಡ್ಡ ಉಪಕಾರ ಮಾಡಿತ್ತು, ಜಾನುಗೆ ತನ್ನ ಸಾಹಸ ಗಾಥೆಯನ್ನು ಹೇಳಿ ಮಲಗುವಾಗ ತನ್ನ ಗಾಯದ ಕಲೆ ಹಂಗೇ ಇರಲಪ್ಪ ಅಂತ ದೇವರಿಗೆ ಕೇಳಿಕೋಳ್ಳಲು ಮರೆಯಲಿಲ್ಲ!

ನಾಯಿ ನಕ್ಕಿದ್ದು ಯಾಕೆ?!

ಪಂಜುನಲ್ಲಿ ಈ ಕತೆ ಪ್ರಕಟವಾಗಿತ್ತು.

http://www.panjumagazine.com/?p=6987

-------------------------------------------------------
 
 
ಹೊಟ್ಟೆ ಹಸಿವೆಯಿಂದ ಗುರುಗುಡುತ್ತಿತ್ತು. ಯಾಕಿವತ್ತು ಇನ್ನೂ ತಟ್ಟೆಯ ಸಪ್ಪಳವೇ ಇಲ್ಲಾ? ನಾಲಿಗೆ ಹೊರ ಚಾಚಿ, ಮುಚ್ಚಿರುವ ತಲಬಾಗಿಲನ್ನೊಮ್ಮೆ ದಿಟ್ಟಿಸಿ ನೋಡುತ್ತಾ, ತಲೆಯ ಮೇಲೆ ಸುಡುತ್ತಿರುವ ಸೂರ್ಯನ ಶಾಖವನ್ನು ತಾಳಲಾರದೇ ತನ್ನ ಗೂಡಿನೆಡೆಗೆ ಕುಂಯ್ ಗುಡುತ್ತಾ ರಾಜಾ ವಾಪಸ್ಸಾದ. ಗೂಡಿನಲ್ಲಿ ತಾಪ ಇನ್ನೂ ಜಾಸ್ತಿಯಿತ್ತು. ತಾನು ಆ ಮನೆಯನ್ನು ಸೇರಿದ್ದು ಚಿಕ್ಕ ಕುನ್ನಿಯಾಗಿದ್ದಾಗ. ತನ್ನ ಅಮ್ಮ ಟ್ರಕ್ಕಿನಡಿಯಲ್ಲಿ ಸಿಕ್ಕಿ ಸತ್ತು ತಾನು ತಬ್ಬಲಿಯಾದಾಗ, ಮುದ್ದಾಗಿದ್ದೆನೆಂದೋ ಅಥವಾ ಮುಂದೆ ಮನೆ ಕಾಯುವೆನೆಂದೋ ತನ್ನನ್ನು ಮನೆಗೆ ತಂದು ಸಾಕಿದ್ದು ಈ ಮನೆಯ ಯಜಮಾನ ಸಿದ್ದಣ್ಣ. ಊಟಕ್ಕೇನು ಕೊರತೆಯಿರಲಿಲ್ಲ ಅಲ್ಲಿ. ಸರಿಯಾದ ಸಮಯಕ್ಕೆ ತಿಂಡಿ ತೀರ್ಥಗಳು ದೊರಕಿದ್ದೂ ಅಲ್ಲದೇ, ತನಗೆ ಒಂದು ಗೂಡು ಕಟ್ಟಿ ಕೊಟ್ಟಿದ್ದು ಸಿದ್ದಣ್ಣನ ದೊಡ್ಡತನ. ಕಂಪೌಂಡಿನಲ್ಲಿದ್ದುಕೊಂಡು ಬಂದವರೆಲ್ಲರ ಕಂಡು, ಅಪರಿಚಿದ್ದರೆ ಬೊಗಳಿ ಸಿದ್ದಣ್ಣನ ವಿಶ್ವಾಸ ಬಹು ಬೇಗನೇ ಗಳಿಸಿಕೊಂಡಿದ್ದವನಿಗೆ ರಾಜ ಅಂತ ನಾಮಕರಣ ಬೇರೆ ಆಗಿತ್ತು. ವಾರಕ್ಕೊಮ್ಮೆ ಸ್ನಾನ, ಸಂಜೆಗೊಮ್ಮೆ ಹೊರಗಡೆ ಯಜಮಾನನೊಟ್ಟಿಗೆ ವಾಕಿಂಗು. ಹಬ್ಬಕ್ಕೆ ಸಿಹಿ ಊಟ, ಸ್ವರ್ಗಕ್ಕೆ ಮೂರೇ ಗೇಣು. ಆದರಿವತ್ತ್ಯಾಕೋ ಇನ್ನೂ ಊಟ ಹಾಕಿಲ್ಲದಿದ್ದದ್ದು ರಾಜಾನಿಗೆ ಬಗೆ ಹರಿಯಲಾರದ ಸಮಸ್ಸೆಯಾಗಿತ್ತು.
*
ಆ ಸುಡುಗಾಡು ಮೀಟಿಂಗು ಮುಗಿಯುವ ಲಕ್ಷಣಗಳು ಕಾಣುತ್ತಿರಲಿಲ್ಲ. ಆಗಲೇ ಗಂಟೆ ಮೂರಾಗಿತ್ತು. ಅನಂತನ ಹೊಟ್ಟೆಯಲ್ಲಿ ತಳಮಳ ಶುರುವಾಗಿತ್ತು. ಆ ಆದಿನಾರಾಯಣ ಊಟಕ್ಕೆ ಕರೆದಾಗಲೇ ಅವನೊಟ್ಟಿಗೆ ಹೋಗಿ ಬರಬೇಕಿತ್ತು. ಅವನು, ಪ್ರಳಯವಾದರೂ ತನ್ನ ಸಮಯಕ್ಕೆ ಸರಿಯಾಗಿ ಊಟ ಮುಗಿಸುತ್ತಿದ್ದ. ಮೀಟಿಂಗುಗಳಿದ್ದರಂತೂ ಇನ್ನೂ ಬೇಗನೇ ಊಟ ಮಾಡಿಕೊಂಡು ಬಂದು ಬಿಡುತ್ತಿದ್ದನವನು. ಜೊತೆಗೆ ಸಣ್ಣಗೆ ತಲೆ ನೋವು ಶುರುವಾಗಿತ್ತು. ಇನ್ನು ಸ್ವಲ್ಪ ಹೊತ್ತಿಗೆ ಹಸಿವೆಯೂ ಸತ್ತು ಹೋಗುತ್ತದೆ. ಮುಂದಿದ್ದ ಬಾಟಲಿ ನೀರನ್ನು ಗಟಗಟನೇ ಕುಡಿದು ಉದರಾಗ್ನಿಯ ಶಮನ ಮಾಡುವ ವ್ಯರ್ಥ ಪ್ರಯತ್ನ ಮಾಡಿದ. ಮೀಟಿಂಗು ಮುಗಿಯುತ್ತಲೇ ಊಟಕ್ಕೆ ಹೋಗಬೇಕೆನ್ನುವ ತವಕಕ್ಕೆ ಹಸಿವೆ ಇನ್ನೂ ಜೋರಾಗಹತ್ತಿತ್ತು. ತನ್ನ ಮ್ಯಾನೇಜರ್ ಹೇಳಿದ್ದನ್ನೇ ಹೇಳುತ್ತಾ ತವಡು ಕುಟ್ಟುತ್ತಿದ್ದ. ಅವನ ಚೇಲಾಗಳು ಅವನು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ ಮೆಚ್ಚುಗೆ ಸೂಚಿಸುತ್ತಿದ್ದರು. ತಾನು ಅಲ್ಲಿದ್ದು ಏನು ಶತಕೃತ್ಯ ಮಾಡುತ್ತಿದ್ದೇನೆ ಎನಿಸಿತವನಿಗೆ.
*
ಅಂತೂ ತಲಬಾಗಿಲು ಕಿರುಗುಟ್ಟಿದಾಗ ತನ್ನ ಬಾಲ ತನಗರಿವಿಲ್ಲದಂತೆ ಅಲ್ಲಾಡಗಿದ್ದು ರಾಜಾನ ಗಮನಕ್ಕೆ ಬಂತು. ಗಕ್ಕನೇ ಗೂಡಿನಿಂದ ಹೊರಗೋಡಿ ಬಂದವನಿಗೆ ಸಿದ್ದಣ್ಣ ನಿರಾಶೆ ಮಾಡಲಿಲ್ಲ. ತನಗಾಗಿ ಮೀಸಲಿಟ್ಟಿದ್ದ ತಟ್ಟೆಯಲ್ಲಿ ಅನ್ನವನ್ನು ಸುರಿದು ಲಗುಬಗೆಯಿಂದ ಒಳ ನಡೆದ. ಗಬಗಬನೇ ಹೊಟ್ಟೆಗಿಳಿಸಿ ಗೂಡಿಗೆ ತೆರಳಿದ ರಾಜಾಗೆ ಹೊಟ್ಟೆಯೇನೋ ತುಂಬಿತ್ತು ಆದರೆ ತನ್ನ ಯಜಮಾನನ ಮೇಲೆ ಕೋಪ ಬಂದಿತ್ತು. ಸೆಕೆಗೆ ಆ ಕೋಪ ಇನ್ನೂ ಜಾಸ್ತಿಯಾಗಿತ್ತು. ತಾನು ಇಷ್ಟು ಭಕ್ತಿಯಿಂದ ಮನೆ ಕಾದರೂ ಇವನು ಹೀಗೆ ಊಟಕ್ಕೆ ತನಗೆ ಕಾಯಿಸಬಹುದೆ? ಅನ್ನುವುದು ರಾಜಾನ ಸಿಟ್ಟಿಗೆ ಕಾರಣವಾಗಿತ್ತು. ಹೊಟ್ಟೆ ತಣ್ಣಗಾಗಿದ್ದರಿಂದ ಸ್ವಲ್ಪ ಜೋಂಪು ಹತ್ತಿತ್ತು.
*
ಕೊನೆಗೂ ಮೀಟಿಂಗ್ ಮುಗಿದಾಗ ನಾಲ್ಕು ಘಂಟೆ. ಲಗುಬಗೆಯಿಂದ ಊಟಕ್ಕೆ ಹೊರಟವನ ಹೊಟ್ಟೆ ತಮಟೆ ಬಾರಿಸುತ್ತಿದ್ದರೆ, ತಲೆಯಲ್ಲಿ ಯೋಚನೆಗಳು ಮುತ್ತಿಕೊಂಡಿದ್ದವು. ತಾನು ಈ ಕಂಪನಿ ಸೇರಿ ಅವತ್ತಿಗೆ ಎಂಟು ವರುಷಗಳಾಗಿತ್ತು. ಎಷ್ಟೇ ಹಾರ್ಡ್ ವರ್ಕ್ ಮಾಡಿದರೂ ತನ್ನ ಪ್ರತಿಭೆಗೆ ತಕ್ಕ ಸ್ಥಾನ ಸಿಕ್ಕಿಲ್ಲಾ ಅನ್ನುವ ಕೊರಗು ಇವನನ್ನು ಕಾಡುತ್ತಿತ್ತು. ಮ್ಯಾನೇಜರ್ ನ ಬಾಲ ಬಡಿಯುತ್ತಿದ್ದವರಿಗೆ ತನಗಿಂತ ಮೇಲಿನ ದರ್ಜೆ ಸಿಕ್ಕಿದ್ದು ಗಾಯದ ಮೇಲಿನ ಬರೆಯಂತಾಗಿತ್ತು. ಕೆಲಸವಾಗಬೇಕಾದಾಗ ತನ್ನ ಕಾಲು ಹಿಡಿದು ಗೋಗರೆದು ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಅಪ್ರೈಸಲ್ ಇದ್ದಾಗ ಮಾತ್ರ ಇವನ ಸಣ್ಣ ಸಣ್ಣ ತಪ್ಪುಗಳನ್ನು ಎತ್ತಿ ಹಿಡಿಯುತ್ತಿದ್ದ. ಅವನು   ಹೇಳಿದ ಕೆಲಸಗಳನ್ನೆಲ್ಲಾ ತಕರಾರಿಲ್ಲದೇ ಮಾಡುತ್ತಿರುವುದೇ ತನ್ನ ತಪ್ಪಿರಬಹುದು ಅಂತವನಿಗೆಷ್ಟೋ ಸಲ ಅನಿಸಿದ್ದಿದೆ. ಯಾಂತ್ರಿಕವಾಗಿ ಊಟದ ಆಟ ಮುಗಿದಿತ್ತು. ರಾತ್ರಿಯವರೆಗೆ ಕೆಲಸಗಳು ತುಂಬಿದ್ದವು. ಇವತ್ತು ರಾತ್ರಿ ಮನೆಗೆ ಹೋಗುವಂತಾದರೆ ಸಾಕು ಅನಿಸಿತ್ತವನಿಗೆ.
*
ಗೇಟಿನ ಬಳಿ ಯಾರೋ ಬಿಕ್ಷುಕ ಬಂದಿರುವುದು ಅಧೇಗೋ ನಿದ್ದೆಯಲ್ಲಿದ್ದ ರಾಜಾನನ್ನು ಬಡಿದೆಬ್ಬಿಸಿತು. ಕೂಡಲೇ ಕಾರ್ಯ ತತ್ಪರನಾಗಿ ಬೌ ಎನ್ನುವ ತನ್ನ ವಿಶಿಷ್ಠ ಸ್ವರದಲ್ಲಿ ಅರಚತೊಡಗಿ, ಬಿಕ್ಷುಕ ಅಲ್ಲಿಂದ ಕಾಲು ಕಿತ್ತಾಗಲೇ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಯಜಮಾನ ಅದನ್ನು ಗಮನಿಸಿರಬಹುದೇ ಎಂದು ತಲಬಾಗಿಲ ಕಡೆಗೆ ಒಮ್ಮೆ ನೋಡಿತು. ಯಾರೂ ಇಲ್ಲದ್ದರಿಂದ ನಿರಾಶೆಯಿಂದ ಗೋಣು ಚೆಲ್ಲಿ ಮಲಗಿ ಮತ್ತೆ ಯೋಚನೆಗೆ ತೊಡಗಿತು. ತಾನಿಲ್ಲದಿದ್ದರೆ ಈ ಮನೆಯ ಗತಿಯೇನು? ಹಗಲು ರಾತ್ರಿಯೆನ್ನದೆ ತಾನು ಕಾಯುತ್ತಿರುವುದಕ್ಕೇ ಅಲ್ಲವೇ ಇವರಿಷ್ಟು ನಿಶ್ಚಿಂತರಾಗಿ ಮಲಗುವುದು?  ತಾನು ಇಲ್ಲದಾಗಲೇ ಈ ಯಜಮಾನನಿಗೆ ಬುದ್ಧಿ ಬರುವುದೇನೊ. ಇವನಿಗಿಂತ ಒಳ್ಳೆಯವನು ತನಗೆ ಸಿಕ್ಕೇ ಸಿಗುತ್ತಾನೆ. ಇವನಿಗೆ ಬುದ್ಧಿ ಕಲಿಸಲೇಬೇಕು ಅನ್ನುವ ಹಟ್ಟಕ್ಕೆ ಬಿದ್ದಾಗಿತ್ತು.
*
ರಾತ್ರಿ ಅಂತೂ ಅನಂತ ಮನೆ ತಲುಪಿದಾಗ, ಬೆಳಗಾಗಲು ಇನ್ನು ಬರೀ ಮೂರೆ ಗಂಟೆಗಳು ಬಾಕಿ ಅನ್ನುವ ಯೋಚನೆಗೇ ಅವನಿಗೆ ನಿದ್ದೆ ಬರುವ ಲಕ್ಷಣಗಳಿರಲಿಲ್ಲ. ಈ ಕಂಪನಿಯೂ ಬೇಡ, ಇವರು ಕೊಡುವ ಪುಡಿ ಕಾಸೂ ಬೇಡ, ಬೇರೆಲ್ಲಾದರೂ ನೋಡಬೇಕು ಅನ್ನುತ್ತ ನಿದ್ದೆ ಹೋದವನಿಗೆ, ಬೆಳಗಿನ ಅಲಾರ್ಮ್ ತರಹ ಬಡಿದೆಬ್ಬಿಸಿದ್ದು ಅವನ ಮ್ಯನೇಜರ್ ನ ಫೋನು. ಈ ಮುಂಡೆ ಮಗ ರಾತ್ರಿಯೆಲ್ಲಾ ಸುಖವಾಗಿ ನಿದ್ದೆ ಮಾಡಿರುತ್ತಾನೆ. ಹಗಲು ನಮ್ಮನ್ನು ಕಾಡುತ್ತಾನೆ ಎನ್ನುತ್ತ ಫೋನು ರಿಸೀವ್ ಮಾಡಿದವನಿಗೆ ಆಫಿಸಿಗೆ ಇನ್ನೂ ಬಂದಿಲ್ಲ ಅಂತ ಕೂಗಾಡಿ ಅವನ ನೆಮ್ಮದಿಯನ್ನೇ ಹಾಳು ಮಾಡಿದ. ತನ್ನನ್ನೊಂದು ಪ್ರಾಣಿ ಅಥವಾ ಗುಲಾಮನಂತೆ ನಡೆಸಿಕೊಳ್ಳುತ್ತಿರುವ ಬಾಸ್ ಬಗ್ಗೆ ಅಸಮಾಧಾನವಾಗಿತ್ತು. ಇವನು ಕರೆದಾಗ ಬರಲು ತಾನೇನು ಸೂಳೆಯೆ? ತನಗೆ ಬರುವ ಕೋಪಕ್ಕೆ ಸಿಕ್ಕದ್ದನ್ನೆಲ್ಲಾ ಎತ್ತಿ ಕುಕ್ಕುವ ಮನಸ್ಸಾದರೂ, ಬಡವನ ಸಿಟ್ಟು ದವಡೆಗೆ ಮೂಲ ಅಂದ್ಕೊಂಡು ಸುಮ್ಮನಾದ.
ಅವತ್ತು ಎಂದಿನಂತೆ ಬೆಳಗಾಗಿತ್ತಾದರೂ ರಾಜಾನಿಗೆ ಉತ್ಸಾಹವಿರಲಿಲ್ಲ. ಅದಕ್ಕೆ ರಾತ್ರಿಯೆಲ್ಲ ಇಲ್ಲಿಂದ ಹೇಗೆ ತಪ್ಪಿಸಿಕೊಂಡು ಓಡಿ ಹೋಗಲಿ ಅನ್ನುವ ಚಿಂತೆಯಲ್ಲಿ ನಿದ್ದೇನೆ ಬಂದಿರಲಿಲ್ಲ. ಬೆಳಗ್ಗೆ ಪೇಪರ್ ತರಲು ಅಂತ ಹೊರಗೆ ಬಂದ ಸಿದ್ದಣ್ಣ. ಅವನು ಹಾಗೆ ಹೊರ ಬಂದಾಗಗಲೆಲ್ಲಾ ರಾಜಾನನ್ನೂ ಗೇಟಿನ ಹೊರಗೆ ಬಿಡುತ್ತಿದ್ದ. ರಾಜಾನಿಗೆ ಅದೊಂದು ತರಹದ ಅರ್ಧ ಗಂಟೆಯ ಸ್ವಾತಂತ್ರ! ಅಲ್ಲೆಲ್ಲಾ ಸುತ್ತ ಮುತ್ತಲಿನ ಪರಿಸರವನ್ನೆಲ್ಲಾ ಜಾಲಾಡಿ, ಯಜಮಾನ ಹೊರಗೆ ನಿಲ್ಲಿಸಿದ್ದ ಅವನ ಕಾರಿನ ಚಕ್ರವೊಂದಕ್ಕೆ ಅವನ ಕಣ್ಣು ತಪ್ಪಿಸಿ ಉಚ್ಚೆ ಹೊಯ್ದರೆ ಅದೇ ದೊಡ್ಡ ಸಾಧನೆ! ಇವತ್ತೂ ಕೂಡ ರಾಜಾನನ್ನು ಅಡ್ಡಾಡಿ ಬರಲಿ ಅಂತ ಗೇಟಿನ ಹೊರಗೆ ಬಿಟ್ಟಿದ್ದೆ ಚಾನ್ಸು ಅಂತ ಅದು ಓಡಿ ಹೋಗಿ ಬಿಡೋದೆ!
ಬಾಸ್ ನ ಹಾಳು ಪೋನ್ ಕರೆಗೆ ನಿದ್ದೆಯಂತೂ ಹಾಳಾಗಿತ್ತು. ಬೆಳಗಿನ ಟೀ ಮಾಡಿಕೊಂಡು ಹಾಗೇ ಕಪ್ಪು ಕೈಯಲ್ಲಿ ಹಿಡ್ಕೊಂಡು ವರಾಂಡದಲ್ಲಿ ಬಂದು ನಿಂತು  ಗೇಟಿನ ಹೊರಗೆ ಕಣ್ಣು ಹಾಯಿಸಿದವನಿಗೆ ಕಂಡದ್ದು ಕಂಗಾಲಾಗಿ ತನ್ನ ನೀಳ ನಾಲಿಗೆಯ ಹೊರ ಚಾಚಿ ನಿಂತಿದ್ದ ನಾಯಿ, ರಾಜಾ! ಅನಂತನಿಗೆ ಮೊದಲಿನಿಂದಲೂ ನಾಯಿಗಳ ಕಂಡರೆ ಪ್ರೀತಿ. ಮೊದಲು ತನ್ನ ಮನೆಯಲ್ಲೊಂದು ನಾಯಿಯನ್ನೂ ಸಾಕಿದ್ದ. ಅದಕ್ಕೆಲ್ಲ ತಕ್ಕುದಾದ ವ್ಯವಸ್ಥೆಯೂ ಮನೆಯಲ್ಲಿತ್ತು. ಆದರೆ ಅದು ಸತ್ತ ಮೇಲೆ ಬೇರೆ ನಾಯಿ ಸಾಕಿರಲಿಲ್ಲ. ರಾಜಾನನ್ನು ನೋಡಿ ಅದು ಒಳ್ಳೆಯ ಜಾತಿಯ ನಾಯಿಯೇ ಅಂತ ಅವನಿಗೆ ಅಂದಾಜಾಗಿ ಹೋಯಿತು. ಕೂಡಲೇ ಒಳಗೆ ಹೋಗಿ ಒಂದಿಷ್ಟು ಬ್ರೆಡ್ಡು , ತಾನು ತಿಂದು ಉಳಿದಿದ್ದ ಪಿಡ್ಜ಼ಾವನ್ನು ಆಫರ್ ಮಾಡಿದಾಗ, ಓಡೋಡಿ ಬಂದು ಹಸಿದು ಕಂಗಾಲಾಗಿದ್ದ ರಾಜಾ ಒಂಚೂರು ಉಳಿಸದಂತೆ ತಿಂದು ಚೊಕ್ಕ ಮಾಡಿತ್ತು. ಸಿದ್ದಣ್ಣನ ಅನ್ನ ತಿಂದು ಜಿಡ್ಡು ಗಟ್ಟಿದ್ದ ನಾಲಿಗೆಯ ಎಲ್ಲ ಕಡೆಯಿಂದ ಜೀರ್ಣ ರಸಗಳು ಪ್ರವಾಹದೋಪಾದಿಯಲ್ಲಿ ಚಿಮ್ಮಿ ಹರಿಯುತ್ತಿದ್ದುದು ಅದರ ಗಮನಕ್ಕೆ ಬಂತು. ಅನ್ನದ ಋಣಕ್ಕೆ ಬಿದ್ದಾಗಿತ್ತು. ತಿಂದಾದ ಮೇಲೆ ಬಾಲ ಇನ್ನೂ ಜೋರಾಗಿ ಬಡೆದುಕೊಳ್ಳುತ್ತಿತ್ತು. ಹೊಸ ಯಜಮಾನನನ್ನು ಒಪ್ಪಿಕೊಂಡಾಗಿತ್ತು. ಅನಂತ ತನ್ನ ಕೊರಳ ಮೇಲೆ ಕೈ ಆಡಿಸಿದ್ದು ಇನ್ನೂ ಹಿತವೆನಿಸಿತ್ತು.
*
ದಿನಗಳೆದಂತೆ ಇಬ್ಬರೂ ಒಬ್ಬರಿಗೊಬ್ಬರು ಹೊಂದಿಕೊಂಡರು. ಅವನು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಸಂಜೆಯವರೆಗೆ ಆಗುವಷ್ಟು ಊಟವನ್ನಿಕ್ಕಿ ಹೋಗುತ್ತಿದ್ದುದರಿಂದ ರಾಜನಿಗೆ ಯಾವುದೇ ಕೊರತೆಯಿರಲಿಲ್ಲ. ಸಿದ್ದಣ್ಣನ ಕೊರಳು ಕೊರೆಯುವ ಕಬ್ಬಿಣದ ಸರಪಳಿಗಿಂತ ಅನಂತ ಹಾಕಿದ್ದ ಬಟ್ಟೆಯ ಸರಪಳಿ ಹಿತವಾಗಿತ್ತು. ಇಲ್ಲಿಯ ಗೂಡು ಅಲ್ಲಿಯದಕ್ಕಿಂತ ತಂಪಾಗಿತ್ತು, ಯಾಕೆಂದರೆ ಪಕ್ಕದಲ್ಲೇ ಮರವೊಂದಿತ್ತು. ಹತ್ತಿರದಲ್ಲಿ ಗಾರ್ಡನ್ ಇರಲಿಲ್ಲವಾದ್ದರಿಂದ ಸ್ವಲ್ಪ ದೂರದಲ್ಲಿರುವ ಗಾರ್ಡನ್ ಗೆ ಕಾರಿನಲ್ಲೇ ರಾಜಾನನ್ನು ಕರೆದುಕೊಂಡು ಹೋಗುತ್ತಿದ್ದದ್ದು ರಾಜನಿಗೆ ಹೆಚ್ಚಿನ ಮರ್ಯಾದೆಯನ್ನು ಕೊಟ್ಟಿತ್ತು.
ಆದರೆ, ಹೀಗೆ ಒಂದು ದಿನ, ಸಂಜೆ ಕಳೆದು ರಾತ್ರಿಯಾದರೂ ಹೊಸ ಯಜಮಾನ ಇನ್ನೂ ಮನೆಗೆ ಬರಲಿಲ್ಲವೆನ್ನುವದು ರಾಜನ ಆತಂಕಕ್ಕೆ ಕಾರಣವಾಗಿತ್ತು. ಬೆಳಿಗ್ಗೆ ಇಟ್ಟು ಹೋಗಿದ್ದ ಆಹಾರ ಖಾಲಿಯಾಗಿತ್ತು. ಹೊಟ್ಟೆ ಎಷ್ಟೋ ದಿನಗಳ ಬಳಿಕ ಮತ್ತೇ ಗುರುಗುಡತೊಡಗಿತ್ತು. ಕಾದು ಕಾದು ಸುಸ್ತಾಗಿ ನಿದ್ದೆಯೂ ಬರದೆ ಅತ್ತಿಂದಿತ್ತ ಹೊರಳಾಡಿಯೇ ರಾತ್ರಿ ಕಳೆದಿತ್ತು. ಅನಂತ ಮನೆಗೆ ಬಂದಿದ್ದು ಮರುದಿನ ಬೆಳಿಗ್ಗೆಯೇ. ರಾಜನಿಗೆ ಯಾಕೋ ತನ್ನ ಹಳೆಯ ಯಜಮಾನ ನೆನಪಾಗತೊಡಗಿದ. ಅವನು ತಡ ಮಾಡಿದರೂ ಊಟವಾದರೂ ಹಾಕುತ್ತಿದ್ದ, ಇಡೀ ರಾತ್ರಿ ಉಪವಾಸ ಕೆಡವಿದ್ದ ಹೊಸ ಯಜಮಾನನ ವರ್ತನೆ ತನಗೆ ಯಾಕೋ ಸರಿ ಕಾಣಲಿಲ್ಲ. ಎಲ್ಲಿ ಹೋದರೂ ತನ್ನ ಕಷ್ಟಗಳಿಗೆ ಕೊನೆಯೇ ಇಲ್ಲ ಅಂತ ರಾಜಾನಿಗೆ ಮನದಟ್ಟಾಗಿತ್ತು.
ಮಾಮುಲಿಯಾಗಿ ಟೀ ಕಪ್ಪು ಹೀಡಿದು ಹೊರಗೆ ಬಂದ ಯಜಮಾನ ಫೋನಿನಲ್ಲಿ ಯರೊಟ್ಟಿಗೋ ಮಾತಾಡುತ್ತಿದ್ದ. ತಾನು ಇಡೀ ರಾತ್ರಿ ಉಪವಾಸವಿದ್ದ ಬಗ್ಗೆ ಇವನಿಗೆ ಎಳ್ಳಷ್ಟು ಕಾಳಾಜಿಯೇ ಇಲ್ಲವೆ? ರಾಜಾ ಅವನ ದುರುಗುಟ್ಟಿ ನೋಡುತ್ತಿದ್ದ. ಆಗಾಗ ಕುಂಯ್ ಗುಟ್ಟಿ ಅವನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದ.
ಅನಂತ ಮಾತ್ರ ತನ್ನದೇ ಲೋಕದಲ್ಲಿ ಮುಳುಗಿದ್ದ. ಫೋನಿನಲ್ಲಿ ತನ್ನ ಯಾರೋ ಮಿತ್ರನಿಗೆ ತನಗೆ ಹೊಸ ಕಂಪನಿಯಲಿ ಕೆಲಸ ಸಿಕ್ಕ ಬಗ್ಗೆ ಹೇಳಿಕೊಳ್ಳುತ್ತಿದ್ದ. ಅಲ್ಲಿ ಇಲ್ಲಿಗಿಂತ ಚೆನ್ನಾಗಿರುವುದೆಂತಲೂ, ಸಂಬಳವೂ ಸಿಕ್ಕಾಪಟ್ಟೆ ಜಾಸ್ತಿಯೆಂತಲೂ ಹೇಳುತ್ತಿದ್ದ. ತನ್ನ ಕಷ್ಟಗಳಿಗಿನ್ನು ಮುಕ್ತಿ. ತಾನು ಆರಾಮವಾಗಿರಬಹುದೆಂದು ಖುಷಿ ಹಂಚಿಕೊಳ್ಳುತ್ತಿದ್ದ. ಮನುಷ್ಯರ ಒಡನಾಟದಿಂದಲೋ ಏನೊ ರಾಜಾನಿಗೆ ಅವರ ಮಾತು ತಿಳಿಯದಿದ್ದರೂ ಭಾವನೆಗಳು ಅರ್ಥವಾಗುತ್ತಿದ್ದವು. ಅದರ ಕಿವಿ ನಿಮಿರಿದವು. ಅವನು ಫೋನಲ್ಲಿ ಹೇಳುತ್ತಿದ್ದುದನ್ನು ಲಕ್ಶ್ಯಗೊಟ್ಟು ಕೇಳುತ್ತಿತ್ತು. …. ಅನಂತ ಹಾಗೆ ಮಾತನಾಡುತ್ತಾ ಅಕಸ್ಮಾತಾಗಿ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ರಾಜಾನ ಮುಖ ಕಂಡು, ಕೂಲಂಕುಷವಾಗಿ ಗಮನಿಸಿದ. ಬೆರಗುಗಣ್ಣಿನಿಂದ ಮತ್ತೆ ಮತ್ತೆ ಅದರ ಮುಖವನ್ನೇ ನೋಡಿದ, ರಾಜಾ ನಗುತ್ತಿರುವಂತೆ ಅವನಿಗೆ ಭಾಸವಾಗಿ ಬೆಚ್ಚಿಬಿದ್ದ!