Thursday, May 7, 2015

ಕಾರ್-ಬಾರ್!


ವೆಂಕಟ್ ಗೆ ಬಾಡಿಗೆ ಕಾರು ತೆಗೆದುಕೊಳ್ಳೋದು ಹೆಚ್ಚು ಕಡಿಮೆ ಅನಿವಾರ್ಯವಾಗಿತ್ತು. ಇವನು ಇನ್ನೂ ಮೂರು ವಾರಗಳಾದರೂ ಅಮೆರಿಕಾದಲ್ಲಿ ಇರುವುದು ಬಾಕಿ ಇತ್ತು. ದಿನಾಲೂ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಇವನ ಸಹೋದ್ಯೋಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದನಾದ್ದರಿಂದ ಇವನಿಗೆ ದಿನಾಲೂ ಆಫಿಸಿಗೆ ಹೋಗುವುದೇ ಕಷ್ಟವಾಗಿತ್ತು. ಅದೂ ಅಲ್ಲದೆ, ಅಲ್ಲಿ ಕಾರಿಲ್ಲವೆಂದರೆ ಕಾಲೇ ಕಳೆದುಕೊಂಡಂತೆ. ತನ್ನ ಅಪ್ಪ ಕಾರು ತರಲು ಹೋಗುತ್ತಿದ್ದಾನೆ ಎನ್ನುವುದೇ ಖುಷಿ ಗೆ ಕೌತುಕದ ಸಂಗತಿಯಾಗಿತ್ತು. ಜಾನುನೂ  ಅಲ್ಲಿ ಇಲ್ಲಿ ಅಡ್ಡಾಡಲು ಅನುಕೂಲವಾಗುತ್ತದೆಂದು ಖುಷಿಯಲ್ಲಿದ್ದಳು. 
 
… ಅಲ್ಲಿ ಕಾರು ಚಲಾಯಿಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಆದರೆ ರಸ್ತೆ ಮೇಲೆ ಪಾಲಿಸುವ ನಿಯಮಗಳ ಬಗ್ಗೆ ಅಲ್ಲಿ ತುಂಬಾ ಕಟ್ಟು ನಿಟ್ಟು. ಅದೂ ಅಲ್ಲದೆ, ಅಲ್ಲಿಗೂ ಇಲ್ಲಿಗೂ ಕೆಲವು ವ್ಯತ್ಯಾಸಗಳೂ ಇದ್ದವು. ಭಾರತದಲ್ಲಿ ಚಾಲಕ ಬಲಕ್ಕೆ ಕುಳಿತು ಓಡಿಸಿದರೆ ಇಲ್ಲಿ ಎಡಕ್ಕೆ ಕುಳಿತುಕೊಳ್ಳಬೇಕು. ಅಲ್ಲಿ ರಸ್ತೆಯ ಎಡಗಡೆಗೆ ಚಲಿಸಿದರೆ ಇಲ್ಲಿ ಬಲಕ್ಕೆ, ಎಲ್ಲಾ ಉಲ್ಟಾ! ಅಮೆರಿಕನ್ನರು ಎಲ್ಲದರಲ್ಲೂ ಉಲ್ಟಾನೆ… ಆದರೆ ತಿನ್ನೋದೊಂದು ಮಾತ್ರ ನಮ್ಮ ತರಾನೆ! ಅಂತ ವೆಂಕಟ್ ತಮಾಷೆಗೆ ಹೇಳುತ್ತಿದ್ದ…
ಕಾರುಗಳ ಬಾಡಿಗೆ ಕೊಡುವ ಆ ಮಳಿಗೆಯಲ್ಲಿ ಒಬ್ಬ ತನ್ನನ್ನು ಪರಿಚಯಿಸಿಕೊಂಡು ಇವನನ್ನು ಸ್ವಾಗತಿಸಿದ. ತಮ್ಮ ಬಳಿ  ಇರುವ ಬಾಡಿಗೆ ಕಾರುಗಳು ಯಾವವು?… ಯಾವ್ಯಾವ ಕಾರಿಗೆ ದಿನಕ್ಕೆ ಎಷ್ಟೆಷ್ಟು ಬಾಡಿಗೆ, ಅಲ್ಲಿನ ನಿಯಮಾವಳಿಗಳೇನು ಅಂತ ತುಂಬಾ ಹೈ ಸ್ಪೀಡ್ ಅಮೇರಿಕನ್ ಅಂಗ್ರೆಜಿಯಲ್ಲಿ ವಿವರಿಸಲು ತೊಡಗಿದ. ಅವನ ಆ ಮಾತಾಡುವ ರೀತಿ ಮತ್ತು ಗತಿ ಎಷ್ಟಿತ್ತೆಂದರೆ ವೆಂಕಟ್ ಗೆ ಅವನು ಹೇಳುವ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಳ್ಳಲೇ ಕಷ್ಟವಾಯ್ತು. ಸ್ವಲ್ಪ ನಿಧಾನಕ್ಕೆ ಮಾತಾಡು ನೀನು ಮಾತಾಡೋದು ನನಗೆ ತಿಳಿಯುತ್ತಿಲ್ಲ ಅಂತ ನಿರ್ಭಿಡೆಯಿಂದ ಹೇಳಿ ಅವನ ವೇಗದ ಮಾತಿಗೊಂದು ತಡೆ ಹಾಕಿದ! ಅಲ್ವೇ ಮತ್ತೆ? ನಮ್ಮ ಮಾತೃ ಭಾಷೆಯೇ ಅಲ್ಲದ ಇಂಗ್ಲಿಶ್ ನಲ್ಲಿ ನಾವು ಮಾತಾಡೋವಾಗ ಅವರಿಗೇನಾದರೂ ಅರ್ಥವಾಗದಿದ್ದರೆ "ವ್ಹಾಟ್?" ಅಂತ ಗಂಟು ಮೊರೆ ಹಾಕಿ ಇನ್ನೊಮ್ಮೆ ಹೇಳುವಂತೆ ಮಾಡುವ ಅಮೆರಿಕನ್ನರು, ತಾವು ಮಾತ್ರ ಮಾತಾಡಿದ್ದು ಎಲ್ಲರಿಗೂ ಅರ್ಥವಾಗದಿದ್ದರೂ ನಾವು ಸುಮ್ಮನೆ ಕೇಳಲು ಸಾಧ್ಯವಿಲ್ಲ, ಅನ್ನುವುದು ವೆಂಕಟ್ ನ ಅಭಿಪ್ರಾಯವಾಗಿತ್ತು.     
 
ಆತ ನಿಧಾನವಾಗೆ ಮತ್ತೆ ಎಲ್ಲವನ್ನೂ ವಿವರಿಸಿ, ನಿಮಗೆ ಯಾವ ಕಾರ್ ಬೇಕು ಅಂತ ವಿನಯದಿಂದಲೇ ಕೇಳಿದ. ವೆಂಕಣ್ಣ ತನಗೆ ಬೇಕಾದ ಒಂದು ಕಾರಿನ ಹೆಸರು ಹೇಳಿ ಅದನ್ನು ಬುಕ್ ಮಾಡಿಸಿದ. ಇವನ ಕ್ರೆಡಿಟ್ ಕಾರ್ಡಿನಲ್ಲಿ ಅದಕ್ಕೆ ನಿಗದಿಯಾಗಿದ್ದ ಹಣವನ್ನು ಗೀಚಿಕೊಂಡು, ರಸೀದಿಯನ್ನು ಮುದ್ರಿಸಿ ಕೊಟ್ಟ. ಹೊರಗೆ ಕರೆದೊಯ್ದು ಇವನ ಕಾರನ್ನು ತೋರಿಸಿ. ಎಲ್ಲವನ್ನೂ ವಿವರಿಸಿ ನಿಮಗೆ ಶುಭವಾಗಲಿ ಅಂತ ಬೀಳ್ಕೊಟ್ಟ. ಇಷ್ಟೆಲ್ಲಾ ಪ್ರಕ್ರಿಯೆ ಅರ್ಧ ಗಂಟೆಯಲ್ಲೇ ಮುಗಿದಿತ್ತು. ಇಲ್ಲಿ ಕಾರ್ ಬಾಡಿಗೆ ಪಡೆಯೋದು ಅಂದ್ರೆ, ನಾವು ಚಿಕ್ಕವರಿದ್ದಾಗ ನಮ್ಮೂರಲ್ಲಿ  ಸೈಕಲ್ ಬಾಡಿಗೆ ಪಡೆಯುತ್ತಿದ್ದಷ್ಟೇ ಸುಲಭ ಇದೆಯಲ್ಲ ಅಂತ ಇವನಿಗೆ ಆಶ್ಚರ್ಯವಾಗಿತ್ತು. ಇಲ್ಲಿ ಕಾರ್ ಗಳು ವೈಭವೋಪೇತ ಅನ್ನೋದಕ್ಕಿಂತ ಅವಶ್ಯಕತೆ ಆಗಿರೋದರಿಂದಲೇ ಹೀಗಿದೆ ಅಂತ ಅವನಿಗನಿಸಿತು. 
 
ಆ ಕಾರನ್ನು ಓಡಿಸುವುದು ಅವನಿಗೆ ಸುಲಭವೇ ಆಗಿತ್ತು. ಯಾಕೆಂದರೆ ಅಲ್ಲಿನ ಕಾರುಗಳಲ್ಲಿ ಗೇರು ಬದಲಿಸುವ ಪ್ರಮೇಯವಿಲ್ಲ ಎಲ್ಲಾ ಆಟೋಮ್ಯಾಟಿಕ್, ಅದೂ ಅಲ್ಲದೆ ಅವುಗಳಿಗೆ ಕ್ಲಚ್ಚೂ ಇರುವುದಿಲ್ಲ. ಬರಿ ಬ್ರೇಕು ಮತ್ತು ಆಕ್ಸಿಲರೇಟರ್ ಎರಡೇ. ರೋಡ ಗಳಲ್ಲೂ ಲೇನ್ ಗಳಿರುತ್ತವೆ, ಅವುಗಳನ್ನು ಬಿಳಿಯ ಗೆರೆಗಳಲ್ಲಿ ಗುರುತಿಸಿರುತ್ತಾರೆ. ಅದರಲ್ಲೇ ಹೋಗುತ್ತಿದ್ದರಾಯ್ತು. ಅವನು ಮೊದಲ ಸಲ ಬಂದಿದ್ದಾಗ ಓಡಿಸಿದ್ದನಾದ್ದರಿಂದ ಸ್ವಲ್ಪ ಆತ್ಮ ವಿಶ್ವಾಸವೂ ಇತ್ತು. ಆ ಮಳಿಗೆಯಿಂದ ತನ್ನ ಬಾಡಿಗೆ ಕಾರಿನಲ್ಲಿ ಉಮೇದಿಯಲ್ಲೇ ಹೊರಟ. ಆ ಮಳಿಗೆಯಿಂದ ತನ್ನ ಮನೆಗೆ ೫ ಮೈಲುಗಳಷ್ಟೇ ದೂರವಿತ್ತು. ಹೊಸ ಕಾರಿನಲ್ಲಿ ವೆಂಕಣ್ಣ ಬೂಮ್ ಅಂತ ಸಾಗಿದ್ದ. ಆದರೆ ಅತಿಯಾದ ಆತ್ಮವಿಶ್ವಾಸ ಅವನ ಕೈಯಲ್ಲಿ ಒಂದು ಯಡವಟ್ಟು ಮಾಡಿಸಿತ್ತು! ಮನೆಯ ಕಡೆಗೆ ಹೋಗುವ ತಿರುವಿನಲ್ಲಿ, ತಪ್ಪಿ ಬೇರೆಯದೇ ಲೇನ್ ಹಿಡಿದುಬಿಟ್ಟಿದ್ದು ಸ್ವಲ್ಪ ಹೊತ್ತಿನಲ್ಲೇ ಅರಿವಾಯಿತು. ತಿರುಗಿ ಮತ್ತೆ ಮನೆಯ ದಾರಿ ಹಿಡಿಯಲು ತಿರುವು ಸಿಗದೇ ಹಾಗೆ ಇನ್ನೂ ೫ ಮೈಲಿ ಮುಂದೆ ಹೋದ. ಹೇಗೋ ರಸ್ತೆ ಬದಿಯ ಒಂದು ಪಾರ್ಕಿಂಗ್ ನ ಒಳಗೆ ಹೊಕ್ಕು ವಾಪಸ್ಸು ಮನೆಯ ಕಡೆಗೆ ಹೋಗುವ ಲೇನ್ ಗೆ ತಲುಪುವುದರೊಳಗೆ 1 ಗಂಟೆ ಹಿಡಿಯಿತು. ಇವನಿಗೆ ಹವಾನಿಯಂತ್ರಿತ ಕಾರಿನಲ್ಲೂ ಬೆವರು ಹರಿಯಿತು! ಅಂತೂ ಇಂತು ಮನೆ ತಲುಪಿ ಉಸ್ಸಪ್ಪ ಅಂತ ಉಸಿರು ಬಿಟ್ಟ. ನಮ್ಮ ದೇಶದಲ್ಲೇ ಮೇಲು, ಎಲ್ಲಿ ಬೇಕಾದರೂ ತಿರುಗಿಸಿಕೊಂಡರೂ ಆಗಿರೋದು ಅಂತ ತನ್ನ ಜನ್ಮಭೂಮಿಯ ನೆನಪಾಗಿ ಅವನ ಕರುಳು ಮಿಡಿಯಿತು.  
     
ಮನೆಯಲ್ಲಿ ಅಮ್ಮ, ಮಗಳು, ಕಾರು ಈಗ ಬಂದೀತು ಆಗ ಬಂದೀತು ಅಂತ ಕಾದು ಕಾದು ಕೊನೆಗೂ ಇವನು ರೊಂಯ್ ಅಂತ ಬಂದಾಗ ಸಮಾಧಾನಗೊಂಡಿದ್ದರು. ಗಂಡ ತಂದಿದ್ದ ಕಾರು ಬೆಂಗಳೂರಿನಲ್ಲಿದ್ದ ತಮ್ಮ ಕಾರಿಗಿಂತ ದೊಡ್ಡದಾಗಿದ್ದರಿಂದ ಜಾನುನ ಮುಖ ಆ ಕಾರಿನ ಹೆಡ್ ಲೈಟ್ನಂಗೆ ಅರಳಿತ್ತು. ಅವಳ ಅರಳಿದ ಮುಖ ನೋಡಿ ವೆಂಕಣ್ಣ ನ ಮುಖವೂ ಸಹಜವಾಗೇ ಅರಳಿತ್ತು! ಆದರೆ ಖುಷಿ ಮಾತ್ರ ಬೆಂಗಳೂರಿನಲ್ಲಿ ತಮ್ಮ ಬಳಿ ಇರುವ ಸ್ವಂತದ ಕಾರೆ ಇದಕ್ಕಿಂತ ಚೆನ್ನಾಗಿದೆ ಅಂತ ಹೇಳಿದ್ದು, ಮೊದಲು ನಮ್ಮಲ್ಲಿರೋದನ್ನ ಪ್ರೀತಿಸೋದು ಕಲೀರಿ ಅಂತ ಅಪ್ಪ ಅಮ್ಮನಿಗೆ ಬುದ್ಧಿ ಹೇಳಿದಂತಿತ್ತು! ಕಾರಿನಲ್ಲಿ ಇಬ್ಬರಿಗೂ ಒಂದು ಸುತ್ತು ಹೊಡಿಸಿಕೊಂಡು ಬಂದ ಇವನು. ಆಗ ಮಾತ್ರ ಮೊದಲು ಮಾಡಿದ ತಪ್ಪು ಮಾಡದೆ ಸರಿಯಾದ ಲೇನ್ ನಲ್ಲೆ ತಿರುಗಿಸಿಕೊಂಡು ಬಂದಿದ್ದ. ಅವನಿಗೆ ಸಂಜೆ ಹೋಟೆಲ್ ಒಂದಕ್ಕೆ ಊಟಕ್ಕೆ ಹೋಗೋದಿತ್ತು. ಹೊಸದಾಗಿ ನಿಯುಕ್ತನಾಗಿದ್ದ ಉಪಾಧ್ಯಕ್ಷ ಜೇ.ಸಿ.ಬಿ. ಅವತ್ತು ಅಮೆರಿಕಾದ ಶಾಖೆಯ ಎಲ್ಲ ಮ್ಯಾನೇಜರ್ ಗಳಿಗೂ ಊಟಕ್ಕೆ ಕರೆದಿದ್ದ. ಇವನೂ ಅಮೆರಿಕಾದ ಪ್ರವಾಸದಲ್ಲಿದ್ದುದರಿಂದ ಇವನಿಗೂ ಆಮಂತ್ರಣವಿತ್ತು. ಕಾರಿನಲ್ಲೇ ಹೋಗುವ ನಿರ್ಧಾರ ಮಾಡಿದ್ದ. ಇವನಿಗೆ ದಾರಿ ತೋರಿಸಲು ಕಾರಿನಲ್ಲೇ ದಿಕ್ಕು ತೋರಿಸುವ ಯಂತ್ರವಿತ್ತಲ್ಲ! 
ಆ ಹೋಟೆಲ್ ತಲುಪಿದಾಗ ಅಲ್ಲಾಗಲೇ ಕೆಲವು ಮ್ಯಾನೆಜರಗಳು ಆಗಮಿಸಿದ್ದರು. ಎಲ್ಲರೂ ಪರಸ್ಪರ ತಮ್ಮ ತಮ್ಮಲ್ಲೇ  ಪರಿಚಯಿಸಿಕೊಂಡರು. ಐದಾರು ಜನರು ಭಾರತದವರೇ ಇದ್ದರು. ಅದರಲ್ಲಿ ಹೆಚ್ಚಿನವರು ಇವನ ಹಾಗೆ ಸ್ವಲ್ಪ ದಿನಗಳಿಗೋ, ತಿಂಗಳಿಗೋ ಅಂತ ಅಲ್ಲಿಗೆ ಬಂದವರಾಗಿದ್ದರು. ಅದರಲ್ಲಿ ರಘುವರನ್ ಮಾತ್ರ ಕಳೆದ ಹತ್ತು ವರ್ಷಗಳಿಂದ ಅಮೇರಿಕಾದಲ್ಲೇ ತಳ ಊರಿದವನಾಗಿದ್ದಾನೆಂದು ಅವನ ಮಾತಾಡುವ ಶೈಲಿಯಲ್ಲೇ ಇವನಿಗೆ ತಿಳಿಯಿತಲ್ಲದೆ, ಅದನ್ನು ಅವನೇ ಹೇಳಿಕೊಂಡ ಕೂಡ. ಅವನು ಮೂಲತಃ ತಮಿಳುನಾಡಿನವನಂತೆ. ಅಲ್ಲಿದ್ದಿದ್ದ ಉಳಿದವರೆಲ್ಲ ಅಮೇರಿಕಾದವರೇ ಆಗಿದ್ದರೂ ಅವರ ಮೂಲ ದೇಶ ಚೈನಾ, ಮಲೇಶಿಯಾ, ರಶಿಯಾ ಆಗಿತ್ತು. ಹೀಗೆ ಇಡೀ ಜಗತ್ತೇ ಅಲ್ಲಿತ್ತು! ಎಷ್ಟಂದರೂ ಅಮೇರಿಕಾ ವಲಸಿಗರ ದೇಶವಲ್ಲವೇ? 
ಅಷ್ಟರಲ್ಲೇ ಜಾನ್ ಸೀ. ಬೇಕರ್ ತನ್ನ ಚಾಣಕ್ಯ ಜೇಕಬ್ ನೊಂದಿಗೆ ಅಲ್ಲಿಗೆ ಆಗಮಿಸಿದ. ಎಲ್ಲರ ಪರಿಚಯ ಮಾಡಿಕೊಂಡ. ವೆಂಕಣ್ಣ ಭಾರತದ ಶಾಖೆಯವನೆಂದು ಗೊತ್ತಾದಾಗ ಅವನ ಕಣ್ಣುಗಳು ಇವನನ್ನು ಮೇಲಿಂದ ಕೆಳಗೆ ನೋಡಿ ಹುಬ್ಬು ಗಂಟಿಕ್ಕಿದ್ದನ್ನು ಗಮನಿಸಿದ ವೆಂಕಟ್ ಗೆ ಒಂದು ತರಹದ ಮುಜುಗರವಾದರೂ ಅಮೆರಿಕಾದ ದೊರೆಯ ಎದುರು ಅದನ್ನು ತೋರ್ಪಡಿಸದೆ ಒತ್ತಾಯದ ಮುಗುಳ್ನಗೆಯ ಸೂಸಿ ಅವನಿಗೆ ಶುಬಾಶಯ ಹೇಳಿದ.

ಊಟಕ್ಕಿಂತ ಮೊದಲು ಅಲ್ಲಿ ಶರಾಬಿನ ವ್ಯವಸ್ಥೆಯೂ ಇತ್ತು. ಎಲ್ಲರೂ ಕುಡಿಯಲು ಶುರು ಹಚ್ಚಿಕೊಂಡರೂ ವೆಂಕಟ್ ಮಾತ್ರ ಸುಮ್ಮನೆ ಒಂದು ಕೂಲ್ ಡ್ರಿಂಕ್ಸ್ ಹೀರುತ್ತಿದ್ದುದು ನೋಡಿ, ತನ್ನ ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ಬಂದ ದಿವಾಕರ್ ನೀನು ಯಾಕೆ ಕುಡಿಯುತ್ತಿಲ್ಲ ಎಂದು ಇವನಿಗೆ ಕೇಳಿದ. ತಾನು ವಾಪಸ್ಸು ಮನೆಗೆ ಹೋಗಬೇಕೆಂದೂ, ಕುಡಿದು ಕಾರು ಓಡಿಸುವುದು ಸರಿಯಲ್ಲವೆಂದೂ ವೆಂಕಟ್ ಹೇಳಿದ್ದು ಕೇಳಿ ಸುಧಾಕರ್ ಬಿದ್ದು ಬಿದ್ದು ನಕ್ಕ! 
"ನಿಮ್ಮೂರಿನ ಥರ, ಕಾರಿನಲ್ಲಿ ಕೂತವರ ಬಾಯಿಗೆ ಮಷಿನ್ ಹಿಡಿದು ಕುಡಿದಿದ್ದೀಯೋ ಇಲ್ಲವೋ ಅಂತ ಇಲ್ಲಿ ತಪಾಸಣೆ ಮಾಡೋದಿಲ್ಲ ಮಾರಾಯ! ಕುಡಿದರೂ ಕೂಡ, ನೀನು ಸರಿಯಾಗಿ ಲೇನ್ ಹಿಡಿದು ಕಾರನ್ನು ಓಡಿಸಿಕೊಂಡು ಹೋದ್ರೆ ನಿನ್ನನ್ನು ಯಾರೂ ಕೇಳರು. ಹಾಕು ಒಂದೆರಡು ಪೆಗ್ಗು…" ಅಂತ ಪುಸಲಾಯಿಸಲು ನೋಡಿದ. ಇವನು ನಕ್ಕು, ತನಗೆ ಕುಡಿದು ಕಾರು ಓಡಿಸುವುದು ಅಭ್ಯಾಸವಿಲ್ಲವೆಂದು ನಯವಾಗಿಯೇ ಅವನನ್ನು ಸಾಗಹಾಕಿದ. ದಿವಾಕರ್ ಅಲ್ಲಿಗೆ ಹೋಗಿ ಬರಿ ಆರು ತಿಂಗಳಾಗಿತ್ತಷ್ಟೆ. ಆದರೂ ತನ್ನ ದೇಶವನ್ನೇ "ನಿಮ್ಮೂರು" ಅಂತ ಮೂದಲಿಸುವುದು ಕಂಡು ಇವನಿಗೆ ವಿಚಿತ್ರವೆನಿಸಿತ್ತು. 
ಇವನು ಹಾಗೆ ಸುತ್ತಲೂ ಗಮನಿಸುತ್ತಿದ್ದ. ಜಾನ್ ಕೆಲವರ ಜೊತೆಗೆ ಹರಟುತ್ತಿದ್ದ. ಅದು ಸಹಜದ ಮಾತುಕತೆ ಅಂತ ಇವನಿಗೆ ಕಂಡು ಬರಲಿಲ್ಲ. ಅವನು ಎಲ್ಲರಿಂದಲೂ ಕೆಲವು ಸಂಗತಿಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತಿದ್ದ. ಜೇಕಬ್ ಕೂಡ ಅವರ ಮಾತಿನಲ್ಲಿ ಸಿಗುವ ಕೆಲವು ವಿಶಿಷ್ಟಗಳನ್ನು ತನ್ನ ಟ್ಯಾಬ್ಲೆಟ್ ನಲ್ಲಿ ಅವರಿಗೆ ಗೊತ್ತಾಗದಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಅದಕ್ಕೆ ಇವರು ಎಲ್ಲರಿಗೂ ಕುಡಿಸಿರಬೇಕು ಅಂತ ವೆಂಕಟ್ ಗೆ ಮನದಟ್ಟಾಗಿತ್ತು. 
ಇನ್ನೊಂದು ಮೂಲೆಯಲ್ಲಿ ಅಮೆರಿಕದವನೇ ಆಗಿಹೋಗಿದ್ದ ರಘುವರನ್ ತನ್ನ ಅಲ್ಲಿನ ಸಹೋದ್ಯೋಗಿಗಳಿಗೆ ತಾನು ಕೊನೆಯ ಸಲ ಭಾರತಕ್ಕೆ ಹೋಗಿದ್ದಾಗ ನಡೆದ ಘಟನೆಯನ್ನು ಅಮೇರಿಕಾದ ಉಚ್ಚಾರಣೆಯಲ್ಲೇ ವಿವರಿಸುತ್ತಿದ್ದ.
"ನಿಮಗೆ ಗೂತ್ತಾ? ನಾನು ಚೆನ್ನೈ ನಲ್ಲಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದೆ. ಅದೂ ಮೇ ತಿಂಗಳು ಬೇರೆ. ಅಲ್ಲಿನ ಸೆಕೆ ಹೇಳತೀರದಷ್ಟಿರುತ್ತದೆ. ನಾನು ನನ್ನ ಏಸಿ ರೂಮಿನಿಂದ ಹೊರಬಿದ್ದೆ. ಬೆವರು ಧಾರಾಕಾರ ಸುರಿಯುತ್ತಿತ್ತು. ನನಗೆ ಎಲ್ಲೋ ಹೋಗಬೇಕಿತ್ತು. ಯಾವುದಾದರೂ ಟ್ಯಾಕ್ಸಿ ಸಿಗುತ್ತೇನೋ ಅಂತ ರೋಡಿಗೆ ಬಂದರೆ… ಅಲ್ಲಿ ನನ್ನ ಮುಂದೇನೆ ಎರಡು ಹಸುಗಳು ನಿಂತಿವೆ! ಹಿಂದೆ ತಿರುಗಿದರೆ ಒಂದು ಬಿಡಾಡಿ ನಾಯಿ! ನನಗಂತೂ ದಿಕ್ಕು ತೋಚದೆ, ಹಾಗೆ ವಾಪಸ್ಸು ಹೋಟೆಲ್ ರೂಮಿಗೆ ಬಂದು ಬಾಗಲು ಹಾಕಿಕೊಂಡೆ!"
ವಿದೇಶಿ ಸಹೋದ್ಯೋಗಿಗಳು ಆಶ್ಚರ್ಯ ಚಕಿತರಾಗಿದ್ದರು. ರೋಡಿನಲ್ಲಿ ಹಸುಗಳೇ? ಅದು ಸಾಧ್ಯವೇ ಎಂಬಂತಿತ್ತು ಅವರ ನೋಟ. ಅಲ್ಲೇ ನಿಂತಿದ್ದ ಭಾರತದವನೇ ಆದ ಸುರೇಶ ಇವನ ಅನುಭವ ಕೇಳಿ ಬಿದ್ದು ಬಿದ್ದು ನಕ್ಕ. ತನಗೂ ಒಮ್ಮೆ ಹಿಂಗೆ ಆಗಿತ್ತು ಅಂತ ಹೇಳಿ ತನ್ನ ಅನುಭವವನ್ನೂ ಹಂಚಿಕೊಂಡ!
ವೆಂಕಟ್ ಗೆ ಇದನ್ನು ನೋಡು ರೇಜಿಗೆ ಹುಟ್ಟಿತ್ತು. ಇದೆ ರಘುವರನ್ ಹತ್ತು ವರ್ಷಗಳ ಹಿಂದೆ ಹಸುಗಳ ಹಿಂದೆ ಆಟ ಆಡಿಕೊಂಡಿದ್ದಿರಬೇಕು. ಅಲ್ಲೇ ಹುಟ್ಟಿ ಬೆಳೆದ ಅವನು, ಇಲ್ಲಿಗೆ ಬಂದ ಕೂಡಲೇ ಹೀಗೆ ಬದಲಾಗುವುದೇ? ಅದೂ ಅಲ್ಲದೆ ತನ್ನ ದೇಶದ ಬಗ್ಗೆ ಇತರರಿಗೆ  ಈ ರೀತಿ ಹೇಳುವುದೇ? ಥೂ ಇವರ ಜನ್ಮಕ್ಕಿಷ್ಟು ಬೆಂಕಿ ಹಾಕ… ಅಂತ ಸ್ವಲ್ಪ ಮೆಲುದನಿಯಲ್ಲೇ ಬೈದುಕೊಂಡ. 
ಅಲ್ಲಿಲ್ಲಿ ಮಾತಾಡಿಕೊಂಡಿದ್ದ ಜಾನ್ ಚಿತ್ತ ಈಗ ವೆಂಕಟ್ ಹತ್ರ ಹರಿದಿತ್ತು. ಅದು ಇದೂ ಕೇಳುತ್ತ ಇವನ ಸಮಸ್ಯೆಗಳೇನು ಅಂತ ವಿಚಾರಿಸಿದಂತೆ ಮಾಡಿ, ಅವನ ಮನಸ್ಸನ್ನು ಓದುವ ಕೆಲಸಕ್ಕೆ ಶುರು ಹಚ್ಚಿಕೊಂಡಿದ್ದ. ತಾನು ಮುಂದಿನ ವಾರವೇ ಭಾರತಕ್ಕೆ ಹೋಗುತ್ತಿದ್ದೇನೆಂದೂ, ಅಲ್ಲಿ ನಿನ್ನ ಜೊತೆಗೆ ಮಾತಾಡಲು ಆಗುವುದಿಲ್ಲವಾದ ಕಾರಣ ನಾಳೆ ತನ್ನ ಆಫೀಸಿನಲ್ಲಿ ಮುಕತಃ ಭೆಟಿಯಾಗೆಂದು ಅಪ್ಪಣೆ ಮಾಡಿದ. 
 
ಕುಡಿದಾದ ಮೇಲೆ ಸುಮಾರು ಒಂದು ಗಂಟೆಯ ಬಳಿಕ ಎಲ್ಲರೂ ಊಟ ಮಾಡಿ, ಅಲ್ಲಿಂದ ತಂತಮ್ಮ ಮನೆಗಳಿಗೋ, ಹೋಟೆಲಿಗೋ ತೆರಳಿದರು. ಇವನು ತನ್ನ ಕಾರನ್ನು ಡ್ರೈವ್ ಮಾಡುತ್ತಿದ್ದ. ಮನಸ್ಸು ಜಾನ್ ಬಗ್ಗೆಯೇ ಯೋಚಿಸಲು ತೊಡಗಿತ್ತು. ಅವನು ಭಾರತಕ್ಕೆ ಹೋಗುತ್ತಿರುವ ಬಗ್ಗೆ ಇವನ ಬಾಸ್ ಸುಧೀರ್ ಜೊತೆಗೆ ಮಾತಾಡುತ್ತಿದ್ದಾಗಲೋಮ್ಮೆ, ಜಾನ್ ಅಲ್ಲಿಗೆ ಹೋಗಿ ಎಷ್ಟೋ ತಲೆಗಳನ್ನು ಉರುಳಿಸಲಿದ್ದಾನೆಂದು ಅವನು ಹೇಳಿದ್ದು ನೆನಪಿಗೆ ಬಂತು. ಯಾಕೋ, ಭಾರತದಲ್ಲಿ ತಾನು ಮಾಡಿಕೊಂಡಿದ್ದ ಸಾಲಗಳು ಜಾಸ್ತಿಯಾದವೆಂದು ವೆಂಕಟ್ ಗೆ ಈಗ ಹಠಾತ್ ಆಗಿ ಅನಿಸಲು ಶುರುವಾಗಿತ್ತು…! 
 
(ಮುಂದುವರಿಯುವುದು)