Tuesday, April 24, 2007

ಮಾತಾಡು ಮಂಗಣ್ಣಾ!

ಒಂದು ಸಲ ಒಬ್ಬನಿಗೆ ಒಂದು ಮಂಗ ಸಿಕ್ತು. ಅರೇ ಅದರಲ್ಲೇನು ವಿಶೇಷ ಅಂತೀರಾ? ಆ ಮಂಗಕ್ಕೆ ಮಾತಾಡೊಕೆ ಬರ್ತಿತ್ತು! ಕನ್ನಡದಲ್ಲಿ ನಿಛ್ಛಳವಾಗಿ ಮಾತಾಡ್ತಿತ್ತು. ಆತ ಮನಸ್ಸಿನಲ್ಲೆ ಮಂಡಿಗಿ ತಿಂದ! ಇದನ್ನ ಇಟ್ಕೊಂಡು ಎಷ್ಟೊಂದು ದುಡ್ಡು ಮಾಡ್ಬಹುದು ಅಂತ ಲೆಕ್ಕ ಹಾಕಿದ. ಎಷ್ಟಂದ್ರು ಹುಲು ಮಾನವನಲ್ವೆ?! ಆ ಮಂಗಣ್ಣನ್ನ ಮನೆಗೆ ಕರ್ಕೊಂಡು ಬಂದ. ಇಡೀ ರಾತ್ರಿಯೆಲ್ಲ ಅದ್ರ ಜೊತೆ ಮಾತಾಡೊದ್ರಲ್ಲೆ ಕಳೆದ...
ಮರುದಿನ ಆಫೀಸಿಗೆ ಹೋಗಿ, ಸಹೋದ್ಯೊಗಿಗಳಿಗೆ ಮಂಗಣ್ಣನ ಸುದ್ದಿ ಹೇಳಿದ. ಅದರ ಸುದ್ದಿ ಕೇಳಿ, ಗೆಳೆಯರೆಲ್ಲ ಬಿದ್ದು ಬಿದ್ದು ನಕ್ಕರು. ಅವನಿಗೆ ಹುಚ್ಚು ಹಿಡಿದಿರುವುದು ಅವರಿಗೆ ಖಾತ್ರಿಯಾಯ್ತು. ಆದರೆ, ಅವನು ಅಷ್ಟಕ್ಕೆ ಬಿಡಲಿಲ್ಲ. ಬೆಕಾದರೆ ಬೆಟ್ ಕಟ್ಟಿ ಅಂದ. ಆಯ್ತು ಅಂತ ಎಲ್ಲರು ಮಾತಾಡೊ ಮಂಗಣ್ಣನ ಮೇಲೆ ಬೆಟ್ ಕಟ್ಟಿದ್ರು.
ಆಫೀಸು ಮಗಿದ ಕೂಡಲೇ ಎಲ್ರು ಅವನ ಮನೆಗೆ ಹೊಗಿ ಮಂಗಣ್ಣನ್ನ ಮಾತಾದ್ಸೊದು, ಒಂದು ವೇಳೆ ಅದು ಮಾತಾಡಿಲ್ಲ ಅಂದ್ರೆ ಅವ್ರು ಕಟ್ಟಿರೊ ದುಡ್ಡು ಅವನು ವಾಪಸ್ಸು ಕೊಡಬೇಕು ಅಂತ ನಿರ್ಧಾರ ಆಯ್ತು. ಅವ್ರಿಗೆಲ್ಲ ಗೆದ್ದೇ ಗೆಲ್ತಿವಿ ಅಂತ ಗೊತ್ತಿತ್ತು. ಅವನಿಗೂ ಅಷ್ಟೆ!ಎಲ್ರು ಸಂಜೆ ಅವನ ಮನೆಗೆ ಬಂದ್ರು. ಅವನು ಮಂಗಣ್ಣನ ಬಳಿಗೆ ಹೋಗಿ, ಅದಕ್ಕೆ ಎಲ್ಲ ವಿಷಯ ಹೆಳ್ದ. ಮಾತಾಡಿ ನನ್ನ ಮರ್ಯಾದೆ ಉಳಿಸು ಅಂತ ಕೆಳ್ಕೊಂಡ. ಮಂಗಣ್ಣ ಅವನೆಡೆಗೆ ಒಂದು ಸಲ ತುಂಟ ನಗೆಯ ನೋಟ ಬೀರಿತು. ಆದರೆ ಏನೂ ಮಾತಾಡಲೆ ಇಲ್ಲ! ಇವನಿಗೆ ಗಂಟಲು ಆರಿದಂತಾಯಿತು. ನಿನ್ನೆಯೆಲ್ಲಾ ವಟ ವಟನೆ ಮಾತಾಡಿದ ಮಂಗಣ್ಣನಿಗೆ ಈಗೆನಾಯಿತು ಅಂತ ಅವನಿಗಾದರೂ ಹೇಗೆ ಅರ್ಥವಾದೀತು. ಅದರ ಮುಂದೆ ಗೋಗರೆದ, ಕಣ್ಣೀರಿಟ್ಟ. ಊಹುಂ, ಮಂಗಣ್ಣನಿಗೆ ಮಾತ್ರ ಅವನ ಮೇಲೆ ಕರುಣೆ ಬಂದಂತೆ ತೋರಲಿಲ್ಲ. ಒಂದು ಶಬ್ದವನ್ನು ಮಾತಾಡಲಿಲ್ಲ. ಗೆಳೆಯರೆಲ್ಲ ಅವನಿಗೆ ಬುದ್ಧಿ ಹೆಳಿ, ಇನ್ನಾದರು ಇಂಥ ಹುಚ್ಚಾಟ ಮಾಡದಿರುವಂತೆ ಎಚ್ಚರಿಸಿ ಹೊರಟು ಹೊದರು. ತಮ್ಮ ಪಾಲಿನ ಹಣವನ್ನು ಮಾತ್ರ ನೆನಪು ಹಾರದೆ ಇಸಿದುಕೊಂಡು ಹೋದರು.ಇವನಿಗೆ ಹುಚ್ಚು ಹಿಡಿಯೊದೊಂದೆ ಬಾಕಿ. ಕೈಲಿದ್ದ ಹಣಾನೂ ಹೋಯ್ತು. ತಲೆ ಮೇಲೆ ಕೈ ಹೊತ್ತು ಕುಳಿತಿದ್ದ. ಅಷ್ಟರಲ್ಲೆ, ಮಂಗಣ್ಣ ನಿಧಾನವಾಗಿ ಅವನ ಬಳಿ ಬಂತು; ಅವನ ಹೆಗಲ ಮೇಲೆ ಕೈ ಇಟ್ಟು ಹೀಗೆ ಅರುಹಿತು "ಯಾಕೆ, ಬೇಜರಾಯ್ತಾ?". ಅವನಿಗೆ ಕೆಂಡದಂಥ ಕೋಪ ಬಂತು (ಬರದೇ ಇರುತ್ತದೆಯೆ ಮತ್ತೆ?). ಆತ ಕೋಪದಿಂದ ಕೂಗಿದ "ಆಗ್ಲೇ ಇಷ್ಟು ಮಾತಾಡೋಕೆ ಏನಗಿತ್ತು ನಿಂಗೆ ಧಾಡಿ?!". ಮಂಗಣ್ಣ ಅಷ್ಟೇ ಶಾಂತನಾಗಿ ನುಡಿದ "ಅಯ್ಯೊ ಹುಚ್ಹಪ್ಪಾ, ಆಗ ನಾನು ಮಾತಾಡಿದ್ದಿದ್ರೆ ನಿನಗೆ ಪುಟುಗೋಸಿ ಸಾವಿರಾರು ರುಪಾಯಿ ಗೆಲ್ತಿದ್ದೆ. ನಾಳೆ ಮತ್ತೆ ಅವ್ರ ಜೊತೆನೇ ಬೆಟ್ ಕಟ್ಟು ಈ ಸಲ ಲಕ್ಷಾಂತರ ರುಪಾಯಿ ಕಟ್ತಾರೆ. ಆಮೇಲೆ ನಾನು ಮಾತಾಡ್ತಿನಿ". ಅವನಿಗೆ ಅರ್ಥಾ ಆಯ್ತು! ಮರುದಿನ ಗೆಳೆಯರೆದುರು ಮತ್ತೆ ಚಾಲೆಂಜ್ ಮಾಡ್ದ. ಈ ಸಲ ಮಂಗಣ್ಣ ಮಾತಾಡ್ತು. ಆತ ಒಂದು ದಿನದಲ್ಲೆ ಲಕ್ಷಾಧೀಶನಾದ!