Friday, April 22, 2011

ಇ(ಹಿ)ಗೋ ಕನ್ನಡ!

ಅದೊಂದು ಭಾನುವಾರದ ಸುಂದರ ಮುಂಜಾನೆ! ನಾನು ಚಹದ ಲೋಟ ಕೈಗಿಟ್ಟುಕೊಂಡು ಕನ್ನಡ ವೃತ್ತ ಪತ್ರಿಕೆ ಓದುತ್ತಿದ್ದೆ. ನನ್ನ ೩ ವರ್ಷದ ಮಗಳು ತನ್ನ ಮುದ್ದು ಕಂಠದಲ್ಲಿ ಕನ್ನಡದಲ್ಲಿ ಹಾಡು ಹೇಳುತ್ತಿದ್ದಳು. ನನಗದೇ ಸಂಭ್ರಮ! "ಬಾಬಾ ಬ್ಲಾಕ್ ಶೀಪ್ ..." ಹಾಡು ಬಿಟ್ಟು ಕನ್ನಡದ ಹಾಡು ಹೇಳುವುದೆಂದರೇನು ಕಡಿಮೆ ಸಂತಸದ ವಿಷಯವೇ?! ಅವಳ ಶಾಲೆ ಪ್ರವೇಶದ ಸಮಯದಲ್ಲಿ ಅವರ ಹೆಡ್ ಮಿಸ್ (?!) ಗೆ ನಾನು ಖಡಾ ಖಂಡಿತ ವಾಗಿ ಮಗಳಿಗೆ ಕನ್ನಡ ಕಲಿಸಲೇ ಬೇಕು ಅಂತ ತಾಕಿತು ಮಾಡಿದ್ದೆ! ಪಾಪ ಅವರು ಅವಾಗೊಂದು ಇವಾಗೊಂದು ಅಂತ ಕನ್ನಡ ಹಾಡನ್ನಾದರೂ ಹೇಳಿ ಕೊಟ್ಟಿದ್ದಾರೆ. ಅವರಿಗೆ ನಾನು ಚಿರ ಋಣಿ!

ಮಗಳು ಹಾಡುತ್ತಿದ್ದ ಹಾಡು ಹೀಗಿತ್ತು "ಅಮ್ಮ ಅಮ್ಮ ನಂಗೆ ಹಸಿವೆ ಇಲ್ಲಮ್ಮ, ಮೂರೂ ಮೂರೂ ದೋಸೆ ಅಷ್ಟೇ ಸಾಕಮ್ಮ...", ಆದರೆ ಅವಳ್ಯಾಕೋ ಅದನ್ನ ಬೇರೆ ತರಹ ಹಾಡುತ್ತಿದ್ದಾಳೆ ಅನಿಸಿತು. ಇನ್ನೊಮ್ಮೆ ಲಕ್ಷ್ಯ ಕೊಟ್ಟು ಕೇಳಿದಾಗ ಆಘಾತ ವಾಯಿತು! ಅವಳು ಹೀಗೆ ಹಾಡುತ್ತಿದ್ದಳು "ಹಮ್ಮ ಹಮ್ಮ ನಂಗೆ ಅಸಿವೆ ಇಲ್ಲಮ್ಮ...." ನನಗೆ ಕೆಂಡದಂಥ ಕೋಪ ಬಂತು. ಅವಳಿಗೆ ತಿಳಿಸಿ ಹೇಳಿದೆ "ಹ" ಕಾರಕ್ಕೆ "ಅ" ಕರ ಹಚ್ಚಬೇಡ ಎಂದು. ಅವಳು ಕೂಡಲೇ ತಿದ್ದಿಕೊಂಡಳು. ಮುಂದೆ ಯಾವಾಗಲೋ ಅವಳನ್ನು ಶಾಲೆಗೇ ಬಿಡಲು ಹೋದಾಗ ಅವರ ಹೆಡ್ ಮಿಸ್ ಎದುರು ಈ ವಿಷಯ ಪ್ರಸ್ತಾಪಿಸಿದೆ. ಅವರು ತಾವು ಹಾಗೆಲ್ಲ ಕಲಿಸುವುದಿಲ್ಲ ಬೇರೆ ಮಕ್ಕಳು ಮಾತನಾಡುವುದ ಕೇಳಿ ಹಾಗೆ ಮಾತಾಡ್ತಾರೆ ಅಂದರು. ಇದ್ದರು ಇರಬಹುದು ಅನಿಸಿತು. ಆ ವಿಷಯ ಅಲ್ಲಿಗೆ ಬಿಟ್ಟೆ.

ಇದಾಗಿ ಕೆಲ ದಿನಗಳ ನಂತರ, ಹೀಗೆ ಒಂದು ದಿನ ನನ್ನ ಮಗಳ ಜೊತೆ ಆಡಲು, ಅವಳಿಗಿಂತ ೨ ವರ್ಷ ದೊಡ್ಡವಳಾದ ನಮ್ಮ ಅಪಾರ್ಟಮೆಂಟ್ ನ ವಾಚ್ ಮ್ಯಾನ್ ಮಗಳು ಭೂಮಿಕ ಮನೆಗೆ ಬಂದಿದ್ದಳು. ಅವಳು ಆಗಾಗ ಬರುತ್ತಿರುತ್ತಾಳೆ. ನಾನು ಕುತೂಹಲಕ್ಕೆ ಅವರ ಆಟವನ್ನು ವೀಕ್ಷಿಸುತ್ತಿದ್ದೆ. ಅವರಾಡುತ್ತಿದ್ದುದು ಅಡುಗೆ ಮಾಡೋ ಆಟ.

ನನ್ನ ಮಗಳು "ನಂಗೆ ಹಸಿವೆ ಆಗಿದೆ ಊಟ ಕೊಡು" ಅಂದಳು.

ಭೂಮಿಕ "ಸ್ವಲ್ಪ ತಡಿ ಪುಟ್ಟ, ಹನ್ನ ಮಾಡ್ತಾ ಇದ್ದೀನಿ, ಅಲ್ಲಿವರೆಗೆ ಆಲು ಕುಡಿ" ಅಂದಳು.

ನನ್ನ ಎದೆ ಧಸಕ್ಕೆಂದಿತು! ನನ್ನ ಮಗಳಿಗೆ "ಹ" ಕಾರಕ್ಕೆ "ಅ" ಕಾರ ಹಾಗು "ಅ" ಕಾರಕ್ಕೆ "ಹ" ಕಾರ ಹಾಕುವುದ ಕಲಿಸಿದವಳು ಇದೆ ಹುಡುಗಿ ಅಂತ ಗೊತ್ತಾಯಿತು. ನಾನು ವಾಚ್ ಮ್ಯಾನ್ ನನ್ನು ಕರೆದು "ಏನಯ್ಯ ನಿನ್ನ ಮಗಳು ಹೀಗೆ ತಪ್ಪು ತಪ್ಪು ಕನ್ನಡ ಮಾತಾಡ್ತಾಳೆ " ಅಂದೆ.

ಅವನು "ಹೇನ್ ಮಾಡೋದು ಸಾರ್ ನಮ್ಮ ಮನೇಲಿ ಮಾತಾಡೋದೇ ಅಂಗೆ" ಅಂದ! ನನಗೆ ತಲೆ ಸುತ್ತಿದ ಅನುಭವ. ಅವನು ಮುಂದು ವರೆಸಿದ "ನೀವೇ ಏಳಿ ಕೊಡಿ ಹವಳಿಗೆ" ಅಂದ. ಅದೇನೋ ಹೇಳ್ತಾರಲ್ಲ "ಮದುವೆ ಆಗಿದೆಯ ಅಂದ್ರೆ ನೀನೆ ಮದುವೆ ಮಾಡ್ಕೋ " ಅಂದ್ರಂತೆ, ಹಂಗಾಗಿತ್ತು ನನ್ನ ಸ್ಥಿತಿ. ಆದರೂ ಅವನ ಮಗಳನ್ನು ತಿದ್ದುವುದು ನನ್ನ ಕರ್ತವ್ಯ ವಾಗಿತ್ತು. ಅದೂ ಅಲ್ಲದೆ ನನ್ನ ಮಗಳಿಗೆ ಹಾನಿ ಆಗುವುದು ತಪ್ಪಿಸುವುದು ನನ್ನ ಆದ್ಯತೆ ಆಗಿತ್ತು.

"ಆಗಲಿ, ಸಮಯ ಸಿಕ್ಕಾಗಲೆಲ್ಲ ನಿನ್ನ ಮಗಳಿಗೆ ತಿದ್ದುವೆ" ಅಂತ ಭಾಷೆ ಕೊಟ್ಟೆ. ಅದರಂತೆ ನಡೆದುಕೊಂಡೆ ಕೂಡ! ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ತುಂಬಾ ಕಷ್ಟ ಪಟ್ಟು ಅವಳಿಗೆ ಕಲಿಸುತ್ತಿದೆ.

ಸುಮಾರು ದಿನಗಳಾದ ಮೇಲೆ, ಒಂದು ದಿನ ಅವಳು ತನ್ನ ಪಠ್ಯ ಪುಸ್ತಕ ತಂದಿದ್ದಳು. ಅದರಲ್ಲಿನ ಒಂದೊಂದೇ ಕನ್ನಡ ಪದಗಳನ್ನು ಉಚ್ಚರಿಸುತ್ತಿದ್ದಳು, ತಪ್ಪಿದರೆ ನಾನು ತಿದ್ದುತ್ತಿದ್ದೆ. ಹಾಗೆ ಹೇಳುತ್ತಾ ಇದ್ದಾಗ.... "ಹರಸ" ಅಂದಳು. "ಹಾಗಾಲ್ಲಮ್ಮ, ಅರಸ ಅನ್ನು" ಅಂದೆ. ಮತ್ತೆ "ಹರಸ" ಅಂದಳು. ನಾನು ಎಷ್ಟೇ ಸಲ ಹೇಳಿದರೂ ತಪ್ಪಾಗಿಯೇ ಹೇಳಿದಳು, ಅದು ಅಲ್ಲದೆ "ಇಲ್ಲಿ ಹೀಗೆ ಇದೆ" ಅಂತ ವಾದ ಬೇರೆ ಮಾಡತೊಡಗಿದಳು. ನಾನು ಕೋಪದಿಂದ "ಪುಸ್ತಕ ಕೊಡು ಇಲ್ಲಿ" ಅಂದೆ. ನನಗೆ ಹುಚ್ಚು ಹಿಡಿಯುವುದೊಂದೇ ಬಾಕಿ! ಪುಸ್ತಕದಲ್ಲಿ "ಹರಸ" ಅಂತಲೇ ಮುದ್ರಿತವಾಗಿತ್ತು! ಪಕ್ಕಕ್ಕೆ ರಾಜನ ಚಿತ್ರ ಬೇರೆ. ಹಾಗಾಗಿ ಹರಸ ಅಂತ ಬೇರೆ ಯಾವುದೋ ಪದವಿರಬಹುದಾದ ಸಾಧ್ಯತೆಯ ಬಗ್ಗೆ ಯೋಚಿಸುವ ಪ್ರಶ್ನೆಯೇ ಇರಲಿಲ್ಲ! ನಾನು ಪುಸ್ತಕವನ್ನು ಪೂರ್ತಿಯಾಗಿ ಜಾಲಾಡಿಸಿದಾಗ ಇನ್ನು ಅನೇಕ ಕಡೆ ಈ ಥರ ತಪ್ಪು ತಪ್ಪಾಗಿ ಮುದ್ರಿಸಿದ್ದರು! ಪಠ್ಯ ಪುಸ್ತಕವೇ ಹೀಗಿದ್ದರೆ ಅದನ್ನು ಓದಿ ಕಲಿಯುವ ಮಕ್ಕಳ ಗತಿ? ಶಾಲೆಯಲ್ಲಾದರೂ ತಿದ್ದುತ್ತಾರೆಯೇ? ಗೊತ್ತಿಲ್ಲ! ನನ್ನ ಮಗಳ ವಿದ್ಯಾಭ್ಯಾಸದ ಬಗ್ಗೆ ನನಗೆ ನಿಜಕ್ಕೂ ಚಿಂತೆ ಶುರುವಾಗಿದೆ!!