Tuesday, May 1, 2007

ಕನ್ನಡ ಎಲ್ಲಿದೆ... ಕನ್ನಡ ಎಲ್ಲಿದೆ?

"ಸೀ ಯಾ, ನೋ ಡಾ... ಕಮಿಂಗ್ ಡಾ.... " ಇದೇ ನಾವಾಡುವ ನುಡಿ! ಇದೇ ಸ್ವಾಮಿ ನಮ್ಮ ಗಂಧದ ಗುಡಿಯ ಪಾಡು! ಇಂಗ್ಲೀಷು ನಮ್ಮನ್ನ ಯಾವ ಪರಿ ಆಳ್ತಾ ಇದೆಯೋ ನೋಡಿ. ನಮ್ಮ ಪಕ್ಕದಲ್ಲೇ ಜನರನ್ನು ನೋಡ್ತಾ ಇರ್ತೀವಿ, ತಮ್ಮ ಮಕ್ಕಳ ಜೊತೆ, ಇಂಗ್ಲಿಷಲ್ಲೇ ಅವರ ಸಂಭಾಷಣೆ. ಮೊನ್ನೆ ಒಬ್ಬ ತಾಯಿ ಮಗನಿಗೆ ಕರೀತಾ ಇದ್ದ್ಲು "ಕಮ್ ಫಾಸ್ಟ್". ಎಂಥ ವಿಪರ್ಯಾಸ ನೋಡಿ. ಮಾತೃ ಭಾಷೆ ಅನ್ನೋದಕ್ಕೆ ಅರ್ಥವೇ ಇಲ್ಲದಂತಾಗಿದೆ! ಕನ್ನಡದಲ್ಲಿ "ಬೇಗ ಬಾ ಮಗು" ಅಂತ ಕರದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವೆ? ನಾನು ಇಂಗ್ಲಿಷ್ ಭಾಷೆಯನ್ನು ವಿರೋಧಿಸ್ತಾ ಇಲ್ಲ; ಇಂಗ್ಲಿಷ್ ಮಾತಾಡೋರನ್ನೂ ಅಲ್ಲ. ನಾನು ಹೇಳ್ತಾ ಇರೋದು ಇಂಗ್ಲಿಷ್ ಮಾತಾಡೊ ಸಂದರ್ಭದ ಬಗ್ಗೆ. ನನ್ನ ಒಬ್ನು ಗೆಳೆಯ ಇದ್ದಾನೆ. ಅವ್ನು ಮತ್ತು ಅವನ ಹೆಂಡತಿ ಇಬ್ಬರ ಸಂಭಾಷಣೆ ಯಾವಾಗ್ಲೂ ಇಂಗ್ಲಿಷಲ್ಲೇ! ಮಜಾ ಅಂದ್ರೆ ಅವರಿಬ್ಬರ ಮಾತೃ ಬಾಷೆನೂ ಕನ್ನಡವೇ! ಇಂಥ ಎಷ್ಟೋ ಜನ ಇದ್ದಾರೆ. ಹಾಗೆ ಮಾತಾಡೊದ್ರಲ್ಲಿ ಅವರಿಗೇನೊ ಒಂಥರ ಖುಷಿ. ತಾವು ಶ್ರೇಷ್ಠರು (!) ಅನ್ನುವ ಸಮಾಧಾನ.
ಇಂಗ್ಲಿಷ್ ಬಗೆಗಿನ ಈ ವ್ಯಾಮೋಹ ಇವತ್ತಿನದಲ್ಲ. ಇದು ಬ್ರಿಟಿಷರು ಇಲ್ಲಿ ಬಂದು ತಳ ಊರಿದಾಗಿನಿಂದ ಇದೆ. ಅವರು ಹೋದರು, ಆದರೆ ಇಂಗ್ಲಿಷು ಮಾತ್ರ ಇಲ್ಲಿ ಬೇರು ಬಿಟ್ಟಿತು. ಅದನ್ನು ಮಾತಾಡೊದು ಖಂಡಿತವಾಗಿಯು ತಪ್ಪಲ್ಲ. ಅದು ಅಂತರ್ ರಾಷ್ಟ್ರೀಯ ಭಾಷೆ. ಆದರೆ ಹೆಂಡತಿ, ಮಕ್ಕಳ ಜೊತೆನೂ ಇಂಗ್ಲಿಷೇ ಆಗಬೇಕೆ? ಚೊಕ್ಕವಾಗಿ ಕನ್ನಡದಲ್ಲೇ ಮಾತಾಡಬಾರದೆ? ನಾ ಯಾಕೆ "ಕನ್ನಡಿಗರನ್ನ" ಇಲ್ಲಿ ಎತ್ತಿ ತೋರಸ್ತಾ ಇದಿನಿ ಅಂದ್ರೆ; ಕನ್ನಡಿಗರಲ್ಲೆ ಅಭಿಮಾನ ಶೂನ್ಯತೆ ಜಾಸ್ತಿ ಅನ್ನೊದು ನನ್ನ ಅಭಿಪ್ರಾಯ (ಈ ಅಭಿಪ್ರಾಯ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ!) ನಮ್ಮ ಕನ್ನಡ ಇಷ್ಟು ಕುಲೂಷಿತವಾಗಿದೆ ಅಂದ್ರೆ. ಅದಕ್ಕೊಂದು ಉದಾಹರಣೆಯಾಗಿ ಒಂದು ಘಟಣೆ ನಡೆಯಿತು. ನಮ್ಮ ಕಛೇರಿಗೆ ಸ್ಪೇನದಿಂದ ಒಬ್ಬ ಸಹೋದ್ಯೋಗಿ ಬಂದಿದ್ದ. ಅವನನ್ನು ಒಂದು ಕಡೆ ಊಟಕ್ಕೆ ಕರೆದೊಯ್ಯುತ್ತಿದ್ದೆವು. ಎಫ್ ಎಮ್ ರೇಡಿಯೋದಲ್ಲಿ ಒಬ್ಬಳು ತನ್ನ ಸುಮಧುರವಾದ ಕಂಠದಲ್ಲಿ ಅದು ಕನ್ನಡದಲ್ಲಿ (?!) ಎನೋ ಕಥೆ ಶುರು ಮಾಡಿದ್ಲು. ನಿಮಗೆ ಗೊತ್ತಲ್ಲ ಎಫ್ ಎಮ್ ನ ಕನ್ನಡದಲ್ಲಿ ಇಂಗ್ಲಿಷ್ ಶಬ್ಧಗಳೇ ಜಾಸ್ತಿ. ನಮ್ಮ ಸ್ಪೇನ್ ಗೆಳೆಯ ಹೇಳಿದ "ನಿಮ್ಮ ಭಾಷೆ ಹೆಚ್ಚು ಕಡಿಮೆ ಇಂಗ್ಲಿಷ್ ಇದ್ದ ಹಾಗೆ ಇದೆಯಲ್ಲ!" ನಮ್ಮೆಲ್ಲರ ಮುಖ ಇಂಗು ತಿಂದ ಮಂಗನಂತಾಗಿತ್ತು. ಬೇರೆ ದೇಶದವರನ್ನು ಬಿಡಿ, ನಮ್ಮ ಸಹೋದ್ಯೋಗಿಗಳಲ್ಲೇ ಕೆಲವು ಜನ ತಮಿಳರು, ಕೆರಳದವರು ಇದ್ದಾರೆ. ಅವರಿಗೆಲ್ಲ ಕನ್ನಡ ಕಲಿಸುವ ವ್ಯರ್ಥ ಸಾಹಸ ನಾನು ಆಗಾಗ ಮಾಡ್ತಾ ಇರ್ತೀನಿ (ಅವರಾಗೆ ಕನ್ನಡ ಕಲಿಯುವ ಗೋಜಿಗೆ ಅವರೆಂದೂ ಹೋಗೊದಿಲ್ಲ ಬಿಡಿ. ನಾವೇ ಅವರ ಭಾಷೆಯಲ್ಲಿ ನಿಚ್ಛಳವಾಗಿ ಮಾತಾಡಸ್ತಿವಲ್ಲ!) ಅದರಲ್ಲಿ ಒಬ್ಬ "ಕನ್ನಡ ತುಂಬಾ ಸುಲಭ, ನನಗೆ ಕೆಲವು ಶಬ್ಧಗಳು ಗೊತ್ತು ಅಂದ! ನನಗೋ ಖುಷಿ. ಹೇಳಪ್ಪ ಏನೇನು ಗೊತ್ತು ಅಂದೆ. ಆತ ಹೇಳಿದ "ಎಂಜಾಯ್ ಮಾಡಿ!..... ಲಂಚ್ ಆಯ್ತಾ... " ಇಂಥವೆ ಕೆಲವು ಅಣಿ ಮುತ್ತುಗಳು. ಅಲ್ವೆ ಮತ್ತೆ? ಕನ್ನಡದಷ್ಟು ಸುಲಭದ ಭಾಷೆ ಬೇರೆಲ್ಲಾದರೂ ಉಂಟೆ?! ಹೀಗೆ ಮುಂದುವರಿದರೆ ಇನ್ನು ಕೆಲವು ವರ್ಷಗಳಲ್ಲಿ ಕನ್ನಡದ ಅಸ್ತಿತ್ವವೆ ಇಲ್ಲವಾಗುತ್ತೇನೋ ಅನ್ನೋ ಭಯ ಶುರುವಾಗಿದೆ.ಬನ್ನಿ ನಮ್ಮ ಭಾಷೆಯನ್ನ ಉಳಿಸಿಕೊಳ್ಳೋಣ.

No comments:

Post a Comment