Tuesday, April 7, 2009

ನನ್ನ ಮನದಂಗಳದಲಿ ಸಾಹಿತ್ಯದ ಬೀಜ ಬಿತ್ತಿದವರು...

ಒಂದು ಪ್ರಶ್ನೆ ಯಾವಾಗಲೂ ದಿಗಿಲು ಹುಟ್ಟಿಸುತ್ತದೆ! ಯಾರಾದರೂ ಹೊಸಬರು ನಿಮ್ಮ ಊರು ಯಾವ್ದು? ಅಂತ ಕೇಳಿದಾಗ! ಯಾಕಂದ್ರೆ, ನಮ್ಮ ಬೇರುಗಳು ಇರೋದು ಕುರ್ತಕೋಟಿಯಲ್ಲಿ. ನಾನು ಹುಟ್ಟಿದ್ದು ಗದಗದಲ್ಲಿ. ಬೆಳೆದಿದ್ದು ಲಕ್ಷ್ಮೇಶ್ವರದಲ್ಲಿ. ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದು ಧಾರವಾಡ ಹಾಗೂ ಬಾಗಲಕೋಟೆಯಲ್ಲಿ. ಸಧ್ಯದ ವಾಸ್ತವ್ಯ ಬೆಂಗಳೂರಲ್ಲಿ! ಹೀಗೆ, ನನ್ನದು ಯಾವ ಊರು ಅನ್ನೋ ದ್ವಂದ್ವ ನನ್ನದು, ಇರಲಿ.

ನಾನು ಯಾರಿಗಾದರೂ, ನನ್ನ ಕುರ್ತಕೋಟಿ ಬೇರುಗಳ ಬಗ್ಗೆ ಪ್ರಸ್ತಾಪ ಮಾಡಿದ ಕೂಡಲೆ, ಒಂದು ಪ್ರಶ್ನೆಯನ್ನು ನಿರೀಕ್ಷಿಸುತ್ತೇನೆ "ಅರೇ, ಕೀರ್ತಿನಾಥ ಕುರ್ತಕೋಟಿ ಅವರು ನಿನಗೆ ಸಂಬಂಧಾನಾ?" ಈ ಪ್ರಶ್ನೆ ನನಗೆ ಯಾವಾಗಲೂ ಖುಷಿ ಕೊಡುತ್ತೆ. ಹೌದು, ಅವರು ನನ್ನ ಸ್ವಂತ ದೊಡ್ಡಪ್ಪ! ಅಥವ ಅವರ ಖಾಸ್ ತಮ್ಮನ (ಶಶಿಕಾಂತ ಕುರ್ತಕೋಟಿ) ಮಗನಾಗಿ ಹುಟ್ಟಿದ್ದು ನನ್ನ ಅದೃಷ್ಟ. ಅವರ ಬಗ್ಗೆ ವಿವರವಾಗಿ ಬರೆಯುವಷ್ಟು ಪ್ರತಿಭೆ ಅಥವ ತಾಕತ್ತು ಎರಡೂ ನನ್ನಲ್ಲಿ ಇಲ್ಲ ಬಿಡಿ. ಅವರು ಕನ್ನಡದ ಅತೀ ಶ್ರೇಷ್ಠ ವಿಮರ್ಶಕರಲ್ಲೊಬ್ಬರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ನಾನು ಅವರ ಜೊತೆ ಕಳೆದ ಕೆಲವು ಅಮೂಲ್ಯ ಕ್ಷಣಗಳ ಬಗ್ಗೆ ಬರೆಯಲು ನನಗೆ ಖುಷಿ. ನಾವು ಧಾರವಾಡದಲ್ಲಿ ಇದ್ದಾಗ, ದೊಡ್ಡಪ್ಪನ ಮನೆಗೆ ಆಗಾಗ ಹೋಗುತ್ತಿದ್ದೆ. ದೊಡ್ಡಪ್ಪನನ್ನು ಏಕವಚನದಲ್ಲಿ ಕರಿಯುತ್ತಿದೆ ಅನ್ನೋದು ನನಗೆ ಒಂಥರ ಪ್ರತಿಷ್ಠೆಯ ಸಂಗತಿ!. ನಾನು ಹೋದಾಗಲೆಲ್ಲ ಅವರು ಏನೋ ಒಂದು ಬರೀತಾ ಕೂತಿರೋರು ಅಥವ ಯಾರೋ ಸಾಹಿತ್ಯಾಸಕ್ತರ ಜೊತೆ ಹರಟೆ ಹೊಡಿತಾ ಕೂತಿರೋರು. ನನಗೆ ಅವರು ಒಬ್ಬರೇ ಸಿಗುವುದು ಅಪರೂಪ, ಅದರೆ ಸಿಕ್ಕರೇ ನನ್ನ ಅದೃಷ್ಟ. "ಏನೋ ಬರಿಲಿಖತ್ತಿಯಲ್ಲಪ್ಪಾ" ಅಂತ ಶುರು ಮಾಡುತ್ತಿದ್ದೆ (ಹಾಗೆ ಕೇಳುವಷ್ಟು ಸಲಗೆ ಅವರ ಮೇಲೆ ನನಗಿತ್ತು). ನಾನು ಅಷ್ಟು ಕೇಳುತ್ತಲೆ ಬಾಯಲ್ಲಿ ಸದಾ ಇರುವ ತಾಂಬೂಲವನ್ನು ಉಗಿದು ಬರುತ್ತಿದ್ದರು "ಯಾಕ್ಲೇ ಭಾಳ ದಿವ್ಸದ ಮ್ಯಾಲೆ ಬಂದ್ಯಲ್ಲ" ಅಂತ ಅಕ್ಕರೆಯಿಂದ ಕೇಳುತ್ತಿದ್ದರು. ಅಲ್ಲಿಗೆ ನಮ್ಮ ಸಂಭಾಷಣೆ ಶುರು! ಅವರಿಗೆ ಹರಟೆ ಪ್ರಿಯ ಅನ್ನುವ ಅವರ ದುರ್ಬಲತೆಯನ್ನು (?) ನಾನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದೆ. ವಿಧ ವಿಧವಾದ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ರಾಜಕೀಯದಿಂದ ಹಿಡಿದು ಕುಮಾರವ್ಯಾಸನ ವರೆಗೂ. ಅವರು ನಿಜಕ್ಕು ಒಬ್ಬ ಓಡಾಡುವ ಅಥವ ಮಾತನಾಡುವ ನಿಘಂಟು ಅಂದ್ರೆ ತಪ್ಪಾಗಲಾರದು. ಅವರು ಒಮ್ಮೆ ಹೇಳಿದ್ದು ನೆನಪಿದೆ. ಕುಮಾರವ್ಯಾಸ (ಗದುಗಿನ ನಾರಾಣಪ್ಪ) ನಮ್ಮ, ಅಂದರೆ ಕುರ್ತಕೋಟಿ ಮನೆತನದವನಂತೆ! ನನಗೆ ನಿಜಕ್ಕೂ ಹೆಮ್ಮೆಯ ವಿಷಯ. ಅದಕ್ಕೆ ಇರಬೇಕು ನನ್ನ ದೊಡ್ಡಪ್ಪನ ಬಾಯಲ್ಲಿ ಕುಮಾರವ್ಯಾಸ ಭಾರತ ಪೂರ್ತಿಯಗಿ ನಲಿದಾಡುತ್ತಿತ್ತು. ನಾನು ಎಷ್ಟೋ ಸಾರಿ ಅವರ ಜೊತೆ ಅವರ ಪ್ರವಚನಕ್ಕೆ ಹೋಗಿದ್ದಿದೆ. ಅಂದು ನನಗೆ ನಿಜಕ್ಕೂ ರಸದೌತಣ! ನಾನು ಆಗಾಗ ಮಯೂರ ಮತ್ತು ಕಸ್ತೂರಿಯಲ್ಲಿ ಕೆಲವು ಚಿಕ್ಕ ಪುಟ್ಟ ಲೇಖನ ಅಥವ ಚುಟುಕು ಬರೆಯುತ್ತಿದ್ದೆ. ಅವು ಪ್ರಕಟವಾದಾಗ ಅದನ್ನೊಯ್ದು ದೊಡ್ಡಪ್ಪನ ಮುಂದೆ ಹಿಡಿಯುತ್ತಿದ್ದೆ. ನನ್ನದು ಹುಂಬು ಧೈರ್ಯ! ಅಂಥ ದೊಡ್ಡ ವಿಮರ್ಶಕನೆದುರು ನನ್ನ ಪುಟಗೋಸಿ ಲೇಖನ ತೋರಿಸುವುದೆಂದರೆ ಹುಂಬ ಧೈರ್ಯವಲ್ಲದೆ ಮತ್ತೇನು?. ಒಂದು ಸಾರಿ ನಾನು ಉಪಯೋಗಿಸಿದ ಭಾಷೆ ಬಗ್ಗೆ ಸ್ವಲ್ಪ ತಕರಾರು ತಗೇದ ದೊಡ್ಡಪ್ಪ ನನ್ನನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಸ್ವಲ್ಪ ಮಟ್ಟಿಗೆ ಅದನ್ನು ತಿದ್ದಿಕೊಂಡು ಇನ್ನೊಂದು ಲೇಖನ ಬರೆದು ಅವರಿಂದ ಶಭಾಸ್ ಗಿರಿ ತೊಗೊಂಡ ಮೇಲೆಯೇ ನನಗೆ ಸಮಾಧಾನವಾಗಿದ್ದು! ನಂತರ ದೊಡ್ಡಪ್ಪ ವಿಧಿವಶವಾದರೂ, ಹೀಗೆ ಅವರ ಜೊತೆ ಕಳೆದ ಹಲವಾರು ನೆನಪುಗಳು ನನ್ನಲ್ಲಿ ಇನ್ನೂ ಜೀವಂತವಾಗಿವೆ...

ಇನ್ನು ನನ್ನ ಅಮ್ಮನ (ಪರಿಮಳ ಕುರ್ತಕೋಟಿ) ಬಗ್ಗೆ ಒಂದು ದೊಡ್ಡ ಪುಸ್ತಕ ಬರೆಯುವಷ್ಟು ನನ್ನ ಹತ್ರ ಸಾಮಗ್ರಿ ಇದೆ, ಒಂದು ದಿನ ಬರೆದೇನು ಎನ್ನುವ ಆತ್ಮ ವಿಶ್ವಾಸವು ಇದೆ. ನಾನ್ನಲ್ಲಿ ತುಂಬ ಪ್ರಭಾವವನ್ನು ಬೀರಿದ ಮೊದಲ ವ್ಯಕ್ತಿ ನನ್ನಮ್ಮ. ನನಗೆ ತಿಳುವಳಿಕೆ ಬಂದ ಮೇಲೆ ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಅವಳದು ದೊಡ್ಡ ಸ್ಥಾನ. ಅವಳು ಪ್ರಭುದ್ಧ ಲೇಖಕಿ. ಅವಳು ಬರೆದ ಎಷ್ಟೋ ಲೇಖನಗಳು ಹಾಗು ಸಣ್ಣ ಕತೆಗಳು ನಾಡಿನ ಹಲವಾರು ಪ್ರಸಿದ್ಧ ಪತ್ರಿಕೆಗಳಾದ ತರಂಗ, ತುಷಾರ, ಸುಧಾ, ಮಯೂರ, ವನಿತಾ, ಮತ್ತು ಪ್ರಜಾವಾಣಿಯಲ್ಲಿ ಪ್ರಕಟವಾಗಿವೆ. ಅವಳ ಸಣ್ಣ ಕತೆಗಳ ಸಂಗ್ರಹವಾದ "ತುಳಸಿ" ಪುಸ್ತಕವೂ ಬಿಡುಗಡೆಯಾಗಿದೆ. ಮೊದಲಿನಿಂದಲೂ ಅಮ್ಮ ನಾಸ್ತಿಕಳು. ಹಾಗು ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಅವಳೆಂದೂ ಸಹಿಸುತ್ತಿರಲಿಲ್ಲ. ಇವೇ ಅವಳ ಕಥಾ ವಸ್ತುಗಳು ಕೂಡ ಆಗಿರುತ್ತಿದ್ದವು. ಆಗ ನಮ್ಮ ತಂದೆಗೆ ಲಕ್ಷ್ಮೇಶ್ವರದಲ್ಲಿ ಉದ್ಯೋಗ. ನನ್ನ ತಂದೆಯು ಅಮ್ಮನಿಗೆ ತುಂಬ ಪ್ರೋತ್ಸಾಹ ನೀಡುತ್ತಿದ್ದರು. ಲಕ್ಷ್ಮೇಶ್ವರ ಒಂದು ಐತಿಹಾಸಿಕ ಸ್ಥಳ (ಅದರ ಬಗ್ಗೆ ಮತ್ತೊಮ್ಮೆ ಬರೆದೇನು). ಆ ಊರಲ್ಲಿ ನನಗೆ ತಿಳಿದ ಮಟ್ಟಿಗೆ ಪ್ರಥಮ ಮಹಿಳಾ ಸಂಘವನ್ನು ನನ್ನಮ್ಮನೇ ಶುರು ಮಾಡಿದ್ದು. ಅಮ್ಮನ ಎಷ್ಟೋ ಬರಹಗಳು ದೊಡ್ಡ ಸಂಚಲನವನ್ನೇ ಉಂಟು ಮಾಡಿದ್ದವು. ನನಗೆ ಚೆನ್ನಾಗಿ ನೆನಪಿದೆ, ಒಂದು ಸಲ ಅವಳು ಬರೆದ ಲೇಖನ ಎಷ್ಟು ವಾರಗಳ ವರೆಗೆ ಚರ್ಚೆಯಾಯ್ತೆಂದರೆ, ಕೊನೆಗೆ ಸಂಪಾದಕರು ವಿನಂತಿ ಮಾಡಿಕೊಂಡು ಆ ಚರ್ಚೆಗೆ ಮಂಗಳ ಹಾಡಬೇಕಾಯಿತು! ಇಂಥ ಉದಾಹರಣೆಗಳು ಹಲವಾರು. ಈಗಿದ್ದಿದ್ದರೆ ಅವಳ ಎಷ್ಟು ಪುಸ್ತಕಗಳು ಪ್ರಕಟವಾಗಿರುತ್ತಿದ್ದವೋ ಏನೊ. ಅನಾರೋಗ್ಯದ ಕಾರಣ ಅವಳಿಗೆ ತನ್ನನ್ನು ತಾನು ಪೂರ್ತಿಯಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲಾಗಲಿಲ್ಲ. ತನ್ನ ೪೯ ನೆ ವಯಸ್ಸಿಗೆ ನಮ್ಮನ್ನೆಲ್ಲ ಬಿಟ್ಟು ನಡೆದುಬಿಟ್ಟಳು :( ...

ಅದೇ ಸಮಯದಲ್ಲಿ ನನ್ನಲ್ಲಿ ಪ್ರಭಾವ ಬೀರಿದ ಇನ್ನೊಬ್ಬ ವ್ಯಕ್ತಿಯೆಂದರೆ ನನ್ನ ಸೋದರ ಮಾವ. ಆತ ನನ್ನಮ್ಮನ ಖಾಸ್ ತಮ್ಮ. ಹೆಸರು ರಾಘವೇಂದ್ರ ಹುಯಿಲಗೋಳ. ಅತೀ ಚಿಕ್ಕ ವಯಸ್ಸಿನಲ್ಲೆ ೩೦ ರೇಡಿಯೊ ನಾಟಕಗಳನ್ನು ಆತ ಬರೆದಿದ್ದ. ಎಲ್ಲವೂ ಹಾಸ್ಯಮಯವೇ. ನನ್ನಲ್ಲಿ ಹಾಸ್ಯ ರಸವನ್ನು ತುಂಬಿದಾತ. ಅವನ ಜೊತೆ ಮಾತನಾಡುವುದೆ ಒಂದು ಮಜ! ಅವನ ಮಾತಿನಲ್ಲಿ ಅಷ್ಟು ಹಾಸ್ಯ ತುಂಬಿರುತ್ತಿತ್ತು.

ಇವರೆಲ್ಲರ ಪ್ರಭಾವದಿಂದಲೋ ಏನೊ ನಾನೂ ಕತೆ, ಕಾದಂಬರಿ ಓದಲು ಶುರು ಮಾಡಿದೆ. ನನಗೆ ತುಂಬ ಪ್ರೀಯವಾದ ಪುಸ್ತಕವೆಂದರೆ ಬೀಚಿ ಯವರ ಭಯಾಗ್ರಫಿ. ಓದುವುದರ ಜೊತೆಗೆ ಬರೆಯುವ ಗೀಳು ಹತ್ತಿತು. ಮೊದಮೊದಲು ನನ್ನ ಬರಹಗಳು ಸಣ್ಣ ಚುಟುಕುಗಳಿಗೆ ಸೀಮೀತವಾಗಿದ್ದವು. ಆಗ ಇನ್ನು ಹೊಸತು ನನ್ನದೊಂದು ನಗೆ ಹನಿ ಮಯೂರದಲ್ಲಿ ಪ್ರಕಟವಾಗಿತ್ತು. ನನಗೋ ಸಂಭ್ರಮ. ಗೆಳೆಯರಿಗೆಲ್ಲ ತೋರಿಸಿದೆ. ಬಹಳಷ್ಟು ಹುಡುಗರು ಮೆಚ್ಚುತ್ತಿದ್ದರು ಆದರೂ ಸಹಿಸಲಾರದವರೂ ಇರ್ತಾರಲ್ಲ? ಒಬ್ಬ ಕುಹಕವಾಡಿದ "ಕುರ್ತಕೋಟಿ ಅಂತ ನಿನ್ನ ಅಡ್ಡಹೆಸರು ನೋಡಿ ಪ್ರಕಟ ಮಾಡ್ತಾರ, ಇಲ್ಲ ಅಂದ್ರ ಕಷ್ಟ" ಅಂದ! ನನಗೆ ಇರಬಹುದೇ ಅಂತ ಸಂಶಯವಾಯ್ತು. ಕೂಡಲೇ ಮತ್ತೋಂದು ಲೇಖನ ರೆಡಿ ಮಾಡ್ದೆ. ಈ ಸಲ "ಪರಶುರಾಮ" ಅಂತ ಕಾವ್ಯ ನಾಮ ಇಟ್ಕೋಂಡು ಕಳಿಸಿದೆ. ಅದೂ ಪ್ರಕಟ ಆಯ್ತು. ಅದನ್ನು ನನ್ನ ಆ ಗೆಳೆಯನಿಗೆ ತೋರಿಸಲು ಮರೆಯಲಿಲ್ಲ. ಆತನ ಮುಖ ನೋಡುವಂಗಿತ್ತು. ಆದರೆ ಒಂದು ತಮಾಶೆಯಾಗಿತ್ತು. ನನ್ನ ಲೇಖನದ ಗೌರವಧನ ಮನಿ ಒರ್ಡರ್ ಮೂಲಕ ಬಂದಿತ್ತು. ನಾನಾಗ ಮನೆಲಿರಲಿಲ್ಲ. ಪೋಸ್ಟ್ ಮನ್, ನನ್ನ ತಂದೆಗೆ, ಪರಶುರಾಮ ಅನ್ನೋರು ಇದಾರಾ ಅಂತ ಕೇಳಿದ್ನಂತೆ. ಅಪ್ಪನಿಗೆ ತನ್ನ ಮಗ ಪರಶುರಾಮ ಆಗಿರೊ ಸಂಗತಿ ಗೊತ್ತಿರಲಿಲ್ಲವಾದರಿಂದ, ಆ ಹೆಸರಿನವರು ತಮ್ಮ ಮನೇಲಿ ಯಾರೂ ಇಲ್ಲ ಅಂತ ಅವನ್ನ ವಾಪಸ್ಸು ಕಳಿಸಿದ್ರಂತೆ! ಆಮೇಲೆ ಆ ಪೋಸ್ಟ್ ಮನ್ ಗೆ ತಿಳಿಸಿ ಹೇಳೊದ್ರಲ್ಲಿ ನನಗೆ ಸಾಕು ಬೇಕಾಗಿ ಹೋಯಿತು. ಆಮೇಲೆ ಎಂದೂ ನಾನು ಕಾವ್ಯನಾಮ ಇಟ್ಟುಕೊಳ್ಳುವ ಗೋಜಿಗೆ ಹೊಗಲಿಲ್ಲ ಬಿಡಿ! ಆಮೇಲೆ ಸಣ್ಣ ಲೇಖನ ಗಳನ್ನು ಬರೆಯಲು ಶುರು ಮಾಡಿದೆ. ಆದರೂ ನನಗೆ ತುಂಬ ಪ್ರಿಯವಾದ ಪ್ರಕಾರ ಎಂದ್ರೆ "ಹಾಸ್ಯ" ಸಧ್ಯಕ್ಕೆ ಹಾಸ್ಯ ಬರಹಗಳ ಕಡೆಗೆ ಒಲವು ಜಾಸ್ತಿ. ಈಗೆಲ್ಲ ನನ್ನ ಲೇಖನಗಳನ್ನ ಅಂತರ್ ಜಾಲದಲ್ಲೇ ಪ್ರಾಕಟಮಾಡ್ತೀನಿ. ಯಾಕಂದ್ರೆ ಇಲ್ಲಿ ನನ್ನ ಲೇಖನಗಳನ್ನು ಯಾರೂ ಕಸದಬುಟ್ಟಿಗೆ ಹಾಕುವುದಿಲ್ಲವೆಂಬ ವಿಶ್ವಾಸ :). ನಂತರ ವೃತ್ತಿಯಲ್ಲಿ ತೊಡಗಿಸಿಕೊಂಡ ಮೇಲೆ, ಸ್ವಲ್ಪ ಮಟ್ಟಿಗೆ ನನ್ನ ಸಾಹಿತ್ಯ ಕೃಷಿ ನಿಂತು ಹೋಗಿತ್ತು. ಈ ನಡುವೆ ನನ್ನ ಬಾಸ್ (ಕೃಷ್ಣ ರಾಜ್) ನನಗೆ ತುಂಬಾ ಪ್ರೋತ್ಸಾಹಿಸಿ ಮತ್ತೆ ಬರೆಯುವಂತೆ ಪ್ರೇರೇಪಿಸುತ್ತಿದ್ದಾರೆ. ಅವರಿಗೆ ನನ್ನ ಚಿರಋಣಿ.

ಮುಂದೆ ಏನೇನೋ ಯೋಜನೆಗಳಿವೆ. ಅಮ್ಮನ ಅಪ್ರಕಟಿತ ಕಾದಂಬರಿ (ವಡ್ಡಾರಾಧನೆ) ಪ್ರಕಟಿಸಬೇಕು. ಅಮ್ಮನ ಕನಸಾದ ವೃಧ್ಧಾಶ್ರಮವೊಂದನ್ನು ನಡೆಸಬೇಕು. ಕುರ್ತಕೋಟಿ ವೆಬ್ ಸೈಟು, ಸಿಕ್ಕಾಪಟ್ಟೆ ಓದಬೇಕು ಮತ್ತು ಬರೀಬೇಕು, ಓಳ್ಳೆ ಸಿನಿಮಾವೊಂದು ನಿರ್ಮಿಸಬೇಕು... ಹೀಗೆ ಹಲವಾರು ಕನಸುಗಳು. ಎಲ್ಲವನ್ನೂ ಮಾಡುವ ಹಂಬಲವೇನೋ ಇದೆ, ಆದರೆ ಮಾಡೇ ತೀರುವೆನೆಂಬ ಛಲದ ಕೊರತೆ ಇದೆ ಏನೋ ಎನ್ನುವ ಸಂಶಯವೂ ಇದೆ. ನೋಡೋಣ ... ನಮಸ್ಕಾರ.

1 comment:

  1. Hi prasad!

    It is an amazing article (esp the first 3 lines regarding the roots) and of course your kavya naama. you are indeed a ಪರಶುರಾಮ.I feel the journey has begun. thumbs up to u.

    Chandan

    ReplyDelete