Sunday, September 16, 2012

ನಾವು ಕನ್ನಡಿಗರು...?

ಹೀಗೆ ಒಂದು ದಿನ ರವಿವಾರ, ಕುಟುಂಬ ಸಮೇತನಾಗಿ ಸಂಜೆ ಸಹಕಾರ ನಗರದಲ್ಲಿ ಸವಾರಿ ಹೊರಟಿದ್ದೆ. ಮಗಳಿಗೆ ಪಿಝಾ ಅಂಗಡಿ ಕಂಡೇ ಬಿಟ್ಟಿತು. ನಾವು ಅನಿವಾರ್ಯವಾಗಿ ಒಳಗೆ ಹೋಗಲೇಬೇಕಾಯ್ತು. ಅವಳ ನೆಪ ಮಾಡಿಕೋಂಡು ನಮಗೂ ಪೀಝಾ ಸವಿಯುವ ಸದವಕಾಶ! ಪೀಝಾ ಕೌಂಟರ್ ಮುಂದೆ ನಿಂತೆ. ಯುವಕನೊಬ್ಬ ಕಂಪ್ಯುಟರ್ ಮುಂದೆ ನಿಂತಿದ್ದ,

"May I take your order sir?" ಅಂದ.

ಬೆಂಗಳೂರಿನಲ್ಲಿ ಎಲ್ಲ ಅಂಗಡಿಗಳಲ್ಲು ಆಂಗ್ಲ ಭಾಷೆಯಲ್ಲಿಯೆ ಮಾತಾಡಿಸುತ್ತಾರೆ. ಈ ಊರಿನಲ್ಲಿ ಎಲ್ಲ ಭಾಷೆ ಮಾತಡುವ ಜನರಿರುವುದೇ ಅದಕ್ಕೆ ಕಾರಣವಿರಬಹುದು. ಆದರೆ ನಾನು ಕನ್ನಡಿಗ, ಅಂಗಡಿಯವನೂ ಕನ್ನಡಿಗನೇ. ಯಾಕೆಂದರೆ ಅವನು ತನ್ನ ಸಹೋದ್ಯೋಗಿಯ ಜೊತೆ ಕನ್ನಡದಲ್ಲೇ ಮಾತಾಡುತ್ತಿದ್ದ. ನಾನು ಕನ್ನಡದಲ್ಲೆ ಉತ್ತರಿಸಿದೆ. ಆದರೆ ಅವನು ಇಂಗ್ಲಿಷ್ ನಲ್ಲೆ ಮುಂದುವರಿಸಿದ. ನಾನೂ ಪಟ್ಟು ಬಿಡದ ತ್ರಿವಿಕ್ರಮನಂತೆ ಕನ್ನಡದಲ್ಲೇ ವ್ಯವಹರಿಸಿದೆ. ಆದರೆ ಕೊನೆಯವರೆಗೂ ಅವನೇನು ಕನ್ನಡದಲ್ಲಿ ಮಾತಾಡಲಿಲ್ಲ. ನನಗೆ ಬೇಜಾರಾಯ್ತು. ಪೀಝಾ ತಿಂದಾಯ್ತು. ಕೊನೆಗೆ ಮ್ಯಾನೇಜರ್ ಬಂದ. ಅವನಿಗೆ ನನ್ನ ಗೋಳು ಹೇಳಿಕೊಂಡೆ. ಆ ಪುಣ್ಣ್ಯಾತ್ಮ ಯಾಕೋ ಕನ್ನಡದಲ್ಲಿ ಮಾತಾಡಿದ. ನಿಮ್ಮ ಅಭಿಪ್ರಾಯ ಬರೆಯಿರಿ ಅಂತ ಪುಸ್ತಕ ಕೊಟ್ಟು ಹೋದ. ನಾನು ಕನ್ನಡದಲ್ಲೇ ನನ್ನ ಅಭಿಪ್ರಾಯ ಹೀಗೆ ಬರೆದೆ

"ದಯವಿಟ್ಟು ಕನ್ನಡದಲ್ಲಿ ಮಾತನಾಡುವರ ಜೊತೆಗಾದರೂ ಕನ್ನಡದಲ್ಲಿಯೇ ವ್ಯವಹರಿಸಿ ಪುಣ್ಣ್ಯ ಕಟ್ಟಿಕೊಳ್ಳಿ!" ಮನಸ್ಸಿಗೆ ಸ್ವಲ್ಪ ಸಮಾಧಾನವಾದರೂ ಯಾಕೋ ಕಸಿವಿಸಿ.

ಅಂಗಡಿಯಿಂದ ಹೊರಗೆ ಬಂದೆವು. ಹೊರಗೆ ಬಂದಿದ್ದೆ ತಡ, ನನ್ನ ದುರಾದೃಷ್ಟಕ್ಕೆ ಅಲ್ಲೇ ಎದುರಿಗಿರುವ ಅಭರಣದ ಅಂಗಡಿ ನನ್ನ ಹೆಂಡತಿಯ ಕಣ್ಣಿಗೆ ಬೀಳಬೇಕೆ! ಏನೂ ಮಾತನಾಡಲು ಅವಕಾಶ ಕೊಡದೆ ಅವಳು ಅಭರಣದ ಅಂಗಡಿಗೆ ನುಗ್ಗಿಯಾಗಿತ್ತು. ನಾನು ಹಿಂಬಾಲಿಸಿದೆ! ಆದರೆ ಒಳಗೆ ಹೋಗುತ್ತಿದ್ದಂತೆಯೆ, ಅಂಗಡಿಯ ಮಾಲಿಕರು ಅಲ್ಲಿ ತೂಗು ಹಾಕಿದ್ದ ಫಲಕವನ್ನು ಓದಿ ನನ್ನ ಕಣ್ಣುಗಳರಳಿದವು! ಅದನ್ನೋದಿ ಪೀಝಾ ಅಂಗಡಿಯ ಅನುಭವವನ್ನು ಮರೆತೆ. ಆ ಫಲಕದಲ್ಲಿ ಹೀಗೆ ಬರೆದಿತ್ತು

"ನಾವು ಕನ್ನಡಿಗರು. ಕನ್ನಡದಲ್ಲೇ ವ್ಯವಹರಿಸಿ ಪರವಾಗಿಲ್ಲ!"

ನಾನು ಅಂಗಡಿಯ ಮಾಲೀಕರಿಗೆ ಅಭಿನಂದಿಸಿದೆ. ಅವರೂ ತಮ್ಮ ಗೋಳು ಹೇಳಿಕೊಂಡರು. ತಾವು ಕನ್ನಡದಲ್ಲಿ ಮಾತಾಡಿದರೂ ಬೆಂಗಳೂರಿನ ಕನ್ನಡಿಗರು (?) ಇಂಗ್ಲಿಷಿನಲ್ಲೆ ವ್ಯವಹರಿಸುತ್ತಾರಂತೆ. ಅದಕ್ಕೆ ಅವರು ಹೀಗೆ ಬರೆದು ಹಾಕಿಸಿದ್ದಾರಂತೆ! ಈ ಉಪಾಯ ಅದ್ಭುತ ವಾಗಿದೆ. ಕನಿಷ್ಟ ಪಕ್ಷ ಕನ್ನಡ ಮಾತನಾಡಲು ಬಯಸುವರಾದರೂ ಈ ಫಲಕ ನೋಡಿ ಕನ್ನಡದಲ್ಲೇ ಮಾತನಾಡುತಾರಲ್ಲವೆ? ಬೆಂಗಳೂರಿನ ಎಲ್ಲ ಅಂಗಡಿಗಳಲ್ಲಿ ಹೀಗೇ ಫಲಕ ಹಾಕಿಸಿದರೆ ಎಷ್ಟು ಚೆನ್ನಾಗಿರುತ್ತಲ್ಲವೇ? ಆದರೂ ಇಂತದೊಂದು ಪರಿಸ್ಥಿತಿ ಬೆಂಗಳೂರಿನಲ್ಲಿ ಸೃಷ್ಠಿಯಾಗಿರುವುದಕ್ಕೆ ಬೇಜಾರಾಯ್ತು.

6 comments:

  1. ಖರೆ ಅದ ನಿಮ್ಮ ಮಾತು ಈ ಊರಮಂದಿಗೆ ಇಂಗ್ಲೀಷು ಅಗದಿ ಸರಾಸ ಆಗೇದ..
    ಬಿಎಮ್ ಟೀಸಿ ಕಂಡಕ್ಟರ್ ಹಿಡದು ಹಾಲು ಮಾರಾವ್ರು ಮೊದ್ಲು ಇಂಗ್ಲೀಷುಬಳಸ್ತಾರ...

    ReplyDelete
  2. Taayi bhaasha mahatva annondu taaynadu bittavrige gottu :)

    ReplyDelete
  3. ಯಸ್ ಸರ್. ಯು ಆರ್ ರೈಟ್. ವುಯ್ ಶುಡ್ ಆಲ್ವೇಸ್ ಸ್ಪೀಕ್ ಇನ್ ಕನ್ನಡ

    ReplyDelete
  4. ನಿಜ ಗೆಳೆಯ,

    ಅದೇಕೆ ಬೆಂಗಳೂರಿನಲ್ಲಿ ತರಕಾರಿ ಮಾರುವವರೂ ಚಿಲ್ಲಿ, ಆನಿಯನ್, ಬೀನ್ಸ್ ಅಂತಾರೋ ಅಂತ ಸೋಜಿಗ ಪಟ್ಟಿದ್ದೆ. ಸರಿಯಾಗಿ ಝಾಡಿಸಿದ್ದೀರ.

    www.badari-poems.blogspot.com

    ReplyDelete
  5. ಈ ಫಲಕ ಸ್ವಾಗತಾರ್ಹ. ಆದರೆ ಇದರಿಂದ ಇನ್ನೊಂದು ಅಪಾಯವಿದೆ. ನಮ್ಮ "ಸಹೃದಯ" ಕನ್ನಡಿಗರು ಎಲ್ಲಿ ಕನ್ನಡ ಮಾತನಾಡಿದರೆ ತಮ್ಮ ಮರ್ಯಾದೆಗೆ ಕುಂದು ಬರಬಹುದೋ ಎಂಬ ಅಳುಕಿನಿಂದ ತಮ್ಮ ದಿನನಿತ್ಯದ " ಆಂಗ್ಲಡ ( ಹತ್ತು ಶಬ್ದಗಳಲ್ಲಿ ಒಂದು ಕನ್ನಡ ಮತ್ತು ಇತರವು ಆಂಗ್ಲ) ಬಿಟ್ಟು ಶುದ್ಧ ಆಂಗ್ಲ ವಾ ಇತರ ಬಾಷೆಗಳ ಪ್ರಯೋಗ ಮಾಡಬಹುದು. ಯಾಕೆಂದರೆ ಇಂದು ಬೆಂಗಳೂರಿನಲ್ಲಿ ಕನ್ನಡ ಭಾಷೆ ಬಳಸಿದರೆ ಅವರು ಕೊನೆಯ ದರ್ಜೆಯ ( ದ್ವಿತೀಯ , ತೃತೀಯ ಅಲ್ಲಾ ) ನಾಗರಿಕರೆಂದು ಪರಿಗಣಿಸಲ್ಪಡುತ್ತಾರೆ. ಜೈ ಭುವನೇಶ್ವರಿ..

    ReplyDelete
  6. ಈ ಬಗ್ಗೆ ಬನವಾಸಿ ಬಳಗದ ಅಂಗಡಿಯಲ್ಲಿ ಕನ್ನಡ ನುಡಿ ಅಂತ ಒಂದು ಕಿರು ಹೊತ್ತಿಗೆ ಬಂದಿತ್ತು.
    ಹೌದು ನಾವೂ ನೂ ಈ ಮಾಲ್ಗಳಿಗೆ ಹೋದಾಗ ಮೊದ್ಲು ಬಾರೋ ಮಾರಾಟಗಾರ ಹುಡುಗನನ್ನ
    ಕೇಳೋದೇ "ಕನ್ನಡ ಬರತ್ತಾ?" ಅಂತ.
    ಚೆನ್ನಾಗಿದೆ

    ReplyDelete