Monday, April 6, 2015

ಕೆಲಸಕೆ ಚಕ್ಕರ್… ಊಟಕೆ ಹಾಜರ್!

 
ನಿಶಾ ಳ ಸಂಗಡ ಹೋಗುತ್ತಿರುವಂತೆ, ಆಫೀಸಿನಲ್ಲಿ ಎಲ್ಲರ ಕಣ್ಣುಗಳು ಇವರನ್ನೇ ನೋಡುತ್ತಿದ್ದರೆ ಸುಜಯ್ ಗೆ ಒಳಗೊಳಗೇ  ಖುಷಿ. ಅದರೂ ಅದು ಹೇಗೋ ಅವನ ಮುಖದ ಮೇಲೆಯೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದನ್ನು ಗಮನಿಸಿದ ಅವಳ ಮುಖದಲ್ಲೊಂದು ತುಂಟ ಮುಗುಳ್ನಗು ಸುಳಿಯಿತು. ಇಬ್ಬರೂ ರಿಸೆಪ್ಶನ್ ದಾಟಿಕೊಂಡು ಹೋಗುತ್ತಿದ್ದಂತೆ, “ಸುಜಯ್… ಹೇ ಸುಜಯ್…” ಅಂತ ಕೂಗುತ್ತಿದ್ದ ಕೋಮಲ ದನಿಯೊಂದು ಇವರಿಬ್ಬರಿಗೂ ನಿಲ್ಲುವಂತೆ ಮಾಡಿತು. ಯಾರು ಅಂತ ಹಿಂತಿರುಗಿ ನೋಡಿದರೆ ಆ ಕೋಮಲ ದನಿ ಬೇರೆ ಯಾರದೂ ಅಲ್ಲ, ಪೃಥ್ವಿ ಅನ್ನುವ ಗಂಡಸಿನದು! 
 
…ಪ್ರಥ್ವಿ ಇವರ ಕಂಪನಿಯ ಮುಖ್ಯ ಸಂಯೋಜಕ. ಅಲ್ಲಿ ಟಿಶ್ಯೂ ಪೇಪರ್ ಗಳ ಖರೀದಿಯಿಂದ ಮೊದಲುಗೊಂಡು ಹೊರದೇಶದ ಗ್ರಾಹಕರು ಅಥವಾ ಕಂಪನಿಯ ಮುಖ್ಯಸ್ಥರು ಭೇಟಿ ನೀಡಿದರೆ ಅವರ ಉಪಚಾರ ನೋಡಿಕೊಳ್ಳುವ ಜವಾಬ್ದಾರಿಯವರೆಗೆ ಎಲ್ಲ ಕಾರುಭಾರು ಇವನದೇ. ಅವನ ದನಿ ಮಾತ್ರ ಹುಡುಗಿಯರ ತರಹವೆ ಇತ್ತು. ಅದರಲ್ಲಿ ಪಾಪ ಅವನ ತಪ್ಪಿರಲಿಲ್ಲ ಬಿಡಿ! ಆದರೂ ತುಂಬಾ ಜನರು ಇದರಿಂದ ಗಲಿಬಿಲಿಗೊಳ್ಳುತ್ತಿದ್ದರು. ಅದರಲ್ಲೂ ಹೆಸರೂ ಕೂಡ ಪ್ರಥ್ವಿ ಇದ್ದುದರಿಂದ, ಯಾರಾದರೂ ಹೊಸಬರ ಜೊತೆಗೆ “ಹಲೋ ಪ್ರಥ್ವಿ ಹಿಯರ್” ಅಂತ ವೈಯಾರದಿಂದ ಹೇಳಿದಾಗ ಆ ಹೊಸಬರು ಇವನು ಹುಡುಗಿ ಅಂತಲೇ ಭಾವಿಸಿ  “ಹಲೋ ಮ್ಯಾಡಂ…” ಅಂತ ಸಂಭಾಷಣೆ ಮುಂದುವರಿಸುತ್ತಿದ್ದರು. ಆಮೇಲೆ ಮುಖತಃ ಭೇಟಿಯಾದಾಗ, ಇವನು ಹುಡುಗಿ ಅಲ್ಲ ಅಂತ ಅರಿವಾಗಿ ಆಶ್ಚರ್ಯ ಪಡುತ್ತಿದ್ದರು! ಇನ್ನೂ ಕೆಲವರು ಆ ದನಿಯ ಕೇಳಿ ಸುಂದರ ಹೆಣ್ಣಿನ ಕಲ್ಪನೆ ಮಾಡಿಕೊಂಡು, ಅದು ಸುಳ್ಳಾದಾಗ ಅತೀವ ನಿರಾಸೆ ಹೊಂದುತ್ತಿದ್ದರು! ಈ ವಿಷಯವಾಗಿ ತುಂಬಾ ಜನ ಸಹೋದ್ಯೋಗಿಗಳು ಇವನ ಗೋಳು ಹೊಯ್ದುಕೊಳ್ಳುತ್ತಿದ್ದರು ಕೂಡ. ಆದರೆ ಅವನು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಈ ಜಗದ ಕೊಂಕುಗಳಿಗೆ ಕುಗ್ಗಿದರೆ ಬದುಕು ಸಾಧ್ಯವೇ?     
“ಹೇ ಸುಜಯ್, ಎರಡು ಜನ ಇಂಟರ್ವ್ಯೂಗೆ ಕಾಯ್ತಿದಾರೆ. ಯಾವಾಗ ಕಳಸ್ಲಿ?” ಪ್ರಥ್ವಿ ಕೇಳಿದ. ನಿಶಾ ಳ ಜೊತೆಗೆ ಸ್ವಲ್ಪ ಹೊತ್ತು ಆರಾಮವಾಗಿ ಕಳೆಯುವ ತನ್ನ ಯೋಜನೆಗೆ ಇಂಥದೊಂದು ಕಲ್ಲು ಬೀಳುವುದೆಂದು ಇವನು ನಿರೀಕ್ಷಿಸಿರಲಿಲ್ಲ. ಆದರೂ ಸಾವರಿಸಿಕೊಂಡು,
“ನಾನೀಗ ಊಟಕ್ಕೆ ಹೊರಟಿದ್ದೇನೆ. ಆಮೇಲೆ ಒಂದು ಬೇರೆ ಮೀಟಿಂಗ್ ಇದೆ. ೪ ಗಂಟೆಗೆ ಇಂಟರ್ವ್ಯೂ ಶೆಡ್ಯೂಲ್ ಮಾಡು” ಅಂತ ಹೇಳಿ ತಾನು ತುಂಬಾ ಗಡಿಬಿಡಿಯಲ್ಲಿರುವವನಂತೆ, ಅಲ್ಲಿಂದ ನಿರ್ಗಮಿಸುವ ಆತುರ ತೋರಿದ. ಹಾಗೆ ಆಗ್ಲಿ ಅಂತ ಕಣ್ಣು ಮಿಟುಕಿಸಿ ಅವರ ಬೀಳ್ಕೊಟ್ಟ ಪ್ರಥ್ವಿ. ಇಬ್ಬರೂ ತುಂಬಾ ವರ್ಷಗಳಿಂದ ಆ ಕಂಪನಿಯಲ್ಲಿದ್ದುದರಿಂದ ಅವರಲ್ಲೊಂದು ಸಲುಗೆ ಇತ್ತು. ಸುಜಯ್ ನ ಮೀಟಿಂಗ್ ಯಾವುದು ಅಂತಲೂ ಅವನಿಗೆ ಗೊತ್ತಾಗಿತ್ತು!    
ಅನಿರೀಕ್ಷಿತವಾಗಿ ಎದುರಾಗಿ ಬಂದ ಪ್ರಥ್ವಿ, ಸುಜಯ್ ನ ಕರ್ತವ್ಯ ಪ್ರಜ್ಞೆಯನ್ನು ಜಾಗೃತ ಗೊಳಿಸಿದ್ದರಿಂದಲೋ ಏನೋ, ಇವನ ಮುಖ ಬಾಡಿದ್ದು ಕಂಡು ನಿಶಾ,
“ನಿನಗೆ ಯಾವ ತರಹದ ಫುಡ್ ಇಷ್ಟ?” ಅಂತ ಕೇಳಿ ಇವನನ್ನು ತಿರುಗಿ ಹಳಿಗೆ ತರುವ ಪ್ರಯತ್ನ ಮಾಡಿದಳು. ಅದು ಫಲಿಸಿತೋ ಎಂಬಂತೆ ಇವನ ಮುಖದಲ್ಲಿ ಬದಲಾವಣೆ ಕಂಡು ಬಂತು…
“ಹಸಿದಾಗ ಏನು ಕೊಟ್ಟರೂ ಇಷ್ಟವೇ… ಅದು ಇದು ಅಂತ ಬೇಧ ಭಾವ ಮಾಡೋನೇ ಅಲ್ಲ ನಾನು” ಅಂತ ತುಂಬಾ ಸಹಜವಾಗಿ ಹೇಳಿದ ತನ್ನ ಮಾತು ಕೇಳಿ ನಿಶಾ ಆ ಪರಿ ನಗುವಳೆಂದು ಸುಜಯ್ ನಿರೀಕ್ಷಿಸರಲಿಲ್ಲ!
“ಹೌದೆ ಈಗ ನಿನಗೆ ಹಸಿವೆಯಾಗಿದೆಯಲ್ಲವೇ? ಹಾಗಿದ್ದರೆ ಚಿಕನ್ ಬಿರಿಯಾನಿ ತಿನ್ನೋಣ. ಆಯ್ತಾ?” ಅಂದು ಇನ್ನೂ ಜೋರಾಗಿ ನಗತೊಡಗಿದಳು. ಅವಳಿಗೆ ತಾನು ಸಸ್ಯಾಹಾರಿ ಅಂತ ಗೊತ್ತಿದ್ದೂ ತನ್ನ ಕಾಲೆಲೆಯುತ್ತಿರುವಳೆಂದು ಗೊತ್ತಾಗಿ ಸುಮ್ಮನೆ ನಕ್ಕ.
ಅವಳ ನಗುವನ್ನು ನಿಯಂತ್ರಿಸಲೋ ಏನೋ ಎಂಬಂತೆ,
“ನಿನ್ನ ಊರು ಯಾವುದು?” ಅಂತ ಇವನು ಕೇಳಿದ್ದಕ್ಕೆ, ಅವಳ ನಗುವೇನೋ ನಿಂತಿತು. ಆದರೆ ಉತ್ತರವನ್ನು ಬ್ರೇಕ್ ಬಳಿಕ ಹೇಳುತ್ತೇನೆ ಅನ್ನುವ ತರಹ, “ಊಟ ಮಾಡುವಾಗ ಹೇಳುತ್ತೇನೆ” ಅಂತ ಕಣ್ಣು ಮಿಟುಕಿಸಿದಳವಳು. ಹಾಗೆ ಕಣ್ಣು ಮಿಟುಕಿಸಿದಾಗ ತುಂಬಾ ಕ್ಯೂಟ್ ಕಾಣುತ್ತೀಯ ಅಂತ ಹೇಳಬೇಕೆಂದವನು ಸುಮ್ಮನಾದ.
ತಂದೂರಿ ಹಟ್ ಅನ್ನುವ ಆ ಹೋಟೆಲಿನಲ್ಲಿ ಕಾಲಿಡಲೂ ಜಾಗವಿರದಷ್ಟು ಜನವಿದ್ದರು. ಆಫೀಸಿನಲ್ಲಿ ಖಾಲಿ ಖಾಲಿ ಹೊಡೆಯುತ್ತಿದದ್ದು ಯಾಕೆ ಅಂತ ಇಲ್ಲಿ ಕುಳಿತವರ ನೋಡಿದರೆ ಗೊತ್ತಾಗುತ್ತಿತ್ತು. ಆದರೆ ಇಲ್ಲಿ ಪ್ರೈವಸಿ ಗೆ ಅವಕಾಶವೇ ಇರಲಿಲ್ಲ. ಇಲ್ಲಿ ಬೇಡ, ಬೇರೆ ಕಡೆ ಹೋಗೋಣ ಅಂದವನ ಮನಸ್ಸನ್ನು ಓದಿ ಅರ್ಥ ಮಾಡಿಕೊಳ್ಳದಷ್ಟು ಅನಕ್ಷರಿಯಾಗಿರಲಿಲ್ಲ ಅವಳು! ಅಲ್ಲಿರುವ ನಾಲ್ಕೋ ಐದೋ  ಹೋಟೆಲು ಗಳಲ್ಲೇ, ಜನರು ಕಡಿಮೆ ಇದ್ದ ಕಡೆ ಹೋಗಿ ಕೂತರು. ಊಟ ಆರ್ಡರ್ ಮಾಡುವ ಗಡಿಬಿಡಿ ಇವನಿಗಿರಲಿಲ್ಲವಾದರೂ, ಆರ್ಡರ್ ತೆಗೆದುಕೊಳ್ಳುವ ಗಡಿಬಿಡಿ ಹೋಟೆಲಿನ ಮಾಣಿಗಿತ್ತಲ್ಲ! ಆ ಮಾಣಿ ಕೊಟ್ಟ ಮೆನುನಲ್ಲಿ  ಅವಳಿಗಿಷ್ಟವಾದ ಎಲ್ಲವೂ ಸಹಜವಾಗಿ ಇವನಿಗೂ ಇಷ್ಟವಾಯ್ತು! ಅವಳೇ ಊಟಕ್ಕೆ ಏನು ಬೇಕು ಅಂತ ಆರ್ಡರ್ ಮಾಡಿದಳು.  ಅಡಿಗೆ ಆರಾಮವಾಗಿ ತಯಾರಾಗಲಿ ಎಂಬ ಅಣತಿಯನ್ನು ಮಾಣಿಗೆ ಕಣ್ಣಲ್ಲೇ ಹೇಳಿದನವನು. ಇಂಥ ಎಷ್ಟೋ ಜೋಡಿಗಳನ್ನು ದಿನವೂ ನೋಡುವ ಮಾಣಿಗೆ ಇಂತಹ ಅಣತಿಗಳು ಸುಲಭವಾಗಿ ಅರ್ಥವಾಗುತ್ತಿದ್ದವು. ಅದನ್ನು ಪಾಲಿಸಿದರೆ ಅವನ ಜೇಬಿಗೊಂದಿಷ್ಟು ಜಾಸ್ತಿ ದುಡ್ಡು ಸೇರುತ್ತಿತ್ತು!   
“ನನ್ನ ಅಮ್ಮ ಕೆರಳದವಳು, ಅಪ್ಪ ಕಾಶ್ಮೀರದವನು. ನಾನು ಹುಟ್ಟಿದ್ದು ನನ್ನ ಅಜ್ಜಿಯ ಊರಾದ ಕೊಟ್ಟಾಯಂ ನಲ್ಲಿ” ಅಂತ ತನ್ನ ಉಗಮದ ಬಗ್ಗೆ ತಿಳಿಸಿದಳು. ಎರಡು ರಾಜ್ಯಗಳ ಸುಂದರಿಯರಲ್ಲಿರಬೇಕಾದ ಲಕ್ಷಣಗಳ ಸಂಗಮವಿರುವುದಕ್ಕೇ ಇವಳು ಇಷ್ಟು ಸುಂದರಿ ಇರಬೇಕು ಅಂದುಕೊಂಡನವನು.
“ನನಗೊಬ್ಬಳು ತಂಗಿ ಇದ್ದಾಳೆ, ನನ್ನ ಅಪ್ಪನಿಗೆ ಏರ ಫೋರ್ಸ್ ನಲ್ಲಿ ಕೆಲಸ. ಹೀಗಾಗಿ ನಾನು ಹೆಚ್ಚು ಕಡಿಮೆ ಇಡೀ ದೇಶವೆಲ್ಲಾ ಸುತ್ತಾಡಿದ್ದೇನೆ…” ಅವಳ ಮಾತುಗಳನ್ನೆ ಮಂತ್ರಮುಗ್ಧನಾಗಿ ಕೇಳುತ್ತಿದ್ದ…
 
------
 
ನಾನು ಮತ್ತು ನನ್ನ ನಾಯಿ ಇಬ್ಬರೂ ನಿರ್ಗತಿಕರು!
 
ಅಮೆರಿಕಾಕ್ಕೆ ಬಂದು ಇವತ್ತಿಗೆ ಆಗ್ಲೇ ಒಂದು ವಾರವಾಯ್ತೆ ಅಂತ ವೆಂಕಣ್ಣ ತಲೆ ಕೆರೆಯುತ್ತಾ ಯೋಚಿಸುತ್ತಿದ್ದಾಗಲೇ ಮಗಳು ಖುಷಿ ಇವನ ಭುಜ ಹಿಡಿದು ಅಲುಗಾಡಿಸುತ್ತಿದ್ದಳು.
“ಅಪ್ಪ ಅಮೇರಿಕಾ ಬೋರಿಂಗ್ ಅದ” ಅಂದಳು. 
ಶಾಲೆಗೆ ಹೋಗುವ ರಗಳೆ ಇಲ್ಲ ಅಂತ ಬಂದ ಹೊಸತು ಅವಳಿಗೆ ಖುಷಿಯಾಗಿತ್ತಾದರೂ, ಈಗ ಅವಳಿಗೆ ಬೇಜಾರು ಶುರು ಆಗಿತ್ತು. ಹೊಸ ಜಾಗ, ಅದೂ ಅಲ್ಲದೆ  ಅವಳ ಜೊತೆಗೆ ಆಡಲು ಅಲ್ಲಿ ಯಾರೂ ಇರಲಿಲ್ಲ. ಆದರೆ  ಇವತ್ತು ಶನಿವಾರ, ವೆಂಕಣ್ಣನ ಆಫೀಸಿಗೆ ರಜೆ. ಅದಕ್ಕೆ ಹೆಂಡತಿ ಮಗಳನ್ನು ತಿರುಗಾಟಕ್ಕೆ ಕರೆದುಕೊಂಡು ಹೋಗುವ ನಿರ್ಧಾರ ಇವನು ಆಗಲೇ ಮಾಡಿಯಾಗಿತ್ತು.
“ಪುಟ್ಟಿ ನೀ ಇನ್ನೂ ಅಮೇರಿಕಾ ನೋಡೇ ಇಲ್ಲ! ಇವತ್ತ ನಿಮಗ ಸಾಲ್ಟ್ ಲೇಕ್ ಸಿಟಿ ಗೆ ಕರ್ಕೊಂಡ್ ಹೋಗ್ತೀನಿ!” ಏನೋ ಹೊಸ ತರಹದ ಊರಿನ ಹೆಸರು ಕೇಳಿ ಅವಳ ಕಣ್ಣುಗಳು ಅರಳಿದ್ದವು.
“ಹೇ ವಾವ್, ಆದ್ರ ಹೆಸರು ಮಜಾ ಅದ ಅಲ್ಲಾ? ಹಂಗ್ಯಾಕ ಅಂತಾರ ಅದಕ್ಕ?”   
“….. ಅಲ್ಲೇ ಹೋದ ಮ್ಯಾಲೆ ಹೇಳ್ತೀನಿ. ಅದು ಸರ್ಪ್ರೈಸ್!” ಅಂದ. ಯಾಕೆಂದರೆ ಆ ಊರಿಗೆ ಆ ಹೆಸರು ಯಾಕೆ ಬಂತು ಅಂತ ಅವನಿಗೂ ಗೊತ್ತಿರಲಿಲ್ಲ!
“ಅಲ್ಲಿಗೆ ಹೆಂಗ್ ಹೋಗೋದು?” ಅವಳ ಪ್ರಶ್ನೆ ಸಹಜವಾಗಿತ್ತು. ಯಾಕೆಂದರೆ ಬೆಂಗಳೂರಿನಲ್ಲಿದ್ದಂತೆ ಇಲ್ಲಿ ಇವರ ಸ್ವಂತ ಕಾರ್ ಇರಲಿಲ್ಲವಲ್ಲ. ಇಲ್ಲಿ ಕಾರ್ ಇಲ್ಲದಿದ್ದರೆ ತುಂಬಾ ಕಷ್ಟ. ಬಸ್ಸು ಟ್ರೇನ್ ಗಳಿವೆಯಾದರೂ ಅವುಗಳು ಅಡ್ಡಾಡುತ್ತಿದ್ದುದು ಆಗೀಗ ಅನ್ನುವಂತಿದೆ. ಇಲ್ಲಿ ಎಲ್ಲಿ ಹೋದರು ಕಾರ್ ಬೇಕೇ ಬೇಕು. ಇವನು ಬಂದಾಗಿನಿಂದ,  ಅಮೆರಿಕಾದಲ್ಲೇ ವಾಸವಾಗಿದ್ದ ಇವನ ಸಹೋದ್ಯೋಗಿ ಇವನನ್ನು  ಪ್ರತಿ ನಿತ್ಯ ಆಫೀಸಿಗೆ ತನ್ನ ಕಾರಿನಲ್ಲೇ ಬಿಡುತ್ತಿದ್ದ. ಹೀಗಾಗಿ ಇವತ್ತಿಗೆ ಸಾಲ್ಟ್ ಲೇಕ್ ಸಿಟಿ ಗೆ ಹೋಗಲು ಒಂದು ಟ್ಯಾಕ್ಸಿ ಬುಕ್ ಮಾಡಿದ್ದ. 
ಬೆಳಿಗ್ಗೆ ೯ಕ್ಕೆ ಬುಕ್ ಮಾಡಿದ್ದ ಕಾರು ೮:೫೦ ಕ್ಕೆ ಸರಿಯಾಗಿ ಬಂದು, ಡ್ರೈವರ್ ಫೋನ್ ಮಾಡಿದಾಗ, ಇವನಿನ್ನೂ ಸ್ನಾನ ಮಾಡುತ್ತಿದ್ದ! ಹಾಗೂ ಹೀಗೂ ತಯ್ಯಾರಾಗಿ ವೆಂಕಣ್ಣನ ಪರಿವಾರ ಕೆಳಗೆ ಹೋದಾಗ ಡ್ರೈವರ್ ಅರ್ಧ ಗಂಟೆ ತಡವಾಯ್ತೆಂದು ಭುಸುಗುಡುತ್ತಿದ್ದ. ಎಷ್ಟಂದ್ರೂ ಅಮೆರಿಕಾದ ಡ್ರೈವರ್ ಅಲ್ವೇ? ಬೆಂಗಳೂರಿನಲ್ಲಾದರೆ ವೆಂಕಣ್ಣ ಎಷ್ಟೊತ್ತಿಗೆ ಬಂದರೂ ಡ್ರೈವರ್ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ.
ಹೋಗಲಿ ತನ್ನದೇ ತಪ್ಪು ಅಂತ ಅರಿವಾಗಿ ವೆಂಕಣ್ಣ ಸೌಜನ್ಯಯುತವಾಗಿ “ಕ್ಷಮಿಸಿ ನನ್ನಿಂದ ತಡಾ ಆಯಿತು” ಅಂದ. ಪರವಾಗಿಲ್ಲ ಬಿಡಿ ಅನ್ನುವ ಉತ್ತರ ನಿರೀಕ್ಷಿಸಿ ಕೇಳಿದ್ದ ಕ್ಷಮಾಪಣೆಗೆ ಡ್ರೈವರ್
“ಹೌದು ನೀವು ಕ್ಷಮೆ ಕೇಳಲೇಬೇಕಾದ ತಪ್ಪು ಮಾಡಿದ್ದೀರಿ” ಅನ್ನಬೇಕೆ! ಇವನಿಗೆಂಥ ಕೋಪ ಬರಬೇಡಾ! ಆದರೂ ಅವನು ತರಲೆ ಅನ್ನುವದು ಗೊತ್ತಾದಮೇಲೂ ಅವನ ಜೊತೆ ಜಗಳ ಮಾಡೋದು ಸರಿಯಲ್ಲವೆಂದು ಇವನಿಗೆ ಅರಿವಾಗಿ “ಇಲ್ಲಿ ಡ್ರೈವರ್ಗೋಳಿಗೆ ಭಾರಿ ಸೊಕ್ಕು. ಮಂಗ್ಯಾನ ಮಗಾ. ಹೆಂಗ್ ಮಾತಾಡ್ತಾನ್ ನೋಡು“ ಅಂತ ಹೆಂಡತಿ ಎದುರು ಬೈದು ಸಿಟ್ಟು ತೀರಿಸಿ ಕೊಂಡ.
       
ಸಾಲ್ಟ್ ಲೇಕ್ ಸಿಟಿ ಯ ಸೆಂಟ್ರಲ್ ಸ್ಟೇಶನ್ ಬಳಿಗೆ ಬಂದು ಮುಟ್ಟಿ, ಕಾರಿನಿಂದ ಇಳಿದು ಬಿಲ್ ದುಡ್ಡು ಕೊಟ್ಟ. ಅಲ್ಲಿ ಬರಿ ಬಿಲ್ ಕೊಟ್ಟರೆ ಸಾಲದು, ಜೊತೆಗೆ ಟಿಪ್ಸ್ ಕೊಡಬೇಕು ಅದು ಶಿಷ್ಟಾಚಾರ! ಡ್ರೈವರ್ ಇವನ ಜೊತೆಗೆ ಅಸಂಬದ್ಧ ಮಾತಾಡಿದ್ದರಿಂದ ಅವನ ಮೇಲೆ ವೆಂಕಣ್ಣ ನಿಗೆ ಮೊದಲೇ ಸಿಟ್ಟು ಬಂದಿತ್ತಲ್ಲವೇ. ಅದಕ್ಕೆ ಬರೀ ಐದೇ ಡಾಲರ್ ಟಿಪ್ಸ್ ಕೊಟ್ಟ. ಆದರೆ ಅದೇ ತರಲೆ ಡ್ರೈವರ್ ಈಗ, ಹಳದಿ ಬಣ್ಣಕ್ಕೆ ತಿರುಗಿದ್ದ ತನ್ನ ಅಷ್ಟೂ ಹಲ್ಲುಗಳ ಝಳಪಿಸುತ್ತ ಕೇಳಿದ! 
“ಸರ್, ನಿಮ್ಮ ಬಿಲ್ ೯೦ ಡಾಲರ್ ಆಗಿದೆ. ಆ ಮೊತ್ತದ ೧೫% ಟಿಪ್ಸ್, ಅಂದ್ರೆ ಬೊರೊಬ್ಬರಿ ೧೩.5 ಡಾಲರ್ ಆಗುತ್ತೆ.”
ಬೆಂಗಳೂರಿನಲ್ಲಾದರೆ ನಾವು ಕೊಟ್ಟಷ್ಟು ತೆಗೆದುಕೊಳ್ಳುತ್ತಾರೆ, ಇಲ್ಲಾದರೆ ಹೀಗೋ ! 
ಆದರೂ ಮೊದಲೇ ತಡವಾಗಿ ಬಂದಿದ್ದಕ್ಕೆ ತನ್ನ ಮರ್ಯಾದೆ ತೆಗೆದ ಅವನು, ಇನ್ನು ಅವನು ಕೇಳಿದಷ್ಟು ಟಿಪ್ಸ್    ಕೊಟ್ಟಿಲ್ಲ ಅಂದ್ರೆ, ಇಂಡಿಯನ್ ಗಳೇ ಹಿಂಗೆ ಅಂತ ಎಲ್ಲರೆದುರು ಹೇಳಿಬಿಟ್ಟರೆ? ಅಂತ ಇವನ ದೇಶ ಭಕ್ತಿ ಜಾಗೃತವಾಗಿ, ತಿಂದು ಸಾಯಿ ಅಂತ ಅವನು ಕೇಳಿದಷ್ಟು  ಟಿಪ್ಸ್ ಕೊಟ್ಟು ಅವನ ಬೀಳ್ಕೊಟ್ಟ.
ಇವನ ತಲೆಯಲ್ಲೊಂದು ಪ್ರಶ್ನೆಯಂತೂ ಉದ್ಭವವಾಯ್ತು. ಈ ಟಿಪ್ಸ್ ಗೂ ನಮ್ಮ ದೇಶದಲ್ಲಿ ಕೊಡುವ ಲಂಚಕ್ಕೂ ಏನು ವ್ಯತ್ಯಾಸ? ಅಂತ! ಅಲ್ಲೂ ಕೆಳಿದಷ್ಟೇ ಕೊಡಬೇಕು, ಇಲ್ಲೂ ಹಂಗೆ. ಸುಮ್ನೆ ನಮ್ಮ ದೇಶದಲ್ಲೂ ಲಂಚಾನ ಹೀಗೆ ನೂರಕ್ಕೆ ಇಷ್ಟು ಅಂತ ನಿಗದಿಸಿದರೆ ಅದನ್ನೂ ಟಿಪ್ಸ್ ಅಂತ ಹೇಳಿಕೊಂಡು ಖುಷಿಯಾಗಿ ಕೊಡಬಹುದಲ್ವೆ? ಹೀಗೊಂದು ಅದ್ಭುತವಾದ ಒಂದು ಕಲ್ಪನೆ ಬಂದು ಪುಳಕಗೊಂಡಿದ್ದಾಗಲೇ, ಮಗಳು
“ಇದ ಏನಪ್ಪಾ ಸಾಲ್ಟ್ ಲೇಕ್ ಸಿಟಿ?” ಅಂದಳು.
“ಹೌದು ಖುಷಿ. ಇಲ್ಲೇ ಹತ್ತರದಾಗ ಒಂದು ಡೆಡ್ ಸೀ ಅದ. ಅದರಿಂದನ ಈ ಊರಿಗೆ ಹೆಸರು ಬಂದಿದ್ದು” ಈಗಾಗಲೇ ಗೂಗಲ್ ನಲ್ಲಿ ಹುಡುಕಿ ಉತ್ತರ ಕಂಡುಕೊಂಡಿದ್ದರಿಂದ, ಈ ಊರಿಗೆ ಆ ಹೆಸರು ಬಂದದ್ದು ಯಾಕೆ ಅಂತ ಮತ್ತೆ ಅವಳು ಕೇಳೋದಕ್ಕಿಂತ ಮೊದಲೇ ಪಟಪಟನೆ ಉತ್ತರಿಸಿದ್ದ. 
“ಡೆಡ್ ಸೀ ಅಂದ್ರ?” ಮಗಳ ಮುಂದಿನ ಪ್ರಶ್ನೆ…
“ಅಂದ್ರ ನೀರೊಳಗ ಉಪ್ಪಿನ ಅಂಶ ಸಮುದ್ರಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಇರ್ತದ, ಯಾವುದ ಪ್ರಾಣಿಗಳು ಬದಕಲಿಕ್ಕೆ ಸಾಧ್ಯ ಇಲ್ಲದಷ್ಟು. ಇನ್ನೊಂದ ಮಜಾ ಅಂದ್ರ, ಆ ನೀರೊಳಗ ಮುಳುಗೋದ ಸಾಧ್ಯ ಇಲ್ಲ!”
“ಏ ಹೌದಾ? ಅಲ್ಲೇ ನನ್ನ ಕರಕೊಂಡು ಹೋಗಪ್ಪ!” ಎರಡು ಸಲ ಈಜು ಕಲಿಯಲು ಹೋಗಿ ಮುಳುಗುವ ಭಯದಿಂದ ವಾಪಸ್ಸು ಓಡಿ ಬಂದಿದ್ದ ಮಗಳಿಗೆ ಮುಳುಗಲು ಸಾಧ್ಯವೇ ಇಲ್ಲದ ಸಮುದ್ರದ ಅಸ್ತಿತ್ವವೇ ಸಹಜವಾಗಿ ಬೆರಗು ಮೂಡಿಸಿತ್ತು. 
“ಆಗ್ಲಿ ಇನ್ನೊಂದ್ ಸಲ ಹೋಗೋಣಂತ” ಮಗಳು ಆನಂದದಿಂದ ತಲೆ ಅಲ್ಲಾಡಿಸಿದಳು.   
ಆ ಊರಿನಲ್ಲಿದ್ದ ಸುಪ್ರಸಿದ್ಧ ಮಾಲ್ ಒಂದಕ್ಕೆ ಹೋದರಿವರು. ಅದರ ದ್ವಾರದಲ್ಲಿ ಸ್ವಾಗತಿಸಿದ್ದು ಮೂವರು ಬಿಕ್ಷುಕರು! ನಮ್ಮಲ್ಲಿ ದೇವಸ್ಥಾನದ ಮುಂದೆ ಕೂತಂಗೆ, ಆದರೆ ಇಲ್ಲಿನವರು ಅಕ್ಷರಸ್ಥರು ಅದೇ ವ್ಯತ್ಯಾಸ. ಅವರ ಕೈಯಲ್ಲಿ, ‘ನಾನು ನಿರ್ಗತಿಕ, ನನಗೆ ಸಹಾಯ ಮಾಡಿ!’ ಎಂದು ಇಂಗ್ಲೀಶ್ ನಲ್ಲಿ ಬರೆದಿದ್ದ ಒಂದು ಫಲಕ.  ಒಬ್ಬ ಭಿಕ್ಷುಕನಂತೂ  ತನ್ನ   ಜೊತೆಗೆ ಒಂದು ನಾಯಿಯನ್ನೂ ಕೂಡಿಸಿಕೊಂಡಿದ್ದ . ಅವನ ಕೈಯಲ್ಲಿದ್ದ ಫಲಕದಲ್ಲಿ ಹೀಗೆ ಬರೆದಿದ್ದ “ನನಗೆ ಹಾಗೂ ನನ್ನ ನಾಯಿ ಇಬ್ಬರಿಗೂ ಮನೆಯಿಲ್ಲ, ನಮಗೆ ಸಹಾಯ ಮಾಡಿರಿ!”
ಜಾನುಗೆ ಇದನ್ನು ನೋಡಿ ನಗು ಬಂತು “ಅಲ್ರೀ, ತನಗ ಗತಿ ಇಲ್ಲ, ಮತ್ತ ನಾಯಿ ಬ್ಯಾರೆ ಸಾಕ್ಯಾನಲ್ಲಾ. ಇಲ್ಲ್ಯೂ ಭಾಳ ಇದ್ದಾರ ಬಿಕ್ಷಾದವ್ರು. ನಾ ಒಂದ್ coin ಹಾಕ್ತೀನಿ, ಒಂದು ಫೋಟೋ ತಗೀರಿ” ಅಂದ್ಲು.
“ಲೇ ಫೋಟೋ ತಗೀಲಿಕ್ಕೆ ಇನ್ನೂ ಭಾಳ ಚೊಲೋ ಚೊಲೋ ಜಗಾ ಆವ, ಸುಮ್ನ ಬಾ” ಅಂತ ಹುಸಿ ಕೋಪದಲ್ಲಿ ಎಳೆದುಕೊಂಡು ಹೋದ. ಖುಷಿ, ಮಾಲ್ ನ ಮುಂದಿದ್ದ ಕಾರಂಜಿ ನೋಡಿ ಮೈಮರೆತಿದ್ದಳು.
  
ಮಾಲ್ ನಲ್ಲಿ ಅಡ್ಡಾಡಿ, ಹೊಟ್ಟೆ ತುಂಬದ ಬರ್ಗರ್, ಫ್ರೆಂಚ್ ಫ್ರೈಸ್ ಅಂತೇನೇನೋ ತಿಂದು ಮಾಲ್ ನ ಹೊರಗೆ ಬಿದ್ದರು. ಹಾಗೆ ಅಡ್ಡಾಡುತ್ತ ಆ ಊರಿನ ಸೊಬಗು ಸವಿಯುತ್ತಿದ್ದರು. ದಾರಿಯಲ್ಲಿ ಒಬ್ಬ ಪೂರ್ತಿ ಕುಡಿದು ಮೈ ಮರೆತು ರೋಡಿನ ಪಕ್ಕ ಮಲಗಿ ಬಿಟ್ಟಿದ್ದ. ಇನ್ನೂ ಒಂದಿಷ್ಟು ಕುಡುಕರು ಟೈಟ್ ಆಗಿ ಏನೇನೋ ಕೂಗಾಡಿಕೊಂಡಿದ್ದರು. ಎಲ್ಲಾ ಥೇಟ್ ನಮ್ಮ ಕುಡುಕರ ಥರಾನೇ! 
“ಲೇ ಇಲ್ಲಿ ಕುಡುಕರೂ ಕುಡದಾಗ ಇಂಗ್ಲಿಶ್ ನ್ಯಾಗ ಮಾತಾಡತಾರ ನೋಡು! ನಮ್ಮ ಕುಡಕರ ಥರಾನ. ಅಂದರ ಇಂಗ್ಲಿಷ ಕುಡುಕರ ಭಾಷೆ, ಹೃದಯದಿಂದ ಬರೋ ಭಾಷೆ ಅಂದಗಾತು” ಅಂದ ವೆಂಕಣ್ಣ ನ ಜೋಕಿಗೆ ಜಾನು ಬಿದ್ದು ಬಿದ್ದು ನಗದಿದ್ದರೂ ಒಂದು ಮುಗುಳ್ನಗು ಅವಳ ಮುಖದಲ್ಲಿತ್ತು. ಅಲ್ಲಿ ಇಲ್ಲಿ ಅಡ್ಡಾಡಿ ಇನ್ನೂ ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಜೆಯಾಗುತ್ತಲೇ ತಮ್ಮ ನಿವಾಸಕ್ಕೆ ವಾಪಸ್ಸು ಹೊರಟರು.
 

3 comments:

  1. ಅಂತೂ ಅಮೆರಿಕಾ ಅಂದರ ‘ಕುಡುಕರ ಹಾಗು ಭಿಕ್ಷುಕರ ಸ್ವರ್ಗ’ ಅಂದ್ಹಾಂಗಾತು!

    ReplyDelete
  2. ಪೃಥ್ವಿ ತರಹದ್ದೇ ಒಂದು ಹೆಣ್ಣು ದನಿ ಇತ್ತು ನಾನು ಕೆಲಸ ಮಾಡುತ್ತಿದ್ದ ಹಳೆಯ ವಾಹಿನಿಯಲ್ಲಿ. ಅವರು voice over ಸಹ ಕೊಡುತ್ತಿದ್ದರು!

    ReplyDelete
  3. ಇಲ್ಲೂ ಅದೇ, ಪಿಜ್ಜಾ ಹಟ್ ಬಿಲ್ಲಿನಲ್ಲೇ ಟಿಪ್ಸ್ ಸೇರಿಸಿ ಜಡೀತಾರೆ! ಅಧಿಕೃತ ಲಂಚ ಸ್ವೀಕಾರ ಕಾಲ ಇದಪ್ಪಾ!

    ReplyDelete