Wednesday, July 3, 2024

ಪಂಜರದ ಕೋಳಿಯ ಕತೆ

ಅವತ್ತೊಂದು ಕೋಳಿ ಸಾಕಾಣಿಕಾ ಕೇಂದ್ರಕ್ಕೆ ಹೋಗಿದ್ದೆ. ಅಲ್ಲಿ ಒಂದು ಲಕ್ಷ ಕೋಳಿಗಳು ಇದ್ದವು. ಹುಟ್ಟಿದಾಗಿನಿಂದ ಸಾಯುವತನಕ ಪಂಜರದಲ್ಲಿಯೇ ಅವುಗಳ ವಾಸ. ಅದೇ ಜೀವನ ಅಂತ ಅವೂ ಕೂಡ ಅಂದುಕೊಂಡೆ ಜೀವಿಸುತ್ತವೆ(??). 

ಅಂಥದ್ದರಲ್ಲಿ ಒಂದು ಕೋಳಿ ಹೇಗೋ ಪಂಜರದಿಂದ ಹೊರಗೆ ಬಂದುಬಿಟ್ಟಿತು! ನಿಜ ಹೇಳಬೇಕೆಂದರೆ ಅದಕ್ಕೆ ಸ್ವತಂತ್ರ ಸಿಕ್ಕಿತ್ತು. ಅದು ಸ್ವಲ್ಪ ಪ್ರಯತ್ನ ಮಾಡಿದ್ದರೂ ಹೊರಗೆ ನುಸುಳಿ ಪಾರಾಗಬಹುದಿತ್ತು. ಆದರೆ ಹಾಗಾಗಲಿಲ್ಲ...

ಅದಕ್ಕೆ ತುಂಬಾ ಭಯ ಶುರು ಆಯ್ತು. ಎಲ್ಲರೂ ಪಂಜರದೊಳಗೆ ಸುರಕ್ಷಿತವಾಗಿದ್ದಾರೆ ತಾನು ಮಾತ್ರ ಹೊರಗೆ ಬಂದುಬಿಟ್ಟೆ, ಛೇ ತಪ್ಪು ಮಾಡಿಬಿಟ್ಟೆ ಅಂತ ಅನಿಸಿ ಮತ್ತೆ ಪಂಜರದೊಳಗೆ ನುಸುಳುವ ವ್ಯರ್ಥ ಪ್ರಯತ್ನ ಮುಂದುವರಿಸಿತು. ಅದಕ್ಕೆ ಒಳಗೆ ಹೋಗಲು ಸಾಧ್ಯವಾಗದಾದಾಗ ಇನ್ನಷ್ಟು ಹತಾಶೆಗೆ ಒಳಗಾಯಿತು. 

ಅಯ್ಯೋ ಎಲ್ಲರೂ ಎಷ್ಟು ಚೆನ್ನಾಗಿದ್ದಾರೆ ನಾನು ಮಾತ್ರ ಹೀಗೆ ಮಾಡಿಕೊಂಡುಬಿಟ್ಟೆನಲ್ಲ ಅಂತ ಬೇಜಾರಿನಲ್ಲಿ ಅದು ಅತ್ತಿತ್ತ ಅಡ್ಡಾಡುತ್ತಿತ್ತು. 

ಅದರ ಪರಿಸ್ಥಿತಿ ನೋಡಿ ಪಂಜರದೊಳಗೆ ಇದ್ದ ಕೆಲವು ಕೋಳಿಗಳು ಬಿದ್ದು ಬಿದ್ದು ನಗುತ್ತಿದ್ದವು. ಕಾಲಕಾಲಕ್ಕೆ ಊಟ, ನೀರು ಎಲ್ಲಾ ಸಿಗುತ್ತಿತ್ತು. ಸುಮ್ಮನೆ ನಮ್ಮ ಜೊತೆಗೆ ಇದ್ದಿದ್ದರೆ ಆಗಿತ್ತು. ಇದಕ್ಯಾಕೆ ಬೇಕಿತ್ತು ಊರ ಉಸಾಬರಿ. ಅಂತ ಇನ್ನೂ ಹಲವು ಕೋಳಿಗಳು ತಮ್ಮ ತಮ್ಮಲ್ಲೇ ಗಾಸಿಪ್ ಮಾಡಿಕೊಳ್ಳುತ್ತಿದ್ದವು. 

ತನ್ನ ಎಲ್ಲ ಸಹಪಾಠಿ ಕೋಳಿಗಳ ಕುಹಕ, ಕೇಕೆ, ನಗು ಎಲ್ಲಾ ಕಡೆಗಳಿಂದ ಏಕಕಾಲಕ್ಕೆ ಈ ಏಕಾಂಗಿ ಕೋಳಿಯ ಕಿವಿಗೆ ಅಪ್ಪಳಿಸಿ ಅದು ಇನ್ನೂ ಅಧೀರ ಆಯ್ತು.. ಅಷ್ಟೊತ್ತಿಗೆ ಎಲ್ಲಿಂದಲೋ ಆಪತ್ಭಾಂದವನಂತೆ ಬಂದ ಒಬ್ಬ ವ್ಯಕ್ತಿ ಆ ಕೋಳಿಯನ್ನು ವಾಪಸ್ಸು ಪಂಜರದೊಳಗೆ ತುರುಕಿದ. 

ಅಬ್ಬಾ ಬದುಕಿದೆಯಾ ಬಡ ಜೀವವೇ ಅಂತ, ಅಸಾಧ್ಯ ಹೆರಿಗೆ ನೋವಿನೊಂದಿಗೆ, ಅವತ್ತಿನ ದಿನದ ಮೊಟ್ಟೆಯನ್ನು ಹೆತ್ತು ನಿಟ್ಟುಸಿರು ಬಿಟ್ಟು ಮುಂದಿಟ್ಟ ಆಹಾರವನ್ನು ಕುಕ್ಕಿ ಕುಕ್ಕಿ ತಿನ್ನತೊಡಗಿತು...

ಗುರುಪ್ರಸಾದ ಕುರ್ತಕೋಟಿ 



 

No comments:

Post a Comment