Saturday, September 14, 2013

ಅವಳು!

(ಪಂಜು ಪತ್ರಿಕೆಯಲ್ಲಿ ದಿ. ೦೯ ಸೆಪ್ಟೆಂಬರ್, ೨೦೧೩ ರಂದು ಪ್ರಕಟವಾಗಿತ್ತು)
http://www.panjumagazine.com/?p=4340

----------------------------------------------------------------------------------------------
ಇವತ್ತಿಗೆ ಸರಿಯಾಗಿ ಆರು ವರುಷಗಳ ಹಿಂದೆ ನಾನವಳ ಭೇಟಿಯಾಗಿದ್ದೆ. ಮೊದಲ ನೋಟದಲ್ಲೇ ಅವಳಲ್ಲಿ ಅನುರಕ್ತನಾದೆ. ಅವಳಲ್ಲಿ ತುಂಬಾ ಇಷ್ಟವಾಗಿದ್ದು ಅವಳ ಸ್ನಿಗ್ಧ ಸೌಂದರ್ಯ ಹಾಗು ಅವಳ ಬಣ್ಣ! ಅವತ್ತೇ ಅವಳನ್ನು ಮನೆಗೆ ಕರೆದುಕೊಂಡು ಬಂದಿದ್ದೆ. ಅಪ್ಪ ಎಂದಿನಂತೆ ಬೈದಿದ್ದ. ನಾನವಳನ್ನು ಕರೆದುಕೊಂಡು ಬಂದಿದ್ದು ಅವನಿಗೆ ಸುತಾರಾಮ್ ಇಷ್ಟವಿರಲಿಲ್ಲ. ಆತ ನನ್ನ ಮೇಲೆ ಕೋಪಗೊಂಡಿದ್ದು ಸ್ಪಷ್ಟವಾಗಿತ್ತು. ಆದರೆ ಮುಂದೆ ಎಲ್ಲಾ ಸರಿ ಹೋಗುವುದೆಂಬ ಭರವಸೆ ನನಗೆ. ಅವತ್ತಿಗೆ ಅವನಿಗೆ ಎದುರು ಮಾತನಾಡದೇ ಸುಮ್ಮನಿದ್ದೆ. ಆದರೆ ನನಗಿದ್ದ ದೊಡ್ಡ ಅಳುಕು, ನನ್ನ ಹೆಂಡತಿ ಅವಳನ್ನು ಹೇಗೆ ಸ್ವೀಕರಿಸುವಳೋ ಎಂದು. ಆದರೆ ಮೊದಲ ದಿನವೇ ಆರತಿ ತಟ್ಟೆಯೊಂದಿಗೆ ಅವಳನ್ನು ಸ್ವಾಗತಿಸಿ ಅಚ್ಚರಿ ಮೂಡಿಸಿದ್ದಳು. ಮೊದ ಮೊದಲು ಅವಳ ಜೊತೆ ಹೊರಗೆ ಹೋದಾಗ ತುಂಬಾ ಮುಜುಗರವಾಗುತ್ತಿತ್ತು. ಎಲ್ಲರ ಕಣ್ಣು ನಮ್ಮ ಮೇಲೇ ಇದೆಯೆನೋ ಎಂದು ಸಂಕೋಚದಿಂದ ಮುದುಡಿ ಹೋಗುತ್ತಿದ್ದೆ. ಆದರೆ ಬರ್ತಾ ಬರ್ತಾ ನನಗವಳು, ಅವಳಿಗೆ ನಾನು ಹೋಂದಿಕೊಂಡೆವು. ಸುತ್ತಲಿನ ಜನರೂ ದುರುಗುಟ್ಟಿ ನೋಡುವುದು ಕ್ರಮೇಣ ಅಭ್ಯಾಸವಾಯ್ತೊ ಅಥವ ಅವರು ಹಾಗೆ ನೋಡುವುದ ಕಡಿಮೆ ಮಾಡಿದರೋ ಒಟ್ಟಿನಲ್ಲಿ ಅವಳ ಸಂಗ ನನಗೆ ರೂಢಿಯಯ್ತು.

 

ಅವಳು ನನ್ನನ್ನು ಎಷ್ಟು ಕಾಳಜಿವಹಿಸಲು ಶುರು ಮಾಡಿದಳೆಂದರೆ, ತಾನು ಮಳೆಯಲ್ಲಿ ನೆಂದು ತೊಪ್ಪೆಯಾದರೂ ನನಗೊಂದು ಹನಿ ಸಿಡಿಯಲೂ ಬಿಡುತ್ತಿರಲಿಲ್ಲ.  ತಾನು ಬಿಸಿಲಲ್ಲಿ ಬೆಂದರೂ ನನಗೆ ತಂಪನೆರಗಿದಳು. ಅಂಥ ತ್ಯಾಗಮಯಿ ಅವಳು. ನನ್ನ ಮಾತೇ ಅವಳಿಗೆ ವೇದ ವಾಕ್ಯ. ನಾನು ಹೇಳಿದಂತೆ ಕೇಳತೊಡಗಿದಳು. ಆದರೆ ದಿನಕಳೆದಂತೆ ನಾನು ಅವಳ ಮೇಲೆ ತುಂಬಾ ಅವಲಂಬಿತನಾಗತೊಡಗಿದೆ. ಅವಳನ್ನು ಬಿಟ್ಟು ಎಲ್ಲೂ ಹೋಗಲಾರದಷ್ಟು, ನಾನವಳಿಗೆ ಹೊಂದಿಕೊಂಡು ಬಿಟ್ಟೆ. ನನ್ನ ಹೇಂಡತಿಗದು ಇಷ್ಟವಾಗದಾಯ್ತು. ಯಾವ ಹೇಂಡತಿ ತಾನೆ ಇಷ್ಟ ಪಟ್ಟಾಳು? ತಾನೂ ಅವಳ ಜೊತೆ ಇದ್ದಾಗ ಖುಷಿಯಿಂದ ಇರುತ್ತಿದ್ದ ಹೆಂಡತಿ, ನಾನು ಅವಳ ಜೊತೆ ಒಬ್ಬನೇ ಹೋದರೆ ಕೋಪ ಮಾಡಿ ಕೊಳ್ಳತೊಡಗಿದಳು. ಬರ ಬರುತ್ತಾ ಅವಳ ಅರೈಕೆ ಹೆಚ್ಚಾದುದರಿಂದಲೋ ಏನೋ ನನ್ನ ದೇಹದ ಗಾತ್ರವೂ ಹೆಚ್ಚಾಗತೊಡಗಿತು. ಅದೂ ಅಲ್ಲದೇ ಕೆಲವು ಕಡೆ ಅವಳ ದೆಸೆಯಿಂದ ನನ್ನ ವ್ಯಕ್ತಿತ್ವಕ್ಕೂ ಒಂದು ತೂಕ ಬಂತು. ಕೆಲವರು ಅವಳು ನನ್ನ ಜೊತೆಗಿರುವ ಕಾರಣಕ್ಕೆ ನನಗೆ ಜಾಸ್ತಿಯೇ ಮರ್ಯಾದೆ ಕೊಡತೊಡಗಿದರು. ಏನೆ ಆದರೂ ನಾನೂ ಆ ಒಂದು ಅಟೆನ್ಷನ್ ಇಷ್ಟ ಪಡತೊಡಗಿದೆ. ಅವಳು ಮಾತ್ರ ನಿರ್ಲಿಪ್ತಳಾಗಿದ್ದಳು!

 

ಈ ಒಂದು ಖುಷಿಯನ್ನು ಸಹಿಸಲಾರದವರ ಕಣ್ಣು ಬಿತ್ತೋ ಏನೊ. ಒಂದು ದಿನ ನಾವಿಬ್ಬರೂ ರಸ್ತೆಯಲ್ಲಿ ಬರುತ್ತಿರುವಾಗ ಒಂದು ಸಣ್ಣ ದುರ್ಘಟನೆ ನಡೆದು ಹೋಯ್ತು. ಬೈಕಿನವನೊಬ್ಬ ಅವಳಿಗೆ ಬಡಿಸಿಕೋಂಡು ಹೋದ. ನಾನು ಅವನ ಮೇಲೆ ಕೂಗಾಡಿದೆ. ಅವಳಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾದರೂ ತುಟಿ ಪಿಟಕ್ಕೆನ್ನದೇ ಎಲ್ಲಾ ಸಹಿಸಿಕೊಂಡಳು. ಅದು ಮೊದಲ ಸಲವಲ್ಲವೇ? ನನ್ನ ಕಣ್ಣಲ್ಲಿ ಸಣ್ಣಗೆ ನೀರು ಜಿನುಗುತ್ತಿತ್ತು. ಅವಳನ್ನು ರಕ್ಷಿಸಲಾಗಲಿಲ್ಲವೆಂಬ ಅಪರಾಧಿ ಮನೋಭಾವ ನನ್ನ ಮನದಲ್ಲಿ ಇನ್ನೂ ಇದೆ.

 

ನನ್ನ ಬದುಕಿನ ಯಾವುದೆ ಕಷ್ಟದ ದಾರಿಯಲ್ಲೂ ಅವಳು ನನ್ನ ಜೊತೆಗೆ ಬರುತ್ತಾಳೆ. ಕಲ್ಲು ಮುಳ್ಳುಗಳಿರಲಿ ಎಂಥದೇ ತಿರುವುಗಳಿರಲಿ ಅವಳು ನನ್ನ ಕೈ ಬಿಟ್ಟಿಲ್ಲ, ಸುಸ್ತಾಗಿದೆಯೆಂದು ನಿಟ್ಟುಸಿರಿಟ್ಟಿಲ್ಲ. ನಾನೊಬ್ಬ ಕಟುಕನಂತೆ ಬಾಳಿನ ಪಯಣದಲ್ಲಿ ಅವಳನ್ನು ತುಂಬಾ ದಣಿಸಿದ್ದೇನೆ. ಅದಕ್ಕವಳು ಮರು ಮಾತಾಡದೇ ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡಿದ್ದಾಳೆ. ಅಂಥವಳನ್ನು ಬಿಟ್ಟಿರಲು ಹೇಗೆ ಸಾಧ್ಯ? ಒಂದೊಂದು ಸಲ ಅವಳಿಗಿಂತ ಚೆನಾಗಿರುವವಳನ್ನು ನಾನು ಕಣ್ಣಗಲಿಸಿ ನೋಡುವುದ ನೋಡಿಯೂ ಕೂಡ ಅವಳೆಂದೂ ನನ್ನ ಮೇಲೆ ಮುನಿಸಿಕೊಂಡಿಲ್ಲ. ಅದು ಅವಳ ದೊಡ್ಡ ಗುಣ. ಅವಾಗಾವಾಗ ನಾನೇ ನನ್ನ ಕೈಯಾರೆ ಅವಳಿಗೆ ನೀರೆರೆದು ಸ್ನಾನ ಮಾಡಿಸುತ್ತೇನೆ…….  ಛೆ ಛೆ .. ಏನೇನೋ ಯೋಚಿಸಿ ತಪ್ಪು ತಿಳ್ಕೋಬೇಡಿ. ನಾನಿಷ್ಟೊತ್ತು ಹೇಳಿದ್ದ ನನ್ನ ನೆಚ್ಚಿನ ಕಾರಿನ ಬಗ್ಗೆ! ಇವತ್ತಿಗೆ ಸರಿಯಾಗಿ ನನ್ನ ಜೊತೆ ಐವತ್ತು ಸಾವಿರ ಕಿಲೋಮೀಟರು ಕ್ರಮಿಸಿದ ನನ್ನ ನಲ್ಲೆ "ಅವಳು" . I JUST LOVE HER!!

1 comment: