Wednesday, July 3, 2024

ಪಂಜರದ ಕೋಳಿಯ ಕತೆ

ಅವತ್ತೊಂದು ಕೋಳಿ ಸಾಕಾಣಿಕಾ ಕೇಂದ್ರಕ್ಕೆ ಹೋಗಿದ್ದೆ. ಅಲ್ಲಿ ಒಂದು ಲಕ್ಷ ಕೋಳಿಗಳು ಇದ್ದವು. ಹುಟ್ಟಿದಾಗಿನಿಂದ ಸಾಯುವತನಕ ಪಂಜರದಲ್ಲಿಯೇ ಅವುಗಳ ವಾಸ. ಅದೇ ಜೀವನ ಅಂತ ಅವೂ ಕೂಡ ಅಂದುಕೊಂಡೆ ಜೀವಿಸುತ್ತವೆ(??). 

ಅಂಥದ್ದರಲ್ಲಿ ಒಂದು ಕೋಳಿ ಹೇಗೋ ಪಂಜರದಿಂದ ಹೊರಗೆ ಬಂದುಬಿಟ್ಟಿತು! ನಿಜ ಹೇಳಬೇಕೆಂದರೆ ಅದಕ್ಕೆ ಸ್ವತಂತ್ರ ಸಿಕ್ಕಿತ್ತು. ಅದು ಸ್ವಲ್ಪ ಪ್ರಯತ್ನ ಮಾಡಿದ್ದರೂ ಹೊರಗೆ ನುಸುಳಿ ಪಾರಾಗಬಹುದಿತ್ತು. ಆದರೆ ಹಾಗಾಗಲಿಲ್ಲ...

ಅದಕ್ಕೆ ತುಂಬಾ ಭಯ ಶುರು ಆಯ್ತು. ಎಲ್ಲರೂ ಪಂಜರದೊಳಗೆ ಸುರಕ್ಷಿತವಾಗಿದ್ದಾರೆ ತಾನು ಮಾತ್ರ ಹೊರಗೆ ಬಂದುಬಿಟ್ಟೆ, ಛೇ ತಪ್ಪು ಮಾಡಿಬಿಟ್ಟೆ ಅಂತ ಅನಿಸಿ ಮತ್ತೆ ಪಂಜರದೊಳಗೆ ನುಸುಳುವ ವ್ಯರ್ಥ ಪ್ರಯತ್ನ ಮುಂದುವರಿಸಿತು. ಅದಕ್ಕೆ ಒಳಗೆ ಹೋಗಲು ಸಾಧ್ಯವಾಗದಾದಾಗ ಇನ್ನಷ್ಟು ಹತಾಶೆಗೆ ಒಳಗಾಯಿತು. 

ಅಯ್ಯೋ ಎಲ್ಲರೂ ಎಷ್ಟು ಚೆನ್ನಾಗಿದ್ದಾರೆ ನಾನು ಮಾತ್ರ ಹೀಗೆ ಮಾಡಿಕೊಂಡುಬಿಟ್ಟೆನಲ್ಲ ಅಂತ ಬೇಜಾರಿನಲ್ಲಿ ಅದು ಅತ್ತಿತ್ತ ಅಡ್ಡಾಡುತ್ತಿತ್ತು. 

ಅದರ ಪರಿಸ್ಥಿತಿ ನೋಡಿ ಪಂಜರದೊಳಗೆ ಇದ್ದ ಕೆಲವು ಕೋಳಿಗಳು ಬಿದ್ದು ಬಿದ್ದು ನಗುತ್ತಿದ್ದವು. ಕಾಲಕಾಲಕ್ಕೆ ಊಟ, ನೀರು ಎಲ್ಲಾ ಸಿಗುತ್ತಿತ್ತು. ಸುಮ್ಮನೆ ನಮ್ಮ ಜೊತೆಗೆ ಇದ್ದಿದ್ದರೆ ಆಗಿತ್ತು. ಇದಕ್ಯಾಕೆ ಬೇಕಿತ್ತು ಊರ ಉಸಾಬರಿ. ಅಂತ ಇನ್ನೂ ಹಲವು ಕೋಳಿಗಳು ತಮ್ಮ ತಮ್ಮಲ್ಲೇ ಗಾಸಿಪ್ ಮಾಡಿಕೊಳ್ಳುತ್ತಿದ್ದವು. 

ತನ್ನ ಎಲ್ಲ ಸಹಪಾಠಿ ಕೋಳಿಗಳ ಕುಹಕ, ಕೇಕೆ, ನಗು ಎಲ್ಲಾ ಕಡೆಗಳಿಂದ ಏಕಕಾಲಕ್ಕೆ ಈ ಏಕಾಂಗಿ ಕೋಳಿಯ ಕಿವಿಗೆ ಅಪ್ಪಳಿಸಿ ಅದು ಇನ್ನೂ ಅಧೀರ ಆಯ್ತು.. ಅಷ್ಟೊತ್ತಿಗೆ ಎಲ್ಲಿಂದಲೋ ಆಪತ್ಭಾಂದವನಂತೆ ಬಂದ ಒಬ್ಬ ವ್ಯಕ್ತಿ ಆ ಕೋಳಿಯನ್ನು ವಾಪಸ್ಸು ಪಂಜರದೊಳಗೆ ತುರುಕಿದ. 

ಅಬ್ಬಾ ಬದುಕಿದೆಯಾ ಬಡ ಜೀವವೇ ಅಂತ, ಅಸಾಧ್ಯ ಹೆರಿಗೆ ನೋವಿನೊಂದಿಗೆ, ಅವತ್ತಿನ ದಿನದ ಮೊಟ್ಟೆಯನ್ನು ಹೆತ್ತು ನಿಟ್ಟುಸಿರು ಬಿಟ್ಟು ಮುಂದಿಟ್ಟ ಆಹಾರವನ್ನು ಕುಕ್ಕಿ ಕುಕ್ಕಿ ತಿನ್ನತೊಡಗಿತು...

ಗುರುಪ್ರಸಾದ ಕುರ್ತಕೋಟಿ 



 

Monday, July 15, 2019

ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...!

ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...!
ಯಾಕೆಂದರೆ ಅವರಿಗೆ ನೀರಿನ ಮಹತ್ವ ಗೊತ್ತಿಲ್ಲ.
ರಾಜ್ಯದ ಎಷ್ಟೋ ಕಡೆ, ಸ್ನಾನ ಮಾಡುವುದಿರಲಿ ಕುಡಿಯಲೂ ನೀರಿಲ್ಲ ಅಂತ ಅವರಿಗೆ ದೇವರಾಣೆಗೂ ಗೊತ್ತಿಲ್ಲ.
ದುಡ್ಡು ಬೀಸಾಕಿದರೆ ನೀರು ಸಿಗುತ್ತೆ ಅದೇನ್ ಮಹಾ ಅಂತ ಅವರ ತಿಳುವಳಿಕೆ.

ಇರಾನ್ ನಿಂದ ಎಣ್ಣೆ ಬರುತ್ತಿಲ್ಲ. ಇನ್ನೂ ಒಂಬತ್ತು ದಿನ ಅಷ್ಟೇ ಪೆಟ್ರೋಲ್ ಸ್ಟಾಕ್ ಇರೋದು ಅನ್ನುವ ಸುದ್ದಿ ಕೇಳಿ ಭಯಪಟ್ಟು ಸರತಿಯಲ್ಲಿ ನಿಂತು ಪೆಟ್ರೋಲು ಹಾಕಿಸಿಕೊಳ್ಳುವ ಇವರಿಗೆ ಇನ್ನು ಕೆಲವೇ ವರ್ಷಗಳಲ್ಲಿ ಕುಡಿಯಲೂ ನೀರು ಸಿಗದು ಎಂಬ ವಿಚಾರ ಇನ್ನೂ ಅರಿವಾಗಿಲ್ಲ..
ಅಂಗಳ ತೊಳೆಯಲು ಅಷ್ಟೆಲ್ಲ ನೀರು ಬಳಸಬೇಡಿ ಅಂದರೆ "ಅಯ್ಯೋ ವಿಜ್ಞಾನಿಗಳು ಏನೋ ಒಂದು ಕಂಡು ಹಿಡೀತಾರೆ ಬಿಡಿ" ಅನ್ನುವ ಉಡಾಫೆ ಅವರದು.
...ಇಂಥವರ ಕಾರು ತಳ ತಳ ಹೊಳೆಯಲು , ಅವರ ಅಂಗಳದ ಜೊತೆಗೆ ಮುಂದಿರುವ ರೋಡು ತೊಳೆಯಲು ಶರಾವತಿ, ಕಾವೇರಿ ನೀರನ್ನು ಹಾಗೂ ಎಷ್ಟೋ ಸಾವಿರ ಕೋಟಿ ದುಡ್ಡನ್ನು ವ್ಯರ್ಥ ಮಾಡುವುದರಲ್ಲಿ ಏನು ಅರ್ಥವಿದೆ? ಅಥವಾ ನಮಗೆ ತಿಳಿಯದ ಯಾವುದೋ "ಅರ್ಥಶಾಸ್ತ್ರ"...??

Monday, August 6, 2018

ಹೇಳುವುದಕ್ಕೆ ಕೇಳುವುದಕ್ಕೆ ಇವರಿಗೆ ಹಕ್ಕಿದೆಯೇ?:

ಕೆಲವು ದಿನಗಳ ಹಿಂದೆ ಒಂದು ಪತ್ರಿಕೆಯಲ್ಲಿ ನಮ್ಮ ಭಾರತದ ಸಮಸ್ಯೆಗಳ ಕುರಿತು, ಎಷ್ಟೋ ವರ್ಷಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಒಬ್ಬರು ಬರೆದ “ಹೇಳುವವರು ಕೇಳುವವರು ಇಲ್ಲದ ದೇಶ” ಎಂಬ ಲೇಖನ ಓದಿದೆ. ಭಾರತದ ಬಗೆಗಿನ ಅವರ ಹೊರನೋಟ ಅದಾಗಿತ್ತು. ಅವರು ಇಲ್ಲಿಗೆ ಕೆಲ ದಿನಗಳ ಮಟ್ಟಿಗೆ ಬಂದಾಗ ಆದ ಕಟು ಅನುಭವಗಳ ಕುರಿತು ಪ್ರಸ್ತಾಪಿಸಿದ್ದರು. ಟ್ಯಾಕ್ಸಿಯ ಡ್ಯಾಶ್ ಬೋರ್ಡ್ ಅಲ್ಲಿ ಇಲಿ ಬಂತಂತೆ… ಯಾವ್ದೂ ಸಿಸ್ಟಮ್ ಕೆಲಸ ಮಾಡಲ್ವಂತೆ… ಇಲ್ಲಿನ ಜನ ಏನು ಮಾಡಿದರೂ ಸುಮ್ಮನಿರುತ್ತಾರಂತೆ… ಹಾಗೆ ಹೀಗೆ, ನೂರಾರು ಕಂಪ್ಲೇಂಟ್ ಗಳು …
ಓದಿದ ಮೇಲೆ ಬೇಸರದ ಜೊತೆಗೆ ಆಶ್ಚರ್ಯವೂ ಆಯಿತು! ಅದೇ ಕಾರಣಕ್ಕೆ ಪ್ರತಿಕ್ರಿಯಿಸಲೇ ಬೇಕು ಅನಿಸಿತು. ನನ್ನ ಈ ಪ್ರತಿಕ್ರಿಯೆಯನ್ನು ಅಮೆರಿಕೆಯ ಬಗೆಗಿನ ನನ್ನ ಒಳನೋಟ ಅನ್ನಬಹುದೇನೋ! ಯಾಕೆಂದರೆ ಅಮೇರಿಕಾದ ಜನ ಜೀವನವನ್ನು ಅವರಷ್ಟಲ್ಲದಿದ್ದರೂ ಅಷ್ಟಿಷ್ಟು ನಾನೂ ಕಂಡಿದ್ದೇನೆ. ಹಾಗಂತ ನಮ್ಮಲ್ಲಿರುವ ಸಮಸ್ಯೆಗಳನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ನಾವು ಭಾರತೀಯರು ಇನ್ನೂ ತುಂಬಾ ತುಂಬಾ ಸುಧಾರಿಸಬೇಕಿದೆ ಎಂಬುದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತಲೇ ಈ ಲೇಖನ ಬರೆಯುವ ಸಾಹಸ ಮಾಡುತ್ತಿದ್ದೇನೆ…
ಅಮೆರಿಕೆಗೆ ಹೋದ ಹೊಸತರಲ್ಲಿ ನಾನು ಟ್ಯಾಕ್ಸಿಗಳ ಮೇಲೆ ಅವಲಂಬಿತನಾಗಿದ್ದೆ. ಯಾಕೆಂದರೆ ನನ್ನ ಬಳಿ ಆಗಿನ್ನೂ ಕಾರ್ ಇರಲಿಲ್ಲ. ಅಲ್ಲಿ ಕಾರಿಲ್ಲವೆಂದರೆ ಕಾಲಿಲ್ಲದಂತೆಯೇ ಸೈ. ಸಾರ್ವಜನಿಕ ಸಾರಿಗೆ ಅಷ್ಟು ಅನುಕೂಲಕರವಾಗಿಲ್ಲ. ದೊಡ್ಡ ದೊಡ್ಡ ಶಹರಗಳಲ್ಲಿ ತಕ್ಕ ಮಟ್ಟಿಗೆ ಇರುತ್ತಾದರೂ ಕಾರಿನ ಮೇಲಿನ ಅವಲಂಬನೆ ಅಲ್ಲಿ ತುಸು ಜಾಸ್ತಿನೆ. ಕೊಳಕು ಪೋಷಾಕು ಧರಿಸಿ, ಗಡ್ಡಧಾರಿಯಾಗಿ, ವಿಚಿತ್ರವಾಗಿ ಕಾಣುತ್ತಿದ್ದ ಡ್ರೈವರ್ ಒಬ್ಬ ಆಗಾಗ ನನ್ನನು ಪಿಕಪ್ ಮಾಡಲು ಬರುತ್ತಿದ್ದ. ಬಹುಶಃ ಗಿರಾಕಿ ಇಲ್ಲದೆ ಗಿರಕಿ ಹೊಡೆಯುವ ಸಮಯದಲ್ಲಿ ಕಾರಿನಲ್ಲಿ ಕುಳಿತೆ ಸಿಗರೇಟು ಸೇದುತ್ತಿದ್ದ ಅನಿಸುತ್ತೆ. ಒಟ್ಟಿನಲ್ಲಿ ಒಂಥರಾ ಗಬ್ಬು ವಾಸನೆ ಕಾರಲ್ಲೆಲ್ಲ ಹರಡಿರುತ್ತಿತ್ತು. ಆ ನಾತವನ್ನು ಸಹಿಸದೆ ಒದ್ದಾಡುತ್ತಿದ್ದೆ. ಟ್ಯಾಕ್ಸಿ ಬುಕ್ ಮಾಡುವಾಗಲೆಲ್ಲ ಆ ಡ್ರೈವರ್ ಮಾತ್ರ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಹಾಗಂತ ಅಲ್ಲಿನ ಎಲ್ಲಾ ಡ್ರೈವರುಗಳೂ ಹಾಗಿರಲಿಲ್ಲ ಬಿಡಿ. ಅದೇ ತರಹ ಇವರಿಗೆ ಅನುಭವವಾದಂತೆ ಭಾರತದ ಎಲ್ಲಾ ಟ್ಯಾಕ್ಸಿಗಳ ಡ್ಯಾಶ್ ಬೋರ್ಡ್ ನಿಂದ ಇಲಿಗಳು ಜಿಗಿಯೋಲ್ಲ! ಪಾಪ ಅವತ್ತು ಅವರ ಅದೃಷ್ಟ ಸರಿ ಇರಲಿಲ್ಲ ಅಥವಾ ಅದರ ಅದೃಷ್ಟ ಚೆನ್ನಾಗಿರಲಿಲ್ಲ ಅಷ್ಟೇ.
ಅಧಾರ ಸಂಖೆಯಿಲ್ಲದೆ ಸಾಫ್ಟ್ವೇರ್ ಕೆಲಸ ಮಾಡೋಲ್ಲ ಅಂತ ಇಲ್ಲಿನ ಬ್ಯಾಂಕ್ ನವರು ಹೇಳಿದರು ಅಂತ ಬರೆದಿದ್ದಾರೆ. ಅಮೆರಿಕೆಯಲ್ಲೂ ಕೂಡ ಕಂಪ್ಯೂಟರೇ ದೈವ. ಅದು ಏನಾದರೂ ಬೇಕು ಅಂದರೆ ಕೊಡಬೇಕು ಅಷ್ಟೇ! ಇಲ್ಲಿಗಿಂತ ಕಂಪ್ಯೂಟರ್ ಮೇಲಿನ ಅವಲಂಬನೆ ಅಲ್ಲಿ ಜಾಸ್ತಿ. ಇಲ್ಲಿ ಅಧಾರ ಇದ್ದಂತೆ ಅಮೆರಿಕೆಯಲ್ಲಿ ಎಲ್ಲದಕ್ಕೂ SSN (Social Security Number) ಕೇಳುತ್ತಾರೆ. ಹೋದ ಹೊಸದರಲ್ಲಿ ನನ್ನ ಬಳಿ ಆ ನಂಬರ್ ಇಲ್ಲ ಅಂದಾಗ ಅಲ್ಲಿನ ಒಬ್ಬ ಸರಕಾರೀ ಅಧಿಕಾರಿ ಅದು ಬೇಕೇ ಬೇಕು ನಮ್ಮ ಸಾಫ್ಟ್ವೇರ್ ಕೇಳುತ್ತೆ ಅಂತಲೇ ಹೇಳಿದ್ದ. ಅದಕ್ಕಾಗಿ ಅಲ್ಲಿಲ್ಲಿ ಎಡತಾಕಿದ್ದು ಇದೆ.
ಅಮೆರಿಕೆಯವರೂ ಕೊಡ ಮೊಟ್ಟ ಮೊದಲ ಬಾರಿಗೆ SSN ಅಳವಡಿಸಿಕೊಂಡಾಗಲೂ ಸಮಸ್ಯೆಗಳು ಆಗಿರಲೇಬೇಕು. ಬಹುಶಃ ಇಲ್ಲಿಗಿಂತ ಕಡಿಮೆ ಆಗಿರಬಹುದು ಯಾಕೆಂದರೆ ಅಲ್ಲಿ ಜನಸಂಖ್ಯೆ ಕಡಿಮೆ ಇದೆ. ಜನಸಂಖ್ಯೆ ಜಾಸ್ತಿ ಇದ್ದಾಗ ದೂರದೃಷ್ಟಿ ಎಷ್ಟಿದ್ದರೂ ಸಾಲದು. ಅಧಾರ ಅವಳವಡಿಕೆ ವಿಷಯದಲ್ಲಿ ನಮ್ಮ ದೇಶದಲ್ಲಿ ಆಗುತ್ತಿರುವುದು ಅದೇ. ಅಂದಹಾಗೆ ಜನಸಂಖೆಯ ಬಗ್ಗೆ ಹೇಳುವಾಗ ನೆನಪಾಯ್ತು. ಒಂದು ಸಲ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆ ಜನದಟ್ಟಣೆಯ ರಸ್ತೆಯಲ್ಲಿ ಕಾರ್ ಓಡಿಸುವಾಗ ಮಲ್ಲೇಶ್ವರದಲ್ಲಿ ಓಡಿಸಿದ ಅನುಭವ ಆಗಿ ಪುಳಕಿತನಾದೆ! ಇಲ್ಲಾದರೂ ನಮ್ಮ ಜನ ರೂಲ್ಸ್ ಅನುಸರಿಸುತ್ತಾರೆ. ಅಲ್ಲಿ ರೆಡ್ ಸಿಗ್ನಲ್ ಬಿದ್ದಾಗಲೂ ಗಾಡಿ ಓಡಿಸಿಕೊಂಡು ಹೋಗುತ್ತಿದ್ದರು. ಲೇನ್ ಯಾವನೂ ಫಾಲೋ ಮಾಡುತ್ತಿರಲಿಲ್ಲ. ಆದಷ್ಟು ಬೇಗ ಮುಂದೆ ತೂರಿಕೊಳ್ಳುವುದೇ ಅವರ ಧ್ಯೇಯ. ಹಾಗೆ ಮಾಡಿದವರು ಅಲ್ಲಿಯವರೆ, ಭಾರತೀಯರಲ್ಲ! ಆಮೇಲೆ ಪಾರ್ಕಿಂಗಿಗೆ ಜಾಗ ಸಿಗದೇ ಒದ್ದಾಡಿದೆವು.
ಇನ್ನೊಂದು ಸಲ ನಯಾಗರ ನೋಡಲು ಹೋಗುವಾಗ ಮಧ್ಯದಲ್ಲಿ ಒಂದು ಹೋಟೆಲಗೆ ಹೋದೆವು. ಅಲ್ಲಿ ಜನ ಕಿಕ್ಕಿರಿದು ತುಂಬಿರುತ್ತಾರೆ. ಅಲ್ಲಿನ ಟಾಯ್ಲೆಟ್ ಬಳಸಲು ಹೋದಾಗ ಒಳಗೆ ದುರ್ಗಂಧ ಎಷ್ಟಿತ್ತು ಅಂದ್ರೆ ನಮ್ಮ ಬಸ್ ಸ್ಟಾಂಡ್ ನ ಪಬ್ಲಿಕ ಟಾಯ್ಲೆಟ್ ನೆನಪಾಯ್ತು… ನಾ ಹೇಳೋದು ಇಷ್ಟೇ. ಯಾವುದೇ ದೇಶವಿದ್ದರೂ ಜನಸಂಖೆ ಜಾಸ್ತಿ ಇದ್ದಾಗ ಎಷ್ಟು ವ್ಯವಸ್ಥೆ ಮಾಡಿದರೂ ಕಡಿಮೆಯೇ.
ನಾನಲ್ಲಿದ್ದಾಗ ಆದ ಇನ್ನೂ ಕೆಲವು ಅನುಭವಗಳನ್ನು ಹಂಚಿಕೊಳ್ಳಬೇಕೆನಿಸುತ್ತದೆ. ಅಲ್ಲಿ ತುಂಬಾ ವರ್ಷಗಳಿಂದ ನೆಲೆಸಿರುವ ಕೆಲವು ಭಾರತೀಯರು ನಮ್ಮ ದೇಶವನ್ನು ಹೊಸ ತಂತ್ರಜ್ಞಾನದ ಅರಿವಿಲ್ಲದ ದೇಶ ಅಂತ ತಿಳಿದಿದ್ದಾರೆ ಎನಿಸುತ್ತದೆ. ಒಂಬತ್ತು ವರ್ಷದಿಂದ ತನ್ನ ದೇಶವನ್ನು ಭೇಟಿ ಕೂಡ ಮಾಡದ ಒಬ್ಬರು ಭಾರತೀಯ(?) ಗೆಳೆಯ ಇಂಡಿಯಾದಲ್ಲಿ 4G internet ಇದೆಯೇ ಎಂಬ ಮೂರ್ಖತನದ ಪ್ರಶ್ನೆ ಕೇಳಿದ್ದರು! ಅವರು ಹೇಳುವ ಸಿನಿಮಾ ಹೆಸರುಗಳು ಕೂಡ ಮಾಲಾಶ್ರಿ ಕಾಲದವು. ಅಷ್ಟು outadated ಆದ, ಭಾರತದ ಬಗ್ಗೆ ಕನಿಷ್ಠ ಜ್ಞಾನ ಹೊಂದಿರುವ ಅವರಿಗೆ ಏನಂತ ಹೇಳುವುದು?
ಇನ್ನೊಂದು ಸಲ, ಅಮೆರಿಕೆಯ ನಾಗರಿಕರಾಗಿರುವ ಗೆಳೆಯನ ಹೆಂಡತಿಯೊಬ್ಬರು “ಅಯ್ಯೋ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳು ಒಬ್ಬೊಬ್ರೆ ಹೇಗಪ್ಪ ಅಡ್ಡಾಡ್ತಾರೆ. ಅಲ್ಲಿ ತುಂಬಾ insecure feel ಆಗುತ್ತೆ” ಅಂತ ಅಂದಿದ್ದರು. ಅಂದರೆ ಇವರ ಭಾವನೆಯಲ್ಲಿ ಭಾರತ ಏನೂ ಸುರಕ್ಷಿತವಲ್ಲ. ಹೆಣ್ಣು ಮಕ್ಕಳಂತೂ ಬೀದಿಯ ಹೊರಗೆ ಬರದಿರುವಂತಹ ಪರಿಸ್ಥಿತಿ! ನಾನು ಹೇಳಿದೆ “ತಾಯಿ ನಮ್ಮ ದೇಶ ನೀವು ಅಂದುಕೊಂಡಷ್ಟು ಕೆಟ್ಟದಾಗೇನಿಲ್ಲ. ನಮ್ಮ ಮನೆಯ ಹೆಣ್ಣು ಮಕ್ಕಳು ಆರಾಮವಾಗಿ ಬೀದಿಯಲ್ಲಿ ಅಡ್ಡಾಡುತ್ತಾರೆ. ನಿಮ್ಮ ಅಮೆರಿಕೆಯ ಬೀದಿಯಲ್ಲಿ ಎಷ್ಟೋ ಸಲ ತಲೆತಿರುಕರು ಎರ್ರಾ ಬಿರ್ರಿ ಗುಂಡು ಹಾರಿಸುವುದ ನೋಡಿದಾಗ ನಮ್ಮ ದೇಶ ಎಷ್ಟೋ ಸುರಕ್ಷಿತ ಅನಿಸುತ್ತದೆ” ಅಂದಾಗ ಅವಳಿಗೆ ಕೋಪ ಬಂದಿತ್ತು. ಅಮೆರಿಕನ್ನರಲ್ಲಿ ಬಹುತೇಕರು ಕೂಪ ಮಂಡೂಕಗಳು. ಅವರಿಗೆ ತಮ್ಮ ದೇಶ ಬಿಟ್ಟರೆ ಬೇರೆ ಜಗತ್ತೇ ಇಲ್ಲ. ಅವರಂತೆಯೇ ನಮ್ಮ ಕೆಲವು ದೇಸಿಗಳು ಕೂಡ ಆಗಿದ್ದಾರೆ.
ಕಠಿಣ ಕಾನೂನು ಇದ್ದಾಗ್ಯೂ ಅಲ್ಲಿ ವರ್ಣಭೇದ ತುಂಬಾ ಇದೆ. ಅವರು ಭಾರತೀಯರನ್ನು ಕಾಣುವ ರೀತಿ ನೋಡಿ ನನಗಲ್ಲಿ ತುಂಬಾ ಕಿರಿಕಿರಿ ಆಗುತ್ತಿತ್ತು. ಶಾಲೆಯಲ್ಲಿ ನನ್ನ ಮಗಳಿಗೆ ಅವಳ ಪ್ರಿನ್ಸಿಪಾಲಳೆ ವರ್ಣಭೇದ ಮಾಡುತ್ತಿದ್ದಳು. ಅಲ್ಲಿನ ಸಮಸ್ಯೆಗಳು ಒಂದೇ ಎರಡೇ? ಡಾಕ್ಟರ ಹಾಗೂ ಇನ್ಸೂರೆನ್ಸ್ ಕಂಪನಿಗಳ ಮಾಫಿಯಾ ಕಂಡು ಬೆಚ್ಚಿ ಬಿದ್ದಿದ್ದೇನೆ. ಅಲ್ಲಿನ ಡಾಕ್ಟರ ಒಬ್ಬರ ನಿರ್ಲಕ್ಷದಿಂದ ಗೆಳೆಯನೊಬ್ಬನ ಹೆಂಡತಿಗೆ ಗರ್ಭಪಾತವಾಯಿತು. ಯಾಕೆಂದರೆ ಅಲ್ಲಿನ ವೈದ್ಯರುಗಳು procedure ಪ್ರಕಾರ ಕೆಲಸ ಮಾಡುವವರು. ಅಲ್ಲಿ ವಯಸ್ಸಾದವರ ಏಕಾಂಗಿತನವನ್ನು ನೋಡಿ ಮರುಗಿದ್ದೇನೆ. ನನ್ನ ಮಗಳಿಗೆ ಸ್ವಿಮ್ಮಿಂಗ್ ಹೇಳಿಕೊಡುತ್ತಿದ್ದ ಹೆಣ್ಣುಮಗಳು ಕೆಲಸ ಕಳೆದುಕೊಂಡು ತನ್ನ ಜೀವನ ನಿರ್ವಹಣೆಗೆ ಎಲ್ಲರಿಂದ ಹಣ ಸಂಗ್ರಹಿಸುವುದ ನೋಡಿ ಆಶ್ಚರ್ಯಪಟ್ಟಿದ್ದೇನೆ. ಅಲ್ಲಿಯೂ ನದಿಗಳು ವರ್ಷಗಳಿಂದ ತಮ್ಮೊಳಗೆ ಬೆರೆತು ಹರಿದ ರಾಸಾಯನಿಕಗಳ ದೆಸೆಯಿಂದ ಬೆಂಕಿ ಹತ್ತಿಸಿಕೊಂಡಿವೆ, ಅಲ್ಲಿನ ಕುಡಿಯುವ ನೀರಿನ ಪೈಪುಗಳಲ್ಲಿ ಪಾದರಸದ ಮಟ್ಟ ಏರಿದೆ. ಎಲ್ಲರೂ ಸೋಲಾರ್ ವಿದ್ಯುತ್ ಅಳವಡಿಸಿಕೊಂಡುಬಿಟ್ಟರೆ ಪೆಟ್ರೋಲ್ ಬೆಲೆ ಕುಸಿಯುತ್ತೆ ಅಂತ powerful ಕಂಪನಿಗಳು ಅಲ್ಲಿಯೂ ಲಾಬಿ ಮಾಡುತ್ತವೆ. ಇದನ್ನೆಲ್ಲಾ ನೋಡಿಕೊಂಡು ಅಲ್ಲಿಯ ಜನರೂ ಸುಮ್ಮನಿದ್ದಾರೆ! ಬರೆಯುತ್ತ ಹೋದರೆ ಮುಗಿಯದ ಕತೆ…
…ಒಟ್ಟಿನಲ್ಲಿ ಸಮಸ್ಯೆಗಳು ಎಲ್ಲ ದೇಶಗಳಲ್ಲೂ ಇರುತ್ತವೆ. ಸ್ವರೂಪಗಳು ಭಿನ್ನವಾಗಿರಬಹುದು ಅಷ್ಟೇ. ಇಲ್ಲಿಗಿಂತ ದೊಡ್ಡದಾದ, ಮಾನಸಿಕ ನೆಮ್ಮದಿಯನ್ನೇ ಹಾಳುಗೆಡಿಸುವ ಸಮಸ್ಯೆಗಳು ಅಲ್ಲಿ ಸಾಕಷ್ಟಿವೆ. ಹಾಗಂತ ಇಲ್ಲಿನ ನಮ್ಮ ಸಮಸ್ಯೆಗಳೊಂದಿಗೆ ಬದುಕಬೇಕು ಅಂತ ನಾನು ಹೇಳುತ್ತಿಲ್ಲ. ಅವುಗಳಿವೆ ಅಂತ ಎಲ್ಲರಿಗೂ ಗೊತ್ತು. ಎಲ್ಲರೂ ಹೇಳೋವ್ರೆ ಆದ್ರೆ ಅದರ ಪರಿಹಾರ ಮಾಡೋವ್ರು ಯಾರು? ಅದಕ್ಕೆ ಮೂರು ದಾರಿಗಳಿವೆ. ಒಂದು: ಅದನ್ನು ನಾವೇ ಖುದ್ದಾಗಿಯೋ ಇಲ್ಲ ಸಂಬಂಧಪಟ್ಟವರ ಗಮನಕ್ಕೆ ತಂದು ಬಗೆಹರಿಸುವುದು. ಎರಡು: ಅದರಲ್ಲೊಂದಾಗಿ ಸುಮ್ಮನಿರೋದು. ಮೂರು: ಆ ಸಮಸ್ಯೆಗಳಿಂದ ಓಡಿ ಹೋಗೋದು. ವಿದೇಶಕ್ಕೆ ಹೋಗಿ ನೆಲೆಸಿರುವ ಎಷ್ಟೋ ಭಾರತೀಯರನ್ನು ಗಮನಿಸಿದಾಗ ಸಮಸ್ಯೆಗೆ ಹೆದರಿ ಓಡಿ ಹೋದವರೇ ಅಧಿಕ ಅಂತ ನನ್ನ ಭಾವನೆ. ಅಲ್ಲಿದ್ದ ಎಷ್ಟೋ NRI ಗಳನ್ನು ಕೇಳಿದಾಗ ಭಾರತದಲ್ಲಿ quality of life ಇಲ್ಲ ಎಂಬ ಅವರ ಮಾತು ಕೇಳಿ ತುಂಬಾ ಸಂಕಟ ಅನುಭವಿಸಿರುವೆ. ಹೀಗೆ ಹೇಳಿಕೊಂಡು ದೇಶ ಬಿಟ್ಟು ಹೋಗುವುದು ಕೂಡ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ನೋಡಿ ಕಣ್ಣು ಮುಚ್ಚಿಕೊಂಡಂತೆಯೇ ಅಲ್ಲವೇ? ನಾವು ಆ ವ್ಯವಸ್ಥೆಯಲ್ಲಿ ಇಲ್ಲ ಅಂದ ಮೇಲೆ ಅದರ ಬಗ್ಗೆ ಮಾತನಾಡುವ ಹಕ್ಕೂ ನಮಗಿರುವುದಿಲ್ಲ. ಇದು ದೇಶ ಬಿಟ್ಟು ಅಲ್ಲಿದ್ದ ನನಗೂ ಅನ್ವಯಿಸಿತ್ತು, ಹಾಗೆ ಬಿಟ್ಟು ಹೋದ ಎಲ್ಲರಿಗೂ ಅನ್ವಯಿಸುತ್ತದೆ! ಹೇಳುವವರು ಕೇಳುವವರು ಎಲ್ಲಾ ಅಲ್ಲಿ ಹೋಗಿ ಕೂತರೆ ನಮ್ಮ ದೇಶ ಉದ್ಧಾರ ಮಾಡೋರು ಯಾರು? ಹಾಗೆ ಹೋದವರಿಗೆ ನಾನು ಹೇಳೋದಿಷ್ಟೇ… ಇಲ್ಲಿ ತುಂಬಾ ಸಮಸ್ಯೆಗಳು ಇವೆ, ಅವು ನಮ್ಮವೇ! ಬನ್ನಿ ನಮ್ಮ ದೇಶವನ್ನು ಕಟ್ಟೋಣ. ಅಲ್ಲಿ ನೀವು ಕಂಡು ಅನುಭವಿಸಿದ ಒಳ್ಳೆಯದನ್ನು ಇಲ್ಲೂ ಅಳವಡಿಸುವ ಪ್ರಯತ್ನ ಮಾಡೋಣ. ನಿಮ್ಮ ನಿರೀಕ್ಷೆಗೆ ತಕ್ಕಂತೆ ನಮ್ಮ ದೇಶವನ್ನು ಬೆಳೆಸೋಣ. ಹಾಗಿದ್ದರೆ ಬನ್ನಿ …. ಇಲ್ಲವೆ ಸುಮ್ಮನಿರಿ!

Tuesday, June 30, 2015

ಹಿಮಪಾತ

(http://www.panjumagazine.com/?p=11120)

ಇವತ್ಯಾಕೆ ಇಷ್ಟೊಂದು ಬೇಗ ಎಚ್ಚರ ಆಯ್ತು ಅಂತ ಗೊತ್ತಾಗಲಿಲ್ಲ ವೆಂಕಟ್ ಗೆ. ಬೇಗ ಎದ್ದು ಏನು ಮಾಡುವುದೆಂದು ಒಂದು ಕ್ಷಣ ಅವನಿಗೆ ಹೊಳೆಯಲಿಲ್ಲ. ಬೆಂಗಳೂರಿನಲ್ಲಾಗಿದ್ದರೆ ಎದ್ದ ಕೂಡಲೇ ಬಾಗಿಲಿಗೆ ಸಿಗಿಸಿರುತ್ತಿದ್ದ ಪೇಪರ್ ಎತ್ತಿಕೊಂಡು ಓದಬಹುದಿತ್ತು.  ಈ ಪರದೇಶದಲ್ಲಿ ಹಾಗಿಲ್ಲವಲ್ಲ. ಸುದ್ದಿ ತಿಳಿಯಬೇಕೆಂದರೆ  ಒಂದೋ ಟೀವಿ, ಸ್ಮಾರ್ಟ್ ಫೋನ್, ಇಲ್ಲವೇ ಟಚಿಠಿಣoಠಿ ನಲ್ಲೆ ನೋಡಿ ತಿಳಿಯಬೇಕು. ಅವನಿಗೆ ಅಲ್ಲಿಯ ಸ್ಥಳೀಯ ಸುದ್ದಿಯ ತಿಳಿದುಕೊಳ್ಳುವ ಬಗ್ಗೆ ಉತ್ಸಾಹವೇನಿರಲಿಲ್ಲ. ಇಲ್ಲಿನ ಸುದ್ದಿಗಳೂ ಸುದ್ದಿಗಳೇ? ಒಂದು ಸಣ್ಣ ಬಿರುಗಾಳಿ ಬಂದರೇನೇ ಇಡೀ  ದಿನ ಅಲರ್ಟ್ ಅಲರ್ಟ್ ಅಂತ ಬೊಬ್ಬೆ ಹೊಡಿತಿರ್ತಾರೆ. ಇಂತಹ ಸಣ್ಣ ಪುಟ್ಟ ಬಿರುಗಾಳಿಗಳೆಲ್ಲ ನಮ್ಮ ದೇಶದಲ್ಲಿ ಲೆಕ್ಕಕ್ಕೇ ಇಲ್ಲ. ಆದರೂ ಕೆಲವೊಮ್ಮೆ ಬಂತೆಂದರೆ ಎಲ್ಲವನ್ನೂ ನುಂಗಿ ಹಾಕುವ ಗಾಳಿಯೇ ಇಲ್ಲಿ ಬೀಸುತ್ತೆ. ಅದಕ್ಕೆ ಇರಬೇಕು ಇಲ್ಲಿನ ಹವಾಮಾನ  ಮುನ್ಸೂಚನೆಗಳು ಸಣ್ಣ ಸಣ್ಣ ವಿಷಯಗಳನ್ನೂ ದೊಡ್ಡದಾಗೆ ಹೆಳುತ್ತವೆ. 
ಬೇಗ ಎದ್ದಿದ್ದಕ್ಕೋ ಅಥವಾ ಅಮೆರಿಕಕ್ಕೆ ಬಂದು ತುಂಬಾ ದಿನಾ ಆಗಿದ್ದಕ್ಕೋ, ವೆಂಕಣ್ಣನಿಗೆ ಯಾಕೋ ಬೆಂಗಳೂರು ನೆನಪಾಗಿ  ಹೃದಯ ಭಾರವಾಗಿತ್ತು. ಊರಲ್ಲಿದ್ದ ಅಪ್ಪ, ಅಮ್ಮ, ತನ್ನ ಮನೆ,  ಗೆಳೆಯನೊಬ್ಬನ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಮಾಡಿಕೊಂಡ ಜಗಳ ಹೀಗೆ ಏನೇನೋ ನೆನಪಾಗತೊಡಗಿದವು. ಏನೋ ಕಳೆದುಕೊಂಡಂತೆ ಅನಿಸತೊಡಗಿತ್ತು. ಎಲ್ಲರಿಂದ ಇಷ್ಟು ದೂರದಲ್ಲಿ ತಾನಿದ್ದೇನೆ ಎಂಬ ಭಾವನೆ ಮೂಡತೊಡಗಿತ್ತು. ಸಧ್ಯಕ್ಕೆ ಜೊತೆಗೆ ತನ್ನ ಪುಟ್ಟ ಸಂಸಾರವಾದರೂ ಇದೆಯಲ್ಲ;  ಇನ್ನು ಕೆಲವೇ ದಿನಗಳು, ಆಮೇಲೆ ವಾಪಸ್ಸು ತನ್ನ ದೇಶಕ್ಕೆ ಹೋಗುವೆನಲ್ಲ ಎಂದು ತನ್ನೊಳಗೆ ಸಮಾಧಾನ ಮಾಡಿಕೊಂಡ. 
ಆದರೂ ಬೆಳಿಗ್ಗೆ ಬೇಗ ಎದ್ದ ತಪ್ಪಿಗೆ ಹೊರಗಿನ ಬೆಳಗನ್ನಾದರೂ ಸವಿಯುವ ನಿರ್ಧಾರ ಮಾಡಿ ವಿಶಾಲವಾದ ಕಿಟಕಿಯ ಪರದೆ ಸರಿಸಿದವನಿಗೆ ಮೈ ಝುಂ ಅಂದಿತ್ತು! ಕೂಡಲೇ ಒಳಗೆ ಓಡಿ ಹೋದವನೇ ನಿದ್ದೆಯಲ್ಲಿದ್ದ ಖುಷಿಯನ್ನೂ, ಜಾನುನನ್ನೂ ಎಬ್ಬಿಸಿದ. ಮೈ ಮುರಿಯುತ್ತಲೇ, ಸಕ್ಕರೆ ನಿದ್ದೆಯನ್ನು  ತುಂಡರಿಸಿದ ಅಪ್ಪನನ್ನು ಕೆಂಗಣ್ಣಿನಲ್ಲೆ ಕೆಕ್ಕರಿಸುತ್ತ ಎದ್ದಳವಳು.
"ಲೇ ಪುಟ್ಟಿ ಒಂದ್ ಭಾರಿ ಮಜಾ ತೋರಸ್ತೀನಿ ಬಾ… ಲೇ ಜಾನು ನೀನು ಬಾ…. ಲೋಗೂನ … " ಅಂದ ಅಪ್ಪನಿಗೆ ಹುಚ್ಚು ಹಿಡಿದಿಲ್ಲವಷ್ಟೇ ಎಂದು ಅವ್ವ ಮಗಳು ಒಬ್ಬರನ್ನೊಬ್ಬರು ನೋಡತೊಡಗಿದರು.
"ಲೇ ಬರ್ರಿಲೆ … ದೊಡ್ಡ ನಖರಾ ನೋಡು ಇಬ್ಬರದೂ…!" ಅಂದವನೇ ತನ್ನ ಎರಡೂ ಕೈಗಳಿಂದ ಖುಷಿಯ ಕಣ್ಣು ಮುಚ್ಚಿಕೊಂಡು ಹೊರಗಡೆ ಹಾಲ್ ಗೆ ಕರೆದೊಯ್ದ. ಅದೇ ಕಿಟಕಿಯ ಮುಂದೆ ನಿಂತು ಮಗಳ ಕಣ್ಣು ಬಿಡಿಸಿ "ಟನ್ ಟನಾ …." ಅಂತ ಒಳ್ಳೆ ಸಿನಿಮಾ ತೋರ್ಸೋರಂತೆ ನಿಂತ.
ನಿನ್ನೆಯೆಲ್ಲಾ ಖಾಲಿಯಿದ್ದ ಮನೆಯ ಅಂಗಳದಲ್ಲೆಲ್ಲ ಶುಬ್ರವಾದ ಹಿಮ ಆವರಿಸಿತ್ತು. ಖುಷಿ ತನ್ನ ಕಣ್ಣುಗಳೆರಡನ್ನೂ ನಿಚ್ಚಳವಾಗಿ ತೆರೆದು ಪ್ರಕೃತಿಯ ಈ ವಿಚಿತ್ರವನ್ನು ಎವೆಯಿಕ್ಕದೆ ನೋಡುತ್ತಿದ್ದಳು. ತನ್ನ ಜೀವಮಾನದಲ್ಲೇ ಹಿಮವನ್ನು ಇಷ್ಟು ಹತ್ತಿರದಿಂದ ನೋಡಿರದಿದ್ದ ಜಾನೂಗೂ ಹಿಮ ಇವರ ಮನೆ ಬಾಗಿಲಿಗೆ ಬಂದು ದರ್ಶನ ಕೊಟ್ಟಿದ್ದು ಸಖೇದಾಶ್ಚರ್ಯವಾಗಿತ್ತು. ಇಲ್ಲಿ ಅಕ್ಟೋಬರ್ ತಿಂಗಳಲ್ಲಿ ಹಿಮ ಬೀಳಬಹುದೆಂಬ ಕಲ್ಪನೆಯೇ ಅವನಿಗಿರಲಿಲ್ಲ. ಬಹುಶಃ ಹಿಂದಿನ ರಾತ್ರಿ ಟೀವಿ ನೋಡಿದ್ದರೆ ಅದು ಮುಂಚೆಯೇ ತಿಳಿದಿರುತ್ತಿತ್ತೇನೊ. ಏನೇ ಆದರೂ ಅದೊಂದು ಅನಿರೀಕ್ಷಿತ ಅಚ್ಚರಿ ಆಗಿತ್ತು. ತಡ ಮಾಡದೆ ಹೊರಗೆ ಹೋಗಿ ಹಿಮದಲ್ಲಿ ಎಲ್ಲರೂ  ಆಟವಾಡಲು ಶುರು ಹಚ್ಚಿಕೊಂಡರು. ಇವರ ಸಂತಸವನ್ನು ನೋಡಿ ಅಮೆರಿಕಾದ ಅಜ್ಜಿಯೊಬ್ಬಳು, ಇವರು ಜೀವನದಲ್ಲಿ ಇದೆ ಮೊದಲ ಸಲ ಇಷ್ಟು ಹಿಮವನ್ನು ಒಟ್ಟಿಗೆ ನೋಡಿರಬಹುದೆಂದು ಅಂದಾಜಿಸಿ ನಸು ನಗುತ್ತ "ಎಂಜಾಯ್…!" ಅಂತ ಉಲಿದು ಅಪಾರ್ಟ್ ಮೆಂಟ್ ನ ಒಳಗೆ ನಡೆದಳು. 
ಅಪಾರ್ಟ್ ಮೆಂಟ್ ನ ಮುಂದಿದ್ದ ಗಿಡಗಳು, ಹುಲ್ಲಿನ ಹಾಸು, ಕಾರುಗಳು ಎಲ್ಲವೂ ಹಿಮಾವರಣಗೊಂಡಿದ್ದವು. ಆ ಹಿಮದಿಂದ ತಮ್ಮ ಕಾರನ್ನು ಮುಕ್ತಗೊಳಿಸುವ ಬಗೆ ಹೇಗೆ ಎಂದು ಖುಷಿ ಆಶ್ಚರ್ಯಪಡುತ್ತಿದ್ದಳು. ಅದಕ್ಕೆ ಬೇಕಾದ ಪರಿಕರಗಳನ್ನು ಇಟ್ಟುಕೊಂಡಿದ್ದ ವೆಂಕಣ್ಣ ಸಲಿಕೆಯಲ್ಲಿ ಮಣ್ಣು ತಗೆದಂತೆ ಕಾರಿನ ಮೇಲಿನಿಂದ ಹಿಮವನ್ನು ಬಗೆದು ತೆಗೆಯುತ್ತಿದ್ದುದನ್ನು ಕಣ್ಣರಳಿಸಿ ನೋಡಿ ಸಂತಸ ಪಟ್ಟಳು. ಕ್ರಮೇಣ ಗಾಳಿಯೂ ಹೆಚ್ಚಿ ಚಳಿ ಜಾಸ್ತಿಯಾಗತೊಡಗಿತ್ತು. ವೆಂಕಣ್ಣನ ಪರಿವಾರ ದಪ್ಪಗಿನ ಉಣ್ಣೆಯ ಉಡುಗೆ ತೊಟ್ಟು ಮನೆಯಲ್ಲೇ ಬೆಚ್ಚಗೆ ಉಳಿದರು. ಅವತ್ತು ಅಪ್ಪ ಆಫೀಸಿಗೆ ಹೋಗದೆ ಮನೆಯಲ್ಲೇ ಉಳಿದದ್ದು ಮಗಳ ಸಂತಸವನ್ನು ಹೆಚ್ಚಿಸಿತ್ತು.
"ಅಪ್ಪಾ ದಿನಾಲೂ ಹಿಂಗ ಸ್ನೋ ಬಿದ್ದರ ನೀನು ಮನ್ಯಾಗ ಇರ್ತೀಯಲ್ಲಾ?" ಅಂತ ತನ್ನ ತರ್ಕವನ್ನು ಮಂಡಿಸಿದಳು.
ವೆಂಕಣ್ಣ ನಕ್ಕು ಸುಮ್ಮನಾದ. ಆಫಿಸಿನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ನೆನಪಾದವು. ಬೆಂಗಳೂರಿನಲ್ಲಿ ಜಾನ್ ಏನೇನು ಕರಾಮತ್ತು ನಡೆಸಿದ್ದಾನೋ ಎಂಬ ಚಿಂತೆ ಅವನನ್ನು ಕಾಡಿತು. ತನ್ನನ್ನೂ ಕೆಲಸದಿಂದ ತೆಗೆದುಬಿಟ್ಟರೆ ಮುಂದೇನು ಅನ್ನುವ ಪ್ರಶ್ನೆ ಉದ್ಭವಿಸಿತು.
 
"… ಅಪ್ಪ ದಿನಾಲೂ ಮನ್ಯಾಗ ನನ್ ಜೊತಿ ಇರಲ್ಲಾ? ಪ್ಲೀಜ್ ನೀ ಆಫಿಸಿಗೆ ಹೋಗಬ್ಯಾಡಾ….." ಅಂದ ಖುಷಿಯ ಗೋಗರೆತಕ್ಕೆ ಇವನು ತನ್ನ ಯೋಚನಾ ಲಹರಿಯಿಂದ ಹೊರಬಂದು ಬೆಚ್ಚಿ ಬಿದ್ದ!
ಜಾನ್ ಇವತ್ತು ಬೆಳಿಗ್ಗೆ ಎಂಟು ಗಂಟೆಗೇ ಆಫಿಸಿಗೆ ಬಂದಿದ್ದನೆಂದೂ, ಕೆಲಸಕ್ಕೆ ಯಾರೂ ಬೇಗ ಬರುವುದಿಲ್ಲವೆಂಬ ಸತ್ಯ ಅವನಿಗೆ ಗೊತ್ತಾಗಿಬಿಟ್ಟಿದೆಯೆಂದೂ ಅಫೀಸಿನಲ್ಲೆಲ್ಲ ಗುಲ್ಲೆದದ್ದು ಅವತ್ತೂ ತಡವಾಗಿ ಬಂದಿದ್ದ ರಘುನ ಕಿವಿಗೂ ಬಿದ್ದಿತ್ತು. ಈ ಕೆಲಸ ಬಿಟ್ಟು  ಹೊಸ ಕಂಪನಿಗೆ ಸಧ್ಯದಲ್ಲೇ ಸೇರಿ ಪ್ಯಾರಿಸ್ ಗೆ ಹೋಗುವ ಕನಸು ಕಾಣುತ್ತಿದ್ದ ರಘುಗೆ ಆ ಜಾನ್  ಏನಾದರೂ ಮಾಡಿಕೊಳ್ಳಲಿ ನನಗೇನು? ಎಂಬ ಉಡಾಫೆ ಇತ್ತು. ಆ ಕನಸಿನ ಕಿಡಿ ಹೊತ್ತಿಸಿದ್ದ ತರಂಗಿಣಿಯ ಫೋನ್ ರಿಂಗಿಸಿ ಅವನ ಉತ್ಸಾಹವನ್ನು ಇನ್ನೂ ಇಮ್ಮಡಿಸಿತು. ತನ್ನ ಜಾಗದಿಂದ ತುಸು ಆಚೆ ಸ್ವಲ್ಪ ಮರೆ ಇದ್ದಲ್ಲಿಗೆ ಹೋಗಿ ಅವಳ ಕರೆಯನ್ನು ಸ್ವೀಕರಿಸಿದನವನು.
"ಹೇಳಿ ತರಂಗಿಣಿ ಏನ್ಸಮಾಚಾರ"
"ಏನ್ ಲಕ್ಕಿ ಕಣ್ರೀ ನೀವು" ಅಂತ ಅವನಲ್ಲಿ ಇನ್ನೂ ಪುಳಕವನ್ನುಂಟು ಮಾಡಿದಳವಳು.
"ಯಾಕ್ರೀ ಏನಾಯ್ತು" ಅಂತ ಒಣಗಿದ ಗಂಟಲಲ್ಲೇ ಕೆಳಿದನವನು.
"ನಿಮ್ಮ ರೆಸುಮೆ ನೋಡಿ ಬ್ಲ್ಯಾಕ್ ಇಯರ್ ಕಂಪನಿಯ ಎಂಡಿ ಸಿಕ್ಕಾಪಟ್ಟೆ ಖುಷ್ ಆಗಿದಾರೆ. ನನಗೆ ಬೇಕಾದಂತಾ ವ್ಯಕ್ತಿನೆ ಆರಿಸಿದ್ದೀರ ಅಂತ ನನಗೆ ತುಂಬಾ ಹೊಗಳ್ತಾ ಇದ್ರು ಕಣ್ರೀ."
"ಒಹ್… ಹೌದಾ! ಹಾಗಾದ್ರೆ ಇಂಟರ್ವ್ಯೂ ಯಾವಾಗಂತೆ?" ಅಂತ ತನ್ನ ಖುಷಿಯನ್ನು ಹತ್ತಿಕ್ಕಲಾರದೆ ಕೇಳಿದ ಅವನ ಕಣ್ಣುಗಳಲ್ಲಿ  ಪ್ಯಾರಿಸ್ ನ ಐ ಫೆಲ್ ಟವರ್ ತಕಾ ತಕಾ ಕುಣಿಯುತ್ತಿತ್ತು!
"ಇಂಟರ್ವ್ಯೂ ಎಲ್ಲಾ ಏನೂ ಇಲ್ಲ ರೀ. ನಾನು ರೆಫರ್ ಮಾಡಿದ ಮೇಲೆ ಮುಗಿತು. ಸುಮ್ನೆ ನಿಮ್ಮ ಜೊತೆ ಒಂದು ಫಾರ್ಮಲ್ ಮೀಟಿಂಗ್ ಇರುತ್ತೆ. ಆ ಕಂಪನಿಯ ಎಹ್ ಆರ್ ಮಾತಾಡ್ತಾರೆ. ಅದೂ ಸಂಬಳದ ಬಗ್ಗೆ ನಿಮ್ಮ ನಿರೀಕ್ಷೆ ತಿಳಿದುಕೊಳ್ಳೋಕೆ ಅಷ್ಟೇ. ಮುಂದಿನ ತಿಂಗಳು ಪ್ಯಾರಿಸ್ ಗೆ ಹೋಗೋಕೆ ತಯಾರಾಗಿ" ಅನ್ನುತ್ತಿದ್ದಂತೆ ಇವನು ನಿಟ್ಟುಸಿರಿಟ್ಟ. ರೆಸುಮೆಯಲ್ಲಿ ಏನೇನೋ ಸುಳ್ಳುಗಳ ಸರಮಾಲೆ ತುರುಕಿ, ಇಂಟರ್ವ್ಯೂನಲ್ಲಿ ಹೆಂಗಪ್ಪಾ ಮಾತಾಡೋದು ಅಂತ ಭಯಪಟ್ಟಿದ್ದವನಿಗೆ, ಆ ಒಂದು ಸಂದರ್ಭವೇ ಇಲ್ಲ ಅಂದಾಗ ಎಷ್ಟು ಖುಷಿಯಾಗಬೇಡ? ಅವಳು ಮುಂದುವರೆಸಿ. 
"…ನೋಡಿ ಈಗಲೇ ನಿಮ್ಮ ಹೊಸ ಬಾಸ್ ನಿಮಗೆ ಒಂದು ಕೆಲಸ ಕೊಟ್ಟಿದ್ದಾರೆ. ಪ್ಯಾರಿಸ್ ನಲ್ಲಿ ನಿಮ್ಮ ಟೀಮ್ ಗೆ ಇನ್ನೂ ನಾಲ್ಕು  ಜನ ಬೇಕಂತೆ. ಯಾರಾದರೂ ಒಳ್ಳೆ ಪ್ರೋಗ್ರಾಮರ್ ಗಳಿದ್ದರೆ ಅವರನ್ನು ನೀವು ಶಿಫಾರಸ್ಸು ಮಾಡಬಹುದು. ನಾಳೆ ಒಳಗೆ ಕೆಲವು ರೆಸುಮೆ ಕಳಿಸಿ. ನನಗೆ ಈಗ ಅವರ ಜೊತೆ ಮೀಟಿಂಗ್ ಇದೆ, ಮತ್ತೆ ಫೋನ್ ಮಾಡುವೆ…. ಬೈ" ಅಂತ ಕರೆಯನ್ನು ಮುಗಿಸಿದಳು.
ರಘುಗೆ ಸ್ವರ್ಗಕ್ಕೆ ಮೂರೆ ಗೇಣು! ಕೂಡಲೇ ಅಲ್ಲೇ ಇದ್ದ ಪ್ರದೀಪ, ಸೀನುನಂತಹ ತನ್ನ ನಾಲ್ಕು ಚೆಲಾಗಳನ್ನು ಕಣ್ಣ ಸನ್ನೆಯಲ್ಲೇ ಕರೆದು ಕೆಳಗಿನ ಮಹಡಿಯಲ್ಲಿರುವ ಕೆಫೆತೆರಿಯ ಕ್ಕೆ ಕರೆದೊಯ್ದ. ಅವರಲ್ಲಿಯೂ ಪ್ಯಾರಿಸ್ ನ ಕೆಲಸದ ಕನಸನ್ನು ಬಿತ್ತಿ, ಅವರ ರೆಸುಮೆ ಗಳನ್ನೂ ಇವತ್ತೇ ಅಪ್ಡೇಟ್ ಮಾಡಿ ತನ್ನ ವೈಯುಕ್ತಿಕ ಇಮೇಲ್ ಅಡ್ರೆಸ್ ಗೆ ಕಳಿಸಲು ಆಜ್ಞೆ ಹೊರಡಿಸಿದ.
ಜಾನ್ ತನಗೆ ಅಂತಲೇ ಮೀಸಲಾಗಿದ್ದ ಚೇಂಬರ್ ನಲ್ಲಿ ತನ್ನ ಲ್ಯಾಪ್ ಟಾಪ್ ದಿಟ್ಟಿಸುತ್ತ ಕೂತಿದ್ದ. ಅದು ಸುಧೀರ್ ಕಳಿಸಿದ್ದ ಫೈಲ್ ಆಗಿತ್ತು. ಭಾರತದ ಆ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಅಷ್ಟೂ ಉದ್ಯೋಗಿಗಳ ಹೆಸರು ಹಾಗೂ ಅವರ ಬಗ್ಗೆ ಎಲ್ಲ ವಿವರಗಳೂ ಅಲ್ಲಿದ್ದವು. ಎಲ್ಲರ ಕೌಶಲಗಳ, ಸಾಮರ್ಥ್ಯಗಳ ಕುರಿತ ಮಾಹಿತಿಯೂ ಅಲ್ಲಿತ್ತು. ಅಂಥದೊಂದು ಪಟ್ಟಿಯನ್ನು ತಯಾರಿಸಿ ಕಳಿಸು ಅಂದಾಗಲೇ, ಸುಧೀರನಿಗೆ ಅವನು ಅಲ್ಲಿಂದ ಎಷ್ಟೋ ಜನರ ಎತ್ತಂಗಡಿ ಮಾಡುವ ಇರಾದೆ ಹೊಂದಿದ್ದಾನೆಂದು  ಅಂದಾಜಿಸಿದ್ದ. ಮೊತ್ತ ಮೊದಲು ತನ್ನನ್ನೇ ಗುರಿ ಮಾಡಿರಬಹುದೆಂಬ ಬಲವಾದ ನಂಬಿಕೆ ಅವನಲ್ಲಿತ್ತು. ಆದರೆ ಜಾನ್ ತಲೆಯಲ್ಲಿ ಓಡುತ್ತಿದ್ದ ಲೆಕ್ಕಾಚಾರವೇನಾಗಿತ್ತು ಎನ್ನುವುದು ಜಾನ್ ನನ್ನು ಬಿಟ್ಟರೆ ಅವನ ಚೇಲಾ ಜೇಕಬ್ ಗೆ ಮಾತ್ರ ಗೊತ್ತಿತ್ತು!                            
(ಮುಂದುವರಿಯುವುದು…)

Saturday, June 20, 2015

ಬಹುಪರಾಕ್!

(http://www.panjumagazine.com/?p=11024)
 
ಬೆಳಿಗ್ಗೆ ಕೆಲಸಕ್ಕೆ ಹೊತ್ತಾಗಿದ್ದರೂ ಅಂತಹ ಗಡಿಬಿಡಿಯೇನೂ ತೋರಿಸದೆ, ತಾನು ಬೇಗ ಹೋಗಿಯಾದರೂ ಏನು ಮಾಡುವುದು ಅನ್ನುವ ಮನಸ್ಥಿತಿಯಲ್ಲಿ ಆರಾಮವಾಗಿ ಬಂದ ಪ್ರದೀಪ್ ಗೆ ಸ್ವಾಗತಿಸಿದ್ದು ಎಂದಿಗಿಂತಲೂ ಚೊಕ್ಕದಾದ ಆಫೀಸಿನ ಪ್ರಾಂಗಣ. ಅವನಿಗೆ ಆಶ್ಚರ್ಯವಾಗಿತ್ತು. ಅಲ್ಲೇ ನಿಂತು ಅತ್ತಿತ್ತ ಕಣ್ಣಾಡಿಸಿದ. ರಿಸೆಪ್ಶನ್ ನಲ್ಲಿ ಹೂವಿನ ಅಲಂಕಾರ, ಆ ಕಡೆ ಈ ಕಡೆಗೊಂದು ಹೂ ಕುಂಡಲ. ಇದ್ದುದರಲ್ಲೇ ಸುಂದರಿಯರು ಅನಿಸಿಕೊಂಡ ನಾಲ್ಕು ಲಲನೆಯರು, ತಮಗೆ ಪರಿಚಿತವೇ ಅಲ್ಲದ ಸ್ಯಾರಿ ಎಂಬ ದೇಸಿ ಉಡುಗೆಯಲ್ಲಿ ನಿಂತಿದ್ದರು. ಆಗಾಗ ತಮ್ಮ ಸ್ಯಾರಿ ಸರಿ ಇದೆಯೋ ಇಲ್ಲವೋ ಎಂಬಂತೆ ತಮ್ಮದೇ ಸುತ್ತಲೂ ಕಣ್ಣಾಡಿಸುತ್ತ, ಸರಿಯಿಲ್ಲ ಅನಿಸಿದೆಡೆಗೆ ಸರಿ ಮಾಡಿಕೊಳ್ಳುತ್ತ ನಿಂತಿದ್ದರು. ಬೇರೆಯವರು ತಮ್ಮನ್ನು ಗಮನಿಸುತ್ತಿದ್ದಾರೆ ತಾನೇ ಎಂದೂ ಅತ್ತಿತ್ತ ನೋಡುತ್ತ, ಒಬ್ಬನಾದರೂ ನೋಡುತ್ತಿದ್ದರೆ ಅದು ತನ್ನನ್ನೇ ನೋಡುತ್ತಿರಬೇಕು ಎಂದು ಒಂದು ಗಳಿಗೆ ನಿಶ್ಚಿಂತರಾಗುತ್ತಿದ್ದರು. ಸುಗಂಧ ದ್ರವ್ಯವನ್ನು ಯಥೇಚ್ಚವಾಗಿ ಸ್ಪ್ರೇ ಮಾಡಿದ್ದರಿಂದ ಆ ಪ್ರದೇಶದಲ್ಲಿ ಘಾಟು ವಾಸನೆ ಅಡರಿತ್ತು. ಒಟ್ಟಿನಲ್ಲಿ ಅಲ್ಲಿ ಹಬ್ಬದ ವಾತಾವರಣವಿತ್ತು. ಬೆಂಗಳೂರಿಗೆ ಬಂದ ಮೇಲೆ ಹಬ್ಬ ಹರಿದಿನಗಳನ್ನೇ ಮರೆತ ಪ್ರದೀಪಗೆ ಇವತ್ತು ಯಾವುದೋ ಹಬ್ಬವಿರಬೇಕು ತಾನು ಅದನ್ನು ಎಂದಿನಂತೆ ಮರೆತುಬಿಟ್ಟೆನೇನೋ ಎಂಬ ಸಂಶಯ ಉಂಟಾಗಿರುವಾಗಲೇ ಅಲ್ಲೇ ಪಕ್ಕಕ್ಕೆ ಇದ್ದ ಫಲಕದ ಮೇಲೆ ಯಾರಿಗೋ ಸ್ವಾಗತ ಕೋರಿದ ಅಕ್ಷರಗಳು ಕಂಡವು. ಕೂಲಂಕುಷವಾಗಿ ನೋಡಲಾಗಿ 'Welcome to Voice President John C. Becker' ಅನ್ನುವ ವಾಕ್ಯಗಳು ಕಂಡವು. ತಮ್ಮ ಶಾಖೆಗೆ ಜಾನ್ ಬರುತ್ತಿರುವ ವಿಷಯ ಅವನಿಗೆ ಗೊತ್ತಾಗಿದ್ದು ಆಗಲೆ. ಅವನು ಬರುತ್ತಿರುವ ವಿಷಯ ಮೊದಲೇ ಗೊತ್ತಿತ್ತಾದರೂ ಇವತ್ತೇ ಬರುವನೆಂದು ಅವನಿಗೆ ಅಂದಾಜಿರಲಿಲ್ಲ. ತನಗ್ಯಾರೂ ಹೇಳಲೇ ಇಲ್ಲವೆಂಬ ಕೋಪ ಅವನಿಗೆ ಬಂದಿತು. ತನ್ನ ಬಾಸ್ ಸುಜಯ್ ಎಲ್ಲ ವಿಷಯಗಳನ್ನು ತನ್ನ ಗೆಳತಿ ನಿಶಾಗೆ ಮಾತ್ರ ಹೇಳುತ್ತಾನೆ. ಮಿಕ್ಕ ತಾವೆಲ್ಲರೂ ಏನು ಪಾಪ ಮಾಡಿದ್ದೇವೆ? ಅಂತ ತನ್ನಲ್ಲೇ ಅವನನ್ನು ಬೈದುಕೊಂಡ. ಈ ವಿಷಯದ ಬಗ್ಗೆ ಜಾನ್ ಗೆ ದೂರು ಕೊಡಬೇಕು ಅಂತ ಯೋಚಿಸುತ್ತ ತನ್ನ ಜಾಗಕ್ಕೆ ತೆರಳಿದ.
 
ಅಮೆರಿಕಾದ ದೊರೆಗೆ ಅದ್ಧೂರಿಯ ಸ್ವಾಗತ ಕೋರಲು ಎಲ್ಲ ಸಿದ್ಧತೆಗಳಾಗಿದ್ದವು. ಶಾಖೆಯ ಮುಖಸ್ಥನಾದ ಸುಧೀರ್ ತನ್ನ ಮಾಮೂಲಿ ಟೀ ಶರ್ಟ್ ಹಾಕಿಕೊಳ್ಳದೆ ತುಂಬಾ ಡೀಸೆಂಟ್ ಆಗಿರುವ ಸೂಟು ಬೂಟು ಹಾಕಿಕೊಂಡು ತಯಾರಾಗಿದ್ದುದು ವಿಶೇಷವಾಗಿತ್ತು. ಉಳಿದ ಮ್ಯಾನೇಜರ್ ಗಳೂ ತಂತಮ್ಮ ಸೂಟು ಬೂಟುಗಳೊಂದಿಗೆ ಮದುವೆಗೆ ತಯಾರಾದಂತೆ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿ ಬಂದಿದ್ದರು. ಮೊದಲೇ ನಿರ್ಧರಿಸಿದಂತೆ ಜಾನ್ ಹನ್ನೆರಡು ಗಂಟೆಗೆ ಬರುವದಿತ್ತಾದರೂ ಅವನು ಬಂದಿದ್ದು ಒಂದು ಗಂಟೆ ಮೊದಲೇ. ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿ ಎಲ್ಲರಿಗೂ ಅನಿರೀಕ್ಷಿತ ತಿರುವು ಕೊಡುವುದರಲ್ಲಿ ಜಾನ್ ದು ಎತ್ತಿದ ಕೈ. ಅದೇ ಅವನ ವಿಶೇಷ. ಅದನ್ನು ಮೊದಲೇ ತಿಳಿದಿದ್ದ ಸುಧೀರ್ ಎಲ್ಲ ತಯಾರಿಗಳನ್ನೂ ಮುಂಚಿತವಾಗೆ ಮಾಡಿಕೊಂಡಿದ್ದ. 
ಜಾನ್ ಬರುತ್ತಲೇ ಸೀರೆ ಉಟ್ಟ ನೀರೆಯರು ಅವನಿಗೆ ಹೂ ಗುಚ್ಚದೊಂದಿಗೆ ಸ್ವಾಗತಿಸಿದರು. ಅವನು ಗಂಟು ಮುಖದಲ್ಲೇ ಸ್ವೀಕರಿಸಿದ. ಅವನ ಜೊತೆಗೆ ಜೇಕಬ್ ನೂ ಬಂದಿದ್ದ. ಸುಧೀರ್ ತನ್ನನ್ನು ತಾನು ಪರಿಚಯಿಸಿಕೊಂಡ. ಜಾನ್, ಅವನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ರೀತಿಗೆ ತುಸು ಮುಜುಗರಕ್ಕೊಳಗಾದ. ಆ ನೋಟ ‘ನೀನೆ ಏನು ಈ ಶಾಖೆಯ ಮುಖ್ಯಸ್ಥ?’ ಅನ್ನುವಂತಿತ್ತು. ಮಿಕ್ಕ ಸಹೋದ್ಯೋಗಿಗಳನ್ನೂ ಅವನಿಗೆ ಸುಧೀರ ಪರಿಚಯಿಸಿದ. ಎಲ್ಲರನ್ನೂ ಹುಬ್ಬು ಗಂಟಿಕ್ಕಿಯೇ ಮಾತಾಡಿಸಿದ ಜಾನ್ ಎಲ್ಲರಲ್ಲಿಯೂ ನಡುಕ ಹುಟ್ಟಿಸಿದ. ಪ್ರಥಮ ಚುಂಬನದಲ್ಲೇ ದಂತಭಗ್ನವಾಗಿತ್ತು!
ಸುಧೀರ್ ನ ಜೊತೆಗೆ ಇಡೀ ಆಫೀಸನ್ನು ಸುತ್ತಾಡಿದ ಜಾನ್, ಎಲ್ಲ ಕಡೆಗೂ ಸಂಶಯದ ದೃಷ್ಟಿಯಿಂದಲೇ ಅಡ್ಡಾಡುತ್ತಿದ್ದನೇನೋ ಅಂತ ಅನಿಸುತ್ತಿತ್ತು. ಕೆಲವು ಸಹೋದ್ಯೋಗಿಗಳ ಜೊತೆಗೆ ಮಾತಾಡಿ ಅವರೇನು ಮಾಡುತ್ತಿರುವರೆಂದು ಕೇಳಿ ತಿಳಿದುಕೊಂಡ. ಕೆಲವರಿಗೆ ಇದನ್ನು ಹೀಗೇಕೆ ಮಾಡುತ್ತಿರುವೆ? ಹಾಗೇಕೆ ಮಾಡುತ್ತಿಲ್ಲ ಅಂತೇನೇನೋ ಪ್ರಶ್ನೆ ಕೇಳಿ ಅವರಲ್ಲಿ ಬೆವರು ಹುಟ್ಟಿಸಿದ. ಪ್ರದೀಪನಂತಹ ಕೆಲೆಸಗಳ್ಳರು ಮಾತ್ರ ಅವನು ಬಂದ ಸಮಯಕ್ಕೆ ತಮ್ಮ ಜಾಗದಲ್ಲಿರದೆ ಬಚಾವಾದರು. ಎಂದಿನಂತೆ ಡೆಸ್ಕಿಗೆ ಅಂಟಿಕೊಂಡು ಕೆಲಸ ಮಾಡುವ ಉದ್ಯೋಗಿಗಳು ಮಾತ್ರ ಇದರಿಂದ ಕಿರಿಕಿರಿ ಅನುಭವಿಸುವಂತಾಯಿತು. ಆದರೆ ನಿಶಾ ಮಾತ್ರ ಇದೆ ಒಂದು ಅವಕಾಶಕ್ಕೆ ಕಾಯುತ್ತಿದ್ದವಳಂತೆ ಅವನ ಜೊತೆ ಅಮೆರಿಕಾದ accent ನಲ್ಲಿ ಮಾತಾಡಿ ಅವನ ಮನ ಗೆದ್ದಳು. ಅವಳ ಹೆಸರು ಏನು , ಅವಳು ಯಾರಿಗೆ ರಿಪೋರ್ಟ್ ಮಾಡುತ್ತಿದ್ದಾಳೆ ಎಂಬೆಲ್ಲ ವಿಷಯಗಳನ್ನು ಅವನು ಕೇಳಿ ತಿಳಿದುಕೊಂಡ. ಅವನ ಜೊತೆಗಿದ್ದ ಜೇಕಬ್ ಇದೆಲ್ಲವನ್ನೂ ನೋಟ್ ಮಾಡಿಕೊಂಡ. ಈ ಮನುಷ್ಯ ಯಾವ ಮಟ್ಟಕ್ಕಾದರೂ ಇಳಿಯಬಹುದೆಂದು ಸುಧೀರನಿಗೆ ಮನದಟ್ಟಾಯಿತು. ಯಾವುದೇ ಉಪಾಧ್ಯಕ್ಷ ಇಲ್ಲಿಯವರೆಗೆ ಈ ತರಹ ವರ್ತಿಸಿರಲಿಲ್ಲ.
 
ಮದ್ಯಾಹ್ನದ ಊಟಕ್ಕೆ ಕಂಪನಿಯ ಪಕ್ಕದಲ್ಲೇ ಇದ್ದ ಪಂಚತಾರಾ ಹೋಟೆಲ್ ನಲ್ಲಿ ಪೃಥ್ವಿ ವ್ಯವಸ್ಥೆ ಮಾಡಿಸಿದ್ದ. ಅದೇ ಹೋಟೆಲ್ ನಲ್ಲಿ ಅವನ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಆಫೀಸಿಗೆ ತುಂಬಾ ಹತ್ತಿರದಲ್ಲೇ ಇರುವ ಹೋಟೆಲ್ ನಲ್ಲಿಯೇ ತಾನು ತಂಗಬೇಕೆಂದು ಜಾನ್ ನ ಅಪೇಕ್ಷೆಯಾಗಿತ್ತು.  ಅವನ ಜೊತೆಗೆ ಊಟಕ್ಕೆ ಸುಧೀರ್ ಹಾಗೂ ಇತರ ಮ್ಯಾನೇಜರ್ ಗಳು ಹಾಜರಾಗಿದ್ದರು. ಎಂದೂ ಹಾಕಿಕೊಂಡು ರೂಢಿಯಿರದ ಸೂಟು ಎಲ್ಲರಿಗೂ ಕಸಿವಿಸಿ ಉಂಟುಮಾಡಿತ್ತು. ಎದುರಿಗೆ ಜಾನ್ ನಂತಹ ವ್ಯಕ್ತಿ ಕೂತಿರುವಾಗ ಎಲ್ಲರ ಹಸಿವೆಯೂ ಸಹಜವಾಗಿಯೇ ಮಾಯವಾಗಿತ್ತು. ಅವನು ಏನು ಕೆಳುತ್ತಾನೋ ಎನ್ನುವ ಹೆದರಿಕೆ ಪ್ರತಿಯೊಬ್ಬರಲ್ಲೂ ಇತ್ತು. ಅವನೂ ಕೂಡ ಈ ಸಂದರ್ಭದ ಸದ್ಬಳಕೆ ಮಾಡಿಕೊಂಡಿದ್ದ. ಪ್ರತಿಯೊಬ್ಬ ಮ್ಯಾನೇಜರ್ ಗೂ ಪ್ರಶ್ನೆಗಳನ್ನು ಹಾಕುತ್ತ ಅವರನ್ನು ಪೇಚಿಗೆ ಸಿಕ್ಕಿಸುತ್ತಿದ್ದ. ಅದೇ ಜೇ.ಸಿ.ಬಿ ಎಂಬ ಅನ್ವರ್ಥಕ ನಾಮ ಗಳಿಸಿದ ಜಾನ್ ನ ವಿಶೇಷತೆಯಾಗಿತ್ತು. ಮರುದಿನ ಪ್ರತಿಯೊಬ್ಬ ಮ್ಯಾನೇಜರ್ ಜೊತೆಗೆ ತನ್ನ ಮೀಟಿಂಗ್ ಗೊತ್ತು ಮಾಡಲು ಆದೇಶ ಹೊರಡಿಸಿದ್ದ. ಎಲ್ಲರೂ ಒಂದೊಂದು ತುತ್ತನ್ನೂ ತುಂಬಾ ಪ್ರಯಾಸ ಪಟ್ಟು ಗಂಟಲೊಳಗೆ ಇಳಿಸಿಕೊಳ್ಳುತ್ತಿದ್ದರು.
ಕಡೆಗೂ ಊಟದ ಆಟ ಮುಗಿದಿತ್ತು. ಹಿಂದಿನ ರಾತ್ರಿಯೇ ಬಂದ ಜಾನ್ ಗೆ ನಿದ್ದೆ ಬಂದಿರಬಹುದು ಹಾಗೂ ಅವನು ತನ್ನ ಕೋಣೆಗೆ ಹೋಗಿ ಮಲಗಿ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಬಹುದೆಂಬ ಎಲ್ಲರ ನಿರೀಕ್ಷೆ ಸುಳ್ಳು ಮಾಡಿ, ಊಟದ ಬಳಿಕ ಎಲ್ಲರ ಜೊತೆಗೆ ಆಫೀಸಿನ ಕಡೆಗೆ ನಡೆದನವನು. ಸುಧೀರ್ ನ ಜೊತೆಗೆ ಕುಳಿತು ಒಂದಿಷ್ಟು ವಿಷಯಗಳ ಮಾಹಿತಿ ಪಡೆಯುವ ಉದ್ದೇಶ ಅವನದಾಗಿತ್ತು… 

(ಮುಂದುವರಿಯುವುದು…)                

Saturday, June 13, 2015

ಜಾನ್ ಎಂಬ ಬಿರುಗಾಳಿಯ ಮುನ್ಸೂಚನೆ…

(http://www.panjumagazine.com/?p=10909)

ಜಾನ್ ಆಯೋಜಿಸಿದ್ದ ಪಾರ್ಟಿ ಮುಗಿಸಿ ಮನೆಗೆ ಬಂದ ವೆಂಕಣ್ಣನ ಮುಖ ತುಂಬಾ ಚಿಂತೆಯಲ್ಲಿದ್ದಂತೆ ಕಂಡು ಬಂದದ್ದರಿಂದ ಜಾನು ಗೆ ಕಳವಳವಾಯಿತು. 
“ಯಾಕ್ರೀ ಪಾರ್ಟಿಯೊಳಗ ಯಾರರೆ ಏನರೆ ಅಂದರೋ ಏನು?” ಅಂತ ಹತ್ತಿರಕ್ಕೆ ಹೋಗಿ ವಿಚಾರಿಸಿದಳು. ಹಾಗೆ ಹತ್ತಿರ ಹೋಗಿದ್ದಕ್ಕೆ ಇನ್ನೊಂದು ಕಾರಣವೂ ಇತ್ತು. ಗಂಡ ವಿದೇಶಕ್ಕೆ ಬಂದು ಅವರ ತರಹವೇ ಪಾರ್ಟಿಲಿ ಗುಂಡು ಹಾಕೋಕೂ ಶುರು ಹಚ್ಚಿಕೊಂಡನೋ ಹೇಗೆ ಎಂಬ ಪರೀಕ್ಷೆ ಅದಾಗಿತ್ತು.
“ಯಾರೇನ್ ಅಂದ್ರೂ ನಾ ತಲಿ ಕೆಡಿಸ್ಕೊಳೋದಿಲ್ಲ ಬಿಡು. ಆದ್ರ ಆ ಜೇ.ಸಿ.ಬಿ ನನ್ ಮಗಾ ಏನೋ ಸ್ಕೆಚ್ ಹಾಕ್ಲಿಕತ್ತಾನ. ಅದ ಸ್ವಲ್ಪ ತಲಿ ಕೊರಿಲಿಖತ್ತದ”  ಅಂದವನ ಉಸಿರಿನಲ್ಲಿ ಶರಾಬಿನ ವಾಸನೆ ಇಲ್ಲದ್ದು ಅವಳಿಗೆ ಸ್ವಲ್ಪ ಸಮಾಧಾನ ತಂದಿತಾದರೂ. ಹೊಸ ಉಪಾಧ್ಯಕ್ಷ  ಜಾನ್ ಕಿರಿಕ್ಕು ಶುರು ಮಾಡಿರುವ ಸಂಗತಿ ಅವಳ ತಲೆಯಲ್ಲೂ ಕೊರೆಯತೊಡಗಿತ್ತು.
“ಏನ್ ಮಾಡ್ತಾನಂತ ಆವಾ?” ಅಂದಳು.
“ಗೊತ್ತಿಲ್ಲ… ಮುಂದಿನ ವಾರ ಬೆಂಗಳೂರಿಗೆ ಹೊಂಟಾನ. ಅಲ್ಲೇ ಯಾರ್ಯಾರ್ನ ಹಾರಸ್ತಾನೋ ಏನ್ ಕತಿನೋ! ಸುಧೀರ್ ಗ ಒಂದ್ ಕಾಲ್ ಮಾಡ್ತೀನಿ ತಡಿ. ಇವತ್ತ ಏನೇನ್ ಆತು ಎಲ್ಲಾ ಅವಂಗ ಹೇಳ್ಬೇಕು.” ಅಂತ ಫೋನ್ ನಲ್ಲಿ ನಂಬರ್ ಡಯಲ್ ಮಾಡತೊಡಗಿದ. ಮಗಳು ಖುಷಿ ಅಲ್ಲಿನ ಹಗಲು ರಾತ್ರಿಗಳಿಗೆ ಆಗಲೇ ಹೊಂದಿಕೊಂಡಿದ್ದಳು. ಅವಳು ಗಾಢ ನಿದ್ರೆಯಲ್ಲಿದ್ದಳು. ಇವನ ಫೋನ್ ಕಾರ್ಯಕ್ರಮ ಇನ್ನು ಕನಿಷ್ಟ ಒಂದು ಗಂಟೆಯಾದರೂ ಸಾಗುವುದೆಂಬ ಅರಿವಿದ್ದ ಜಾನು ತಾನೂ ಮಲಗಲು ತೆರಳಿದಳು.  
ಭಾರತದಲ್ಲಿ ಬೆಳಗಿನ ಹತ್ತು ಗಂಟೆ. ಸುಧೀರನ ಮೊಬೈಲ್ ಮೊಳಗಿತು. ವೆಂಕಟ್ ರಾತ್ರಿ ಜಾನ್ ನ ಪಾರ್ಟಿಗೆ ಹೋಗಿರುವ ಸಂಗತಿ ಗೊತ್ತಿದ್ದುದರಿಂದ ಅವನದೇ ಫೋನ್ ನ ನಿರೀಕ್ಷೆಯಲ್ಲಿದ್ದನವನು. ಅದು ಅವನದೇ ಕರೆಯೆಂದು ಗೊತ್ತಾಗುತ್ತಲೇ ತನ್ನ ಕ್ಯಾಬಿನ್ ನಲ್ಲಿ ಯಾರದೋ ಜೊತೆಗೆ ಮಾತಾಡುತ್ತಿದ್ದವನು ಅವರನ್ನು ಸಾಗ ಹಾಕಿ ವೆಂಕಟ್ ಹೇಳುವುದನ್ನು ಗಮನವಿಟ್ಟು ಕೇಳತೊಡಗಿದ. ಸುಮಾರು ಹೊತ್ತು ಮಾತಾಡಿ ಅವನಿಗೆ ಶುಭರಾತ್ರಿ ಹೇಳಿ ಕರೆಯನ್ನು ಮುಗಿಸಿದ ಮೇಲೆ ಸುಧೀರ್ ಗೂ ಚಿಂತೆ ಶುರುವಾಗಿತ್ತು…
ಯಾವುದೋ ವಿಷಯಕ್ಕೆ ಚರ್ಚಿಸಲು ಅಂತ ಬಂದ ಸುಜಯ್, ಬಾಸ್ ಸುಧೀರ್  ತನ್ನದೇ ಲೋಕದಲ್ಲಿ ಮುಳುಗಿದ್ದು ಗಮನಿಸಿದ. ಬಾಗಿಲು ತಟ್ಟಿ ಒಳಗೆ ಬಂದವನ ಜೊತೆ ವಿಷಯ ಚರ್ಚಿಸುತ್ತಿದ್ದನಾದರೂ ಒಳಗೊಳಗೇ ತನ್ನ ಹಾಗೂ ತಮ್ಮ ಶಾಖೆಯ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದುದು ಅವನ ಮುಖದಲ್ಲಿ ಸ್ಪಷ್ಟವಾಗಿತ್ತು. ಒಟ್ಟಿನಲ್ಲಿ ಜಾನ್ ಎಂಬ ಬಿರುಗಾಳಿಯ ಮುನ್ಸೂಚನೆಗೆ ಭಾರತದ ಈ ಶಾಖೆ ಅಕ್ಷರಶಃ ನಡುಗುತ್ತಿತ್ತು!
ಇತರ ಎಷ್ಟೋ ಚಿಂತಾಮಣಿಗಳಂತೆ ಮಹಾ ಮೈಗಳ್ಳ ರಘುಗೆ ಇನ್ನೂ ಹೆಚ್ಚಿನ ಚಿಂತೆ ಶುರುವಾಗಿತ್ತು. ಜಾನ್ ನ ಕೆಲಸಗಳ್ಳರ  ಪಟ್ಟಿಯಲ್ಲಿ ತಾನು ಮುಂಚೂಣಿಯಲ್ಲಿರುತ್ತೇನೆಂಬ ಸಂಪೂರ್ಣ ಭರವಸೆ ಇವನಿಗಿತ್ತು. ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ತಾನು ಏನೂ ಕೆಲಸವನ್ನೇ ಮಾಡದೇ ಈ ಕಂಪನಿಗೆ ಭಾರವಾದ ಸಂಗತಿಯನ್ನು ಜಾನ್ ಗೆ ಸುಧೀರ್ ಹೇಳದೆ ಇರುವ ಸಾಧ್ಯತೆಗಳೇ ಇರಲಿಲ್ಲ. ಹೀಗೆ ತಲೆಗೆ ಕೈಹಚ್ಚಿಕೊಂಡು ಕೂತಾಗಲೇ ತನ್ನ ಫೋನ್ ಕೂಗಿ ಇವನ ಎಚ್ಚರಿಸಿತು. ಹಲೋ ಅಂದವನಿಗೆ ಅವನ ಹಳೆಯ ಸಹೋದ್ಯೋಗಿ ತರಂಗಿಣಿಯ ದನಿ ಕೇಳಿ ಇವಳ್ಯಾಕೆ ಎಷ್ಟೋ ದಿನಗಳ ಬಳಿಕ ತನ್ನ ನೆನಸಿಕೊಂಡಳು ಅಂತ ಕುತುಹಲಿಯಾದನವನು. ಅವಳು ಕೆಲವು ವರ್ಷಗಳ ಹಿಂದೆ ಇವನ ಜೊತೆಗೆ ಕೆಲಸ ಇದೆ ಕಂಪನಿಯಲ್ಲಿ ಮಾಡಿಕೊಂಡಿದ್ದಳು. ಅವಳ ಮದುವೆಯಾದ ಮೇಲೆ, ತಾನೇ ಸ್ವಂತ ಏನಾದರೂ ಮಾಡುತ್ತೇನೆ… ಇವರು ಕೊಡುವ ಪುಟಗೋಸಿ ಕಾಸಿಗೆ ಯಾವನು ಇಲ್ಲಿ ಗುಲಾಮಗಿರಿ ಮಾಡಿಕೊಂಡಿರುತ್ತಾನೆ ಅಂತ ಭಾಷಣ ಬಿಗಿದು ರಾಜಿನಾಮೆ ಕೊಟ್ಟು ಕಾಣೆಯಾಗಿದ್ದಳು. ಮೋದಮೊದಲಿಗೆ ಇವನ ಜೊತೆ ಸಂಪರ್ಕದಲ್ಲಿದ್ದಳಾದರೂ ಕ್ರಮೇಣವಾಗಿ ಅದು ಕಡಿಮೆಯಾಗಿತ್ತು. ಏನೋ ಒಂದು Consultancy ಶುರು ಮಾಡಿದ್ದಳೆಂಬ ವಿಷಯ ಇವನಿಗೆ ಗೊತ್ತಿತ್ತು ಅಷ್ಟೇ. 
“ಏನ್ ಮ್ಯಾಮ್ ಎಷ್ಟೋ ದಿನಾ ಆದ ಮೇಲೆ ಫೋನ್ ಮಾಡಿದೀರಾ? ಏನ್ ಸಮಾಚಾರಾ?”
“ಏನಿಲ್ಲಾ ರಘು… ಎಲ್ಲಾ ಆರಾಮು…. ಒಂದು ಒಳ್ಳೆ opportunity ಇತ್ತು ಅದಕ್ಕೆ ನಿಮ್ಮ ನೆನಪಾಯ್ತು” ಅಂದ್ಲು. ಯಾವ್ದಾದ್ರೂ ಹೊಸ  ಕೆಲಸ ಇರಬಹುದು. ಒಳ್ಳೆ ಟೈಮ್ ಗೆ ಮಾಡಿದಾಳೆ. ಅಂತ ಅಂದುಕೊಂಡವನೇ….
“ಸ್ವಲ್ಪ ಇರಿ, ಆಚೆ ಬರ್ತೀನಿ….” ಅಂತ ತನ್ನ ಜಾಗದಿಂದ ಎದ್ದ. ಇಂತಹ ವಿಚಾರ ಎಲ್ಲಾದರೂ ಆಫೀಸಿನೊಳಗೆ ಮಾತಾಡೋಕಾಯ್ತದಾ! ಅಲ್ಲೇ ಸ್ವಲ್ಪ ದೂರದಲ್ಲಿ ರಿಸೆಪ್ಶನ್ ಪಕ್ಕದಲ್ಲಿದ್ದ ಕಾನ್ಫರೆನ್ಸ್ ಕೋಣೆ ಖಾಲಿ ಇದ್ದುದರಿಂದ ಅದರೊಳಗೆ  ತೂರಿಕೊಂಡು ಮಾತು ಮುಂದುವರಿಸಿದ.
“…. ಹಾ ಹೇಳಿ ಈಗ”
“ಹೆಂಗ್ ನಡೀತಿದೆ ಕೆಲ್ಸಾ?” ಕೇಳಿದಳವಳು.
“ಅಯ್ಯೋ ಸಿಕ್ಕಾಪಟ್ಟೆ ಕೆಲಸ ರೀ… ನಾಯಿ ಪಾಡಾಗೋಗಿದೆ.” ಆಫೀಸಿನಲ್ಲಿ ಇವನೆಷ್ಟು ಘನ ಕಾರ್ಯ ಮಾಡುತ್ತಿದ್ದನೆಂದು ಗೊತ್ತಿಲ್ಲವೇ ಅವಳಿಗೆ!
“ಪ್ಯಾರಿಸ್ ಗೆ ಹೋಗ್ತೀರಾ?” ಇಂತಹ ವಿಚಿತ್ರ ಪ್ರಶ್ನೆಯನ್ನೇ ನಿರೀಕ್ಷಿಸಿದ್ದ ರಘು ನ ಗಂಟಲು ವಣಗಿತ್ತು! ಕಷ್ಟಪಟ್ಟು ಸಾವರಿಸಿಕೊಂಡು…
“ಏನು? ಪ್ಯಾರಿಸ್ ಗಾ?!”
“ಹೂಂ ಕಣ್ರೀ… ಬ್ಲ್ಯಾಕ್ ಇಯರ್ ಸಾಫ್ಟ್ವೇರ್ ಕಂಪನೀಲಿ ಒಂದು ದೊಡ್ಡ ಹುದ್ದೆಯ ಕೆಲಸ ಖಾಲಿ ಇದೆ. ನನಗೆ ತುಂಬಾ ಬೇಕಾದವರು ಅಲ್ಲಿ ಕಂಪನಿಯ ಅದ್ಯಕ್ಷ ಮಂಡಳಿಯಲ್ಲಿ ಇದ್ದಾರೆ. ಅವರದು ಕೋಟಾ ಇರುತ್ತೆ. ಸುಮ್ಮನೆ ಔಪಚಾರಿಕತೆಗೆ ಅಂತ  ಒಂದು ಸಂದರ್ಶನ ಇರುತ್ತೆ. ಪ್ಯಾರಿಸ್ ನಲ್ಲಿ ವಾಸ್ತವ್ಯ. ಅಲ್ಲಿನ ಶಾಖೆಯನ್ನು ನೀವು ನೋಡಿಕೊಳ್ಳಬೇಕು. ಅವರಿಗೆ ತುಂಬಾ ತುರ್ತಾಗಿ ಬೇಕಾಗಿದೆ. ನೀವು ಮುಂದಿನ ವಾರವೇ ಅಲ್ಲಿಗೆ ಹೋಗೋಕೆ ತಯಾರಿದೀರಾ?”
ಇಂತಹದೊಂದು ಪ್ರಶ್ನೆಯನ್ನು ಕನಸಿನಲ್ಲೂ ನಿರೀಕ್ಷಿಸದಿದ್ದ ರಘುಗೆ ಎಚ್ಚರ ತಪ್ಪೋದೊಂದೇ ಬಾಕಿ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾಗ ಹೀಗೊಬ್ಬಳು ಕರೆ ಮಾಡಿ ನಿನಗೆ ಅಂತ ಪ್ಯಾರಿಸ್ ನಲ್ಲಿ ಕೆಲಸ ಇದೆ, ಅದೂ ಪ್ರತಿಷ್ಟಿತ ಬ್ಲ್ಯಾಕ್ ಇಯರ್ ಕಂಪನಿಯಲ್ಲಿ.,. ಅದೂ ಅಲ್ಲದೆ ಆ ಕೆಲಸ ಪಡೆದು ಕೊಳ್ಳೋದು ಅಂದ್ರೆ ಬಾಳೆ  ಹಣ್ಣು ಸುಲಿದಷ್ಟೇ ಸುಲಭ ಅಂತ ಅವಳು  ಹೇಳುತ್ತಿದ್ದರೆ, ಇದು ಕನಸೋ ನನಸೋ ಅಂತ ಅರಿವಾಗದೆ, ಅವಳಿಗೆ ಏನು ಹೇಳಬೇಕೆಂದು ತೋಚದೆ, ಮೊಬೈಲ್ ನ ಪರದೆಯನ್ನೇ ಪಿಳಿ ಪಿಳಿ ನೋಡುತ್ತಾ ಕುಳಿತವನಿಗೆ ತರಂಗಿಣಿಯ ಹಲೋ ಹಲೋ ಅನ್ನುವ ದನಿ ಕೇಳಿ, ವಾಸ್ತವಕ್ಕೆ ಬಂದು ಉಗುಳು ನುಂಗಿ ….
“ಹಾ ಹಾ ಹೇಳಿ” ಅಂತ ಉಲಿದ.
“ನಾ ಹೇಳೋದೆಲ್ಲಾ ಹೇಳಾಯ್ತು. ಈಗ ನೀವು ಹೇಳಿ. ಈ ಕೆಲಸ ಬೇಕು ಅಂದ್ರೆ ನಿಮ್ಮ ರೇಸುಮೆ ಈಗಲೇ ಕಳಿಸಿ. ನಾನು ನಿಮ್ಮ ಬಗ್ಗೆ ಅವರಿಗೆ ಆಗಲೇ ಹೇಳಿ ಆಗಿದೆ.” ಅಂತ ಗಡಿಬಿಡಿಸಿದಳು!
ಇವನು ಕೆಲಸದಲ್ಲಿ ಎಷ್ಟು ಮೈಗಳ್ಳನೋ, ಅಷ್ಟೇ ಮೈಗಳ್ಳ ಉಳಿದ ವಿಷಯದಲ್ಲ್ಲೂ ಆಗಿದ್ದ. ತನ್ನ ರೇಸುಮೆ ಅನ್ನುವ ಜಾತಕವನ್ನು ಅವನು ಎಷ್ಟೋ ವರ್ಷಗಳಿಂದ update ಕೂಡ ಮಾಡಿರಲಿಲ್ಲ. ಅದನ್ನು ತರಂಗಿಣಿಗೆ ಹೇಳಿದರೆ ಅವಳು ಫೋನಿನಲ್ಲೇ ಉಗಿಯುವಳೆಂದು ಗೊತ್ತಿದ್ದುದರಿಂದ…
 “ನಾನು ನನ್ನ ಇತ್ತೀಚಿನ ಪ್ರಾಜೆಕ್ಟ್ ಬಗ್ಗೆ ಇನ್ನೂ ರೇಸುಮೆ ನಲ್ಲಿ ಹಾಕಿಲ್ಲ. ಸಂಜೆ ಒಳಗೆ ಬರೆದು ನಿಮ್ಮ ಇಮೇಲ್ ಗೆ ಕಳಿಸುವೆ” ಎಂದು ಹೇಳಿ ಬೀಸುವ ದೊಣ್ಣೆ ತಪ್ಪಿಸಿಕೊಂಡ.
“ಆಯ್ತು ಬೇಗ ಕಳಿಸಿ. ಯಾಕಂದ್ರೆ ಇದು ತುಂಬಾ ಅರ್ಜೆಂಟು” ಅಂತ ಹೇಳಿ ಅವಳು ಕರೆಯನ್ನು ಮೊಟಕುಗೊಳಿಸಿದಳು.
ರಘು ಭೂಮಿಯ ಮೇಲೇ ಇರಲಿಲ್ಲ. ತಕ್ಷಣವೆ ತನ್ನ ಹೆಂಡತಿಗೆ ಕರೆ ಮಾಡಿ ನಡೆದದ್ದನ್ನೆಲ್ಲ ತಿಳಿಸಿ, ಇನ್ನು ಕೆಲವೇ ದಿನಗಳಲ್ಲಿ ತಾವು ಪ್ಯಾರಿಸ್ ಗೆ ಹೋಗಬೇಕಾಗಬಹುದೆಂಬ ಸುದ್ದಿಯನ್ನು ಭಿತ್ತರಿಸಿದ. ಒಂದು ಕ್ಷಣವೂ ತಡಮಾಡದೇ ಲಗುಬಗೆಯಿಂದ ತನ್ನ ರೇಸುಮೆ ಯನ್ನು ಬರೆಯಲುತೊಡಗಿದ. ಸಂಜೆಯೊಳಗೆ, ತಾನು ಇಷ್ಟು ವರುಷ ಮಾಡಲಾರದ್ದನ್ನೆಲ್ಲ ಮಾಡಿದ್ದೇನೆ ಎಂಬಂತೆ ಆ ರೇಸುಮೆ ನಲ್ಲಿ ತುರುಕಿ ಒಂದು ಸುಳ್ಳಿನ ಕಂತೆಯನ್ನು ತಯಾರಿಸಿ ತರಂಗಿಣಿಯ ಇಮೇಲ್ ಗೆ ಕಳಿಸಿ ಕೈ ತೊಳೆದುಕೊಂಡ!
 
 

Thursday, May 7, 2015

ಕಾರ್-ಬಾರ್!


ವೆಂಕಟ್ ಗೆ ಬಾಡಿಗೆ ಕಾರು ತೆಗೆದುಕೊಳ್ಳೋದು ಹೆಚ್ಚು ಕಡಿಮೆ ಅನಿವಾರ್ಯವಾಗಿತ್ತು. ಇವನು ಇನ್ನೂ ಮೂರು ವಾರಗಳಾದರೂ ಅಮೆರಿಕಾದಲ್ಲಿ ಇರುವುದು ಬಾಕಿ ಇತ್ತು. ದಿನಾಲೂ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಇವನ ಸಹೋದ್ಯೋಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದನಾದ್ದರಿಂದ ಇವನಿಗೆ ದಿನಾಲೂ ಆಫಿಸಿಗೆ ಹೋಗುವುದೇ ಕಷ್ಟವಾಗಿತ್ತು. ಅದೂ ಅಲ್ಲದೆ, ಅಲ್ಲಿ ಕಾರಿಲ್ಲವೆಂದರೆ ಕಾಲೇ ಕಳೆದುಕೊಂಡಂತೆ. ತನ್ನ ಅಪ್ಪ ಕಾರು ತರಲು ಹೋಗುತ್ತಿದ್ದಾನೆ ಎನ್ನುವುದೇ ಖುಷಿ ಗೆ ಕೌತುಕದ ಸಂಗತಿಯಾಗಿತ್ತು. ಜಾನುನೂ  ಅಲ್ಲಿ ಇಲ್ಲಿ ಅಡ್ಡಾಡಲು ಅನುಕೂಲವಾಗುತ್ತದೆಂದು ಖುಷಿಯಲ್ಲಿದ್ದಳು. 
 
… ಅಲ್ಲಿ ಕಾರು ಚಲಾಯಿಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಆದರೆ ರಸ್ತೆ ಮೇಲೆ ಪಾಲಿಸುವ ನಿಯಮಗಳ ಬಗ್ಗೆ ಅಲ್ಲಿ ತುಂಬಾ ಕಟ್ಟು ನಿಟ್ಟು. ಅದೂ ಅಲ್ಲದೆ, ಅಲ್ಲಿಗೂ ಇಲ್ಲಿಗೂ ಕೆಲವು ವ್ಯತ್ಯಾಸಗಳೂ ಇದ್ದವು. ಭಾರತದಲ್ಲಿ ಚಾಲಕ ಬಲಕ್ಕೆ ಕುಳಿತು ಓಡಿಸಿದರೆ ಇಲ್ಲಿ ಎಡಕ್ಕೆ ಕುಳಿತುಕೊಳ್ಳಬೇಕು. ಅಲ್ಲಿ ರಸ್ತೆಯ ಎಡಗಡೆಗೆ ಚಲಿಸಿದರೆ ಇಲ್ಲಿ ಬಲಕ್ಕೆ, ಎಲ್ಲಾ ಉಲ್ಟಾ! ಅಮೆರಿಕನ್ನರು ಎಲ್ಲದರಲ್ಲೂ ಉಲ್ಟಾನೆ… ಆದರೆ ತಿನ್ನೋದೊಂದು ಮಾತ್ರ ನಮ್ಮ ತರಾನೆ! ಅಂತ ವೆಂಕಟ್ ತಮಾಷೆಗೆ ಹೇಳುತ್ತಿದ್ದ…
ಕಾರುಗಳ ಬಾಡಿಗೆ ಕೊಡುವ ಆ ಮಳಿಗೆಯಲ್ಲಿ ಒಬ್ಬ ತನ್ನನ್ನು ಪರಿಚಯಿಸಿಕೊಂಡು ಇವನನ್ನು ಸ್ವಾಗತಿಸಿದ. ತಮ್ಮ ಬಳಿ  ಇರುವ ಬಾಡಿಗೆ ಕಾರುಗಳು ಯಾವವು?… ಯಾವ್ಯಾವ ಕಾರಿಗೆ ದಿನಕ್ಕೆ ಎಷ್ಟೆಷ್ಟು ಬಾಡಿಗೆ, ಅಲ್ಲಿನ ನಿಯಮಾವಳಿಗಳೇನು ಅಂತ ತುಂಬಾ ಹೈ ಸ್ಪೀಡ್ ಅಮೇರಿಕನ್ ಅಂಗ್ರೆಜಿಯಲ್ಲಿ ವಿವರಿಸಲು ತೊಡಗಿದ. ಅವನ ಆ ಮಾತಾಡುವ ರೀತಿ ಮತ್ತು ಗತಿ ಎಷ್ಟಿತ್ತೆಂದರೆ ವೆಂಕಟ್ ಗೆ ಅವನು ಹೇಳುವ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಳ್ಳಲೇ ಕಷ್ಟವಾಯ್ತು. ಸ್ವಲ್ಪ ನಿಧಾನಕ್ಕೆ ಮಾತಾಡು ನೀನು ಮಾತಾಡೋದು ನನಗೆ ತಿಳಿಯುತ್ತಿಲ್ಲ ಅಂತ ನಿರ್ಭಿಡೆಯಿಂದ ಹೇಳಿ ಅವನ ವೇಗದ ಮಾತಿಗೊಂದು ತಡೆ ಹಾಕಿದ! ಅಲ್ವೇ ಮತ್ತೆ? ನಮ್ಮ ಮಾತೃ ಭಾಷೆಯೇ ಅಲ್ಲದ ಇಂಗ್ಲಿಶ್ ನಲ್ಲಿ ನಾವು ಮಾತಾಡೋವಾಗ ಅವರಿಗೇನಾದರೂ ಅರ್ಥವಾಗದಿದ್ದರೆ "ವ್ಹಾಟ್?" ಅಂತ ಗಂಟು ಮೊರೆ ಹಾಕಿ ಇನ್ನೊಮ್ಮೆ ಹೇಳುವಂತೆ ಮಾಡುವ ಅಮೆರಿಕನ್ನರು, ತಾವು ಮಾತ್ರ ಮಾತಾಡಿದ್ದು ಎಲ್ಲರಿಗೂ ಅರ್ಥವಾಗದಿದ್ದರೂ ನಾವು ಸುಮ್ಮನೆ ಕೇಳಲು ಸಾಧ್ಯವಿಲ್ಲ, ಅನ್ನುವುದು ವೆಂಕಟ್ ನ ಅಭಿಪ್ರಾಯವಾಗಿತ್ತು.     
 
ಆತ ನಿಧಾನವಾಗೆ ಮತ್ತೆ ಎಲ್ಲವನ್ನೂ ವಿವರಿಸಿ, ನಿಮಗೆ ಯಾವ ಕಾರ್ ಬೇಕು ಅಂತ ವಿನಯದಿಂದಲೇ ಕೇಳಿದ. ವೆಂಕಣ್ಣ ತನಗೆ ಬೇಕಾದ ಒಂದು ಕಾರಿನ ಹೆಸರು ಹೇಳಿ ಅದನ್ನು ಬುಕ್ ಮಾಡಿಸಿದ. ಇವನ ಕ್ರೆಡಿಟ್ ಕಾರ್ಡಿನಲ್ಲಿ ಅದಕ್ಕೆ ನಿಗದಿಯಾಗಿದ್ದ ಹಣವನ್ನು ಗೀಚಿಕೊಂಡು, ರಸೀದಿಯನ್ನು ಮುದ್ರಿಸಿ ಕೊಟ್ಟ. ಹೊರಗೆ ಕರೆದೊಯ್ದು ಇವನ ಕಾರನ್ನು ತೋರಿಸಿ. ಎಲ್ಲವನ್ನೂ ವಿವರಿಸಿ ನಿಮಗೆ ಶುಭವಾಗಲಿ ಅಂತ ಬೀಳ್ಕೊಟ್ಟ. ಇಷ್ಟೆಲ್ಲಾ ಪ್ರಕ್ರಿಯೆ ಅರ್ಧ ಗಂಟೆಯಲ್ಲೇ ಮುಗಿದಿತ್ತು. ಇಲ್ಲಿ ಕಾರ್ ಬಾಡಿಗೆ ಪಡೆಯೋದು ಅಂದ್ರೆ, ನಾವು ಚಿಕ್ಕವರಿದ್ದಾಗ ನಮ್ಮೂರಲ್ಲಿ  ಸೈಕಲ್ ಬಾಡಿಗೆ ಪಡೆಯುತ್ತಿದ್ದಷ್ಟೇ ಸುಲಭ ಇದೆಯಲ್ಲ ಅಂತ ಇವನಿಗೆ ಆಶ್ಚರ್ಯವಾಗಿತ್ತು. ಇಲ್ಲಿ ಕಾರ್ ಗಳು ವೈಭವೋಪೇತ ಅನ್ನೋದಕ್ಕಿಂತ ಅವಶ್ಯಕತೆ ಆಗಿರೋದರಿಂದಲೇ ಹೀಗಿದೆ ಅಂತ ಅವನಿಗನಿಸಿತು. 
 
ಆ ಕಾರನ್ನು ಓಡಿಸುವುದು ಅವನಿಗೆ ಸುಲಭವೇ ಆಗಿತ್ತು. ಯಾಕೆಂದರೆ ಅಲ್ಲಿನ ಕಾರುಗಳಲ್ಲಿ ಗೇರು ಬದಲಿಸುವ ಪ್ರಮೇಯವಿಲ್ಲ ಎಲ್ಲಾ ಆಟೋಮ್ಯಾಟಿಕ್, ಅದೂ ಅಲ್ಲದೆ ಅವುಗಳಿಗೆ ಕ್ಲಚ್ಚೂ ಇರುವುದಿಲ್ಲ. ಬರಿ ಬ್ರೇಕು ಮತ್ತು ಆಕ್ಸಿಲರೇಟರ್ ಎರಡೇ. ರೋಡ ಗಳಲ್ಲೂ ಲೇನ್ ಗಳಿರುತ್ತವೆ, ಅವುಗಳನ್ನು ಬಿಳಿಯ ಗೆರೆಗಳಲ್ಲಿ ಗುರುತಿಸಿರುತ್ತಾರೆ. ಅದರಲ್ಲೇ ಹೋಗುತ್ತಿದ್ದರಾಯ್ತು. ಅವನು ಮೊದಲ ಸಲ ಬಂದಿದ್ದಾಗ ಓಡಿಸಿದ್ದನಾದ್ದರಿಂದ ಸ್ವಲ್ಪ ಆತ್ಮ ವಿಶ್ವಾಸವೂ ಇತ್ತು. ಆ ಮಳಿಗೆಯಿಂದ ತನ್ನ ಬಾಡಿಗೆ ಕಾರಿನಲ್ಲಿ ಉಮೇದಿಯಲ್ಲೇ ಹೊರಟ. ಆ ಮಳಿಗೆಯಿಂದ ತನ್ನ ಮನೆಗೆ ೫ ಮೈಲುಗಳಷ್ಟೇ ದೂರವಿತ್ತು. ಹೊಸ ಕಾರಿನಲ್ಲಿ ವೆಂಕಣ್ಣ ಬೂಮ್ ಅಂತ ಸಾಗಿದ್ದ. ಆದರೆ ಅತಿಯಾದ ಆತ್ಮವಿಶ್ವಾಸ ಅವನ ಕೈಯಲ್ಲಿ ಒಂದು ಯಡವಟ್ಟು ಮಾಡಿಸಿತ್ತು! ಮನೆಯ ಕಡೆಗೆ ಹೋಗುವ ತಿರುವಿನಲ್ಲಿ, ತಪ್ಪಿ ಬೇರೆಯದೇ ಲೇನ್ ಹಿಡಿದುಬಿಟ್ಟಿದ್ದು ಸ್ವಲ್ಪ ಹೊತ್ತಿನಲ್ಲೇ ಅರಿವಾಯಿತು. ತಿರುಗಿ ಮತ್ತೆ ಮನೆಯ ದಾರಿ ಹಿಡಿಯಲು ತಿರುವು ಸಿಗದೇ ಹಾಗೆ ಇನ್ನೂ ೫ ಮೈಲಿ ಮುಂದೆ ಹೋದ. ಹೇಗೋ ರಸ್ತೆ ಬದಿಯ ಒಂದು ಪಾರ್ಕಿಂಗ್ ನ ಒಳಗೆ ಹೊಕ್ಕು ವಾಪಸ್ಸು ಮನೆಯ ಕಡೆಗೆ ಹೋಗುವ ಲೇನ್ ಗೆ ತಲುಪುವುದರೊಳಗೆ 1 ಗಂಟೆ ಹಿಡಿಯಿತು. ಇವನಿಗೆ ಹವಾನಿಯಂತ್ರಿತ ಕಾರಿನಲ್ಲೂ ಬೆವರು ಹರಿಯಿತು! ಅಂತೂ ಇಂತು ಮನೆ ತಲುಪಿ ಉಸ್ಸಪ್ಪ ಅಂತ ಉಸಿರು ಬಿಟ್ಟ. ನಮ್ಮ ದೇಶದಲ್ಲೇ ಮೇಲು, ಎಲ್ಲಿ ಬೇಕಾದರೂ ತಿರುಗಿಸಿಕೊಂಡರೂ ಆಗಿರೋದು ಅಂತ ತನ್ನ ಜನ್ಮಭೂಮಿಯ ನೆನಪಾಗಿ ಅವನ ಕರುಳು ಮಿಡಿಯಿತು.  
     
ಮನೆಯಲ್ಲಿ ಅಮ್ಮ, ಮಗಳು, ಕಾರು ಈಗ ಬಂದೀತು ಆಗ ಬಂದೀತು ಅಂತ ಕಾದು ಕಾದು ಕೊನೆಗೂ ಇವನು ರೊಂಯ್ ಅಂತ ಬಂದಾಗ ಸಮಾಧಾನಗೊಂಡಿದ್ದರು. ಗಂಡ ತಂದಿದ್ದ ಕಾರು ಬೆಂಗಳೂರಿನಲ್ಲಿದ್ದ ತಮ್ಮ ಕಾರಿಗಿಂತ ದೊಡ್ಡದಾಗಿದ್ದರಿಂದ ಜಾನುನ ಮುಖ ಆ ಕಾರಿನ ಹೆಡ್ ಲೈಟ್ನಂಗೆ ಅರಳಿತ್ತು. ಅವಳ ಅರಳಿದ ಮುಖ ನೋಡಿ ವೆಂಕಣ್ಣ ನ ಮುಖವೂ ಸಹಜವಾಗೇ ಅರಳಿತ್ತು! ಆದರೆ ಖುಷಿ ಮಾತ್ರ ಬೆಂಗಳೂರಿನಲ್ಲಿ ತಮ್ಮ ಬಳಿ ಇರುವ ಸ್ವಂತದ ಕಾರೆ ಇದಕ್ಕಿಂತ ಚೆನ್ನಾಗಿದೆ ಅಂತ ಹೇಳಿದ್ದು, ಮೊದಲು ನಮ್ಮಲ್ಲಿರೋದನ್ನ ಪ್ರೀತಿಸೋದು ಕಲೀರಿ ಅಂತ ಅಪ್ಪ ಅಮ್ಮನಿಗೆ ಬುದ್ಧಿ ಹೇಳಿದಂತಿತ್ತು! ಕಾರಿನಲ್ಲಿ ಇಬ್ಬರಿಗೂ ಒಂದು ಸುತ್ತು ಹೊಡಿಸಿಕೊಂಡು ಬಂದ ಇವನು. ಆಗ ಮಾತ್ರ ಮೊದಲು ಮಾಡಿದ ತಪ್ಪು ಮಾಡದೆ ಸರಿಯಾದ ಲೇನ್ ನಲ್ಲೆ ತಿರುಗಿಸಿಕೊಂಡು ಬಂದಿದ್ದ. ಅವನಿಗೆ ಸಂಜೆ ಹೋಟೆಲ್ ಒಂದಕ್ಕೆ ಊಟಕ್ಕೆ ಹೋಗೋದಿತ್ತು. ಹೊಸದಾಗಿ ನಿಯುಕ್ತನಾಗಿದ್ದ ಉಪಾಧ್ಯಕ್ಷ ಜೇ.ಸಿ.ಬಿ. ಅವತ್ತು ಅಮೆರಿಕಾದ ಶಾಖೆಯ ಎಲ್ಲ ಮ್ಯಾನೇಜರ್ ಗಳಿಗೂ ಊಟಕ್ಕೆ ಕರೆದಿದ್ದ. ಇವನೂ ಅಮೆರಿಕಾದ ಪ್ರವಾಸದಲ್ಲಿದ್ದುದರಿಂದ ಇವನಿಗೂ ಆಮಂತ್ರಣವಿತ್ತು. ಕಾರಿನಲ್ಲೇ ಹೋಗುವ ನಿರ್ಧಾರ ಮಾಡಿದ್ದ. ಇವನಿಗೆ ದಾರಿ ತೋರಿಸಲು ಕಾರಿನಲ್ಲೇ ದಿಕ್ಕು ತೋರಿಸುವ ಯಂತ್ರವಿತ್ತಲ್ಲ! 
ಆ ಹೋಟೆಲ್ ತಲುಪಿದಾಗ ಅಲ್ಲಾಗಲೇ ಕೆಲವು ಮ್ಯಾನೆಜರಗಳು ಆಗಮಿಸಿದ್ದರು. ಎಲ್ಲರೂ ಪರಸ್ಪರ ತಮ್ಮ ತಮ್ಮಲ್ಲೇ  ಪರಿಚಯಿಸಿಕೊಂಡರು. ಐದಾರು ಜನರು ಭಾರತದವರೇ ಇದ್ದರು. ಅದರಲ್ಲಿ ಹೆಚ್ಚಿನವರು ಇವನ ಹಾಗೆ ಸ್ವಲ್ಪ ದಿನಗಳಿಗೋ, ತಿಂಗಳಿಗೋ ಅಂತ ಅಲ್ಲಿಗೆ ಬಂದವರಾಗಿದ್ದರು. ಅದರಲ್ಲಿ ರಘುವರನ್ ಮಾತ್ರ ಕಳೆದ ಹತ್ತು ವರ್ಷಗಳಿಂದ ಅಮೇರಿಕಾದಲ್ಲೇ ತಳ ಊರಿದವನಾಗಿದ್ದಾನೆಂದು ಅವನ ಮಾತಾಡುವ ಶೈಲಿಯಲ್ಲೇ ಇವನಿಗೆ ತಿಳಿಯಿತಲ್ಲದೆ, ಅದನ್ನು ಅವನೇ ಹೇಳಿಕೊಂಡ ಕೂಡ. ಅವನು ಮೂಲತಃ ತಮಿಳುನಾಡಿನವನಂತೆ. ಅಲ್ಲಿದ್ದಿದ್ದ ಉಳಿದವರೆಲ್ಲ ಅಮೇರಿಕಾದವರೇ ಆಗಿದ್ದರೂ ಅವರ ಮೂಲ ದೇಶ ಚೈನಾ, ಮಲೇಶಿಯಾ, ರಶಿಯಾ ಆಗಿತ್ತು. ಹೀಗೆ ಇಡೀ ಜಗತ್ತೇ ಅಲ್ಲಿತ್ತು! ಎಷ್ಟಂದರೂ ಅಮೇರಿಕಾ ವಲಸಿಗರ ದೇಶವಲ್ಲವೇ? 
ಅಷ್ಟರಲ್ಲೇ ಜಾನ್ ಸೀ. ಬೇಕರ್ ತನ್ನ ಚಾಣಕ್ಯ ಜೇಕಬ್ ನೊಂದಿಗೆ ಅಲ್ಲಿಗೆ ಆಗಮಿಸಿದ. ಎಲ್ಲರ ಪರಿಚಯ ಮಾಡಿಕೊಂಡ. ವೆಂಕಣ್ಣ ಭಾರತದ ಶಾಖೆಯವನೆಂದು ಗೊತ್ತಾದಾಗ ಅವನ ಕಣ್ಣುಗಳು ಇವನನ್ನು ಮೇಲಿಂದ ಕೆಳಗೆ ನೋಡಿ ಹುಬ್ಬು ಗಂಟಿಕ್ಕಿದ್ದನ್ನು ಗಮನಿಸಿದ ವೆಂಕಟ್ ಗೆ ಒಂದು ತರಹದ ಮುಜುಗರವಾದರೂ ಅಮೆರಿಕಾದ ದೊರೆಯ ಎದುರು ಅದನ್ನು ತೋರ್ಪಡಿಸದೆ ಒತ್ತಾಯದ ಮುಗುಳ್ನಗೆಯ ಸೂಸಿ ಅವನಿಗೆ ಶುಬಾಶಯ ಹೇಳಿದ.

ಊಟಕ್ಕಿಂತ ಮೊದಲು ಅಲ್ಲಿ ಶರಾಬಿನ ವ್ಯವಸ್ಥೆಯೂ ಇತ್ತು. ಎಲ್ಲರೂ ಕುಡಿಯಲು ಶುರು ಹಚ್ಚಿಕೊಂಡರೂ ವೆಂಕಟ್ ಮಾತ್ರ ಸುಮ್ಮನೆ ಒಂದು ಕೂಲ್ ಡ್ರಿಂಕ್ಸ್ ಹೀರುತ್ತಿದ್ದುದು ನೋಡಿ, ತನ್ನ ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ಬಂದ ದಿವಾಕರ್ ನೀನು ಯಾಕೆ ಕುಡಿಯುತ್ತಿಲ್ಲ ಎಂದು ಇವನಿಗೆ ಕೇಳಿದ. ತಾನು ವಾಪಸ್ಸು ಮನೆಗೆ ಹೋಗಬೇಕೆಂದೂ, ಕುಡಿದು ಕಾರು ಓಡಿಸುವುದು ಸರಿಯಲ್ಲವೆಂದೂ ವೆಂಕಟ್ ಹೇಳಿದ್ದು ಕೇಳಿ ಸುಧಾಕರ್ ಬಿದ್ದು ಬಿದ್ದು ನಕ್ಕ! 
"ನಿಮ್ಮೂರಿನ ಥರ, ಕಾರಿನಲ್ಲಿ ಕೂತವರ ಬಾಯಿಗೆ ಮಷಿನ್ ಹಿಡಿದು ಕುಡಿದಿದ್ದೀಯೋ ಇಲ್ಲವೋ ಅಂತ ಇಲ್ಲಿ ತಪಾಸಣೆ ಮಾಡೋದಿಲ್ಲ ಮಾರಾಯ! ಕುಡಿದರೂ ಕೂಡ, ನೀನು ಸರಿಯಾಗಿ ಲೇನ್ ಹಿಡಿದು ಕಾರನ್ನು ಓಡಿಸಿಕೊಂಡು ಹೋದ್ರೆ ನಿನ್ನನ್ನು ಯಾರೂ ಕೇಳರು. ಹಾಕು ಒಂದೆರಡು ಪೆಗ್ಗು…" ಅಂತ ಪುಸಲಾಯಿಸಲು ನೋಡಿದ. ಇವನು ನಕ್ಕು, ತನಗೆ ಕುಡಿದು ಕಾರು ಓಡಿಸುವುದು ಅಭ್ಯಾಸವಿಲ್ಲವೆಂದು ನಯವಾಗಿಯೇ ಅವನನ್ನು ಸಾಗಹಾಕಿದ. ದಿವಾಕರ್ ಅಲ್ಲಿಗೆ ಹೋಗಿ ಬರಿ ಆರು ತಿಂಗಳಾಗಿತ್ತಷ್ಟೆ. ಆದರೂ ತನ್ನ ದೇಶವನ್ನೇ "ನಿಮ್ಮೂರು" ಅಂತ ಮೂದಲಿಸುವುದು ಕಂಡು ಇವನಿಗೆ ವಿಚಿತ್ರವೆನಿಸಿತ್ತು. 
ಇವನು ಹಾಗೆ ಸುತ್ತಲೂ ಗಮನಿಸುತ್ತಿದ್ದ. ಜಾನ್ ಕೆಲವರ ಜೊತೆಗೆ ಹರಟುತ್ತಿದ್ದ. ಅದು ಸಹಜದ ಮಾತುಕತೆ ಅಂತ ಇವನಿಗೆ ಕಂಡು ಬರಲಿಲ್ಲ. ಅವನು ಎಲ್ಲರಿಂದಲೂ ಕೆಲವು ಸಂಗತಿಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತಿದ್ದ. ಜೇಕಬ್ ಕೂಡ ಅವರ ಮಾತಿನಲ್ಲಿ ಸಿಗುವ ಕೆಲವು ವಿಶಿಷ್ಟಗಳನ್ನು ತನ್ನ ಟ್ಯಾಬ್ಲೆಟ್ ನಲ್ಲಿ ಅವರಿಗೆ ಗೊತ್ತಾಗದಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಅದಕ್ಕೆ ಇವರು ಎಲ್ಲರಿಗೂ ಕುಡಿಸಿರಬೇಕು ಅಂತ ವೆಂಕಟ್ ಗೆ ಮನದಟ್ಟಾಗಿತ್ತು. 
ಇನ್ನೊಂದು ಮೂಲೆಯಲ್ಲಿ ಅಮೆರಿಕದವನೇ ಆಗಿಹೋಗಿದ್ದ ರಘುವರನ್ ತನ್ನ ಅಲ್ಲಿನ ಸಹೋದ್ಯೋಗಿಗಳಿಗೆ ತಾನು ಕೊನೆಯ ಸಲ ಭಾರತಕ್ಕೆ ಹೋಗಿದ್ದಾಗ ನಡೆದ ಘಟನೆಯನ್ನು ಅಮೇರಿಕಾದ ಉಚ್ಚಾರಣೆಯಲ್ಲೇ ವಿವರಿಸುತ್ತಿದ್ದ.
"ನಿಮಗೆ ಗೂತ್ತಾ? ನಾನು ಚೆನ್ನೈ ನಲ್ಲಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದೆ. ಅದೂ ಮೇ ತಿಂಗಳು ಬೇರೆ. ಅಲ್ಲಿನ ಸೆಕೆ ಹೇಳತೀರದಷ್ಟಿರುತ್ತದೆ. ನಾನು ನನ್ನ ಏಸಿ ರೂಮಿನಿಂದ ಹೊರಬಿದ್ದೆ. ಬೆವರು ಧಾರಾಕಾರ ಸುರಿಯುತ್ತಿತ್ತು. ನನಗೆ ಎಲ್ಲೋ ಹೋಗಬೇಕಿತ್ತು. ಯಾವುದಾದರೂ ಟ್ಯಾಕ್ಸಿ ಸಿಗುತ್ತೇನೋ ಅಂತ ರೋಡಿಗೆ ಬಂದರೆ… ಅಲ್ಲಿ ನನ್ನ ಮುಂದೇನೆ ಎರಡು ಹಸುಗಳು ನಿಂತಿವೆ! ಹಿಂದೆ ತಿರುಗಿದರೆ ಒಂದು ಬಿಡಾಡಿ ನಾಯಿ! ನನಗಂತೂ ದಿಕ್ಕು ತೋಚದೆ, ಹಾಗೆ ವಾಪಸ್ಸು ಹೋಟೆಲ್ ರೂಮಿಗೆ ಬಂದು ಬಾಗಲು ಹಾಕಿಕೊಂಡೆ!"
ವಿದೇಶಿ ಸಹೋದ್ಯೋಗಿಗಳು ಆಶ್ಚರ್ಯ ಚಕಿತರಾಗಿದ್ದರು. ರೋಡಿನಲ್ಲಿ ಹಸುಗಳೇ? ಅದು ಸಾಧ್ಯವೇ ಎಂಬಂತಿತ್ತು ಅವರ ನೋಟ. ಅಲ್ಲೇ ನಿಂತಿದ್ದ ಭಾರತದವನೇ ಆದ ಸುರೇಶ ಇವನ ಅನುಭವ ಕೇಳಿ ಬಿದ್ದು ಬಿದ್ದು ನಕ್ಕ. ತನಗೂ ಒಮ್ಮೆ ಹಿಂಗೆ ಆಗಿತ್ತು ಅಂತ ಹೇಳಿ ತನ್ನ ಅನುಭವವನ್ನೂ ಹಂಚಿಕೊಂಡ!
ವೆಂಕಟ್ ಗೆ ಇದನ್ನು ನೋಡು ರೇಜಿಗೆ ಹುಟ್ಟಿತ್ತು. ಇದೆ ರಘುವರನ್ ಹತ್ತು ವರ್ಷಗಳ ಹಿಂದೆ ಹಸುಗಳ ಹಿಂದೆ ಆಟ ಆಡಿಕೊಂಡಿದ್ದಿರಬೇಕು. ಅಲ್ಲೇ ಹುಟ್ಟಿ ಬೆಳೆದ ಅವನು, ಇಲ್ಲಿಗೆ ಬಂದ ಕೂಡಲೇ ಹೀಗೆ ಬದಲಾಗುವುದೇ? ಅದೂ ಅಲ್ಲದೆ ತನ್ನ ದೇಶದ ಬಗ್ಗೆ ಇತರರಿಗೆ  ಈ ರೀತಿ ಹೇಳುವುದೇ? ಥೂ ಇವರ ಜನ್ಮಕ್ಕಿಷ್ಟು ಬೆಂಕಿ ಹಾಕ… ಅಂತ ಸ್ವಲ್ಪ ಮೆಲುದನಿಯಲ್ಲೇ ಬೈದುಕೊಂಡ. 
ಅಲ್ಲಿಲ್ಲಿ ಮಾತಾಡಿಕೊಂಡಿದ್ದ ಜಾನ್ ಚಿತ್ತ ಈಗ ವೆಂಕಟ್ ಹತ್ರ ಹರಿದಿತ್ತು. ಅದು ಇದೂ ಕೇಳುತ್ತ ಇವನ ಸಮಸ್ಯೆಗಳೇನು ಅಂತ ವಿಚಾರಿಸಿದಂತೆ ಮಾಡಿ, ಅವನ ಮನಸ್ಸನ್ನು ಓದುವ ಕೆಲಸಕ್ಕೆ ಶುರು ಹಚ್ಚಿಕೊಂಡಿದ್ದ. ತಾನು ಮುಂದಿನ ವಾರವೇ ಭಾರತಕ್ಕೆ ಹೋಗುತ್ತಿದ್ದೇನೆಂದೂ, ಅಲ್ಲಿ ನಿನ್ನ ಜೊತೆಗೆ ಮಾತಾಡಲು ಆಗುವುದಿಲ್ಲವಾದ ಕಾರಣ ನಾಳೆ ತನ್ನ ಆಫೀಸಿನಲ್ಲಿ ಮುಕತಃ ಭೆಟಿಯಾಗೆಂದು ಅಪ್ಪಣೆ ಮಾಡಿದ. 
 
ಕುಡಿದಾದ ಮೇಲೆ ಸುಮಾರು ಒಂದು ಗಂಟೆಯ ಬಳಿಕ ಎಲ್ಲರೂ ಊಟ ಮಾಡಿ, ಅಲ್ಲಿಂದ ತಂತಮ್ಮ ಮನೆಗಳಿಗೋ, ಹೋಟೆಲಿಗೋ ತೆರಳಿದರು. ಇವನು ತನ್ನ ಕಾರನ್ನು ಡ್ರೈವ್ ಮಾಡುತ್ತಿದ್ದ. ಮನಸ್ಸು ಜಾನ್ ಬಗ್ಗೆಯೇ ಯೋಚಿಸಲು ತೊಡಗಿತ್ತು. ಅವನು ಭಾರತಕ್ಕೆ ಹೋಗುತ್ತಿರುವ ಬಗ್ಗೆ ಇವನ ಬಾಸ್ ಸುಧೀರ್ ಜೊತೆಗೆ ಮಾತಾಡುತ್ತಿದ್ದಾಗಲೋಮ್ಮೆ, ಜಾನ್ ಅಲ್ಲಿಗೆ ಹೋಗಿ ಎಷ್ಟೋ ತಲೆಗಳನ್ನು ಉರುಳಿಸಲಿದ್ದಾನೆಂದು ಅವನು ಹೇಳಿದ್ದು ನೆನಪಿಗೆ ಬಂತು. ಯಾಕೋ, ಭಾರತದಲ್ಲಿ ತಾನು ಮಾಡಿಕೊಂಡಿದ್ದ ಸಾಲಗಳು ಜಾಸ್ತಿಯಾದವೆಂದು ವೆಂಕಟ್ ಗೆ ಈಗ ಹಠಾತ್ ಆಗಿ ಅನಿಸಲು ಶುರುವಾಗಿತ್ತು…! 
 
(ಮುಂದುವರಿಯುವುದು)