Tuesday, July 29, 2014

ಇರುಳಲಿ ಕಂಡವಳು! (ದೆವ್ವದ ಕಥೆಗಳು – ಭಾಗ ೨)

 
ಬಿದರಕಾನ ಅನ್ನುವ ಮಲೆನಾಡಿನ ಸುಂದರ ಹಳ್ಳಿಗೆ, ನನ್ನ ಮಾವನ ಊರಾದ ಕಿಬ್ಬಳ್ಳಿಯಿಂದ ಒಂದು ಗಂಟೆಯ ದಾರಿ. ಕಿಲೋಮೀಟರುಗಳ ಲೆಕ್ಕದಲ್ಲಿ ಬರಿ ಹದಿನೈದು. ಆದರೆ ಬಳುಕುತ್ತ ಹರಿಯುವ ಮೋಹಕ ನದಿ ಅಘನಾಷಿನಿಯ ಪಕ್ಕಕ್ಕೆ ಚಾಚಿಕೊಂಡ ಏರಿಳಿತದ, ತಿರುವುಗಳಿಂದಲೇ ಭೂಷಿತವಾದ ಘಾಟ್ ರಸ್ತೆಯನ್ನು ಕ್ರಮಿಸುವುದಕ್ಕೆ ಒಂದು ಗಂಟೆ ಬೇಕು. ಆ ರಸ್ತೆಯಲ್ಲಿ ಕಾರು ಓಡಿಸುವುದೇ ಒಂದು ಖುಷಿ, ಎಷ್ಟೋ ಸಲ ಆ ಖುಷಿ ಓಡಿಸುವವರಿಗೆ ಮಾತ್ರ! ಯಾಕೆಂದರೆ ಹಿಂದೆ ಕುಳಿತವರು ರೋಡಿನ ತಿರುವಿಂಗ್ಸ್ ನಲ್ಲಿ ಹೊಟ್ಟೆ ತೊಳಸಿಕೊಳ್ಳುವವರಾಗಿದ್ದರೆ, 'ಗೊಳ್' ಅಂತ ವಾಂತಿ ಮಾಡಿಕೊಂಡು, ಕಾರಿನ ಬಣ್ಣವನ್ನೇ ಬದಲಾಯಿಸಿಬಿಡುತ್ತಾರೆ. ಅದಕ್ಕೆ ಸಲ್ಪ ನಿಧಾನ ಓಡಿಸಿಕೊಂಡು ಹೋಗಬೇಕು. ಬಿದರಕಾನ್ ದಲ್ಲಿ ನನ್ನ 'ಧಪ' ನ ಚಿಕ್ಕಮ್ಮನ ಮನೆ ಇದೆ. ('ಧಪ' ಅಂದ್ರೆ ಧರ್ಮ ಪತ್ನಿ ಅಂತ ಬಿಡಿಸಿ ಹೇಳಬೇಕೆ?!) ಊರಿಗೆ ಹೋದಾಗಲೊಮ್ಮೆ ಬಿದರಕಾನಿಗೆ ಹೋಗುವುದು ನಮ್ಮ ಅಲಿಖಿತ ನಿಯಮ. ಆ ಸಲ ನನ್ನ ತಮ್ಮ ಹಾಗೂ ಅವನ ಹೆಂಡತಿಯೂ ಬಂದಿದ್ದರು. ಎಲ್ಲರನ್ನೂ ಕರೆದುಕೊಂಡೇ ಅಲ್ಲಿಗೆ ಹೋಗಿದ್ದೆವು. 
ಪ್ರತೀ ಸಲ ಚಿಕ್ಕಮ್ಮನ ಮನೆಗೆ ಹೋದಾಗಲೂ ಬೆಳಿಗ್ಗೆಯೇ ಹೋಗಿರುತ್ತೇವೆ. ನಂತರ ಮದ್ಯಾಹ್ನದ ಊಟ; ಊಟ ಆದಮೇಲೆ ಹರಟೆ; ಸಂಜೆಗೆ ಅವಲಕ್ಕಿ, ಹಲಸಿನ ಚಿಪ್ಸು, ಸೌತೆಕಾಯಿ, ಕಾಳು ಮೆಣಸಿನ ಚಟ್ನಿ, ಜೊತೆಗೆ ಚಾ. ಇದೆಲ್ಲದರ ಜೊತೆಗೆ ಮತ್ತೆ ಹರಟೆ! ಅಲ್ಲಿಗೆ ಹೋದರೆ ಏಳಲು ಮನಸ್ಸೇ ಬಾರದು. ಹಾಗೆಯೇ ಕತ್ತಲಾಗಿಬಿಡುತ್ತದೆ. ಅಷ್ಟೊತ್ತಿಗೆ, ರಾತ್ರಿಯಾಯ್ತು ಊಟ ಮಾಡಿ ಇಲ್ಲೇ ಇದ್ದು ಬೆಳಿಗ್ಗೆ ಹೋಗಿ ಅಂತ ಒತ್ತಾಯ ಮಾಡುತ್ತಾರೆ. ಹಾಗೆ ಮಾಡಿದರೆ ಕಿಬ್ಬಳ್ಳಿಯಲ್ಲಿ ನನ್ನ ಅತ್ತೆ ಸುಮ್ಮನಿರುತ್ತಾರೆಯೆ? ನಾವು, ಇಲ್ಲ ವಾಪಸ್ಸು ಅತ್ತೆ ಮನೆಗೆ ಹೋಗಲೇಬೇಕು ಅನ್ನುತ್ತೇವೆ. ಅವತ್ತೂ ಹಾಗೇ ಆಯ್ತು. ನಾವು ಹೋಗುತ್ತೇವೆ ಅನ್ನುತ್ತಲೆ ಹರಟೆ ಹೊಡೆಯುತ್ತಾ ಕೂತು ಬಿಟ್ಟೆವು. ಸ್ವಲ್ಪ ಸ್ವಲ್ಪ ಅನ್ನುತ್ತಲೇ ಊಟವನ್ನೂ ಮುಗಿಸಿದೆವು! ಕಿಬ್ಬಳ್ಳಿಗೆ ವಾಪಸ್ಸಾಗಲೇಬೇಕಿತ್ತು. ಕತ್ತಲೇನೊ ಆಗಿತ್ತು. ಆದರೆ ಹಿಂದೆ ಎಷ್ಟೋ ಸರ್ತಿ ಕತ್ತಲಲ್ಲಿ ಈ ರಸ್ತೆಯಲ್ಲಿ ಗಾಡಿ ಓಡಿಸಿದ ಅನುಭವದ ಘಮಿಂಡಿ ನನಗಿತ್ತು. ಅದೂ ಅಲ್ಲದೇ ಅವತ್ತು ಮಳೆಯೂ ಇರಲಿಲ್ಲ. ಆಕಾಶ, ಮೋಡಗಳಿಲ್ಲದೇ ಶುಭ್ರವಾಗಿತ್ತಲ್ಲದೇ ನಕ್ಷತ್ರಗಳಿಂದ ಫಳ ಫಳ ಹೊಳೆಯುತ್ತಿತ್ತು. ನಾವೆಲ್ಲಾ ಚಿಕ್ಕಮ್ಮನ ಮನೆ ಬಿಟ್ಟಾಗ ರಾತ್ರಿ ಹತ್ತು ಹೊಡೆದಿತ್ತು.    
ಅದು ಇದು ಮಾತಾಡಿಕೊಂಡು ನಿಧಾನವಾಗಿ ಗಾಡಿ ಒಡಿಸುತ್ತಿದ್ದೆ. ಆಗಲಷ್ಟೇ ಎಲ್ಲರೂ ಹೊಟ್ಟೆ ಬಿರಿಯುವಂತೆ ಊಟ ಮಾಡಿದ್ದರಿಂದ ಜೋರಾಗಿ ಓಡಿಸಿ ನನ್ನ ಕಾರಿನ ಬಣ್ಣ ಬದಲಿಸುವ ಇರಾದೆ ನನಗಂತೂ ಇರಲಿಲ್ಲ! ಅರ್ಧ ದಾರಿ ಮುಟ್ಟಿರಬೇಕು, ಹರಸಿಕಟ್ಟಾ ದಾಟಿ ತುಂಬಾ ಮುಂದೆ ಬಂದಿದ್ದೆವು. ಅಲ್ಲೊಂದು ಹೇರ್ ಪಿನ್ ತಿರುವು. ಅರ್ಧದಷ್ಟಾದರೂ ತಿರುಗುವವರೆಗೆ ಮುಂದಿನದೇನು ಕಾಣದು. ನನ್ನ ಹೆಡ್ ಲೈಟ್ ಹೈ ಬೀಮ್ ನಲ್ಲಿತ್ತು. ನಿಧಾನವಾಗಿ ತಿರುಗಿಸಿ ಎದುರಿಗೆ ನೋಡಿದರೆ ಕಾರಿನ ಎಡಗಡೆಗೊಂದು ಉದ್ದನೆಯ ಅಕೃತಿ ನಿಂತಿದ್ದು ಕಂಡಿತು. ಅದು ಮೊದಲು ನನಗೇ ಕಂಡಿತಾದರೂ ಕ್ರಮೇಣ ಕಾರಿನಲ್ಲಿ ನನ್ನೊಟ್ಟಿಗಿದ್ದ ಎಲ್ಲರೂ ಗಮನಿಸಿದರು. ಅದು ಸುಮಾರು ಐವತ್ತು ವಯಸ್ಸಿನ ಹೆಣ್ಣು ಮಗಳು. ಮುಖ ನಮ್ಮ ಕಡೆಗೇ ವಾಲಿದಂತಿದೆ. ಅರ್ಧ ಭಾಗ ಸುಟ್ಟಂತೆ ವಿಕಾರವಾಗಿತ್ತು. ಆ ದೃಶ್ಯ ನೋಡಿ ಕಾರಿನಲ್ಲಿದ್ದ ಎಲ್ಲರೂ ಅ ವಿಕಾರವಾದ ವ್ಯಕ್ತಿ ದೆವ್ವವೇ ಅಂತ ಹೆದರಿ ಕಂಗಾಲಾಗಿದ್ದರು.  ದೆವ್ವ ಗಿವ್ವ ಏನೂ ಇಲ್ಲ ಅಂತ ಎಲ್ಲರಿಗೂ ಧೈರ್ಯ ಹೇಳುತ್ತಿದ್ದೆನಾದರೂ ನನಗೂ ಒಳಗೊಳಗೆ ಪುಕು ಪುಕು! ಆ ತಂಪಿನಲ್ಲೂ ನಾ ಬೆವರಿದ್ದೆ. ಕಾಲು, ತೊಡೆಗಳಲ್ಲಿ ಶಕ್ತಿ ಕಳೆದುಕೊಂಡ ಅನುಭವ. ನಾನು ನಡಗುತ್ತಲೇ ಕಾರನ್ನು ಅಲ್ಲಿಂದ ಮುಂದೆ ಜೋರಾಗಿ ಓಡಿಸಿದೆ. ಎಲ್ಲರೂ ಆ ಕ್ಷಣದಲ್ಲಿ ಮಾತು ನಿಲ್ಲಿಸಿದ್ದರು. ನನ್ನ ತಮ್ಮನ ಎರಡು ವರ್ಷದ ಮಗಳು ಮಾತ್ರ ಮೇಲೇನೋ ತೋರಿಸುತ್ತ ವಟ ವಟನೇ ಮಾತಾಡುತ್ತಿದ್ದುದು ನಮ್ಮ ಭಯವನ್ನು ಇನ್ನೂ ಹೆಚ್ಚಿಸಿತ್ತು. ಅಲ್ಲಿ ನೋಡಿದ್ದು ಭೂತವೇ ಅಂತ ನಮಗೇ ಖಾತ್ರಿಯಾಗಿತ್ತು. ಯಾಕಂದ್ರೆ ನಡೆದುಕೊಂಡು ಬರುವಷ್ಟು ಹತ್ತಿರದಲ್ಲಿ ಅಲ್ಲಿ ಯಾವುದೇ ಹಳ್ಳಿ ಅಥವ ಮನೆ ಇರಲಿಲ್ಲ.ಅಮೇಲೆ ಅವತ್ತು ಅಮವಾಸ್ಯೆ ಇದ್ದದ್ದು ನಮ್ಮ ಸಂಶಯವನ್ನು ಮತ್ತಷ್ಟು ಧೃಡಪಡಿಸಿತ್ತು. 
ಆ ಜಾಗದಿಂದ ಎಷ್ಟೊ ಮುಂದೆ ಬಂದೆವಾದರೂ ದೆವ್ವ ನಮ್ಮ ಮನದಿಂದ ಹೊರ ಹೋಗಿರಲಿಲ್ಲ. ಯಾರಿಗೂ ಹಿಂತಿರುಗಿ ನೋಡುವ ಧೈರ್ಯವಿರಲಿಲ್ಲ. ಆ ದೆವ್ವ ನಮ್ಮ ಬೆನ್ನು ಹತ್ತಿಕೊಂಡು ಬರುತ್ತಿರಬಹುದೇನೊ ಅನ್ನುವ ಸಂಶಯ! ರಸ್ತೆಯಲ್ಲಿ ಪ್ರತಿ ಸಲ ತಿರುವು ಬಂದಾಗಲೂ ನನಗೆ ಆ ಹೆಣ್ಣು ಮಗಳು ಮತ್ತೆ ಕಂಡುಬಿಟ್ಟರೆ ಅನ್ನುವ ಯೋಚನೆ ಬರುತ್ತಿದ್ದಂತೇ ಹೊಟ್ಟೆಯಲ್ಲಿ ರುಮ್ ಅನ್ನುವ ಅನುಭವ. ನನ್ನ ತಮ್ಮನ ಮಗಳು ಮಾತ್ರ ತನ್ನ ತೊದಲು ನುಡಿಗಳಲ್ಲಿ ನಿರಂತರವಾಗಿ ಇನ್ನೂ ವಟಗುಡುವುದ ಮುಂದುವರಿಸಿದ್ದಳು! 
ಅಂತೂ ಇಂತೂ ಊರು ಹತ್ತಿರ ಬಂದಂತೆ ನನ್ನ ಧೈರ್ಯ ಇಮ್ಮಡಿಸಿತು. ಮಾವನ ಮನೆ ಮುಟ್ಟಿ ದೊಡ್ಡ ನಿಟ್ಟುಸಿರಿಟ್ಟೆವು. ಮಾವನಿಗೆ ನಮ್ಮ ಅನುಭವ ಹೇಳಲಾಗಿ, ಅವರು ಎಳ್ಳಷ್ಟೂ ಚಕಿತರಾಗದೆ, "ಹೌದ ಮಾರಾಯಾ … ಅಲ್ಲೊಂದು ಪಿಶಾಚಿ ಇದ್ದು. ಸುಮಾರು ಜನ ನೋಡಿದ್ವಡಾ" ಅನ್ನಬೇಕೆ!? ಅಂದರೆ ನಾವು ನೋಡಿದ್ದು ನಿಜವಾದ ಭೂತವೇ! ಅವತ್ತು ರಾತ್ರಿ ನಿದ್ದೆಯಲ್ಲಿ ಬೇರೆ ಯಾರೂ ಬರಲೇ ಇಲ್ಲ, ಅದೇ ಮೋಹಿನಿಯದೇ ದರ್ಬಾರು.        
ಆಮೇಲೆ ನಾಲ್ಕು ದಿನ ಮಾವನ ಮನೆಯಲ್ಲಿದ್ದೆವು. ದೆವ್ವದ ವಿಚಾರ ಸ್ವಲ್ಪ ಮಟ್ಟಿಗೆ ಮನದಿಂದ ಮರೆಯಾಗಿತ್ತಾದರೂ ಪೂರ್ತಿಯಾಗಿ ಮರೆತಿರಲಿಲ್ಲ. ವಾಪಸ್ಸು ಬೆಂಗಳೂರಿಗೆ ಹೋಗುವ ಸಮಯ ಬಂದಿತ್ತು. ನಾವು ಅದೇ ರೋಡಿನಲ್ಲಿ ಹೋಗಬೇಕಿತ್ತಾದರೂ ಬೆಳಗಿನ ಪ್ರಯಾಣವಾಗಿದ್ದರಿಂದ ಅಷ್ಟು ಹೆದರಿಕೆ ಇರಲಿಲ್ಲ. ಅದೇ ದಾರಿಯಲ್ಲಿ ಚಿಕ್ಕಮ್ಮನ ಮನೆಯಾದ್ದರಿಂದ ಮತ್ತೊಂದು ಚಿಕ್ಕ ಭೇಟಿ ಕೊಟ್ಟು ಹೊಗುವುದು ನಮ್ಮ ಮತ್ತೊಂದು ಅಲಿಖಿತ ನಿಯಮವಾಗಿತ್ತು. ದಾರಿಯಲ್ಲಿ ಬರುವಾಗ ಮತ್ತೆ ಆ ದೆವ್ವವನ್ನು ಕಂಡ ಸ್ಪಾಟ್ ನೋಡಿ ದೆವ್ವವಿಲ್ಲದ್ದು ಖಚಿತಪಡಿಸಿಕೊಂಡು ಮುಂದೆ ಹೊರಟೆವು. ಚಿಕ್ಕಮ್ಮನ ಮನೆಯಲ್ಲಿ ಸ್ವಲ್ಪ ಹೊತ್ತು ಇದ್ದು, ಅವರ ಮನೆಯಿಂದ ಹೊರಡುವ ಸ್ವಲ್ಪ ಮೊದಲು ನಾವು ಕತ್ತಲಲ್ಲಿ ಕಂಡ ದೆವ್ವದ ವಿಷಯ ಪ್ರಸ್ತಾಪಿಸಿದೆವು. ಚಿಕ್ಕಪ್ಪ ಸಣ್ಣ ನಗು ನಕ್ಕು 'ಓ ಜಾನಕಿನ್ನ ನೋಡಿದ್ರಾ?' ಅಂದರು. ಅಯ್ಯೊ ಕರ್ಮವೇ ಇಲ್ಲಿನವರು ದೆವ್ವಕ್ಕೂ ಒಂದು ಹೆಸರಿಡುತ್ತಾರೆಯೆ? ಅಥವ ಆ ದೆವ್ವ ಜಾನಕಿ ಅನ್ನುವ ಹೆಣ್ಣುಮಗಳ್ದೇ ಇರಬೇಕು ಅಂತ ನಾನು ಅಂದಾಜಿಸಿದೆ.    ಅವರು ಮುಂದುವರಿಸಿ "ಅವಳು ಯಕ್ಷಗಾನದ ಹಾಡುಗಳನ್ನು ತುಂಬಾ ಚೆನ್ನಾಗಿ ಹಾಡ್ತಾಳೆ" ಅಂದ್ರು. ದೆವ್ವವನ್ನು ನೋಡಿಯೇ ನಾವು ಕಂಗಾಲಾಗಿದ್ದರೆ ಆ ದೆವ್ವದ ಕಂಠದಿಂದ ಯಕ್ಷಗಾನದ ಹಾಡು ಕೇಳಿ ಆಸ್ವಾದಿಸಿದ್ದ ಚಿಕ್ಕಪ್ಪನ ಧೈರ್ಯಕ್ಕೆ ನಾನು ತಲೆದೂಗಿದೆ!
"ದೆವ್ವಾನೂ ಹಾಡ್ತಾವೇನ್ರೀ?" ಅಂತ ನಾನು ಮೂಗಿನ ಮೇಲೆ ಬೆರಳಿಟ್ಟು ಕೇಳುತ್ತಿದ್ದರೆ, ಚಿಕ್ಕಪ್ಪ ಗಹಗಹಿಸಿ ನಕ್ಕು "ಅದ್ಯಾವ ದೆವ್ವ ಮಾರಾಯ. ಅವಳೊಬ್ಬ, ಸಲ್ಪ ಬುದ್ಧಿ ಸ್ಥೀಮಿತದಲ್ಲಿಲ್ಲದ ಹೆಣ್ಣುಮಗಳು. ರಾತ್ರಿಯಲ್ಲಾ ಹಿಂಗೇ ಅಡ್ಡಾಡ್ತಿರ್ತಾಳೆ. ಒಂದು ಬೆಂಕಿಯ ಅವಘಡದಲ್ಲಿ ಅವಳ ಮುಖದ ಒಂದು ಭಾಗ ಸುಟ್ಟಿದೆ. ಅದಕ್ಕೆ ನಿಮಗೆ ಕತ್ತಲಲ್ಲಿ ಆ ತರಹ ಕಂಡಿದ್ದು" ಅಂದಾಗ. ನನಗೆ ನಗಬೇಕೋ ಅಳಬೇಕೊ ತಿಳಿಯದಾಗಿ "ನಾನ್ ಹೇಳ್ದೆ ಚಿಕ್ಕಪ್ಪ, ಅದು ದೆವ್ವ ಅಲ್ಲ ಅಂಥೇಳಿ. ಇವರೆಲ್ಲ ಸುಮ್ ಸುಮ್ನ ಹೆದರಿ ಕಂಗಾಲಾಗಿದ್ರು" ಅಂದು …. "ನಡ್ರೀ ಹೊಗೋಣ, ಬೆಂಗಳೂರು ಮುಟ್ಲಿಕ್ಕೆ ತಡಾ ಆಗ್ತದ" ಅಂತ ಅಲ್ಲಿಂದ ಕಾಲು ಕಿತ್ತೆ! 
ದಾರಿಯಲ್ಲಿ ಯೋಚಿಸುತ್ತಿದ್ದೆ, ಅಕಸ್ಮಾತ್ ಆ ಹೆಣ್ಣುಮಗಳು ಅವತ್ತು ರಾತ್ರಿ ಯಕ್ಷಗಾನದ ಪದಗಳನ್ನು ನಮ್ಮೆದುರು ಹಾಡಿದ್ದರೆ ನಮ್ಮ ಗತಿ ಏನಾಗುತ್ತಿತ್ತು??!

Tuesday, July 8, 2014

ದೆವ್ವದ ಮನೆ

(ಪಂಜುದಲ್ಲಿ ಪ್ರಕಟವಾಗಿತ್ತು  http://www.panjumagazine.com/?p=7746)

(ಇದು ನನ್ನ ತಂದೆ ಶಶಿಕಾಂತ ಕುರ್ತಕೋಟಿ ಅವರಿಗೆ ಆದ ಒಂದು ಅನುಭವ, ಅವರೇ ಹೇಳಿದ್ದು. ಮೂಲ ಕತೆಗೆ ಧಕ್ಕೆ ಬರದಂತೆ, ಓದಿಸಿಕೊಂಡು ಹೋಗಲಿ ಅಂತ ಸಲ್ಪ ಮಸಾಲೆ ಬೆರೆಸಿದ್ದೇನೆ. ಅದು ಅಜೀರ್ಣಕ್ಕೆ ಕಾರಣವಾಗಲಿಕ್ಕಿಲ್ಲವೆಂಬ ನಂಬಿಕೆ ನನ್ನದು!)

ಕಣ್ಣು ತೆರೆದಾಗ ನಾನು ಆಸ್ಪತ್ರೆಯಲ್ಲಿದ್ದೆ. ಕೈಗೆ ಸಲಾಯಿನ್ ಹಚ್ಚಿದ್ದರು. ನನ್ನ ಹೃದಯದ ಬಡಿತ ನನಗೆ ಸ್ಪಷ್ಟವಾಗಿ ಕೇಳುತ್ತಿತ್ತು. ಕಣ್ಣಿಗೆ ಕತ್ತಲೆ ಬಂದಿದ್ದಷ್ಟೆ ನನಗೆ ನೆನಪು. ಆಮೇಲೇನಾಯ್ತು? ಯಾರು ನನ್ನನ್ನಿಲ್ಲಿ ತಂದದ್ದು ಒಂದು ನನಗೆ ಅರ್ಥವಾಗುತ್ತಿಲ್ಲ.
"ಸರ್ ಕಣ್ಣು ತಗದ್ರು!" ಅಂತ ನನ್ನ ನೆಚ್ಚಿನ ಶಿಷ್ಯ ಪ್ರಮೋದ ಓಡೋಡಿ ನನ್ನ ಬಳಿ ಬಂದಿದ್ದ. ಅವನ ಜೊತೆಗೆ ಉಳಿದಿಬ್ಬರು ಶಿಷ್ಯಂದಿರೂ ಇದ್ದರು.
"ಸರ್ ಏನೂ ಚಿಂತಿ ಮಾಡಬ್ಯಾಡ್ರೀ ಎಲ್ಲಾ ಸರಿ ಹೋಗ್ತದ." ಪ್ರಮೋದ ಹೇಳಿದ.
"ಸರಿ ಹೋಗ್ಲಿಕ್ಕೆ ಆಗಿದ್ದಾದ್ರೂ ಏನು?"
"ಸರ್ ನಾನು ಮತ್ತ ಪ್ರಶಾಂತ ರಾತ್ರಿ ನಿಮಗ ಊಟ ಕಟಗೊಂಡು ನಿಮ್ಮ ಮನಿಗೆ ಬಂದ್ವಿ. ಒಳಗ ಬಂದು ನೋಡಿದ್ರ, ನೀವು ಪಡಸಾಲ್ಯಾಗ ಅಂಗಾತ ಬಿದ್ದಿದ್ರಿ. ನನಗ ಘಾಬ್ರಿ ಆತು. ನೀರ್ ಹೊಡದ್ರೂ ನೀವು ಏಳಲಿಲ್ಲ. ಅದಕ್ಕ ದವಾಖಾನಿಗೆ ಕರಕೊಂಡು ಬಂದ್ವಿ. ಪುಣ್ಯಾಕ್ಕ ನಿಮ್ಮ ತಲಬಾಗಿಲ ತಕ್ಕೊಂಡ ಇತ್ತು, ಇಲ್ಲಂದ್ರ ಬಾಗಲಾ ಒಡಿಬೇಕಾಕ್ತಿತ್ತು!" ಒಂದೆ ಉಸಿರಿನಲ್ಲಿ ಹೇಳಿದ. ಅಷ್ಟರೊಳಗೆ ಡಾಕ್ಟರ್ ಬಂದ್ರು.
"ಅವರಿಗೆ ತ್ರಾಸ್ ಕೊಡ್ಬ್ಯಾಡ್ರೀ, ಹೊಗ್ರೀ ಹೊರಗ" ಅಂತ ತಮ್ಮ ವೈದ್ಯಸಹಜ ಕೋಪದಿಂದ ಎಲ್ಲರನ್ನೂ ಹೊರಗೆ ದಬ್ಬಿದರು. ಮತ್ತೊಂದು ನಿದ್ದೆ ಇಂಜೆಕ್ಷನ್ ಕೊಟ್ಟರೇನೊ ಹಾಗೇ ನಿದ್ದೆಗೆ ಜಾರಿದ್ದೆ. 
ಮತ್ತೆ ಎಚ್ಚರವಾದಾಗ ಮುಂದೆ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತ ಅಮ್ಮ ಕೂತಿದ್ದಳು. ನನಗೆ ಹಿಂಗಾಗಿದ್ದು ಅವಳಿಗೆ ಯಾರೊ ತಿಳಿಸಿರಬೇಕು. ಅವಳಿರುತ್ತಿದ್ದದ್ದು ಹುಬ್ಬಳ್ಳಿಯ ನನ್ನ ಅಣ್ಣನ ಮನೆಯಲ್ಲಿ. ನಾನು ಎಚ್ಚರಾಗಿದ್ದು ನೋಡಿ ಕಕ್ಕುಲತೆಯಿಂದ ವಿಚಾರಿಸಿದಳು "ಹೆಂಗಿದ್ದೀಪಾ ಈಗ? ನನಗಂತೂ ಭಾಳ ಕಾಳಜಿಯಾಗಿತ್ತು." ಮತ್ತೆ ಅವಳ ಕಣ್ಣುಗಳು ಗಂಗಾ ಯಮುನೆಗಳಾದವು!
"ನಾನು ಮೊದ್ಲ ಬಡಕೊಂಡೆ, ಆ ಸುಡಗಾಡು ಮನ್ಯಾಗ ನೀನು ಇರೂದು ಬ್ಯಾಡಾ ಅಂತ. ಅಲ್ಲಿ ದೆವ್ವದ ಕಾಟ ಅದ ಅಂತ ಗೊತ್ತಾದ ಮ್ಯಾಲೂ ಅಲ್ಲೇ ಇದ್ದೀ ಅಂದ್ರ ನಿನಗ ಹುಂಬ ಧೈರ್ಯ ಭಾಳ ಅದ ಬಿಡು. ನನ್ನ ಮಾತು ಎಂದ ಕೇಳಿ ನೀನು." ಅಂತ ತನ್ನ ಕೋಪ ತೋರಿದಳು. ಆ ಕೋಪದಲ್ಲೂ ಮಾತೃ ಸಹಜವಾದ ಕಾಳಜಿ, ಪ್ರೀತಿ ಇತ್ತು. ಹೌದು ಅದು ದೆವ್ವದ ಕಾಟ ಇರುವ ಮನೆ ಅಂತ ಆವಾಗ್ಲೆ ಒಬ್ಬ ಹೇಳಿದ್ದ. ಹಿಂದಿನ ಘಟನೆಗಳು ನಿಧಾನವಾಗಿ ನೆನಪಿನಂಗಳದಲ್ಲಿ ಬಿಚ್ಚಿಕೊಳ್ಳತೊಡಗಿದವು.
ಅವತ್ತು ಆ ಊರಿಗೆ ಬಂದಿದ್ದು ನನ್ನ ಜೀವನದಲ್ಲಿಯೇ ನನಗೆ ಪ್ರಥಮ ಬಾರಿಗೆ ನೌಕರಿ ಸಿಕ್ಕಾಗ. ಇತ್ತ ಪಟ್ಟಣವೂ ಅಲ್ಲದ ಹಳ್ಳಿಯೂ ಅಲ್ಲದ ಅದು ಒಂದು ದೊಡ್ಡ ಗ್ರಾಮ ಅನ್ನಬಹುದಾದಂತಹ ಊರು. ಅಲ್ಲೊಂದು ಕಾಲೇಜು ಇತ್ತು. ಅಲ್ಲಿ ನನಗೆ ಅಧ್ಯಾಪಕನ ಕೆಲಸ. ಊರಿನ ಹೆಸರು ಯಮನೂರು.  ಹೆಸರೇ ಒಂಥರ ವಿಚಿತ್ರವಾಗಿದ್ದರೂ ಅಲ್ಲಿಯ ಜನರು ತುಂಬಾ ಒಳ್ಳೆಯವರೆನಿಸಿದರು. ಮೊದಲು ಸ್ವಲ್ಪ ದಿನಗಳ ಮಟ್ಟಿಗೆ ಅಂತ ಪ್ರಿನ್ಸಿಪಾಲರ ಔಟ್ ಹೌಸಿನಲ್ಲೇ ಇದ್ದರೂ, ನನ್ನದು ಅಂತ ಒಂದು ಬೇರೆ ಮನೆ ನೋಡಲೇ ಬೇಕಿತ್ತು. ಈಗ ಒಬ್ಬನೇ ಇದ್ದದ್ದರಿಂದ ಆ ಔಟ್ ಹೌಸ್ ಸಾಲುತ್ತಿತ್ತು. ಆದರೆ ಅಮ್ಮನ ಕರೆದುಕೊಂಡು ಬರುವ ವಿಚಾರವೂ ಇತ್ತಲ್ಲದೇ, ಮದುವೆಯಾಗುವ ಕನಸೂ ಕಾಣುತ್ತಿದ್ದೆನಾದ್ದರಿಂದ ಸ್ವಲ್ಪ ದೊಡ್ಡ ಮನೆಯ ಅವಶ್ಯಕತೆ ಇತ್ತು. ಮನೆ ಹುಡುಕಾಟ ನಡೆದಿತ್ತು. ಒಬ್ಬನೇ ಇದ್ದುದರಿಂದ ಒಂದಿಷ್ಟು ಜನ ಶಿಷ್ಯಂದಿರು ಮನೆಗೆ ಪಾಠ ಹೇಳಿಸಿಕೊಳ್ಳುವುದಕ್ಕೆ ಬರುತ್ತಿದ್ದರು. ಆಗಾಗ ನನಗೆ ಅಂತ ಊಟ ತಿಂಡಿ ಕಟ್ಟಿಸಿಕೊಂಡು ಬರುತ್ತಿದ್ದರು. ಹೀಗೆ ತಮ್ಮ ಗುರುಗಳ ಸೇವೆಯಲ್ಲಿ ನಿರತರಾಗಿದ್ದರು. ನಾನೂ ಒಬ್ಬಂಟಿ ಯಾಗಿದ್ದೆನಾದ್ದರಿಂದ, ಅವರು ನನಗೆ ಒಳ್ಳೆಯ ಜೊತೆಯಾಗಿದ್ದರು. ಅವರಲ್ಲಿಯೇ ಪ್ರಮೋದ ತುಂಬಾ ಹಚ್ಚಿಕೊಂಡು ನನ್ನ ಪ್ರೀತಿಯ ಶಿಷ್ಯ ಅನ್ನುವ ಪಟ್ಟ ಅಲಂಕರಿಸಿದ್ದ! ಹೀಗೆ ಎರಡು ಮೂರು ತಿಂಗಳು ಕಳೆದಿರಬೇಕು. ಒಂದು ದಿನ ಪ್ರಮೋದ ಕಾಲೇಜು ಬಳಿ ಸಿಕ್ಕಾಗ,
"ಸರ್ ಒಂದು ಮಸ್ತ ಮನಿ ನೋಡಿಕೊಂಡ್ ಬಂದೀನಿ. ಭಾರಿ ಧೊಡ್ಡ ಮನಿ. ಬಾಡಿಗಿ ಭಾಳ ಕಡಿಮಿ."
"ದೊಡ್ಡ ಮನಿ ಅಂತೀದಿ, ಬಾಡಿಗಿ ಕಡಿಮಿ ಹೆಂಗ ಆಗ್ತದೋ. ಸರ್ಯಾಗಿ ಕೇಳೀದ್ಯೊ ಇಲ್ಲೊ?"
"ಮತ್ತ ಮತ್ತ ಕೇಳ್ಕೊಂಡ್ ಬಂದಿನ್ರೀ ಸರ್. ಅಡ್ವಾನ್ಸೂ ಬ್ಯಾಡ ಅಂತ ಅಂದ್ರು" ನನಗ್ಯಾಕೋ ಸಂಶಯ ಇನ್ನೂ ಜಾಸ್ತಿ ಆಯ್ತು. ಏನೇ ಆಗ್ಲಿ ಮನೆ ನೋಡ್ಕೊಂಡು ಬಂದು ಅಮೇಲೆ ನಿರ್ಧಾರ ತೆಗೆದುಕೊಂಡ್ರಾಯ್ತು ಅಂದ್ಕೊಂಡು "ಆಗ್ಲಿ ಇವತ್ತ ಮದ್ಯಾಹ್ನ ಮನಿ ನೋಡ್ಕೊಂಡು ಬರೋಣ" ಅಂತ ನನ್ನ ಮುಂದಿನ ಪಿರಿಯಡ್ ಗೆ ಟೈಮ್ ಆಗಿದ್ದು ಗಮನಿಸಿ ಕ್ಲಾಸ್ ಗೆ ತೆರಳಿದೆ. 
"ಬರ್ರೀ ಮಾಸ್ತರ … ಒಳಗ ಬರ್ರೀ" ಅಂತ ಸಿಕಾಪಟ್ಟೆ ಮರ್ಯಾದೆಯಿಂದ ಕರೆದ ಮನೆಯ ಮಾಲಿಕರು ಕೆಟ್ಟವರಂತೇನು ಕಾಣ್ಲಿಲ್ಲ. ಪ್ರಮೋದನೂ ಒಟ್ಟಿಗಿದ್ದುದರಿಂದ, ಅವನು ಮೊದಲೇ ಅವರಿಗೆ ಭೆಟ್ಟಿಯಾಗಿದ್ದರಿಂದ ನಾವು ಯಾಕೆ ಬಂದಿದ್ದು ಅಂತ ಅವರಿಗೆ ಗೊತ್ತಾಗಿ ಹೋಗಿತ್ತು. "ಚಾ ಕುಡುದು ಮನಿ ನೋಡ್ಲಿಕ್ಕೆ ಹೋಗೋಣಂತ" ಅಂದರು. ಹಾಗೆ ಅದು ಇದು ಮಾತನಾಡುತ್ತಾ ನನ್ನ ಬಗ್ಗೆ ಸಕಲ ಮಾಹಿತಿಗಳನ್ನೂ ಕಲೆ ಹಾಕಿದರು. ಬಹುಶಃ ಯಾವುದೋ ಕನ್ಯಾಮಣಿ ಇನ್ನೂ ಮದುವೆಯಾಗದೆ ಉಳಿದಿತ್ತೇನೊ! ಚಾ ಕುಡಿದು ಮನೆ ನೋಡಲು ಹೊರಟೆವು. ಮಾಲೀಕರ ಮನೆಯಿಂದ ಸ್ವಲ್ಪ ದೂರ ನಡಕೊಂಡು ಹೋದರೆ ಸಿಕ್ಕಿದ್ದೆ ಆ ಮನೆ. ಹೊರಗಡೆಯಿಂದ ನೋಡಿದಾಗಲೇ ಗೊತ್ತಾಗುತ್ತಿತ್ತು, ಅದೊಂದು ದೊಡ್ಡ ಮನೇನೆ ಅಂತ. ಇಷ್ಟು ದೊಡ್ಡ ಮನೆಗೆ ಕಡಿಮೆ ಬಾಡಿಗೆ ಅಂತ ಪ್ರಮೋದ ಹೇಳಿದ್ದ. ಅವನ್ಯಾಕೋ ಸರಿಯಾಗಿ ಕೇಳಿಸಿಕೊಂಡಿರಲಾರ ಅಂತ ನನಗೆ ಸಂಶಯ ದಟ್ಟವಾಯ್ತು. ಒಂದು ವಿಶಾಲವಾದ ವರಾಂಡ. ಎರಡು ದೊಡ್ಡದೇ ಅನ್ನಿಸುವ ಕೋಣೆಗಳು. ಚೊಕ್ಕದಾದ ಅಡುಗೆ ಮನೆ, ಬಚ್ಚಲು ಮನೆ. ಒಳಗಡೆಯೇ ನೀರು ಕಾಯಿಸಿಕೊಳ್ಳಲು ವ್ಯವಸ್ಥೆ. ಹಳೆಯ ಕಾಲದ ಮಣ್ಣು ಗಾರೆಯಿಂದ ಕಟ್ಟಿದ ಮನೆಯಾದ್ದರಿಂದ ಮೇಲೆ ಜಂತಿ ತೊಲೆಗಳಿದ್ದವು. ಹೊರಗೆ ಅಷ್ಟೊಂದು ಬಿಸಿಲಿದ್ದರೂ ಮನೆ ಒಳಗೆ ತುಂಬಾ ತಣ್ಣಗಿತ್ತು. ಆದರೆ ಹಿತ್ತಲು ಇರಲಿಲ್ಲ. ಯಾಕೆಂದರೆ ಆ ಮನೆಯ ಹಿಂದೆ ಮನೆಯ ಎತ್ತರಕ್ಕೆ ಒಂದು ದಿಬ್ಬ ಇತ್ತು. ಆ ದಿಬ್ಬದ ಮೇಲೆ ಒಂದಿಷ್ಟು ಮನೆಗಳಿದ್ದವು. ಒಟ್ಟಿನಲ್ಲಿ ಮನೆ ನನಗಂತೂ ಇಷ್ಟವಾಯ್ತು. ಮದುವೆಯಾಗಿ ಹೆಂಡತಿಯೊಬ್ಬಳು ಮನೆಗೆ ಬಂದು, ಅಮ್ಮನ ಕರೆಸಿಕೊಂಡರೂ ಎರಡು ಕೋಣೆಗಳು ಸಾಕಾಗುತ್ತಿತ್ತು. ಹೊರಗೆ ಬಂದವನೇ ಎಷ್ಟು ಬಾಡಿಗೆ ಅಂತ ಅಳಕುತ್ತಲೇ ಕೇಳಿದವನಿಗೆ ಅವರು ಹೇಳಿದ್ದು ತುಂಬಾ ಕಡಿಮೆ ಬಾಡಿಗೇನೆ! ಅಡ್ವಾನ್ಸು ಕೂಡ ಬೇಡ ಅಂದರು. ಯಾಕೆ ಅಂದ್ರೆ "ನೀವು ವಿದ್ಯಾ ಹೇಳಿ ಕೊಡೊ ಗುರುಗಳು. ನಿಮ್ಮ ಮ್ಯಾಲೆ ಭಾಳ ಗೌರವ ಅದ ನಮಗ. ನಿಮ್ಮ ಹತ್ರ ನಾವು ಜಾಸ್ತಿ ದುರಾಸೆ ಮಾಡೋದು ಒಳ್ಳೇದಲ್ಲ." ಅಂತೇನೇನೋ ದೊಡ್ಡ ಮಾತುಗಳನ್ನಾಡಿ ಬಿಟ್ಟರು ಆ ಪುಣ್ಣ್ಯಾತ್ಮ. ಸರಿ ನನಗೂ ಸಣ್ಣ ಪಗಾರ. ಆಗಿದ್ದೆಲ್ಲಾ ಒಳ್ಳೇದಕ್ಕೇ ಅಂತ ನಾನೂ ಆಗ್ಲಿ ಅಂದೆ. ಆದರೂ ಇಷ್ಟೊಂದು ಒಳ್ಳೆಯ ಮನೆಗೆ ಇನ್ನೂ ಯಾರೂ ಬಾಡಿಗೆಗೆ ಬಂದಿಲ್ಲದಿರುವುದೇ ಒಂದು ಆಶ್ಚರ್ಯವಾಗಿತ್ತು. ಬಹುಶಃ ನನ್ನಂಥ ಒಳ್ಳೆಯವರು ಯಾರೂ ಸಿಕ್ಕಿಲ್ಲದಿರಬಹುದೇನೋ ಎಂದು ನನಗೆ ನನ್ನ ಮೇಲೆ ಒಂದು ಬಗೆಯ ಅಭಿಮಾನ ಉಂಟಾಯ್ತು.
ಪ್ರಮೋದನ ಮುಖದಲ್ಲಿ, ತನ್ನ ಗುರುವಿಗೊಂದು ಚಂದದ ಮನೆ ಗೊತ್ತು ಮಾಡಿಸಿಕೊಟ್ಟ ನಿರಂಬಳತೆ ಇತ್ತು.
"ಸರ್ರ ಮುಂದಿನ ಸೋಮವಾರ ಚೊಲೋ ದಿನ ಅದರೀ. ಹಾಲು ಉಕ್ಕಿಸಿ ಬಿಡೋಣು" ಅಂತ ಖುಷಿಯಿಂದ ಹೇಳಿದ. ನನಗೂ ಅದು ಸರಿ ಅನಿಸಿತ್ತು. ಭ್ರಹ್ಮಚಾರಿಯಾಗಿದ್ದ ನನ್ನ ಬಳಿ ಹೇಳಿಕೊಳ್ಳುವಂಥ ಸಾಮಾನು ಸರಂಜಾಮುಗಳಿರಲಿಲ್ಲ. ಒಂದು ಗಾದಿ, ಹಾಸಿಕೊಳ್ಳಲು, ಹೊದೆದುಕೊಳ್ಳಲು ಒಂದೆರಡು ಚಾದರು, ಕೆಲವು ಪಾತ್ರೆ ಪಗಡುಗಳು, ಬಕೇಟು – ಚೆಂಬು, ಒಂದಿಷ್ಟು ಪುಸ್ತಕಗಳು ಇವಿಷ್ಟೇ ನನ್ನ ಜಗತ್ತು. ಅದನ್ನು ಒಂದು ಜಟಕಾ ಗಾಡಿಯಲ್ಲಿ ಹೇರಿಕೊಂಡು ಒಂದೇ ಸಾರಿಗೆಯಲ್ಲಿ ಸಾಗಿಸಿಬಿಡುವಷ್ಟು ದೊಡ್ಡ ಜಗತ್ತು! 
ಮಾಲಕರಿಗೆ, ನನಗೆ ಮನೆ ಒಪ್ಪಿಗೆ ಅಂತ ಹೇಳಿ ನಾನು ಪ್ರಮೋದ ಬರ್ತಾ ಇದ್ವಿ. ವಾಪಸ್ಸು ನಾವು ಹೋಗುವ ದಾರಿಯಲ್ಲೇ ಆ ಮನೆಯಿತ್ತು. ಮತ್ತೊಮ್ಮೆ ಕಣ್ತುಂಬಾ ನೋಡಿಕೊಂಡೆ. ಹಾಗೆ ಸ್ವಲ್ಪ ಮುಂದೆ ಹೋಗುತ್ತಲೇ ಹಿಂದಿನಿಂದ "ನಮಸ್ಕಾರ್ರೀ ಸಾವ್ಕಾರ್ರ" ಅನ್ನು ವ ದನಿ ಕೇಳಿ ಇಬ್ಬರೂ ನಿಂತೂ ಹಿಂತಿರುಗಿ ನೋಡಿದೆವು. ಒಬ್ಬ ಧೊತ್ರ, ದೊಗಳೆ ಅಂಗಿ ಹಾಕಿಕೊಂಡವನೊಬ್ಬ ನಮಗೆ ನಮಸ್ಕರಿಸಿದ. ನೋಡೋಕೆ ರೈತನ ಥರ ಕಾಣುತ್ತಿದ್ದ. ಪ್ರತಿಯಾಗಿ ನಮಸ್ಕಾರ ಮಾಡಿ, ಏನು ಎಂಬಂತೆ ನೋಡಿದೆ.
"ನನ್ನ ಹೆಸ್ರು ನಿಂಗಪ್ಪ ಅಂತ ರೀ. ಇಲ್ಲೇ ನಿಮ್ಮ ಮನಿ ಹಿಂದ ದಿಬ್ಬದ ಮ್ಯಾಲೆ ನನ್ನ ಮನಿ ಐತಿ. ನೀವ ಏನ್ರೀ ಈ ಮನಿಗೆ ಬಾಡಿಗಿ ಬರೋವ್ರು?"
"ಹೌದು, ಯಾಕ?" ನನಗೆ ಈತ ಸ್ವಲ್ಪಅಧಿಕ ಪ್ರಸಂಗಿ ಎನಿಸಿದ.
"ಯಾಕ್ರೀ ಸಾವಕಾರ್ರ, ನಿಮಗ ಜೀವನ ಬ್ಯಾಸರಾ ಅಗೈತೇನು? ನೋಡಾಕ ಇನ್ನೂ ಭಾಳ ಸಣ್ಣವ್ರು ಕಾಣ್ತೀರಿ" ಅಂದಾಗ, ನನಗೆ ಸಿಕ್ಕಾಪಟ್ಟೆ ಕೋಪ ಬಂತು.
"ಏನ್ ಹಂಗ ಮಾತಾಡಿದ್ರ! ಏನಂತ ಬಿಡಿಸಿ ಹೇಳು" ಅಂತ ಸ್ವಲ್ಪ ಕಡಕ್ ಆಗಿಯೇ ಕೇಳಿದೆ.
"ಸಿಟ್ಟಿಗೇಳಬ್ಯಾಡ್ರೀ… ಈ ಮನ್ಯಾಗ ಒಬ್ಬಾಕಿ ಹೆಣ್ಣ ಮಗಳು ಉರುಲು ಹಾಕ್ಕೊಂಡು ಸತ್ತಿದ್ಲು. ಅಕಿ ದೆವ್ವಾ ಆಗ್ಯಾಳ. ಈ ಮನೀಗೆ ಬಂದವ್ರಿಗೆಲ್ಲಾ ಕಾಡತಾಳ. ಈ ಮನಿಗೆ ಯಾರ ಬಂದ್ರೂ ಒಂದು ತಿಂಗಳದೊಳಗ ಖಾಲಿ ಮಾಡತಾರ. ಅಮವಾಸಿಗಂತೂ ಆ ದೆವ್ವದ ಕಾಟ ಇನ್ನೂ ಜಾಸ್ತಿ. ನಿಮ್ಮ ಒಳ್ಳೆದಕ್ಕ ಅಂತ ಹೇಳಿದೇರಿ, ತಪ್ಪು ತಿಳ್ಕೋಬ್ಯಾಡ್ರೀ" ಅಂತ ಸ್ವಲ್ಪ ಜಾಸ್ತಿನೇ ವಿನಯ ಪ್ರದರ್ಶಿಸಿದ.  ನನಗೆ ದೆವ್ವ ಭೂತಗಳಲ್ಲಿ ವಿಶ್ವಾಸವಿರದಿದ್ದರೂ ಅವನ ಮಾತು ಕೇಳಿ ಸ್ವಲ್ಪ ಮಟ್ಟಿಗೆ ಗಾಬರಿ ಆಯಿತು. ನಾನು ಪ್ರಮೋದ ಒಬ್ಬರಿಗೊಬ್ಬರು ಮುಖ ನೋಡಿಕೊಂಡೆವು.
"ನೋಡೇಬಿಡೋಣ ಆ ದೆವ್ವಕ್ಕ ಎಷ್ಟು ಧೈರ್ಯ ಅದ ಅಂತ" ಅಂದೆನಾದರೂ ಒಳಗೊಳಗೆ ಸ್ವಲ್ಪ ಅಳುಕು ಇತ್ತು. ಅದಕ್ಕೇ ಇರಬೇಕು ಮಾಲೀಕರು ಇಷ್ಟು ಕಡಿಮೆ ಬಾಡಿಗೆಗೆ ಮನೆಯನ್ನು ನನಗೆ ಕೊಡುತ್ತಿರುವುದು ಅಂತ  ಖಾತ್ರಿಯಾಗಿತ್ತು.
"ನಾ ಹೇಳೂದು ಹೇಳೀನಿ, ಇದರ ಮ್ಯಲೆ ನಿಮ್ಮ ಮರ್ಜಿ" ಅಂತ ಹೇಳಿ ನಿಂಗಪ್ಪ ಅಲ್ಲಿಂದ ಜಾಗ ಖಾಲಿ ಮಾಡಿದ. ಪ್ರಮೋದ "ನೀವೇನೂ ಹೆದರಬ್ಯಾಡ್ರೀ ಸರ್ರ ಆ ದೆವ್ವಾನ ಒಂದು ಕೈ ನೋಡೇಬಿಡೋಣ" ಅಂದಾಗ ನನಗೂ ಸ್ವಲ್ಪ ಧೈರ್ಯ ಬಂತು.

ಅಂತೂ ಸೋಮವಾರ ಬಂದೇ ಬಿಡ್ತು. ಹೊಸ ಮನೆಗೆ ಹೋಗಿ ಆಯ್ತು. ಹಾಲು ಉಕ್ಕಿಸಿದ್ದೂ ಆಯ್ತು. ಆ ದೊಡ್ಡ ಮನೆಯಲ್ಲಿ ನನ್ನ ಚಿಕ್ಕ ಸಂಸಾರದಿಂದಾಗಿ ಮನೆಯಲ್ಲಾ ಖಾಲಿ ಖಾಲಿ ಅನಿಸುತ್ತಿತ್ತು. ಒಂದಿಷ್ಟು ಕುರ್ಚಿಗಳ ಅವಶ್ಯಕತೆಯೂ ಇದೆ ಅನ್ನಿಸಿತು. ಹೀಗೇ ಶುರುವಾಗಿತ್ತು ನನ್ನ ’ಸನ್ಯಾಸಿ ಸಂಸಾರ’! ಪ್ರಮೋದ ಹಾಗೂ ಇನ್ನೊಬ್ಬ ಶಿಷ್ಯ ದಿನಾಲೂ ನನ್ನ ಜೊತೆ ಮಲಗಲು ಬರುತ್ತಿದ್ದರು. ಜೊತೆಗೆ ಊಟವನ್ನೂ ತರುತ್ತಿದ್ದರು. ಹೀಗಾಗಿ ದೆವ್ವಗಳ ಭಯ ಅಷ್ಟಾಗಿ ಕಾಡಲಿಲ್ಲ. ಆ ನಿಂಗಪ್ಪನ ಮಾತು ತಲೆಯಲ್ಲಿ ಆಗಾಗ ಸುಳಿಯುತ್ತಿತ್ತು. ಅದರಲ್ಲೂ ಈ ಅಮವಾಸ್ಯೆಯಲ್ಲಿ ನೋಡಿ ಆ ದೆವ್ವದ ಕರಾಮತ್ತು ಅಂತ ಅವನು ಹೇಳಿದ್ದು ಇನ್ನೂ ಕಿವಿಯಲ್ಲಿ ಗುಂಯ್ಯ್ ಗುಡುತ್ತಿತ್ತು. ಈ ನಡುವೆ ಅಮ್ಮ ಹೊಸ ಮನೆ ನೋಡುವುದಕ್ಕೆ ಅಂತ ಒಂದೆರಡು ದಿನ ಬಂದವಳು ದೆವ್ವದ ಸುದ್ದಿ ಕೇಳಿ ವಾಪಸ್ಸು ಹುಬ್ಬಳ್ಳಿಗೆ ಹೊರಟು ಹೋದಳು. ಆ ಮನೆಯಲ್ಲಿ ಇರುವುದು ಬೇಡ ಅಂತಲೂ ಎಚ್ಚರಿಸಿದಳು. ನನಗೆಷ್ಟಂದ್ರೂ ಬಿಸಿ ರಕ್ತ. ಆ ದೆವ್ವಗಳ ಕರಾಮತ್ತು ಅನುಭವಿಸುವ ತವಕ! ಅಮವಾಸ್ಯೆಗೆ ಇನ್ನೂ ಮೂರು ದಿನಗಳಷ್ಟೇ ಬಾಕಿ ಇತ್ತು. 
ಅವತ್ತು ಅಮವಾಸ್ಯೆಯ ದಿನ ರಾತ್ರಿ ನಾನೊಬ್ಬನೇ ಮನೆಯಲ್ಲಿ ಏನೋ ಓದುತ್ತ ಕುಳಿತಿದ್ದೆ.  ಬೇಸಿಗೆಯ ರಾತ್ರಿಯಾದ್ದರಿಂದ ತಲಬಾಗಿಲು ತೆರೆದುಕೊಂಡೇ ಇಟ್ಟಿದ್ದೆ. ತಂಪಾದ ಗಾಳಿ ಹಿತವಾಗಿತ್ತು. ಅಷ್ಟರಲ್ಲೇ ಕರೆಂಟು ಹೋಗಬೇಕೆ. ಪ್ರಮೋದ ಇನ್ನೂ ಬಂದಿರಲಿಲ್ಲ. ಕಂದೀಲು ಹಚ್ಚಿ ಹಾಗೇ ಕೂತಿದ್ದವನಿಗೆ ಒಮ್ಮಿಂದೊಮ್ಮೆಲೆ ಗೆಜ್ಜೆಯ ಸಪ್ಪಳ ಕೇಳತೊಡಗಿತು. ಎದೆ ಝಲ್ ಅಂತು. ಯಾರೋ ನಡೆದಾಡಿದಂತೆಯೂ ಅನಿಸತೊಡಗಿತು. ಅದು ನನ್ನ ಭ್ರಮೆ ಇರಬಹುದೆ ಎಂದುಕೊಂಡವನಿಗೆ ಮತ್ತೆ ಮತ್ತೆ ಆ ಸಪ್ಪಳ ಕೇಳಿ ದುಗುಡ ಹೆಚ್ಚಾಯ್ತು. ನಿಂಗಣ್ಣ ಹೇಳಿದ್ದು ನಿಜವೇ ಅನ್ನಿಸತೊಡಗಿತು! ಅದರ ಜೊತೆಗೆ ಒಂದು ಹೇಣ್ಣುಮಗಳು ಗುಸು ಗುಸು ಮಾತಾಡುವ ಶಬ್ಧ ಸ್ಪಷ್ಟವಾಗಿ ಕೇಳತೊಡಗಿತು. ನಾನು ಬೆವರತೊಡಗಿದ್ದೆ. ಆದರೂ ಧೈರ್ಯ ಮಾಡಿ "ಯಾರದು" ಅಂತ ಜೋರಾಗಿ ಕೂಗಿದೆ. ಅಷ್ಟರಲ್ಲೇ ನನ್ನ ತಲೆಗೆ ಹಿಂದಿನಿಂದ ಯಾರೋ ಹೊಡೆದಂತಾಗಿ ಕಣ್ಣಿಗೆ ಕತ್ತಲೆ ಬಂದಿದ್ದೊಂದೇ ನೆನಪು. ಕಣ್ಣು ತೆಗೆದದ್ದು ಆಸ್ಪತ್ರೆಯಲ್ಲೇ!
ಮರುದಿನ ಡಾಕ್ಟರು ನಾನು ಆರಾಮ ಆದೆನೆಂದು ಮನೆಗೆ ಕಳಿಸಿದರು. ಪ್ರಮೋದನಿಗೆ ಅವತ್ತು ನಡೆದ ಘಟನೆಯನ್ನು ವಿವರಿಸಿದೆ. ಆತನದೂ ನನ್ನಂತೆಯೇ ಹುಂಬ ಧೈರ್ಯ. ಇವತ್ತಿನಿಂದ ಆ ದೆವ್ವನ ಒಂದು ಕೈ   ನೋಡೆಬಿಡುವ ಅಂತ ಇಬ್ಬರೂ ನಿರ್ಧರಿಸಿದ್ದೆವು. ಅವನ ಜೊತೆಗೆ ಅವನ ಸಹಪಾಠಿ ಪ್ರಶಾಂತನೂ ಬಂದಿದ್ದ. ಊಟ ಮಾಡಿ ದೆವ್ವಗಳಿಗೆ ಕಾಯುತ್ತಾ ಹರಟೆ ಹೊಡೆಯುತ್ತ ಕೂತಿದ್ದೆವು. ಸರಿ ಸುಮಾರು ಅದೇ ಸಮಯಕ್ಕೆ ಮತ್ತದೇ ಗೆಜ್ಜೆಗಳ ಶಬ್ಧ ಕೇಳತೊಡಗಿತು. ಮತ್ತೆ ಹೆಣ್ಣುಮಗಳ ಗುಸು ಗುಸು ಮಾತು. ಮಾತು ಸ್ಪಷ್ಟವಾಗಿರಲಿಲ್ಲವಾದರೂ, ಮಾತನಾಡುತ್ತಿರುವುದು ಸ್ಪಷ್ಟವಾಗಿತ್ತು. ಮೂವರು ಬೆವರತೊಡಗಿದೆವು. ಆದರೂ ಆ ಶಬ್ಧ ಎಲ್ಲಿಂದ ಬರುತ್ತಿದೆಯೆಂದು ಗಮನಿಸಿದಾಗ, ಅದು ಮಾಳಿಗೆಯಿಂದಲೇ ಅಂತ ಗೊತ್ತಾಯ್ತು. ಸ್ವಲ್ಪ ಹೊತ್ತಿಗೆ ಹೆಂಗಸು ಮಾತನಾಡುವ ಶಬ್ಧ ನಿಂತಿತಾದರೂ ಹೆಚ್ಚು ಕಡಿಮೆ ಬೆಳಗಿನವರೆಗೆ ಗೆಜ್ಜೆ ಶಬ್ಧ ಕೇಳುತ್ತಲೇ ಇತ್ತು. ಯಾರಿಗೂ  ಸರಿಯಾಗಿ ನಿದ್ದೆಯೂ ಹತ್ತಲಿಲ್ಲ. 
ಮರುದಿನ, ಇವತ್ತು ಏನೇ ಆಗಲಿ ಮಾಳಿಗೆ ಹತ್ತಿ ನೋಡೆ ಬಿಡೋಣ ಅಂತ ನಿರ್ಧಾರ ಮಾಡಿ ಬಿಟ್ಟೆವು. ಹಳೆ ಮನೆಯಾದ್ದರಿಂದ ಮಾಳಿಗೆ ಹತ್ತಲು ಮೆಟ್ಟಲುಗಳಿರಲಿಲ್ಲ. ಪ್ರಮೋದ ಅವತ್ತು ಸಂಜೆ ಒಂದು ನಿಚ್ಚಣಿಕೆ ವ್ಯವಸ್ಥೆ ಮಾಡಿದ. ಜೊತೆಗೊಂದು ಟಾರ್ಚು ಇಟ್ಟುಕೊಂಡೆವು. ರಾತ್ರಿ ಮತ್ತೆ ದೆವ್ವದ ಚೇಷ್ಟೆಗೆ ಕಾಯತೊಡಗಿದವರಿಗೆ ದೆವ್ವಗಳು ಮೋಸ ಮಾಡಲಿಲ್ಲ! ಕೂಡಲೇ ಹೊರಗೆ ಹೊಗಿ ನಿಚ್ಚಣಿಕೆ ಇಟ್ಟು ಒಬ್ಬೊಬ್ಬರಾಗಿ ನಾನು ಮತ್ತು ಪ್ರಮೋದ ನಿಚ್ಚಣಿಕೆ ಹತ್ತಿ ಮಾಳಿಗೆಯ ಮೇಲೆ ತಲುಪಿದೆವು. ಪ್ರಶಾಂತನಿಗೆ ಕೆಳಗೇ ಇರುವಂತೆ ಸೂಚಿಸಿದ್ದೆವು. ಯಾರಿಗ್ಗೊತ್ತು ನಾವು ಮೇಲೆ ಹೋದಮೇಲೆ ದೆವ್ವ ನಿಚ್ಚಣಿಕೆ ಅಪಹರಿಸಿದರೆ? ಎನ್ನುವುದು ನಮ್ಮ ತರ್ಕವಾಗಿತ್ತು! ಮಾಳಿಗೆಯ ಮೇಲೆ ಹತ್ತಿ ನಿಂತು ಟಾರ್ಚಿನಿಂದ ಅತ್ತಿತ್ತ ಬೆಳಕು ಹರಿಸಿ ನೋಡಿದವರಿಗೆ ದೆವ್ವದ ನೆಲೆ ಕಂಡಿತ್ತು. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ನಗಲಿಕ್ಕೆ ಶುರು ಮಾಡಿದೆವು. ಅಲ್ಲಿ ಮಾಳಿಗೆಯ ಮೇಲೆ ಒಂದಿಷ್ಟು ಆಡು-ಕುರಿಗಳ ಕಟ್ಟಿದ್ದರು. ಅವು ಅಲುಗಾಡಿದಾಗಲೊಮ್ಮೆ ಅವುಗಳ ಕೊರಳಿಗೆ ಕಟ್ಟಿದ್ದ ಗೆಜ್ಜೆಗಳು ಸದ್ದು ಮಾಡುತ್ತಿದ್ದವು. ಇನ್ನೊ ಸ್ವಲ್ಪ ಮುಂದೆ ಹೋಗಿ ಗಮನಿಸಿದಾಗ ಒಂದಿಷ್ಟು ಹೆಂಗಸರು ನಮ್ಮ ಮನೆಯ ಹಿಂದಿನ ದಿಬ್ಬದ ಮೇಲೆ ಬಹಿರ್ಧೆಶೆಗೆ ಅಂತ ಕೂತವರು ಗಡಿಬಿಡಿಯಿಂದ ಜಾಗ ಕಿತ್ತದ್ದು ನಮ್ಮ ಗಮನಕ್ಕೆ ಬಂತು. ಕೆಳಗಿಳಿದು ಪ್ರಶಾಂತನಿಗೆ ದೆವ್ವದ ಮೂಲ ಹೇಳಿ ಎಲ್ಲರೂ ಸೇರಿ ಬಿದ್ದು ಬಿದ್ದು ನಕ್ಕಿದ್ದಾಯ್ತು. ಅಂತೂ ಅವತ್ತು ನಿರಂಬಳವಾಗಿ ನಿದ್ದೆ ಹೋದೆವು.
ಮರುದಿನ ವಿಚಾರಿಸಲಾಗಿ ಗೊತ್ತಾಗಿದ್ದು ಇಷ್ಟು. ಆ ಕುರಿಗಳು ನಿಂಗಪ್ಪನವು. ಅವನ ಮನೆ ದಿಬ್ಬದ ಮೇಲಿದ್ದುದರಿಂದ ನಮ್ಮ ಮನೆಯ ಮಾಳಿಗೆ ಅವನ ಮನೆಯ ಅಂಗಳಕ್ಕೆ ಸಮಾನವಾಗಿತ್ತು. ಬೆಳಗೆಲ್ಲ ಹೊರಗೆ ಮೇಯಿಸುತ್ತಿದ್ದವನು ರಾತ್ರಿ ಅವುಗಳನ್ನು ಕಟ್ಟಲು ನಮ್ಮ ಮನೆಯ ಮಾಳಿಗೆಯನ್ನು ಉಪಯೋಗಿಸುತ್ತಿದ್ದ. ಅವನ ಮನೆಯಲ್ಲಿ ಬಹಿರ್ದೆಶೆಗೆ ಅಂತ ಸಂಡಾಸು ಇರಲಿಲ್ಲವಾದ್ದರಿಂದ ಮನೆಯ ಮಂದಿ ರಾತ್ರಿ ಆ ದಿಬ್ಬದ ಬದಿಯೇ ತಮ್ಮ ಕ್ರಿಯೆಯನ್ನು ಮುಗಿಸುತ್ತಿದ್ದರು. ಹಾಗೆ ಕೂತಾಗ ತಮ್ಮೊಳಗೇ ಗುಸು ಗುಸು ಮಾತಾಡುತ್ತಿದ್ದರು. ಆ ಮನೆಗೆ ಯಾರದರೂ ಬಾಡಿಗೆ ಬಂದರೆ ಇದಕ್ಕೆಲ್ಲ ತಡೆಯಾಗುವುದೆಂದು ಹೀಗೆ ಎಲ್ಲರಿಗೂ ಹೆದರಿಸುತ್ತಿದ್ದನವನು. ಗೆಜ್ಜೆಯ ಶಬ್ಧ ಹಾಗೂ ಹೆಂಗಸರು ಮಾತನಾಡುವ ಶಬ್ಧ ಅವನು ಹೇಳುವುದಕ್ಕೆ ಪೂರಕವಾಗಿದ್ದು ಭಯ ಹುಟ್ಟಿಸುತ್ತಿದ್ದವು. ಇನ್ನೂ ಜಾಸ್ತಿ ಭಯ ಬರಿಸಲು ಅವತ್ತು ನನ್ನ ಮನೆಯೊಳಗೆ ಬಂದು ತಲೆಗೆ ಹೊಡೆದಿದ್ದ. ಆ ಹೊಡೆತ ಮಾರಣಾಂತಿಕವಾಗಿಲ್ಲದಿದ್ದರೂ, ಮೊದಲೇ ಭಯದಿಂದಿದ್ದ ನನಗೆ ಆಕಸ್ಮಿಕವಾಗಿ ತಲೆಗೆ ಬಿದ್ದ ಪೆಟ್ಟು ಅವತ್ತು ಎಚ್ಚರ ತಪ್ಪಿಸಿತ್ತು. ಅಂತೂ ಅವನಿಗೆ ಕರೆಸಿ ಬುದ್ಧಿ ಹೇಳಿ ಮಾಳಿಗೆ ತೆರವುಗೊಳಿಸಿದ್ದೂ ಅಲ್ಲದೆ, ಊರ ಪಂಚಾಯಿತಿಯ ಸಹಾಯದಿಂದ ಅವನ ಮನೆಗೊಂದು ಸಂಡಾಸು ಕಟ್ಟಿಸಿಕೊಟ್ಟೆವು. ಆತನಿಗೆ ತಪ್ಪಿನ ಅರಿವಾಗಿತ್ತು. ಅಂತೂ ಭೂತಗಳನ್ನು ನಾವು ಮನೆಯಿಂದ ಹಾಗು ಮನದಿಂದ ಓಡಿಸಿಯಾಗಿತ್ತು!