Saturday, January 19, 2008

"ಶೌಚ"ನೀಯ ಕತೆ

ಓದುಗರು ದಯವಿಟ್ಟು ಬೇಸರಿಸಬಾರದು, ನನಗೆ ಇದಕ್ಕಿಂತ ಒಳ್ಳೆಯ ತಲೆಬರಹ ಹೊಳೆಯಲಿಲ್ಲ. ಅಂದ ಹಾಗೆ, ಇದು ಶೌಚದ ಬಗ್ಗೆ ಇರುವ ಮೋಜಿನ ಬರಹ. ಶೌಚಕ್ಕೆ ಅವಸರವಾದಾಗ ಅದು ಶೋಚನೀಯ ಪರಿಸ್ಠಿತಿಯೇ ಎಂಬುದು ನನ್ನ ಅನುಭವಕ್ಕೆ ಬಂದ ಸಂಗತಿ; ಅದೂ ಆ ವೇಳೆಗೆ ಸರಿಯಾದ ವ್ಯವಸ್ಠೆ ಇಲ್ಲದಿದ್ದರೆ..? ಅಧೋಗತಿಯೇ! ಅಂತಹ ಕೆಲವು ಅನುಭವಗಳ ಕಂತೆಯೇ ಈ ಶೌಚನೀಯ ಕತೆ.
ನಾನು ಚಿಕ್ಕವನಿದ್ದಾಗಿನ ಸಂಗತಿ. ನಾವು ಆಗಾಗ, ನಮ್ಮೂರಿನ ಹತ್ತಿರದಲ್ಲೇ ಇರುವ, ನನ್ನ ಅತ್ತೆಯ ಊರಾದ ದೊಡ್ಡೊರಿಗೆ ಹೊಗುತ್ತಿದ್ದೆವು. ವಿಪರ್ಯಾಸವೆಂದರೆ, ಅದೊಂದು ಕುಗ್ರಾಮ, ಆದರೂ ಅದರ ಹೆಸರು ಮಾತ್ರ ದೊಡ್ಡೂರು! ಬಹುಶಃ ಹಿಂದಿನ ಕಾಲದಲ್ಲಿ ಆ ಪ್ರದೇಶದಲ್ಲಿ ಇದೇ ದೊಡ್ಡ ಊರಾಗಿದ್ದಿರಬಹುದು, ಇರಲಿ. ನಾನು ಅಲ್ಲಿಗೆ ಹೊಗುತ್ತಿದ್ದುದೇ ಅವಲಕ್ಕಿ ಆಸೆಗೆ! ಯಾಕೆಂದರೆ, ಹೋದ ತಕ್ಷಣ ಅತ್ತಿಗೆ, ಹಚ್ಚಿದ ಅವಲಕ್ಕಿ ತಿನ್ನಲು ಕೊಡುತ್ತಿದ್ದಳು. ಜೊತೆಗೆ ಕೆನೆ ಕೆನೆ ಮೊಸರು, ಕೇಳಬೆಕೆ? ಓಂದು ರೌಂಡು ಮುಗಿಸಿ ಇನ್ನೊಂದಕ್ಕೆ ಅಣಿಯಾಗುತ್ತಿದ್ದೆ. ಆದರೆ ಅಮ್ಮನ ಮುಖ ಮಾತ್ರ ತಪ್ಪಿಸುತ್ತಿದ್ದೆ. ಯಾಕೆಂದರೆ, ನಾನು ಆ ಪರಿ ತಿನ್ನುವುದು ಅವಳಿಗೆ ಇಷ್ಟವಿರಲಿಲ್ಲ. ಈಗ ಅದು ನನ್ನ ಹೆಂಡತಿಗೆ ಇಷ್ಟವಿಲ್ಲ. ಗಂಡಸಿನ ಪರಿಸ್ಠಿತಿಯೇ ಹಾಗೆ, ಚಿಕ್ಕವನಿದ್ದಾಗ ಅಮ್ಮನಿಗೆ ಹೆದರಬೇಕು; ದೊಡ್ಡವನಾದಾಗ ಹೆಂಡತಿಗೆ! ಆದರೆ ಒಂದು ಮಾತ್ರ ನಿಜ, ನಾನು ಆ ಪರಿಯಾಗಿ ತಿಂದ ಮೇಲೆ ಏನಾಗುವುದೆಂದು ಅಮ್ಮನಿಗೆ ಚೆನ್ನಾಗಿ ಗೊತ್ತಿತ್ತು. (ಈಗ ಅದು ನನ್ನ ಹೆಂಡತಿಗೂ ಗೊತ್ತಿದೆ!) ನನಗೆ ಗೊತ್ತಿರಲಿಲ್ಲವೆ? ಗೊತ್ತಿತ್ತು ಆದರೂ ಆಸೆ! ಅವಲಕ್ಕಿ ಅಂದ ಮೇಲೆ ಒಂದೇ ರೌಂಡು ತಿನ್ನುವುದೆ? ಆಮೇಲೆ ಏನಾಗುತ್ತೋ ನೋಡೋಣ ಎನ್ನುವ ಭಂಡ ಧೈರ್ಯ. ಶುರುವಾಯ್ತು ನೋಡಿ, ಹೊಟ್ಟೆಯಲ್ಲಿ, ಗಡ ಗಡ ಶಬ್ದ! ಜೊತೆಗೆ ನಡುಕ ಕೂಡ! ಯಾಕೆಂದರೆ, ದೊಡ್ಡೂರಿನಲ್ಲಿದ್ದುದೊಂದು ಅದ್ಭುತವಾದ ಶೌಚಾಲಯ! ಅದನ್ನು ನೆನೆಸಿಕೊಂಡರೆನೇ ಭಯವಾಗುತ್ತಿತ್ತು. ಅದು ಇದ್ದುದೇ ಹಾಗೆ. ಹಳೇ ಕಾಲದ ಭೂತ ಬಂಗ್ಲೇ ನೆನಪಿಸುವಂತಹ, ಕಲ್ಲಿನಲ್ಲಿ ಕಟ್ಟಿದ ಗೋಡೆಗಳು. ಮೇಲ್ಗಡೆ ಸೂರಂತೂ ಇಲ್ಲವೇ ಇಲ್ಲ. ಮೇಲಿನಿಂದ ಹಕ್ಕಿಗಳು ಹಿಕ್ಕಿ ಹಾಕಿದರೆ, ಒಳಗೆ ಕುಳಿತವರ ಮೇಲೇ ಡ್ಯೆರೆಕ್ಟಾಗಿ ಬೀಳುತ್ತಿತ್ತು. ಕಟ್ಟಿಗೆಯ ಬಾಗಿಲುಗಳು. ಸ್ವಲ್ಪ ಕೂಲಂಕುಷ್ವವಾಗಿ ವೀಕ್ಷಿಸಿದರೆ ,ಒಳಗೆ ಕುಳಿತವರು ಯಾರು ಅಂತ ಸ್ಪಷ್ಟವಾಗಿ ಹೇಳಬಹುದಿತ್ತು! ಇದೆಲ್ಲದರ ಹೊರತಾಗಿ ಅದು ಇದ್ದುದು ಮನೆಯಿಂದ ಸ್ವಲ್ಪ ದೂರದಲ್ಲಿ. ಆದ್ದರಿಂದ, ನಾನೊಬ್ಬನೆ ಅಲ್ಲಿಗೆ ಹೋಗುವ ಧೈರ್ಯ ಆಗ ನನ್ನಲ್ಲಿರುತ್ತಿರಲಿಲ್ಲ. ಅಂತೂ ಹರ ಸಾಹಸ ಮಾಡಿ, ಉದರ ಬೇನೆಯನ್ನು ಪರಿಹರಿಸಿಕೊಂಡು ಬರುತ್ತಿದ್ದೆ. ಆಮೇಲೆ ಅಮ್ಮನಿಂದ ಭರ್ತಿ ಬೈಗಳು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಕೆಳಿದ್ಯಾ, ಆ ಪರಿ ತಿನ್ನಬ್ಯಾಡಾ ಅಂದ್ರ! ಬೊರೊಬ್ಬರಿ ಆತು, ಹಿಂಗ ಆಗಬೇಕು ನಿನಗಅಂತ ಒಂದೇ ಸಮನೆ ಬೈಯುತ್ತಿದ್ದಳು. ನಾನು ಇನ್ನು ಮೇಲೆ ಅವಲಕ್ಕಿ ತಿನ್ನಬಾರದು ಅಂತ ನಿರ್ಧಾರ ಮಾಡುತ್ತಿದ್ದೆ. ಈಗಲೂ ಆಗಾಗ ಆ ನಿರ್ಧಾರ ತೆಗೆದುಕೊಳ್ಳುತ್ತಿರುತ್ತೇನೆ!
ಹೀಗೆ ನಾನು ಅನುಭವಿಸಿದ ಸಂಕಟಗಳು ಹಲವಾರು. ಬಸ್ಸಿನಲ್ಲಿ ಪ್ರಯಾಣಿಸುವಾಗಲೂ, ಸಂಕಟ ಅನುಭವಿಸಿದ್ದಿದೆ. ಒಂದು ಸಲ ಬಸ್ಸಿನಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದೆ. ಬೆಳಿಗ್ಗೆ ೬ ಗಂಟೆಗೆ ಬಸ್ಸು ಮೈಸೂರು ತಲುಪುವ ನಿರೀಕ್ಷೆ ಇತ್ತು. ನನಗೋ ೫ ಗಂಟೆಗೇ ಅವಸರ ಶುರುವಾಯ್ತು. ಹಾಗೂ ಹೀಗು ಮೈಸೂರು ತಲುಪುವವರೆಗೆ ಸಾಕುಬೇಕಾಗಿ ಹೊಯ್ತು. ಆ ವೇಳೆಗೆ ಸಹಪ್ರಯಾಣಿಕರ ಪರಿಸ್ಥಿತಿ ಏನಾಗಿರಬೇಕೆಂದು ಗಮನಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅಂತೂ ಬಸ್ಸು ಇಳಿದ ತಕ್ಷಣ ಅವಸರ ಜಾಸ್ತಿ ಆಯ್ತು. ನನ್ನ ಗ್ರಹಚಾರಕ್ಕೆ ಅವತ್ತೇ ಹೊಸವರ್ಷ ಬೇರೆ, ಅಟೋದವರು ಎಷ್ಟು ಕೆಳುತ್ತಾರೊ ಅಷ್ಟು ಕೊಡಬೆಕು! ಚೌಕಾಷಿ ಮಾಡಲು ಅವಕಾಶವೇ ಇಲ್ಲ. ಅದಿರಲಿ, ನನಗದಕ್ಕೆ ಪುರುಸೊತ್ತೂ ಇರಲಿಲ್ಲ ಬಿಡಿ! ಬೇಗ ಲಾಡ್ಜ ಓಂದಕ್ಕೆ ಒಯ್ದು ವಗಿ ಎಂದು ಆಟೊದವನಿಗೆ ಬೇಡಿಕೊಂಡೆ. ಅವನಿಗೆ ನನ್ನ ಪರಿಸ್ಥಿತಿ ಅರ್ಥವಾಗಿರಬೆಕು. ಅವನು ಅಲ್ಲೆ ಪಕ್ಕದಲ್ಲೆ ಇದ್ದ ಅದ್ಭುತವಾದ ಲಾಡ್ಜ ಒಂದಕ್ಕೆ ವಯ್ದು ವಗೆದ. ಅವನು ಕೆಳಿದಷ್ಟು ಹಣ ತೆತ್ತು ಲಾಡ್ಜು ಸೇರಿಕೊಂಡು ನಿಟ್ಟುಸಿರಿಟ್ಟೆ! ಆದರೆ ಅದೊಂದು ಕಚಡಾ ಹೋಟೇಲ್ ಆಗಿದ್ದರಿಂದ ಬೇರೆ ಕಡೆಗೆ ಹೋಗಬೆಕಾಯ್ತು. ಹೊಸವರ್ಷದ ಬೋನಸ್! ಅದಕ್ಕೆ ನಾನು ರಾತ್ರಿ ಪ್ರಯಾಣವಿದ್ದರೆ ಊಟವನ್ನೇ ಮಾಡುವುದಿಲ್ಲ!
ಇನ್ನೂ ಕೆಲವರನ್ನು ನೋಡಿದ್ದೇನೆ. ಅವರು ಶೌಚಸಮಾಧಿಗೆ ಹೋದರೆಂದರೆ ಹೊರಗೆ ಬರುವುದು ಒಂದೆರಡು ಗಂಟೆಗಳ ಬಳಿಕ. ಅಷ್ಟರವರೆಗೆ ಬೇರೆಯವರ ಗತಿ ಅಧೋಗತಿ! ಅದಕ್ಕೆ ಅಂಥವರು ಮನೆಲಿದ್ದರೆ ಬೇರೆಯವರು, ಬೇಗ ಎದ್ದು ತಮ್ಮ ಕಾರ್ಯ ಮುಗಿಸುವುದು ಒಳ್ಳೆಯದು. ನನ್ನ ಸಂಬಂಧಿಯೊಬ್ಬ ಇದೇ ಜಾತಿಗೆ ಸೇರಿದವನು. ಅವನು ಬೆಳಗಿನ ಪೇಪರ್ ಓದುವುದು ಅಲ್ಲಿಯೇ! ಪೇಪರ್ ಒಂದೇ ಅಲ್ಲ, ಕತೆ, ಕಾದಂಬರಿ ಏನೇ ಆದರೂ ಸರಿ ಅದನ್ನೊಯ್ದು ಶೌಚ ಸಮಾಧಿಯಲ್ಲಿ ಕೂತನೆಂದರೆ ಪೂರ್ತಿ ಕತೆ ಮುಗಿದಾದ ಮೇಲೆಯೇ ಹೊರಗೆ ಬರುವುದು. ಆದರೆ ಆಮೇಲೆ ಪೇಪರಗಳು, ಪುಸ್ತಕಗಳು ಮಾತ್ರ ಬೆರೆಯವರು ಓದುವ ಸ್ಥಿತಿಯಲ್ಲಿ ಇರುವುದಿಲ್ಲ. ಎಲ್ಲ ಹಸಿ ಹಸಿ! ಆದಕ್ಕೆ ಅವನು ನಮ್ಮ ಮನೆಗೆ ಬರುತ್ತಾನೆಂದರೆ, ನನ್ನ ನೆಚ್ಚಿನ ಪುಸ್ತಕಗಳನ್ನೆಲ್ಲ ಮುಚ್ಚಿ ಇಡುತ್ತೇನೆ.
ನಾನು ಚಿಕ್ಕವನಿದ್ದಾಗ ನಡೆದ ಒಂದು ಘಟನೆಯಂತೂ ತುಂಬಾ ಮೋಜಿನದಾಗಿದೆ. ನಾವು ಮಕ್ಕಳಾಗಿದ್ದಾಗ ಈಗಿನ ತರಹ ಕಂಪ್ಯೂಟರು, ವೀಡಿಯೋ ಗೇಮ್ಸು ಇರಲಿಲ್ಲ ನೋಡಿ. ಆಗೆಲ್ಲ ಚಿನ್ನಿ ದಾಂಡು, ಗೋಲಿ ಇಂಥವೇ ಹಲವು ಬಗೆಯ ಆಟಗಳು. ಆದರೆ ನಮಗೆ ಇಷ್ಟಕ್ಕೆ ತೃಪ್ತಿ ಇರಲಿಲ್ಲ. ಹೊಸಾ ಆಟಗಳನ್ನು ಸೃಷ್ಟಿ ಮಾಡ್ತಿದ್ವಿ. ಒಂದು ಸಲ ಹೀಗೇ ಯಾವುದೊ ಹಬ್ಬ ಇತ್ತು. ಎಲ್ಲರ ಮನೆಯಲ್ಲೂ ಒಳ್ಳೆ ಭೂರೀ ಭೊಜನ! ಊಟವಾದ ಮೇಲೆ ಆಟ! ಎಲ್ಲರೂ ಒಂದೆಡೆಗೆ ಸೇರಿದೆವು. ಇವತ್ತು ಯಾವ ಆಟ ಆಡೊದು? ಇದೇ ನಮ್ಮೆಲ್ಲರ ಮುಂದಿದ್ದ ದೊಡ್ಡ ಸಮಸ್ಯೆಯಾಗಿತ್ತು, ಆಗ. ಅಷ್ಟರಲ್ಲೆ ನಮ್ಮಲ್ಲೊಬ್ಬ ಭಯಂಕರವಾಗಿ ಶಬ್ದ ಮಾಡಿದ! ಶಬ್ದ ಎಲ್ಲಿಂದ ಬಂತು ಅನ್ನೊದು ನಿಮ್ಮ ಊಹೆಗೆ ಬಿಟ್ಟ ವಿಷಯ! ಆ ಪರಿ ಹಬ್ಬದ ಊಟವಾದ ಮೇಲೆ ಶಬ್ದ ಎಲ್ಲಿಂದ ತಾನೆ ಬರಲು ಸಾಧ್ಯ! ಎಲ್ಲರೂ ಮೂಗು ಮುಚ್ಚಿಕೊಂಡೆವು, ಸಹಿಸಲಸಾಧ್ಯವಾದ ದುರ್ಗಂಧ! ಇಷ್ಟಕ್ಕೆ ಮುಗಿದಿದ್ದರೆ ಚೆನ್ನಾಗಿತ್ತು. ಆದರೆ ಮತ್ತ್ಯಾವನೋ ಅದೇ ತರಹದ ಶಬ್ದ ಮಾಡಿದ. ಕೇಳಬೇಕೆ, ಅವರಿಬ್ಬರ ಮಧ್ಯೆ ಸ್ಪರ್ಧೆಯೇ ಶುರುವಾಯ್ತು. ಉಳಿದವರೆಲ್ಲ ಇಬ್ಬರಿಗೂ ಹುರಿದುಂಬಿಸಲು ತೊಡಗಿದರು (ಮೂಗು ಮುಚ್ಚಿಕೊಂಡು!). ಹತ್ತು ಆಯಿತು, ಇಪ್ಪತ್ತು ಆಯಿತು, ಊಹುಂ ಇಬ್ಬರಲ್ಲಿ ಯಾರೂ ಸೋಲುವ ಲಕ್ಷಣ ಕಾಣಲಿಲ್ಲ! ಹಾಗೆ ಆಟ ಮುಂದುವರಿಯಿತು. ಸಂಜೆ ಆಗೋಕೆ ಬಂತು. ಇನ್ನೆನು ಆಟದಲ್ಲಿ ಯಾರು ಸೋಲುವರಿಲ್ಲ ಅಂದಾಗ ಇಬ್ಬರಿಗೂ ರಾಜಿ ಮಾಡುವರಿದ್ದೆವು. ಕೊನೆಯದಾಗಿ ಎಂಬಂತೆ ಒಬ್ಬ ಪ್ರಯತ್ನ ನಡೆಸಿದ್ದ. ಅವನ ಪ್ರಯತ್ನ ಸ್ವಲ್ಪ ಜಾಸ್ತಿಯೇ ಅಯ್ತೇನೊ! ಚಣ್ಣದಲ್ಲಿ ಅದರ ಫಲಿತಾಂಶ ಹೊರಬಿತ್ತು. ಮುಂದೆಂದು ಆ ಆಟವನ್ನು ಆಡುವ ಸಾಹಸಕ್ಕೆ ನಾವ್ಯಾರೂ ಹೊಗಲಿಲ್ಲ!
ಈ ತರಹದ ಶಬ್ದ ಮಾಲಿನ್ಯದ (ವಾಯು ಮಾಲಿನ್ಯವೂ ಹೌದು!) ಮೇಲೆ ನಮ್ಮ ಹಿರಿಯರು, ಓಂದು ಶ್ಲೋಕವನ್ನೆ ಸೃಷ್ಟಿ ಮಾಡಿದ್ದಾರೆ!ಭರ್ರಂ ಭುರ್ರಂ ಭಯಂ ನಾಸ್ತಿ!ಟುಸ್ಸಾಕಾರಂ ಘೋರ ಸಂಕಟಂ!ನಿಶ್ಯಬ್ಧಂ ಪ್ರಾಣ ಸಂಕಟಂ!ಈ ಶ್ಲೋಕಕ್ಕೆ ವಿವರಣೆಯ ಅಗತ್ತ್ಯವಿಲ್ಲವೆಂದು ನಂಬಿದ್ದೆನೆ. ಹೀಗೆ ಮೋಜಿನ ಸಂಗತಿಗಳು ಹಲವಾರು. ಸಧ್ಯಕ್ಕಿಷ್ಟು ಸಾಕು ಅನಿಸುತ್ತದೆ. ನೀವೆನಂತೀರಾ?