Monday, September 29, 2014

ವಿಸ್ಮಯದ ಮಾಯಾಲೋಕ!

(http://www.panjumagazine.com/?p=8609)

ಕಾರ್ಪೊರೇಟ್ ಜಗತ್ತಿನಲ್ಲಿ, ವರ್ಷಕ್ಕೊಮ್ಮೆಯೋ, ಎರಡು ಸರ್ತಿಯೋ ಟೀಮ್ ಔಟಿಂಗ್ (team outing) ಅಂತ ಮಾಡುತ್ತಾರೆ. ಒಂದು ದಿನದ ಮಟ್ಟಿಗೆ ಕಚೇರಿಯ ಸಹೋದ್ಯೋಗಿಗಳೆಲ್ಲರೂ ಬೆಂಗಳೂರಿನಿಂದ ಸ್ವಲ್ಪ ಹೊರ ವಲಯದಲ್ಲಿರುವ ರಿಸಾರ್ಟ ಒಂದರಲ್ಲಿ ಕಾಲ ಕಳೆದು ಬರುತ್ತಾರೆ. ಅಲ್ಲಿ ಆಟವಾಡಿಸುತ್ತಾರೆ, ಅಬ್ಬರದ ಸಂಗೀತವಿರುತ್ತೆ, ನೃತ್ಯವಿರುತ್ತೆ. ತಮ್ಮ ಒತ್ತಡದ ಕೆಲಸದ ಮಧ್ಯೆ ದಣಿದ ಜೀವಗಳಿಗೆ ಒಂದಿಷ್ಟು ವಿರಾಮ ಕೊಡಿಸುವ ಪ್ರಯತ್ನ ಅದು. ಅದರ ಘೋಷಣೆಯಾಗುತ್ತಲೇ ಎಲ್ಲರಿಗೂ ಖುಷಿ, ಇನ್ನೂ ಕೆಲವು ಆತ್ಮಗಳಂತೂ ಸಂತಸದಿಂದ ಅರಳುತ್ತವೆ. ಆ ಆತ್ಮಗಳ ನೆಲೆಯಾಗಿರುವ ದೇಹಗಳಿಗೊಂದು, ವಿಶಿಷ್ಠವಾದ ಅವಕಾಶ ಆ ಔಟಿಂಗಿನ ನೆಪದಲ್ಲಿ ಲಭ್ಯವಾಗುತ್ತದೆ. ಅದು ಕಂಠ ಪೂರ್ತಿ ಮದ್ಯಪಾನ ಮಾಡುವ ಒಂದು ಸುವರ್ಣ(?) ಅವಕಾಶ. ಒಟ್ಟಿನಲ್ಲಿ ಎಲ್ಲಾ ಆತ್ಮಗಳ ಸಂತೃಪ್ತಿಗಾಗಿಯೇ ಕಂಪನಿಗಳು ಈ ತರಹದ ಔಟಿಂಗುಗಳನ್ನು ಆಗಾಗ ನಡೆಸುತ್ತಾರೆ. ಅದರ  ಬಗ್ಗೆ ವಿವರವಾಗಿ ಮುಂದೆ ಯಾವಾಗಲಾದರೂ ಬರೆಯುವ ಮನಸ್ಸಿದೆ.

ಮೊನ್ನೆ ೧೯ ನೇ ದಿನಾಂಕಕ್ಕೆ ಇಂಥದೊಂದು ಔಟಿಂಗಿಗೆ ನಾನು ಹೋಗುವದಿತ್ತು. ನನಗೊಳ್ಳೆಯ ಧರ್ಮ ಸಂಕಟ! ಅದಕ್ಕೆ ಕಾರಣವೆಂದರೆ, ಅದೇ ದಿನ ಸಂಜೆ ನಮ್ಮ ನಾಟಕ ತಂಡವಾದ 'ರಂಗ ವಿಸ್ಮಯ' ದ ನಾಟಕವೊಂದರ ಮೊಟ್ಟ ಮೊದಲ ಪ್ರದರ್ಶನವಿತ್ತು. ನನಗೆ ಔಟಿಂಗು ತಪ್ಪಿಸಲಾಗದು, ನಾಟಕವನ್ನಂತೂ ಬಿಡುವ ಚಾನ್ಸೇ ಇರಲಿಲ್ಲಾ. ಇದು ಬೆಂಗಳೂರಿನ ಉತ್ತರ ದಿಕ್ಕಿಗಿದ್ದರೆ, ನಾಟಕದ ಪ್ರದರ್ಶನವಿದ್ದದ್ದು ದಕ್ಷಿಣಕ್ಕೆ! ಆದರೆ ಇದು ಬೆಳಿಗ್ಗೆ, ಅದು ಸಂಜೆ ಇದ್ದದ್ದು ಒಂದು ರೀತಿಯಲ್ಲಿ ಅನುಕೂಲ ವಾಗಿತ್ತು. ಔಟಿಂಗಿನಲ್ಲಿ ದೈಹಿಕವಾಗಿ ಹಾಜರಾಗಿದ್ದೆನಾದರೂ ನನ್ನ ಗಮನವೆಲ್ಲಾ ಸಂಜೆ ನಡೆಯುವ ನಾಟಕದ ಕಡೆಗೇ  ಇತ್ತು. ಇಲ್ಲಿ ಮದ್ಯಾಹ್ನದ ಊಟ ಮುಗಿಸಿ, ಅಂತೂ ಇಂತೂ ಎಲ್ಲರ ಕಣ್ಣು ತಪ್ಪಿಸಿಕೊಂಡು ಕೆಂಗಲ್ ಹನುಮಂತಯ್ಯ ಕಲಾಸೌಧಕ್ಕೆ ಆಗಮಿಸಿದಾಗ ಸಂಜೆ ೫:೩೦.

ಅದು ಶ್ರೀ. ಪೂರ್ಣಚಂದ್ರ ತೇಜಸ್ವಿ ಬರೆದ ಮಾಯಾಲೋಕ ಕೃತಿಯ ನಾಟಕ ರೂಪ. ಅದಕ್ಕೆ ಆ ರೂಪ ಕೊಟ್ಟು ನಿರ್ದೇಶಿಸಿದವರು 'ರಂಗ ವಿಸ್ಮಯ' ದ ರುವಾರಿ ಹಾಗೂ ಸತತ ಮೂರು ದಶಕಗಳಿಂದ ವಿವಿಧ ರೀತಿಯಲ್ಲಿ ರಂಗ ಸೇವೆ ಮಾಡಿಕೊಂಡಿರುವ ಅ. ನಾ. ರಾವ್ ಜಾಧವ್. ಅವರು ನನ್ನ ಗುರುಗಳು. ನಾನು  ಕಳೆದ ಕೆಲವು ತಿಂಗಳಿನಿಂದ ರಂಗ ವಿಸ್ಮಯದಲ್ಲಿ ರಂಗ ತರಬೇತಿ ಪಡೆಯುತ್ತಿದ್ದೇನೆ. ಪ್ರತಿ ಭಾನುವಾರ ಅಲ್ಲಿ ನಾನು ಭಾಗವಹಿಸುವ ನಾಲ್ಕು ಗಂಟೆಗಳು ಕಳೆದು ಹೋದದ್ದೇ ಗೊತ್ತಾಗುವುದಿಲ್ಲ.               

ಅವರು ಕೊಡುವ ತರಬೇತಿ ವಿಶಿಷ್ಠವಾದದ್ದು. ಅಲ್ಲಿ ಅವರು ಮೊಟ್ಟ ಮೊದಲು ಕಲಿಸೋದು ಕನ್ನಡ ಓದುವುದನ್ನ! ಅದೂ ಗಟ್ಟಿಯಾಗಿ, ಸ್ಫುಟವಾಗಿ ಓದಬೇಕು. ಅಲ್ಲಿಯವರೆಗೆ ಅವರು ಬಿಡುವುದಿಲ್ಲ! ಜಾಧವ್ ಅವರು ಹೇಳುವಂತೆ, ನಾವು ಮನದೊಳಗೆ ಓದಿಕೊಳ್ಳುವುದನ್ನು ಎಷ್ಟು ಬಳಕೆ ಮಾಡಿಕೊಂಡಿದ್ದೇವೆಂದರೆ, ನಮ್ಮ ನಾಲಿಗೆಗೆ ಕೆಲವು ಅಕ್ಷರಗಳ ಉಚ್ಚಾರದ ರೂಢಿಯೇ ತಪ್ಪಿ ಹೋಗಿರುತ್ತದೆ. ಅದಕ್ಕೆ, ಸರಿಯಾದ ಸಮಯದಲ್ಲದು ಕೈ ಕೊಡುತ್ತದೆ! ಅವರು ಹೇಳೋದು ಸರಿಯೆ. ಇದರ ಜೊತೆಗೆ ಪೇಪರ್ ಓದಿಸುತ್ತಾರೆ, ಅಲ್ಲಿ ಬಂದವರೆಲ್ಲರೂ ಒಂದೊಂದು ಹಾಡು ಹೇಳಲೇಬೇಕು. ಈ ಎಲ್ಲ ವಿಧಾನಗಳಿಂದ ನಮ್ಮಲ್ಲಿನ ನಾಚಿಕೆ ಹೆದರಿ ಓಡಿ ಹೋಗುತ್ತೆ! ಇದೆಲ್ಲ ಆದ ಮೇಲೆ ಸಂಭಾಷಣೆಯನ್ನು ವಿವಿಧ ಹಾವಭಾವಗಳೊಂದಿಗೆ ಹೇಳುವದನ್ನು ಕಲಿಸಿಕೊಡುತ್ತಾರೆ. ತುಂಬಾ ಜನರು ಅವರಿಂದ ತರಬೇತಿ ಪಡೆದು ಬರೀ ನಾಟಕದಲ್ಲಷ್ಟೇ ಅಲ್ಲ, ಶಾಲೆಗಳಲ್ಲಿ ಹಾಗೂ ವೃತ್ತಿಯಲ್ಲಿ ಒಳ್ಳೆ ಪ್ರಗತಿ ಹೊಂದಿದ್ದಾರೆ. ಅಲ್ಲಿ ಬರುವವರು ವಿವಿಧ ಸ್ತರಗಳಿಂದ ಬಂದವರೂ, ಬೇರೆ ಬೇರೆ ವಯೋಮಾನದವರೂ ಇರುತಾರೆ. ಅಲ್ಲಿ ಯಾವುದೇ ಭೇದವಿಲ್ಲ. ಎಲ್ಲರೂ ಕಲಾವಿದರೇ!

ಶ್ರೀಯುತ. ಜಾಧವ್ ಅವರ ಬಗ್ಗೆ ಇನ್ನಷ್ಟು ಹೇಳಬೇಕೆಂದರೆ, ಅವರು ತುಂಬಾ ಓದಿಕೊಂಡಿದ್ದಾರೆ. ತೇಜಸ್ವಿಯವರ ನಿಕಟವರ್ತಿಗಳು, ಹಾಗೂ ಅವರ ಹಲವು ಕೃತಿಗಳಿಗೆ ನಾಟಕದ ರೂಪ ಕೊಟ್ಟು ಯಶಸ್ವಿಯಾಗಿ ಪ್ರದರ್ಶನ ಮಾಡಿಸಿದ್ದಾರೆ. ಅವರ ಇನ್ನೊಂದು ವಿಶೇಷತೆಯೆಂದರೆ, ಅವರ ನಾಟಕಗಳಲ್ಲೆಲ್ಲ ಅವರ ವಿದ್ಯಾರ್ಥಿಗಳೇ ಇರುತ್ತಾರೆ. ಕೆಲವು ಹಳೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರೆಲ್ಲಾ ಹೊಸಬರೇ! ಅವರಿಗೆಲ್ಲ ಅದೊಂದು ವಿಬಿನ್ನ ಅನುಭವ ಹಾಗೂ ಕಲಿಕೆ.

ಅವತ್ತಿನ ನಾಟಕ  'ಮಾಯಾ ಲೋಕ' ದಲ್ಲಿ ಗುರುಗಳು ನನಗೂ ಒಂದು ಪಾತ್ರ ವಹಿಸಿದ್ದರು. ಆದರೆ ಪ್ರತಿ ದಿನ ಸಂಜೆ ೭ ಗಂಟೆಗೆ ರಿಹರ್ಸಲ್ ಇರುತ್ತಿತ್ತು. ನನಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನಮ್ಮ ಕಂಪನಿಯಲ್ಲಿ ನಮ್ಮ ಅಸಲಿ ನಾಟಕ ಶುರುವಾಗುವುದೇ ಸಂಜೆಗೆ! ಅದೇನೆ ಇರಲಿ, ನಾನು ಅದರಲ್ಲಿಲ್ಲದಿದ್ದರೂ ನಮ್ಮ ತಂಡದ ನಾಟಕ ನೋಡುವ ಸೌಭಾಗ್ಯವನ್ನಾದರೂ ತಪ್ಪಿಸಿಕೊಳ್ಳದೆ ಅಲ್ಲಿಗೆ ಹೋಗಿದ್ದೆ.  

ಆ ನಾಟಕದ ವಿಶೇಷವೆಂದರೆ, ಅದರಲ್ಲಿದ್ದ ಒಟ್ಟು ಪಾತ್ರಗಳು ೪೦! ಹದಿನಾರು ದೃಶ್ಯಗಳು. ಇಷ್ಟೆಲ್ಲ ಪಾತ್ರಗಳ ಜೊತೆಗೆ, ಹೆಚ್ಚು ಕಡಿಮೆ  ಮುಕ್ಕಾಲು ಪ್ರತಿಶತ ಜನ ಹೊಸಬರನ್ನು ಹಾಕಿಕೊಂಡು ನಾಟಕ ಮಾಡಿಸುವುದೆಂದರೆ ಅದೊಂದು ಸಾಹಸವೇ ಸರಿ! ಅದೂ ಅಲ್ಲದೆ ಅವತ್ತು ಡಾ. ಚಂದ್ರಶೇಖರ್ ಕಂಬಾರ್ ಹಾಗೂ ಡಾ. ಬಿ.ವಿ. ರಾಜಾರಾಮ್ ವಿಶೇಷ ಅಹ್ವಾನಿತರು. ಸಭಾಂಗಣವಂತೂ  ಕಿಕ್ಕಿರಿದು ತುಂಬಿತ್ತು. ನಾಟಕವಂತೂ ಅದ್ಭುತವಾಗಿ ಮೂಡಿ ಬಂತು. 'ವೇಷಧಾರಿಗಳ ಅಸಲಿ ನಾಟಕ' ಅನ್ನುವ ಟ್ಯಾಗ್ ನೊಂದಿಗೆ ಸುಂದರ ನಿರೂಪಣೆ, ತೆಳುವಾದ ಹಾಸ್ಯ, ವ್ಯಂಗ್ಯಗಳಿಂದ ಒಳ್ಳೆ ಮನರಂಜನೆ ಕೊಡುವಂತಹ ನಾಟಕವದು. ಹಿನ್ನೆಲೆ ಗಾಯನವಂತೂ ಮನೆಗೆ ಹೋಗುವ ತನಕವೂ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಅವರ ಹಾಗೂ ತಂಡದ ಪ್ರಯತ್ನ ಅದ್ಭುತ ಯಶಸ್ಸು ಕಂಡಿತು! ಪ್ರೇಕ್ಷಕರ ನಗು ಹಾಗೂ ಚಪ್ಪಾಳೆಗಳಲ್ಲೇ ಅದು ಸ್ಪಷ್ಟವಾಗಿತ್ತು.

ಆ ಯಶಸ್ವಿ ಪ್ರದರ್ಶನದ ಬಳಿಕ ಆ ತಂಡದಲ್ಲಿ ಪ್ರತ್ಯಕ್ಷವಾಗಿ  ಹಾಗೂ ಪರೋಕ್ಷವಾಗಿ ಭಾಗವಹಿಸಿದ ತಂಡದ ಸದಸ್ಯರ ಮುಖದಲ್ಲಿ ಮೂಡಿದ್ದ ಧನ್ಯತಾ ಭಾವ, ಏನೋ ಸಾಧಿಸಿದ ತೃಪ್ತಿ ಇದೆಯಲ್ಲ, ಅದನ್ನು ನೋಡಿ ಖುಷಿಯಾಯ್ತು. ಆ ಖುಷಿ ನಮ್ಮ ಕಾರ್ಪೋರೇಟ್ ಔಟಿಂಗಿನಲ್ಲಿ ದೊರೆಯುವ ಖುಷಿಗಿಂತ ಮೇಲು ಅನಿಸಿತು. ಇದು ಮತ್ತೆ ಮತ್ತೆ ನೆನಪು ಮಾಡಿಕೊಂಡು ಮನಸ್ಸಿಗೆ ಮುದ ನೀಡುತ್ತ ಶಾಶ್ವತವಾಗಿರುತ್ತದೆ. ಅದೇ, ಔಟಿಂಗು ಆ ಮಟ್ಟಿಗಿನ ತಾತ್ಕಾಲಿಕ, ಕ್ಷಣಿಕ ಸುಖವೆನಿಸಿ, ಮತ್ತೆ ಸೋಮವಾರ ಕೆಲಸಕ್ಕೆ ಹೋಗುವ ಚಿಂತೆಯೊಂದಿಗೆ ಮುಗಿಯುತ್ತೆ. ಅದರ ಬದಲು ಔಟಿಂಗುಗಳು ಕೂಡ ಇದೇ ತರಹ ಸೃಜನ ಶೀಲವಾಗಿದ್ದರೆ ಅದಕ್ಕೊಂದು ಸಾರ್ಥಕತೆ ಇರುತ್ತದಲ್ಲವೆ? ಇದು ಅವತ್ತು ನನ್ನ ಮನದಲ್ಲಿ ಮೂಡಿದ ಪ್ರಶ್ನೆ.    

           

Monday, September 15, 2014

ಬೆಂಬಿಡದ ಭೂತ (ಅತೀಂದ್ರಿಯ ಅನುಭವದ ಕಥೆಗಳು - ಭಾಗ ೬)

(http://www.panjumagazine.com/?p=8489)

---
ಈ ಕಥೆ ನನ್ನ ಸಹೋದ್ಯೋಗಿ ರಮೇಶ ನಾಯಕ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದದ್ದು

---
  
ನಾನು ಹುಟ್ಟಿ ಬೆಳೆದು ದೊಡ್ಡವನಾಗಿದ್ದು ಭಟ್ಕಳದಲ್ಲಿ. ನಮ್ಮ ಮನೆಯಿಂದ ಎಡವಿ ಬಿದ್ದರೆ ಸಮುದ್ರ! ಅಂದರೆ ಅದು ಅಷ್ಟು ಹತ್ತಿರದಲ್ಲಿದೆ ಅಂತ ಅರ್ಥ. ಅದು ಬೇರೆಯವರಿಗೆ ಕೇಳೋಕೆ ಚಂದ. ಪರ ಊರಿನಿಂದ ಒಂದೆರಡು ದಿನಕ್ಕೆ ಅಂತ ನಮ್ಮೂರಿಗೆ ಬಂದವರಿಗೆ ಸಮುದ್ರಕ್ಕೆ ಹೋಗಿ  ಸ್ನಾನ ಮಾಡಲು ಅಡ್ಡಿ ಇಲ್ಲ. ಅಲ್ಲೇ ಇರೋವ್ರಿಗೆ ಕಷ್ಟ. ಅದರ ಪಾಡಿಗೆ ಅದಿರುತ್ತೆ ಆದರೂ, ಸಮುದ್ರ ತೀರದಲ್ಲಿಯ ಊರಿನಲ್ಲಿದ್ದು, ಬಿಸಿಲಿನ ಝಳದಲ್ಲಿ ಬಸಿಯುವ ಬೆವರಿನಲ್ಲಿ ನಿತ್ಯ ಸ್ನಾನ ಮಾಡುವವರಿಗೇ ಗೊತ್ತು ಅದರ ಬವಣೆ. ಅದೇನೆ ಇರಲಿ ನನಗಂತೂ ನನ್ನ ಊರು ಇಷ್ಟ! 
 
ನಮ್ಮೂರಿನ ಬದಿ ಬೇಸಿಗೆಯ ಝಳ ಶುರು ಆಗೋದರ ಜೊತೆ  ಜೊತೆಗೆ ಇನ್ನೊಂದು ಸೆಕೆ ಶುರು ಆಗುತ್ತೆ.... ಅದು ಯಕ್ಷಗಾನದ್ದು! ಅದೂ ಒಂದು ಸೀಸನ್ ತರಹವೇ! ಅದು ಬಂತೆಂದರಂತೂ ಬಣ್ಣ ಹಚ್ಚುವವರ ಸಡಗರ ಹೇಳತೀರದ್ದು.  ಬಾಯಲ್ಲಿ ಕವಳ (ಎಲೆ, ಅಡಿಕೆ ಮತ್ತು ತಂಬಾಕುಗಳ ರಸಾಯನ!), ಅದನ್ನು ಜಗಿದು ಜಗಿದು ಬಾಯಿಯ ಎರಡೂ ಬದಿಗೆ ವಸರುತ್ತಿರುವ ಕೆಂಪು ರಸ, ಅದಕ್ಕೆ ಪೂರಕವಾದ ಮುಖಕ್ಕೆ ಲೇಪಿಸಿಕೊಂಡ ಯಕ್ಷನ ಪಾತ್ರದ ಬಣ್ಣ, ಅದರ ಜೊತೆಗೆ ಸ್ವಲ್ಪ ಜಾಸ್ತಿಯೇ ಹಾವ ಭಾವದೊಂದಿಗೆ ಮಾತಾಡುವ ನಟ ಶಿರೋಮಣಿಗಳ ಹರಟೆಗಳು! ಅದನ್ನು ನೋಡಲು ಎರಡು ಕಣ್ಣು ಸಾಲದು. ಬರೀ ಬಣ್ಣ ಹಚ್ಚುವವರಷ್ಟೇ ಆಲ್ಲ, ಅದನ್ನು ನೋಡಿ ಆನಂದಿಸುವವರೂ ಅದೇ ಸಡಗರದಲ್ಲಿರುತ್ತಾರೆ. ಸಣ್ಣ ಹುಡುಗರಿಂದ ಮುದುಕರವರೆಗೆ ಎಲ್ಲರಿಗೂ ಅದು ಪ್ರಿಯವೇ. ಯಕ್ಷಗಾನ ನಮ್ಮ ಜನರ ರಕ್ತದಲ್ಲಿದೆ. ಅದರ ಬಗೆಗಿನ ಪ್ರೀತಿ ಅವರ ಮುಖದಲ್ಲಿ ಕಣ್ಣಿಗೆ ಕಾಣುವಂತೆ ಕುಣಿಯುತ್ತಿರುತ್ತದೆ. ನನಗಂತೂ ಚಿಕ್ಕಂದಿನಿಂದಲೂ ಅದರ ಬಗ್ಗೆ ಒಲವು ಜಾಸ್ತಿ. 
 
ಒಂದು ಸಲ, ನಮ್ಮ ಊರಿನ ಹತ್ತಿರವೇ ಇರುವ ಶಿರೂರಿನಲ್ಲಿ ಯಕ್ಷಗಾನದ ಆಟವಿತ್ತು. ನಾನಾಗ ಎಂಟನೇ ತರಗತಿಯಲ್ಲಿದ್ದೆನೆಂದು ಕಾಣುತ್ತೆ. ಸಾಮಾನ್ಯವಾಗಿ ಯಕ್ಷಗಾನದ ಆಟ ಶುರುವಾಗೋದು ರಾತ್ರಿನೇ. ಅಮೇಲೆ ಬೆಳಗಿನ ಜಾವದ ವರೆಗೆ ನಡೆಯುತ್ತದೆ. ಶಿರೂರು, ನಮ್ಮೂರಿನಿಂದ ಸುಮಾರು ೧೦ ಕಿಲೋಮೀಟರ್ ಅಂತರದಲ್ಲಿದೆ. ಅದು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದಾದರೂ ನಮ್ಮ ಊರಿಗೆ ಹತ್ತಿರದಲ್ಲಿದೆ. ಒಂಥರ ನಮಗೆ ಗಡಿ ಪ್ರದೇಶವಿದ್ದಂತೆ! ಆ ರಾತ್ರಿಯ ಆಟಕ್ಕೆ ಹೋಗುವುದೆಂದು ನಿರ್ಧರಿಸಿಯಾಗಿತ್ತು. ನನ್ನ ಜೊತೆಗೆ, ನನಗಿಂತ ವಯಸ್ಸಿನಲ್ಲಿ ಎರಡರಿಂದ ಮೂರು ವರ್ಷಗಳ ಅಂತರದಲ್ಲಿ ಹಿರಿಯರಾದ  ನಾಲ್ಕೈದು ಜನ ಹುಡುಗರೂ ಬರುವವರಿದ್ದರು. ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮನೂ ಬರುವೆನೆಂದ. ಈ ತಮ್ಮಂದಿರನ್ನು ಸಂಭಾಳಿಸುವುದು ಕಷ್ಟವೇ ಆದರೂ , ಇರಲಿ ಅಂತ ನಾನು ರಿಸ್ಕ್ ತೊಗೊಂಡಿದ್ದೆ. ಯಾಕೆಂದರೆ, ನಮ್ಮ ತಂಡದಲ್ಲಿ ಅವನೇ ಎಲ್ಲರಿಗಿಂತ ಚಿಕ್ಕವನು.
 
ರಾತ್ರಿ ಎಂಟು ಗಂಟೆಗೆಲ್ಲಾ ಊಟ ಮುಗಿಸಿ ನಡೆಯುತ್ತಾ ಹೊರಟೆವು. ಆಗೆಲ್ಲಾ ಕಾರಿಗಿಂತ ಕಾಲಿನ ಬಳಕೆಯೇ ಜಾಸ್ತಿ ಇತ್ತು. ನಡೆಯುತ್ತ ಆ ದೂರ ಕ್ರಮಿಸಲು ಒಂದು ಗಂಟೆಯ ಮೇಲೆ ಬೆಕಿತ್ತು. ಎಲ್ಲರೂ ಬಿಸಿ ರಕ್ತದ ಹುಡುಗರೇ. ಅದು ಇದು ಹರಟೆ ಹೊಡೆಯುತ್ತಾ ಸಾಗಿತ್ತು ನಮ್ಮ ಪಯಣ. ನನ್ನ ನಿರೀಕ್ಷೆಯಂತೆ ಸ್ವಲ್ಪ ದೂರ ಹೋಗುತ್ತಲೇ ನನ್ನ ತಮ್ಮನ ಕಿರಿ ಕಿರಿ ಶುರುವಾಯ್ತು. ಎಷ್ಟಂದ್ರು ಚಿಕ್ಕವನು. ನಡೆದು ಬರುತ್ತಿದ್ದನಾದ್ದರಿಂದ ಅವನ ಕಾಲು ನೋಯಲು ಶುರುವಾಗಿತ್ತೆಂದು ಕಾಣುತ್ತೆ. ಆದರೆ ನಾವಾಗಲೇ ಊರಿನಿಂದ ಸುಮಾರು ದೂರ ಬಂದಿದ್ದೆವಾದ್ದರಿಂದ ಅವನನ್ನು  ವಾಪಸ್ಸು ಮನೆಗೆ ಬಿಟ್ಟು ಬರುವ ಪರಿಸ್ಥಿತಿಯೂ ಇರಲಿಲ್ಲ. ನನಗೋ ಅದು ಬಿಸಿ ತುಪ್ಪದಂತೆ ಉಗುಳಲೂ ಆಗದೇ ನುಂಗಲೂ ಆಗದಂತಹ ಧರ್ಮಸಂಕಟ! ಅವನಿಗೆ ಏನೋ ಪುಸಲಾಯಿಸಿ ಕರೆದೊಯ್ಯುತ್ತಿದ್ದೆ. ಆದರೂ ಅವನು ಎಲ್ಲರಿಗಿಂತ ಹಿಂದೆಯೇ ಉಳಿದಿದ್ದ.  ಕಾಲೆಳೆಯುತ್ತ ನಡೆಯುತ್ತಿದ್ದ. ಇವನ ಜೊತೆಗೆ ನನಗಿಂತ ವಯಸ್ಸಿನಲ್ಲಿ ದೊಡ್ಡವರಾದ ಹುಡುಗರ ಜೊತೆಗೆ ನಾನೂ ಹರಟೆ ಹೊಡೆಯುತ್ತ ಸಾಗಿದ್ದೆನಾದರೂ ತಮ್ಮನ ಮೇಲೊಂದು ಕಣ್ಣಿಟ್ಟಿದ್ದೆ. ನಾವು ನಡೆಯುತ್ತಿದ್ದುದು ಹೆದ್ದಾರಿ ಆಗಿತ್ತು, ಕತ್ತಲು ಬೇರೆ. ಆದರೆ ಹುಣ್ಣಿಮೆಯಾದ್ದರಿಂದ ಸ್ವಲ್ಪ ಬೆಳಕು ಇತ್ತಾದರೂ ಆ ದಾರಿಯಲ್ಲಿ ಆಗಾಗ ಓಡಾಡುವ ಟ್ರಕ್ಕುಗಳೇ ನಮಗೆ ದಾರಿ ದೀಪಗಳು.
 
ಹಾಗೆ ಸ್ವಲ್ಪ ಮುಂದೆ ಸಾಗಿದರೆ ಅಲ್ಲಿ ಒಂದು ದಿಬ್ಬ ಇದೆ. ಅದಕ್ಕೆ ಗೋಳಿ ಮರದ ಏರು ಅಂತಾರೆ. ಅಲ್ಲಿ ಮೊದಲೇ ಕೆಲವು ದುರ್ಘಟನೆಗಳು ಜರುಗಿ ಕೆಲವು ಜನ ದುರ್ಮರಣ ಹೊಂದಿದ್ದರು. ಅವರಲ್ಲಿ ಕೆಲವರು ಭೂತಗಳಾಗಿದ್ದಾರೆ ಎಂಬ ವದಂತಿಯೂ ಇತ್ತು. ನಾವಾಗಲೇ ಆ ಜಾಗಕ್ಕೆ ಬಂದಾಗಿತ್ತು. ಹಾಗೆ ಕುಂಟುತ್ತ ಸಾಗಿದ್ದ ನನ್ನ ತಮ್ಮ ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎಂಬ ಹೊಸ ರಗಳೆ ಶುರು ಮಾಡಿದ್ದ. ಅದೆಲ್ಲಾ ನಿನ್ನ ನೆಪ ಸುಮ್ಮನೆ ಬಾ ಅಂತ ಗದರಿದೆನಾದರೂ, ಭೂತದ ಭಯವಿದ್ದುದರಿಂದ ಒಂದು ಸಲ ಅವನ ಹಿಂದೆ ತಿರುಗಿ ನೋಡಿದವನಿಗೆ ಎದೆ ಧಸಕ್ಕೆಂದಿತು. ಆ ಬೆಳದಿಂಗಳ ಮಸುಕು ಮಸುಕಾದ ಬೆಳಕಿದ್ದ ಕತ್ತಲಲ್ಲಿ ನನ್ನ ಕಣ್ಣಿಗೆ ಕಂಡದ್ದು ಒಂದು ಬಿಳಿ ಅಕೃತಿ! ನಾನು ನನ್ನ ಮುಂದಿದ್ದ ಹುಡುಗರಿಗೂ ಅದನ್ನು ತಿಳಿಸಿ , ತಮ್ಮನ ಕೈ ಹಿಡಿದು ಲಗು ಬಗೆಯಿಂದ ಎಲ್ಲರೂ ನಡೆಯತೊಡಗಿದೆವು. ಎಲ್ಲರಿಗೂ ಭಯ ಶುರುವಾಗಿತ್ತು. ಆ ದಿಬ್ಬದ ಮೇಲೆ ತಲುಪಿದ್ದೆವು. ಅಲ್ಲಿಂದ ದೂರದಲ್ಲಿ ಯಕ್ಷಗಾನ ನಡೆಯುವ ಸ್ಥಳ ಕಾಣತೊಡಗಿತ್ತು. ಅಲ್ಲಿನ ಸ್ಪೀಕರಿನಲ್ಲಿ ಹಾಕಿದ್ದ ಹಾಡು ಕೇಳುತ್ತಿತ್ತಾದರೂ ಇನ್ನೂ ಸುಮಾರು ದೂರ ನಡೆಯುವುದು ಬಾಕಿ ಇತ್ತು. ಆ ಬೆಂಬಿಡದ ಭೂತವನ್ನು ತಪ್ಪಿಸಿಕೊಳ್ಳಲು ನಾವೆಲ್ಲಾ ಓಡಲು ತೊಡಗಿದೆವು. ಅದರಿಂದ ತಪ್ಪಿಸಿಕೊಂಡೆವಾ ಎಂದು ತಿರುಗಿ ನೋಡಿದರೆ ಅದೂ ಕೂಡ ನಮ್ಮ ಹಿಂದೆಯೇ ಓಡಿ ಬರುತ್ತಿತ್ತು! ಇದು ನಮ್ಮ ಬೆನ್ನ ಬಿಡಲಾರದೆಂದು ನಮಗೆ ಅರಿವಾಯ್ತು. ಈಗ ಓಡುವುದರ ಜೊತೆಗೆ ಎಲ್ಲರೂ ಕೂಗುವುದಕ್ಕೆ ಶುರು ಮಾಡಿದ್ದೆವು. ಹಾಗೆ ಸುಮಾರು ದೂರ ಓಡಿರಬೇಕು. ನಮ್ಮ ಅದೃಷ್ಟಕ್ಕೆ ಮುಂದಿನಿಂದ ಒಂದು ಟ್ರಕ್ಕು ಬರುವುದು ಕಂಡಿತು. ಅದರ ಬೆಳಕಿಗೆ ನಮಗೆ ಸ್ವಲ್ಪ ಧೈರ್ಯ ಬಂತು. ಟ್ರಕ್ಕು ನಮಗೆ ಸ್ವಲ್ಪ ಹತ್ತಿರಕ್ಕೆ ಬರುತ್ತಿದ್ದಂತೆ ಸ್ವಲ್ಪ ಹಿಂತಿರುಗಿ ನೋಡಿದೆವು. ಈಗ ದೆವ್ವದ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು!
 
ಅದೇನಾಗಿತ್ತೆಂದರೆ, ಒಂದು ಪ್ಲ್ಯಾಸ್ಟಿಕ್ಕಿನ ಚೀಲಕ್ಕೆ ಗಾಳಿ ಊದಿ ಯಾವನೋ ಪುಣ್ಣ್ಯಾತ್ಮ ಗಾಳಿ ಪಟದ ತರಹ ಮಾಡಿ ಅದಕ್ಕೊಂದು ದಾರ ಕಟ್ಟಿ ಬಿಟ್ಟಿದ್ದನೆಂದು ಕಾಣುತ್ತೆ. ಆ ಪಟ ಗಾಳಿಗೆ ತಪ್ಪಿಸಿಕೊಂಡು ಅಲ್ಲಿಲ್ಲಿ ಅಲೆದಾಡಿ, ಅದರ ದಾರದ ತುದಿ ಹೇಗೋ ನನ್ನ ತಮ್ಮನ ಚಪ್ಪಲಿಗೆ ಸಿಕ್ಕಿಕೊಂಡು ತೊಡಕಾಗಿದ್ದು ಅವನ ಅರಿವಿಗೆ ಬಾರದೇ ಹೋಗಿತ್ತು. ಅದು ಸಹಜವಾಗಿಯೇ ಇವನು ಹೋದಲ್ಲೇ ಇವನ ಬೆನ್ನಟ್ಟಿತ್ತು. ಅದೂ ಬಿಳಿಯ ಬಣ್ಣದ್ದಾಗಿದ್ದರಿಂದ ಆ ಕತ್ತಲಲ್ಲಿ ಯಾವುದೋ ಭೂತದ ತಲೆಯಂತೆ ಭಾಸವಾಗಿ ನಮ್ಮ ಬೆವರಿಳಿಸಿತ್ತು! ಕೊನೆಗೂ ಅವನ ಕಾಲಿನಿಂದ ಅದನ್ನು ಬಿಡಿಸಿ ನಮ್ಮ ತಲೆಯಿಂದ ಆ ಭೂತವನ್ನು ಓಡಿಸಿ ಯಕ್ಷಗಾನವನ್ನು ಸವಿದು ಬಂದೆವೆನ್ನಿ!                             

Tuesday, September 2, 2014

ಪವಾಡ? (ಅತೀಂದ್ರಿಯ ಅನುಭವದ ಕಥೆಗಳು - ಭಾಗ ೫)

(http://www.panjumagazine.com/?p=8368)

ಈ ಸಲ ಒಂದು ಚಿಕ್ಕ ಘಟನೆಯ ಬಗ್ಗೆ ಹೇಳುತ್ತೇನೆ. ಇದು ನನ್ನ ಅಜ್ಜ (ಅಮ್ಮನ ತಂದೆ) ಅವರಿಗಾದ ಅನುಭವ. ಸುಮಾರು ಐದು ದಶಕಗಳ ಹಿಂದೆ ನಡೆದದ್ದು. ಆಗ ನನ್ನಜ್ಜ ಮಧ್ಯ ವಯಸ್ಕ. ಅವರ ಹೆಂಡತಿ, ಅಂದರೆ ನನ್ನ ಅಜ್ಜಿ, ರಾಘವೇಂದ್ರ ಸ್ವಾಮಿಗಳ ಭಕ್ತಳು. ಅಂತಿಂಥ ಭಕ್ತಳಲ್ಲ, ಘನಘೋರ ಭಕ್ತಳು! ರಾಯರ ಬಗ್ಗೆ ಅವಳಿಗೆ ಸಿಕ್ಕಾಪಟ್ಟೆ ನಂಬಿಕೆ. ಅದೇ ರೀತಿಯಾಗಿ ಅವರ ಸೇವೆಯನ್ನೂ ಚಾಚು ತಪ್ಪದೇ ಮಾಡುತ್ತಿದ್ದಳು. ಅದು ಪೂಜೆ-ಪುನಸ್ಕಾರವೋ, ಉಪವಾಸವೋ ಅಥವಾ ಉರುಳುಸೇವೆಯೋ ಹೀಗೆ ಯಾವುದೋ ಒಂದು ರೀತಿಯಲ್ಲಿ ವ್ಯಕ್ತವಾಗುತ್ತಿತ್ತು. ಅದರಲ್ಲೊಂದು ಶೃದ್ಧೆಯೂ ಇತ್ತು. ರಾಯರು ತನ್ನ ರಕ್ಷಣೆಗಿರುವರೆಂಬ ಬಲವಾದ ನಂಬಿಕೆಯೂ ಅವಳಲ್ಲಿತ್ತು. ರಾಯರ ಮೇಲಿನ ಈ ಪ್ರೀತಿಯಿಂದಾಗಿ ಮನೆಯಲ್ಲಿ ತನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಅವಳು  ಇಟ್ಟಿದ್ದ ಹೆಸರುಗಳಲ್ಲಿ ಬುಹುತೇಕವು ರಾಯರಿಗೆ ಸಂಬಧಿಸಿದವೇ! ಅಮ್ಮನ ಹೆಸರು ಪರಿಮಳ, ಒಬ್ಬ ಮಾಮಾ ರಾಘವೇಂದ್ರ, ಇನ್ನೊಬ್ಬ ಸುಧೀಂದ್ರ, ನಾನು ಗುರುಪ್ರಸಾದ...! 

ಹೀಗೆ ಅವಳು ಮಾಡುತ್ತಿದ್ದ ಅಸಂಖ್ಯಾತ ಸೇವೆಗಳು ಗದಗಿನ ಮಠದಲ್ಲಿ ಅಥವಾ ಮನೆಯಲ್ಲಿ ನಡೆಯುತ್ತಿದ್ದವು. ಆದರೆ  ಕೆಲವು ಸೇವೆಗಳನ್ನು ರಾಯರ ಸನ್ನಿಧಿಯಾದ ಮಂತ್ರಾಲಯಕ್ಕೆ ಹೋಗಿಯೇ ಮಾಡುತ್ತಿದ್ದಳು. ಗಂಡ ಹೆಂಡತಿಯರಿಬ್ಬರೂ ವರ್ಷಕ್ಕೊಮ್ಮೆ ಎರಡೋ ಮೂರೋ ದಿನಗಳು ಅಲ್ಲಿಯೇ ಉಳಿದುಕೊಂಡು, ಸೇವೆಗಳ ಮುಗಿಸಿಕೊಂಡು ಹಿಂತಿರುಗಿ ಬರುತ್ತಿದ್ದರು. ಹೀಗೇ ಒಂದು ಸಲ ಅಜ್ಜ ಅಜ್ಜಿ ಇಬ್ಬರೂ ಮಂತ್ರಾಲಯದಲ್ಲಿದ್ದರು. ಅಜ್ಜಿಯ ಸ್ವಭಾವಕ್ಕೆ ವಿರುದ್ಧವಾಗಿ ನನ್ನ ಅಜ್ಜ. ಅವರು ತುಂಬಾ ನಾಸ್ತಿಕರು ಹಾಗೂ ನಿರ್ಲಿಪ್ತ. ದೇವರು ದಿಂಡರೆಂದರೆ ಅವರಿಗಷ್ಟಕ್ಕಷ್ಟೆ. ಆದರೆ ಅಜ್ಜಿಯ ಭಕ್ತಿಗೆ ಎಂದೂ ಅಡ್ಡಿ ಮಾಡುತ್ತಿರಲಿಲ್ಲ. ಅಜ್ಜಿ ತನ್ನ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದರೆ, ಇವರು ತಮ್ಮಷ್ಟಕ್ಕೆ ತಾವು ಅಲ್ಲಿ ಇಲ್ಲಿ ಅಡ್ಡಾಡಿಕೊಂಡಿರುತ್ತಿದ್ದರು. ಮಂತ್ರಾಲಯದಲ್ಲಿ ಎಷ್ಟು ಹೊತ್ತು ತಾನೇ ಅಡ್ಡಾಡಬಹುದು? ಅದೇ ಕಾರಣಕ್ಕೆ ಅವರು ಹೊತ್ತು ಕಳೆಯುವ ಬೇರೆ ಬೇರೆ ಉಪಾಯಗಳನ್ನು ಕಂಡುಕೊಳ್ಳುತ್ತಿದ್ದರು. ಅವರಿಗೆ ನೀರಿನಲ್ಲಿ ಈಜುವುದು ಚೆನ್ನಾಗಿ ಗೊತ್ತಿತ್ತು. ಮಠದ ಪಕ್ಕದಲ್ಲೇ ತುಂಗೆ ಮೈದುಂಬಿ ಹರಿಯುತ್ತಿದ್ದಳಲ್ಲವೇ? ನನ್ನಜ್ಜನಿಗೆ ಅದೊಂದು ಒಳ್ಳೆ ವಿಹಾರ ಧಾಮವಾಗಿ ಕಂಡಿರಬೇಕು.  ಆರಾಮವಾಗಿ ನದಿಯಲ್ಲಿ ಈಜಾಡಿಕೊಂಡಿರುತ್ತಿದ್ದರು. ಮದ್ಯಾಹ್ನ ಈಜಲು ಶುರು ಮಾಡಿ ಸಂಜೆಯವರೆಗೂ ಹಾಗೆ ವಿಹರಿಸುತ್ತಿದ್ದರು. ಅದೂ ಆಗ ಬೇಸಿಗೆ  ಕಾಲವಾಗಿದ್ದರಿಂದ ನೀರಿನಿಂದ ಎದ್ದು ಬರಲು ಮನಸ್ಸೇ ಆಗುತ್ತಿರಲಿಲ್ಲ.

ಹೀಗೆ ಒಂದು ದಿನ ನೀರಿನಲ್ಲಿ ಈಜಾಡಿಕೊಂಡಿದ್ದರು. ಅವತ್ತು ಗುರುವಾರ ಬೇರೆ. ಅಜ್ಜಿಯ ಸೇವೆಗಳು ಸ್ವಲ್ಪ ಜಾಸ್ತಿಯೇ ಇದ್ದವೆಂದು ಕಾಣುತ್ತದೆ. ಅವಳು ಇನ್ನೂ ಮಠದಲ್ಲೇ ಇದ್ದಳು. ಆಗಲೇ ಸಂಜೆ ಆಗಿತ್ತು, ಬೆಳಕು ಕೂಡ ಕಡಿಮೆಯಾಗುತ್ತಿತ್ತು. ಇವರೂ ಉಮೇದಿಯಲ್ಲಿ, ನದಿಯಲ್ಲಿ ಮುಂದೆ ಮುಂದೆ ಈಜಿಕೊಂಡು ಹೋಗುತ್ತಿದ್ದರು. ದಡದಿಂದ ಸುಮಾರು ದೂರ ಹೋಗಿದ್ದರು. ಅಷ್ಟರಲ್ಲೇ ಅವರ ಎದುರಿನಿಂದ ಒಬ್ಬ ವ್ಯಕ್ತಿ ಈಜಿಕೊಂಡು ಬಂದರಂತೆ. ಅವರು ಸುಮಾರು ವಯಸ್ಸಾದವರೆ. ನನ್ನಜ್ಜನಿಗೆ
'ಇನ್ನೂ ಮುಂದ ಹೋಗಬ್ಯಾಡ್ರೀ. ಅಲ್ಲ್ಯೊಂದು ಸುಳಿ ಅದ.' ಅಂದು ಹಾಗೆ ಮುಂದೆ ಹೋದರಂತೆ. ಸುಳಿಯಲ್ಲಿ ಸಿಕ್ಕರೆ  ಬದುಕುವುದು ಸಾಧ್ಯವಾಗದ ಮಾತು. ಅಜ್ಜ ಅವರ ಮಾತಿಗೆ ಬೆಲೆ ಕೊಟ್ಟು ದಡಕ್ಕೆ ವಾಪಸ್ಸಾದರು. ಮೈ ಒರೆಸಿಕೊಳ್ಳುತ್ತ , ಆ ವ್ಯಕ್ತಿಯನ್ನು ಹುಡುಕಿದರೆ ಅವರಲ್ಲಿರಲಿಲ್ಲ. ಆಮೇಲೆ ಅಜ್ಜ ಯೋಚಿಸಿದಾಗ ಅವರಿಗೆ ರೋಮಾಂಚನವಾಗಿತ್ತು! ಯಾಕೆಂದರೆ ಆ ವ್ಯಕ್ತಿ, ಯಾವ ಕಡೆ ಸುಳಿ ಇದೆ ಅತ್ತ ಹೋಗಬೇಡಾ ಅಂತ ಹೇಳಿದ್ದರೋ ಅದೇ ಜಾಗದಿಂದಲೇ ಈಜಿಕೊಂಡು ಬಂದಿದ್ದರು! ಅದೂ ಅಲ್ಲದೇ ಅವರು ತೋರಿಸಿದ್ದ ಜಾಗದಲ್ಲಿ ನಿಜವಾಗಿಯೂ ಸುಳಿ ಇರುವದನ್ನು ಜನ ಮರುದಿನ ಹೇಳಿದರಂತೆ!

ಅಂದರೆ? ರಾಘವೇಂದ್ರ ಸ್ವಾಮಿಗಳು ನನ್ನ ಅಜ್ಜಿಯ ಸೇವೆಗೆ ಮೆಚ್ಚಿ, ಮಾನವ ರೂಪದಲ್ಲಿ ಬಂದು ನನ್ನಜ್ಜನನ್ನು ಉಳಿಸಿದರೆ. ಅಜ್ಜಿಯ ಮಾಂಗಲ್ಯ ರಕ್ಷಣೆ ಮಾಡಿ, ಅವಳ ಸೇವೆಗೊಂದು ಪುರಸ್ಕಾರ ನೀಡಿದರೆ? ಅಲ್ಲೊಂದು ಪವಾಡ ನಡೆದಿರಬಹುದೇ? ಪವಾಡವೇ ನಡೆದಿದ್ದರೆ ಬೇರೆ ಯಾರೋ ಮನುಷ್ಯನ ಮುಖಾಂತರ ಹೇಳಿಸಬಹುದಿತ್ತಲ್ಲವೆ? ಅಥವಾ ಅಷ್ಟು ಸಮಯವಿಲ್ಲವೆಂದು ತಾವೇ ಖುದ್ದಾಗಿ ದೇವರು ಬಂದು ಕಾಪಾಡಿರಬೇಕೆ?

ಈ ಪ್ರಶ್ನೆಗಳಿಗೆ ಉತ್ತರ ರಾಯರೇ ಹೇಳಬೇಕು!!   


 

ಬಂಧು ಮಿತ್ರರು!

http://surahonne.com/?p=4108

ಫೇಸ್ ಬುಕ್ ಜನಪ್ರೀಯವಾಗುದಕ್ಕಿಂತ ಮೊದಲು ಆರ್ಕುಟ್ ಅನ್ನುವ  ಒಂದು ಸಾಮಾಜಿಕ ಜಾಲ  ತಾಣವಿದ್ದದ್ದು  ಬಹುತೇಕ ಎಲ್ಲರಿಗೂ  ಗೊತ್ತಿರಲೇಬೇಕು.  ಅದರಲ್ಲಿ ಫೇಸ್ ಬುಕ್ಕಿನಲ್ಲಿರದ ಆಯ್ಕೆ ಒಂದಿತ್ತು. ಅದೇನಪಾ ಅಂದ್ರೆ ನಾವು ನಮ್ಮ ಗೆಳೆಯರ ಬಗ್ಗೆ ಹಾಗೂ ಗೆಳೆಯರು ನಮ್ಮ ಬಗ್ಗೆ ಪ್ರಶಂಸೆ (Testimonial) ಬರೆದುಕೊಳ್ಳುವ ಅವಕಾಶ. ಹೆಚ್ಚಾಗಿ ಎಲ್ಲರೂ ಬೇರೆಯವರ ಬಗ್ಗೆ ಒಳ್ಳೆಯದೇ ಬರೆಯುತ್ತಿದ್ದರೆನ್ನಿ. ಪ್ರಶಂಸೆ ಅಂದರೆ ಒಳ್ಳೆಯದೇ ಅಲ್ಲವೇ? ಅದೂ ಅಲ್ಲದೆ, ಕೆಟ್ಟದ್ದು ಬರೆದರೆ ಕೇಳುವವರ್ಯಾರು? ಹಾಗೆ ಬರೆದದ್ದೆ ಆದರೆ ಅದನ್ನು ನಿರಾಕರಿಸುವ ಅಧಿಕಾರ ಬರೆಸಿಕೊಂಡವರಿಗಿರುತ್ತಿತ್ತು! ಆದರೆ  ಫೇಸ್ ಬುಕ್ಕಿನ ಅಬ್ಬರದಲ್ಲಿ ಆರ್ಕುಟ್ ಬದುಕುಳಿಯಲಿಲ್ಲ. ಸಧ್ಯದಲ್ಲೇ ಅದನ್ನು ಮುಚ್ಚುತ್ತಿದ್ದಾರೆ. ಅದೇ ಕಾರಣಕ್ಕೆ ಮೊನ್ನೆ ಅದರೊಳಗೆ ಹೊಕ್ಕು ಹಳೆಯ ಪೋಸ್ಟ್ ಗಳನ್ನು  ನೋಡುತ್ತಿದ್ದಾಗ ನನ್ನ ಬಗ್ಗೆ ಬರೆದ ಎರಡು ಪ್ರಶಂಸಾಬರಹಗಳು ಕುತೂಹಲ ಕೆರಳಿಸಿದವು! ಅದರಲ್ಲಿ ಒಂದು ನನ್ನ ತಮ್ಮ ಗಿರೀಶ ಬರೆದಿದ್ದು. ಅವನು ನನ್ನ ಬಗ್ಗೆ ಅಕ್ಕರೆಯಿಂದ ಬರೆದು ಕೊನೆಗೆ 'ಇವ ನನ್ನ ಅಣ್ಣನಿಗಿಂತ ಹೆಚ್ಚಾಗಿ ನನ್ನ ಮಿತ್ರನ ಹಾಗೆ' ಅಂತ ಬರೆದಿದ್ದ. ಇನ್ನೊಂದು, ನನ್ನ ಕಿರಿಯ ಮಿತ್ರನಾದ ಪವನ ಶಹಪುರ ಬರೆದದ್ದು. ಅವನೂ ಎಲ್ಲ ಬರೆದಾದಮೇಲೆ 'ಇವನು ನನ್ನ ಮಿತ್ರನಿಗಿಂತ ಮಿಗಿಲಾಗಿ ನನ್ನ ಅಣ್ಣನ ಹಾಗೆ' ಅಂತ ಬರೆದಿದ್ದ! ಅಂದರೆ ತಮ್ಮನಿಗೆ ನಾನು ಗೆಳೆಯನಾಗಿದ್ದೆ ಹಾಗೂ ಗೆಳೆಯನಿಗೆ  ಅಣ್ಣನಾಗಿದ್ದೆ!

ಮನುಷ್ಯನ ವರ್ತನೆಯೇ ವಿಚಿತ್ರ ಅಲ್ಲವೇ. ನಾವು ಬೇರೆಯವರಲ್ಲಿ ಅವರಿರುವುದಕ್ಕಿಂತ ಭಿನ್ನವಾದವರನ್ನು  ಕಾಣಲು ಬಯಸುತ್ತೇವೆ. ಎಷ್ಟೋ ಜನ  ಅಪ್ಪನನ್ನು ಗೆಳೆಯನಂತೆ ಕಾಣುತ್ತಾರೆ. ಅದಕ್ಕೆ ಕಾರಣಗಳು ಹಲವಿರಬಹುದು. ನಮ್ಮಲ್ಲೊಬ್ಬ ಹೇಳುತ್ತಿದ್ದ "ನನ್ನಪ್ಪ, ನಾನು ಭಾರಿ ಕ್ಲೋಸ್ ನೋಡಪಾ. ಒಂಥರಾ ಗೆಳ್ಯಾರ್ ಇದ್ದಂಗ. ಇಬ್ಬರೂ ಒಟ್ಟಿಗೆ ಕುಡೀತೀವಿ, ಸಿಗರೇಟ್ ಸೇದತೀವಿ"! ಅಂದರೆ? ಒಟ್ಟಿಗೆ ಕುಡಿದರಷ್ಟೇ ಗೆಳೆಯರೇ? ಅವನ ಅಪ್ಪನಿಗೂ ಕುಡಿಯಲು ಬೇರೆ ಯಾರೂ ಕಂಪನಿ ಇಲ್ಲದಿರಬಹುದು. ಅನಿವಾರ್ಯವಾಗಿ ಮಗನನ್ನು ಗೆಳೆಯನ ಸ್ಥಾನದಲ್ಲಿ ಕೂಡಿಸಿರಬಹುದು. ಈ ವಿಷಯದಲ್ಲಿ ಹಾಗಿರುವ ಸಾಧ್ಯತೆಗಳಿವೆಯಾದರೋ, ಎಷ್ಟೋ ಅಪ್ಪಂದಿರು ನಿಜವಾಗಿಯೂ ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ  ನಡೆದುಕೊಳ್ಳುತ್ತಾರೆ. ಅವರಿಬ್ಬರ ನಡುವೆ ಸಂಬಂಧ ಗಟ್ಟಿಯೂ ಇರುತ್ತದೆ. ಅದೇ ಒಬ್ಬ ಅಪ್ಪ, ಅಪ್ಪನಂತೆ ಅಬ್ಬರಿಸಿದರೆ ಮಕ್ಕಳ ವರ್ತನೆ ಬೇರೆಯದೇ ಆಗಿರುತ್ತದೆ. ಹಾಗಂತ ಅಪ್ಪ ಮಕ್ಕಳೊಟ್ಟಿಗೆ ಕುಡಿಯಬೇಕು ಅಂತ ನಾನು ಹೇಳುತ್ತಿಲ್ಲ!

ಇನ್ನೊಂದು ಸಂದರ್ಭದಲ್ಲಿ, ಒಬ್ಬ ತನ್ನ ಗೆಳೆಯನಿಗೆ ಯಾವುದೋ ವಿಷಯಕ್ಕೆ ಬುದ್ಧಿ ಹೇಳಿದರೆ  ಇನ್ನೊಬ್ಬ ಅವನ ಮೇಲೆ ಕೆಂಗಣ್ಣು ಬಿಟ್ಟು ಎಚ್ಚರಿಸುತ್ತಾನೆ 'ನನಗ ಏನ್ ಮಾಡಬೇಕು ಮಾಡಬಾರದು ಅಂತ ಗೊತ್ತದ, ನೀ ನನ್ನ ಅಪ್ಪನಂಗ ಬುದ್ಧಿ ಹೇಳಬ್ಯಾಡಾ ತಿಳಿತಾ!?' ಅಂದರೆ ಇಲ್ಲಿ ಗೆಳೆಯ ಬಂಧುವಾದಾಗ ರಗಳೆ ಶುರು! ಅದೇ ಒಂದು ವೇಳೆ  ಅಪ್ಪ ಗೆಳೆಯನಾದಾಗ ಆತ ಆತ್ಮೀಯ. ವಿಚಿತ್ರ ಅಲ್ಲವೇ?

ಇನ್ನು ಪತಿ ಪತ್ನಿಯರಲ್ಲಿ ನೋಡೋಣ. ಒಬ್ಬ ಗಂಡ ತನ್ನ ಹೆಂಡತಿಯನ್ನು ಗೆಳತಿಯಂತೆಯೂ, ಹೆಂಡತಿ ಗಂಡನನ್ನು ಗೆಳೆಯನಂತೆಯೂ ಕಂಡರೆ, ಅವರಿಬ್ಬರ ನಡುವೆ ಅನ್ಯೋನ್ಯತೆ ಇರುತ್ತದೆ,  ಸರಸವಿರುತ್ತದೆ ಇಲ್ಲವಾದರೆ ಸಂಸಾರ ನೀರಸವಾಗುತ್ತದೆ! ನಾವು ದಿನನಿತ್ಯ ನೋಡುವ ಎಷ್ಟೋ ಸಂಬಂಧಗಳು ಮುರಿದುಬಿದ್ದಿರುವುದಕ್ಕೆ ಹಲವಾರು ಕಾರಣಗಳಲ್ಲಿ ಇದೂ ಒಂದು ಇರಬಹುದು. ಒಳ್ಳೆಯ ಗೆಳೆಯರಾಗಿದ್ದು, ಪ್ರೇಮಿಸಿ ಮದುವೆಯಾದ ಕೆಲವೇ ದಿನಗಳಲ್ಲಿ ಅಥವಾ ವರ್ಷಗಳಲ್ಲಿ ಜಗಳವಾಡಿ ಒಬ್ಬರ ಮುಖ ಇನ್ನೊಬ್ಬರು ನೋಡದಂತಾಗಿ, ವಿಚ್ಛೇದನದ ಮಟ್ಟಿಗೆ ಹೋಗಬೇಕಾದರೆ, ಆಲ್ಲಿ ಮೊದಲಿದ್ದ ಗೆಳೆತನ ಸತ್ತು ಹೋಗಿರುವುದೂ ಒಂದು ಕಾರಣವಿರಬೇಕಲ್ಲವೆ? ಅವರ ಗೆಳೆತನ ಮುಂದಿನ ಘಟ್ಟಕ್ಕೆ ಹೋದಾಗ ಹೊಸದಾದ "ಗಂಡ ಹೆಂಡತಿ" ಅನ್ನುವ ಪಾತ್ರ ನಿರ್ವಹಿಸುವ ಭರದಲ್ಲಿ ಗೆಳೆತನ ಕಳೆದು ಹೋಗುತ್ತದೆಯೆ? ಅದೂ ಅಲ್ಲದೆ ಮದುವೆ ಆದ ಮೇಲೆ ಇಬ್ಬರ ಬಂಧುಗಳೂ ಇವರ ಮಿತ್ರರಾಗುವುದಿಲ್ಲ ಅಥವಾ ಅವರಿಗೆ ಇವರು ಮಿತ್ರರಾಗುವುದಿಲ್ಲ. ಹೀಗೆ ಭಿನ್ನಾಭಿಪ್ರಾಯಗಳು ಮೂಡಿ ಎಲ್ಲಾ ಬಂಧುಗಳು ಶತ್ರುಗಳಾಗಿ ಅದೂ ಇವರ ವಿರಸಕ್ಕೆ ಕಾರಣವಾಗಬಹುದು! ಗೆಳೆತನ ಗಟ್ಟಿ ಇರುವ ದಂಪತಿಗಳು ಇಂತಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬಲ್ಲರು.       

ಇನ್ನೊಂದು ದಿಕ್ಕಿನಿಂದ ಯೋಚಿಸೋಣ. ನಾನು ಈ ಮೊದಲು ಹೇಳಿದಂತೆ ನನ್ನ ಗೆಳೆಯನೊಬ್ಬ ನನ್ನನ್ನು ಅಣ್ಣನ ತರಹ ಕಾಣುತ್ತಾನೆ. ಅದು ನನಗೆ ಸಂತಸದ ವಿಷಯವೇ. ನಾವಿಬ್ಬರೂ ಯಾವಾಗಲೋ ಒಂದು ಸಲ ಫೋನಿನಲ್ಲಿ ಖುಷಿಯಿಂದಲೇ ಮಾತಾಡುತ್ತೇವೆ. ಆತ ನನ್ನ ಗೆಳೆಯನಾಗಿದ್ದು, ನನ್ನಲ್ಲಿ ಬಂಧುವನ್ನು ಕಂಡರೂ ನಮ್ಮ ನಡುವೆ ಒಂದು ಪ್ರೀತಿಯಿದೆ. ಅದೇ ಮುಂದುವರಿದು 'ನೀನು ನನ್ನ ಅಣ್ಣನ ಸಮಾನ, ಅದಕ್ಕೆ ನಿನ್ನ ಮನೆಯಲ್ಲೇ ನಿನ್ನೊಟ್ಟಿಗೆ ಇರುತ್ತೇನೆ' ಅಂತ ಅವನು ನನ್ನ ಜೊತೆ ಇರಲು ತೊಡಗಿದರೆ? ಅಥವಾ ಒಂದು ವೇಳೆ ಅವನು ನನ್ನ ಮನೆಯ ಪಕ್ಕದಲ್ಲೇ ಮನೆ ಮಾಡಿಕೊಂಡ ಅಂದುಕೊಳ್ಳೋಣ. ಆಗಲೂ ನಾವು ಪ್ರೀತಿಯಿಂದ ಇರಬಹುದೇ? ಇಬ್ಬರು ವ್ಯಕ್ತಿಗಳು ದೂರದಲ್ಲಿದ್ದಾಗ ಎಲ್ಲವೂ ಸರಿಯೇ ಇರುತ್ತದೆ. ಹತ್ತಿರವಾದಾಗ ಒಬ್ಬರನ್ನೊಬ್ಬರು ಸಹಿಸದಾಗುತ್ತಾರೆಯೇ? ಇರಬಹುದೇನೋ!

ಒಟ್ಟಿನಲ್ಲಿ ಒಬ್ಬ ಬಂಧು ಗೆಳೆಯನಂತಿದ್ದರೆ ಆ ಸಂಬಂಧ ಗಟ್ಟಿ ಇರುತ್ತದೆ. ಗೆಳೆಯ, ಗೆಳೆಯನಂತಿರದೆ ಬಂಧುವಿನಂತಾದರೆ  ತುಸು ಕಷ್ಟ! ಒಂದು ವೇಳೆ ಹಾಗಾದರೂ, ಇಬ್ಬರೂ ಸ್ವಲ್ಪ ದೂರದಲ್ಲಿದ್ದರೇ ಚೆನ್ನ! ಇದು ಸಾರ್ವತ್ರಿಕವಾಗಿ ಅನ್ವಯವಾಗುವುದಿಲ್ಲವಾದರೂ, ಎಷ್ಟೋ ಸಂದರ್ಭಗಳಲ್ಲಿ ಸರಿ ಎನಿಸುತ್ತದೆ. ಏನಂತೀರಿ?

-ಗುರುಪ್ರಸಾದ ಕುರ್ತಕೋಟಿ