http://surahonne.com/?p=4108
ಫೇಸ್ ಬುಕ್ ಜನಪ್ರೀಯವಾಗುದಕ್ಕಿಂತ ಮೊದಲು ಆರ್ಕುಟ್ ಅನ್ನುವ ಒಂದು ಸಾಮಾಜಿಕ ಜಾಲ ತಾಣವಿದ್ದದ್ದು ಬಹುತೇಕ ಎಲ್ಲರಿಗೂ ಗೊತ್ತಿರಲೇಬೇಕು. ಅದರಲ್ಲಿ ಫೇಸ್ ಬುಕ್ಕಿನಲ್ಲಿರದ ಆಯ್ಕೆ ಒಂದಿತ್ತು. ಅದೇನಪಾ ಅಂದ್ರೆ ನಾವು ನಮ್ಮ ಗೆಳೆಯರ ಬಗ್ಗೆ ಹಾಗೂ ಗೆಳೆಯರು ನಮ್ಮ ಬಗ್ಗೆ ಪ್ರಶಂಸೆ (Testimonial) ಬರೆದುಕೊಳ್ಳುವ ಅವಕಾಶ. ಹೆಚ್ಚಾಗಿ ಎಲ್ಲರೂ ಬೇರೆಯವರ ಬಗ್ಗೆ ಒಳ್ಳೆಯದೇ ಬರೆಯುತ್ತಿದ್ದರೆನ್ನಿ. ಪ್ರಶಂಸೆ ಅಂದರೆ ಒಳ್ಳೆಯದೇ ಅಲ್ಲವೇ? ಅದೂ ಅಲ್ಲದೆ, ಕೆಟ್ಟದ್ದು ಬರೆದರೆ ಕೇಳುವವರ್ಯಾರು? ಹಾಗೆ ಬರೆದದ್ದೆ ಆದರೆ ಅದನ್ನು ನಿರಾಕರಿಸುವ ಅಧಿಕಾರ ಬರೆಸಿಕೊಂಡವರಿಗಿರುತ್ತಿತ್ತು! ಆದರೆ ಫೇಸ್ ಬುಕ್ಕಿನ ಅಬ್ಬರದಲ್ಲಿ ಆರ್ಕುಟ್ ಬದುಕುಳಿಯಲಿಲ್ಲ. ಸಧ್ಯದಲ್ಲೇ ಅದನ್ನು ಮುಚ್ಚುತ್ತಿದ್ದಾರೆ. ಅದೇ ಕಾರಣಕ್ಕೆ ಮೊನ್ನೆ ಅದರೊಳಗೆ ಹೊಕ್ಕು ಹಳೆಯ ಪೋಸ್ಟ್ ಗಳನ್ನು ನೋಡುತ್ತಿದ್ದಾಗ ನನ್ನ ಬಗ್ಗೆ ಬರೆದ ಎರಡು ಪ್ರಶಂಸಾಬರಹಗಳು ಕುತೂಹಲ ಕೆರಳಿಸಿದವು! ಅದರಲ್ಲಿ ಒಂದು ನನ್ನ ತಮ್ಮ ಗಿರೀಶ ಬರೆದಿದ್ದು. ಅವನು ನನ್ನ ಬಗ್ಗೆ ಅಕ್ಕರೆಯಿಂದ ಬರೆದು ಕೊನೆಗೆ 'ಇವ ನನ್ನ ಅಣ್ಣನಿಗಿಂತ ಹೆಚ್ಚಾಗಿ ನನ್ನ ಮಿತ್ರನ ಹಾಗೆ' ಅಂತ ಬರೆದಿದ್ದ. ಇನ್ನೊಂದು, ನನ್ನ ಕಿರಿಯ ಮಿತ್ರನಾದ ಪವನ ಶಹಪುರ ಬರೆದದ್ದು. ಅವನೂ ಎಲ್ಲ ಬರೆದಾದಮೇಲೆ 'ಇವನು ನನ್ನ ಮಿತ್ರನಿಗಿಂತ ಮಿಗಿಲಾಗಿ ನನ್ನ ಅಣ್ಣನ ಹಾಗೆ' ಅಂತ ಬರೆದಿದ್ದ! ಅಂದರೆ ತಮ್ಮನಿಗೆ ನಾನು ಗೆಳೆಯನಾಗಿದ್ದೆ ಹಾಗೂ ಗೆಳೆಯನಿಗೆ ಅಣ್ಣನಾಗಿದ್ದೆ!
ಮನುಷ್ಯನ ವರ್ತನೆಯೇ ವಿಚಿತ್ರ ಅಲ್ಲವೇ. ನಾವು ಬೇರೆಯವರಲ್ಲಿ ಅವರಿರುವುದಕ್ಕಿಂತ ಭಿನ್ನವಾದವರನ್ನು ಕಾಣಲು ಬಯಸುತ್ತೇವೆ. ಎಷ್ಟೋ ಜನ ಅಪ್ಪನನ್ನು ಗೆಳೆಯನಂತೆ ಕಾಣುತ್ತಾರೆ. ಅದಕ್ಕೆ ಕಾರಣಗಳು ಹಲವಿರಬಹುದು. ನಮ್ಮಲ್ಲೊಬ್ಬ ಹೇಳುತ್ತಿದ್ದ "ನನ್ನಪ್ಪ, ನಾನು ಭಾರಿ ಕ್ಲೋಸ್ ನೋಡಪಾ. ಒಂಥರಾ ಗೆಳ್ಯಾರ್ ಇದ್ದಂಗ. ಇಬ್ಬರೂ ಒಟ್ಟಿಗೆ ಕುಡೀತೀವಿ, ಸಿಗರೇಟ್ ಸೇದತೀವಿ"! ಅಂದರೆ? ಒಟ್ಟಿಗೆ ಕುಡಿದರಷ್ಟೇ ಗೆಳೆಯರೇ? ಅವನ ಅಪ್ಪನಿಗೂ ಕುಡಿಯಲು ಬೇರೆ ಯಾರೂ ಕಂಪನಿ ಇಲ್ಲದಿರಬಹುದು. ಅನಿವಾರ್ಯವಾಗಿ ಮಗನನ್ನು ಗೆಳೆಯನ ಸ್ಥಾನದಲ್ಲಿ ಕೂಡಿಸಿರಬಹುದು. ಈ ವಿಷಯದಲ್ಲಿ ಹಾಗಿರುವ ಸಾಧ್ಯತೆಗಳಿವೆಯಾದರೋ, ಎಷ್ಟೋ ಅಪ್ಪಂದಿರು ನಿಜವಾಗಿಯೂ ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ನಡೆದುಕೊಳ್ಳುತ್ತಾರೆ. ಅವರಿಬ್ಬರ ನಡುವೆ ಸಂಬಂಧ ಗಟ್ಟಿಯೂ ಇರುತ್ತದೆ. ಅದೇ ಒಬ್ಬ ಅಪ್ಪ, ಅಪ್ಪನಂತೆ ಅಬ್ಬರಿಸಿದರೆ ಮಕ್ಕಳ ವರ್ತನೆ ಬೇರೆಯದೇ ಆಗಿರುತ್ತದೆ. ಹಾಗಂತ ಅಪ್ಪ ಮಕ್ಕಳೊಟ್ಟಿಗೆ ಕುಡಿಯಬೇಕು ಅಂತ ನಾನು ಹೇಳುತ್ತಿಲ್ಲ!
ಇನ್ನೊಂದು ಸಂದರ್ಭದಲ್ಲಿ, ಒಬ್ಬ ತನ್ನ ಗೆಳೆಯನಿಗೆ ಯಾವುದೋ ವಿಷಯಕ್ಕೆ ಬುದ್ಧಿ ಹೇಳಿದರೆ ಇನ್ನೊಬ್ಬ ಅವನ ಮೇಲೆ ಕೆಂಗಣ್ಣು ಬಿಟ್ಟು ಎಚ್ಚರಿಸುತ್ತಾನೆ 'ನನಗ ಏನ್ ಮಾಡಬೇಕು ಮಾಡಬಾರದು ಅಂತ ಗೊತ್ತದ, ನೀ ನನ್ನ ಅಪ್ಪನಂಗ ಬುದ್ಧಿ ಹೇಳಬ್ಯಾಡಾ ತಿಳಿತಾ!?' ಅಂದರೆ ಇಲ್ಲಿ ಗೆಳೆಯ ಬಂಧುವಾದಾಗ ರಗಳೆ ಶುರು! ಅದೇ ಒಂದು ವೇಳೆ ಅಪ್ಪ ಗೆಳೆಯನಾದಾಗ ಆತ ಆತ್ಮೀಯ. ವಿಚಿತ್ರ ಅಲ್ಲವೇ?
ಇನ್ನು ಪತಿ ಪತ್ನಿಯರಲ್ಲಿ ನೋಡೋಣ. ಒಬ್ಬ ಗಂಡ ತನ್ನ ಹೆಂಡತಿಯನ್ನು ಗೆಳತಿಯಂತೆಯೂ, ಹೆಂಡತಿ ಗಂಡನನ್ನು ಗೆಳೆಯನಂತೆಯೂ ಕಂಡರೆ, ಅವರಿಬ್ಬರ ನಡುವೆ ಅನ್ಯೋನ್ಯತೆ ಇರುತ್ತದೆ, ಸರಸವಿರುತ್ತದೆ ಇಲ್ಲವಾದರೆ ಸಂಸಾರ ನೀರಸವಾಗುತ್ತದೆ! ನಾವು ದಿನನಿತ್ಯ ನೋಡುವ ಎಷ್ಟೋ ಸಂಬಂಧಗಳು ಮುರಿದುಬಿದ್ದಿರುವುದಕ್ಕೆ ಹಲವಾರು ಕಾರಣಗಳಲ್ಲಿ ಇದೂ ಒಂದು ಇರಬಹುದು. ಒಳ್ಳೆಯ ಗೆಳೆಯರಾಗಿದ್ದು, ಪ್ರೇಮಿಸಿ ಮದುವೆಯಾದ ಕೆಲವೇ ದಿನಗಳಲ್ಲಿ ಅಥವಾ ವರ್ಷಗಳಲ್ಲಿ ಜಗಳವಾಡಿ ಒಬ್ಬರ ಮುಖ ಇನ್ನೊಬ್ಬರು ನೋಡದಂತಾಗಿ, ವಿಚ್ಛೇದನದ ಮಟ್ಟಿಗೆ ಹೋಗಬೇಕಾದರೆ, ಆಲ್ಲಿ ಮೊದಲಿದ್ದ ಗೆಳೆತನ ಸತ್ತು ಹೋಗಿರುವುದೂ ಒಂದು ಕಾರಣವಿರಬೇಕಲ್ಲವೆ? ಅವರ ಗೆಳೆತನ ಮುಂದಿನ ಘಟ್ಟಕ್ಕೆ ಹೋದಾಗ ಹೊಸದಾದ "ಗಂಡ ಹೆಂಡತಿ" ಅನ್ನುವ ಪಾತ್ರ ನಿರ್ವಹಿಸುವ ಭರದಲ್ಲಿ ಗೆಳೆತನ ಕಳೆದು ಹೋಗುತ್ತದೆಯೆ? ಅದೂ ಅಲ್ಲದೆ ಮದುವೆ ಆದ ಮೇಲೆ ಇಬ್ಬರ ಬಂಧುಗಳೂ ಇವರ ಮಿತ್ರರಾಗುವುದಿಲ್ಲ ಅಥವಾ ಅವರಿಗೆ ಇವರು ಮಿತ್ರರಾಗುವುದಿಲ್ಲ. ಹೀಗೆ ಭಿನ್ನಾಭಿಪ್ರಾಯಗಳು ಮೂಡಿ ಎಲ್ಲಾ ಬಂಧುಗಳು ಶತ್ರುಗಳಾಗಿ ಅದೂ ಇವರ ವಿರಸಕ್ಕೆ ಕಾರಣವಾಗಬಹುದು! ಗೆಳೆತನ ಗಟ್ಟಿ ಇರುವ ದಂಪತಿಗಳು ಇಂತಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬಲ್ಲರು.
ಇನ್ನೊಂದು ದಿಕ್ಕಿನಿಂದ ಯೋಚಿಸೋಣ. ನಾನು ಈ ಮೊದಲು ಹೇಳಿದಂತೆ ನನ್ನ ಗೆಳೆಯನೊಬ್ಬ ನನ್ನನ್ನು ಅಣ್ಣನ ತರಹ ಕಾಣುತ್ತಾನೆ. ಅದು ನನಗೆ ಸಂತಸದ ವಿಷಯವೇ. ನಾವಿಬ್ಬರೂ ಯಾವಾಗಲೋ ಒಂದು ಸಲ ಫೋನಿನಲ್ಲಿ ಖುಷಿಯಿಂದಲೇ ಮಾತಾಡುತ್ತೇವೆ. ಆತ ನನ್ನ ಗೆಳೆಯನಾಗಿದ್ದು, ನನ್ನಲ್ಲಿ ಬಂಧುವನ್ನು ಕಂಡರೂ ನಮ್ಮ ನಡುವೆ ಒಂದು ಪ್ರೀತಿಯಿದೆ. ಅದೇ ಮುಂದುವರಿದು 'ನೀನು ನನ್ನ ಅಣ್ಣನ ಸಮಾನ, ಅದಕ್ಕೆ ನಿನ್ನ ಮನೆಯಲ್ಲೇ ನಿನ್ನೊಟ್ಟಿಗೆ ಇರುತ್ತೇನೆ' ಅಂತ ಅವನು ನನ್ನ ಜೊತೆ ಇರಲು ತೊಡಗಿದರೆ? ಅಥವಾ ಒಂದು ವೇಳೆ ಅವನು ನನ್ನ ಮನೆಯ ಪಕ್ಕದಲ್ಲೇ ಮನೆ ಮಾಡಿಕೊಂಡ ಅಂದುಕೊಳ್ಳೋಣ. ಆಗಲೂ ನಾವು ಪ್ರೀತಿಯಿಂದ ಇರಬಹುದೇ? ಇಬ್ಬರು ವ್ಯಕ್ತಿಗಳು ದೂರದಲ್ಲಿದ್ದಾಗ ಎಲ್ಲವೂ ಸರಿಯೇ ಇರುತ್ತದೆ. ಹತ್ತಿರವಾದಾಗ ಒಬ್ಬರನ್ನೊಬ್ಬರು ಸಹಿಸದಾಗುತ್ತಾರೆಯೇ? ಇರಬಹುದೇನೋ!
ಒಟ್ಟಿನಲ್ಲಿ ಒಬ್ಬ ಬಂಧು ಗೆಳೆಯನಂತಿದ್ದರೆ ಆ ಸಂಬಂಧ ಗಟ್ಟಿ ಇರುತ್ತದೆ. ಗೆಳೆಯ, ಗೆಳೆಯನಂತಿರದೆ ಬಂಧುವಿನಂತಾದರೆ ತುಸು ಕಷ್ಟ! ಒಂದು ವೇಳೆ ಹಾಗಾದರೂ, ಇಬ್ಬರೂ ಸ್ವಲ್ಪ ದೂರದಲ್ಲಿದ್ದರೇ ಚೆನ್ನ! ಇದು ಸಾರ್ವತ್ರಿಕವಾಗಿ ಅನ್ವಯವಾಗುವುದಿಲ್ಲವಾದರೂ, ಎಷ್ಟೋ ಸಂದರ್ಭಗಳಲ್ಲಿ ಸರಿ ಎನಿಸುತ್ತದೆ. ಏನಂತೀರಿ?
-ಗುರುಪ್ರಸಾದ ಕುರ್ತಕೋಟಿ
No comments:
Post a Comment