Friday, May 23, 2014

ಜಾಣ ಮರೆವು!

"ರೀ... ನಾಳೆ ಏನು ಡೇಟು?"
"ಹಮ್ .... ಮೇ ಹದಿನಾರು... ಯಾಕ?"
"ನಾಳೆ ದಿನ ಒಂದು ಐತಿಹಾಸಿಕ ದಿನಾ! ನೆನಪದ ಅಂತ ಅಂದ್ಕೊಂಡೀನಿ!"
"ಓಹೊ! ಎಲೆಕ್ಶನ್ ಕೌಂಟಿಂಗು! ಅದ್ಯಾವ್ ಮಹಾ ಐತಿಹಾಸಿಕ ದಿನ ಮಾರಾಯ್ತಿ? ಎಲೆಕ್ಶನ್ ಆಗ್ತಾವ ಹೋಗ್ತಾವ. ನಮ್ಮ ಪರಿಸ್ಥಿತಿ ಮಾತ್ರ ಬದಲಾಗಂಗಿಲ್ಲಾ"
"ಅಯ್ಯೋ... ನಾ ಹೇಳಿದ್ದು ಅದಲ್ಲಾ!! "
"ಮತ್ತ? ಓ ಗೊತ್ತಾತು!"
"??!!??"
"ನಾಳೆ ಶುಕ್ರವಾರ! ಹೊಸ ಕನ್ನಡಾ ಪಿಚ್ಚರ್ ರಿಲೀಸ್ ಆಗ್ತಿರಬೇಕು ಅಲ್ಲಾ? ಆದರ ಇತಿಹಾಸ ನಿರ್ಮಾಣ ಮಾಡೊ ಅಂಥಾ ಸಿನಿಮಾ ಯಾವ್ದು ಅಂತ ನೆನಪಿಗೆ ಬರವಲ್ದು ನೋಡು"
"ನನ್ನ ಕರ್ಮಾ!"
"ಏ ಭಾರಿ ಹೆಸರು ಇಟ್ಟಾರ್ ಬಿಡು ಸಿನಿಮಾಕ್ಕ! ಭಟ್ಟರ್ ದ ಇರ್ಬೇಕು. ಆದ್ರೂ ಭಟ್ರು ಭಾರಿ ಟ್ಯಾಲೆಂಟು ನೋಡು. ಯಾರ್ ಅದಕ್ಕ ಹೀರೊಯಿನ್ನು?"
"ಸಿನಿಮಾದಾಗ ಬರೇ ಹೀರೋಯಿನ್ ಅಷ್ಟ ಇರಂಗಿಲ್ಲ. ಹೀರೋನೂ ಇರ್ತಾನ! ನಿಮ್ಮ ಭಟ್ರನ್ನ ಕೇಳ್ರಿ!!"
"ಅಷ್ಟ್ಯಾಕ ಸಿಟ್ಟಿಗೆ ಏಳ್ತಿ? ನಾಳೆ ಏನು ಅಂತ ಹೇಳಿಬಿಡು, ನನಗಂತೂ ಗೊತ್ತಾಗವಲ್ದು"
"ಹತ್ತು ವರ್ಷದ ಹಿಂದ, ಹೊಗ್ಲೀ ಪಾಪಾ ಅಂತ ನಿಮ್ಮ ಕೈ ಹಿಡದಿದ್ದೆ. ನೆನಪಾತೇನು ಈಗರೆ?"
"!! ಏ ಹೌದಲ್ಲಲೇ! ಆ ಘಟನೆ ಮರಿಲಿಕ್ಕೆ ಹೆಂಗ ಸಾಧ್ಯ ಮಾರಾಯ್ತಿ. ಪ್ರತಿ ದಿನ ನೆನಪ ಮಾಡ್ಕೋತೀನಿ. ಆದ್ರ ಯಾಕೋ ೧೬ ನೆ ಮೇ ದಿವ್ಸ ಮತ್ತ ಅದರ ಹಿಂದಿನ್ ದಿವ್ಸ ಒಂದ ನೆನಪಾಗಂಗಿಲ್ಲ ನೋಡು!...."
(ಇಷ್ಟು ಹೇಳಿದ ಮ್ಯಲೆ ಏನ ನಡೀತು ಅನ್ನೋದು ನಿಮ್ಮ ನಿಮ್ಮ ಊಹೆಗೆ ಬಿಟ್ಟದ್ದು! :))

(ನನ್ನ ವಿವಾಹದ ಹತ್ತನೆಯ ವಾರ್ಷಿಕೋತ್ಸವದ (೧೬ ಮೇ, ೨೦೧೪) ಸಂದರ್ಭದಲ್ಲಿ ಬರೆದದ್ದು)

Tuesday, May 13, 2014

ಹೀಗೊಂದು ಗೆಳೆಯರ ಬಳಗ!

ಈ ಲಲಿತ ಪ್ರಬಂಧ ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ....

http://www.panjumagazine.com/?p=7237

---------------------------------------------------------
 
ಮುಂಜ ಮುಂಜಾನೆ ಒಳ್ಳೆ ಸಕ್ಕರಿ ನಿದ್ದಿಯೊಳಗ ಕನಸ ಕಾಣ್ಲಿಕತ್ತಾಗ  ನನ್ನ ಫೋನು ಒದರಲಿಕ್ಕೆ ಶುರು ಹಚ್ಚಿಗೊಂಡು ನನಗ ಒದ್ದು ಎಬ್ಬಿಸ್ತು. ಹೊತ್ತಿಲ್ದ ಹೊತ್ತ್ನ್ಯಗ ಫೋನ್ ಮಾಡಾಂವ್ ಅಂದ್ರ ಪ್ರಶಾಂತ ನ್ನ ಬಿಟ್ಟು ಬ್ಯಾರೆ ಯಾರೂ ಇರ್ಲಿಕ್ಕೆ ಸಾಧ್ಯ ಇಲ್ಲ ಅಂತ ಕನಸಿನ್ಯಾಗನ ಡಿಸೈಡ್ ಮಾಡಿ ಎದ್ದು ನೋಡಿದ್ರ, ಅದು ಅವಂದ ಫೋನು!
"ಹೇಳಪಾ…" ಅಂದದ್ದಕ್ಕ, "ಯಾಕ್ರೀ ಸರ್ರ್ ಇನ್ನೂ ಮಲಗಿದ್ರೇನು" ಅಂತ ಹೇಳಿ ನಿದ್ದಿ ಕೆಟ್ಟಿದ್ದಕ್ಕ ಸಿಟ್ಟಿನ್ಯಾಗ ಬುಸಗುಡಕೋತ ಎದ್ದಂವ್ ಗ ಮತ್ತೊಂದಿಷ್ಟು ಸಿಟ್ಟು ಬರ್ಸಿದಾ. "ಇಲ್ಲಪಾ… ಎದ್ದು ಭಾಳ ಹೊತ್ತಾತು. ನಿನ್ನ ಫೋನಿಗೆ ಕಾಯ್ಕೋತ ಕೂತಿದ್ದೆ" ಅಂದಾಗ ತನ್ನ ಟಿಪಿಕಲ್ ಆದ ಕಂಚಿನ ಕಂಠದಾಗ ಗಹಗಹಿಸಿ ನಕ್ಕ. ಅದು ಇನ್ನೂ ಇರಿಟೇಟ್ ಆತು. 
"ಅಲ್ರೀ ಸರ್ರ ಈ ಫೇಸ್ಬುಕ್ಕ್ನ್ಯಾಗ ಒಂದು ಆಪ್ಷನ್ ಇದ್ರ ಚೊಲೊ ಆಗ್ತಿತ್ತು"
"ಏನಪಾ ಅದು?" ಮುಂಜ್ ಮುಂಜಾನೆ ಕೇಳೊ ಪ್ರಶ್ನೆ ಎನ್ರೀ ಅದು?
"ಎಲ್ಲಾರ್ದೂ ಪೋಸ್ಟ್ ಮತ್ತ ಫೋಟೊ ಆರಿಸಿಕೊಂಡು ಒಂದ ಸಲಕ್ಕ  ಲೈಕ್ ಮಾಡಿ ಬಿಡೋದು!" ಅಂವಾ ಯಾವಾಗ್ಲೂ ಹಂಗ. ಏನ್ ವಿಷಯ ಅಂತ ಹೇಳೊಕಿಂತ ಮೊದ್ಲ ಒಂದ್ ಈ ತರದ ಒಗಟು ಒಗಿತಾನ. ನಾವು ಸೀ ಐ ಡಿ ಪ್ರದ್ಯುಮ್ನ ನ ಹಂಗ ’ಇದ್ರಾಗ ಏನೋ ಗಡಬಡ ಐತಿ’ ಅಂತ ತಲಿ ಕೆರ್ಕೋಬೇಕು, ಹಂಗ ಒಂದು ಹುಳಾ ಬಿಡ್ತಾನ. ನಗಗಂತೂ ಏನೂ ಹೊಳಿಲಿಲ್ಲ.
"ಅದರಿಂದ ಏನಪಾ ಉಪಯೋಗ?" ಅಂತ ಕೇಳಿದ್ದಕ್ಕ.
"ನಮ್ಮ ವಿಜಯ್ ಗುರುಗಳು ತಾವು ತಗದದ್ದ ಒಂದು ಫೋಟೊ ಫೇಸ್ ಬುಕ್ನ್ಯಾಗ ಹಾಕಿದ್ರು. ನಾ ಅದನ್ನ ಇನ್ನೂ ಲೈಕ್ ಮಾಡಿಲ್ಲ ಅಂತ ಸಿಟ್ಟಿಗೆದ್ದಾರ! ಅದಕ್ಕ ಅಂಥಾ ಆಪ್ಶನ್ ಇದ್ರ ಮುಂಜಾನೆ ಎದ್ದು ಎಲ್ಲಾರ್ ಫೋಟೋನೂ ಒಂದ್ ಸಲ ಲೈಕ್ ಮಾಡಿ ಬಿಟ್ರ ಒಂಥರ ನಿಶ್ಚಿಂತಿ ನೋಡ್ರೀ. ಇಲ್ಲಾಂದ್ರ ನನ್ನ ಫೋಟೊ ಲೈಕ್ ಮಾಡಿಲ್ಲ ನಿನ್ನ ಫೋಟೊ ಮಾಡಿಲ್ಲ ಅಂತ ಸಿಟ್ಟಿಗೇಳೋ ಪ್ರಶ್ನೇನ ಏಳುದಿಲ್ಲ."
"ಹೌದಲ್ಲೋ ಮಾರಾಯ! ಇದು ಖರೇನ ಚೋಲೊ ವಿಚಾರ ನೋಡು" ನನಗೂ ಇಂಥಾ ಅನುಭವ ಭಾಳ ಆಗಿದ್ವು. ಅವಾಗಾವಗ ಇಂಥಾವು ಉಪಯೋಗ ಆಗೂ ಅಂಥ ವಿಚಾರ ಮಾತಾಡ್ತಾನ. ಅಡ್ಡಿ ಇಲ್ಲ. ಅಂದ್ಕೋತಿರ್ಬೇಕಾದ್ರ…. 
"ಲೇ ಎಪ್ರೇಷಿ… ಬುದ್ಧಿ ಅದ ಇಲ್ಲಲೇ ನಿನಗ…! ಲೇ ಎಲ್ಲಿದ್ದೀ ಬಾಯಿಲ್ಲೆ!!" ಅಂತ ಒದ್ರೀದ.
"?!!??"
"ಸರ್‍ರ ನಿಮಗ ಅಲ್ಲಾ, ನನ್ನ ಮಗಾ ಏನ್ ಧಾಂದ್ಲೆ ಹಾಕ್ತಾನ್ರೀ ಪಾ. ಅಂವಗ ಬೈಲಿಖತ್ತಿದ್ದೆ. ಇಕಿನೂ ಹಂಗ, ನಾ ಫೋನ್ ಮಾಡು ಮುಂದ ಹುಡುಗುರ್ನ ನನ್ನ ಹತ್ರ ಬಿಟ್ಟಿರ್ತಾಳ." ಅಂದ. ಸಧ್ಯ ಬದಕ್ದೆ, ಎಲ್ಲೆ ನನಗ ಬೈದ್ನೋ ಅಂತ ಹೆದರಿದ್ದೆ! ಹಂಗ ಅಂದವ್ನ ಖೊರ್‍ರ ಅಂತ ಖ್ಯಾಖರಿಸಿ ಉಗುಳಿದ. ಫೋನ್ ಹಿಡಕೊಂಡು ಅವನ ಮನಿ ಮುಂದಿನ ಘಟಾರ್ ನ್ಯಾಗ ಉಗುಳಿದ್ದ. ಆದ್ರೂ ಅದು ನನ್ನ ಕಿವ್ಯಾಗ ಉಗುಳಿದಂಗ ಆಗಿ ನಾನು ಕರ್ಚೀಫ್ ಲೆ ಕಿವಿ ವರಿಸಿಕೊಂಡೆ. ಅದಕ್ಕ…, ಅವನ ಜೋಡಿ ಫೋನ್ ನ್ಯಾಗ ಮಾತಾಡೋವಾಗ ಒಂದು ಕರ್ಚೀಫು ಬಾಜುಕ್ಕ ಇಟಗೊಂಡ ಕೂತಿರ್ತೀನಿ!  
"ಆತ್ ತೊಗೊಪಾ ಸ್ವಲ್ಪ ಮಕಾ ತೊಕ್ಕೊಂಡು, ಚಾ ಕುಡದು ಅಮ್ಯಾಲೆ ಫೋನ್ ಮಾಡ್ತೀನಿ" ಅಂತ ಸಂಭಾಷಣೆ ಮುಗಸೊ ಪ್ರಯತ್ನ ಮಾಡ್ದೆ. ಆದ್ರ ಅಂವ ಬಿಡಬೇಕಲ್ಲ! 
"ಅಲ್ರೀ ನಿಮ್ಮ ಪಾರ್ಟಿ ಯಾವಾಗ?" ಅಂತ ಮತ್ತೇನೋ ಒಂದು ಒಗಟು ಒಗದಾ. 
"ಯಾವ ಪಾರ್ಟಿ??" ನನ್ನ ಅಲ್ಪ ಸ್ವಲ್ಪ ಉಳದದ್ದ ನಿದ್ದೀನೂ ಹಾರಿ ಹೋಗಿತ್ತು. 
"ಒಂದ? ಎರಡ?…, ಭಾಳ ಪಾರ್ಟಿ ಪೆಂಡಿಂಗ ಅವ ನಿಮ್ವು. ಬರ್ತ್ ಡೇ ದ್ದು ಕೊಟ್ಟಿಲ್ಲ, ಮ್ಯಾರೇಜ್ ಅನ್ನಿವರ್ಸರಿದೂ ಕೊಡಲಿಲ್ಲ, ಹೊಸಾ ಫ್ರಿಜ್ ತೊಗೊಂಡ್ರಿ ಅದರ್ದು ಇಲ್ಲ" ಪುಣ್ಣ್ಯಾಕ್ಕ ನಾ ಮೊನ್ನೆ ಹೊಸ ಅಂಡರ್ ವೇರ್ ತೊಗೊಂಡಿದ್ದು ಅವಂಗ ಇನ್ನೂ ಗೊತ್ತಿಲ್ಲಾ, ಒಂದು ಪಾರ್ಟಿ ಉಳೀತು! ಪ್ರತಿಯೊಂದಕ್ಕೂ ಪಾರ್ಟಿ ಕೇಳೋದಕ್ಕ ಎಲ್ಲಾರೂ ಇಂವಗ ಪಾರ್ಟಿ ಪ್ರಶಾಂತ ಅಂತ ಹೆಸರು ಇಟ್ಟಾರ.
"ಅಲ್ಲೋಪಾ, ಇಷ್ಟ್ ವಯಸ್ಸಾದ್ ಮ್ಯಾಲೂ ಬರ್ಥ್ ಡೇ ಮಾಡ್ತಾರೇನು? ಮದಿವಿ ಆಗಿದ್ದಂತೂ ಪಾರ್ಟಿ ಕೊಡು ಅಂಥಾ ವಿಷಯಾನ ಅಲ್ಲ. ಸುಮ್ಮ್ ಸುಮ್ಮ್ನ ಮುಂಜಾನೆ ತಲಿ ತಿನ್ನಬ್ಯಾಡ"
"ಅಲ್ರೀ ಗುರು ನಿಮಗೇನ್ ಅಂಥಾ ವಯಸಾಗ್ಯಾವ್ರೀ. ನೋಡ್ಲಿಕ್ಕೆ ಇನ್ನೂ ಇಪ್ಪತ್ತರ ಹತ್ ಹತ್ತ್ರ ಇದ್ದಂಗ ಕಾಣ್ತೀರಿ." ಅಂತ ಬೇಣ್ಣಿ ಹಚ್ಚಿದ್ದಕ್ಕ ಹೋಗ್ಲಿ ಒಂದರೆ ಪಾರ್ಟಿ ಕೊಟ್ಟ್ರಾತು ಅಂತ ನಿರ್ಧಾರಾ ಮಾಡಿದ್ದ ತಡ. ನನ್ನ ಹೇಂಡ್ತಿ ಎಲ್ಲ್ಯೋ ಹೊರಗ ಇದ್ದಾಕಿ ಒಳಗ ಬಂದು  "ಇಬ್ಬರಿಗೂ ಉದ್ಯೋಗಿಲ್ಲ ಉಸಾಬರಿಲ್ಲಾ. ಬರೇ ಫೋನ್ ನ್ಯಾಗ ಮಾತಾಡ್ಕೋತ ಕೂಡ್ರಿ. ಇನ್ನೂ ಭಾಳ ಕೆಲ್ಸಾ ಅವ, ಮುಗಸ್ರೀ ಇನ್ನ." ಅಂತ ಬೈದ್ಲು. ಏ ಛೊಲೊ ಟೈಮಿಗೆ ಬಂದ್ಲು ಅಂದ್ಕೊಂಡು.
"ಇಕಿ ಬೈಲಿಖತ್ತಾಳ ಮಾರಾಯ. ಇನ್ನೂ ಭಾಳ ಕೆಲ್ಸ ಅವ. ಅಮ್ಯಾಲೆ ಮಾತಾಡೋಣ ಅಂತ" ಫೋನು ಬಂದ ಮಾಡಿದೆ. ಆದ್ರೂ ನಾ ಹೇಂಡ್ತೀಗೆ ಇಷ್ಟು ಹೆದರ್ತೀನಿ ಅಂತ ಇಂವಗ ಪ್ರತೀ ಸಲ ಅಂವಾ ಫೋನ್ ಮಾಡ್ದಾಗೂ ಗೊತ್ತಾಗಿ ಬಿಡ್ತದಲ್ಲ ಅನ್ನೋ ಬ್ಯಾಸರಾ ಅಂತೂ ಇತ್ತು!   
—–
ಮನಸ್ಸು ಕ್ಷಣಾರ್ಧದಲ್ಲಿ ಹುಬ್ಬಳ್ಳಿಗೆ ಹೋಗಿತ್ತು. ಸುಮಾರು ಹದಿನಾಲ್ಕು ವರ್ಷದ ಹಿಂದಿನ ಮಾತು. ನಾನು ಬೆಂಗಳೂರಿನ್ಯಾಗ ಕೆಲ್ಸ ಹುಡಕಿ ಸುಸ್ತ ಆಗಿ ವಾಪಸ್ಸು ಅಪ್ಪನ ಹತ್ರ ರೊಕ್ಕಾ ಇಸಗೋಳಿಕ್ಕೆ ಅಂತ ಧಾರವಾಡಕ್ಕ ಬಂದಿದ್ದೆ. ಹಂತಾದ್ರಾಗ ಇಲ್ಲೇ ಹುಬ್ಬಳ್ಳ್ಯಾಗ ಒಂದು ಕಡೆ ಸಾಫ್ಟವೇರ್ ಕೆಲ್ಸ ಖಾಲಿ ಅದ ಅಂತ ನನ್ನ ಮಿತ್ರನೊಬ್ಬ ಹೇಳಿ ಕುತುಹಲ ಕೆರಳಿಸಿದ್ದ. ತಾನು ಮಾತ್ರ ಅಷ್ಟು ಹೇಳಿ ಬೆಂಗಳೂರಿಗೆ ಕೆಲ್ಸಾ ಹುಡುಕಲಿಕ್ಕೆ ಹೋಗಿದ್ದ. ನಾನು ಆ ಕಂಪನಿಗೆ ಹೋಗಿ ಇಂಟರ್ವ್ಯೂ ಪಾಸ್ ಆಗಿ ಕೆಲ್ಸಕ್ಕೆ ಸೆರ್ಕೊಂಡಿದ್ದು ಒಂದು ಇತಿಹಾಸ! ಅಲ್ಲೆ ನನಗಿಂತ ಮೊದಲ ಇದ್ದವರೊಳಗ ಆಮ್ಯಾಲೆ ಸಿಕ್ಕಾಪಟ್ಟಿ ದೋಸ್ತ ಆದಂವಾ ಅಂದ್ರ ವಿಟ್ಠಲ. ನಮಿತಾ ಅಂತ ಒಂದು ಹುಡಗಿನೂ ಇದ್ಲು. ಅಕೀನು ಒಳ್ಳೆ ಫ಼್ರೆಂಡ್ ಆದ್ಲು, ಅದ್ರೂ ಕೆಲ್ಸದ ವಿಷಯದಾಗ ಬರೇ ಜಗಳಾ ಮಾಡ್ತಿದ್ಲು. ಅದು ಆ ಮಟ್ಟಿಗಿನ ಜಗಳ. ದ್ವೇಷದ ಜಗಳ ಅಲ್ಲಾ!
ಅದು ಒಂದು ಸಣ್ಣ ಸಾಫ್ಟವೇರ್ ಕಂಪನಿ. ಇದ್ದವ್ರ ನಾಲ್ಕೈದ್ ಮಂದಿ. ನಮಗೊಬ್ಬ್ರು ಬಾಸ್ ಇದ್ರು. ಸಮಸ್ಯೆ ಏನು ಅಂದ್ರ ಅವರ ಮನಿ ಆಫಿಸಿನ ಕೆಳಗ ಇತ್ತು! ಅದಕ್ಕ ಅವ್ರು ಯಾವಾಗ್ಲೂ ಮನ್ಯಾಗ ಇರೌರು … ಅಲ್ಲಲ್ಲಾ ಆಫಿಸ್ ನ್ಯಾಗ ಇರೌರು. ಮನಿಗಿಂತ ಆಫೀಸಿನ್ಯಾಗ ಅವ್ರಿಗೆ ಶಾಂತಿ ಜಾಸ್ತಿ ಇತ್ತು ಅಂತ ನಮಗ ಆಮ್ಯಾಲೆ ಗೊತ್ತಾತು. ಅದು ಏನಪಾ ಅಂದ್ರ ಅವರ ಹೆಂಡತಿ ಸಂಗೀತ ಕಲೀತಿದ್ರು. ಹಿಂಗಾಗಿ ಯಾವಗ್ಲೂ ಅವ್ರು ಮನ್ಯಾಗ ತಮ್ಮ ಸಂಗೀತ ಸಾಧನೆ  ಮಾಡವ್ರು. ನಮ್ಮ ಬಾಸು ಅದ್ನ ತಪ್ಪಿಸಿಗೋಳಲಿಕ್ಕೆ ಆಫಿಸಿನ್ಯಾಗ ಕುತಗೊಂಡು ನಮಗ ತಮ್ಮ ರಾಗದಾಗ ತಮ್ಮ ಸಂಗೀತಾ ಹೇಳತಿದ್ರು! ಅದ್ರೂ ಭಾಳ ತಡಾ ಆತಂದ್ರ ಅವ್ರ್ ಹೆಂಡತಿನ ಮ್ಯಾಲೆ ಆಫಿಸಿಗೆ ಬಂದು ಬಿಡವ್ರು. ನಾವಾಗ ನಿಟ್ಟುಸಿರು ಬಿಡತಿದ್ವಿ. ಯಾಕಂದ್ರ ಬಾಸು ತಮ್ಮ ಮನೀಗೆ ದಯಮಾಡ್ಸಿದ್ರ ನಾವು ಜಾಗಾ ಖಾಲಿ ಮಾಡ್ಬಹುದಿತ್ತು!  
ಹಿಂಗ ಜೀವನಾ ನಡದಿತ್ತು. ಆವಾಗ ನಮ್ಮ ಟೀಮ್ ಲೀಡ್ ಆಗಿ ಬಂದವ್ರು ವಿಜಯ್ ಅವ್ರು. ಅವರು ನಮಗಿಂತ ಹೆಚ್ಚು ಬಲ್ಲವರಾಗಿದ್ರು, ಹಿಂಗಾಗಿ ಅನಿವಾರ್ಯವಾಗಿ ಅವರನ್ನ ನಮ್ಮ ಗುರುಗಳನ್ನಾಗಿ ಮಾಡಿಕೋಬೇಕಾತು. ಅದೂ ಒಂದು ಇತಿಹಾಸ. ಇವ್ರು ಬಂದ ಮ್ಯಾಲೆ ಬಂದವ್ನ ನಮ್ಮ ಪಾರ್ಟಿ ಪ್ರಶಾಂತ. ಅವಗಿಂತಾ ನಾನು ಹೆಚ್ಚು ಬಲ್ಲವನಾಗಿದ್ದೇನಾದ್ದರಿಂದ ಅವನು ಪಾಪಾ ಅನಿವಾರ್ಯವಾಗಿ ನನಗ ಗುರುಗಳ ಸ್ಥಾನಾ ಕೊಟ್ಟು ಮರ್ಯಾದಿ ದಯಪಾಲಿಸ್ದಾ. ಹಿಂಗ ನಮ್ಮ ಗುರು-ಶಿಶ್ಯ ಪರಂಪರೆ ಶುರು ಆತು. ನಾವು ಒಬ್ಬರ್ನೊಬ್ರು ಎಷ್ಟು ಹಚಿಗೊಂಡಬಿಟ್ಟಿದ್ವಿ ಅಂದ್ರ ಅಷ್ಟ ಹಚಿಗೊಂಡಿದ್ವಿ ನೋಡ್ರೀ! ಯಾಕಂದ್ರ ಅವಾಗ ಎಲ್ಲಾರೂ ಬ್ರಹ್ಮಚಾರಿಗಳು. ಯಾರಿಗೂ ಹೇಳವ್ರಿಲ್ಲ ಕೇಳವ್ರಿಲ್ಲ. ಒಟ್ಟಿಗೆ ಊಟಾ ಮಾಡ್ತಿದ್ವಿ, ಗಿರಿಮಿಟ್ಟು ಮಿರ್ಚಿ ತಿಂತಿದ್ವಿ, ಪಿಕ್ನಿಕ್ ಹೋಗ್ತಿದ್ವಿ…. 
ಆದ್ರ ಎರಡ ವರ್ಷ ಹಿಂಗ ಕಳದಾದ ಮ್ಯಾಲೆ ಐ ಟಿ ಇಂಡಸ್ಟ್ರೀ ಮ್ಯಾಲೆ ಸಿಡ್ಲು ಬೀಳಲಿಕ್ಕೆ ಹತ್ತಿ ನಮ್ಮ ಬಾಸು ನಮ್ಮ ಪಗಾರಕ್ಕೂ ಕೈ ಹಚ್ಚಿದಾಗ ಎಲ್ಲಾರೂ ಬ್ಯಾರೆ ಕೆಲ್ಸಾ ಹುಡಿಕ್ಕೊಂಡು ಅತ್ಲಾಗ ಇತ್ಲಾಗ ಆದ್ವಿ. ವಿಟ್ಠಲ ಬೆಂಗಳೂರಿಗೆ ಹೋದ, ನಮೀತಾ ನೂ ಬೆಂಗಳೂರು ಸೇರಿದ್ಲು. ನಾನೂ ಪ್ರಶಾಂತ ಹುಬ್ಳ್ಯಾಗ ಬ್ಯಾರ್ ಬ್ಯಾರೆ ಕಡೆ ಕೆಲ್ಸಕ್ಕ ಸೇರಿದ್ವಿ. ವಿಜಯ್ ಅವ್ರೂ ಹುಬ್ಳ್ಯಾಗ ಇನ್ನೊಂದ್ ಕಡೆ ಸೇರಿ ಆಮ್ಯಾಲೆ ಬೆಂಗಳೂರಿಗೆ ಹೋದ್ರು. ನಾವು ಒಬ್ಬರ್ನೊಬ್ರು ಮಿಸ್ಸ್ ಅಂತೂ ಮಾಡ್ಕೋತಿದ್ವಿ. ಆದ್ರೂ ವಿಧಿ ಮತ್ತ ತನ್ನ ಆಟಾ ತೋರಸ್ತು. ಕಾಲಾಂತರದಾಗ ನಮ್ಮನ್ನ ಎಲ್ಲಾರ್ನೂ ಬೆಂಗಳೂರಿಗೆ ತಂದು ವಗಿತು. ಅದೂ ಅಲ್ದ ಎಲ್ಲಾರೂ ಗ್ರಹಸ್ತಾಶ್ರಮಕ್ಕ ಕಾಲ ಇಟ್ಟಿದ್ವಿ! ನಮ್ಮ ಟೀಮು ಈಗ ದೊಡ್ಡದಾಗಿತ್ತು.
—–
ಈಗ ಎಲ್ಲಾರೂ ಒಂದ ಕಡೆ ಇದ್ದೀವಿ.  ಆದ್ರೂ ಎಲ್ಲಾರೂ ಒಟ್ಟಿಗೆ ಸೇರೂದು ಆಗವಲ್ದು. . . ನಾವು ಭೆಟ್ಟ್ಯಾಗೋದು ಫೇಸ್ ಬುಕ್ನ್ಯಾಗ ಮಾತ್ರ. ಪ್ರೊಫೈಲ್ ವಿಸಿಟ್ ಮಾಡಿದ್ರ ಅವರ ಮನೀಗೆ ಹೋದಂಗ ಆಗಿ ಬಿಟ್ಟದ. ಎಂಥ ವಿಪರ್ಯಾಸ ಅಲ್ಲಾ? ಆದ್ರ ಅದರಿಂದ ಆಗ್ತಿರೋ ಸಮಸ್ಯೆ ಅಂದ್ರ ನನ್ನ ಫೋಟೊ ನೋಡಿಲ್ಲ, ಲೈಕ್ ಮಾಡಿಲ್ಲ, ಕಮೆಂಟ್ ಮಾಡಿಲ್ಲ ಅನ್ನೋ ಕ್ಷುಲ್ಲಕ ರಗಳೆಗಳು. ಅದ ಕಾರಣಕ್ಕ ನಮ್ಮ ಪಾರ್ಟಿ ಪ್ರಶಾಂತ ಮುಂಜ ಮುಂಜಾನೆ ಒಂದು ಪರಿಹಾರ ಹೇಳಿದ್ದು. ಆದ್ರೂ ಒಬ್ಬರಿಗೊಬ್ರು ಮ್ಯಾಲೆ ಸಿಟ್ಟಿಲ್ಲ ಬಿಡ್ರೀ. ಅದು ಬರೀ ಕಾಲೆಳೆಯುವ ಮನಸ್ತಾಪಗಳು ಅಷ್ಟೆ. 
ಇನ್ನ ಒಬ್ಬೊಬ್ರ ಬಗ್ಗೆ ಹೇಳಬೇಕಂದ್ರ, ಒಬ್ಬೊಬ್ರೂ ಒಂದೊಂಥರಾ ಕ್ಯಾರೆಕ್ಟರ್!    ವಿಜಯ್ ನಾ ಮೊದ್ಲ ಹೇಳಿದಂಗ ನಮ್ಮೆಲ್ಲರ ಗುರುಗೋಳು. ಅದ್ರ ಜೊತಿಗೆ ಒಂಥರ ಸೈಂಟಿಷ್ಟು! ಅವರಿಗೆ ತಾಂತ್ರಿಕ ವಿಷಯದಾಗ ಸಿಕ್ಕಾಪಟ್ಟೆ ಆಸಕ್ತಿ ಹಾಗೂ ಹಿಡಿತ. ಒಂದೊಂದ್ ಸರ್ತಿ ಸೈಂಟಿಸ್ಟ ತರಾನ ಆಡೊವ್ರು. ಅವ್ರ ಲಗ್ನಕ್ಕ ನಾನು ಪ್ರಶಾಂತ ಹೋಗಿದ್ವಿ. ನಮ್ಮನ್ನ ಹೆಂಡತಿಗೆ ಪರಿಚಯ ಮಾಡ್ಸೂ ಮುಂದ ನನ್ನ ಮತ್ತ ಪ್ರಶಾಂತನ ಹೆಸ್ರು ಅದ್ಲ ಬದ್ಲ ಮಾಡಿ ಹೇಳಿ ಬಿಟ್ರು! ಆಮ್ಯಾಲೆ ನಾವು ನಮ್ಮ ನಮ್ಮ ಹೆಸರು ಹೇಳ್ಕೋಬೇಕಾತು. 
ವಿಟ್ಠಲ ಒಬ್ಬ ಕಲಾವಿದ ಮತ್ತ ಕಂಪುಟರ್ ಗ್ರಾಫಿಕ್ಸ್ ಪ್ರವೀಣ. ಅಂವನ ಮಾತು ಯಾವಗ್ಲೂ ನೇರ ಮತ್ತ ನಿಷ್ಠುರ (ಹೆಂಡ್ತಿ ಜೋಡಿ ಓಂದ ಬಿಟ್ಟ ಮತ್ತ!). ಅಂವಗ ಅಪ್ಪಿ ತಪ್ಪಿ ನಾನು ಒಂದ ಸಲ ನಾ ನನ್ನ ಕೈಯ್ಯಾರೆ ರಚಿಸಿದ್ದ ಅದ್ಭುತ (ನನ್ನ ಮಟ್ಟಿಗೆ!) ಕಲಾಕೃತಿ ತೋರಿಸಿ ಬಿಟ್ಟೆ ನೋಡ್ರೀ, ಅದಕ್ಕ ಅಂವ "ಗುರು ನೀವು ಚೊಲೊ ಬರೀತಿರಿ ಅದನ್ನ ಬೇಕಂದ್ರ ಮುಂದುವರಸ್ರಿ" ಅಂದ ಬಿಡಬೇಕ! ನಾನ ಕಷ್ಟ ಪಟ್ಟು ತಗದದ್ದ ಪೇಂಟಿಂಗಿಗೆ ಈ ತರದ್ದು ಒಂದು ಪ್ರತಿಕ್ರಿಯೆ ಬಂದ ಮ್ಯಾಲೆ ನಾನು ಬರ್ಯೋದ್ ಜಾಸ್ತಿ ಮಾಡಿದ್ದಂತೂ ಖರೆ. ಚಿತ್ರಾನೂ ತಗೀತಿನಿ ಆದ್ರ ಅಂವಗ ತೋರ್ಸಂಗಿಲ್ಲ ಅಷ್ಟ!
ಮತ್ತ ನಮ್ಮ ಪಾರ್ಟಿ ಪ್ರಶಾಂತನ್ನ ಬಗ್ಗೆ ಹೇಳಬೇಕಂದ್ರ, ಅಂವನ ಸ್ವಭಾವಕ್ಕ ಆ ಹೆಸರು ಹೋದಂಗಿಲ್ಲ. ಅಂವಗ ಜಗಳ ಮಾಡಿಲ್ಲ ಅಂದ್ರ ಸಮಾಧಾನ ಇಲ್ಲ. ಅಂವಾ ಜಗಳಾ ಮಾಡಲಾರದ ವೇಟರ್ ಗಳು ಬೆಂಗಳೂರಿನ್ಯಾಗ ಯಾರೂ ಇಲ್ಲ! ಪ್ಲೇಟು ಸ್ವಚ್ಚ ಇಲ್ಲಾ ಅನ್ನುದರಿಂದ ಹಿಡಕೊಂಡು ಊಟಾ ತರೂದು ತಡ ಆತು ಅನ್ನೂ ತನ್ಕಾ ಅವ್ರ ಜೊತಿ ಕಾಲು ಕೆದರಿ ಜಗಳಾ ತಗದು ಬರ್ತಾನ! ಕಾರ್ ನ್ಯಾಗ ಹೋಂಟಾಗಂತೂ ದಾರಿಗುಂಟ ಬ್ಯಾರೆ ಚಾಲಕರಿಗೆ ಬೈಕೊಂತನ ಗಾಡಿ ಹೋಡಿತಾನ. ಆದ್ರ ಬೈಯ್ಯು ಮುಂದ ಕಾರಿನ ಗ್ಲಾಸ್ ಎರ್ಸಿರ್ತಾನ! ಹಿಂಗಾಗಿ ಇನ್ನೂ ಯಾರೂ ವಾಪಸ್ಸು ಅಂವಗ ಬೈದಿಲ್ಲ. ಯಾಕಂದ್ರ ಇಂವಾ ಬೈದಿದ್ದು ಯಾರಿಗೂ ಕೇಳ್ಸೇ ಇಲ್ಲ! ಹಾಡು ಚೊಲೊ ಹಾಡ್ತಾನ. ಆದ್ರ ಒಮ್ಮೆ ಹಾಡ್ಲಿಕ್ಕೆ ಸುರು ಮಾಡಿದ್ನಂದ್ರ ಮುಗ್ಸಂಗೇ ಇಲ್ಲ. 
ಇನ್ನ ನನ್ನ ಬಗ್ಗೆ ನಾನ ಬರ್ಕೋಳ್ಳೋದು ಸರಿ ಅನ್ಸಂಗಿಲ್ಲ. ಅದಕ್ಕ ನಾನಿಲ್ಲೆ ಸೂತ್ರಧಾರನಾಗೇ ಇರ್ತೀನಿ! ಈ ನಮ್ಮ ಗೆಳೆಯರ ಬಗ್ಗೆ ಬರಿಯೋ ವಿಷಯ ಇನ್ನೂ ಭಾಳ ಅವ. ಎಲ್ಲಾ ಈಗ ಬರದಬಿಟ್ರ ಬೋರಾದೀತು. ಈ ಬರಹಕ್ಕ ಎಷ್ಟು ಲೈಕು, ಕಮೇಂಟು ಬರ್ತಾವ ಅಂತ ನೋಡ್ಕೊಂಡು ಮುಂದ ಬರೀತಿನಿ! ನಾವು ಹೆಂಗ ಇದ್ರೂ ಒಬ್ಬರ ಮ್ಯಾಲೆ ಒಬ್ಬರಿಗೆ ಪ್ರೀತಿ ಅಭಿಮಾನ ಇನ್ನೂ ಇಟಗೊಂಡೀವಿ. ತಿಂಗಳಿಗೊಮ್ಮೆ ಇಲ್ಲಾ ಅಂದ್ರೂ ಆದಾಗಾದಗ ಸಿಗ್ತಿರ್ತೀವಿ. ಹೊಸಾ ಪರಿಸರಕ್ಕ ಹೋದಂಗ ಹೊಸ ಹೊಸ ಗೆಳ್ಯಾರು ನಮ್ಮ ಜೀವನದಾಗ ಬರ್ತಾರ. ಆದ್ರೂ ನಮ್ಮದೊಂದು ಗೆಳೆಯರ ಬಳಗ ಇಷ್ಟು ವರ್ಷ ಇನ್ನೂ ಸಂಪರ್ಕದಾಗ ಇರೋದು ಭಾಳ ಅಪರೂಪ ಅಂತ ನನ್ನ ಅಂಬೋಣ. ನೀವೇನಂತೀರಿ?