Wednesday, March 25, 2015

ಕಾಯಕವೇ ಕೈಲಾಸ

(http://www.panjumagazine.com/?p=10456)

ಅವತ್ತು ಸಂಜೆ ಬೇಗನೆ ಮನೆಗೆ ತಲುಪಿದ ವೆಂಕಣ್ಣನ ಕಿವಿಯಲ್ಲಿ ಜೇಮ್ಸ್ ನ ಮಾತುಗಳು ಗುಂಯ್ ಗುಡುತ್ತಿತ್ತು. ಹೌದೆ? ನಾವೆಲ್ಲ ಅಮೆರಿಕಾಕ್ಕೆ ಬಂದು ಇವರ ಕೆಲಸಗಳನ್ನು ಕಸಿಯುತ್ತಿದ್ದೇವೆಯೇ? ಅನ್ನುವ ಪ್ರಶ್ನೆ ಇವನ ಕಾಡತೊಡಗಿತ್ತು. ಜಾನು ಮತ್ತು ಖುಷಿ ಇನ್ನೂ ಅಮೆರಿಕಾದ ದಿನಗಳಿಗೆ ಹೊಂದಿಕೊಳ್ಳದೆ ದಿನವಿಡಿ ನಿದ್ದೆಯಲ್ಲೇ ಕಳೆದಿದ್ದರು. ಇವನಿಗೂ ನಿದ್ದೆ ಎಳೆಯುತ್ತಿದ್ದರೂ ಬಲವಂತವಾಗಿ ಅದನ್ನು ತಡೆಯುತ್ತಿದ್ದ. ಆಗ ತಾನೇ ಎದ್ದು ಕುಳಿತಿದ್ದ ಖುಷಿಗೆ ಬೇರೆ ಏನೂ ಮಾಡಲು ತೋಚದೆ ಅಲ್ಲಿನ ಟೀವಿಯಲ್ಲಿ ಬರುತ್ತಿದ್ದ ಕಾರ್ಟೂನು ನೋಡುತ್ತಿದ್ದಳು.  ಜಾನು ರಾತ್ರಿಗೆ ಊಟಕ್ಕೆ ಏನು ಮಾಡುವುದೆಂಬ ಗೊಂದಲದಲ್ಲಿದ್ದಳು. ರಾತ್ರಿ ಒಂಬತ್ತಾದರೂ ಇನ್ನೂ ಸೂರ್ಯ ಮುಳುಗಿರಲಿಲ್ಲ.  ಅವರಿಗೆಲ್ಲ  ಅದೊಂದು ವಿಚಿತ್ರವಾದ ವಿದ್ಯಮಾನವಾಗಿತ್ತು. ಭಾರತದಲ್ಲೂ ಹೀಗೆ ಇದ್ದರೆ ಎಷ್ಟು ಚೆನ್ನ ಅಂತ ಜಾನು ಹೇಳುತ್ತಿದ್ದಳು. ವಿದ್ಯುತ್ ಸಮಸ್ಯೆಯಾದರೂ ಬಗೆ ಹರಿಯುತ್ತೆ ಅಲ್ಲವೇ? ಎಂದ ಅವಳ  ಪ್ರಶ್ನೆಗೆ ವೆಂಕಣ್ಣ ನಕ್ಕು ಸುಮ್ಮನಾದ. ಕತ್ತಲಾದ ಮೇಲೆ ಮಲಗುವ ರೂಢಿ ಇಲ್ಲಿಗೆ ಅನ್ವಯವಾಗದೆಂಬ ಸತ್ಯ ಬಹು ಬೇಗನೆ ಗೋಚರಿಸಿತು. ರಾತ್ರಿ ೧೦ ಗಂಟೆಗೆ ಇನ್ನೂ ಸೂರ್ಯಾಸ್ತವೆ ಆಗಿಲ್ಲದಿದ್ದ ಮೇಲೆ ಕತ್ತಲಾಗುವವರೆಗೆ ಕಾಯುವ ತಾಳ್ಮೆ ಯಾರಿಗಿತ್ತು? ವೆಂಕಣ್ಣನ ಪರಿವಾರ ಊಟ ಮಾಡಿ  ಮಲಗಿತ್ತು. 
 
ಸುಜಯ್ ಅವತ್ತು ಉತ್ಸಾಹದಿಂದಲೇ ಕೆಲಸಕ್ಕೆ ಬಂದಿದ್ದ. ಪ್ರತಿ ಸೋಮವಾರ ಕಾಡುತ್ತಿದ್ದ ಬೇಸರಿಕೆ ಇಂದಿರಲಿಲ್ಲ. ಅದಕ್ಕೆ 'ನಿಶಾ'ಗಮನವೇ ಕಾರಣವಲ್ಲದೆ ಬೇರೇನೂ ಇರಲಿಲ್ಲ. ತನ್ನ ಜಾಗದಲ್ಲಿ ಕುಳಿತು laptop ಹೊತ್ತಿಸಿದವನಿಗೆ ಅದರ ಫಲಕದಲ್ಲಿ ನಿಶಾ ಳ  ಮುಖಾರವಿಂದವನ್ನು ಕಂಡಂತಾಗಿ ಬೆಚ್ಚಿ ಬಿದ್ದ. ಅವಳ್ಯಾಕೋ ಇವನನ್ನು ಜಾಸ್ತಿಯೇ ಅನ್ನಿಸುವಷ್ಟು ಆವರಿಸಿಕೊಳ್ಳತೊಡಗಿದ್ದಳು. ಮುಖ ಕೊಡವಿಕೊಂಡು ಅವತ್ತಿನ email ಗಳ ಪರಿಶೀಲಿಸತೊಡಗಿದ.  ವೆಂಕಣ್ಣ ಅಮೆರಿಕಾದ ಪ್ರವಾಸದಲ್ಲಿದ್ದುದರಿಂದ ಅವನ ಅನುಪಸ್ಥಿತಿಯಲ್ಲಿ ಅವನ  ಟೀಮಿನ ಉಸ್ತುವಾರಿಯನ್ನೂ ಇವನೇ ನೋಡಿಕೊಳ್ಳಬೇಕೆಂದು ಇವನ ಬಾಸ್ ಸುಧೀರ್ ಅಪ್ಪಣೆ ಹೊಡಿಸಿದ್ದ. ವೆಂಕಣ್ಣನ ಟೀಮ್ ನಲ್ಲಿ ಇಪ್ಪತ್ತು ಜನರಿದ್ದರು. ತನ್ನ ಟೀಮ್ ನೋಡಿಕೊಳ್ಳುವುದರ ಜೊತೆಗೆ ಇದೊಂದು ಜವಾಬ್ದಾರಿ ಸುಜಯ್ ಗೆ ಭಾರವೆನಿಸಿತ್ತು. ಅದರೂ ಏನೂ ಮಾಡುವ ಹಾಗಿರಲಿಲ್ಲ. 
ಇವನು ತನ್ನ laptop ನಲ್ಲಿ ಮುಳುಗಿದ್ದಾಗಲೇ, ಎದುರಿಗೆ ಪ್ರದೀಪ್ ಬಂದು ನಿಂತಿದ್ದ. ಏನೋ ತುರ್ತಾದ ವಿಷಯ ಮಾತಾಡುವುದಿದೆಯೆಂದು ಹೇಳಿದ. ಪ್ರದೀಪ್ ಒಬ್ಬ ಡೆವೆಲಪರ್. ತಾನು ಏನೋ ಕೆಲಸದಲ್ಲಿದ್ದಾಗಲೇ ಅವನು ಬಂದು ತೊಂದರೆ ಕೊಡುತ್ತಿದ್ದುದು ಇವನಿಗೆ ಕೋಪ ತರಿಸಿತ್ತು. ಈಗ ಆಗೋಲ್ಲ, ಆಮೇಲೆ ಮಾತಾಡೋಣ ಅಂದಿದ್ದಕ್ಕೆ, ಇಲ್ಲ ತುಂಬಾ ಅರ್ಜೆಂಟ್ ಅಂತ ಸೊಟ್ಟ ಮೊರೆ ಹಾಕಿ ನಿಂತನವನು. ಅವನು ಹೋಗುವ ಲಕ್ಷಣ ಕಾಣದಿದ್ದಾಗ ಕೂಡು ಅಂತ ಸನ್ನೆ ಮಾಡಿದ. ಆದರೂ ಬಂದ ಕೂಡಲೇ ಮಾತಾಡಿಸಿದರೆ ಮ್ಯಾನೇಜರ್ ಹುದ್ದೆಯನ್ನು  ಅವಮಾನಿಸಿದಂತೆ ಅಲ್ಲವೇ? ಯಾವುದೋ ಮುಖ್ಯವಾದ ಒಂದು ಕೆಲಸದಲ್ಲಿದ್ದಂತೆ ನಟಿಸಿ ಅವನಿಗೆ ಸ್ವಲ್ಪ ಕಾಯಿಸಿ, ಆಮೇಲೆ  "ಎಸ್?" ಅಂದ. ಪ್ರದೀಪ್ ಈಗ ಕೆಲವು ದಿನಗಳಿಂದ ತನ್ನ ಆರೋಗ್ಯ ಕೆಟ್ಟು ಹೋಗಿದೆ ಎಂದು ಹೇಳಿ, ತನ್ನ ಬೆನ್ನು ನೋವು ತುಂಬಾ ಹೆಚ್ಚಾಗಿದೆಯೆಂತಲೂ, ತನಗೆ ವೈದ್ಯರು ಕೆಲವು ತಿಂಗಳ ಮಟ್ಟಿಗೆ ಆಫೀಸಿಗೆ ಹೋಗಲೇಕೂಡದೆಂಬ ಹುಕುಂ ಮಾಡಿದ್ದಾರೆಂದು ಹೇಳಿದ. ಸುಜಯ್ ಗೆ ನಗು ಬಂದಿತ್ತು. ಯಾಕಂದ್ರೆ ಆಫಿಸಿನಲ್ಲಿ ಅವನು ಮಾಡುತ್ತಿದ್ದ ಕೆಲಸವೂ ಅಷ್ಟಕ್ಕಷ್ಟೇ.

…ಪ್ರದೀಪನ ದಿನಚರಿಯೇ ಹಾಗಿತ್ತು. ಬೆಳಿಗ್ಗೆ ಹನ್ನೊಂದಕ್ಕೆ ಆಫಿಸಿಗೆ ಬಂದು, ತನ್ನ ಚೀಲ, ಊಟದ ಡಬ್ಬಿಗಳನ್ನು ತಾನು ಕುಳಿತುಕೊಳ್ಳುವ ಜಾಗದಲ್ಲಿ ಸ್ಥಾಪಿಸಿ, ಕಂಪ್ಯೂಟರ್ ನ ಹೊತ್ತಿಸುತ್ತಿದ್ದ. ಅದ್ಯಾಕೆ ಅಂದರೆ, ನೋಡಿದವರಿಗೆ ಗೊತ್ತಾಗುವುದು ಬೇಡವೇ ಇವನು ಬಂದ ವಿಷಯ! ಅಷ್ಟು ಮಾಡಿದ ಮೇಲೆ ಚಹಾ ಕುಡಿಯಲು ಅಂತ ಕೆಳಗೆ ಹೋಗುತ್ತಿದ್ದ. ಸೀನು ಮತ್ತು ನಾರಾಯಣ ಅವನ ಜೊತೆಗಾರರು.  ಚಹದ ಜೊತೆಗೆ ಒಂದಿಷ್ಟು ಹರಟೆ. ಅದರಲ್ಲಿ ಇಣುಕುತ್ತಿದ್ದ ವದಂತಿಗಳ ವಿಶ್ಲೇಷಣೆ… ಹೀಗೆ ಎಲ್ಲ ಮುಗಿಸಿ ತನ್ನ ಸ್ವ ಸ್ಥಾನಕ್ಕೆ ಹಿಂತಿರುಗುವುದರೊಳಗೆ ಮಟ ಮಟ ಮದ್ಯಾಹ್ನದ ೧೨ ಗಂಟೆ. ಅವತ್ತಿನ ಕೆಲಸವೇನಿರಬಹುದು ಎಂದು ಪರಿಶೀಲಿಸುವುದರಲ್ಲೇ ಊಟದ ಸಮಯವಾಗಿ ಬಿಡುತ್ತದೆ. ಪಾಪ ಅವನಾದರೂ ಏನು ಮಾಡುವುದು? ಎಲ್ಲಾನೂ ಮಾಡೋದು ಹೊಟ್ಟೆಗಾಗಿಯೇ ಅಲ್ಲವೇ? ಹೊತ್ತಿಗೆ ಸರಿಯಾಗಿ ಇವನ ಸಹಚರರರೂ ಹಾಜರು! ಮತ್ತೆ ಊಟಕ್ಕೆ ಅಂತ ಹೋದವನು ಬಂದು ಒಂದು ಮಟ್ಟಕ್ಕೆ ಕೆಲಸಕ್ಕೆ ಅಂತ ಕೂಡುವುದರೊಳಗೆ 3 ಗಂಟೆ. ಒಂದೆರಡು ತಾಸು ಕೆಲಸ ಮಾಡಿದಂಗೆ ಮಾಡಿ, ಮತ್ತೆ ಚಹಾ ಕುಡಿಯುವುದರೊಳಗೆ ಸಂಜೆಯಾಗಿ, ಮನೆಗೆ ಹೊರಡುವ ತಯ್ಯಾರಿಯೇ! ಅದೂ ಅಲ್ಲದೆ ಅವನು ಒಂದು ವಾರ ಸರಿಯಾಗಿ ಆಫೀಸಿಗೆ ಬಂದನೆಂದರೆ ಮುಂದಿನ ವಾರ  ಎರಡು ದಿನ ರಜಾ ಹಾಕೋದು ನಿಶ್ಚಿತ. ಹೊಟ್ಟೆ ಸರಿಯಿಲ್ಲವೆಂತಲೋ ಕೆಮ್ಮು ಅಂತಲೋ ಏನೋ ಒಂದು ನೆಪ. ಅವನ ರಜೆ ಹಾಕುವ ಬಗೆಯನ್ನು ಅವನ ಕೆಲವು ಕ್ರಮಗಳಿಂದ ಊಹಿಸಿಬಿಡಬಹುದಾಗಿತ್ತು, ಅದು ಎಷ್ಟೋ ಸರ್ತಿ ನಿಜವೂ ಆಗಿರುತ್ತಿತ್ತು. ಉದಾಹರಣೆಗೆ, ಇವತ್ತು ಅವನು ಸ್ವೇಟರ್ ಹಾಕಿಕೊಂಡು ಬಂದನೆಂದರೆ ಮರುದಿನ ಖಂಡಿತವಾಗಿಯೂ ಜ್ವರ ಬರುತ್ತಿತ್ತು! ರಜೆ ಹಾಕೆ ತೀರುತ್ತಿದ್ದ! ಇದನ್ನು ಬಿಟ್ಟರೆ, ಯಾವುದಾದರೂ ತ್ವರಿತವಾಗಿ ಮುಗಿಸುವ ಕೆಲಸವನ್ನು ಕೊಟ್ಟರೂ ಅಷ್ಟೇ, ಅವನ ಹೊಟ್ಟೆ ನೋವು ಹಠಾತ್ ಆಗಿ ಜಾಸ್ತಿಯಾಗಿಬಿಡುತ್ತಿತ್ತು! ಆಗ ಅನಿವಾರ್ಯವಾಗಿ ಸುಜಯ್ ಬೇರೆ ಯಾವನೊ ಪ್ರಾಮಾಣಿಕ ಕೆಲಸಗಾರನಿಗೆ ಈ ಪ್ರದೀಪನ ಕೆಲಸವನ್ನೂ ಹೇರುತ್ತಿದ್ದ. ಆ ಇನ್ನೊಬ್ಬ ಡೆವೆಲಪರ್ ಇವನ ಕೆಲಸ ಮುಗಿಸಿದ ಮೇಲೆ ಪ್ರದೀಪನ ಹೊಟ್ಟೆ ನೋವು ತಂತಾನೇ ಕಡಿಮೆಯಾಗಿ ಮತ್ತೆ ಆಫೀಸಿಗೆ ಬರುತ್ತಿದ್ದ. ಅವನು ಹೀಗೆ ಆರಾಮವಾಗಿ ಇದ್ದುದರಿಂದಲೇ ಈ ಕಂಪನಿಯಲ್ಲಿ ಹತ್ತು ವರ್ಷದಿಂದ ಅಲ್ಲೇ ಕಚ್ಚಿಕೊಂಡಿದ್ದಾನೆ. ಅವನಿಗೆ ಮೇಲ್ವರ್ಗಕ್ಕೆ ಬಡ್ತಿ ಪಡೆಯುವ ಆಸೆಯೂ ಇಲ್ಲ. ಬರುವ ಪುಗಸಟ್ಟೆ ಸಂಬಳ ಬರುತ್ತಿದ್ದರಷ್ಟೇ ಸಾಕು…
 
ಇಂತಹ ಘಟಾನುಘಟಿ ಡೆವೆಲಪರ್ ಎರಡು ಮೂರು ತಿಂಗಳು ಆಫೀಸಿಗೆ ಬರಲಾಗದು ಎಂದು ಹೇಳುತ್ತಿದ್ದರೆ ಸುಜಯ್ ಗೆ ಖುಷಿ ಆಗದೆ ಇದ್ದೀತೆ? ಹೀಗೆ ಅವನ ರಜೆಯನ್ನೇ ನೆಪ ಮಾಡಿಕೊಂಡು ಅವನನ್ನು ಹೊರ ಹಾಕುವ ಸುವರ್ಣ ಅವಕಾಶವೂ ಇವನಿಗೆ ಕಂಡಿತು. ಆದರೂ ಕೆಲಸವನ್ನೇ ಮಾಡದ ಅವನ ಬೆನ್ನಿಗೆ ನೋವಾದರೂ ಬರಲು ಹೇಗೆ ಸಾಧ್ಯ ಅಂತ ಮನದಲ್ಲೇ ಆಶ್ಚರ್ಯಪಟ್ಟ! ರಜೆ ಕೊಡಲು ಕೂಡಲೇ ಒಪ್ಪಿಗೆ ಕೊಟ್ಟ. ಆದರೆ ಅಲ್ಲಿ ರಜೆ ಯಾರು ಕೇಳಿದ್ದು? ಪ್ರದೀಪ, ತಾನು ಹೇಳಿದ್ದು ಹಾಗಲ್ಲ ಅಂದ. ಮತ್ತೆ ಏನು ಅನ್ನುವ ಸುಜಯ್ ನ ಗಂಟು ಮುಖದ ಪ್ರಶ್ನೆಗೆ, ತಾನು ಆಫೀಸಿಗೆ ಬರಲಾಗದು, ಆದರೆ ಮನೆಯಿಂದಲೇ ಕೆಲಸ ಮಾಡುವೆನೆಂದೂ, ಅದಕ್ಕಾದರೆ ವೈದ್ಯರು ಅಡ್ಡಿ ಇಲ್ಲವೆಂದು ಹೇಳಿದ್ದಾರೆಂದೂ ಹೇಳಿ, ಆ ವೈದ್ಯರ ಶಿಫಾರಸ್ಸನ್ನು ಇವನ ಮುಂದಿರಿಸಿ ಕೈ ಕಟ್ಟಿ ಕೂತ! ಕಣ್ಣ ಮುಂದೆ ಇದ್ದುಕೊಂಡೇ ಅವನ ಬಳಿ ಕೆಲಸ ಮಾಡಿಸಲಾಗದಿದ್ದಾಗ, ಮನೆಯಿಂದ ಅವನು ಕೆಲಸ ಮಾಡಬಹುದಾದ ಸಾಧ್ಯತೆಗಳೇ ಇಲ್ಲದಾಗಿತ್ತು. ಅದೂ ಅಲ್ಲದೆ, ಮನೆಯಿಂದ ಕೆಲಸ ಮಾಡಲು ಅವನಿಗೆ laptop ಹಾಗೂ ಅದಕ್ಕೆ ಬೇಕಾಗುವ ಅಂತರ್ಜಾಲದ ವ್ಯವಸ್ಥೆ ಮಾಡಿಸಬೇಕು. ಅದೊಂದು ಖರ್ಚಿನ ವ್ಯವಹಾರವಾಗಿತ್ತಲ್ಲದೆ ಅನವಶ್ಯಕವೂ ಆಗಿತ್ತು. ಆದರೂ ಯೋಚನೆ ಮಾಡಿ ಹೇಳುತ್ತೇನೆಂದು ಅವನ ಸಾಗ ಹಾಕಿದ. 
ಅವನ ಬೀಳ್ಕೊಟ್ಟು ಮತ್ತೆ laptop ನ ಪರದೆಯಲ್ಲಿ ಮುಳುಗಿದವನಿಗೆ ಘಂ ಅನ್ನುವ ಪರಿಮಳ ಹೊಡಿದೆಬ್ಬಿಸಿತು. ಕತ್ತೆತ್ತಿ ನೋಡಿದವನ ಎದುರು ನಿಶಾ ನಿಂತಿದ್ದಳು! ಅವಳಲ್ಲೊಂದು ಮುಗುಳ್ನಗುವಿತ್ತು. "ಹಾಯ್" ಅನ್ನುತ್ತ ಕೈ ಕುಲುಕಿದಳವಳು… ಜೊತೆಗೆ ಇವನ ಮನವನ್ನೂ ಕಲುಕಿದಳು. ಯಾರ ಸಾಂಗತ್ಯಕ್ಕೆ ಹಾತೊರೆಯುತ್ತಿದ್ದನೋ, ಅವಳೇ ಬಂದು ದರ್ಶನ ಕೊಟ್ಟರೆ ಎಷ್ಟು ಖುಷಿಯಾಗಬೇಡಾ? ಅವಳು ಇವನನ್ನು  ಊಟಕ್ಕೆ ಕರೆಯಲು ಬಂದಿದ್ದಳು. ಅವನು ಇದ್ದ ಬದ್ದ ಕೆಲಸವ ಮುಂದೂಡಿ ಅವಳ ಹಿಂಬಾಲಿಸಿದ! ತುಂಬಾ ಬ್ಯುಸಿ ಇದ್ದೆನೆಂದು ಕೆಲವೇ ನಿಮಿಷಗಳಿಗೆ ಮೊದಲು ತನ್ನೊಂದಿಗೆ ಮಾತಾಡಲು ನಿರಾಕರಿಸಿದ್ದ ತನ್ನ ಮ್ಯಾನೇಜರ್ ನಿಶಾಳ ಜೊತೆ ಹೊರಟಿದ್ದು ಕಂಡ ಪ್ರದೀಪ್ ತನ್ನ ಪಕ್ಕವೇ ಕೂತಿದ್ದ ಸೀನು ನನ್ನು ನೋಡಿ ಕಣ್ಣು ಮಿಟುಕಿಸಿ ನಕ್ಕ…

Saturday, March 14, 2015

ಅವನ ಹೆಸರೇ ಜೇಮ್ಸ್

(http://www.panjumagazine.com/?p=10216)

ಅಂತೂ ಅಮೆರಿಕಾದಲ್ಲಿ ಬೆಳಗಾಗಿತ್ತು! ಜಾನು ಆ ಸುಸಜ್ಜಿತವಾದ ಫ್ಲಾಟ್ ನ ಒಂದು ಸುತ್ತು ತಿರುಗಿ ಎಲ್ಲವನ್ನೂ  ಪರೀಕ್ಷಿಸುತ್ತಿದ್ದಳು. ಬಟ್ಟೆ ಒಗೆದು, ಒಣಗಿಸುವ ಯಂತ್ರವಿದ್ದದ್ದು  ಅಷ್ಟು ವಿಶೇಷವೆನಿಸದಿದ್ದರೂ  ಪಾತ್ರೆ ತೊಳೆಯುವ ಯಂತ್ರ ಗಮನ ಸೆಳೆಯಿತು. ಸಧ್ಯ ಕೆಲಸದವಳನ್ನು ಕಾಯುವ, ಓಲೈಸುವ ಚಿಂತೆಯಿಲ್ಲವೆನ್ನುವ ಸಮಾಧಾನ ಅವಳಿಗೆ. ಅಡಿಗೆ ಮನೆಯಲ್ಲಿ ಓವನ್, ಹೀಟರ್, ಇಂಡಕ್ಶನ್ ಓಲೆಗಳ ಜೊತೆಗೆ ಸೌಟು, ಪಾತ್ರೆ ಪಗಡಗಳೆಲ್ಲವೂ  ಇದ್ದದ್ದು ಖುಷಿಯಾಯ್ತಾದರೂ ಅಲ್ಲೆಲ್ಲೂ ಲಟ್ಟಣಿಗೆ ಕಾಣದೇ ಅವಳು ಚಿಂತೆಗೊಳಗಾದಳು. ಆಗಲೇ ಸ್ನಾನ ಮುಗಿಸಿ ಬಂದಿದ್ದ ವೆಂಕಣ್ಣ ಇವಳ ಮುಖಭಾವವನ್ನು ಗಮನಿಸಿ, ಲಟ್ಟಣಿಗೆಯ ಸುದ್ದಿ ಕೇಳಿ ಬಿದ್ದು ಬಿದ್ದು ನಕ್ಕ. 
"ನನ್ನ ತಲಿಗೆ ಹೊಡಿಲಿಕ್ಕೆ ಇಲ್ಲೇ ಬೇಕಂದ್ರ ಬ್ಯಾರೆ ಏನರೆ ಕೊಡಸ್ತೀನಿ, ಲಟ್ಟಣಿಗೆ ಇಲ್ಲ ಅಂತ ತಲಿ ಕೆಡಿಸ್ಕೊಬ್ಯಾಡ" ಅಂದದ್ದಕ್ಕೆ…
"ನಿಮ್ಮ ತಲಿ! ಚಪಾತಿ ಹೆಂಗ ಲಟ್ಟಸೋದು ಅಂತ ನನಗ ಚಿಂತಿ ಇದ್ರ ನಿಮಗ ನಿಮ್ಮ ತಲಿ ಚಿಂತಿ.."
"ಅಲ್ಲಲೇ ಇಲ್ಲೇ ಯಾರೂ ಚಪಾತಿ ಮಾಡಂಗಿಲ್ಲ ಅದಕ್ಕ ಅವ್ರ ಅಡಿಗಿ ಮನ್ಯಾಗ ಅದು ಇರಂಗಿಲ್ಲ ತಿಳ್ಕೋ. ಇದ ನೋಡು ಬ್ಯಾಡ ಅನ್ನೋದು. ಇರೋದು ಬಿಟ್ಟು ಇರಲಾರದ್ದರ ಬಗ್ಗೆ ತಲಿ ಕೆಡ್ಸಕೊಬಾರ್ದೂ" ಅಂತ ದೊಡ್ಡ ತತ್ವಜ್ಞಾನವ ಅರುಹಿ…ಹಾಗೆ ಮುಂದುವರಿದು "ಅಮೆರಿಕಾದಾಗ ಇದ್ದಾಗ ಇಲ್ಲಿ ಎಲ್ಲಾರೂ ಇರೂ ಹಂಗ ನಾವ್ ಇರ್ಬೇಕು. ಒಂದ ತಿಂಗಳ ಚಪಾತಿ ತಿಂದಿಲ್ಲ ಅಂದ್ರ ಏನ್ ಧಾಡಿ ಆಗಂಗಿಲ್ಲ" ಅಂತ ಖಡಾ ಖಂಡಿತವಾಗಿ ತನ್ನ ವಿಚಾರ ಧಾರೆ ತಿಳಿಸಿದ.
"ಹಂಗಂದ್ರ ಇಲ್ಲಿಯವರ ಹಂಗ ನಾವೂ ಹಂದಿ, ದನಾ ತಿನ್ಬೇಕು ಅಂತೀರೇನು?" ಅಂದು ವೆಂಕಣ್ಣನ ಬಾಯಿಗೆ ಬೀಗ ಹಾಕಿದಳು. ಅವನು ತೆಪ್ಪಗೆ ಅಂಗಿ ಚಣ್ಣ ಹಾಕಿಕೊಂಡು ಆಫಿಸಿಗೆ ತೆರಳಿದ.          
*****
ವೆಂಕಣ್ಣ ಆಫೀಸಿಗೆ ದರ್ಶನ ನೀಡಿದಾಗ ಇವನ ಕ್ಲೈಂಟ್ ಜೇಮ್ಸ್ ತನ್ನ ಚೇಂಬರ್ ನಲ್ಲಿ ಕೂತು ಏನೋ ಜಗಿಯುತ್ತಿದ್ದ. ತನ್ನ ಮಾಮೂಲಿ ಅಮೆರಿಕಾದ ಶೈಲಿಯಲ್ಲಿ ಇವನ ಬರಮಾಡಿಕೊಂಡು ಕೈ ಕುಲುಕಿ ಇಲ್ಲದ ಸಂಭ್ರಮವನ್ನು ತೋರಿಸಿದ! ಉಭಯ ಕುಶಲೋಪರಿಗಳಾದವು. ಮೊದಲನೇ ದಿನವೇ ಕೆಲಸದ ಬಗ್ಗೆ ಮಾತಾಡುವುದು ವೆಂಕಣ್ಣನಿಗೂ ಬೇಡವಾಗಿತ್ತು. ಹಾಗೆ ತವಡು ಕುಟ್ಟುತ್ತ ಅವನ ಹವ್ಯಾಸಗಳ ಬಗ್ಗೆ ಕೇಳತೊಡಗಿದ. ಜೇಮ್ಸ್ ಸಾಹಸ ಪ್ರವೃತ್ತಿಯವನಾಗಿದ್ದು ಅವನ ಮಾತುಗಳಿಂದ ಸ್ಪಷ್ಟವಾಯ್ತು. ತನ್ನ ಸಾಹಸಗಾಥೆಯನ್ನು ಮುಂದುವರಿಸುತ್ತಾ…      
"ನಾನವಾಗ ಸುಮಾರು ಹದಿನಾರು ವಯಸ್ಸಿನ ಹುಡುಗ" ಅಂತ ಹೇಳುತ್ತಾ ತನ್ನ ನೀಳವಾದ, ಚಿನ್ನದ ಎಳೆಗಳಂತಿದ್ದ ಕೂದಲನ್ನು ಕೈಯಿಂದ ಸರಿಮಾಡಿಕೊಳ್ಳುತ್ತ ಹೇಳಿದ. ಸೂರನ್ನು ಎವೆಯಿಕ್ಕದೆ ದೃಷ್ಟಿಸುತ್ತಿದ್ದ ಅವನ ನೀಲಿ ಕಣ್ಣುಗಳು ತನ್ನದೇ ಭೂತಕಾಲದ ಸಿನಿಮಾ ನೋಡುತ್ತಿದ್ದದ್ದು ಸ್ಪಷ್ಟವಾಗಿತ್ತು. ಮುಂದುವರಿಸಿದ…
"… ನಾನವತ್ತು ಡರ್ಟ್ ಬೈಕಿಂಗ್ ಮಾಡೊಕೆ ಹೋಗಿದ್ದೆ. ಇಲ್ಲೆ ಹತ್ತಿರದ ಮರುಭೂಮಿಯದು. ಬೆಟ್ಟವೇರಿ ಮೇಲೆ ಹೋಗಿದ್ದವನಿಗೆ, ಕೆಳಗಿಳಿಯುವಾಗ ಇನ್ನೂ ಜೋರಾಗಿ ಇಳಿಯುವ ಉಮೇದಿ. ಆ ಉಮೇದಿಯಲ್ಲಿ ನನ್ನ ಬೈಕಿನ ಗಾಲಿಗೆ ತೊಡರಿದ ಆ ಕಲ್ಲು ನನಗೆ ಕಂಡೆ ಇಲ್ಲ. ಉರುಳುರುಳಿ ಬಿದ್ದೆ. ನನ್ನ ಹೆಲ್ಮೇಟು ತುಂಡು ತುಂಡಾಗಿತ್ತು. ಅದರ ಜೊತೆಗೆ ನನ್ನ ಕೆಳ ದವಡೆಯ ಹಲ್ಲುಗಳೂ ಕೂಡ. ನಾನು ಬದುಕಿದ್ದೆ ಒಂದು ಪವಾಡ" ಅಂತ ಹೇಳಿಕೊಂಡು ಗಹಗಹಿಸಿ ನಗುತ್ತಿದ್ದ. ಡರ್ಟ್ ಬೈಕಿಂಗ್ ಅಂದ್ರೆ  ಕುರುಚಲು ಗಿಡಗಳು ಬೆಳೆದ ಮರುಭೂಮಿಯಂತಹ, ಏರಿಳಿತದ ವಿಶಾಲ ಭೂಮಿಯಲ್ಲಿ, ಕುರ್ರೋ ಮರ್ರೋ ಎಂದು ಕೂಗುವ ಬಗೆ ಬಗೆಯ ಬೈಕುಗಳನ್ನು ಓಡಿಸುವುದು ಅಂತ ವೆಂಕಣ್ಣನಿಗೆ ಮೊದಲೇ ಗೊತ್ತಿತ್ತು. ಅದರ ಬಗ್ಗೆ ಮತ್ತೆ ಏನಾದರೂ ಹೇಳಲು ಶುರು ಮಾಡಬಹುದೆಂದು, ಮಾತು ಬದಲಿಸುವ ಪ್ರಯತ್ನದಲ್ಲಿ…
"ನಿನಗೆ ವಯಸ್ಸೆಷ್ಟು ಜೇಮ್ಸ್?" ಅರವತ್ತಾದ್ರೂ ಆಗಿರಲೇಬೇಕು ಅನ್ನುವ ಕುತುಹಲದಿಂದ ಕೇಳಿದ.
ಅವನು "ಐವತ್ಮೂರು" ಅಂದದ್ದು ಕೇಳಿ ಆಶ್ಚರ್ಯಪಟ್ಟು ಅರೇ ಇವನೆಷ್ಟು ವಯಸ್ಸಾದವ್ನ ಥರ ಕಾಣ್ತಾನೆ! ಇಲ್ಲಿ ಬೆಳವಣಿಗೆ ತುಂಬಾ ಜಾಸ್ತಿ. ಅದಕ್ಕೆ ನಮಗಿಂತ ಒಂದ್ ಹತ್ತು ವರ್ಷ ಜಾಸ್ತಿನೇ ಕಾಣ್ತಾರೇನೋ ಅಂದುಕೊಂಡ ಇವನು.  
"ಎಷ್ಟು ಮಕ್ಳು?"
"ನನಗೆ ಇಬ್ಬರು ಹೆಂಡತಿಯರು. ಒಟ್ಟು ನಾಲ್ಕು ಮಕ್ಕಳು. ಇಬ್ಬರು ಹೆಣ್ಣು ಮಕ್ಳು. ಒಬ್ಬಳದು ಮದುವೆ ಆಗಿದೆ. ಅವಳು ತನ್ನ ಗಂಡನ ಜೊತೆಗೆ ನನ್ನ ಮನೆಯಲ್ಲೇ ಇರ್ತಾಳೆ"
ಓಹ್ ಇಲ್ಲೂ ಮನೆ ಅಳಿಯ ಸಂಸ್ಕೃತಿ ಇದೆಯಾ? ಇವನಿಗೆ ಆಶ್ಚರ್ಯವಾಗಿತ್ತು.
"… ಇನ್ನೊಬ್ಳು ಮಗಳಿಗೆ ಇಪ್ಪತ್ತು ವರ್ಷ ವಯಸ್ಸು. ಅವಳಿಗಿನ್ನೂ ಮದುವೆಯಾಗಿಲ್ಲ. ಅವಳು ಬೇರೆ ಮನೆ ಮಾಡಿಕೊಂಡಿದ್ದಾಳೆ"
ವಾಹ್! ಇದೇ ಅಲ್ವೆ ನಮಗೂ ಇವರಿಗೂ ಇರುವ ವ್ಯತ್ಯಾಸ! ಮದುವೆಯಾಗದ ಹೆಣ್ಣು ಮಗಳು ಭಾರತದಲ್ಲಿ ಅಪ್ಪನ ಮನೆಯಲ್ಲಿರುತ್ತಾಳೆ, ಇಲ್ಲಿ ನೋಡಿದರೆ ಇವನ ಅವಿವಾಹಿತ ಮಗಳು ಬೇರೆ ಮನೆ ಮಾಡಿಕೊಂಡಿದ್ದಾಳೆ. ನಾವು ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳಿಸುತ್ತೇವೆ, ಆದರೆ ಇಲ್ಲಿ ಮದುವೆಯಾದವಳು ಗಂಡನ ಜೊತೆಯಲ್ಲೇ ತನ್ನ ಅಪ್ಪನ ಮನೆಯಲ್ಲಿದ್ದಾಳಂತೆ! ಇಲ್ಲಿಯ ಸಂಸ್ಕೃತಿ ತುಂಬಾ ಆಸಕ್ತಿದಾಯಕವಾಗಿದೆ ಅನಿಸಿತವನಿಗೆ. 
"…ಇಬ್ರು ಗಂಡು ಮಕ್ಕಳು ಇದ್ದಾರೆ. ಇನ್ನೂ ಕಲೀತಿದಾರೆ."
"ನಿನಗೆಷ್ಟು ಮಕ್ಕಳು?" ಜೇಮ್ಸ್ ಇವನಿಗೆ ಕೇಳಿದ. ಇವನು ತುಂಬಾ ಕೀಳರಿಮೆಯಲ್ಲಿದ್ದ! ಅವನ ಸಾಧನೆ ಮುಂದೆ ತಂದೇನೂ ಅಲ್ಲ ಅನಿಸಿತ್ತು.
"ಒಬ್ಳೇ ಹೆಂಡ್ತಿ, ಒಬ್ಳೆ ಮಗಳು" ಅಂದ. ಅವನು ನಕ್ಕು ಸುಮ್ಮನಾದ.
"ನನಗೆ ಓಡೋದು ಅಂದ್ರೆ ತುಂಬಾ ಇಷ್ಟ. ಒಂದು ಟೈಮಿನಲ್ಲಿ, ದಿನಕ್ಕೆ ೧೦ ಮೈಲಿ ಓಡುತ್ತಿದ್ದೆ." ೧೦ ಮೈಲಿಯಂದ್ರೆ ಹೆಚ್ಚು ಕಡಿಮೆ ೧೬ ಕಿಲೋಮೀಟರ್! ಇವನು ಸುಮ್ನೆ ರೈಲು ಬಿಡ್ತಿರಬಹುದೆ ಅನಿಸ್ತು ಇವನಿಗೆ. 
"…. ಸೈಕಲ್ಲು ಓಡಸ್ತಿದ್ದೆ. ಒಂದು ಸಲ ನಾನು ಏಷ್ಟು ವೇಗವಾಗಿ ಓಡಿಸ್ತಿದ್ದೆ ಅಂದ್ರೆ. ಆ ರಸ್ತೆಯ ವೇಗ ಮಿತಿಯನ್ನು ಮೀರಿದ್ದೆ. ಪೋಲಿಸ್ ನನ್ನ ಹಿಡಿದು ಎಚ್ಚರಿಕೆ ಕೊಟ್ಟಿದ್ದ. ಸ್ವಲ್ಪ ದಿನ ನಾನು ಕುದುರೆ ಓಡ್ಸೋ ಟ್ರೇನಿಂಗೂ ಕೊಡ್ತಿದ್ದೆ."  
ಹಾಗೆ ಹೇಳುತ್ತಾ ತನ್ನ ಎರಡೂ ಕಾಲುಗಳನ್ನು ತನ್ನ ಡೆಸ್ಕಿನ ಮೇಲೆ ಅನಾಮತ್ತಾಗಿಟ್ಟ. ದುರಾದೃಷ್ಟಕ್ಕೆ ಅವನೆದುರೇ ಇವನು ಕುಂತಿದ್ದನಲ್ಲ! ಅವನ ಕಾಲುಗಳು ಹೆಚ್ಚು ಕಡಿಮೆ ಇವನ ಮುಂದೇಯೇ ಇದ್ದವು! ಅವರಿಗದು ಮಾಮೂಲಿ, ಆದರೆ ಇವನಿಗೆ ಅದು ಸರಿ ಹೋಗಬೇಕಲ್ಲ!
ಇವನು ಪಕ್ಕದಲ್ಲಿದ್ದ ಅವನ ಪುಸ್ತಕದ ಶೆಲ್ಫ್ ನೋಡುವ ನೆಪದಲ್ಲಿ ಎದ್ದು ಅಲ್ಲಿಗೆ ಹೋದ. 
 "ಇದೆಲ್ಲಾ ನಿನ್ನ ಪುಸ್ತಕಗಳೆ?" ಅಂದ. ಅವನೂ ಎದ್ದು ಬಂದು ತನ್ನ ಒಂದೊಂದೆ ಪುಸ್ತಕಗಳ ಬಗ್ಗೆ ತುಂಬಾ ಅಸ್ಥೆಯಿಂದ ಹೇಳತೊಡಗಿದ. ಇವನೂ ಕುತೂಹಲದಿಂದ ಕೇಳುತ್ತಿದ್ದ. ಅವನು ತುಂಬಾ ಓದುತ್ತಾನೆ ಅನಿಸಿತು. ಅವನಿಗೆ ಹೆಚ್ಚು ಕಡಿಮೆ ೨೫ ವರ್ಷಗಳ ಅನುಭವವಿದೆಯಂತೆ. ಅವನಾಗಲೇ ಡೈರೆಕ್ಟರ್ ಆದರೂ ತಾಂತ್ರಿಕ ವಿಷಯಗಳ ಬಗ್ಗೆ ತುಂಬಾ ಆಸಕ್ತಿ. ಅವನು ಇನ್ನೂ software engineer ತರಹ coding ಮಾಡುತ್ತಾನೆ. 
"ನೀನು ಡೈರೆಕ್ಟರ್ ಆಗಿದ್ದರೂ ಇನ್ನೂ coding ಮಾಡುತ್ತೀಯಲ್ಲ, ಮೆಚ್ಚಬೇಕು ಬಿಡು ನಿನ್ನ" ಅಂದ. ಅವನು ಮುಗುಳ್ನಕ್ಕ. ಇವನು ಮುಂದುವರೆಸಿ "ನಮ್ಮಲಾದರೆ ಟೀಮ್ ಲೀಡ್ ಆದ್ರೆನೇ ಸಾಕು ಕೋಡಿಂಗ್ ಬಿಟ್ಟು ಬಿಡ್ತೀವಿ. ಆಮೇಲೆಲ್ಲಾ ಬರಿ ಮ್ಯಾನೇಜ್ ಮೆಂಟ್. ಇದಕ್ಕೆಲ್ಲಾ ಹೇಗೆ  ಉತ್ಸಾಹ ಬರುತ್ತೆ ನಿಮಗೆ ಅಂತ?" ವೆಂಕಣ್ಣ ಸ್ವಲ್ಪ ಘಮಿಂಡಿಯಿಂದಲೇ ಹೇಳಿದನೇನೊ. ಅವನು ಮತ್ತೆ ನಕ್ಕ. "ಅದು ನನಗೆ ಇಷ್ಟ ಅದಕ್ಕೇ ಮಾಡ್ತೀನಿ. ಬಹುಷಃ ಇಲ್ಲಿ ಜನರನ್ನ ಮ್ಯಾನೇಜ್ ಮಾಡೋದಕ್ಕೆ ಅಷ್ಟೆಲ್ಲ ಪ್ರಯಾಸ ಪಡಬೇಕಿಲ್ಲ. ಅದಕ್ಕೆ ನಮ್ಮ ಸಮಯವೆಲ್ಲ ಪ್ರೊಡಕ್ಟಿವ್ ಆಗಿ ಕೋಡಿಂಗ್ ಮಾಡ್ತೀವಿ" ಅಂದು ಇವನಿಗೆ ಸಿಟ್ಟು ಬರಿಸಿದ.
ಎಷ್ಟೊಂದು ಕೊಬ್ಬು ನನ್ ಮಗನಿಗೆ. ಅಂದ್ರೆ ಭಾರತೀಯರನ್ನು ಮ್ಯಾನೇಜ್ ಮಾಡೊದು ಕಷ್ಟ ಹಾಗೂ ನಾವು ಮ್ಯಾನೇಜ್ ಮಾಡೋದು ಪ್ರೊಡಕ್ಟಿವ್ ಅಲ್ಲ ಅಂತ ಇವನರ್ಥ. ವೆಂಕಣ್ಣನಿಗೆ  ಅವನ ಮೇಲೆ ಸಿಟ್ಟು ಬಂತು.  
ಅವನಿಗೆ ಇವನ ಕೋಪ ಗೊತ್ತಾಯಿತೇನೊ! ಮಾತು ಬದಲಿಸಲು ಕೇಳಿದ ಅನ್ಸುತ್ತೆ. "ನೀನು ಅಮೇರಿಕಾಗೆ ಬರ್ತಿರೋದು ಮೊದಲ ಸಲವೆ?" ಅಂದವನ ಕಣ್ಣಲ್ಲಿ ಕುತೂಹಲಕ್ಕಿಂತ ಅಸಡ್ಡೆ ಇತ್ತು ಅಂತ ಇವನಿಗನ್ನಿಸಿತು. ಇವನೂ ಅಷ್ಟೇ ಅಸಡ್ಢೆಯಿಂದ  "ಇಲ್ಲ, ಇದು ಎರಡನೇ ಬಾರಿ" ಅಂದು, ಕಿಟಕಿಯಿಂದ ಹೊರಗೆ ನೋಡಿದ. ಅಲ್ಲಿಂದ ಹೊರಗೆ ಕಾರ್ ಪಾರ್ಕಿಂಗ್ ಕಾಣುತ್ತಿತ್ತು. ಅಲ್ಲಿಬ್ಬರು ಇವನ ಹಾಗೆಯೇ ಕೆಲಸದ ಮೇಲೋ, ಟ್ರೇನಿಂಗ್ ಸಲುವಾಗಿಯೋ ಅಮೇರಿಕೆಗೆ ಬಂದಿದ್ದ ಭಾರತೀಯರು ಕಂಡರು. ಇವನು ಗಮನಿಸುತ್ತಿದ್ದನ್ನು ಅವನೂ ನೋಡುತ್ತಲೇ ಖಿನ್ನಮನಸ್ಕನಾದಂತೆ ಕಂಡ.  
"ನೀವೆಲ್ಲ ಇಲ್ಲಿಗೆ ಬಂದು ನಮ್ಮ ಕೆಲಸ ಕಸಿಯುತ್ತಿದ್ದೀರಾ!" ಅಂದವನ ಮುಖದಲ್ಲಿ ಒಂದು ಶುಷ್ಕ ನಗು ಇದ್ದುದನ್ನು ವೆಂಕಣ್ಣ ಗಮನಿಸಿದ…

(ಮುಂದುವರಿಯುವುದು)