Friday, May 23, 2014

ಜಾಣ ಮರೆವು!

"ರೀ... ನಾಳೆ ಏನು ಡೇಟು?"
"ಹಮ್ .... ಮೇ ಹದಿನಾರು... ಯಾಕ?"
"ನಾಳೆ ದಿನ ಒಂದು ಐತಿಹಾಸಿಕ ದಿನಾ! ನೆನಪದ ಅಂತ ಅಂದ್ಕೊಂಡೀನಿ!"
"ಓಹೊ! ಎಲೆಕ್ಶನ್ ಕೌಂಟಿಂಗು! ಅದ್ಯಾವ್ ಮಹಾ ಐತಿಹಾಸಿಕ ದಿನ ಮಾರಾಯ್ತಿ? ಎಲೆಕ್ಶನ್ ಆಗ್ತಾವ ಹೋಗ್ತಾವ. ನಮ್ಮ ಪರಿಸ್ಥಿತಿ ಮಾತ್ರ ಬದಲಾಗಂಗಿಲ್ಲಾ"
"ಅಯ್ಯೋ... ನಾ ಹೇಳಿದ್ದು ಅದಲ್ಲಾ!! "
"ಮತ್ತ? ಓ ಗೊತ್ತಾತು!"
"??!!??"
"ನಾಳೆ ಶುಕ್ರವಾರ! ಹೊಸ ಕನ್ನಡಾ ಪಿಚ್ಚರ್ ರಿಲೀಸ್ ಆಗ್ತಿರಬೇಕು ಅಲ್ಲಾ? ಆದರ ಇತಿಹಾಸ ನಿರ್ಮಾಣ ಮಾಡೊ ಅಂಥಾ ಸಿನಿಮಾ ಯಾವ್ದು ಅಂತ ನೆನಪಿಗೆ ಬರವಲ್ದು ನೋಡು"
"ನನ್ನ ಕರ್ಮಾ!"
"ಏ ಭಾರಿ ಹೆಸರು ಇಟ್ಟಾರ್ ಬಿಡು ಸಿನಿಮಾಕ್ಕ! ಭಟ್ಟರ್ ದ ಇರ್ಬೇಕು. ಆದ್ರೂ ಭಟ್ರು ಭಾರಿ ಟ್ಯಾಲೆಂಟು ನೋಡು. ಯಾರ್ ಅದಕ್ಕ ಹೀರೊಯಿನ್ನು?"
"ಸಿನಿಮಾದಾಗ ಬರೇ ಹೀರೋಯಿನ್ ಅಷ್ಟ ಇರಂಗಿಲ್ಲ. ಹೀರೋನೂ ಇರ್ತಾನ! ನಿಮ್ಮ ಭಟ್ರನ್ನ ಕೇಳ್ರಿ!!"
"ಅಷ್ಟ್ಯಾಕ ಸಿಟ್ಟಿಗೆ ಏಳ್ತಿ? ನಾಳೆ ಏನು ಅಂತ ಹೇಳಿಬಿಡು, ನನಗಂತೂ ಗೊತ್ತಾಗವಲ್ದು"
"ಹತ್ತು ವರ್ಷದ ಹಿಂದ, ಹೊಗ್ಲೀ ಪಾಪಾ ಅಂತ ನಿಮ್ಮ ಕೈ ಹಿಡದಿದ್ದೆ. ನೆನಪಾತೇನು ಈಗರೆ?"
"!! ಏ ಹೌದಲ್ಲಲೇ! ಆ ಘಟನೆ ಮರಿಲಿಕ್ಕೆ ಹೆಂಗ ಸಾಧ್ಯ ಮಾರಾಯ್ತಿ. ಪ್ರತಿ ದಿನ ನೆನಪ ಮಾಡ್ಕೋತೀನಿ. ಆದ್ರ ಯಾಕೋ ೧೬ ನೆ ಮೇ ದಿವ್ಸ ಮತ್ತ ಅದರ ಹಿಂದಿನ್ ದಿವ್ಸ ಒಂದ ನೆನಪಾಗಂಗಿಲ್ಲ ನೋಡು!...."
(ಇಷ್ಟು ಹೇಳಿದ ಮ್ಯಲೆ ಏನ ನಡೀತು ಅನ್ನೋದು ನಿಮ್ಮ ನಿಮ್ಮ ಊಹೆಗೆ ಬಿಟ್ಟದ್ದು! :))

(ನನ್ನ ವಿವಾಹದ ಹತ್ತನೆಯ ವಾರ್ಷಿಕೋತ್ಸವದ (೧೬ ಮೇ, ೨೦೧೪) ಸಂದರ್ಭದಲ್ಲಿ ಬರೆದದ್ದು)

Tuesday, May 13, 2014

ಹೀಗೊಂದು ಗೆಳೆಯರ ಬಳಗ!

ಈ ಲಲಿತ ಪ್ರಬಂಧ ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ....

http://www.panjumagazine.com/?p=7237

---------------------------------------------------------
 
ಮುಂಜ ಮುಂಜಾನೆ ಒಳ್ಳೆ ಸಕ್ಕರಿ ನಿದ್ದಿಯೊಳಗ ಕನಸ ಕಾಣ್ಲಿಕತ್ತಾಗ  ನನ್ನ ಫೋನು ಒದರಲಿಕ್ಕೆ ಶುರು ಹಚ್ಚಿಗೊಂಡು ನನಗ ಒದ್ದು ಎಬ್ಬಿಸ್ತು. ಹೊತ್ತಿಲ್ದ ಹೊತ್ತ್ನ್ಯಗ ಫೋನ್ ಮಾಡಾಂವ್ ಅಂದ್ರ ಪ್ರಶಾಂತ ನ್ನ ಬಿಟ್ಟು ಬ್ಯಾರೆ ಯಾರೂ ಇರ್ಲಿಕ್ಕೆ ಸಾಧ್ಯ ಇಲ್ಲ ಅಂತ ಕನಸಿನ್ಯಾಗನ ಡಿಸೈಡ್ ಮಾಡಿ ಎದ್ದು ನೋಡಿದ್ರ, ಅದು ಅವಂದ ಫೋನು!
"ಹೇಳಪಾ…" ಅಂದದ್ದಕ್ಕ, "ಯಾಕ್ರೀ ಸರ್ರ್ ಇನ್ನೂ ಮಲಗಿದ್ರೇನು" ಅಂತ ಹೇಳಿ ನಿದ್ದಿ ಕೆಟ್ಟಿದ್ದಕ್ಕ ಸಿಟ್ಟಿನ್ಯಾಗ ಬುಸಗುಡಕೋತ ಎದ್ದಂವ್ ಗ ಮತ್ತೊಂದಿಷ್ಟು ಸಿಟ್ಟು ಬರ್ಸಿದಾ. "ಇಲ್ಲಪಾ… ಎದ್ದು ಭಾಳ ಹೊತ್ತಾತು. ನಿನ್ನ ಫೋನಿಗೆ ಕಾಯ್ಕೋತ ಕೂತಿದ್ದೆ" ಅಂದಾಗ ತನ್ನ ಟಿಪಿಕಲ್ ಆದ ಕಂಚಿನ ಕಂಠದಾಗ ಗಹಗಹಿಸಿ ನಕ್ಕ. ಅದು ಇನ್ನೂ ಇರಿಟೇಟ್ ಆತು. 
"ಅಲ್ರೀ ಸರ್ರ ಈ ಫೇಸ್ಬುಕ್ಕ್ನ್ಯಾಗ ಒಂದು ಆಪ್ಷನ್ ಇದ್ರ ಚೊಲೊ ಆಗ್ತಿತ್ತು"
"ಏನಪಾ ಅದು?" ಮುಂಜ್ ಮುಂಜಾನೆ ಕೇಳೊ ಪ್ರಶ್ನೆ ಎನ್ರೀ ಅದು?
"ಎಲ್ಲಾರ್ದೂ ಪೋಸ್ಟ್ ಮತ್ತ ಫೋಟೊ ಆರಿಸಿಕೊಂಡು ಒಂದ ಸಲಕ್ಕ  ಲೈಕ್ ಮಾಡಿ ಬಿಡೋದು!" ಅಂವಾ ಯಾವಾಗ್ಲೂ ಹಂಗ. ಏನ್ ವಿಷಯ ಅಂತ ಹೇಳೊಕಿಂತ ಮೊದ್ಲ ಒಂದ್ ಈ ತರದ ಒಗಟು ಒಗಿತಾನ. ನಾವು ಸೀ ಐ ಡಿ ಪ್ರದ್ಯುಮ್ನ ನ ಹಂಗ ’ಇದ್ರಾಗ ಏನೋ ಗಡಬಡ ಐತಿ’ ಅಂತ ತಲಿ ಕೆರ್ಕೋಬೇಕು, ಹಂಗ ಒಂದು ಹುಳಾ ಬಿಡ್ತಾನ. ನಗಗಂತೂ ಏನೂ ಹೊಳಿಲಿಲ್ಲ.
"ಅದರಿಂದ ಏನಪಾ ಉಪಯೋಗ?" ಅಂತ ಕೇಳಿದ್ದಕ್ಕ.
"ನಮ್ಮ ವಿಜಯ್ ಗುರುಗಳು ತಾವು ತಗದದ್ದ ಒಂದು ಫೋಟೊ ಫೇಸ್ ಬುಕ್ನ್ಯಾಗ ಹಾಕಿದ್ರು. ನಾ ಅದನ್ನ ಇನ್ನೂ ಲೈಕ್ ಮಾಡಿಲ್ಲ ಅಂತ ಸಿಟ್ಟಿಗೆದ್ದಾರ! ಅದಕ್ಕ ಅಂಥಾ ಆಪ್ಶನ್ ಇದ್ರ ಮುಂಜಾನೆ ಎದ್ದು ಎಲ್ಲಾರ್ ಫೋಟೋನೂ ಒಂದ್ ಸಲ ಲೈಕ್ ಮಾಡಿ ಬಿಟ್ರ ಒಂಥರ ನಿಶ್ಚಿಂತಿ ನೋಡ್ರೀ. ಇಲ್ಲಾಂದ್ರ ನನ್ನ ಫೋಟೊ ಲೈಕ್ ಮಾಡಿಲ್ಲ ನಿನ್ನ ಫೋಟೊ ಮಾಡಿಲ್ಲ ಅಂತ ಸಿಟ್ಟಿಗೇಳೋ ಪ್ರಶ್ನೇನ ಏಳುದಿಲ್ಲ."
"ಹೌದಲ್ಲೋ ಮಾರಾಯ! ಇದು ಖರೇನ ಚೋಲೊ ವಿಚಾರ ನೋಡು" ನನಗೂ ಇಂಥಾ ಅನುಭವ ಭಾಳ ಆಗಿದ್ವು. ಅವಾಗಾವಗ ಇಂಥಾವು ಉಪಯೋಗ ಆಗೂ ಅಂಥ ವಿಚಾರ ಮಾತಾಡ್ತಾನ. ಅಡ್ಡಿ ಇಲ್ಲ. ಅಂದ್ಕೋತಿರ್ಬೇಕಾದ್ರ…. 
"ಲೇ ಎಪ್ರೇಷಿ… ಬುದ್ಧಿ ಅದ ಇಲ್ಲಲೇ ನಿನಗ…! ಲೇ ಎಲ್ಲಿದ್ದೀ ಬಾಯಿಲ್ಲೆ!!" ಅಂತ ಒದ್ರೀದ.
"?!!??"
"ಸರ್‍ರ ನಿಮಗ ಅಲ್ಲಾ, ನನ್ನ ಮಗಾ ಏನ್ ಧಾಂದ್ಲೆ ಹಾಕ್ತಾನ್ರೀ ಪಾ. ಅಂವಗ ಬೈಲಿಖತ್ತಿದ್ದೆ. ಇಕಿನೂ ಹಂಗ, ನಾ ಫೋನ್ ಮಾಡು ಮುಂದ ಹುಡುಗುರ್ನ ನನ್ನ ಹತ್ರ ಬಿಟ್ಟಿರ್ತಾಳ." ಅಂದ. ಸಧ್ಯ ಬದಕ್ದೆ, ಎಲ್ಲೆ ನನಗ ಬೈದ್ನೋ ಅಂತ ಹೆದರಿದ್ದೆ! ಹಂಗ ಅಂದವ್ನ ಖೊರ್‍ರ ಅಂತ ಖ್ಯಾಖರಿಸಿ ಉಗುಳಿದ. ಫೋನ್ ಹಿಡಕೊಂಡು ಅವನ ಮನಿ ಮುಂದಿನ ಘಟಾರ್ ನ್ಯಾಗ ಉಗುಳಿದ್ದ. ಆದ್ರೂ ಅದು ನನ್ನ ಕಿವ್ಯಾಗ ಉಗುಳಿದಂಗ ಆಗಿ ನಾನು ಕರ್ಚೀಫ್ ಲೆ ಕಿವಿ ವರಿಸಿಕೊಂಡೆ. ಅದಕ್ಕ…, ಅವನ ಜೋಡಿ ಫೋನ್ ನ್ಯಾಗ ಮಾತಾಡೋವಾಗ ಒಂದು ಕರ್ಚೀಫು ಬಾಜುಕ್ಕ ಇಟಗೊಂಡ ಕೂತಿರ್ತೀನಿ!  
"ಆತ್ ತೊಗೊಪಾ ಸ್ವಲ್ಪ ಮಕಾ ತೊಕ್ಕೊಂಡು, ಚಾ ಕುಡದು ಅಮ್ಯಾಲೆ ಫೋನ್ ಮಾಡ್ತೀನಿ" ಅಂತ ಸಂಭಾಷಣೆ ಮುಗಸೊ ಪ್ರಯತ್ನ ಮಾಡ್ದೆ. ಆದ್ರ ಅಂವ ಬಿಡಬೇಕಲ್ಲ! 
"ಅಲ್ರೀ ನಿಮ್ಮ ಪಾರ್ಟಿ ಯಾವಾಗ?" ಅಂತ ಮತ್ತೇನೋ ಒಂದು ಒಗಟು ಒಗದಾ. 
"ಯಾವ ಪಾರ್ಟಿ??" ನನ್ನ ಅಲ್ಪ ಸ್ವಲ್ಪ ಉಳದದ್ದ ನಿದ್ದೀನೂ ಹಾರಿ ಹೋಗಿತ್ತು. 
"ಒಂದ? ಎರಡ?…, ಭಾಳ ಪಾರ್ಟಿ ಪೆಂಡಿಂಗ ಅವ ನಿಮ್ವು. ಬರ್ತ್ ಡೇ ದ್ದು ಕೊಟ್ಟಿಲ್ಲ, ಮ್ಯಾರೇಜ್ ಅನ್ನಿವರ್ಸರಿದೂ ಕೊಡಲಿಲ್ಲ, ಹೊಸಾ ಫ್ರಿಜ್ ತೊಗೊಂಡ್ರಿ ಅದರ್ದು ಇಲ್ಲ" ಪುಣ್ಣ್ಯಾಕ್ಕ ನಾ ಮೊನ್ನೆ ಹೊಸ ಅಂಡರ್ ವೇರ್ ತೊಗೊಂಡಿದ್ದು ಅವಂಗ ಇನ್ನೂ ಗೊತ್ತಿಲ್ಲಾ, ಒಂದು ಪಾರ್ಟಿ ಉಳೀತು! ಪ್ರತಿಯೊಂದಕ್ಕೂ ಪಾರ್ಟಿ ಕೇಳೋದಕ್ಕ ಎಲ್ಲಾರೂ ಇಂವಗ ಪಾರ್ಟಿ ಪ್ರಶಾಂತ ಅಂತ ಹೆಸರು ಇಟ್ಟಾರ.
"ಅಲ್ಲೋಪಾ, ಇಷ್ಟ್ ವಯಸ್ಸಾದ್ ಮ್ಯಾಲೂ ಬರ್ಥ್ ಡೇ ಮಾಡ್ತಾರೇನು? ಮದಿವಿ ಆಗಿದ್ದಂತೂ ಪಾರ್ಟಿ ಕೊಡು ಅಂಥಾ ವಿಷಯಾನ ಅಲ್ಲ. ಸುಮ್ಮ್ ಸುಮ್ಮ್ನ ಮುಂಜಾನೆ ತಲಿ ತಿನ್ನಬ್ಯಾಡ"
"ಅಲ್ರೀ ಗುರು ನಿಮಗೇನ್ ಅಂಥಾ ವಯಸಾಗ್ಯಾವ್ರೀ. ನೋಡ್ಲಿಕ್ಕೆ ಇನ್ನೂ ಇಪ್ಪತ್ತರ ಹತ್ ಹತ್ತ್ರ ಇದ್ದಂಗ ಕಾಣ್ತೀರಿ." ಅಂತ ಬೇಣ್ಣಿ ಹಚ್ಚಿದ್ದಕ್ಕ ಹೋಗ್ಲಿ ಒಂದರೆ ಪಾರ್ಟಿ ಕೊಟ್ಟ್ರಾತು ಅಂತ ನಿರ್ಧಾರಾ ಮಾಡಿದ್ದ ತಡ. ನನ್ನ ಹೇಂಡ್ತಿ ಎಲ್ಲ್ಯೋ ಹೊರಗ ಇದ್ದಾಕಿ ಒಳಗ ಬಂದು  "ಇಬ್ಬರಿಗೂ ಉದ್ಯೋಗಿಲ್ಲ ಉಸಾಬರಿಲ್ಲಾ. ಬರೇ ಫೋನ್ ನ್ಯಾಗ ಮಾತಾಡ್ಕೋತ ಕೂಡ್ರಿ. ಇನ್ನೂ ಭಾಳ ಕೆಲ್ಸಾ ಅವ, ಮುಗಸ್ರೀ ಇನ್ನ." ಅಂತ ಬೈದ್ಲು. ಏ ಛೊಲೊ ಟೈಮಿಗೆ ಬಂದ್ಲು ಅಂದ್ಕೊಂಡು.
"ಇಕಿ ಬೈಲಿಖತ್ತಾಳ ಮಾರಾಯ. ಇನ್ನೂ ಭಾಳ ಕೆಲ್ಸ ಅವ. ಅಮ್ಯಾಲೆ ಮಾತಾಡೋಣ ಅಂತ" ಫೋನು ಬಂದ ಮಾಡಿದೆ. ಆದ್ರೂ ನಾ ಹೇಂಡ್ತೀಗೆ ಇಷ್ಟು ಹೆದರ್ತೀನಿ ಅಂತ ಇಂವಗ ಪ್ರತೀ ಸಲ ಅಂವಾ ಫೋನ್ ಮಾಡ್ದಾಗೂ ಗೊತ್ತಾಗಿ ಬಿಡ್ತದಲ್ಲ ಅನ್ನೋ ಬ್ಯಾಸರಾ ಅಂತೂ ಇತ್ತು!   
—–
ಮನಸ್ಸು ಕ್ಷಣಾರ್ಧದಲ್ಲಿ ಹುಬ್ಬಳ್ಳಿಗೆ ಹೋಗಿತ್ತು. ಸುಮಾರು ಹದಿನಾಲ್ಕು ವರ್ಷದ ಹಿಂದಿನ ಮಾತು. ನಾನು ಬೆಂಗಳೂರಿನ್ಯಾಗ ಕೆಲ್ಸ ಹುಡಕಿ ಸುಸ್ತ ಆಗಿ ವಾಪಸ್ಸು ಅಪ್ಪನ ಹತ್ರ ರೊಕ್ಕಾ ಇಸಗೋಳಿಕ್ಕೆ ಅಂತ ಧಾರವಾಡಕ್ಕ ಬಂದಿದ್ದೆ. ಹಂತಾದ್ರಾಗ ಇಲ್ಲೇ ಹುಬ್ಬಳ್ಳ್ಯಾಗ ಒಂದು ಕಡೆ ಸಾಫ್ಟವೇರ್ ಕೆಲ್ಸ ಖಾಲಿ ಅದ ಅಂತ ನನ್ನ ಮಿತ್ರನೊಬ್ಬ ಹೇಳಿ ಕುತುಹಲ ಕೆರಳಿಸಿದ್ದ. ತಾನು ಮಾತ್ರ ಅಷ್ಟು ಹೇಳಿ ಬೆಂಗಳೂರಿಗೆ ಕೆಲ್ಸಾ ಹುಡುಕಲಿಕ್ಕೆ ಹೋಗಿದ್ದ. ನಾನು ಆ ಕಂಪನಿಗೆ ಹೋಗಿ ಇಂಟರ್ವ್ಯೂ ಪಾಸ್ ಆಗಿ ಕೆಲ್ಸಕ್ಕೆ ಸೆರ್ಕೊಂಡಿದ್ದು ಒಂದು ಇತಿಹಾಸ! ಅಲ್ಲೆ ನನಗಿಂತ ಮೊದಲ ಇದ್ದವರೊಳಗ ಆಮ್ಯಾಲೆ ಸಿಕ್ಕಾಪಟ್ಟಿ ದೋಸ್ತ ಆದಂವಾ ಅಂದ್ರ ವಿಟ್ಠಲ. ನಮಿತಾ ಅಂತ ಒಂದು ಹುಡಗಿನೂ ಇದ್ಲು. ಅಕೀನು ಒಳ್ಳೆ ಫ಼್ರೆಂಡ್ ಆದ್ಲು, ಅದ್ರೂ ಕೆಲ್ಸದ ವಿಷಯದಾಗ ಬರೇ ಜಗಳಾ ಮಾಡ್ತಿದ್ಲು. ಅದು ಆ ಮಟ್ಟಿಗಿನ ಜಗಳ. ದ್ವೇಷದ ಜಗಳ ಅಲ್ಲಾ!
ಅದು ಒಂದು ಸಣ್ಣ ಸಾಫ್ಟವೇರ್ ಕಂಪನಿ. ಇದ್ದವ್ರ ನಾಲ್ಕೈದ್ ಮಂದಿ. ನಮಗೊಬ್ಬ್ರು ಬಾಸ್ ಇದ್ರು. ಸಮಸ್ಯೆ ಏನು ಅಂದ್ರ ಅವರ ಮನಿ ಆಫಿಸಿನ ಕೆಳಗ ಇತ್ತು! ಅದಕ್ಕ ಅವ್ರು ಯಾವಾಗ್ಲೂ ಮನ್ಯಾಗ ಇರೌರು … ಅಲ್ಲಲ್ಲಾ ಆಫಿಸ್ ನ್ಯಾಗ ಇರೌರು. ಮನಿಗಿಂತ ಆಫೀಸಿನ್ಯಾಗ ಅವ್ರಿಗೆ ಶಾಂತಿ ಜಾಸ್ತಿ ಇತ್ತು ಅಂತ ನಮಗ ಆಮ್ಯಾಲೆ ಗೊತ್ತಾತು. ಅದು ಏನಪಾ ಅಂದ್ರ ಅವರ ಹೆಂಡತಿ ಸಂಗೀತ ಕಲೀತಿದ್ರು. ಹಿಂಗಾಗಿ ಯಾವಗ್ಲೂ ಅವ್ರು ಮನ್ಯಾಗ ತಮ್ಮ ಸಂಗೀತ ಸಾಧನೆ  ಮಾಡವ್ರು. ನಮ್ಮ ಬಾಸು ಅದ್ನ ತಪ್ಪಿಸಿಗೋಳಲಿಕ್ಕೆ ಆಫಿಸಿನ್ಯಾಗ ಕುತಗೊಂಡು ನಮಗ ತಮ್ಮ ರಾಗದಾಗ ತಮ್ಮ ಸಂಗೀತಾ ಹೇಳತಿದ್ರು! ಅದ್ರೂ ಭಾಳ ತಡಾ ಆತಂದ್ರ ಅವ್ರ್ ಹೆಂಡತಿನ ಮ್ಯಾಲೆ ಆಫಿಸಿಗೆ ಬಂದು ಬಿಡವ್ರು. ನಾವಾಗ ನಿಟ್ಟುಸಿರು ಬಿಡತಿದ್ವಿ. ಯಾಕಂದ್ರ ಬಾಸು ತಮ್ಮ ಮನೀಗೆ ದಯಮಾಡ್ಸಿದ್ರ ನಾವು ಜಾಗಾ ಖಾಲಿ ಮಾಡ್ಬಹುದಿತ್ತು!  
ಹಿಂಗ ಜೀವನಾ ನಡದಿತ್ತು. ಆವಾಗ ನಮ್ಮ ಟೀಮ್ ಲೀಡ್ ಆಗಿ ಬಂದವ್ರು ವಿಜಯ್ ಅವ್ರು. ಅವರು ನಮಗಿಂತ ಹೆಚ್ಚು ಬಲ್ಲವರಾಗಿದ್ರು, ಹಿಂಗಾಗಿ ಅನಿವಾರ್ಯವಾಗಿ ಅವರನ್ನ ನಮ್ಮ ಗುರುಗಳನ್ನಾಗಿ ಮಾಡಿಕೋಬೇಕಾತು. ಅದೂ ಒಂದು ಇತಿಹಾಸ. ಇವ್ರು ಬಂದ ಮ್ಯಾಲೆ ಬಂದವ್ನ ನಮ್ಮ ಪಾರ್ಟಿ ಪ್ರಶಾಂತ. ಅವಗಿಂತಾ ನಾನು ಹೆಚ್ಚು ಬಲ್ಲವನಾಗಿದ್ದೇನಾದ್ದರಿಂದ ಅವನು ಪಾಪಾ ಅನಿವಾರ್ಯವಾಗಿ ನನಗ ಗುರುಗಳ ಸ್ಥಾನಾ ಕೊಟ್ಟು ಮರ್ಯಾದಿ ದಯಪಾಲಿಸ್ದಾ. ಹಿಂಗ ನಮ್ಮ ಗುರು-ಶಿಶ್ಯ ಪರಂಪರೆ ಶುರು ಆತು. ನಾವು ಒಬ್ಬರ್ನೊಬ್ರು ಎಷ್ಟು ಹಚಿಗೊಂಡಬಿಟ್ಟಿದ್ವಿ ಅಂದ್ರ ಅಷ್ಟ ಹಚಿಗೊಂಡಿದ್ವಿ ನೋಡ್ರೀ! ಯಾಕಂದ್ರ ಅವಾಗ ಎಲ್ಲಾರೂ ಬ್ರಹ್ಮಚಾರಿಗಳು. ಯಾರಿಗೂ ಹೇಳವ್ರಿಲ್ಲ ಕೇಳವ್ರಿಲ್ಲ. ಒಟ್ಟಿಗೆ ಊಟಾ ಮಾಡ್ತಿದ್ವಿ, ಗಿರಿಮಿಟ್ಟು ಮಿರ್ಚಿ ತಿಂತಿದ್ವಿ, ಪಿಕ್ನಿಕ್ ಹೋಗ್ತಿದ್ವಿ…. 
ಆದ್ರ ಎರಡ ವರ್ಷ ಹಿಂಗ ಕಳದಾದ ಮ್ಯಾಲೆ ಐ ಟಿ ಇಂಡಸ್ಟ್ರೀ ಮ್ಯಾಲೆ ಸಿಡ್ಲು ಬೀಳಲಿಕ್ಕೆ ಹತ್ತಿ ನಮ್ಮ ಬಾಸು ನಮ್ಮ ಪಗಾರಕ್ಕೂ ಕೈ ಹಚ್ಚಿದಾಗ ಎಲ್ಲಾರೂ ಬ್ಯಾರೆ ಕೆಲ್ಸಾ ಹುಡಿಕ್ಕೊಂಡು ಅತ್ಲಾಗ ಇತ್ಲಾಗ ಆದ್ವಿ. ವಿಟ್ಠಲ ಬೆಂಗಳೂರಿಗೆ ಹೋದ, ನಮೀತಾ ನೂ ಬೆಂಗಳೂರು ಸೇರಿದ್ಲು. ನಾನೂ ಪ್ರಶಾಂತ ಹುಬ್ಳ್ಯಾಗ ಬ್ಯಾರ್ ಬ್ಯಾರೆ ಕಡೆ ಕೆಲ್ಸಕ್ಕ ಸೇರಿದ್ವಿ. ವಿಜಯ್ ಅವ್ರೂ ಹುಬ್ಳ್ಯಾಗ ಇನ್ನೊಂದ್ ಕಡೆ ಸೇರಿ ಆಮ್ಯಾಲೆ ಬೆಂಗಳೂರಿಗೆ ಹೋದ್ರು. ನಾವು ಒಬ್ಬರ್ನೊಬ್ರು ಮಿಸ್ಸ್ ಅಂತೂ ಮಾಡ್ಕೋತಿದ್ವಿ. ಆದ್ರೂ ವಿಧಿ ಮತ್ತ ತನ್ನ ಆಟಾ ತೋರಸ್ತು. ಕಾಲಾಂತರದಾಗ ನಮ್ಮನ್ನ ಎಲ್ಲಾರ್ನೂ ಬೆಂಗಳೂರಿಗೆ ತಂದು ವಗಿತು. ಅದೂ ಅಲ್ದ ಎಲ್ಲಾರೂ ಗ್ರಹಸ್ತಾಶ್ರಮಕ್ಕ ಕಾಲ ಇಟ್ಟಿದ್ವಿ! ನಮ್ಮ ಟೀಮು ಈಗ ದೊಡ್ಡದಾಗಿತ್ತು.
—–
ಈಗ ಎಲ್ಲಾರೂ ಒಂದ ಕಡೆ ಇದ್ದೀವಿ.  ಆದ್ರೂ ಎಲ್ಲಾರೂ ಒಟ್ಟಿಗೆ ಸೇರೂದು ಆಗವಲ್ದು. . . ನಾವು ಭೆಟ್ಟ್ಯಾಗೋದು ಫೇಸ್ ಬುಕ್ನ್ಯಾಗ ಮಾತ್ರ. ಪ್ರೊಫೈಲ್ ವಿಸಿಟ್ ಮಾಡಿದ್ರ ಅವರ ಮನೀಗೆ ಹೋದಂಗ ಆಗಿ ಬಿಟ್ಟದ. ಎಂಥ ವಿಪರ್ಯಾಸ ಅಲ್ಲಾ? ಆದ್ರ ಅದರಿಂದ ಆಗ್ತಿರೋ ಸಮಸ್ಯೆ ಅಂದ್ರ ನನ್ನ ಫೋಟೊ ನೋಡಿಲ್ಲ, ಲೈಕ್ ಮಾಡಿಲ್ಲ, ಕಮೆಂಟ್ ಮಾಡಿಲ್ಲ ಅನ್ನೋ ಕ್ಷುಲ್ಲಕ ರಗಳೆಗಳು. ಅದ ಕಾರಣಕ್ಕ ನಮ್ಮ ಪಾರ್ಟಿ ಪ್ರಶಾಂತ ಮುಂಜ ಮುಂಜಾನೆ ಒಂದು ಪರಿಹಾರ ಹೇಳಿದ್ದು. ಆದ್ರೂ ಒಬ್ಬರಿಗೊಬ್ರು ಮ್ಯಾಲೆ ಸಿಟ್ಟಿಲ್ಲ ಬಿಡ್ರೀ. ಅದು ಬರೀ ಕಾಲೆಳೆಯುವ ಮನಸ್ತಾಪಗಳು ಅಷ್ಟೆ. 
ಇನ್ನ ಒಬ್ಬೊಬ್ರ ಬಗ್ಗೆ ಹೇಳಬೇಕಂದ್ರ, ಒಬ್ಬೊಬ್ರೂ ಒಂದೊಂಥರಾ ಕ್ಯಾರೆಕ್ಟರ್!    ವಿಜಯ್ ನಾ ಮೊದ್ಲ ಹೇಳಿದಂಗ ನಮ್ಮೆಲ್ಲರ ಗುರುಗೋಳು. ಅದ್ರ ಜೊತಿಗೆ ಒಂಥರ ಸೈಂಟಿಷ್ಟು! ಅವರಿಗೆ ತಾಂತ್ರಿಕ ವಿಷಯದಾಗ ಸಿಕ್ಕಾಪಟ್ಟೆ ಆಸಕ್ತಿ ಹಾಗೂ ಹಿಡಿತ. ಒಂದೊಂದ್ ಸರ್ತಿ ಸೈಂಟಿಸ್ಟ ತರಾನ ಆಡೊವ್ರು. ಅವ್ರ ಲಗ್ನಕ್ಕ ನಾನು ಪ್ರಶಾಂತ ಹೋಗಿದ್ವಿ. ನಮ್ಮನ್ನ ಹೆಂಡತಿಗೆ ಪರಿಚಯ ಮಾಡ್ಸೂ ಮುಂದ ನನ್ನ ಮತ್ತ ಪ್ರಶಾಂತನ ಹೆಸ್ರು ಅದ್ಲ ಬದ್ಲ ಮಾಡಿ ಹೇಳಿ ಬಿಟ್ರು! ಆಮ್ಯಾಲೆ ನಾವು ನಮ್ಮ ನಮ್ಮ ಹೆಸರು ಹೇಳ್ಕೋಬೇಕಾತು. 
ವಿಟ್ಠಲ ಒಬ್ಬ ಕಲಾವಿದ ಮತ್ತ ಕಂಪುಟರ್ ಗ್ರಾಫಿಕ್ಸ್ ಪ್ರವೀಣ. ಅಂವನ ಮಾತು ಯಾವಗ್ಲೂ ನೇರ ಮತ್ತ ನಿಷ್ಠುರ (ಹೆಂಡ್ತಿ ಜೋಡಿ ಓಂದ ಬಿಟ್ಟ ಮತ್ತ!). ಅಂವಗ ಅಪ್ಪಿ ತಪ್ಪಿ ನಾನು ಒಂದ ಸಲ ನಾ ನನ್ನ ಕೈಯ್ಯಾರೆ ರಚಿಸಿದ್ದ ಅದ್ಭುತ (ನನ್ನ ಮಟ್ಟಿಗೆ!) ಕಲಾಕೃತಿ ತೋರಿಸಿ ಬಿಟ್ಟೆ ನೋಡ್ರೀ, ಅದಕ್ಕ ಅಂವ "ಗುರು ನೀವು ಚೊಲೊ ಬರೀತಿರಿ ಅದನ್ನ ಬೇಕಂದ್ರ ಮುಂದುವರಸ್ರಿ" ಅಂದ ಬಿಡಬೇಕ! ನಾನ ಕಷ್ಟ ಪಟ್ಟು ತಗದದ್ದ ಪೇಂಟಿಂಗಿಗೆ ಈ ತರದ್ದು ಒಂದು ಪ್ರತಿಕ್ರಿಯೆ ಬಂದ ಮ್ಯಾಲೆ ನಾನು ಬರ್ಯೋದ್ ಜಾಸ್ತಿ ಮಾಡಿದ್ದಂತೂ ಖರೆ. ಚಿತ್ರಾನೂ ತಗೀತಿನಿ ಆದ್ರ ಅಂವಗ ತೋರ್ಸಂಗಿಲ್ಲ ಅಷ್ಟ!
ಮತ್ತ ನಮ್ಮ ಪಾರ್ಟಿ ಪ್ರಶಾಂತನ್ನ ಬಗ್ಗೆ ಹೇಳಬೇಕಂದ್ರ, ಅಂವನ ಸ್ವಭಾವಕ್ಕ ಆ ಹೆಸರು ಹೋದಂಗಿಲ್ಲ. ಅಂವಗ ಜಗಳ ಮಾಡಿಲ್ಲ ಅಂದ್ರ ಸಮಾಧಾನ ಇಲ್ಲ. ಅಂವಾ ಜಗಳಾ ಮಾಡಲಾರದ ವೇಟರ್ ಗಳು ಬೆಂಗಳೂರಿನ್ಯಾಗ ಯಾರೂ ಇಲ್ಲ! ಪ್ಲೇಟು ಸ್ವಚ್ಚ ಇಲ್ಲಾ ಅನ್ನುದರಿಂದ ಹಿಡಕೊಂಡು ಊಟಾ ತರೂದು ತಡ ಆತು ಅನ್ನೂ ತನ್ಕಾ ಅವ್ರ ಜೊತಿ ಕಾಲು ಕೆದರಿ ಜಗಳಾ ತಗದು ಬರ್ತಾನ! ಕಾರ್ ನ್ಯಾಗ ಹೋಂಟಾಗಂತೂ ದಾರಿಗುಂಟ ಬ್ಯಾರೆ ಚಾಲಕರಿಗೆ ಬೈಕೊಂತನ ಗಾಡಿ ಹೋಡಿತಾನ. ಆದ್ರ ಬೈಯ್ಯು ಮುಂದ ಕಾರಿನ ಗ್ಲಾಸ್ ಎರ್ಸಿರ್ತಾನ! ಹಿಂಗಾಗಿ ಇನ್ನೂ ಯಾರೂ ವಾಪಸ್ಸು ಅಂವಗ ಬೈದಿಲ್ಲ. ಯಾಕಂದ್ರ ಇಂವಾ ಬೈದಿದ್ದು ಯಾರಿಗೂ ಕೇಳ್ಸೇ ಇಲ್ಲ! ಹಾಡು ಚೊಲೊ ಹಾಡ್ತಾನ. ಆದ್ರ ಒಮ್ಮೆ ಹಾಡ್ಲಿಕ್ಕೆ ಸುರು ಮಾಡಿದ್ನಂದ್ರ ಮುಗ್ಸಂಗೇ ಇಲ್ಲ. 
ಇನ್ನ ನನ್ನ ಬಗ್ಗೆ ನಾನ ಬರ್ಕೋಳ್ಳೋದು ಸರಿ ಅನ್ಸಂಗಿಲ್ಲ. ಅದಕ್ಕ ನಾನಿಲ್ಲೆ ಸೂತ್ರಧಾರನಾಗೇ ಇರ್ತೀನಿ! ಈ ನಮ್ಮ ಗೆಳೆಯರ ಬಗ್ಗೆ ಬರಿಯೋ ವಿಷಯ ಇನ್ನೂ ಭಾಳ ಅವ. ಎಲ್ಲಾ ಈಗ ಬರದಬಿಟ್ರ ಬೋರಾದೀತು. ಈ ಬರಹಕ್ಕ ಎಷ್ಟು ಲೈಕು, ಕಮೇಂಟು ಬರ್ತಾವ ಅಂತ ನೋಡ್ಕೊಂಡು ಮುಂದ ಬರೀತಿನಿ! ನಾವು ಹೆಂಗ ಇದ್ರೂ ಒಬ್ಬರ ಮ್ಯಾಲೆ ಒಬ್ಬರಿಗೆ ಪ್ರೀತಿ ಅಭಿಮಾನ ಇನ್ನೂ ಇಟಗೊಂಡೀವಿ. ತಿಂಗಳಿಗೊಮ್ಮೆ ಇಲ್ಲಾ ಅಂದ್ರೂ ಆದಾಗಾದಗ ಸಿಗ್ತಿರ್ತೀವಿ. ಹೊಸಾ ಪರಿಸರಕ್ಕ ಹೋದಂಗ ಹೊಸ ಹೊಸ ಗೆಳ್ಯಾರು ನಮ್ಮ ಜೀವನದಾಗ ಬರ್ತಾರ. ಆದ್ರೂ ನಮ್ಮದೊಂದು ಗೆಳೆಯರ ಬಳಗ ಇಷ್ಟು ವರ್ಷ ಇನ್ನೂ ಸಂಪರ್ಕದಾಗ ಇರೋದು ಭಾಳ ಅಪರೂಪ ಅಂತ ನನ್ನ ಅಂಬೋಣ. ನೀವೇನಂತೀರಿ?      
 
 
 

Wednesday, April 16, 2014

ಛೇ ಏನರೇ ಮಾಡಿ ಹೊಟ್ಟಿ ಕರಗಸಬೇಕು

ಈ ಹಾಸ್ಯ ಬರಹ 'ಅವಧಿ'ಯಲ್ಲಿ ಪ್ರಕಟವಾಗಿತ್ತು.

http://avadhimag.com/2014/03/29/%e0%b2%9b%e0%b3%87-%e0%b2%8f%e0%b2%a8%e0%b2%b0%e0%b3%87-%e0%b2%ae%e0%b2%be%e0%b2%a1%e0%b2%bf-%e0%b2%b9%e0%b3%8a%e0%b2%9f%e0%b3%8d%e0%b2%9f%e0%b2%bf-%e0%b2%95%e0%b2%b0%e0%b2%97%e0%b2%b8%e0%b2%ac/

---------------------------

ಕನ್ನಡಿ ಎದುರು ನಿಂತ ಗಣೇಶನ ಕಣ್ಣುಗಳು ತನ್ನದೇ ಪ್ರತಿಬಿಂಬದಲ್ಲಿ ಕಾಣುತ್ತಿದ್ದ ಡುಮ್ಮ ಹೊಟ್ಟೆಯನ್ನೇ ಗಾಬರಿಯಿಂದ ಗಮನಿಸುತ್ತಿದ್ದವು. ಎಷ್ಟು ಸಣ್ಣಗಿದ್ದವನು ಹಿಂಗ್ಯಾಕಾದೆ ಅಂತ ಯೋಚಿಸುತ್ತಿರುವಂತೆ, “ಏನ ನೋಡಕೋತ ನಿಂತ್ರಿ ? ” ಅಂತ ಹೆಂಡತಿ ಜಾನು ಎಚ್ಚರಿಸಿದಾಗ, “ಏನೂ ಇಲ್ಲಾ, ಹಂಗ ಸುಮ್ನ ..” ಅಂತೇನೋ ಬಡಬಡಿಸಿ ಕೈಗೆ ಸಿಕ್ಕ ಪ್ಯಾಂಟೊಂದನ್ನು ಏರಿಸಿಕೊಂಡು ಉಸಿರು ಬಿಗಿ ಹಿಡಿದು ಹೊಟ್ಟೆ ಒಳಗೆ ತಂದುಕೊಂಡು, ಹರಸಾಹಸದಿಂದ ಇನ್ ಶರ್ಟ್ ಮಾಡಿಕೊಳ್ಳುವಷ್ಟರಲ್ಲಿ ಒಂಭತ್ತಾಗಿತ್ತು. ಇವತ್ತೇನು ಟಿಫಿನ್ನು ಅಂತ ವಾಸನೆಯಿಂದಲೇ ಗ್ರಹಿಸುವ ವ್ಯರ್ಥ ಪ್ರಯತ್ನ ಮಾಡಿ ಅರ್ಥವಾಗದೇ ಹೆಂಡತಿಯನ್ನು ಪ್ರಶ್ನಾರ್ಥಕವಾಗಿ ನೋಡಲಾಗಿ “ಇಡ್ಲಿ ಮಾಡೇನಿ” ಅಂತ ಅವಳು ಅಂದಾಗ ಅವನ ಮೈ ಝುಮ್ ಅಂತು. ಈ ಥರ ಇಡ್ಲಿ, ದ್ವಾಸಿ ಅಂತೆಲ್ಲ ತಿಂದೇ ತನ್ನ ಈ ಪರಿಸ್ಥಿತಿ ಆಗಿರುವುದು ಅಂತ ಅವನಿಗೆ ಮನದಟ್ಟಾಯ್ತು. ”ಇವತ್ತ್ಯಾಕೊ ಹಸಿವಿಲ್ಲಾ, ಬರೆ ಹಾಲು ಕೊಟ್ಟು ಬಿಡು” ಅಂದಾಗ, ಜಾನು ಮುಖ ಮಾತಾಡದೆನೇ “… ಈಗ ಮಾಡಿದ್ದೇನು ನಾಯಿಗೆ ಹಾಕ್ಲ್ಯಾ?” ಅನ್ನುತ್ತಿರುವಂತೆ ಭಾಸವಾಗಿ, “ಇರ್ಲಿ ಬಿಡು ಒಂದೆರಡು ಇಡ್ಲಿ ಕೊಡು. ನೀ ಮಾಡಿದ ಇಡ್ಲಿ ತಿನ್ನದ ಹೋಗಲಿಕ್ಕೆ ಮನಸ್ಸು ಒಪ್ಪುದಿಲ್ಲಾ ” ಅಂದಾಗ ಜಾನುನ ಮುಖ ನಾಚಿಕೆಯಿಂದ ಮಸಾಲೆ ದೋಸೆಯಂತೆ ಕೆಂಪಗಾಗಿತ್ತು. ಎರಡು ಇಡ್ಲಿ ಅಂದವನು ಹನ್ನೆರಡು ತಿಂದು ಆಬ್ ಅಂತ ತೇಗಿ ಹೊಟ್ಟೆ ಮೇಲೆ ಕೈ ಆಡಿಸಿಕೊಂಡ. ಅದು ಇನ್ನೂ ದೊಡ್ಡದಾಗಿತ್ತು.
ಕಾರಿನಲ್ಲಿ ಕೂತವನ ಹೊಟ್ಟೆಗೆ ಸ್ಟೇರಿಂಗು ತಾಗುತ್ತಿತ್ತು. ’ಛೇ ಏನರೇ ಮಾಡಿ ಹೊಟ್ಟಿ ಕರಗಸಬೇಕು’ ಅಂತ ಅಚಲ ನಿರ್ಧಾರ ಅವನು ಮಾಡಿ ಆಗಿತ್ತು. ಹಾಗೂ ಹೀಗೂ ಬೆಂಗಳೂರಿನ ಹೊಂಡಗಳ ನಡುವಿನ ರಸ್ತೆಯಲ್ಲಿ ತೇಲುತ್ತ ಸಾಗಿದಾಗಲೆಲ್ಲಾ ಹೊಟ್ಟೆ ತುಂಬಿದ ಕೊಡದಂತೆ(?)  ತುಳುಕಿ ತನ್ನ ಅಸ್ತಿತ್ತ್ವವನ್ನು ನೆನಪಿಸುತ್ತಿತ್ತು. ಆಫೀಸಿನ ಕಟ್ಟಡದ ಲಿಫ್ಟಿನ ಹತ್ತಿರ ಹೋದವನಿಗೆ, ಬಳಕುವ ಬಳ್ಳಿ ಲತಾ ’ಹಾಯ್’ ಅಂತ ಕೈ ಮಾಡಿದಾಗ, ಹೊಟ್ಟೆಯ ಬಗ್ಗೆ ಮೂಡಿದ್ದ ಅಸಮಾಧಾನ, ಬೇಸರವೆಲ್ಲಾ ಮಾಯವಾಗಿ ಲವಲವಿಕೆ ಮೂಡಿತ್ತು! ಹತ್ತಿರ ಹೋಗಿ ಕೈ ಕುಲುಕುತ್ತಿದ್ದಂತೆ ಘಂ ಅಂತ ಗಾಳಿಯಲ್ಲಿ ತೇಲಿ ಬಂದ ಅವಳ ಪರ್ ಫ್ಯುಮ್ ವಾಸನೆಗೆ ತಲೆ ತಿರುಗಿ ಝೋಲಿ ತಪ್ಪಿದಂತಾಗಿ ಹೆಂಗೋ ಮಾಡಿ ಸಾವರಿಸಿಕೊಂಡನವನು. ಇವಳು ಪರ್ ಫ್ಯುಮ್ ನಲ್ಲೇ ದಿನಾಲೂ ಸ್ನಾನ ಮಾಡುತ್ತಾಳೇನೊ ಅಂತ ವಿಚಾರಮಗ್ನನಾದನು. ಇಲ್ಲಾಂದರೆ ಅಷ್ಟು ಘಾಟು ವಾಸನೆ ಬರಲು ಹೇಗೆ ಸಾಧ್ಯ?! ಸಧ್ಯ ಲಿಫ್ಟು ಬಂತು,  ಇನ್ನೇನು ಲತಾಳೊಂದಿಗೆ ಉಮೇದಿಯಿಂದ ಒಳಗೆ ನುಗ್ಗಬೇಕೆನ್ನುವಷ್ಟರಲ್ಲಿ ತನ್ನ ಹೊಟ್ಟೆಯ ನೆನಪಾಗಿ ಹಿಂದೆ ಸರಿದನವನು, ಲಿಫ್ಟಿನಲ್ಲಿ ಹೋಗುವ ಬದಲು ಮೆಟ್ಟಿಲೇರಿಯೆ ಹೋಗಿ ಸ್ವಲ್ಪ ಹೊಟ್ಟೆ ಇವತ್ತು ಕರಗಿಸಿಯೇಬಿಡುವುದೆಂಬ ದಿಟ್ಟ ನಿರ್ಧಾರ ತೊಗೊಂಡು ಮೇಲೆ ಹೋಗುತ್ತಿರುವ ಲಿಫ್ಟನ್ನು, ಅದರಲ್ಲಿದ್ದ ಬಳಕುವ ಬಳ್ಳಿಯನ್ನೂ ತ್ಯಾಗ ಮಾಡಿದ.
ಲತಾ ಮಾತ್ರ ಇವನು ಬಹುಶಃ, ಮೇನಕೆಯನ್ನು ತಿರಸ್ಕರಿಸಿದ ವಿಶ್ವಾಮಿತ್ರನ ಅಪರಾವತಾರನೇ ಇರಬೇಕು ಎಂಬಂತೆ ಕೆಕ್ಕರಿಸಿ ನೋಡುತ್ತಿರುವಲ್ಲಿಗೆ ಲಿಫ್ಟಿನ ಬಾಗಿಲು ತಂತಾನೇ ಮುಚ್ಚಿಕೊಂಡು, ಜೀವನಪೂರ್ತಿ ಗಡಿಬಿಡಿಯಲ್ಲಿಯೇ ಇರುವ ಮಾನವ ಜೀವಿಗಳನ್ನು ಹೊತ್ತು ಲಗುಬಗೆಯಿಂದ ಸಾಗಿತು. ಅದಕ್ಕೂ ಅವಸರವೇ, ಪಾಪ! ಇವನ ಆಫೀಸು ಇರುವುದು ಆರನೇ ಮಹಡಿಯಲ್ಲಿ. ಮೊದಲೆರಡು ಮಹಡಿಗಳನ್ನು ತೇನ್ಸಿಂಗ ನನ್ನೂ ನಾಚಿಸುವಂತೆ ಅಬ್ಬರಿಸಿ ನುಗ್ಗಿದವನಿಗೆ ಮುಂದಿನ ನಾಲ್ಕು ಮಹಡಿಗಳನ್ನೇರುವುದರೊಳಗಾಗಿ ತಿಂದ ಇಡ್ಲಿಗಳು ಕರಗಿ ತಲೆ ಸುತ್ತು ಬಂದಿತ್ತು. ಅಂತೂ ಹರ ಸಾಹಸ ಪಟ್ಟು ತನ್ನ ಜಾಗಕ್ಕೆ ತಲುಪಿ ಉಸ್ಸಪ್ಪಾ ಅಂತ ನಿಟ್ಟುಸಿರಿಟ್ಟನು.
ಇವನಿಗೆ ಆ ದಿನ ಕೆಲಸ ಮಾಡಲು ಮನಸ್ಸಿರಲಿಲ್ಲ, ತಲೆಯಲ್ಲಿ ಕೊರಿತಿದ್ದದ್ದು ಬರೀ ಹೊಟ್ಟೆ ಕರಗಿಸುವ ಚಿಂತೆ! ಅಂತರ್ಜಾಲದಲ್ಲೇನಾದರೂ ಟಿಪ್ಸ್ ಇರಲೇಬೇಕಲ್ಲವೇ ಅಂತ ಗೂಗಲ್ ನಲ್ಲಿ “ಹೊಟ್ಟೆ ಕರಗಿಸುವ ಬಗೆ” ಅಂತ ಟೈಪ್ ಮಾಡಿ ಕೂತವನಿಗೆ ನಿರಾಸೆಯಾಗಲಿಲ್ಲ. ಬಗೆ ಬಗೆಯ ಕಸರತ್ತುಗಳನ್ನು ಫೋಟೋದ ಸಮೇತ ವಿವರಿಸಿದ್ದರು. ಆದರೆ ಫೋಟೊದಲ್ಲಿರುವವರೆಲ್ಲ ಬಳಕುವ ಬಳ್ಳಿಗಳೆ! ಹೊಟ್ಟೆ ಇದ್ದವರ ಕಷ್ಟ ಅವರಿಗೇನು ಗೊತ್ತು. ಈ ಪರಿ ಹೊಟ್ಟೆ ಇಟ್ಟುಕೊಂಡು ಆ ಥರ ಕಸರತ್ತು ಮಾಡಲು ಸಾಧ್ಯವೆ ಎನ್ನುವ ಸಾಮಾನ್ಯ ಪರಿಜ್ನ್ಯಾನವೂ ಇಲ್ಲ ದುರುಳರಿಗೆ ಅಂತ ಬೈದುಕೊಂಡಿರುವಾಗಲೆ,  ಬಳಕುವ ಬಳ್ಳಿ ಲತ ಇವನ ಬಳಿ ಬಂದಳು.  ”ಕಾಫಿಗೆ ಬರ್ತೀರಾ” ಅಂತ ವೈಯ್ಯಾರದಿಂದ ಅಹ್ವಾನಿಸಿದಾಗ ತಿರಸ್ಕರಿಸುವ ಧೈರ್ಯ ಅಥವಾ ಮನಸ್ಸು ಯಾರಿಗಿತ್ತು? ಎದ್ದೇ ಬಿಟ್ಟಾ… ಅದು ಇದು ಅಂತ ಹರಟುತ್ತಾ ಕಾಫಿ ಸವಿಯುತ್ತಿರುವಾಗಲೆ ಲತಾ ತಾನು ದಿನಾ ಬೆಳಿಗ್ಗೆ ಐದು ಕಿಲೋಮೀಟರ್ ಸೈಕಲ್ ತುಳಿಯುತ್ತೇನೆ ಅಂತ ಹೇಳಿ ಇವನ ಕಣ್ಣಲ್ಲಿ ಹೊಳಪು ಮೂಡಿಸಿದಳು. ’ಒಹೋ ಇದೋ ಈ ಬಳಕುವ ಬಳ್ಳಿಯ ಗುಟ್ಟು’ ಅಂತ ಮನಸ್ಸಿನಲ್ಲಿ ಯೋಚಿಸಿದವನಿಗೆ ಹೊಟ್ಟೆ ಕರಗಿಸುವುದಕ್ಕೊಂದು ಉಪಾಯ ಸಿಕ್ಕಿತ್ತು.
 
ಅವತ್ತು ಸ್ವಲ್ಪ ಬೇಗನೇ ಮನೆಗೆ ಹೊರಟು ಬಂದವನ ನೋಡಿ ಜಾನು “ಯಾಕ ಇಷ್ಟು ಲೊಗುನೇ ಬಂದ್ರಿ” ಅಂತ ಅಚ್ಚರಿಯಿಂದ ಕೇಳಿದಳು. ಈ ಹೆಂಡತಿಯರೇ ವಿಚಿತ್ರ, ತಡವಾಗಿ ಬಂದರೂ ಅವರಿಗೆ ಕಾರಣ ಬೇಕು, ಬೇಗ ಬಂದರೂ ವಿವರಿಸಬೇಕು!… ”ಇವತ್ತ ಒಂದು ಹೊಸಾ ಸೈಕಲ್ಲು ತೊಗೊಬೇಕು, ಲೊಗೂನ ತಯಾರಾಗು” ಅಂದವನನ್ನು ಇನ್ನೂ ಅಶ್ಚರ್ಯದಿಂದ ನೋಡುತ್ತಿದ್ದವಳಿಗೆ, ಈ ಐಡಿಯಾ ಕೊಟ್ಟದ್ದು ಲತಾ ಅಂತ ಹೇಳುವಷ್ಟು ಮುರ್ಖನೆ ಅವನು? ”ನಾನು ಇನ್ನ ಮ್ಯಾಲೆ ಮುಂಜಾನೆ ಸೈಕಲನ್ಯಾಗ ೫ ಕಿಲೋಮೀಟರು ಓಡಸ್ತೀನಿ. ಮುಂಜಾನೆ ಹಾಲೂ ನಾನ ತರ್ತೀನಿ. ಹೊಟ್ಟಿ ಕರಗಸಬೇಕು ಅಂದ್ರ ಏನಾದ್ರೂ ಮಾಡಬೇಕಲ್ಲ?”
ಜಾನುಗೆ ಖುಷಿಯಲ್ಲಿ ಏನು ಹೇಳಬೇಕೆಂದು ತೋಚಲಿಲ್ಲ. ಒಳ್ಳೆ ಬುಧ್ದಿ ಕೊಟ್ಟ ಸಕಲ ದೇವಗಣಕ್ಕೆ ಮನಸ್ಸಿನಲ್ಲೇ ನಮಿಸಿದಳು. ಸಣ್ಣ ಪುಟ್ಟ ಕೆಲಸಕ್ಕೂ ಕಾರಿನಲ್ಲೇ ಹೋಗುತ್ತಿದ್ದ ಗಂಡ ಇನ್ನು ಮುಂದೆ ಸೈಕಲ್ಲು ತುಳಿಯುತ್ತ ಹೋಗುವುದನ್ನು ಕಲ್ಪಿಸಿಕೊಂಡು ಪುಳಕಗೊಂಡಳು. ತಿಂಗಳಿಗೊಂದು ಎರಡು ಸಾವಿರ ರುಪಾಯಿ ಪೆಟ್ರೋಲು ಉಳಿತಾಯವಾಗುವುದನ್ನು ಅಂದಾಜಿಸಿ ಖುಷಿ ಪಟ್ಟಳು. ಅವತ್ತೇ ಇಬ್ಬರೂ ಮಾರ್ಕೆಟ್ಟಿಗೆ ಹೋಗಿ ಗೇರುಗಳಿರುವ ಹೈಫೈ ಸೈಕಲ್ಲೊಂದನ್ನು ಹದಿನೈದು ಸಾವಿರ ಕೊಟ್ಟು ತಂದೂ ಆಯಿತು. ಬರೀ ಸೈಕಲ್ಲಷ್ಟೆ ಸಾಕೆ? ಕೈಗೊಂದು ಗ್ಲೌಸು, ಪಾದಗಳಿಗೆರಡು ಚಂದನೆಯ ಬೂಟುಗಳು, ತಲೆಗೊಂದು ಹೆಲ್ಮೇಟು… ಅಬ್ಬಬ್ಬಬ್ಬಾ ಒಳ್ಳೆ ಮದುವೆ ತಯಾರಿಯಂಗಿತ್ತು!  ಮನೆಗೆ ತಂದವನೇ ಅದರಲ್ಲಿ ಕೂತು ಬೇರೆ ಬೇರೆ ಯ್ಯಾಂಗಲ್ ನಲ್ಲಿ ಫೋಟೊ ತೆಗೆಸಿಕೊಂಡು, ಫೇಸ್ ಬುಕ್ಕಿನಲ್ಲಿ ಹಾಕಿ ಸ್ನೇಹಿತರಿಂದ ಲೈಕು, ಕಮೆಂಟುಗಳ ಸುರಿಮಳೆಗಳನ್ನ ಕಣ್ತುಂಬಾ ನೋಡಿದವನಿಗೆ ಅವತ್ತು ರಾತ್ರಿ ನಿದ್ದೆ ಬರುವುದೇ ದುಸ್ತರವಾಯ್ತು. ಹಾಗೂ ಹೀಗು ಹೊರಳಾಡಿ ರಾತ್ರಿ ನಿದ್ರಾದೇವಿ ಅವರಿಸಿಕೊಂಡಾದ ಮೇಲೆ, ರಾತ್ರಿಯಲ್ಲಾ ಕನಸಿನಲ್ಲೆಲ್ಲಾ ಸೈಕಲ್ಲೆ!
ಬೆಳಿಗ್ಗೆ ಬೇಗ ಎದ್ದವನೆ ತನ್ನ ತೂಕ ೮೦ ಇರುವುದನ್ನು ಖಚಿತಪಡಿಸಿಕೊಂಡ. ಯಾಕೆಂದರೆ ಒಂದು ತಿಂಗಳ ನಂತರ ಎಷ್ಟು ಕಡಿಮೆಯಾಯಿತೆಂಬುದರ ಅಂದಾಜು ಬೇಕಲ್ಲವೆ? ತದ ನಂತರ ಜೊತೆಗೆ ತಂದ ಎಲ್ಲ ಪರಿಕರಗಳನ್ನು ಧರಿಸಿಕೊಂಡು ಒಳ್ಳೆ ಯುಧ್ಧಕ್ಕೆ ಹೊರಟವನಂತೆ,  ಸೈಕಲ್ಲು ತುಳಿಯುತ್ತ ರೋಡಿನಲ್ಲಿ ಹೋಗುತ್ತಿದ್ದರೆ ಒಂಥರ ನಾಚಿಕೆ! ಉಮೇದಿನಲ್ಲಿ ಸುಮಾರು ಐದು ಕಿಲೋಮೀಟರು ಸೈಕಲ್ಲು ತುಳಿದು ಮನೆಗೆ ಬಂದವನ ಕಾಲುಗಳು ಮಾತಾಡಲು ತೊಡಗಿದ್ದವು.  ಇವನ ಉಮೇದಿ ಎಷ್ಟು ದಿನವೋ ಅಂತ ಅತಂಕದಿಂದಿದ್ದ ಜಾನುಗೆ  ದಿನಾಲು ರೆಗುಲರ್ ಆಗಿ ಸೈಕಲ್ಲು ಹೊಡೆಯಲು ಶುರು ಮಾಡಿ  ಆಶ್ಚರ್ಯ ತಂದನಲ್ಲದೇ, ಯಾವುದಾದರು ಹುಡುಗಿ ಹಿಂದೆ ಬಿದ್ದಿರಬಹುದೆಂಬ ಗುಮಾನಿಯನ್ನೂ ಹುಟ್ಟು ಹಾಕಿದ! ಹಾಗಿರಲಿಕ್ಕಿಲ್ಲ, ತನಗಿಂತ ಪೆದ್ದ ಹುಡಿಗಿ ಹತ್ತಿರದಲ್ಲ್ಯಾರೂ ಇರಲಿಕ್ಕಿಲ್ಲ ಅಂತ ಸಮಾಧಾನ ಮಾಡಿಕೊಂಡಳು! ಅದೂ ಅಲ್ಲದೇ, ದಿನಾಲು ಹಾಲು ತಾನೇ ತಂದು, ಚಹಾ ಕೂಡ ತನ್ನ ಕೈಯಾರೆ ಮಾಡಿಕೊಂಡು ಕುಡಿಯುವ ಗಂಡ ಯಾರಿಗೆ ತಾನೆ ಇಷ್ಟವಾಗುವುದಿಲ್ಲ? ಹೀಗೆ ಒಂದು ತಿಂಗಳು ಕಳೆಯಿತು. ಕಾರಿನ ದುರ್ಬಳಕೆಯೂ ಕಡಿಮೆಯಾಗಿತ್ತು. ಎರಡು ಕೇಜಿ ತೂಕ ಕಡಿಮೆಯಾಗಿದ್ದೂ ಒಂದು ದೊಡ್ಡ ಸಾಧನೆಯೇ ಆಗಿತ್ತು. ಗಂಡ ಹೆಂಡತಿ ಕೂತುಕೊಂಡು ಒಂದು ತಿಂಗಳಲ್ಲಿ ಎಷ್ಟು ಉಳಿತಾಯವಾಗಿರಬಹುದೆಂದು ಲೆಕ್ಕ ಹಾಕಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು!
ಮತ್ತೆ ಒಂದಿಷ್ಟು ಫೋಟೊ ತೆಗೆದು ಬಿಫೋರ್ – ಆಫ್ಟರ್  ಅಂತ ಫೇಸ್ ಬುಕ್ಕಿನಲ್ಲಿ ಹಾಕಿ ಲೈಕುಗಳ ಗಿಟ್ಟಿಸಿಕೊಂಡಾಯ್ತು. ಅದೇನೋ ವಿಚಿತ್ರ, ತಮ್ಮ ಜೀವನದ ಹೆಚ್ಚು ಕಡಿಮೆ ಎಲ್ಲ ಚಟುವಟಿಕೆಗಳನ್ನು ಫೇಸ್ ಬುಕ್ಕಿನಲ್ಲಿ ಹಾಕಿಕೊಂಡು ತೋರಿಸಿಕೊಳ್ಳುವ ಈಗಿನ ಹುಡುಗ ಹುಡುಗಿಯರಿಗೆ, ತಮ್ಮ ಜೀವನವೇ ಅಲ್ಲಿ ಒಂದು ಓಪನ್ ಬುಕ್ ಆಗುವುದು ಅರಿವಿಗೇ ಬರುವುದೇ ಇಲ್ಲ!
ಹೀಗಿರುವಾಗ ಒಂದು ದಿನ…. ರೋಡಿನಲ್ಲಿ ಸೈಕಲ್ಲು ಒಳ್ಳೆ ಸ್ಟೈಲಿನಲ್ಲಿ ಹೊಡೆದುಕೊಂಡು ಹೋಗುತ್ತಿರುವಾಗ, ರೋಡಿನಲ್ಲಿ ಹೊಚ್ಚ ಹೊಸದಾಗಿ ಹಿಂದಿನ ರಾತ್ರಿ ನಿರ್ಮಾಣವಾಗಿದ್ದ ಹೊಂಡದಲ್ಲಿ ತಿಳಿಯದೇ ನುಗ್ಗಿಸಿಬಿಟ್ಟ. ಪರಿಣಾಮವಾಗಿ ಕೈಗೆ ಬಲವಾಗಿ ಪೆಟ್ಟು ಮಾಡಿಕೊಂಡುಬಿಟ್ಟ ಪಾಪ! ಅಂತೂ ಯಾರೋ ಪುಣ್ಣ್ಯಾತ್ಮರು ಅವನನ್ನು ಆಸ್ಪತ್ರೆಗೆ ಸಾಗಿಸಿ, ಹೆಂಡತಿಗೆ ಫೋನು ಮಾಡಿ ವಿಷಯ ತಿಳಿಸಿದರು. ಕೈಯ ಒಳಗಡೆಯ ಕೀಲು ಮುರಿದಿದ್ದರಿಂದ ಅಲ್ಲೊಂದೆರಡು ಮೊಳೆ ಬಡಿಯಲೇಬೇಕಾಯ್ತು!  ಹಂಗೇ ಬಡಿಯಲಾದೀತೆ? ತೋಳಿನ ಮೇಲೆ ಉದ್ದಕ್ಕೊಂದು ಗಾಯ ಮಾಡಿ ಶಸ್ತ್ರ ಪ್ರಯೋಗ ಮಾಡಿದ್ದರು.  ಚಿಕಿತ್ಸೆ ಮಾಡಿದ ಡಾಕ್ಟರು ನೀವು ಇನ್ನೂ ಒಂದು ತಿಂಗಳು ಮನೇಲೇ ರೆಸ್ಟು ತೊಗೊಬೇಕು ಅಂತ ಅಪ್ಪಣೆ ಹೊರಡಿಸಿದರು. ಇನ್ನೇನು ಮಾಡೊದು, ಮಾಡಿದ್ದುಣ್ಣೊ ಮಹರಾಯ ಅಂತ… ಅನುಭವಿಸಲೇಬೇಕಲ್ಲವೇ? ….
ಮನೆಯಲ್ಲಿ ಇದ್ದು ಇದ್ದು ಬೇಜಾರಾದಾಗತೊಡಗಿತು. ಬೇಜಾರು ಕಳೆಯಲು ಅದು ಇದು ಅಂತ ಕುರುಕಲು ಜಂಕ್ ತಿಂಡಿ ತಿನ್ನಲು ಶುರು ಹಚ್ಚಿಕೊಂಡ. ಕಾಲಿಗೂ ಸ್ವಲ್ಪ ಏಟಾಗಿದ್ದರಿಂದ ಅಡ್ಡಾಡುವುದು ಕಷ್ಟವಾಗುತ್ತಿತ್ತು. ಇವೆಲ್ಲ ಕಾರಣಗಳಿಂದ ೨ ಕೇಜಿ ಕಡಿಮೆ ಮಾಡಿಕೊಂಡಿದ್ದ ತೂಕ ೫ ಕೇಜಿ ಹೆಚ್ಚಾಗಿ ೮೩ ಕ್ಕೆ ಬಂದು ಮುಟ್ಟಿತು! ಹೊಟ್ಟೆ ಇನ್ನೂ ದೊಡ್ಡದಾಯ್ತು. ಆಸ್ಪತ್ರೆಯ ಖರ್ಚು ಎಲ್ಲಾ ಸೇರಿ ಸೈಕಲ್ಲು ತಂದು ಉಳಿಸಿದ್ದ ಹಣದ ಹತ್ತು ಪಟ್ಟು ಖರ್ಚಾಗಿತ್ತು. ಈ ಸೈಕಲ್ಲಿನ ಐಡಿಯಾ ಕೊಟ್ಟ ಲತಾ ಮೇಲೆ ಸಿಕ್ಕಾಪಟ್ಟೆ ಕೋಪ ಬಂತವನಿಗೆ. ಹೀಗೆ ಕೋಪದಿಂದಿರುವಾಗಲೇ ಲತಾ ಇವನ ಆರೋಗ್ಯ ವಿಚಾರಿಸಲು ಉಳಿದ ಸಹೋದ್ಯೋಗಿಗಳೊಂದಿಗೆ ಇವನ ಮನೆಗೆ ಬಂದಾಗ, ನೀನು ಕೊಟ್ಟ ಹಾಳು ಐಡಿಯಾದಿಂದಲೇ ಹೀಗಾಗಿದ್ದು ಅಂತ ಅವಳಿಗೆ ಅರುಹಿದನು. ಅದಕ್ಕವಳು ಬಿದ್ದು ಬಿದ್ದು ನಗಲು ಶುರು ಮಾಡಿದಾಗ ಇವನಿಗೆ ಕೆಂಡದಂಥ ಕೋಪ ಬಂತು ಆಗ ಲತಾ ತನ್ನ ಸಹಜ ವೈಯಾರದಿಂದ ಹೇಳಿದಳು “ನಾನು ತುಳಿಯೋದು ಈ ಸೈಕಲ್ಲ್ ಅಲ್ಲಾರಿ, ಮನೇಲೇ ನಿಂತಲ್ಲೆ ತುಳಿಯೋ ಸೈಕಲ್ಲು.  ನೀವು ಅವತ್ತು ನನ್ನ ಮಾತು ಪೂರ್ತಿ ಕೇಳಲೇ ಇಲ್ಲ” ಅಂದಾಗ, ಅವನು ಮಾತು ಬದಲಾಯಿಸಲೇ ಬೇಕಾಯ್ತು! ಅಂತೂ ಹೊಟ್ಟೆ ಕರಗಿಸುವ ಕನಸು ಸಧ್ಯಕ್ಕೆ ಕನಸಾಗಿಯೇ ಉಳಿದಿತ್ತು. ಆದರೆ ಲತಾ ತನ್ನ ಮನೆಗೆ ಹೋದ ಮೇಲೆ ಇವನ ಕೈ, ಕಾಲು ಮುರಿದುಕೊಂಡಿರುವ ಫೋಟೊ ಫೇಸ್ ಬುಕ್ ನಲ್ಲಿ ಹಾಕಿ ಸಿಕ್ಕಾಪಟ್ಟೆ ’ಲೈಕು’ಗಳ ಗಳಿಸಿ ಗಣೇಶನಿಗೊಂದಿಷ್ಟು ’ಮರುಕ’ಗಳ ಸುರಿಮಳೆಗೆ ಕಾರಣಳಾದಳು . ಜಾನುಗೆ ಲತಾಳ ಕೈ ಮುರಿಯುವಷ್ಟು ಸಿಟ್ಟು ಬಂದಿರುವುದ ಗಮನಿಸಿದ ಗಣೇಶ ಅವಳ ಕಣ್ಣು ತಪ್ಪಿಸಿದನು!
ಸ್ವಲ್ಪ ದಿನ ಕಳೆದಂತೆ ಗಾಯವೇನೋ ಮಾಯ್ದಿತ್ತು, ಆದರೆ ಉದ್ದಕ್ಕೆ ಡಾಕ್ಟರ್ ಕೊರೆದು ಹಾಕಿದ್ದ ಹೊಲಿಗೆ ಗುರುತು ಹಾಗೆ ಉಳಿಯಿತು. ಅದೊಂಥರ ಭಯಾನಕವಾಗಿ ಕಾಣುತ್ತಿತ್ತು. ತುಂಬು ತೋಳಿರುವ ಅಂಗಿ ಹಾಕಿದಾಗ ಕಾಣುತ್ತಿರಲಿಲ್ಲವಾದ್ದರಿಂದ ಫುಲ್ ಶರ್ಟ್ ಹಾಕಿಕೊಳ್ಳುವದು ಅನಿವಾರ್ಯವಾಗಿತ್ತವನಿಗೆ. ಒಂದು ದಿನ ಕಚೇರಿಯ ಕೆಲಸ ಮುಗಿಸಿ ಮನೆಗೆ ಬರುವುದು ತಡವಾಯ್ತು. ಅದೂ ಅಲ್ಲದೇ ಮಳೆಗಾಲದ ಸಮಯವಾದ್ದರಿಂದ ರಪ ರಪ ಮಳೆ ಬೇರೆ ಹೊಡೆಯುತ್ತಿತ್ತು. ಕಾರಿನಲ್ಲಿ ವೈಪರ್ ಹಾಕಿಕೊಂಡು, ಯವುದೋ ಹಳೆಯ ಹಾಡೊಂದನ್ನು ಕೇಳುತ್ತಾ ಬರುತ್ತಿದ್ದಾಗಲೇ, ಮನೆಗೆ ಸ್ವಲ್ಪ ಮುಂಚೆ ತಿರುಗುವ ತಿರುವಿನಲ್ಲಿ ಯಾವನೊ ಪುಣ್ಣ್ಯಾತ್ಮ ಎದುರುಗಡೆಯಿಂದ ಬೈಕಿನಲ್ಲಿ ಬಂದವನು ಇವನ ಕಾರಿಗೆ ಹೊಡೆದು ಧುಪ್ ಅಂತ ಬೀಳುವುದಕ್ಕೂ, ಮಳೆ ನಿಲ್ಲುವುದಕ್ಕೂ ಸರಿ ಹೋಯ್ತು. ಕಾರು ನಿಲ್ಲಿಸಿ ಬಿದ್ದವನಿಗೆ ಏನಾಯ್ತೋ ಅಂತ ಗಾಬರಿಯಿಂದ, ಕಾರಿನಿಂದ ಇಳಿದು ಹೊರಗೆ ಬಂದು ನಿಂತ ಗಣೇಶನಿಗೆ, ಬಿದ್ದವನಿಗೆ ಅಷ್ಟೇನು ಏಟಾಗಿಲ್ಲದಿದ್ದದ್ದು ಸಮಾಧಾನ ತಂದಿತ್ತು. ಅದೂ ಅಲ್ಲದೇ ಬೈಕಿನವನದೇ ತಪ್ಪಿದ್ದುದರಿಂದ, ಹಾಗೂ ಅದು ಬೈಕಿನ ಸವಾರನಿಗೆ ಅರಿವಾಗಿದ್ದರಿಂದಲೋ ಏನೊ ಅಲ್ಲಿ ಗಲಾಟೆಯಾಗುವ ಮುನ್ಸೂಚನೆಗಳಿರಲಿಲ್ಲ. ಆದರೆ ಅಲ್ಲಿ ಆಗಲೇ ಜಮಾಯಿಸಿದ್ದ ಎರಡು ಮೂರು ಜನರಿಗೆ ಅದು ಖಂಡಿತ ಇಷ್ಟವಾಗಲಿಲ್ಲ! ಅರೇ ಇಷ್ಟೆಲ್ಲ ಆದ ಮೇಲು ಜಗಳವಾಗಿಲ್ಲವೆಂದರೆ ಹೇಗೆ ಅಂತ  ಅವರಲ್ಲೊಬ್ಬ ಗಣೇಶನಿಗೆ ತರಾಟೆಗೆ ತೆಗೆದುಕೊಂಡು “ಎನಯ್ಯಾ ಹಿಂಗಾ ನೀನು ಕಾರು ಓಡ್ಸೋದು? ಯಾರು ನಿನಗೆ ಲೈಸನ್ಸು ಕೊಟ್ಟಿದ್ದು?” ಅಂತ ವಿಚಾರಣೆಗೆ ಶುರು ಮಾಡಿ ಗಣೇಶನಿಗೆ ತಬ್ಬಿಬ್ಬು ಮಾಡಿಬಿಟ್ಟ.
ಗಣೇಶ ಇದನ್ನು ನಿರೀಕ್ಷೆ ಮಾಡಿಲ್ಲದಿದ್ದರೂ ಇದ್ದುದರಲ್ಲೇ ಸಾವರಿಸಿಕೊಂಡು  ಅದು ಬೈಕಿನವನದ್ದೆ ತಪ್ಪೆಂದು, ತನ್ನ ಕಾರಿಗೇ ಜಾಸ್ತಿ ಏಟಾಗಿರುವುದೆಂದೂ ಸಮಝಾಯಿಷಿ ಕೊಡುವ ಪ್ರಯತ್ನ ಮಾಡುತ್ತಿರುವಂತೆಯೆ, ಆ ಮನುಷ್ಯ ಇನ್ನೂ ಜೋರಾಗಿ ಇವನಿಗೆ ದಬಾಯಿಸಲು ಶುರು ಮಾಡಿ, “ಅದೆಲ್ಲಾ ನಾವು ಕೇಳೋದಿಲ್ಲ. ಇರು ನಮ್ಮ ಜನರನ್ನ ಕರೀತಿನಿ, ಇವನು (ಬೈಕಿನವನು) ನಮ್ಮ ಏರಿಯಾದ ಹುಡುಗ, ಅವನ ಗತಿ ಏನಾಗಬೇಕು?…. ” ಅಂತ ಒದರಾಡಲು ಶುರು ಮಾಡಿದಾಗ, ಗಣೆಶನಿಗೆ ಇವನು ಕಡ್ಡಿಯನ್ನು ಗುಡ್ಡ ಮಾಡುತ್ತಿದ್ದಾನೆಂದು ಮನವರಿಕೆಯಾಯ್ತು. ಅವನು ಇನ್ನೊಂದಿಷ್ಟು ಜನರ ಸೇರಿಸಿ ಗಲಾಟೆ ಮಾಡಿ ತನ್ನ ಹತ್ತಿರ ದುಡ್ಡು ಕಿತ್ತುವದು ಗ್ಯಾರಂಟಿ ಅಂತ ಗೊತ್ತಾಗಿ ಏನು ಮಾಡುವುದೆಂದು ಯೋಚಿಸುತ್ತ ತನ್ನ ಅಂಗಿಯ ಬಲಗೈ ತೋಳು ಏರಿಸಿದಾಗ ತನ್ನ ಗಾಯದ ಭಯಂಕರವಾದ ಕಲೆ ನೋಡಿ ಆ ಕ್ಷಣಕ್ಕೊಂದು ಉಪಾಯ ಹೊಳೆಯಿತವನಿಗೆ. ಕೂಡಲೇ ಪೂರ್ತಿ ತೋಳು ಏರಿಸಿ ತನ್ನ ಗಾಯದ ಕಲೆಯನ್ನು ಆ ಮನುಷ್ಯನಿಗೆ ಕಾಣುವಂತೆ ಕೈ ಮುಂದೆ ಮಾಡಿ, ಸ್ವಲ್ಪ ಜೋರು ದನಿಯಲ್ಲೇ “ಏ ಯಾರನ್ನ ಕರಸ್ತಿ ಕರಸು. ನಾವೂ ಎಲ್ಲಾ ಮಾಡೇ ಇಲ್ಲಿಗೆ ಬಂದಿವಿ… ನಾನೂ ನೋಡೇ ಬಿಡ್ತೀನಿ ಒಂದು ಕೈ” ಅಂತೇನೇನೊ ಬೈಯಲು ಶುರು ಮಾಡಿದ. ಅವನ ಆರ್ಭಟಕ್ಕೂ ಹಾಗೂ ಅವನ ಕೈ ಮೇಲಿರುವ ಉದ್ದನೆಯ ಹೊಲಿಗೆ ಗುರುತು ನೋಡಿ ಆ ಮನುಷ್ಯ ಒಂದು ಕ್ಷಣ ಅಧೀರನಾದ. ಆ ಗಾಯದ ಕಲೆ ನೋಡಿ ಇವನೆಲ್ಲೋ ದೊಡ್ಡ ಮಾಜಿ ರೌಡಿಯೇ ಇರಬೇಕೆಂದೂ, ಇದು ಮಚ್ಚಿನಲ್ಲಿ ಹೊಡೆಸಿಕೊಂಡ ಗುರುತೇ ಅಂತ ಅಂದುಕೊಂಡು ಸ್ವಲ್ಪ ತಣ್ಣಗಾದ. “ಇರಲಿ ಬಿಡಿ ಆಗಿದ್ದು ಆಗಿ ಹೊಯ್ತು..” ಅಂತ ತನ್ನ ಮುಂದಿನ ಯೋಜನೆಗೆ ಬ್ರೇಕು ಹಾಕಿದ. ಗಣೇಶ ಅಂತೂ ಆ ಪರಿಸ್ಥಿತಿಯಿಂದ ಬಚಾವಾಗಿ ಕಾರು ಹತ್ತಿ ಮನೆಗೆ ಬಂದ.
ಸೈಕಲ್ಲು ತಂದದ್ದು ಅವನ ಕೊಬ್ಬು ಕರಗಿಸದಿದ್ದರೂ ಈ ತರಹದ ಒಂದು ದೊಡ್ಡ ಉಪಕಾರ ಮಾಡಿತ್ತು, ಜಾನುಗೆ ತನ್ನ ಸಾಹಸ ಗಾಥೆಯನ್ನು ಹೇಳಿ ಮಲಗುವಾಗ ತನ್ನ ಗಾಯದ ಕಲೆ ಹಂಗೇ ಇರಲಪ್ಪ ಅಂತ ದೇವರಿಗೆ ಕೇಳಿಕೋಳ್ಳಲು ಮರೆಯಲಿಲ್ಲ!

ನಾಯಿ ನಕ್ಕಿದ್ದು ಯಾಕೆ?!

ಪಂಜುನಲ್ಲಿ ಈ ಕತೆ ಪ್ರಕಟವಾಗಿತ್ತು.

http://www.panjumagazine.com/?p=6987

-------------------------------------------------------
 
 
ಹೊಟ್ಟೆ ಹಸಿವೆಯಿಂದ ಗುರುಗುಡುತ್ತಿತ್ತು. ಯಾಕಿವತ್ತು ಇನ್ನೂ ತಟ್ಟೆಯ ಸಪ್ಪಳವೇ ಇಲ್ಲಾ? ನಾಲಿಗೆ ಹೊರ ಚಾಚಿ, ಮುಚ್ಚಿರುವ ತಲಬಾಗಿಲನ್ನೊಮ್ಮೆ ದಿಟ್ಟಿಸಿ ನೋಡುತ್ತಾ, ತಲೆಯ ಮೇಲೆ ಸುಡುತ್ತಿರುವ ಸೂರ್ಯನ ಶಾಖವನ್ನು ತಾಳಲಾರದೇ ತನ್ನ ಗೂಡಿನೆಡೆಗೆ ಕುಂಯ್ ಗುಡುತ್ತಾ ರಾಜಾ ವಾಪಸ್ಸಾದ. ಗೂಡಿನಲ್ಲಿ ತಾಪ ಇನ್ನೂ ಜಾಸ್ತಿಯಿತ್ತು. ತಾನು ಆ ಮನೆಯನ್ನು ಸೇರಿದ್ದು ಚಿಕ್ಕ ಕುನ್ನಿಯಾಗಿದ್ದಾಗ. ತನ್ನ ಅಮ್ಮ ಟ್ರಕ್ಕಿನಡಿಯಲ್ಲಿ ಸಿಕ್ಕಿ ಸತ್ತು ತಾನು ತಬ್ಬಲಿಯಾದಾಗ, ಮುದ್ದಾಗಿದ್ದೆನೆಂದೋ ಅಥವಾ ಮುಂದೆ ಮನೆ ಕಾಯುವೆನೆಂದೋ ತನ್ನನ್ನು ಮನೆಗೆ ತಂದು ಸಾಕಿದ್ದು ಈ ಮನೆಯ ಯಜಮಾನ ಸಿದ್ದಣ್ಣ. ಊಟಕ್ಕೇನು ಕೊರತೆಯಿರಲಿಲ್ಲ ಅಲ್ಲಿ. ಸರಿಯಾದ ಸಮಯಕ್ಕೆ ತಿಂಡಿ ತೀರ್ಥಗಳು ದೊರಕಿದ್ದೂ ಅಲ್ಲದೇ, ತನಗೆ ಒಂದು ಗೂಡು ಕಟ್ಟಿ ಕೊಟ್ಟಿದ್ದು ಸಿದ್ದಣ್ಣನ ದೊಡ್ಡತನ. ಕಂಪೌಂಡಿನಲ್ಲಿದ್ದುಕೊಂಡು ಬಂದವರೆಲ್ಲರ ಕಂಡು, ಅಪರಿಚಿದ್ದರೆ ಬೊಗಳಿ ಸಿದ್ದಣ್ಣನ ವಿಶ್ವಾಸ ಬಹು ಬೇಗನೇ ಗಳಿಸಿಕೊಂಡಿದ್ದವನಿಗೆ ರಾಜ ಅಂತ ನಾಮಕರಣ ಬೇರೆ ಆಗಿತ್ತು. ವಾರಕ್ಕೊಮ್ಮೆ ಸ್ನಾನ, ಸಂಜೆಗೊಮ್ಮೆ ಹೊರಗಡೆ ಯಜಮಾನನೊಟ್ಟಿಗೆ ವಾಕಿಂಗು. ಹಬ್ಬಕ್ಕೆ ಸಿಹಿ ಊಟ, ಸ್ವರ್ಗಕ್ಕೆ ಮೂರೇ ಗೇಣು. ಆದರಿವತ್ತ್ಯಾಕೋ ಇನ್ನೂ ಊಟ ಹಾಕಿಲ್ಲದಿದ್ದದ್ದು ರಾಜಾನಿಗೆ ಬಗೆ ಹರಿಯಲಾರದ ಸಮಸ್ಸೆಯಾಗಿತ್ತು.
*
ಆ ಸುಡುಗಾಡು ಮೀಟಿಂಗು ಮುಗಿಯುವ ಲಕ್ಷಣಗಳು ಕಾಣುತ್ತಿರಲಿಲ್ಲ. ಆಗಲೇ ಗಂಟೆ ಮೂರಾಗಿತ್ತು. ಅನಂತನ ಹೊಟ್ಟೆಯಲ್ಲಿ ತಳಮಳ ಶುರುವಾಗಿತ್ತು. ಆ ಆದಿನಾರಾಯಣ ಊಟಕ್ಕೆ ಕರೆದಾಗಲೇ ಅವನೊಟ್ಟಿಗೆ ಹೋಗಿ ಬರಬೇಕಿತ್ತು. ಅವನು, ಪ್ರಳಯವಾದರೂ ತನ್ನ ಸಮಯಕ್ಕೆ ಸರಿಯಾಗಿ ಊಟ ಮುಗಿಸುತ್ತಿದ್ದ. ಮೀಟಿಂಗುಗಳಿದ್ದರಂತೂ ಇನ್ನೂ ಬೇಗನೇ ಊಟ ಮಾಡಿಕೊಂಡು ಬಂದು ಬಿಡುತ್ತಿದ್ದನವನು. ಜೊತೆಗೆ ಸಣ್ಣಗೆ ತಲೆ ನೋವು ಶುರುವಾಗಿತ್ತು. ಇನ್ನು ಸ್ವಲ್ಪ ಹೊತ್ತಿಗೆ ಹಸಿವೆಯೂ ಸತ್ತು ಹೋಗುತ್ತದೆ. ಮುಂದಿದ್ದ ಬಾಟಲಿ ನೀರನ್ನು ಗಟಗಟನೇ ಕುಡಿದು ಉದರಾಗ್ನಿಯ ಶಮನ ಮಾಡುವ ವ್ಯರ್ಥ ಪ್ರಯತ್ನ ಮಾಡಿದ. ಮೀಟಿಂಗು ಮುಗಿಯುತ್ತಲೇ ಊಟಕ್ಕೆ ಹೋಗಬೇಕೆನ್ನುವ ತವಕಕ್ಕೆ ಹಸಿವೆ ಇನ್ನೂ ಜೋರಾಗಹತ್ತಿತ್ತು. ತನ್ನ ಮ್ಯಾನೇಜರ್ ಹೇಳಿದ್ದನ್ನೇ ಹೇಳುತ್ತಾ ತವಡು ಕುಟ್ಟುತ್ತಿದ್ದ. ಅವನ ಚೇಲಾಗಳು ಅವನು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ ಮೆಚ್ಚುಗೆ ಸೂಚಿಸುತ್ತಿದ್ದರು. ತಾನು ಅಲ್ಲಿದ್ದು ಏನು ಶತಕೃತ್ಯ ಮಾಡುತ್ತಿದ್ದೇನೆ ಎನಿಸಿತವನಿಗೆ.
*
ಅಂತೂ ತಲಬಾಗಿಲು ಕಿರುಗುಟ್ಟಿದಾಗ ತನ್ನ ಬಾಲ ತನಗರಿವಿಲ್ಲದಂತೆ ಅಲ್ಲಾಡಗಿದ್ದು ರಾಜಾನ ಗಮನಕ್ಕೆ ಬಂತು. ಗಕ್ಕನೇ ಗೂಡಿನಿಂದ ಹೊರಗೋಡಿ ಬಂದವನಿಗೆ ಸಿದ್ದಣ್ಣ ನಿರಾಶೆ ಮಾಡಲಿಲ್ಲ. ತನಗಾಗಿ ಮೀಸಲಿಟ್ಟಿದ್ದ ತಟ್ಟೆಯಲ್ಲಿ ಅನ್ನವನ್ನು ಸುರಿದು ಲಗುಬಗೆಯಿಂದ ಒಳ ನಡೆದ. ಗಬಗಬನೇ ಹೊಟ್ಟೆಗಿಳಿಸಿ ಗೂಡಿಗೆ ತೆರಳಿದ ರಾಜಾಗೆ ಹೊಟ್ಟೆಯೇನೋ ತುಂಬಿತ್ತು ಆದರೆ ತನ್ನ ಯಜಮಾನನ ಮೇಲೆ ಕೋಪ ಬಂದಿತ್ತು. ಸೆಕೆಗೆ ಆ ಕೋಪ ಇನ್ನೂ ಜಾಸ್ತಿಯಾಗಿತ್ತು. ತಾನು ಇಷ್ಟು ಭಕ್ತಿಯಿಂದ ಮನೆ ಕಾದರೂ ಇವನು ಹೀಗೆ ಊಟಕ್ಕೆ ತನಗೆ ಕಾಯಿಸಬಹುದೆ? ಅನ್ನುವುದು ರಾಜಾನ ಸಿಟ್ಟಿಗೆ ಕಾರಣವಾಗಿತ್ತು. ಹೊಟ್ಟೆ ತಣ್ಣಗಾಗಿದ್ದರಿಂದ ಸ್ವಲ್ಪ ಜೋಂಪು ಹತ್ತಿತ್ತು.
*
ಕೊನೆಗೂ ಮೀಟಿಂಗ್ ಮುಗಿದಾಗ ನಾಲ್ಕು ಘಂಟೆ. ಲಗುಬಗೆಯಿಂದ ಊಟಕ್ಕೆ ಹೊರಟವನ ಹೊಟ್ಟೆ ತಮಟೆ ಬಾರಿಸುತ್ತಿದ್ದರೆ, ತಲೆಯಲ್ಲಿ ಯೋಚನೆಗಳು ಮುತ್ತಿಕೊಂಡಿದ್ದವು. ತಾನು ಈ ಕಂಪನಿ ಸೇರಿ ಅವತ್ತಿಗೆ ಎಂಟು ವರುಷಗಳಾಗಿತ್ತು. ಎಷ್ಟೇ ಹಾರ್ಡ್ ವರ್ಕ್ ಮಾಡಿದರೂ ತನ್ನ ಪ್ರತಿಭೆಗೆ ತಕ್ಕ ಸ್ಥಾನ ಸಿಕ್ಕಿಲ್ಲಾ ಅನ್ನುವ ಕೊರಗು ಇವನನ್ನು ಕಾಡುತ್ತಿತ್ತು. ಮ್ಯಾನೇಜರ್ ನ ಬಾಲ ಬಡಿಯುತ್ತಿದ್ದವರಿಗೆ ತನಗಿಂತ ಮೇಲಿನ ದರ್ಜೆ ಸಿಕ್ಕಿದ್ದು ಗಾಯದ ಮೇಲಿನ ಬರೆಯಂತಾಗಿತ್ತು. ಕೆಲಸವಾಗಬೇಕಾದಾಗ ತನ್ನ ಕಾಲು ಹಿಡಿದು ಗೋಗರೆದು ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಅಪ್ರೈಸಲ್ ಇದ್ದಾಗ ಮಾತ್ರ ಇವನ ಸಣ್ಣ ಸಣ್ಣ ತಪ್ಪುಗಳನ್ನು ಎತ್ತಿ ಹಿಡಿಯುತ್ತಿದ್ದ. ಅವನು   ಹೇಳಿದ ಕೆಲಸಗಳನ್ನೆಲ್ಲಾ ತಕರಾರಿಲ್ಲದೇ ಮಾಡುತ್ತಿರುವುದೇ ತನ್ನ ತಪ್ಪಿರಬಹುದು ಅಂತವನಿಗೆಷ್ಟೋ ಸಲ ಅನಿಸಿದ್ದಿದೆ. ಯಾಂತ್ರಿಕವಾಗಿ ಊಟದ ಆಟ ಮುಗಿದಿತ್ತು. ರಾತ್ರಿಯವರೆಗೆ ಕೆಲಸಗಳು ತುಂಬಿದ್ದವು. ಇವತ್ತು ರಾತ್ರಿ ಮನೆಗೆ ಹೋಗುವಂತಾದರೆ ಸಾಕು ಅನಿಸಿತ್ತವನಿಗೆ.
*
ಗೇಟಿನ ಬಳಿ ಯಾರೋ ಬಿಕ್ಷುಕ ಬಂದಿರುವುದು ಅಧೇಗೋ ನಿದ್ದೆಯಲ್ಲಿದ್ದ ರಾಜಾನನ್ನು ಬಡಿದೆಬ್ಬಿಸಿತು. ಕೂಡಲೇ ಕಾರ್ಯ ತತ್ಪರನಾಗಿ ಬೌ ಎನ್ನುವ ತನ್ನ ವಿಶಿಷ್ಠ ಸ್ವರದಲ್ಲಿ ಅರಚತೊಡಗಿ, ಬಿಕ್ಷುಕ ಅಲ್ಲಿಂದ ಕಾಲು ಕಿತ್ತಾಗಲೇ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಯಜಮಾನ ಅದನ್ನು ಗಮನಿಸಿರಬಹುದೇ ಎಂದು ತಲಬಾಗಿಲ ಕಡೆಗೆ ಒಮ್ಮೆ ನೋಡಿತು. ಯಾರೂ ಇಲ್ಲದ್ದರಿಂದ ನಿರಾಶೆಯಿಂದ ಗೋಣು ಚೆಲ್ಲಿ ಮಲಗಿ ಮತ್ತೆ ಯೋಚನೆಗೆ ತೊಡಗಿತು. ತಾನಿಲ್ಲದಿದ್ದರೆ ಈ ಮನೆಯ ಗತಿಯೇನು? ಹಗಲು ರಾತ್ರಿಯೆನ್ನದೆ ತಾನು ಕಾಯುತ್ತಿರುವುದಕ್ಕೇ ಅಲ್ಲವೇ ಇವರಿಷ್ಟು ನಿಶ್ಚಿಂತರಾಗಿ ಮಲಗುವುದು?  ತಾನು ಇಲ್ಲದಾಗಲೇ ಈ ಯಜಮಾನನಿಗೆ ಬುದ್ಧಿ ಬರುವುದೇನೊ. ಇವನಿಗಿಂತ ಒಳ್ಳೆಯವನು ತನಗೆ ಸಿಕ್ಕೇ ಸಿಗುತ್ತಾನೆ. ಇವನಿಗೆ ಬುದ್ಧಿ ಕಲಿಸಲೇಬೇಕು ಅನ್ನುವ ಹಟ್ಟಕ್ಕೆ ಬಿದ್ದಾಗಿತ್ತು.
*
ರಾತ್ರಿ ಅಂತೂ ಅನಂತ ಮನೆ ತಲುಪಿದಾಗ, ಬೆಳಗಾಗಲು ಇನ್ನು ಬರೀ ಮೂರೆ ಗಂಟೆಗಳು ಬಾಕಿ ಅನ್ನುವ ಯೋಚನೆಗೇ ಅವನಿಗೆ ನಿದ್ದೆ ಬರುವ ಲಕ್ಷಣಗಳಿರಲಿಲ್ಲ. ಈ ಕಂಪನಿಯೂ ಬೇಡ, ಇವರು ಕೊಡುವ ಪುಡಿ ಕಾಸೂ ಬೇಡ, ಬೇರೆಲ್ಲಾದರೂ ನೋಡಬೇಕು ಅನ್ನುತ್ತ ನಿದ್ದೆ ಹೋದವನಿಗೆ, ಬೆಳಗಿನ ಅಲಾರ್ಮ್ ತರಹ ಬಡಿದೆಬ್ಬಿಸಿದ್ದು ಅವನ ಮ್ಯನೇಜರ್ ನ ಫೋನು. ಈ ಮುಂಡೆ ಮಗ ರಾತ್ರಿಯೆಲ್ಲಾ ಸುಖವಾಗಿ ನಿದ್ದೆ ಮಾಡಿರುತ್ತಾನೆ. ಹಗಲು ನಮ್ಮನ್ನು ಕಾಡುತ್ತಾನೆ ಎನ್ನುತ್ತ ಫೋನು ರಿಸೀವ್ ಮಾಡಿದವನಿಗೆ ಆಫಿಸಿಗೆ ಇನ್ನೂ ಬಂದಿಲ್ಲ ಅಂತ ಕೂಗಾಡಿ ಅವನ ನೆಮ್ಮದಿಯನ್ನೇ ಹಾಳು ಮಾಡಿದ. ತನ್ನನ್ನೊಂದು ಪ್ರಾಣಿ ಅಥವಾ ಗುಲಾಮನಂತೆ ನಡೆಸಿಕೊಳ್ಳುತ್ತಿರುವ ಬಾಸ್ ಬಗ್ಗೆ ಅಸಮಾಧಾನವಾಗಿತ್ತು. ಇವನು ಕರೆದಾಗ ಬರಲು ತಾನೇನು ಸೂಳೆಯೆ? ತನಗೆ ಬರುವ ಕೋಪಕ್ಕೆ ಸಿಕ್ಕದ್ದನ್ನೆಲ್ಲಾ ಎತ್ತಿ ಕುಕ್ಕುವ ಮನಸ್ಸಾದರೂ, ಬಡವನ ಸಿಟ್ಟು ದವಡೆಗೆ ಮೂಲ ಅಂದ್ಕೊಂಡು ಸುಮ್ಮನಾದ.
ಅವತ್ತು ಎಂದಿನಂತೆ ಬೆಳಗಾಗಿತ್ತಾದರೂ ರಾಜಾನಿಗೆ ಉತ್ಸಾಹವಿರಲಿಲ್ಲ. ಅದಕ್ಕೆ ರಾತ್ರಿಯೆಲ್ಲ ಇಲ್ಲಿಂದ ಹೇಗೆ ತಪ್ಪಿಸಿಕೊಂಡು ಓಡಿ ಹೋಗಲಿ ಅನ್ನುವ ಚಿಂತೆಯಲ್ಲಿ ನಿದ್ದೇನೆ ಬಂದಿರಲಿಲ್ಲ. ಬೆಳಗ್ಗೆ ಪೇಪರ್ ತರಲು ಅಂತ ಹೊರಗೆ ಬಂದ ಸಿದ್ದಣ್ಣ. ಅವನು ಹಾಗೆ ಹೊರ ಬಂದಾಗಗಲೆಲ್ಲಾ ರಾಜಾನನ್ನೂ ಗೇಟಿನ ಹೊರಗೆ ಬಿಡುತ್ತಿದ್ದ. ರಾಜಾನಿಗೆ ಅದೊಂದು ತರಹದ ಅರ್ಧ ಗಂಟೆಯ ಸ್ವಾತಂತ್ರ! ಅಲ್ಲೆಲ್ಲಾ ಸುತ್ತ ಮುತ್ತಲಿನ ಪರಿಸರವನ್ನೆಲ್ಲಾ ಜಾಲಾಡಿ, ಯಜಮಾನ ಹೊರಗೆ ನಿಲ್ಲಿಸಿದ್ದ ಅವನ ಕಾರಿನ ಚಕ್ರವೊಂದಕ್ಕೆ ಅವನ ಕಣ್ಣು ತಪ್ಪಿಸಿ ಉಚ್ಚೆ ಹೊಯ್ದರೆ ಅದೇ ದೊಡ್ಡ ಸಾಧನೆ! ಇವತ್ತೂ ಕೂಡ ರಾಜಾನನ್ನು ಅಡ್ಡಾಡಿ ಬರಲಿ ಅಂತ ಗೇಟಿನ ಹೊರಗೆ ಬಿಟ್ಟಿದ್ದೆ ಚಾನ್ಸು ಅಂತ ಅದು ಓಡಿ ಹೋಗಿ ಬಿಡೋದೆ!
ಬಾಸ್ ನ ಹಾಳು ಪೋನ್ ಕರೆಗೆ ನಿದ್ದೆಯಂತೂ ಹಾಳಾಗಿತ್ತು. ಬೆಳಗಿನ ಟೀ ಮಾಡಿಕೊಂಡು ಹಾಗೇ ಕಪ್ಪು ಕೈಯಲ್ಲಿ ಹಿಡ್ಕೊಂಡು ವರಾಂಡದಲ್ಲಿ ಬಂದು ನಿಂತು  ಗೇಟಿನ ಹೊರಗೆ ಕಣ್ಣು ಹಾಯಿಸಿದವನಿಗೆ ಕಂಡದ್ದು ಕಂಗಾಲಾಗಿ ತನ್ನ ನೀಳ ನಾಲಿಗೆಯ ಹೊರ ಚಾಚಿ ನಿಂತಿದ್ದ ನಾಯಿ, ರಾಜಾ! ಅನಂತನಿಗೆ ಮೊದಲಿನಿಂದಲೂ ನಾಯಿಗಳ ಕಂಡರೆ ಪ್ರೀತಿ. ಮೊದಲು ತನ್ನ ಮನೆಯಲ್ಲೊಂದು ನಾಯಿಯನ್ನೂ ಸಾಕಿದ್ದ. ಅದಕ್ಕೆಲ್ಲ ತಕ್ಕುದಾದ ವ್ಯವಸ್ಥೆಯೂ ಮನೆಯಲ್ಲಿತ್ತು. ಆದರೆ ಅದು ಸತ್ತ ಮೇಲೆ ಬೇರೆ ನಾಯಿ ಸಾಕಿರಲಿಲ್ಲ. ರಾಜಾನನ್ನು ನೋಡಿ ಅದು ಒಳ್ಳೆಯ ಜಾತಿಯ ನಾಯಿಯೇ ಅಂತ ಅವನಿಗೆ ಅಂದಾಜಾಗಿ ಹೋಯಿತು. ಕೂಡಲೇ ಒಳಗೆ ಹೋಗಿ ಒಂದಿಷ್ಟು ಬ್ರೆಡ್ಡು , ತಾನು ತಿಂದು ಉಳಿದಿದ್ದ ಪಿಡ್ಜ಼ಾವನ್ನು ಆಫರ್ ಮಾಡಿದಾಗ, ಓಡೋಡಿ ಬಂದು ಹಸಿದು ಕಂಗಾಲಾಗಿದ್ದ ರಾಜಾ ಒಂಚೂರು ಉಳಿಸದಂತೆ ತಿಂದು ಚೊಕ್ಕ ಮಾಡಿತ್ತು. ಸಿದ್ದಣ್ಣನ ಅನ್ನ ತಿಂದು ಜಿಡ್ಡು ಗಟ್ಟಿದ್ದ ನಾಲಿಗೆಯ ಎಲ್ಲ ಕಡೆಯಿಂದ ಜೀರ್ಣ ರಸಗಳು ಪ್ರವಾಹದೋಪಾದಿಯಲ್ಲಿ ಚಿಮ್ಮಿ ಹರಿಯುತ್ತಿದ್ದುದು ಅದರ ಗಮನಕ್ಕೆ ಬಂತು. ಅನ್ನದ ಋಣಕ್ಕೆ ಬಿದ್ದಾಗಿತ್ತು. ತಿಂದಾದ ಮೇಲೆ ಬಾಲ ಇನ್ನೂ ಜೋರಾಗಿ ಬಡೆದುಕೊಳ್ಳುತ್ತಿತ್ತು. ಹೊಸ ಯಜಮಾನನನ್ನು ಒಪ್ಪಿಕೊಂಡಾಗಿತ್ತು. ಅನಂತ ತನ್ನ ಕೊರಳ ಮೇಲೆ ಕೈ ಆಡಿಸಿದ್ದು ಇನ್ನೂ ಹಿತವೆನಿಸಿತ್ತು.
*
ದಿನಗಳೆದಂತೆ ಇಬ್ಬರೂ ಒಬ್ಬರಿಗೊಬ್ಬರು ಹೊಂದಿಕೊಂಡರು. ಅವನು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಸಂಜೆಯವರೆಗೆ ಆಗುವಷ್ಟು ಊಟವನ್ನಿಕ್ಕಿ ಹೋಗುತ್ತಿದ್ದುದರಿಂದ ರಾಜನಿಗೆ ಯಾವುದೇ ಕೊರತೆಯಿರಲಿಲ್ಲ. ಸಿದ್ದಣ್ಣನ ಕೊರಳು ಕೊರೆಯುವ ಕಬ್ಬಿಣದ ಸರಪಳಿಗಿಂತ ಅನಂತ ಹಾಕಿದ್ದ ಬಟ್ಟೆಯ ಸರಪಳಿ ಹಿತವಾಗಿತ್ತು. ಇಲ್ಲಿಯ ಗೂಡು ಅಲ್ಲಿಯದಕ್ಕಿಂತ ತಂಪಾಗಿತ್ತು, ಯಾಕೆಂದರೆ ಪಕ್ಕದಲ್ಲೇ ಮರವೊಂದಿತ್ತು. ಹತ್ತಿರದಲ್ಲಿ ಗಾರ್ಡನ್ ಇರಲಿಲ್ಲವಾದ್ದರಿಂದ ಸ್ವಲ್ಪ ದೂರದಲ್ಲಿರುವ ಗಾರ್ಡನ್ ಗೆ ಕಾರಿನಲ್ಲೇ ರಾಜಾನನ್ನು ಕರೆದುಕೊಂಡು ಹೋಗುತ್ತಿದ್ದದ್ದು ರಾಜನಿಗೆ ಹೆಚ್ಚಿನ ಮರ್ಯಾದೆಯನ್ನು ಕೊಟ್ಟಿತ್ತು.
ಆದರೆ, ಹೀಗೆ ಒಂದು ದಿನ, ಸಂಜೆ ಕಳೆದು ರಾತ್ರಿಯಾದರೂ ಹೊಸ ಯಜಮಾನ ಇನ್ನೂ ಮನೆಗೆ ಬರಲಿಲ್ಲವೆನ್ನುವದು ರಾಜನ ಆತಂಕಕ್ಕೆ ಕಾರಣವಾಗಿತ್ತು. ಬೆಳಿಗ್ಗೆ ಇಟ್ಟು ಹೋಗಿದ್ದ ಆಹಾರ ಖಾಲಿಯಾಗಿತ್ತು. ಹೊಟ್ಟೆ ಎಷ್ಟೋ ದಿನಗಳ ಬಳಿಕ ಮತ್ತೇ ಗುರುಗುಡತೊಡಗಿತ್ತು. ಕಾದು ಕಾದು ಸುಸ್ತಾಗಿ ನಿದ್ದೆಯೂ ಬರದೆ ಅತ್ತಿಂದಿತ್ತ ಹೊರಳಾಡಿಯೇ ರಾತ್ರಿ ಕಳೆದಿತ್ತು. ಅನಂತ ಮನೆಗೆ ಬಂದಿದ್ದು ಮರುದಿನ ಬೆಳಿಗ್ಗೆಯೇ. ರಾಜನಿಗೆ ಯಾಕೋ ತನ್ನ ಹಳೆಯ ಯಜಮಾನ ನೆನಪಾಗತೊಡಗಿದ. ಅವನು ತಡ ಮಾಡಿದರೂ ಊಟವಾದರೂ ಹಾಕುತ್ತಿದ್ದ, ಇಡೀ ರಾತ್ರಿ ಉಪವಾಸ ಕೆಡವಿದ್ದ ಹೊಸ ಯಜಮಾನನ ವರ್ತನೆ ತನಗೆ ಯಾಕೋ ಸರಿ ಕಾಣಲಿಲ್ಲ. ಎಲ್ಲಿ ಹೋದರೂ ತನ್ನ ಕಷ್ಟಗಳಿಗೆ ಕೊನೆಯೇ ಇಲ್ಲ ಅಂತ ರಾಜಾನಿಗೆ ಮನದಟ್ಟಾಗಿತ್ತು.
ಮಾಮುಲಿಯಾಗಿ ಟೀ ಕಪ್ಪು ಹೀಡಿದು ಹೊರಗೆ ಬಂದ ಯಜಮಾನ ಫೋನಿನಲ್ಲಿ ಯರೊಟ್ಟಿಗೋ ಮಾತಾಡುತ್ತಿದ್ದ. ತಾನು ಇಡೀ ರಾತ್ರಿ ಉಪವಾಸವಿದ್ದ ಬಗ್ಗೆ ಇವನಿಗೆ ಎಳ್ಳಷ್ಟು ಕಾಳಾಜಿಯೇ ಇಲ್ಲವೆ? ರಾಜಾ ಅವನ ದುರುಗುಟ್ಟಿ ನೋಡುತ್ತಿದ್ದ. ಆಗಾಗ ಕುಂಯ್ ಗುಟ್ಟಿ ಅವನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದ.
ಅನಂತ ಮಾತ್ರ ತನ್ನದೇ ಲೋಕದಲ್ಲಿ ಮುಳುಗಿದ್ದ. ಫೋನಿನಲ್ಲಿ ತನ್ನ ಯಾರೋ ಮಿತ್ರನಿಗೆ ತನಗೆ ಹೊಸ ಕಂಪನಿಯಲಿ ಕೆಲಸ ಸಿಕ್ಕ ಬಗ್ಗೆ ಹೇಳಿಕೊಳ್ಳುತ್ತಿದ್ದ. ಅಲ್ಲಿ ಇಲ್ಲಿಗಿಂತ ಚೆನ್ನಾಗಿರುವುದೆಂತಲೂ, ಸಂಬಳವೂ ಸಿಕ್ಕಾಪಟ್ಟೆ ಜಾಸ್ತಿಯೆಂತಲೂ ಹೇಳುತ್ತಿದ್ದ. ತನ್ನ ಕಷ್ಟಗಳಿಗಿನ್ನು ಮುಕ್ತಿ. ತಾನು ಆರಾಮವಾಗಿರಬಹುದೆಂದು ಖುಷಿ ಹಂಚಿಕೊಳ್ಳುತ್ತಿದ್ದ. ಮನುಷ್ಯರ ಒಡನಾಟದಿಂದಲೋ ಏನೊ ರಾಜಾನಿಗೆ ಅವರ ಮಾತು ತಿಳಿಯದಿದ್ದರೂ ಭಾವನೆಗಳು ಅರ್ಥವಾಗುತ್ತಿದ್ದವು. ಅದರ ಕಿವಿ ನಿಮಿರಿದವು. ಅವನು ಫೋನಲ್ಲಿ ಹೇಳುತ್ತಿದ್ದುದನ್ನು ಲಕ್ಶ್ಯಗೊಟ್ಟು ಕೇಳುತ್ತಿತ್ತು. …. ಅನಂತ ಹಾಗೆ ಮಾತನಾಡುತ್ತಾ ಅಕಸ್ಮಾತಾಗಿ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ರಾಜಾನ ಮುಖ ಕಂಡು, ಕೂಲಂಕುಷವಾಗಿ ಗಮನಿಸಿದ. ಬೆರಗುಗಣ್ಣಿನಿಂದ ಮತ್ತೆ ಮತ್ತೆ ಅದರ ಮುಖವನ್ನೇ ನೋಡಿದ, ರಾಜಾ ನಗುತ್ತಿರುವಂತೆ ಅವನಿಗೆ ಭಾಸವಾಗಿ ಬೆಚ್ಚಿಬಿದ್ದ! 



 

Saturday, February 1, 2014

ಕನ್ನಡೋದ್ಧಾರ!

ಪಂಜುನಲ್ಲಿ ಪ್ರಕಟವಾಗಿದ್ದ "ಕನ್ನಡೋದ್ಧಾರ!", ಓದಿ ಅನಂದಿಸಿ!
 
ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಇನ್ನೂ ಒಂದು ಸಲಾನೂ ಸಿನಿಮಾಗೇ ಕರೆದುಕೊಂಡು ಹೋಗಿಲ್ಲಾ ಅಂತ ಅವತ್ಯಾಕೋ ಅನಿರೀಕ್ಷಿತವಾಗಿ ನೆನಪಾಗಿ ಜಾನು ರಂಪ ಮಾಡಿಕೊಂಡಿದ್ದಳು. ಗಪ್ಪಣ್ಣನಿಗೆ ಅವಳ್ಯಾಕೋ ಸಿಕ್ಕಾಪಟ್ಟೆ ತವರನ್ನು ಮಿಸ್ ಮಾಡಿಕೊಳ್ಳುತ್ತಿರಬಹುದೇ ಎಂದು ಅನಿಸಿತಾದ್ದರಿಂದ, ತಡ ಮಾಡದೇ … "ಅದಕ್ಕೇನಂತ ಇವತ್ತ ಹೋಗೋಣ ನಡಿ" ಅಂದು ಜಾನುನಲ್ಲಿ ಜಾನ್ ತಂದ! ಕೂಡಲೇ ಜಾನು ಕಾರ್ಯಪ್ರವೃತ್ತಳಾಗಿ, ಪಲ್ಲಂಗದ ಕೆಳಗಿನ ಮೂಲೆಯಲ್ಲಿ ಜೋಪಾನವಾಗಿ ಎಸೆದಿದ್ದ ಅವತ್ತಿನ ಪೇಪರ್ ಅನ್ನು ಎತ್ತಿ ತಂದು ಅದರಲ್ಲಿನ ಸಾಪ್ತಾಹಿಕ ಪುರವಣಿಯಲ್ಲಿದ್ದ ಅಸಂಖ್ಯಾತ ಸಿನಿಮಾಗಳ ಯಾದಿಯಲ್ಲಿ ಒಂದಕ್ಕೆ ಬೆರಳು ಹಿಡಿದು ತೋರಿಸಿದಾಗ ಗಪ್ಪಣ್ಣನ ಎದೆಯಲ್ಲಿ ರಕ್ತ ಹೆಪ್ಪುಗಟ್ಟಿದಂತಾಗಿತ್ತು! ಅವಳು ನೋಡಲು ಬಯಸಿದ್ದ ಸಿನಿಮಾ ಶಾಹ್ ರುಖ್ ಖಾನ್ ನ ’ಚೆನ್ನೈ ಎಕ್ಸ್ ಪ್ರೆಸ್’ ಎಂಬ ಹಿಂದಿ ಸಿನಿಮಾ. ಈ ಖಾನ್ ನ ಎಲ್ಲ ಹಲ್ಲುಗಳುದುರಿ ಮುದುಕನಾದರೂ ಅವನ ಅಭಿಮಾನಿಗಳಿಗೇನು ಕೊರತೆಯಿಲ್ಲ. ಆ ಹೆಣ್ಣೂ ಮಕ್ಕಳಿಗಂತೂ ಏನು ಮೋಡಿ ಮಾಡಿದ್ದಾನೋ ನನ ಮಗಾ ಅಂತ ಮಾತ್ಸರ್ಯದಿಂದ ತಾನೇನು ಅವನಿಗೆ ಕಡಿಮೆಯಿರಬಹುದು ಅಂತ ಕನ್ನಡಿ ನೋಡಿಕೊಂಡ. ತನ್ನ ಅಖಂಡವಾದ ಸಿಂಗಲ್ ಪ್ಯಾಕ್ ಬಾಡಿ ಕಂಡು ಬೆಚ್ಚಿ ಬಿದ್ದ! ........  

http://www.panjumagazine.com/?p=6134

 

Friday, January 24, 2014

ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸ

ನಮ್ಮ ಪ್ರವಾಸ ಕಥನ ಪಂಜು ಪತ್ರಿಕೆಯಲ್ಲಿ ಐದು ಭಾಗಗಳಲ್ಲಿ ಪ್ರಕಟವಾಗಿತ್ತು. ಕೆಳಗೆ ಐದು ಭಾಗಗಳ ಲಿಂಕ್ ಇವೆ. ಓದಿ ಆನಂದಿಸಿ :)

ಮೊದಲನೇ ಭಾಗ: http://www.panjumagazine.com/?p=5012

"ಯಾವುದೆ ಪ್ರವಾಸದಲ್ಲಿ ಅನುಭವಿಸುವ ಅನಂದಕ್ಕಿಂತ ಆ ಪ್ರವಾಸಕ್ಕಾಗಿ ಮಾಡುವ ಸಿಧ್ಧತೆ ಹಾಗೂ ಅದರ ಕಲ್ಪನೆಯಲ್ಲಿ ಸಿಗುವ ಮಜವೇ ಅದ್ಭುತ!" ಅಂತ ನಮ್ಮ ಕೃಷ್ಣ ಮೂರ್ತಿ ಅವರ ಅಂಬೋಣ. ಅದು ನಿಜವೂ ಹೌದು. ಹಾಗೂ ಆ ಮಾತು ಪ್ರವಾಸಕ್ಕಷ್ಟೇ ಸೀಮಿತವಲ್ಲ. ಯಾವುದೇ ವಿಷಯದಲ್ಲೂ ಕಲ್ಪನೆಯಲ್ಲಿರುವ ಖುಷಿಯೇ ಬೇರೆ. ಹೀಗೆ ನಮ್ಮ ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಪರಿಕಲ್ಪನೆ ಶುರುವಾದದ್ದು ಮೂರು ತಿಂಗಳ ಹಿಂದೆ. ಎಲ್ಲೆಲ್ಲಿ ಹೋಗುವುದು, ಏನೇನು ಸಿದ್ಧತೆಗಳು, ಎಲ್ಲಿ ಪ್ಲೇನು, ಎಲ್ಲಿ ಟ್ರೇನು  [...]

ಎರಡನೇ ಭಾಗ: http://www.panjumagazine.com/?p=5086

ಇಷ್ಟು ಬೇಗ ಬೆಳಕಾಯ್ತೆ!? ಒಂದೊಂದು ಸಲ ನಿದ್ದೆ ಸಾಲದಾದಾಗ, ಏಳಲೇಬೇಕಾದ ಅನಿವಾರ್ಯತೆಯಿದ್ದಾಗ ಹಾಗನ್ನಿಸಿಬಿಡುತ್ತದೆ! ಇನ್ನೂ ಹಳೆಯದರಂತೇ ಗೋಚರಿಸುವ ಬಂಗಾಲದ New Jalpaiguri ಎಂಬ ಊರಿನಲ್ಲಿ ಗಂಟು ಮೂಟೆಗಳೊಂದಿಗೆ ಬೆಳ್ಳಂ ಬೆಳಿಗ್ಗೆ ಟ್ರೇನಿನಿಂದ ಇಳಿದಾಗ, ಇಲ್ಲಿ ಹೊಸ (New) ದೇನಿರಬಹುದು ಅಂತ ಯೋಚಿಸುತ್ತಲೇ ಹೊರಗೆ ಬಂದಾಗ ಎರಡು ಝೈಲೋ ಗಾಡಿಗಳು ಹಾಗೂ ಇಬ್ಬರು ಸಾರಥಿಗಳು ನಮಗಾಗಿ ಕಾಯ್ದಿದ್ದರು. ಒಬ್ಬನ ಹೆಸರು ಸರೋಜ್ ಇನ್ನೊಬ್ಬ ನೀ ಮಾ. ಇಬ್ಬರೂ ನೇಪಾಳಿಗಳು. ನೀ ಮಾ ಅಂದರೆ ನೇಪಾಳೀ ಭಾಷೆಯಲ್ಲಿ ಸುರ್ಯೋದಯವಂತೆ. [...]

ಮೂರನೇ ಭಾಗ: http://www.panjumagazine.com/?p=5208

ಟೈಗರ್ ಹಿಲ್ ನ ಸುರ್ಯೋದಯ ನೋಡಿ ಬಂದು ಒಂಭತ್ತು ಗಂಟೆಗೆಲ್ಲಾ ತಯಾರಾಗಿ ಹೋಟೆಲ್ ಹೊರಗೆ ನಿಂತವರ ಮುಖಗಳು ಲವಲವಿಕೆಯಿಂದ ಕಂಗೊಳಿಸುತ್ತಿದ್ದವು. ಯಾಕಂತೀರಾ? ಬೆಂಗಳೂರು ಬಿಟ್ಟ ಮೇಲೆ ಮೊದಲ ಬಾರಿಗೆ ಎಲ್ಲರಿಗೂ ಸ್ನಾನ ಮಾಡುವ ಅವಕಾಶ ಸಿಕ್ಕಿದ್ದು ಅವತ್ತೇ! ತಾನು ಹೇಳಿದ್ದ ಟೈಮಿಗೆ ನಾವು ಸರಿಯಾಗಿ ಬಂದಿಲ್ಲಾ ಅಂತ ನೀಮಾ ಮುಖ ಸಿಂಡರಿಸಿಕೊಂಡಿದ್ದ. ಮೊದಲೇ ಕೆಂಪಗಿದ್ದವನು ಇನ್ನೂ ಕೆಂಪಾಗಿದ್ದ ಏನೇನೋ ಪ್ರಯತ್ನಗಳನ್ನು ಮಾಡಿ ಅವನ ಮುಖದ ಗಂಟುಗಳನ್ನು ಯಶಸ್ವಿಯಾಗಿ ಬಿಡಿಸಿದೆವು. [...]

ನಾಲ್ಕನೇ ಭಾಗ: http://www.panjumagazine.com/?p=5336

  ಅವತ್ತು ಬೆಳಿಗ್ಗೆ ದಾರ್ಜಿಲಿಂಗ್ ಗೆ ವಿದಾಯ ಹೇಳಿ ಕಾಲಿಮ್ ಪಾಂಗ್‍ಗೆ ನಮ್ಮ ಸವಾರಿ ಸಾಗಿತ್ತು. ಮಾರ್ಗ ಮಧ್ಯದಲ್ಲಿ ಒಂದು ಅದ್ಭುತ ಜಾಗದಲ್ಲಿ ಟ್ರೆಕ್ಕಿಂಗ್‍ಗೆ ಕರೆದೊಯ್ಯುವುದಾಗಿ ಭರವಸೆ ಕೊಟ್ಟು ನಮ್ಮನ್ನು ಕುತೂಹಲಿಗಳನ್ನಾಗಿರಿಸಿದ್ದ ನಮ್ಮ ನೀ ಮಾ. ನಾವು ಹೊರಟು ಸುಮಾರು ಎರಡು ಗಂಟೆಗಳಾಗಿತ್ತೇನೊ ಲಾಮಾ ಹಟ್ಟಾ ಅನ್ನುವ ಒಂದು ಹಳ್ಳಿಯಲ್ಲಿ ನಮ್ಮ ಗಾಡಿ ನಿಂತಿತು. ಅದು ಮುಖ್ಯ ರಸ್ತೆಯಲ್ಲೇ ಇರುವ ಒಂದು ಹಳ್ಳಿ.  [...]

ಐದನೇ ಭಾಗ: http://www.panjumagazine.com/?p=5432

ಕಾಲಿಮ್ ಫಾಂಗ್ ನಿಂದ ಗ್ಯಾಂಗ್ ಟಾಕ್ ಗೆ ಹೋಗುತ್ತಿದ್ದಾಗ ಮಧ್ಯೆ ದಾರಿಯಲ್ಲಿ ನಮಗರಿವಿಲ್ಲದಂತೆ ಒಮ್ಮೆಲೆ ಬೆಂಗಳೂರಿನ ನೆನಪಾಯಿತು. ಅದಕ್ಕಿದ್ದ ಒಂದೇ ಕಾರಣವೆಂದರೆ… ಈ ಪ್ರವಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅರ್ಧ ಗಂಟೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕೊಂಡಿದ್ವಿ! ಅಂತೂ ಪೋಲಿಸರಿಲ್ಲದಿದ್ದರೂ ಹೇಗೋ ಆ ಜಾಮ್ ಕರಗಿ ನಮ್ಮ ಪಯಣ ಮುಂದುವರಿಯಿತು. ಗ್ಯಾಂಗ್ ಟಾಕ್, ಸಿಕ್ಕಿಂ ಎಂಬ ಪುಟ್ಟ ರಾಜ್ಯದ ರಾಜಧಾನಿ. ಆ ಊರಿಗೆ ಪ್ರವೇಶಿಸುವುದಕ್ಕೆ ಮೊದಲು, ಬಂಗಾಲ ಹಾಗೂ ಸಿಕ್ಕಿಂ ನ ಗಡಿಯಲ್ಲಿ [...]

Sunday, October 27, 2013

ನಾನು ಬಡವ?

(ಪಂಜು ಪತ್ರಿಕೆಯಲ್ಲಿ ದಿ. ೩೦ ಸೆಪ್ಟೆಂಬರ್, ೨೦೧೩ ರಂದು ಪ್ರಕಟವಾಗಿತ್ತು)
http://www.panjumagazine.com/?p=4620

-------------------------------------------------------------------------------

ಮೂರ್ತಿ ಯಾವುದೋ ಒಂದು ಪುಸ್ತಕದಲ್ಲಿ ಗಹನವಾಗಿ ಮುಳುಗಿದ್ದವರು ನಿಟ್ಟುಸಿರು ಬಿಟ್ಟು ಹೀಗೆ ಅರುಹಿದರು…

ಮೂರ್ತಿ: "ಗುರು, ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಎಂಥಾ ಸುಭಿಕ್ಷೆ ಇತ್ತಂತೆರೀ… ನಿಮಗೊತ್ತಾ? ಆಗ ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು, ರತ್ನ, ಬಂಗಾರಗಳನ್ನ ತರಕಾರಿಗಳ ತರ ಸಂತೆಲಿ ಮಾರುತ್ತಿದ್ದರಂತೆ!"

ಗುರು: "ಹೌದು, ಆದ್ರೆ ಆಗಿನ ಕಾಲಕ್ಕೆ ಈಗಿನ ಕಾಲಕ್ಕೆ ಅಷ್ಟೆಲ್ಲಾ ಡಿಫರನ್ಸು ಇಲ್ಲಾ ಬಿಡ್ರೀ."

ಮೂ: "ಅಧೆಂಗ್ರೀಪಾ?"

ಗು: "ಈಗ ತರಕಾರಿಗಳನ್ನ ಮುತ್ತು, ರತ್ನ, ಬಂಗಾರಗಳ ರೇಟಿನಲ್ಲಿ ಮಾರ್ತಾರೆ ಅಷ್ಟೆ!!"

ಮೂ: "ಹ್ಹ ಹ್ಹ ಹ್ಹ! ಹೌದು ಬಿಡ್ರೀ. ಈರುಳ್ಳಿ ರೇಟು 100 ರುಪಾಯಿ ಕೇಜಿ ಅಂತ್ರೀಪಾ."

ಗು: "ಹೌದ್ರೀ, ತುಂಬಾ ದಿನಾ ಆಯ್ತು ಮನೇಲಿ ಈರುಳ್ಳಿ ಭಜಿ ತಿಂದು…"

ನಾನು ಕನಸು ಕಾಣತೊಡಗಿ ಒಂದು ದೊಡ್ಡ ನಿಟ್ಟುಸಿರು ಬಿಟ್ಟೆ.



ಗು: "ಅಲ್ರೀ ಮೂರ್ತಿ ನಮ್ಮ ಪರಿಸ್ಥಿತಿನೇ ಹೀಂಗಾದ್ರೆ, ಪಾಪಾ ಬಡವರ ಗತಿ ಏನು?"

ನಾನು ಮಹಾ ಶ್ರಿಮಂತನೆನ್ನುವ ಮುಖಮುದ್ರೆಯೊಂದಿಗೆ ಈ ಡೈಲಾಗು ಹೊಡೆದು ಮೂರ್ತಿಯವರನ್ನು ನೋಡಿದೆ. ಅವರು ಗಹನ ಯೋಚನೆಯಲ್ಲಿ ಮುಳುಗಿದ್ದರಾ ಇಲ್ಲಾ ಹಾಗೆ ನಟಿಸುತ್ತಿದ್ದರಾ ಗೊತ್ತಿಲ್ಲ! ಕೆಲವು ಕ್ಷಣಗಳ ಬಳಿಕ ನನ್ನ ಮೇಲೊಂದು ಪ್ರಶ್ನೆಯ ಬಾಣವೊಂದನ್ನು ಎಸೆದು ಕಂಗಾಲುಗೊಳಿಸಿದರು!

ಮೂ: "ಬಡವರು ಅಂದ್ರೆ ಯಾರು? ಹೇಳಿ ನೋಡೋಣಾ!"

ಇದೆಂತಹ ಪ್ರಶ್ನೆ?! ನಾನು ಗೊಂದಲಕ್ಕೆ ಬಿದ್ದೆ. ಆದರೂ ಗೊತ್ತಿಲ್ಲವೆಂದು ಹೇಳೋಕಾಗುತ್ತೆಯೆ?

ಗು: "ಬಡವರೆಂದರೆ ಬಡತನದ ರೇಖೆಗಿಂತ ಕೆಳಗಿರುವವರು."

ಅಂತ ಹೇಳಿ, ಇದೇನ್ಮಹಾ ಪ್ರಶ್ನೆ ಅನ್ನುವ ವದನದೊಂದಿಗೆ ಇರುವಾಗಲೇ…

ಮೂ: "ತಪ್ಪು" ಅಂದರು!

ನನಗೆ ಕನ್ನಡದ ಕೋಟ್ಯಾಧಿಪತಿಯಲ್ಲಿ ತಪ್ಪು ಉತ್ತರ ಹೇಳಿ ಪುನೀತನ ಎದುರು ಪೆಚ್ಚು ಮೋರೆ ಹಾಕಿ ಕುಂತಗಾಯ್ತು!



ಗು: "…. ?"

ಮೂ: "ತನ್ನಲ್ಲಿ ಏನೋ ಒಂದು ಕೊರತೆ ಇದೆ ಅಂದುಕೊಂಡು, ಆ ಕೊರತೆಯ ಕೊರಗನ್ನು ಅನುಭವಿಸುವವನೇ ಬಡವ"

ಗು: "ಅಂದ್ರೆ, ಈರುಳ್ಳಿಯ ಕೊರತೆಯನ್ನು ಅನುಭವಿಸುತ್ತಿರುವ ನಾನೂ ಬಡವನೇ??" ಸ್ವಲ್ಪ ಸಿಟ್ಟಿನಿಂದಲೇ ಕೇಳಿದೆ.

ಅವರು ನಸು ನಕ್ಕು ಹೇಳಿದರು.

ಮೂ: "ಹಾಗಂತ ಅಲ್ಲಾ ಗುರು. ಯಾವನು ಎಲ್ಲಿಯವರೆಗೆ ತನಗೆ ಅದು ಬೇಕು ಇದು ಬೇಕು ಅಂತ ಹಪಹಪಿಸಿ ಕೊರತೆ ಅನುಭವಿಸುವನೋ, ಅಲ್ಲಿಯವರೆಗೆ ಅವನು ಬಡವನೇ. ಅದು ನಾನೂ ಆಗಿರಬಹುದು, ನೀವು ಅಥವ ಅಂಬಾನಿಯೂ ಆಗಿರಬಹುದು! ನಿಮ್ಮ ಹತ್ತಿರ ಒಂದು ಕಾರು ಇದೆ, ಆದರೂ ನೀವು ಇದಕ್ಕಿಂತ ದೊಡ್ಡ ಕಾರು ನಿಮ್ಮ ಬಳಿ ಇರಬೇಕಿತ್ತು ಅಂತ ಆಸೆ ಪಟ್ಟು, ಆ ಕೊರತೆ ಅನುಭವಿಸಿದರೆ ನೀವೂ ಬಡವರೆ!"

ಹೌದಲ್ಲವೇ! ಮೂರ್ತಿಗಳು ಒಂದು ಯಾಂಗಲ್‍ನಲ್ಲಿ ಕ್ಲೀನ್ ಆಗಿ ಶೇವ್ ಮಾಡಿದ ಯವುದೋ ಒಬ್ಬ ತತ್ವ ಜ್ಞಾನಿಗಳಂತೆ ಕಾಣತೊಡಗಿದರು! ಅವರು ಹೇಳಿದ್ದು ಸತ್ಯವೆನಿಸಿತು ಕೂಡ. ನಾನೂ ಯೋಚನೆಗೆ ತೊಡಗಿದೆ. ನನ್ನ ಆಸೆಗಳ ಯಾದಿ ದೊಡ್ಡದೇ ಇದೆ. ನಾನೂ ಒಬ್ಬ ಬಡವನೇ!

ಗು: "ಸರಿಯಾಗಿ ಹೇಳಿದ್ರಿ ಮೂರ್ತಿ. ನಿಮ್ಮ ಮಾತು ಒಪ್ಪಬೇಕಾದದ್ದೆ."

ಅಷ್ಟರಲ್ಲೇ ಮನೆಯ ಹೊರಗೆ "ನೂರು ರುಪಾಯಿಗೆ ಎರಡು ಕೇಜಿ ಈರುಳ್ಳೀ…" ಅಂತಾ ಕೂಗಿದಂತಾಯ್ತು. ನನ್ನ ಕಿವಿಗಳು ನಿಮಿರಿದವು. ಕೈಗೆ ಸಿಕ್ಕ ಚೀಲ ಹಿಡಿದು ಹೆಂಡತಿಯ ಅಪ್ಪಣೆಗೂ ಕಾಯದೇ ಹೊರಗೆ ಓಡಿದೆ. ತಳ್ಳುವ ಗಾಡಿಯಲ್ಲಿ ಈರುಳ್ಳಿಗಳು. ಅವುಗಳ ಗಾತ್ರ ಮಾತ್ರ ಬೆಳ್ಳುಳ್ಳಿಗಿಂತ ಸ್ವಲ್ಪ ದೊಡ್ಡ ಅಷ್ಟೆ! ನಮಗೇನಾಗಬೇಕು, ಒಟ್ಟಿನಲ್ಲಿ ಈರುಳ್ಳಿ ಭಜಿ ತಿನ್ನಬೇಕು ಅಷ್ಟೆ! ಇದ್ದುದರಲೇ ಸ್ವಲ್ಪ ದೊಡ್ಡದನ್ನು ಆರಿಸೋಣವೆಂದರೆ, ತಳ್ಳುವ ಗಾಡಿಯವನು ಅದಕ್ಕೂ ಅವಕಾಶ ಕೊಡಲಿಲ್ಲ. ಒಟ್ಟಿನಲ್ಲಿ ಎರಡು ಕೇಜಿ ಈರುಳ್ಳಿಗಳನ್ನು ಪೇರಿಸಿಕೊಂಡು ಮನೆಗೆ ತಂದೆ. ಈರುಳ್ಳಿ ಭಜಿ ಮಾಡಿಸಿಕೊಂಡು ತಿಂದು ಕೊರತೆ ನೀಗಿಸಿಕೊಂಡೆವು. ಆದರೂ ಬಡತನದ ಹೊಸ ವ್ಯಖ್ಯಾನ ತಲೆ ಕೊರೆಯುತ್ತಿತ್ತು…