Saturday, April 10, 2010

ಕನ್ನಡ ಸಾಲಿ, ಪಾಟಿ ಚೀಲಾ ಮತ್ತು ಪೆನಶೆ!

ಆ ದಿನಗಳು, ಎಷ್ಟು ಚೊಲೋ ಇದ್ವು! ನನಗಿನ್ನೂ ನೆನಪಿದೆ, ಇದು ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು...

ಅಂದು ನನ್ನ ಮೊದಲನೇ ತರಗತಿಯ ಪರೀಕ್ಷೆ. ನಾನೋ ಆಗ ತಾನೆ ಜ್ವರದಿಂದ ಎದ್ದಿದ್ದೆ. ಅವತ್ತು ಪರೀಕ್ಷೆಗೆ ಅಂತ ಹೆದರುತ್ತಲೇ ಶಾಲೆಗೆ ಹೋದೆ. ನಮ್ಮದು ಮೊದಲೇ ಹಳ್ಳಿ. ಪುರಾತನ ದೇವಾಲಯಗಳ ಬೀಡು! ನಮ್ಮ ಶಾಲೆಗಳು ನಡೆಯುತ್ತಿದ್ದದ್ದು ಅಂಥ ಯಾವುದೊ ಒಂದು ಪಾಳು ಬಿದ್ದ ಗುಡಿಯಲ್ಲಿ. ನಾನು ಒಳಗೆ ಕಾಲು ಇಡಬೇಕು... ಅಷ್ಟರಲ್ಲೇ ನಮ್ಮ ಮಾಸ್ತರು,
"ನೀನು ಪಾಸಾಗಿದಿ ಹೋಗಪ್ಪ" ಅಂದ್ರು!

ನನಗೋ ಖುಷಿ. ಹಾಗೆಯೆ ಓಡಿಕೊಂಡುಮನೆಗೆ ಬಂದಿದ್ದೆ. ಹಾಗಿತ್ತು ನನ್ನ ಜೀವನದ ಮೊದಲನೇ ಪರೀಕ್ಷೆ ಹಾಗು ಅನಿರೀಕ್ಷಿತ ಫಲಿತಾಂಶ! ಅದು ಸರಕಾರೀ ಪ್ರಾಥಮಿಕ ಗಂಡು ಮಕ್ಕಳ ಒಂದನೇ ನಂಬರ್ ಶಾಲೆ. ಅಲ್ಲಿ ಕಲಿಯುವವರೆಲ್ಲ ಬರಿ ಗಂಡು ಮಕ್ಕಳು. ಆಮೇಲೆ ನಾವು ಅದೇ ಊರಲ್ಲಿ, ಮನೆ ಬದಲಾಯಿಸಿ ಬೇರೆ ಕಡೆಗೆ ಹೋದೆವು. ಅಲ್ಲಿ ಎರಡನೇ ನಂಬರ್ ಶಾಲೆಯಲ್ಲಿ ನನ್ನ ಪ್ರವೇಶ. ತಮಾಷೆಯೆಂದರೆ ಅದು ಕೂಡ ಒಂದು ಗುಡಿಯೇ ಆಗಿತ್ತು. ಈಗ ಮಧ್ಯಾನ್ಹದ ಊಟ ಕೊಡುವಂತೆ ಆಗ ಸಂಜೆಗೆ "ಘಾಟೆ" ಅನ್ನುವ ತಿನ್ನುವ ಪದಾರ್ಥ ಕೊಡುತ್ತಿದ್ದರು. ಅದರ ರುಚಿ ನಾನು ಇನ್ನು ಮರೆತಿಲ್ಲ. ವ್ಯವಸ್ಥೆಯ ದೃಷ್ಟಿಯಿಂದ ನೋಡಿದರೆ ಏನೂ ಇಲ್ಲದ ಇಂಥ ಶಾಲೆಗಳಲ್ಲಿನ ಶಿಕ್ಷಕರು ಮತ್ತು ಅವರು ನೀಡುತ್ತಿದ್ದ ಪಾಠಗಳು ಮಾತ್ರ ಅಭಿನಂದನೆಗೆ ಯೋಗ್ಯ.

ನಮ್ಮ ಪಾಠಗಳು ನಡೆಯುತ್ತಿದ್ದದ್ದು "ಭರಮಪ್ಪ" ದೇವರ ಗುಡಿಯಲ್ಲಿ. ಭರಮಪ್ಪ ಅಂದ್ರೆ "ಬ್ರಹ್ಮ" ಅಂತ! ಗರ್ಭ ಗುಡಿಯ ಎದುರು ನಾವೆಲ್ಲಾ ಮಕ್ಕಳು ಕುಳಿತಿರುತ್ತಿದ್ದೆವು. ನಮ್ಮ ಮುಂದೆ ಎರಡು ಕರಿಯ ಹಲಗೆಗಳು. ಈ ಶಾಲೆಯಲ್ಲಿ ಹೆಣ್ಣುಮಕ್ಕಳು ಕೂಡ ಇದ್ದರು. ನಮಗೆ ಇಬ್ಬರು ಮಾಸ್ತರರು! ಒಬ್ಬರು ಗಂಡು ಮಕ್ಕಳಿಗೆ ಇನ್ನೊಬ್ಬರು ಹೆಣ್ಣು ಮಕ್ಕಳಿಗೆ ಅಂತ ನೆನಪು . ಒಬ್ಬರ ಹೆಸರು ಶಿವನಗೌಡ ಪಾಟಿಲ್. ಅವರು ಪಾಠದ ಜೊತೆಗೆ ಪುಂಡ ಮಕ್ಕಳಿಗೆ ಶಿಕ್ಷೆ ಕೊಡುವುದರಲ್ಲಿ ಎತ್ತಿದ ಕೈ! ನನಗೆ ಚೆನ್ನಾಗಿ ನೆನಪಿದೆ. ಸರಿಯಾಗಿ ಗರ್ಭ ಗುಡಿಯ ಎದುರಿಗೆ ಒಂದು ಹಗ್ಗ ಇಳಿಬಿಟ್ಟಿದ್ದರು. ಯಾರಾದರು ಗಲಾಟೆ ಮಾಡಿದರೋ, ಸರಿ,

"ಬಾ ಮಗನ ಭಾರಮಪ್ಪನ್ನ ತೋರಸ್ತೀನಿ" ಅಂತ,

ಆ ಹಗ್ಗಕ್ಕೆ ಹುಡುಗನ ಎರಡೂ ಕೈ ಕುಣಿಕೆ ಹಾಕಿ, ಇಳಿಬಿಟ್ಟು ತಮ್ಮ ಕೈಯಿಂದ ಅವನ ಕೈ ವತ್ತುತ್ತಿದ್ದರು. ಹುಡುಗರು ನೋವಿಗೆ ಕಿರಿಚಾಡುತ್ತಿದ್ದರು. ಇನ್ನೊಮ್ಮೆ ತುಂಟತನ ಮಾಡುವ ಮುನ್ನ ಯೋಚಿಸುತ್ತಿದ್ದರು. ಆದರೆ ಇನ್ನೂ ಕೆಲ ಹುಡುಗರಿದ್ದರು. ಅವರು ಭರಮಪ್ಪ ಬಿಟ್ಟು ಅವರಪ್ಪ ಬಂದರೂ ಹೆದರುತ್ತಿರಲಿಲ್ಲ! ಅಂತ ಹುಡುಗರಿಗೆ ದಿನವೂ ಶಿಕ್ಷೆ. ನಮಗೋ ಅದೊಂದು ಮನರಂಜನೆ ಆಗ. ಈ ತರಹದ ಶಿಕ್ಷೆ ಯಿಂದಲೋ ಏನೋ, ಗುರುಗಳ ಬಗ್ಗೆ ಭಯ ಮಿಶ್ರಿತ ಗೌರವ ಭಾವನೆ ಮೂಡುತ್ತಿತ್ತು.

ಕನ್ನಡ ಶಾಲೆಯಲ್ಲಿ ನನಗೆ ತುಂಬಾ ನೆನಪು ಬರೋದು "ಬಾಯಿ ಲೆಕ್ಕ"; ದಿನವು ಸಂಜೆ ಅ, ಆ, ಇ , ಈ .. , ಮಗ್ಗಿ ಆದ ಮೇಲೆ ಬಾಯಿ ಲೆಕ್ಕದ ಸರದಿ. ಗುರುಗಳು ಯಾವುದೋ ಒಂದು ಲೆಕ್ಕ ಹೇಳೋರು. ಅದನ್ನು ಮನಸ್ಸಿನಲ್ಲೇ ಕೂಡಿಸಿ, ಗುಣಿಸಿ , ಕಳೆದು ಬಂದ ಉತ್ತರವನ್ನು ನಾವು ಪಾಟಿಯಲ್ಲಿ ಬರೆದು, ಮುಚ್ಚಿ ಇಡಬೇಕು. ಮುಚ್ಚಿಡುವುದು ಯಾಕೆಂದರೆ ಬೇರೆಯವರು ನೋಡಬಾರದೆಂದು! ಆಮೇಲೆ ಗುರುಗಳು ಪ್ರತಿಯೊಬ್ಬರ ಉತ್ತರವನ್ನು ನೋಡಿ, ಶಭಾಶ್ ಅಂತಾ ಮೆಚ್ಚಿಗೆ, ಇಲ್ಲ ಉತ್ತರ ತಪ್ಪಾಗಿದ್ದರೆ ಬೆನ್ನಿಗೊಂದು "ಧಬ್" ಅಂತ ಗುದ್ದೋ ಕೊಡುತ್ತಿದ್ದರು. ಆ ಹೊಡೆತದ ಅನುಭವವೇ ಅದ್ಭುತ! ಕರುಳು ಬಾಯಿಗೆ ಬರೋದು ಅಂದ್ರೆ ಇದೆ ಅಂತ ನಮಗೆ ಅರ್ಥವಾಗಿತ್ತು ಆಗ. ನಮ್ಮ ಮಸ್ತರೊಬ್ಬರು ಹೇಳುತ್ತಿದ್ದರು,

"ನಾನು ಒಂದು ಗುದ್ದಿದೆ ಅಂದ್ರ, ಛಡಿ ಛಂ ಛಂ, ವಿದ್ಯಾ ಗೊಂ ಗೊಂ" ಅಂತ. ಮೂಲ ಗಾದೆಯಲ್ಲಿ "... ಘಂ ಘಂ" ಅಂತ ಇದೆ. ಆದರೆ, ಇವರು ಬಿಡುವ ಹೊಡೆತಕ್ಕೆ "...ಗೊಂ ಗೊಂ" ಅಂತ ಹಿಂದೆ ವಾಸನೆ ಬರುತ್ತೆ ಅಂತ, ಅದರರ್ಥ.

ಇದೆಲ್ಲ ಯಾಕೆ ನೆನಪು ಬಂತು ಅಂದ್ರೆ, ಮೊನ್ನೆ ನನಗೆ ಕಲಿಸಿದ ಗುರುಗಳೊಬ್ಬರು ತೀರಿಹೋದ ಸುದ್ದಿ ಕೇಳಿದೆ. ಬೇಜಾರಾಯ್ತು, ಮನಸ್ಸು ಒಂದು ಸಲ ಫ್ಲಾಶ್ ಬ್ಯಾಕ್ ಗೆ ಹೋಗಿ ಬಂತು.

Thursday, February 18, 2010

ಹೆಸರಿಡೋರು...!

ಹೆಸರಿಡೋದೂ ಒಂದು ಕಲೆನಾ? ಹೌದು ಅನ್ಸುತ್ತೆ. ನಾನು ಹೆಳ್ತಿರೋದು ಚಿಕ್ಕ ಮಕ್ಕಳಿಗೆ ಹೆಸರಿಡೋದರ ಬಗ್ಗೆ ಅಲ್ಲ, ದೊಡ್ಡವರಿಗೆ ಇಡೋದರ ಬಗ್ಗೆ! ಕೆಲವರು ಇರ್ತಾರೆ, ಎಲ್ಲರಿಗೂ ಹೆಸರಿಡೋದೇ ಅವರ ಕಾಯಕ. ಬೇರೆಯವರ ಹಾವ ಭಾವ, ಗಾತ್ರ, ಧ್ವನಿ ಹೀಗೆ ಹಲವಾರು ಲಕ್ಷಣಗಳನ್ನು ನಿರಂತರವಾಗಿ ಅಭ್ಯಸಿಸಿ ಒಂದು ಹೆಸರೂ ಅಂತ ಇಟ್ರು ಅಂದ್ರೆ ಮುಗಿತು! ಆ ಮನುಷ್ಯನ ಗತಿ ಅಧೋಗತಿ.

ನಾವು ಹಾಸ್ಟೇಲಲ್ಲಿದ್ದಾಗ ನಮ್ಮ ಮಿತ್ರನೊಬ್ಬ ಹಾಗೆ ಹೆಸರಿಡೋದರಲ್ಲಿ ನಿಷ್ಣಾತನಾಗಿದ್ದ. ನಮ್ಮ ಸಹಪಾಠಿಯಾಗಿದ್ದ ನಾಗರಾಜ ಆಗಾಗ ನನ್ನ ರೂಮ್ ಗೆ ಭೇಟಿ ನೀಡುತ್ತಿದ್ದ. ಅವನದು ಸ್ವಲ್ಪ ನರಿಬುದ್ಧಿ. ಸರಿ ನಮ್ಮ ಹೆಸರಿಡೊ ಮಿತ್ರ ಅವನಿಗೆ ಒಂದ್ಯಾವುದೋ ಶುಭ ಮುಹುರ್ತದಲ್ಲಿ ನರಿ ಅಂತ ನಾಮಕರಣ ಮಾಡಿಯೆ ಬಿಟ್ಟ ನೋಡಿ! ಆಮೆಲೆ ಇದ್ದು ಬಿದ್ದವರೆಲ್ಲ ಅವನಿಗೆ ನರಿ ಅನ್ನೋದಕ್ಕೆ ಶುರು ಮಾಡಿದ್ರು. ಎಷ್ಟೋಸರ್ತಿ ಹಿಂಗಾಗ್ತಿತ್ತು ಅಂದ್ರೆ, ಗುಂಪಿನಲ್ಲಿದ್ದಾಗ ಯಾವನೋ ಒಬ್ಬ್ನು ನರಿ ಅನ್ನೋನು. ಇನ್ನೊಬ್ನು ಲೇ ನಾಗ್ಯಾ ಇಂವಾ ನಿನಗ ನರಿ ಅಂದ ನೋಡ್ಲೆ ಅನ್ನೊನು. ಮತ್ತೊಬ್ಬ ಲೇ ಮಗನ ನರಿ ಅಂದಾ, ಅಂತ ಹೇಳಿ ನೀನು ಇನ್ ಡೈರೆಕ್ಟ್ ಆಗಿ ನರಿ ಅಂತಿಯೇನಲೆ ಅನ್ನುತ್ತಿದ್ದಾಗಲೇ ಮುಗುದೊಬ್ಬ ನೀಯರೆ ಏನ ಕಡಿಮಿ ಇದ್ದಿ, ಅದನ್ನ ಹೇಳಿದಂಗ ಮಾಡಿ ಎರಡು ಸಲಾ ನರಿ ಅಂದ್ಯಲ್ಲ! ಅಂತ ತನ್ನ ತೀಟೆ ತೀರಿಸಿಕೊಳ್ಳೋನು. ಇದು ನಮಗೆಲ್ಲ ಮಜವಾಗಿರ್ತಿತ್ತು. ಆದರೆ ಪಾಪ ನರಿಗೆ ... ಕ್ಷಮಿಸಿ ನಾಗರಾಜನಿಗೆ ಮಾತ್ರ ಪ್ರಾಣ ಸಂಕಟ. ಅವ್ನು ಮಾತ್ರ ಲೇ ಮಕ್ಳ ನಿಮ್ಮನ್ನ ಕೊಂದು ಹಾಕಿ ಬಿಡ್ತೀನಿ ಅಂತ ಮುಖ ಕೆಂಪಗೆ ಮಾಡ್ಕೊಂಡು ಸಿಟ್ಟು ಮಾಡ್ಕೊಳ್ಳೋನು. ಇವತ್ತಿಗೂ ಯಾರಾದರೂ ಹಳೆಯ ಮಿತ್ರರು ಸೇರಿದರೆ ನಾಗರಾಜ ಅಂತ ಯಾರೂ ದೇವರಾಣೆಗೂ ನೆನೆಸೋದಿಲ್ಲ, ನರಿ ಸಿಕ್ಕಿದ್ನಾ? ಅಂತಾನೇ ಕೇಳೋದು. ಪಾಪ ನರಿ!!

ಹೆಸರಿಡೋರು ಇಷ್ಟು ಚೆನ್ನಾಗಿ ವಿಶ್ಲೇಷಣೆ ಮಾಡಿರ್ತಾರೆ ಅಂದ್ರೆ, ಅವರಿಟ್ಟ ಹೆಸರು ಅಯಾ ವ್ಯಕ್ತಿಗೆ ಸರಿಯಾಗಿ ಒಪ್ಪಿರುತ್ತೆ. ಕೆಲವರನ್ನ ನೋಡಿದ ಕೂಡಲೆ ಒಂದು ಪ್ರಾಣಿನೋ, ಕಾಯಿ ಪಲ್ಲೆಯೋ ಅಥವಾ ಇನ್ನೂ ಏನೋ ನೋಡಿದಂಗೆ ಅನಿಸುತ್ತಿರುತ್ತದೆ. ನಮ್ಮ ಬಾಲ್ಯದ ಗೆಳೆಯನೊಬ್ಬನಿಗೆ ಗಜ್ಜರಿ ಅಂತಿದ್ರು. ಅವನು ಕೆಂಪಗೆ ಒಂಥರಾ ಗಜ್ಜರಿ ಥರಾನೇ ಇದ್ದ. ಓಂದಿಬ್ಬರು ಇಜ್ಜೋಡಿ (ಇಬ್ಬರೂ ಒಬ್ಬರಿಗೊಬ್ಬರು ಅನುರೂಪವಾಗಿಲ್ಲದಿರುವುದು) ಪ್ರೇಮಿಗಳು ಇದ್ರೆ, ಅವರಿಗೆ "ಒಂದು ಹಸಿದಿದ್ದು ಇನ್ನೊಂದು ಹಳಿಸಿದ್ದು" ಅಂತೆ! ಇನ್ನು ಕೆಲವರು ಇಂಗ್ಲಿಷ್ ನಲ್ಲಿ ಹೆಸರು ಇಡ್ತಾರೆ. ಒಂದು ವೇಳೆ ಹುಡುಗನಿಗೊ, ಹುಡುಗಿಗೊ ಮದುವೆ ವಯಸ್ಸು ಮೀರಿ ಇನ್ನು ಮದುವೆ ಆಗಿಲ್ಲ ಅಂತ ಇಟ್ಕೊಳ್ಳಿ "ಡೇಟ್ ಬಾರ್ ಅರ್ಜೆಂಟ್ ರಿಕ್ವೈರ್ಡ್" ಅಂತೆ!

ಇದು ಬಹಳಷ್ಟು ಸಲ ತಮಾಷೆಯಾಗಿ ಕಂಡ್ರೂ, ಇದರಿಂದ ಯಾರೋ ಒಬ್ಬರಿಗೆ ಹರ್ಟ್ ಆಗಿರುತ್ತೆ. ಹೆಸರಿಡೊರು ಮಾಮುಲಿಯಾಗಿ ವ್ಯಕ್ತಿಯ ಬೆನ್ನ ಹಿಂದೆಯೇ ಆಡಿಕೊಳ್ಳುತ್ತಾರೆ. ಆ ವಿಷಯ ಹೆಸರಿಟ್ಟುಕೊಂಡವನಿಗೆ ಗೊತ್ತಾದಾಗ ಅವನಿಗೆ ಹಿಂಸೆ ಆಗುವುದು ಸಹಜ. ನಮ್ಮ ಗೆಳೆಯ ಸ್ವಲ್ಪ ಜಾಸ್ತಿಯೆ ಕಪ್ಪಗಿದ್ದ (ಅದರಲ್ಲಿ ಅವನದೇನು ತಪ್ಪಿರಲಿಲ್ಲ, ಪಾಪ!). ಅವನಿಗೆ ಕಪ್ಪು ಮೋಡ ಅಂತ ಒಬ್ಬ ಮಹಾಶಯ ಹೆಸರಿಟ್ಟಿದ್ದ. ಅದು ಅವನಿಗೆ ಯಾರೋ ಹೇಳಿ ಅವನು ತುಂಬಾ ಬೇಜಾರೂ ಮಾಡ್ಕೊಂಡಿದ್ದ. ಹಾಗಂತ ಎಲ್ಲ್ರೂ ಆ ಥರ ಇರೋದಿಲ್ಲ. ಕೆಲವರು ಅದನ್ನು ತಮಾಷೆಯಾಗಿಯೆ ಸ್ವೀಕರಿಸುತ್ತಾರೆ. ಅದೇನೆ ಇರಲಿ, ಯಾವುದು ಅತಿಯಾಗಬಾರದು ಅಲ್ವೆ?


Tuesday, November 17, 2009

ಇ-ಮೋಸ!

ಮೊದಲೆಲ್ಲ ಪತ್ರ ವ್ಯವಹಾರ ಅಂದ್ರೆ ಒಂದಿಷ್ಟು ದಿನಗಳ ಕಾಲಹರಣವೇ ಆಗಿತ್ತು. ಪತ್ರ ಬರೆದು, ಕಳಿಸಿ ಅದು ಇನ್ನೊಬ್ಬರನ್ನು ತಲುಪಿ (ಅದೃಷ್ಟ ಚೆನ್ನಾಗಿದ್ದಾರೆ!) ಅವರಿಂದ ಉತ್ತರ ಬಂದು ... ಹೀಗೆ ಅದೊಂದು ಎಷ್ಟೋ ದಿನಗಳ ನಿರಂತರ ಪ್ರಕ್ರಿಯೆ! ಈಗೆಲ್ಲ ಪತ್ರಕ್ಕಿಂತ ಇ-ಪತ್ರ (ಅಥವಾ ಇಮೇಲ್) ಗಳದೇ ದರ್ಬಾರು. ಪತ್ರ ಕಳೆಸಿದ ಕ್ಷಣಾರ್ಧದಲ್ಲೇ ಬೇರೆಯವರಿಗೆ ತಲುಪಿ ಮತ್ತೆ ನಿಮಿಷಾರ್ಧದಲ್ಲಿ ಉತ್ತರ ಪಡೆಯುವ ಬಗೆ ಈಗ ಹೊಸದೇನಲ್ಲ. ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಹೆಸರಿಲಿಲ್ಲದಿದ್ರು ಪರವಾಗಿಲ್ಲ ಇಮೇಲ್ ಅಡ್ರೆಸ್ ಇರಬೇಕು ಅಂತಾಗಿದೆ! ಆದರೆ, ಇಮೇಲ್ ನ್ನು ಎಷ್ಟು ಸಮರ್ಪಕವಾಗಿ/ಉಪಯೋಗಕ್ಕಾಗಿ ಬಳಸುವರಿದ್ದಾರೋ ಅಷ್ಟೇ ಕೆಟ್ಟ ಕೆಲಸಕ್ಕಾಗಿ/ಮೋಸಕ್ಕಾಗಿ ಬಳಸುವವರು ಇನ್ನೂ ಜಾಸ್ತಿ ಇದ್ದಾರೆ ಎನ್ನುವದರಲ್ಲಿ ಎರಡು ಮಾತಿಲ್ಲ! ಆ ತರಹದ ದರಿದ್ರ ಇಮೇಲ್ ಗಳಿಗೆ ಜಂಕ್ (ಅಪ್ರಯೋಜಕ) ಇಮೇಲ್ ಅಂತಾನೆ ಹೆಸರು. ಸಾಮಾನ್ಯವಾಗಿ ಆ ತರಹದ ಇಮೇಲ್ ಗಳನ್ನು ತಕ್ಕ ಮಟ್ಟಿಗೆ ಸೋಸಿ ತೆಗೆಯುವ ಕಾರ್ಯವನ್ನು ಎಲ್ಲ ಇಮೇಲ್ ಪ್ರೊಗ್ರಾಮ್ ಗಳು ಮಾಡುತ್ತವೆ. ಆದರೆ ಇನ್ನು ಕೆಲವು ಇಮೇಲ್ ಗಳು ಇರುತ್ತವೆ ಅವು ಈ ತರಹದ ಸೋಸುವಿಕೆಗಷ್ಟೇ ಅಲ್ಲ ಅದನ್ನೋದುವ ಹುಲು ಮಾನವರಿಗೂ ಮೋಸ ಮಾಡುತ್ತವೆ! ಅಂತ ಕೆಲವು "ದರಿದ್ರ ಇಮೇಲ್ ಗಳ" ಒದಿಷ್ಟು ಸ್ಯಾಂಪಲ್ ಗಳು ಇಲ್ಲಿವೆ.

ಮೋಸ ೧:) ಆಫೀಸ್ ನಲ್ಲಿ ಸೋಮವಾರದ ಒಂದು ಮದ್ಯಾನ್ಹ ಆಕಳಿಸಿಕೊಂಡು, ಇವತ್ತು ಕೆಲ್ಸಾ ಮಾಡ್ಲೆಬೇಕಾ ಅಂತ ಕುತಿರ್ತೀವಿ. ಒಂದು ಇಮೇಲ್ ಟಕ್ ಅಂತ ಬಂದು ಬಡಿದೆಬ್ಬಿಸುತ್ತದೆ. ಅದು ಕೀನ್ಯಾ ದಿಂದ ಯಾರೋ ಮಹಾಶಯ ಬರೆದಿರುತ್ತಾನೆ. ನಮಗೆ ೧೦೦ ದಶಲಕ್ಷ್ಯ ಡಾಲರ್ ಹಣ ಬಹುಮಾನ ಬಂದಿದೆ ಅಂತ ಹೇಳಿ ಅದನ್ನು ನಮ್ಮ ಬ್ಯಾಂಕ್ ಅಕೌಂಟ್ ಗೆ ಹಾಕುವುದಾಗಿಯು, ನಮ್ಮ ಅಕೌಂಟ್ ನ ವಿವರ ಕೇಳುತ್ತಾನೆ. ಅರೆ, ಇದೊಳ್ಳೆ ಅದೃಷ್ಟ ಹುಡುಕಿಕೊಂಡು ಬಂತಲ್ಲ ಅಂತ ನಾವು ಅವನಿಗೆ ಪ್ರತಿಕ್ರಿಯಿಸಲು ತೊಡಗುತ್ತೇವೆ. ಅಲ್ಲಿಗೆ, ನಾವು ಅವನು ಹಾಕಿದ ಬಲೆಗೆ ಬಿದ್ದಂತೆಯೇ! ಅವನು ನಂತರ ಆ ಹಣ ಬೇಕಾದರೆ ಇಂತಿಷ್ಟು ದುಡ್ಡನ್ನು ನಾವೇ ಅವನಿಗೆ ಮೊದಲೇ ಪಾವತಿಸಬೇಕು ಅಂತೆಲ್ಲ ಬೊಗಳೆ ಬಿಟ್ಟು ನಮ್ಮಿಂದ ಸುಮಾರು ಕೊಳ್ಳೆ ಹೊಡೆದುಬಿಡುತ್ತಾನೆ. ಈ ತರಹ ಮೋಸ ಹೋಗುವರು ತುಂಬಾ ಜನ.

ಮೋಸ ೨:) ಒಂದು ಚಿಕ್ಕ ಹುಡುಗಿಯ ಫೋಟೋ ಇರುವ ಇಮೇಲ್ ಅನ್ನು ಗೆಳೆಯನೊಬ್ಬ ಕಲಿಸಿರುತ್ತಾನೆ (ಅವನಿಗೆ ಇನ್ನ್ಯಾರೋ ಕಳಿಸಿರುತ್ತಾರೆ!). ಆ ಚಿಕ್ಕ ಹುಡುಗಿಗೆ ಯಾವುದೋ ಮಾರಕ ಕಾಯಿಲೆ ಇರುವುದೆಂದು, ಅವಳು ಹಾಸ್ಪಿಟಲ್ ನಲ್ಲಿ ಜೀವಕ್ಕಾಗಿ ಹೋರಾಡು ತ್ತಿರುವು ದಾಗಿಯು, ಅವಳಿಗೆ ಸಹಾಯ ಮಾಡಬೇಕೆಂದು ಯಾವನೋ ಒಬ್ಬ ದುಡ್ಡಿನ ಸಹಾಯ ಯಾಚಿಸಿರುತ್ತಾನೆ. ನಾವು ಮರುಗಿ ಸಹಾಯ ಮಾಡುತ್ತೇವೆ. ನಮ್ಮಂತೆ ಎಷ್ಟೋ ಜನರು ಮಾಡಿರುತ್ತಾರೆ. ಆದರೆ ವಾಸ್ತು ಸ್ಥಿತಿ ಬೇರೆಯಾಗಿರುತ್ತದೆ! ಆ ಹುಡುಗಿ ನಿಜಕ್ಕೂ ಇರುವುದೇ ಇಲ್ಲ. ಅವಳು ಸರಿ ಸುಮಾರು ೮೦೦೦ ಸಲ ಆಸ್ಪತ್ರೆಯಲ್ಲಿ ಸಾವಿನ ಜೊತೆ ಹೋರಾಟ ನಡೆಸಿರುತ್ತಾಳೆ! ೧೯೯೦ ನೆ ಇಸವಿಯಿಂದ ಇಲ್ಲಿಯವರೆಗೆ, ಅವಳಿಗಿನ್ನೂ ೭ ವರ್ಷ ವಯಸ್ಸು ಮಾತ್ರವೇ ಆಗಿರುತ್ತದೇ. ಅಂದರೆ ಅದೇ ಇಮೇಲ್ ಅಷ್ಟು ವರ್ಷಗಳಿಂದ ಇಲ್ಲಿಯೇ ನಮ್ಮ ನಡುವೆ ಗಿರಕಿ ಹೊಡೆಯುತ್ತಿರುತ್ತದೆ.

ಮೋಸ ೩:) ಇನ್ನು ಒಂದು ತರಹ ಇಮೇಲ್ ಬರುತ್ತೆ, ಅದನ್ನ ೪೦ ಜನರಿಗೆ ಕಲಿಸಿದರೆ ಯಾವುದೋ ದೊಡ್ಡ ಬ್ರಾಂಡ್ ನ ಮೊಬೈಲ್ ಉಚಿತವಾಗಿ ಸಿಗುತ್ತದೆ ಅಂತ ಅದು ಸಾರಿ ಹೇಳುತ್ತದೆ! ಉಚಿತವಾಗಿ ಸಿಗುವುದಾದರೆ ಯಾಕಾಗಬಾರದು ಅಂತ ಎಲ್ಲರಿಗು ಇಮೇಲ್ ಕಳಿಸಿ ನಿಶ್ಚಿಂತ ರಾಗುವರು ಎಷ್ಟೋ ಜನ! ಮಜಾ ಅಂದ್ರೆ, ಆ ಮಾಡೆಲ್ ನ ಮೊಬೈಲ್ ಎಷ್ಟೋ ವರ್ಷಗಳ ಮುಂಚೆಯೇ ನಿಂತು ಹೋಗಿರುತ್ತದೆ!

ಮೋಸ ೪:) ಇನ್ನು ಕೆಲವು ಇಮೇಲ್ ಗಳು ದೇವರುಗಳ ಚಿತ್ರಗಳ ಜೊತೆಗೆ ಬರುತ್ತವೆ. ಅವನ್ನು ಎಷ್ಟೋ ಜನರಿಗೆ ತಲುಪಿಸಿದರೆ ಒಳ್ಳೆದಾಗುತ್ತೆ ಅಂತ ಹೇಳುತ್ತವೆ! ಅದನ್ನು ನಿಷ್ಠೆಯಿಂದ ನೂರಾರು ಜನರಿಗೆ ತಲುಪಿಸಿದ ಭೂಪ ಮಾತ್ರ ಅದೇ ಕಂಪನಿಲಿ ಇನ್ನು ಅಷ್ಟೇ ಸಂಬಳ ತೆಗೆದುಕೊಳ್ಳುತ್ತಿರುತ್ತಾನೆ.

ಈ ತರಹದ ಮೋಸಗಳು ಹಲವಾರು. ಇಂಥ ಇಮೇಲ್ ಗಳು ಒಂಥರ ವೈರಸ್ ಇದ್ದಂತೆ. ಆದರೆ ನಾವು ಅದನ್ನ ಮುಂದೆ ಹೋಗದಂತೆ ತಡೆಯ ಬಹುದು. ಯಾರಾದರು ಈ ರೀತಿ ಕಳಿಸಿದರೆ ದಯವಿಟ್ಟು ಅದನ್ನು ನಿಮ್ಮಲ್ಲಿಗೇ ಕೊನೆಯಾಗಿಸಿರಿ. ಕಳಿಸಿದವರು ನಿಮ್ಮ ಮಿತ್ರರಾಗಿದ್ದರೆ, ಅವರಿಗೆ ಆ ತರಹದ ಇಮೇಲ್ ಕಳಿಸದಿರಲು ಎಚ್ಚರಿಸಿ, ಬುದ್ಧಿ ಹೇಳಿ!

Saturday, July 4, 2009

ಇದು ನ್ಯಾಯಾನಾ?

ಇದು ಒಬ್ಬ ಮುಪ್ಪಾನು ಮುದುಕನ ಕತೆ ಅಥವಾ ವ್ಯಥೆ! ಅವರ ಹೆಸರು ಮಾಧವ ರಾಯರು ಅಂತ ಇಟ್ಕೊಳ್ಳೋಣ ಒಂದು ಊರಲ್ಲಿ ಅವರದೊಂದು ಹಳೆಯ ಮನೆ ಇದೆ. ಅದು ನೂರು ವರ್ಷಕ್ಕಿಂತ ಹಳೆಯದು. ಅವರ ಅಜ್ಜ ಕಟ್ಟಿಸಿದ್ದು. ರಾಯರು, ತಮ್ಮ ದುಡಿಮೆಯ ಕಾಲದಲ್ಲಿ ಒಂದಿಷ್ಟು ಉಳಿತಾಯದ ದುಡ್ಡು ಹಾಗು ಸಾಲ ಸೋಲ ಮಾಡಿ, ತಮಗೆ ವ್ರುಧಾಪ್ಯಕ್ಕೆಇರಲಿ ಅಂತ ಈ ಮನೆಯನ್ನ ತಮ್ಮ ಹೆಸರಿಗೆ ಮಾಡಿಕೊಂಡರು. ಉಳಿದ ಅಣ್ಣ ತಮ್ಮಂದಿರು ಮಾರಿಬಿಡೋಣ ಅಂದರೂ ತನಗೇ ಬೇಕು ಅಂತ ಆ ಮನೆಯನ್ನ ತಮ್ಮ ಹೆಸರಿಗೆ ಮಾಡಿಕೊಂಡರು. ಅವರ ವೃತ್ತಿ ಬೇರೆ ಊರಲ್ಲಿದ್ದ ಕಾರಣ, ನಿವೃತ್ತಿಯ ವರೆಗೂ ಆ ಮನೆಯಲ್ಲಿ ವಾಸಿಸುವ ಭಾಗ್ಯ ಅವರಿಗೆ ಕೂಡಿ ಬರಲಿಲ್ಲ. ನಿವೃತ್ತರಾದ ಮೇಲೆ ಅವರ ಮಕ್ಕಳು ಬೇರೆ ಊರಿನಲ್ಲಿ ತಳ ಊರಿದ ಕಾರಣ, ಮಕ್ಕಳ ಜೊತೆಗೆ ಅವರೂಇರುವ ಹಾಗಾಯ್ತು. ಅಷ್ಟೊತ್ತಿಗೆ ರಾಯರ ಹೆಂಡತಿಯು ದೈವಾಧೀನರಾದರಿಂದ ಅವರೊಬ್ಬರನ್ನೇ ಆ ಮನೆಯಲ್ಲಿ ಬಿಡುವ ತಪ್ಪು ಮಕ್ಕಳಾದರೂ ಹೇಗೆ ಮಾಡಿಯಾರು?
ಸರಿ, ಮನೆಯನ್ನು ಖಾಲಿ ಇಡುವುದೇ? ಯಾರಿಗಾದರು ಬಾಡಿಗೆ ಕೊಡೋಣ ಅಂತ ಒಬ್ಬನಿಗೆ ಬಾಡಿಗೆ ಅಂತ ಕೊಟ್ಟರು. ಆ ಬಾಡಿಗೆದಾರನ ಹೆಸರು ಶೇಷಗಿರಿ ಅಂತ ಇರಲಿ. ಶೇಷಗಿರಿಯನ್ನು ಪರಿಚಯಿಸಿದವರು ರಾಯರ ಪರಮ ಮಿತ್ರರೇ. ಅಲ್ಲಿಗೆ ರಾಯರಿಗೆ ನಿಶ್ಚಿಂತೆ. ಶೇಷ ಮನೆಯನ್ನು ಚೆನ್ನಾಗಿಯೇ ನೋಡಿಕೊಳ್ಳ ತೊಡಗಿದ. ಬಾಡಿಗೆ ಸರಿಯಾಗಿ ಪಾವತಿ ಮಾಡುತ್ತಿದ್ದ. ರಾಯರು ಯಾವಾಗಲಾದರು ಹೋದರೆ ತುಂಬ ಆದರ - ಅತಿಥ್ಯ ಮಾಡುತ್ತಿದ್ದ. ರಾಯರಿಗೂ ಅವನ ಕಂಡರೆ ತುಂಬ ಪ್ರೀತಿ. ವರುಷಗಳು ಕಳೆದಂತೆ, ರಾಯರಿಗೂ ವಯಸ್ಸಾಗುತ್ತ ಬಂತು. ಮನೆಯ ಬಗ್ಗೆ ಮೊದಲಿನ ಉತ್ಸಾಹ ಕಡಿಮೆಯಾಯ್ತು. ಅದು ಅಲ್ಲದೆ ಮನೆಯ ಕಡೆ ದೂರ ಪ್ರಯಾಣ ಮಾಡಿಕೊಂಡು ಹೋಗಿ ಮುತುವರ್ಜಿ ವಹಿಸುವ ಕೆಲಸ ವೃದ್ಧರಾದ ರಾಯರಿಗೆ ಕಷ್ಟವೆನಿಸತೊಡಗಿತು. ಮಕ್ಕಳು ಕೂಡ ತಮ್ಮ ತಮ್ಮ ವೃತ್ತಿಯಲ್ಲಿ ಮಗ್ನರಾದ ಕಾರಣ ಅವರೂ ಕೂಡ ಮನೆಯ ಕಡೆ ಹಾಯಲಿಲ್ಲ. ಅಲ್ಲಿಗೆ ರಾಯರು ಆ ಮನೆಯಯನ್ನು ಮಾರಿ ಬಿಡುವ ನಿರ್ಧಾರ ಮಾಡಿಬಿಟ್ಟರು.
ಅಷ್ಟರಲ್ಲಿ ಏಳು ವರ್ಷಗಳಿಂದ ಅಲ್ಲೇ ತಳ ಊರಿದ ಶೇಷನಿಗೆ ಆ ಮನೆಯ ಮೇಲೆ ವಿಶೇಷ ವ್ಯಾಮೋಹ ಏರ್ಪಟ್ಟಿತು. ಅದು ಅಲ್ಲದೆ, ಆ ಮನೆಗೆ ಬಂದ ಮೇಲೆ ಉದ್ದಾರ ಆಗಿದ್ದ ಆತ ಮನೆಯ ಮೇಲೆ ಒಂದು ಕಣ್ಣು ಹಾಕಿದ್ದ. ಮನೆ ಮಾರುವ ವಿಚಾರ ರಾಯರು ಅವನಿಗೆ ಹೇಳಿದ್ದೆ ತಡ, ಮನೆಯ ಬಗ್ಗೆ ಇಲ್ಲ ಸಲ್ಲದ ಪುಕಾರು ಹೇಳತೊಡಗಿದ. ಆ ಮನೆ ವಾಸಿಸಲು ಯೋಗ್ಯವೇ ಇಲ್ಲವೆಂದು, ತುಂಬಾ ಹಳೆಯದಾಗಿರುವ ಅದು ಯಾವಾಗ ಬೀಳುವುದೋ ನಾನರಿಯೆ ಅಂತ ರಾಯರ ತಲೆ ಕೆಡಿಸಿ ಬಿಟ್ಟ. ಪಾಪ, ಆ ಊರಿನ ಸಂಪರ್ಕವೇ ತಪ್ಪಿಸಿಕೊಂಡಿದ್ದ ರಾಯರಿಗೆ ಇವನ ಮಾತು ಕೇಳಿ ಹೇಗಾಗಿರಬೇಡ?! ಆದರೆ ಮುಗ್ಧ ಮನಸಿನ ರಾಯರಿಗೆ ಶೇಷ ನ ನರಿ ಬುದ್ಧಿ ಅರ್ಥವಾಗಲಿಲ್ಲ. ಶೇಷ ನ ಲೆಕ್ಕಾಚಾರ ಹೇಗಿತ್ತು ಅಂದರೆ, ರಾಯರು ಈ ಮಾತುಗಳಿಂದ ತತ್ತರಿಸಿ ಅತಿ ಕಡಿಮೆ ಬೆಲೆಗೆ ತನಗೇ ಮಾರಿ ಬಿಡಲಿ ಅನ್ನೋದು ಅವನ ದುರುದ್ದೇಶ! ಕೊನೆಗೆ ಅದು ಹಾಗೆ ಆಗುವ ಸಮಯ ಬಂತು! ರಾಯರು ಕಡಿಮೆ ಬೆಲೆಗೆ ಹಚ್ಚಿ ಹಚ್ಚಿ ಕೊಡುತ್ತೇನೆ ಅಂತ ಶೇಷನಿಗೆ ಮಾತು ಕೊಟ್ಟರು. ಆದರು ನನ್ನ ಮಕ್ಕಳ ಸಮಕ್ಷಮ ಮಾತುಕತೆ ಯಾಗಲಿ ಅಂತ ಬಯಸಿದರು. ಶೇಷನು ತನ್ನ ಉಪಾಯ ಫಲಿಸಿದ್ದಕ್ಕೆ ಮನದೊಳಗೆ ಖುಷಿ ಪಡುತ್ತ ರಾಯರಿದ್ದ ಊರಿಗೆ ಒಂದಿಷ್ಟು ಜನ ರನ್ನು ಕರೆದೊಯ್ದ. ರಾಯರು ಹೇಳಿದರ ಅರ್ಧಕ್ಕಿಂತ ಕಡಿಮೆ ಮೌಲ್ಯಕ್ಕೆ ಮನೆಯನ್ನು ೨೫ ವರ್ಷ ಕಬ್ಜಾ ವತ್ತಿ ಬರೆದು ಕೊಡಬೇಕು ಅಂತ ಕೇಳಿದ! ರಾಯರು ಮುಗ್ಧರಾದರೆ ಅವರ ಮಕ್ಕಳೂ ಮುಗ್ಧರೆ? ಅಪ್ಪ ಮಕ್ಕಳು ಸೇರಿ ಅದು ಆಗದು ಅಂತ ನಿರ್ಧರಿಸಿದರು. ಶೇಷನಿಗೆ ಸ್ವಲ್ಪ ದಂತ ಭಗ್ನ ವಾಯ್ತು; ಅಸಮಾಧಾನದ ಕಿಡಿ ಹತ್ತಿಕೊಂಡಿತು. ಆತ ತನ್ನ ಕಂತ್ರಿ ಕೆಲಸ ಶುರು ಮಾಡಿದ . ಬೇರೆ ಯಾರಾದರು ಮನೆ ಕೊಂಡುಕೊಳ್ಳಲು ಬಂದರೆ ಅವರಿಗೆ ಏನೋ ಕತೆ ಹೇಳಿ ವಾಪಸ್ಸು ಕಲಿಸತೊಡಗಿದ. ಅದೆಲ್ಲದರ ಪರಿವೆಯೇ ಇಲ್ಲದ ರಾಯರು, ಯಾರದರೂ ಆ ಮನೆಯನ್ನು ಸೂಕ್ತ ಬೆಲೆಗೆ ಕೊಂಡರೆ ಸಾಕೆಂದು ಕಾಯತೊಡಗಿದರು. ವರ್ಷಗಳು ಕಳೆದರೂ ಯಾವನೊಬ್ಬ ಮುಂದೆ ಬರಲಿಲ್ಲ. ಶೇಷನೆಂಬ ನರಿ ಬುದ್ಧಿಯವನು ಅಲ್ಲಿರುವಾಗ ಯಾರು ತಾನೆ ಮುಂದುವರಿದಾರು? ಕೊನೆಗೆ ಎಷ್ಟೊ ವರ್ಷಗಳ ನಂತರ ಒಬ್ಬ ಪುಣ್ಯಾತ್ಮ ಮುಂದೆ ಬಂದ. ರಾಯರ ಜೊತೆ ಮಾತುಕತೆಆದಿ ಆ ಮನೆಯನ್ನು ಒಂದು ಒಳ್ಳೆ ಬೆಲೆಗೆ ಕೊಂಡ, ಅದಕ್ಕೆ ಅಂತ ಒಂದಿಷ್ಟು ಮುಂಗಡ ಕೊಟ್ಟು ಇಂತಿಷ್ಟು ತಿಂಗಳುಗಳ ನಂತರ ಬಾಕಿ ಹಣ ಕೊಟ್ಟು ಮನೆ ಖರೀದಿ ಮಾಡಿಕೊಳ್ಳುವುದಾಗಿ ಕಗದ ಪತ್ರಗಳಾದವು. ರಾಯರು ನಿಟ್ಟುಸಿರು ಬಿಟ್ಟರು. ಶೇಷನಿಗೆ ತಿಳಿಸಿದರು. ಒಳಗೊಳಗೆ ಸಂಕಟ ಪಟ್ಟ ಶೇಷ ಹೊರಗೆ ಚೆಂದದ ಮಾತುಗಳನ್ನಾಡಿದ. ನಿಮಗೆ ಒಳ್ಳೆ ಬೆಲೆಯೆ ಸಿಕ್ಕಿದೆಯೆಂದೂ, ತನಗೆ ಅದು ತನ್ನ ಕೈಲಾಗದಾಗಿತ್ತೆಮ್ದೂ ಹೇಳಿದ. ಖರೀದಿ ಆಗುವದರೊಳಗಾಗಿ ಮನೆ ಖಾಲಿ ಮಾಡುವೆನೆಂದು ಭರವಸೆಯನ್ನೂ ಕೊಟ್ಟ. ಮುಗ್ಧ ರಾಯರು ಅವನ ಮಾತು ನಂಬಿ ನಿಷ್ಚಿಂತೆಯಾಗಿದ್ದರು. ನಂಬಿಕೆಯ ಮೇಲೆ ಕೊಟ್ಟ ಮನೆಯಾದ್ದರಿಂದ, ಮನೆ ಖಾಲಿ ಮಾಡಲು ನೋಟಿಸು ಕಳಿಸುವುದು ರಾಯರಿಗೆ ಸರಿ ಕಾಣಲಿಲ್ಲ. ಪಾಪ ಅವರಿಗೇನು ಗೊತ್ತು, ಅದೇ ಅವರಿಗೆ ಮುಂದೆ ಮುಳುವಾಗುವದೆಂದು!! ಹೀಗೆ ಒಂದೆರಡು ತಿಂಗಳು ಕಳೆದವು. ಒಂದು ದಿನ ರಾಯರು ಊಟ ಮುಗಿಸಿ ಇನ್ನೇನು ಮಲಗಬೇಕು, ಅಷ್ಟರಲ್ಲಿ ಯಾರೊ ಬಾಗಿಲು ತಟ್ಟಿದರು. ಬಾಗಿಲು ತೆಗೆದು ನೋಡಿದರೆ, ಕೋರ್ಟಿನಿಂದ ಚೆಂದನೆಯ ನೋಟಿಸು ಬಂದಿತ್ತು. ಅದನ್ನ ಶೇಷ ಕಳಿಸಿದ್ದು ಅಂತ ಗೊತ್ತಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ. ಶೇಷ ರಾಯರ ಮೇಲೆಯೇ ಕೇಸು ಹಾಕಿದ್ದ! ಏನು ಅಂದರೆ, ರಾಯರು ಯಾರಿಗೊ ಹೆಚ್ಚಿನ ಬೆಲೆಗೆ ಮನೆ ಮಾರುತ್ತಿದ್ದಾರೆ, ತನಗೆ ಕೊಡುತ್ತೇನೆ ಎಂದು ಹೇಳಿದ್ದರೂ ಕೂಡ ಬೇರೆ ಯಾವನಿಗೋ ಕೊಡುತ್ತಿದ್ದಾರೆ. ಅದೂ ಅಲ್ಲದೆ ನನ್ನನ್ನು ಮನೆಯಿಂದ ಹೊರಗೆ ಹಾಕಲು ರೌಡಿಗಳನ್ನು ಕಳಿಸಿ ನನಗೆ ದಿನವೂ ಕಿರುಕೂಳ ನೀಡುತ್ತಿದ್ದಾರೆ ಇತ್ಯಾದಿ ಇತ್ಯಾದಿಯಾಗಿ ಇಲ್ಲ ಸಲ್ಲದ ಆರೋಪ ಗಳ ಪಟ್ಟೀಯನ್ನೇ ಹಾಕಿದ್ದ! ಎಂದೂ ಒಬ್ಬರ ಮೇಲೆ ಕೈ ಮಾಡಿಯು ಗೊತ್ತಿರದ ರಾಯರಿಗೆ, ಜೀವನದಲ್ಲೆ ಮೊದಲ ಬಾರಿಗೆ ಕೋರ್ಟ್ ನಿಂದ ಈ ಥರದ ನೋಟಿಸು ಬಂದಿತ್ತು. ಅವರು ತತ್ತರಿಸಿ ಹೋದರು. ನೀವು ನಮ್ಮ ತಂದೆಯ ಸಮ ಎಂದು ಮಾತಾಡುತ್ತಿದ್ದ ಶೇಷ ಈ ರೀತಿ ಮಾಡುವನೆಂದು ಅವರೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಮುಂದೆ ಶೇಷನಿಗೆ ಹೋಗಿ ಹೀಗೆಕೆ ಮಾಡಿದೆ ಅಂದರೆ ಬಾಯಿಗೆ ಬಂದಂತೆ ಬೈದು ರಾಯರಿಗೆ ಬೇಸರ ಮೂಡಿಸಿದ. ಅದೆ ಬೆಲೆಗೆ ಕೊಟ್ಟರೆ ಕೇಸು ವಾಪಸ್ಸು ತೆಗೆದುಕೊಳ್ಳುವದಾಗಿ ಬ್ಲ್ಯಾಕ್ ಮೈಲ್ ಮಾಡಿದ. ಈಗಾಗಲೆ ಬೆರೆಯವರ ಬಳಿ ಮುಂಗಡ ತೆಗೆದುಕೊಂಡ ರಾಯರು ಮಧ್ಯದಲ್ಲಿ ಸಿಕ್ಕಿಕೊಂಡರು...

...ಈಗಾಗಲೆ ಒಂದು ವರುಷವಾಗಿದೆ. ಕೇಸು ಹಾಗೆ ನಡೆಯುತ್ತಿದೆ. ಖರಿದಿ ಮಾಡಿಕೊಳ್ಳಲು ಬಂದವನು ತನ್ನ ಹಣ ವಾಪಸ್ಸು ಪಡೆದು ಕೇಸು ಮುಗಿದ ಮೇಲೆ ಮನೆಯನ್ನು ತನಗೆ ಕೊಡಬೇಕು ಅಂತ ಹೇಳಿ ಹೋಗಿದ್ದಾನೆ. ರಾಯರು ಆಟ ಆತ ಅಲೆದಾಡುತ್ತಿದ್ದಾರೆ.


ಇದು ನ್ಯಾಯನಾ? ನ್ಯಾಯಾಲಯವನ್ನು ಈ ಥರ ಕೆಟ್ಟದಾಗಿ ಬಳಸಿಕೊಳ್ಳುವುದು ತಪ್ಪಲ್ಲವೇ? ಶೇಷನ ಉದ್ದೇಷವೇ ಅದು! ಕೋರ್ಟ್ ನಲ್ಲಿ ಕೇಸು ನಡಿಯುತ್ತಿರಬೇಕು, ಬೇರೆ ಯಾರೂ ಆ ಮನೆಯನ್ನು ಕೊಂಡುಕೊಳ್ಳಬಾರದು, ತಾನು ಆರಾಮವಾಗಿ ಅಲ್ಲೆ ಝಂಡಾ ಊರುವುದು. ಇದಕ್ಕೆ ಪರಿಹಾರವೇನು? ರಾಯರಿಗೆ ಅಥವ ಈ ಥರ ಮೋಸ ಹೊಗುವ ಎಷ್ಟೊ ಜನರಿಗೆ ಈ ಪ್ರಶ್ಣೆಯ
ಉತ್ತರ ಸಿಕ್ಕಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ!

Wednesday, April 15, 2009

ಆದರ್ಶಗಳ ಕೊಲೆ!

ಮದುವೆಗಿಂತ ಮೊದಲು ನಾನು ಅಂದುಕೊಳ್ಳುತ್ತಿದ್ದೆ, ನನ್ನ ಮದುವೆ ಆದರ್ಶ ಮದುವೆ ಅಗಬೇಕು. ಹುಚ್ಚಾ ಪಟ್ಟೆ ಖರ್ಚು ಆಗಬಾರ್ದು, ರೆಜಿಸ್ಟರ್ ಮ್ಯಾರೇಜ್ ಆಗ್ಬೇಕು! ಇತ್ಯಾದಿ ಇತ್ಯಾದಿ. ಡೊಡ್ಡ ದೊಡ್ಡ ಆದರ್ಶಗಳು. ಆದರೆ ಆದದ್ದೇ ಬೇರೆ! ರೆಜಿಸ್ಟರ್ ಮ್ಯಾರೇಜ್ ಆಗ್ಲಿಲ್ಲಾ. ಒಳ್ಳೆ ಅದ್ಧೂರಿಯಾಗಿ ಮದುವೆಯಾಯ್ತು. ಅಂದುಕೊಂಡದ್ದಕ್ಕಿಂತ ಜಾಸ್ತಿ ಖರ್ಚು ಆಯ್ತು! ಅದಕ್ಕೆಲ್ಲಾ ಕಾರಣಗಳು ಇದ್ವು ಅಥವ ಅದಕ್ಕೆ ನಾನೇ ಕಾರಣ ಹುಡುಕಿದ್ದಿರಬೆಕು. ಆದರೆ ಒಂದು ಮಾತ್ರಾ ನಿಜ ಏನೇ ಆದರ್ಶಗಳನ್ನು ಇಟ್ಟುಕೊಂಡ್ರೂ ಅದನ್ನು ಪಾಲಿಸೋ ಜನ ತುಂಬಾ ಕಡಿಮೆ. ಯಾಕೆ ಹೀಗಾಗುತ್ತೆ ಅಂತ? ಪರಿಸ್ಥಿತಿ ಹಾಗೆ ಬರುತ್ತೆಯೆ? ಅಥವಾ ಸಮಾಜದಲ್ಲಿದ್ದು ಬೇರೆ ರೀತಿಯಲ್ಲಿ ಯೋಚನೆ ಮಾಡೊಕೆ ಭಯವೆ?ಮಕ್ಕಳೆ ಬೇಡ ಅಂತೀವಿ. ಯಾವುದಾದರು ಅನಾಥ ಮಗುವನ್ನು ದತ್ತು ತೊಗೊಂಡು ಸಾಕ್ತಿನಿ ಅಂತೀವಿ! ಆದರೆ ಗೆಳೆಯನೊಬ್ಬ ಅಪ್ಪ ಆಗ್ತಿರೊ ವಿಷಯ ಕೇಳಿ ಅಸೂಯೆಯಿಂದ ಕರುಬಿ ನಾನು ಅಪ್ಪ ಆಗ್ಲೇಬೇಕು ಅನ್ನೊ ಹಠ ತೊಡ್ತಿವಿ. ಯಾಕೆಂದರೆ ಸಮಾಜಕ್ಕೆ ತಾನು ಗಂಡಸು ಅನ್ನೊದನ್ನ ಪ್ರಮಾಣಿಸಿ ತೋರಿಸಬೆಕಲ್ಲಾ. ಇಲ್ಲದಿದ್ರೆ, ಮಿತ್ರರು, ಸಂಬಂಧಿಗಳು ಆಡೊ ಕುಹಕದ ಮಾತು ಸಹಿಸಬೇಕು! ನನ್ನ ಗೆಳೆಯನೊಬ್ಬನಿಗೆ ಅಪ್ಪನಾಗೊ ಸಡಗರ ಒದಗಿ ಬಂತು. ಆತ ನನಗೆ ಫೋನ್ ಮಾಡಿದಾಗಲೆಲ್ಲ ಕೇಳೋನು "ನಿಮ್ದು ಯಾವಾಗರಿ ಸುದ್ದಿ ? ಏನೂ ವಿಶೇಷ ಇಲ್ಲೇನು", ಅರೇ ಇದಾವ ಲೆಕ್ಕ? ಅವನದು ವಿಶೇಷ ಆಗಿದ್ದೆ ತಡ, ಹಿಂಗಾಡೊದಾ? ಹಿಂಗಾದಾಗ ಮೊದಲು ಒಂದು ಮಗು ಆಗ್ಲಿ ಆಮೇಲೆ ನೋಡಿದ್ರಾಯ್ತು ಅಂತ ಶುರು ಹಚ್ಕೋತೀವಿ. ಇದೆ ಅಲ್ವೆ ಆದರ್ಶಗಳ ಕೊಲೆ?ಕಡಿಮೆ ಪಗಾರ ಬರ್ತಿದ್ದಾಗ, ಇದಕ್ಕಿಂತ ಇನ್ನೂ ಹತ್ತು ಸಾವಿರ ಜಾಸ್ತಿಯಾದ್ರೂ ಸರಿ ಸಮಾಜ ಸೇವೆ ಮಾಡೇ ತೀರುವೆ ಅಂತ ಶಪಥ ಮಾಡ್ತೀವಿ. ಹತ್ತು ಸಾವಿರ ಜಾಸ್ತಿ ಆಗುತ್ತೆ ಆದ್ರೆ ಅದಕ್ಕೆ ತಕ್ಕ ಹಾಗೆ ಬೇರೆ ಖಯಾಲಿಗಳು ಬೆಳೆದಿರುತ್ತವೆ. ಶಪಥ ಮರೆತು ಹೋಗಿರುತ್ತದೆ!ಮೇಲಿನ ಎಲ್ಲ ಉದಾಹರಣೆಗಳಲ್ಲಿ ಸಾಮಾನ್ಯವಾದುದೆಂದರೆ, ನಮ್ಮ ಸುತ್ತಲಿರುವವರ ಪ್ರಭಾವ, ಅವರು ಯಾರೇ ಆಗಿರಬಹುದು. ಅಪ್ಪ, ಅಮ್ಮಾ, ಬಂಧು ಅಥವಾ ಗೆಳೆಯಾ. ರೆಜಿಸ್ಟರ್ ಮದುವೆ ಆಗ್ತೀನಿ ಅಂದಾಗ ಅಪ್ಪ ಅಂತಾನೆ "ನೀನು ಹಿಂಗೆಲ್ಲಾ ಅಂದ್ರ ಹೆಂಗ? ನಮ್ಮ ಮನಿತನಕ್ಕ ತಕ್ಕಂಗ ಲಗ್ನಾ ಆಗ್ಬೇಕು. ಇಲ್ಲಾ ಅಂದ್ರ ಎಲ್ಲಾರು ಎನು ತಿಳ್ಕೋತಾರ?" "ಇದ್ದೊಬ್ಬ ಮಗಂದು ಲಗ್ನಾ ಚೆಂದಾಗಿ ನೋಡೂದು ನನ್ನ ನಸೀಬದಾಗ ಇಲ್ಲಾ ಅಂತ ಕಾಣ್ತದ" ಅಂತ ಅಮ್ಮ ಕಣ್ಣೀರು ಹಾಕ್ತಾಳೆ. ಇದನ್ನೆಲ್ಲ ವಿರೋಧಿಸಿ ತಮ್ಮ ಆದರ್ಶ ಮೆರೆಯುವವರೂ ಇದ್ದಾರೆ. ಆದರೆ ಅವರ ಭಾವನೆಗಳಿಗೆ ಸ್ಪಂಧಿಸಿ ತಮ್ಮ ಆದರ್ಶಗಳನ್ನು ಕೊಲೆ ಮಾಡುವವರೂ ಇನೂ ಜಾಸ್ತಿ ಇದ್ದಾರೆ. ಇದೊಂದು ಸಣ್ಣ ಉದಾಹರಣೆ ಅಷ್ಟೇ. ಆದರೆ ಯಾವುದು ಸರಿ, ಯಾವುದು ತಪ್ಪು ಅಂತ ಮನಸ್ಸು ಯೋಚಿಸಲು ತೊಡಗುತ್ತದೆ...ಆದರ್ಶಗಳನ್ನು ಪಾಲಿಸಿದರೆ ಬೇರೆಯವರಿಗೆ ಬೇಜಾರು, ಪಾಲಿಸದಿದ್ದರೆ ತನ್ನ ಮನಸ್ಸಾಕ್ಷಿಗೆ ದ್ರೋಹ ಬಗೆದಂತೆ! ಇದಕ್ಕೆ ಪರಿಹಾರವೇನು?

Tuesday, April 7, 2009

ನನ್ನ ಮನದಂಗಳದಲಿ ಸಾಹಿತ್ಯದ ಬೀಜ ಬಿತ್ತಿದವರು...

ಒಂದು ಪ್ರಶ್ನೆ ಯಾವಾಗಲೂ ದಿಗಿಲು ಹುಟ್ಟಿಸುತ್ತದೆ! ಯಾರಾದರೂ ಹೊಸಬರು ನಿಮ್ಮ ಊರು ಯಾವ್ದು? ಅಂತ ಕೇಳಿದಾಗ! ಯಾಕಂದ್ರೆ, ನಮ್ಮ ಬೇರುಗಳು ಇರೋದು ಕುರ್ತಕೋಟಿಯಲ್ಲಿ. ನಾನು ಹುಟ್ಟಿದ್ದು ಗದಗದಲ್ಲಿ. ಬೆಳೆದಿದ್ದು ಲಕ್ಷ್ಮೇಶ್ವರದಲ್ಲಿ. ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದು ಧಾರವಾಡ ಹಾಗೂ ಬಾಗಲಕೋಟೆಯಲ್ಲಿ. ಸಧ್ಯದ ವಾಸ್ತವ್ಯ ಬೆಂಗಳೂರಲ್ಲಿ! ಹೀಗೆ, ನನ್ನದು ಯಾವ ಊರು ಅನ್ನೋ ದ್ವಂದ್ವ ನನ್ನದು, ಇರಲಿ.

ನಾನು ಯಾರಿಗಾದರೂ, ನನ್ನ ಕುರ್ತಕೋಟಿ ಬೇರುಗಳ ಬಗ್ಗೆ ಪ್ರಸ್ತಾಪ ಮಾಡಿದ ಕೂಡಲೆ, ಒಂದು ಪ್ರಶ್ನೆಯನ್ನು ನಿರೀಕ್ಷಿಸುತ್ತೇನೆ "ಅರೇ, ಕೀರ್ತಿನಾಥ ಕುರ್ತಕೋಟಿ ಅವರು ನಿನಗೆ ಸಂಬಂಧಾನಾ?" ಈ ಪ್ರಶ್ನೆ ನನಗೆ ಯಾವಾಗಲೂ ಖುಷಿ ಕೊಡುತ್ತೆ. ಹೌದು, ಅವರು ನನ್ನ ಸ್ವಂತ ದೊಡ್ಡಪ್ಪ! ಅಥವ ಅವರ ಖಾಸ್ ತಮ್ಮನ (ಶಶಿಕಾಂತ ಕುರ್ತಕೋಟಿ) ಮಗನಾಗಿ ಹುಟ್ಟಿದ್ದು ನನ್ನ ಅದೃಷ್ಟ. ಅವರ ಬಗ್ಗೆ ವಿವರವಾಗಿ ಬರೆಯುವಷ್ಟು ಪ್ರತಿಭೆ ಅಥವ ತಾಕತ್ತು ಎರಡೂ ನನ್ನಲ್ಲಿ ಇಲ್ಲ ಬಿಡಿ. ಅವರು ಕನ್ನಡದ ಅತೀ ಶ್ರೇಷ್ಠ ವಿಮರ್ಶಕರಲ್ಲೊಬ್ಬರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ನಾನು ಅವರ ಜೊತೆ ಕಳೆದ ಕೆಲವು ಅಮೂಲ್ಯ ಕ್ಷಣಗಳ ಬಗ್ಗೆ ಬರೆಯಲು ನನಗೆ ಖುಷಿ. ನಾವು ಧಾರವಾಡದಲ್ಲಿ ಇದ್ದಾಗ, ದೊಡ್ಡಪ್ಪನ ಮನೆಗೆ ಆಗಾಗ ಹೋಗುತ್ತಿದ್ದೆ. ದೊಡ್ಡಪ್ಪನನ್ನು ಏಕವಚನದಲ್ಲಿ ಕರಿಯುತ್ತಿದೆ ಅನ್ನೋದು ನನಗೆ ಒಂಥರ ಪ್ರತಿಷ್ಠೆಯ ಸಂಗತಿ!. ನಾನು ಹೋದಾಗಲೆಲ್ಲ ಅವರು ಏನೋ ಒಂದು ಬರೀತಾ ಕೂತಿರೋರು ಅಥವ ಯಾರೋ ಸಾಹಿತ್ಯಾಸಕ್ತರ ಜೊತೆ ಹರಟೆ ಹೊಡಿತಾ ಕೂತಿರೋರು. ನನಗೆ ಅವರು ಒಬ್ಬರೇ ಸಿಗುವುದು ಅಪರೂಪ, ಅದರೆ ಸಿಕ್ಕರೇ ನನ್ನ ಅದೃಷ್ಟ. "ಏನೋ ಬರಿಲಿಖತ್ತಿಯಲ್ಲಪ್ಪಾ" ಅಂತ ಶುರು ಮಾಡುತ್ತಿದ್ದೆ (ಹಾಗೆ ಕೇಳುವಷ್ಟು ಸಲಗೆ ಅವರ ಮೇಲೆ ನನಗಿತ್ತು). ನಾನು ಅಷ್ಟು ಕೇಳುತ್ತಲೆ ಬಾಯಲ್ಲಿ ಸದಾ ಇರುವ ತಾಂಬೂಲವನ್ನು ಉಗಿದು ಬರುತ್ತಿದ್ದರು "ಯಾಕ್ಲೇ ಭಾಳ ದಿವ್ಸದ ಮ್ಯಾಲೆ ಬಂದ್ಯಲ್ಲ" ಅಂತ ಅಕ್ಕರೆಯಿಂದ ಕೇಳುತ್ತಿದ್ದರು. ಅಲ್ಲಿಗೆ ನಮ್ಮ ಸಂಭಾಷಣೆ ಶುರು! ಅವರಿಗೆ ಹರಟೆ ಪ್ರಿಯ ಅನ್ನುವ ಅವರ ದುರ್ಬಲತೆಯನ್ನು (?) ನಾನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದೆ. ವಿಧ ವಿಧವಾದ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ರಾಜಕೀಯದಿಂದ ಹಿಡಿದು ಕುಮಾರವ್ಯಾಸನ ವರೆಗೂ. ಅವರು ನಿಜಕ್ಕು ಒಬ್ಬ ಓಡಾಡುವ ಅಥವ ಮಾತನಾಡುವ ನಿಘಂಟು ಅಂದ್ರೆ ತಪ್ಪಾಗಲಾರದು. ಅವರು ಒಮ್ಮೆ ಹೇಳಿದ್ದು ನೆನಪಿದೆ. ಕುಮಾರವ್ಯಾಸ (ಗದುಗಿನ ನಾರಾಣಪ್ಪ) ನಮ್ಮ, ಅಂದರೆ ಕುರ್ತಕೋಟಿ ಮನೆತನದವನಂತೆ! ನನಗೆ ನಿಜಕ್ಕೂ ಹೆಮ್ಮೆಯ ವಿಷಯ. ಅದಕ್ಕೆ ಇರಬೇಕು ನನ್ನ ದೊಡ್ಡಪ್ಪನ ಬಾಯಲ್ಲಿ ಕುಮಾರವ್ಯಾಸ ಭಾರತ ಪೂರ್ತಿಯಗಿ ನಲಿದಾಡುತ್ತಿತ್ತು. ನಾನು ಎಷ್ಟೋ ಸಾರಿ ಅವರ ಜೊತೆ ಅವರ ಪ್ರವಚನಕ್ಕೆ ಹೋಗಿದ್ದಿದೆ. ಅಂದು ನನಗೆ ನಿಜಕ್ಕೂ ರಸದೌತಣ! ನಾನು ಆಗಾಗ ಮಯೂರ ಮತ್ತು ಕಸ್ತೂರಿಯಲ್ಲಿ ಕೆಲವು ಚಿಕ್ಕ ಪುಟ್ಟ ಲೇಖನ ಅಥವ ಚುಟುಕು ಬರೆಯುತ್ತಿದ್ದೆ. ಅವು ಪ್ರಕಟವಾದಾಗ ಅದನ್ನೊಯ್ದು ದೊಡ್ಡಪ್ಪನ ಮುಂದೆ ಹಿಡಿಯುತ್ತಿದ್ದೆ. ನನ್ನದು ಹುಂಬು ಧೈರ್ಯ! ಅಂಥ ದೊಡ್ಡ ವಿಮರ್ಶಕನೆದುರು ನನ್ನ ಪುಟಗೋಸಿ ಲೇಖನ ತೋರಿಸುವುದೆಂದರೆ ಹುಂಬ ಧೈರ್ಯವಲ್ಲದೆ ಮತ್ತೇನು?. ಒಂದು ಸಾರಿ ನಾನು ಉಪಯೋಗಿಸಿದ ಭಾಷೆ ಬಗ್ಗೆ ಸ್ವಲ್ಪ ತಕರಾರು ತಗೇದ ದೊಡ್ಡಪ್ಪ ನನ್ನನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಸ್ವಲ್ಪ ಮಟ್ಟಿಗೆ ಅದನ್ನು ತಿದ್ದಿಕೊಂಡು ಇನ್ನೊಂದು ಲೇಖನ ಬರೆದು ಅವರಿಂದ ಶಭಾಸ್ ಗಿರಿ ತೊಗೊಂಡ ಮೇಲೆಯೇ ನನಗೆ ಸಮಾಧಾನವಾಗಿದ್ದು! ನಂತರ ದೊಡ್ಡಪ್ಪ ವಿಧಿವಶವಾದರೂ, ಹೀಗೆ ಅವರ ಜೊತೆ ಕಳೆದ ಹಲವಾರು ನೆನಪುಗಳು ನನ್ನಲ್ಲಿ ಇನ್ನೂ ಜೀವಂತವಾಗಿವೆ...

ಇನ್ನು ನನ್ನ ಅಮ್ಮನ (ಪರಿಮಳ ಕುರ್ತಕೋಟಿ) ಬಗ್ಗೆ ಒಂದು ದೊಡ್ಡ ಪುಸ್ತಕ ಬರೆಯುವಷ್ಟು ನನ್ನ ಹತ್ರ ಸಾಮಗ್ರಿ ಇದೆ, ಒಂದು ದಿನ ಬರೆದೇನು ಎನ್ನುವ ಆತ್ಮ ವಿಶ್ವಾಸವು ಇದೆ. ನಾನ್ನಲ್ಲಿ ತುಂಬ ಪ್ರಭಾವವನ್ನು ಬೀರಿದ ಮೊದಲ ವ್ಯಕ್ತಿ ನನ್ನಮ್ಮ. ನನಗೆ ತಿಳುವಳಿಕೆ ಬಂದ ಮೇಲೆ ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಅವಳದು ದೊಡ್ಡ ಸ್ಥಾನ. ಅವಳು ಪ್ರಭುದ್ಧ ಲೇಖಕಿ. ಅವಳು ಬರೆದ ಎಷ್ಟೋ ಲೇಖನಗಳು ಹಾಗು ಸಣ್ಣ ಕತೆಗಳು ನಾಡಿನ ಹಲವಾರು ಪ್ರಸಿದ್ಧ ಪತ್ರಿಕೆಗಳಾದ ತರಂಗ, ತುಷಾರ, ಸುಧಾ, ಮಯೂರ, ವನಿತಾ, ಮತ್ತು ಪ್ರಜಾವಾಣಿಯಲ್ಲಿ ಪ್ರಕಟವಾಗಿವೆ. ಅವಳ ಸಣ್ಣ ಕತೆಗಳ ಸಂಗ್ರಹವಾದ "ತುಳಸಿ" ಪುಸ್ತಕವೂ ಬಿಡುಗಡೆಯಾಗಿದೆ. ಮೊದಲಿನಿಂದಲೂ ಅಮ್ಮ ನಾಸ್ತಿಕಳು. ಹಾಗು ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಅವಳೆಂದೂ ಸಹಿಸುತ್ತಿರಲಿಲ್ಲ. ಇವೇ ಅವಳ ಕಥಾ ವಸ್ತುಗಳು ಕೂಡ ಆಗಿರುತ್ತಿದ್ದವು. ಆಗ ನಮ್ಮ ತಂದೆಗೆ ಲಕ್ಷ್ಮೇಶ್ವರದಲ್ಲಿ ಉದ್ಯೋಗ. ನನ್ನ ತಂದೆಯು ಅಮ್ಮನಿಗೆ ತುಂಬ ಪ್ರೋತ್ಸಾಹ ನೀಡುತ್ತಿದ್ದರು. ಲಕ್ಷ್ಮೇಶ್ವರ ಒಂದು ಐತಿಹಾಸಿಕ ಸ್ಥಳ (ಅದರ ಬಗ್ಗೆ ಮತ್ತೊಮ್ಮೆ ಬರೆದೇನು). ಆ ಊರಲ್ಲಿ ನನಗೆ ತಿಳಿದ ಮಟ್ಟಿಗೆ ಪ್ರಥಮ ಮಹಿಳಾ ಸಂಘವನ್ನು ನನ್ನಮ್ಮನೇ ಶುರು ಮಾಡಿದ್ದು. ಅಮ್ಮನ ಎಷ್ಟೋ ಬರಹಗಳು ದೊಡ್ಡ ಸಂಚಲನವನ್ನೇ ಉಂಟು ಮಾಡಿದ್ದವು. ನನಗೆ ಚೆನ್ನಾಗಿ ನೆನಪಿದೆ, ಒಂದು ಸಲ ಅವಳು ಬರೆದ ಲೇಖನ ಎಷ್ಟು ವಾರಗಳ ವರೆಗೆ ಚರ್ಚೆಯಾಯ್ತೆಂದರೆ, ಕೊನೆಗೆ ಸಂಪಾದಕರು ವಿನಂತಿ ಮಾಡಿಕೊಂಡು ಆ ಚರ್ಚೆಗೆ ಮಂಗಳ ಹಾಡಬೇಕಾಯಿತು! ಇಂಥ ಉದಾಹರಣೆಗಳು ಹಲವಾರು. ಈಗಿದ್ದಿದ್ದರೆ ಅವಳ ಎಷ್ಟು ಪುಸ್ತಕಗಳು ಪ್ರಕಟವಾಗಿರುತ್ತಿದ್ದವೋ ಏನೊ. ಅನಾರೋಗ್ಯದ ಕಾರಣ ಅವಳಿಗೆ ತನ್ನನ್ನು ತಾನು ಪೂರ್ತಿಯಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲಾಗಲಿಲ್ಲ. ತನ್ನ ೪೯ ನೆ ವಯಸ್ಸಿಗೆ ನಮ್ಮನ್ನೆಲ್ಲ ಬಿಟ್ಟು ನಡೆದುಬಿಟ್ಟಳು :( ...

ಅದೇ ಸಮಯದಲ್ಲಿ ನನ್ನಲ್ಲಿ ಪ್ರಭಾವ ಬೀರಿದ ಇನ್ನೊಬ್ಬ ವ್ಯಕ್ತಿಯೆಂದರೆ ನನ್ನ ಸೋದರ ಮಾವ. ಆತ ನನ್ನಮ್ಮನ ಖಾಸ್ ತಮ್ಮ. ಹೆಸರು ರಾಘವೇಂದ್ರ ಹುಯಿಲಗೋಳ. ಅತೀ ಚಿಕ್ಕ ವಯಸ್ಸಿನಲ್ಲೆ ೩೦ ರೇಡಿಯೊ ನಾಟಕಗಳನ್ನು ಆತ ಬರೆದಿದ್ದ. ಎಲ್ಲವೂ ಹಾಸ್ಯಮಯವೇ. ನನ್ನಲ್ಲಿ ಹಾಸ್ಯ ರಸವನ್ನು ತುಂಬಿದಾತ. ಅವನ ಜೊತೆ ಮಾತನಾಡುವುದೆ ಒಂದು ಮಜ! ಅವನ ಮಾತಿನಲ್ಲಿ ಅಷ್ಟು ಹಾಸ್ಯ ತುಂಬಿರುತ್ತಿತ್ತು.

ಇವರೆಲ್ಲರ ಪ್ರಭಾವದಿಂದಲೋ ಏನೊ ನಾನೂ ಕತೆ, ಕಾದಂಬರಿ ಓದಲು ಶುರು ಮಾಡಿದೆ. ನನಗೆ ತುಂಬ ಪ್ರೀಯವಾದ ಪುಸ್ತಕವೆಂದರೆ ಬೀಚಿ ಯವರ ಭಯಾಗ್ರಫಿ. ಓದುವುದರ ಜೊತೆಗೆ ಬರೆಯುವ ಗೀಳು ಹತ್ತಿತು. ಮೊದಮೊದಲು ನನ್ನ ಬರಹಗಳು ಸಣ್ಣ ಚುಟುಕುಗಳಿಗೆ ಸೀಮೀತವಾಗಿದ್ದವು. ಆಗ ಇನ್ನು ಹೊಸತು ನನ್ನದೊಂದು ನಗೆ ಹನಿ ಮಯೂರದಲ್ಲಿ ಪ್ರಕಟವಾಗಿತ್ತು. ನನಗೋ ಸಂಭ್ರಮ. ಗೆಳೆಯರಿಗೆಲ್ಲ ತೋರಿಸಿದೆ. ಬಹಳಷ್ಟು ಹುಡುಗರು ಮೆಚ್ಚುತ್ತಿದ್ದರು ಆದರೂ ಸಹಿಸಲಾರದವರೂ ಇರ್ತಾರಲ್ಲ? ಒಬ್ಬ ಕುಹಕವಾಡಿದ "ಕುರ್ತಕೋಟಿ ಅಂತ ನಿನ್ನ ಅಡ್ಡಹೆಸರು ನೋಡಿ ಪ್ರಕಟ ಮಾಡ್ತಾರ, ಇಲ್ಲ ಅಂದ್ರ ಕಷ್ಟ" ಅಂದ! ನನಗೆ ಇರಬಹುದೇ ಅಂತ ಸಂಶಯವಾಯ್ತು. ಕೂಡಲೇ ಮತ್ತೋಂದು ಲೇಖನ ರೆಡಿ ಮಾಡ್ದೆ. ಈ ಸಲ "ಪರಶುರಾಮ" ಅಂತ ಕಾವ್ಯ ನಾಮ ಇಟ್ಕೋಂಡು ಕಳಿಸಿದೆ. ಅದೂ ಪ್ರಕಟ ಆಯ್ತು. ಅದನ್ನು ನನ್ನ ಆ ಗೆಳೆಯನಿಗೆ ತೋರಿಸಲು ಮರೆಯಲಿಲ್ಲ. ಆತನ ಮುಖ ನೋಡುವಂಗಿತ್ತು. ಆದರೆ ಒಂದು ತಮಾಶೆಯಾಗಿತ್ತು. ನನ್ನ ಲೇಖನದ ಗೌರವಧನ ಮನಿ ಒರ್ಡರ್ ಮೂಲಕ ಬಂದಿತ್ತು. ನಾನಾಗ ಮನೆಲಿರಲಿಲ್ಲ. ಪೋಸ್ಟ್ ಮನ್, ನನ್ನ ತಂದೆಗೆ, ಪರಶುರಾಮ ಅನ್ನೋರು ಇದಾರಾ ಅಂತ ಕೇಳಿದ್ನಂತೆ. ಅಪ್ಪನಿಗೆ ತನ್ನ ಮಗ ಪರಶುರಾಮ ಆಗಿರೊ ಸಂಗತಿ ಗೊತ್ತಿರಲಿಲ್ಲವಾದರಿಂದ, ಆ ಹೆಸರಿನವರು ತಮ್ಮ ಮನೇಲಿ ಯಾರೂ ಇಲ್ಲ ಅಂತ ಅವನ್ನ ವಾಪಸ್ಸು ಕಳಿಸಿದ್ರಂತೆ! ಆಮೇಲೆ ಆ ಪೋಸ್ಟ್ ಮನ್ ಗೆ ತಿಳಿಸಿ ಹೇಳೊದ್ರಲ್ಲಿ ನನಗೆ ಸಾಕು ಬೇಕಾಗಿ ಹೋಯಿತು. ಆಮೇಲೆ ಎಂದೂ ನಾನು ಕಾವ್ಯನಾಮ ಇಟ್ಟುಕೊಳ್ಳುವ ಗೋಜಿಗೆ ಹೊಗಲಿಲ್ಲ ಬಿಡಿ! ಆಮೇಲೆ ಸಣ್ಣ ಲೇಖನ ಗಳನ್ನು ಬರೆಯಲು ಶುರು ಮಾಡಿದೆ. ಆದರೂ ನನಗೆ ತುಂಬ ಪ್ರಿಯವಾದ ಪ್ರಕಾರ ಎಂದ್ರೆ "ಹಾಸ್ಯ" ಸಧ್ಯಕ್ಕೆ ಹಾಸ್ಯ ಬರಹಗಳ ಕಡೆಗೆ ಒಲವು ಜಾಸ್ತಿ. ಈಗೆಲ್ಲ ನನ್ನ ಲೇಖನಗಳನ್ನ ಅಂತರ್ ಜಾಲದಲ್ಲೇ ಪ್ರಾಕಟಮಾಡ್ತೀನಿ. ಯಾಕಂದ್ರೆ ಇಲ್ಲಿ ನನ್ನ ಲೇಖನಗಳನ್ನು ಯಾರೂ ಕಸದಬುಟ್ಟಿಗೆ ಹಾಕುವುದಿಲ್ಲವೆಂಬ ವಿಶ್ವಾಸ :). ನಂತರ ವೃತ್ತಿಯಲ್ಲಿ ತೊಡಗಿಸಿಕೊಂಡ ಮೇಲೆ, ಸ್ವಲ್ಪ ಮಟ್ಟಿಗೆ ನನ್ನ ಸಾಹಿತ್ಯ ಕೃಷಿ ನಿಂತು ಹೋಗಿತ್ತು. ಈ ನಡುವೆ ನನ್ನ ಬಾಸ್ (ಕೃಷ್ಣ ರಾಜ್) ನನಗೆ ತುಂಬಾ ಪ್ರೋತ್ಸಾಹಿಸಿ ಮತ್ತೆ ಬರೆಯುವಂತೆ ಪ್ರೇರೇಪಿಸುತ್ತಿದ್ದಾರೆ. ಅವರಿಗೆ ನನ್ನ ಚಿರಋಣಿ.

ಮುಂದೆ ಏನೇನೋ ಯೋಜನೆಗಳಿವೆ. ಅಮ್ಮನ ಅಪ್ರಕಟಿತ ಕಾದಂಬರಿ (ವಡ್ಡಾರಾಧನೆ) ಪ್ರಕಟಿಸಬೇಕು. ಅಮ್ಮನ ಕನಸಾದ ವೃಧ್ಧಾಶ್ರಮವೊಂದನ್ನು ನಡೆಸಬೇಕು. ಕುರ್ತಕೋಟಿ ವೆಬ್ ಸೈಟು, ಸಿಕ್ಕಾಪಟ್ಟೆ ಓದಬೇಕು ಮತ್ತು ಬರೀಬೇಕು, ಓಳ್ಳೆ ಸಿನಿಮಾವೊಂದು ನಿರ್ಮಿಸಬೇಕು... ಹೀಗೆ ಹಲವಾರು ಕನಸುಗಳು. ಎಲ್ಲವನ್ನೂ ಮಾಡುವ ಹಂಬಲವೇನೋ ಇದೆ, ಆದರೆ ಮಾಡೇ ತೀರುವೆನೆಂಬ ಛಲದ ಕೊರತೆ ಇದೆ ಏನೋ ಎನ್ನುವ ಸಂಶಯವೂ ಇದೆ. ನೋಡೋಣ ... ನಮಸ್ಕಾರ.

Saturday, January 19, 2008

"ಶೌಚ"ನೀಯ ಕತೆ

ಓದುಗರು ದಯವಿಟ್ಟು ಬೇಸರಿಸಬಾರದು, ನನಗೆ ಇದಕ್ಕಿಂತ ಒಳ್ಳೆಯ ತಲೆಬರಹ ಹೊಳೆಯಲಿಲ್ಲ. ಅಂದ ಹಾಗೆ, ಇದು ಶೌಚದ ಬಗ್ಗೆ ಇರುವ ಮೋಜಿನ ಬರಹ. ಶೌಚಕ್ಕೆ ಅವಸರವಾದಾಗ ಅದು ಶೋಚನೀಯ ಪರಿಸ್ಠಿತಿಯೇ ಎಂಬುದು ನನ್ನ ಅನುಭವಕ್ಕೆ ಬಂದ ಸಂಗತಿ; ಅದೂ ಆ ವೇಳೆಗೆ ಸರಿಯಾದ ವ್ಯವಸ್ಠೆ ಇಲ್ಲದಿದ್ದರೆ..? ಅಧೋಗತಿಯೇ! ಅಂತಹ ಕೆಲವು ಅನುಭವಗಳ ಕಂತೆಯೇ ಈ ಶೌಚನೀಯ ಕತೆ.
ನಾನು ಚಿಕ್ಕವನಿದ್ದಾಗಿನ ಸಂಗತಿ. ನಾವು ಆಗಾಗ, ನಮ್ಮೂರಿನ ಹತ್ತಿರದಲ್ಲೇ ಇರುವ, ನನ್ನ ಅತ್ತೆಯ ಊರಾದ ದೊಡ್ಡೊರಿಗೆ ಹೊಗುತ್ತಿದ್ದೆವು. ವಿಪರ್ಯಾಸವೆಂದರೆ, ಅದೊಂದು ಕುಗ್ರಾಮ, ಆದರೂ ಅದರ ಹೆಸರು ಮಾತ್ರ ದೊಡ್ಡೂರು! ಬಹುಶಃ ಹಿಂದಿನ ಕಾಲದಲ್ಲಿ ಆ ಪ್ರದೇಶದಲ್ಲಿ ಇದೇ ದೊಡ್ಡ ಊರಾಗಿದ್ದಿರಬಹುದು, ಇರಲಿ. ನಾನು ಅಲ್ಲಿಗೆ ಹೊಗುತ್ತಿದ್ದುದೇ ಅವಲಕ್ಕಿ ಆಸೆಗೆ! ಯಾಕೆಂದರೆ, ಹೋದ ತಕ್ಷಣ ಅತ್ತಿಗೆ, ಹಚ್ಚಿದ ಅವಲಕ್ಕಿ ತಿನ್ನಲು ಕೊಡುತ್ತಿದ್ದಳು. ಜೊತೆಗೆ ಕೆನೆ ಕೆನೆ ಮೊಸರು, ಕೇಳಬೆಕೆ? ಓಂದು ರೌಂಡು ಮುಗಿಸಿ ಇನ್ನೊಂದಕ್ಕೆ ಅಣಿಯಾಗುತ್ತಿದ್ದೆ. ಆದರೆ ಅಮ್ಮನ ಮುಖ ಮಾತ್ರ ತಪ್ಪಿಸುತ್ತಿದ್ದೆ. ಯಾಕೆಂದರೆ, ನಾನು ಆ ಪರಿ ತಿನ್ನುವುದು ಅವಳಿಗೆ ಇಷ್ಟವಿರಲಿಲ್ಲ. ಈಗ ಅದು ನನ್ನ ಹೆಂಡತಿಗೆ ಇಷ್ಟವಿಲ್ಲ. ಗಂಡಸಿನ ಪರಿಸ್ಠಿತಿಯೇ ಹಾಗೆ, ಚಿಕ್ಕವನಿದ್ದಾಗ ಅಮ್ಮನಿಗೆ ಹೆದರಬೇಕು; ದೊಡ್ಡವನಾದಾಗ ಹೆಂಡತಿಗೆ! ಆದರೆ ಒಂದು ಮಾತ್ರ ನಿಜ, ನಾನು ಆ ಪರಿಯಾಗಿ ತಿಂದ ಮೇಲೆ ಏನಾಗುವುದೆಂದು ಅಮ್ಮನಿಗೆ ಚೆನ್ನಾಗಿ ಗೊತ್ತಿತ್ತು. (ಈಗ ಅದು ನನ್ನ ಹೆಂಡತಿಗೂ ಗೊತ್ತಿದೆ!) ನನಗೆ ಗೊತ್ತಿರಲಿಲ್ಲವೆ? ಗೊತ್ತಿತ್ತು ಆದರೂ ಆಸೆ! ಅವಲಕ್ಕಿ ಅಂದ ಮೇಲೆ ಒಂದೇ ರೌಂಡು ತಿನ್ನುವುದೆ? ಆಮೇಲೆ ಏನಾಗುತ್ತೋ ನೋಡೋಣ ಎನ್ನುವ ಭಂಡ ಧೈರ್ಯ. ಶುರುವಾಯ್ತು ನೋಡಿ, ಹೊಟ್ಟೆಯಲ್ಲಿ, ಗಡ ಗಡ ಶಬ್ದ! ಜೊತೆಗೆ ನಡುಕ ಕೂಡ! ಯಾಕೆಂದರೆ, ದೊಡ್ಡೂರಿನಲ್ಲಿದ್ದುದೊಂದು ಅದ್ಭುತವಾದ ಶೌಚಾಲಯ! ಅದನ್ನು ನೆನೆಸಿಕೊಂಡರೆನೇ ಭಯವಾಗುತ್ತಿತ್ತು. ಅದು ಇದ್ದುದೇ ಹಾಗೆ. ಹಳೇ ಕಾಲದ ಭೂತ ಬಂಗ್ಲೇ ನೆನಪಿಸುವಂತಹ, ಕಲ್ಲಿನಲ್ಲಿ ಕಟ್ಟಿದ ಗೋಡೆಗಳು. ಮೇಲ್ಗಡೆ ಸೂರಂತೂ ಇಲ್ಲವೇ ಇಲ್ಲ. ಮೇಲಿನಿಂದ ಹಕ್ಕಿಗಳು ಹಿಕ್ಕಿ ಹಾಕಿದರೆ, ಒಳಗೆ ಕುಳಿತವರ ಮೇಲೇ ಡ್ಯೆರೆಕ್ಟಾಗಿ ಬೀಳುತ್ತಿತ್ತು. ಕಟ್ಟಿಗೆಯ ಬಾಗಿಲುಗಳು. ಸ್ವಲ್ಪ ಕೂಲಂಕುಷ್ವವಾಗಿ ವೀಕ್ಷಿಸಿದರೆ ,ಒಳಗೆ ಕುಳಿತವರು ಯಾರು ಅಂತ ಸ್ಪಷ್ಟವಾಗಿ ಹೇಳಬಹುದಿತ್ತು! ಇದೆಲ್ಲದರ ಹೊರತಾಗಿ ಅದು ಇದ್ದುದು ಮನೆಯಿಂದ ಸ್ವಲ್ಪ ದೂರದಲ್ಲಿ. ಆದ್ದರಿಂದ, ನಾನೊಬ್ಬನೆ ಅಲ್ಲಿಗೆ ಹೋಗುವ ಧೈರ್ಯ ಆಗ ನನ್ನಲ್ಲಿರುತ್ತಿರಲಿಲ್ಲ. ಅಂತೂ ಹರ ಸಾಹಸ ಮಾಡಿ, ಉದರ ಬೇನೆಯನ್ನು ಪರಿಹರಿಸಿಕೊಂಡು ಬರುತ್ತಿದ್ದೆ. ಆಮೇಲೆ ಅಮ್ಮನಿಂದ ಭರ್ತಿ ಬೈಗಳು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಕೆಳಿದ್ಯಾ, ಆ ಪರಿ ತಿನ್ನಬ್ಯಾಡಾ ಅಂದ್ರ! ಬೊರೊಬ್ಬರಿ ಆತು, ಹಿಂಗ ಆಗಬೇಕು ನಿನಗಅಂತ ಒಂದೇ ಸಮನೆ ಬೈಯುತ್ತಿದ್ದಳು. ನಾನು ಇನ್ನು ಮೇಲೆ ಅವಲಕ್ಕಿ ತಿನ್ನಬಾರದು ಅಂತ ನಿರ್ಧಾರ ಮಾಡುತ್ತಿದ್ದೆ. ಈಗಲೂ ಆಗಾಗ ಆ ನಿರ್ಧಾರ ತೆಗೆದುಕೊಳ್ಳುತ್ತಿರುತ್ತೇನೆ!
ಹೀಗೆ ನಾನು ಅನುಭವಿಸಿದ ಸಂಕಟಗಳು ಹಲವಾರು. ಬಸ್ಸಿನಲ್ಲಿ ಪ್ರಯಾಣಿಸುವಾಗಲೂ, ಸಂಕಟ ಅನುಭವಿಸಿದ್ದಿದೆ. ಒಂದು ಸಲ ಬಸ್ಸಿನಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದೆ. ಬೆಳಿಗ್ಗೆ ೬ ಗಂಟೆಗೆ ಬಸ್ಸು ಮೈಸೂರು ತಲುಪುವ ನಿರೀಕ್ಷೆ ಇತ್ತು. ನನಗೋ ೫ ಗಂಟೆಗೇ ಅವಸರ ಶುರುವಾಯ್ತು. ಹಾಗೂ ಹೀಗು ಮೈಸೂರು ತಲುಪುವವರೆಗೆ ಸಾಕುಬೇಕಾಗಿ ಹೊಯ್ತು. ಆ ವೇಳೆಗೆ ಸಹಪ್ರಯಾಣಿಕರ ಪರಿಸ್ಥಿತಿ ಏನಾಗಿರಬೇಕೆಂದು ಗಮನಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅಂತೂ ಬಸ್ಸು ಇಳಿದ ತಕ್ಷಣ ಅವಸರ ಜಾಸ್ತಿ ಆಯ್ತು. ನನ್ನ ಗ್ರಹಚಾರಕ್ಕೆ ಅವತ್ತೇ ಹೊಸವರ್ಷ ಬೇರೆ, ಅಟೋದವರು ಎಷ್ಟು ಕೆಳುತ್ತಾರೊ ಅಷ್ಟು ಕೊಡಬೆಕು! ಚೌಕಾಷಿ ಮಾಡಲು ಅವಕಾಶವೇ ಇಲ್ಲ. ಅದಿರಲಿ, ನನಗದಕ್ಕೆ ಪುರುಸೊತ್ತೂ ಇರಲಿಲ್ಲ ಬಿಡಿ! ಬೇಗ ಲಾಡ್ಜ ಓಂದಕ್ಕೆ ಒಯ್ದು ವಗಿ ಎಂದು ಆಟೊದವನಿಗೆ ಬೇಡಿಕೊಂಡೆ. ಅವನಿಗೆ ನನ್ನ ಪರಿಸ್ಥಿತಿ ಅರ್ಥವಾಗಿರಬೆಕು. ಅವನು ಅಲ್ಲೆ ಪಕ್ಕದಲ್ಲೆ ಇದ್ದ ಅದ್ಭುತವಾದ ಲಾಡ್ಜ ಒಂದಕ್ಕೆ ವಯ್ದು ವಗೆದ. ಅವನು ಕೆಳಿದಷ್ಟು ಹಣ ತೆತ್ತು ಲಾಡ್ಜು ಸೇರಿಕೊಂಡು ನಿಟ್ಟುಸಿರಿಟ್ಟೆ! ಆದರೆ ಅದೊಂದು ಕಚಡಾ ಹೋಟೇಲ್ ಆಗಿದ್ದರಿಂದ ಬೇರೆ ಕಡೆಗೆ ಹೋಗಬೆಕಾಯ್ತು. ಹೊಸವರ್ಷದ ಬೋನಸ್! ಅದಕ್ಕೆ ನಾನು ರಾತ್ರಿ ಪ್ರಯಾಣವಿದ್ದರೆ ಊಟವನ್ನೇ ಮಾಡುವುದಿಲ್ಲ!
ಇನ್ನೂ ಕೆಲವರನ್ನು ನೋಡಿದ್ದೇನೆ. ಅವರು ಶೌಚಸಮಾಧಿಗೆ ಹೋದರೆಂದರೆ ಹೊರಗೆ ಬರುವುದು ಒಂದೆರಡು ಗಂಟೆಗಳ ಬಳಿಕ. ಅಷ್ಟರವರೆಗೆ ಬೇರೆಯವರ ಗತಿ ಅಧೋಗತಿ! ಅದಕ್ಕೆ ಅಂಥವರು ಮನೆಲಿದ್ದರೆ ಬೇರೆಯವರು, ಬೇಗ ಎದ್ದು ತಮ್ಮ ಕಾರ್ಯ ಮುಗಿಸುವುದು ಒಳ್ಳೆಯದು. ನನ್ನ ಸಂಬಂಧಿಯೊಬ್ಬ ಇದೇ ಜಾತಿಗೆ ಸೇರಿದವನು. ಅವನು ಬೆಳಗಿನ ಪೇಪರ್ ಓದುವುದು ಅಲ್ಲಿಯೇ! ಪೇಪರ್ ಒಂದೇ ಅಲ್ಲ, ಕತೆ, ಕಾದಂಬರಿ ಏನೇ ಆದರೂ ಸರಿ ಅದನ್ನೊಯ್ದು ಶೌಚ ಸಮಾಧಿಯಲ್ಲಿ ಕೂತನೆಂದರೆ ಪೂರ್ತಿ ಕತೆ ಮುಗಿದಾದ ಮೇಲೆಯೇ ಹೊರಗೆ ಬರುವುದು. ಆದರೆ ಆಮೇಲೆ ಪೇಪರಗಳು, ಪುಸ್ತಕಗಳು ಮಾತ್ರ ಬೆರೆಯವರು ಓದುವ ಸ್ಥಿತಿಯಲ್ಲಿ ಇರುವುದಿಲ್ಲ. ಎಲ್ಲ ಹಸಿ ಹಸಿ! ಆದಕ್ಕೆ ಅವನು ನಮ್ಮ ಮನೆಗೆ ಬರುತ್ತಾನೆಂದರೆ, ನನ್ನ ನೆಚ್ಚಿನ ಪುಸ್ತಕಗಳನ್ನೆಲ್ಲ ಮುಚ್ಚಿ ಇಡುತ್ತೇನೆ.
ನಾನು ಚಿಕ್ಕವನಿದ್ದಾಗ ನಡೆದ ಒಂದು ಘಟನೆಯಂತೂ ತುಂಬಾ ಮೋಜಿನದಾಗಿದೆ. ನಾವು ಮಕ್ಕಳಾಗಿದ್ದಾಗ ಈಗಿನ ತರಹ ಕಂಪ್ಯೂಟರು, ವೀಡಿಯೋ ಗೇಮ್ಸು ಇರಲಿಲ್ಲ ನೋಡಿ. ಆಗೆಲ್ಲ ಚಿನ್ನಿ ದಾಂಡು, ಗೋಲಿ ಇಂಥವೇ ಹಲವು ಬಗೆಯ ಆಟಗಳು. ಆದರೆ ನಮಗೆ ಇಷ್ಟಕ್ಕೆ ತೃಪ್ತಿ ಇರಲಿಲ್ಲ. ಹೊಸಾ ಆಟಗಳನ್ನು ಸೃಷ್ಟಿ ಮಾಡ್ತಿದ್ವಿ. ಒಂದು ಸಲ ಹೀಗೇ ಯಾವುದೊ ಹಬ್ಬ ಇತ್ತು. ಎಲ್ಲರ ಮನೆಯಲ್ಲೂ ಒಳ್ಳೆ ಭೂರೀ ಭೊಜನ! ಊಟವಾದ ಮೇಲೆ ಆಟ! ಎಲ್ಲರೂ ಒಂದೆಡೆಗೆ ಸೇರಿದೆವು. ಇವತ್ತು ಯಾವ ಆಟ ಆಡೊದು? ಇದೇ ನಮ್ಮೆಲ್ಲರ ಮುಂದಿದ್ದ ದೊಡ್ಡ ಸಮಸ್ಯೆಯಾಗಿತ್ತು, ಆಗ. ಅಷ್ಟರಲ್ಲೆ ನಮ್ಮಲ್ಲೊಬ್ಬ ಭಯಂಕರವಾಗಿ ಶಬ್ದ ಮಾಡಿದ! ಶಬ್ದ ಎಲ್ಲಿಂದ ಬಂತು ಅನ್ನೊದು ನಿಮ್ಮ ಊಹೆಗೆ ಬಿಟ್ಟ ವಿಷಯ! ಆ ಪರಿ ಹಬ್ಬದ ಊಟವಾದ ಮೇಲೆ ಶಬ್ದ ಎಲ್ಲಿಂದ ತಾನೆ ಬರಲು ಸಾಧ್ಯ! ಎಲ್ಲರೂ ಮೂಗು ಮುಚ್ಚಿಕೊಂಡೆವು, ಸಹಿಸಲಸಾಧ್ಯವಾದ ದುರ್ಗಂಧ! ಇಷ್ಟಕ್ಕೆ ಮುಗಿದಿದ್ದರೆ ಚೆನ್ನಾಗಿತ್ತು. ಆದರೆ ಮತ್ತ್ಯಾವನೋ ಅದೇ ತರಹದ ಶಬ್ದ ಮಾಡಿದ. ಕೇಳಬೇಕೆ, ಅವರಿಬ್ಬರ ಮಧ್ಯೆ ಸ್ಪರ್ಧೆಯೇ ಶುರುವಾಯ್ತು. ಉಳಿದವರೆಲ್ಲ ಇಬ್ಬರಿಗೂ ಹುರಿದುಂಬಿಸಲು ತೊಡಗಿದರು (ಮೂಗು ಮುಚ್ಚಿಕೊಂಡು!). ಹತ್ತು ಆಯಿತು, ಇಪ್ಪತ್ತು ಆಯಿತು, ಊಹುಂ ಇಬ್ಬರಲ್ಲಿ ಯಾರೂ ಸೋಲುವ ಲಕ್ಷಣ ಕಾಣಲಿಲ್ಲ! ಹಾಗೆ ಆಟ ಮುಂದುವರಿಯಿತು. ಸಂಜೆ ಆಗೋಕೆ ಬಂತು. ಇನ್ನೆನು ಆಟದಲ್ಲಿ ಯಾರು ಸೋಲುವರಿಲ್ಲ ಅಂದಾಗ ಇಬ್ಬರಿಗೂ ರಾಜಿ ಮಾಡುವರಿದ್ದೆವು. ಕೊನೆಯದಾಗಿ ಎಂಬಂತೆ ಒಬ್ಬ ಪ್ರಯತ್ನ ನಡೆಸಿದ್ದ. ಅವನ ಪ್ರಯತ್ನ ಸ್ವಲ್ಪ ಜಾಸ್ತಿಯೇ ಅಯ್ತೇನೊ! ಚಣ್ಣದಲ್ಲಿ ಅದರ ಫಲಿತಾಂಶ ಹೊರಬಿತ್ತು. ಮುಂದೆಂದು ಆ ಆಟವನ್ನು ಆಡುವ ಸಾಹಸಕ್ಕೆ ನಾವ್ಯಾರೂ ಹೊಗಲಿಲ್ಲ!
ಈ ತರಹದ ಶಬ್ದ ಮಾಲಿನ್ಯದ (ವಾಯು ಮಾಲಿನ್ಯವೂ ಹೌದು!) ಮೇಲೆ ನಮ್ಮ ಹಿರಿಯರು, ಓಂದು ಶ್ಲೋಕವನ್ನೆ ಸೃಷ್ಟಿ ಮಾಡಿದ್ದಾರೆ!ಭರ್ರಂ ಭುರ್ರಂ ಭಯಂ ನಾಸ್ತಿ!ಟುಸ್ಸಾಕಾರಂ ಘೋರ ಸಂಕಟಂ!ನಿಶ್ಯಬ್ಧಂ ಪ್ರಾಣ ಸಂಕಟಂ!ಈ ಶ್ಲೋಕಕ್ಕೆ ವಿವರಣೆಯ ಅಗತ್ತ್ಯವಿಲ್ಲವೆಂದು ನಂಬಿದ್ದೆನೆ. ಹೀಗೆ ಮೋಜಿನ ಸಂಗತಿಗಳು ಹಲವಾರು. ಸಧ್ಯಕ್ಕಿಷ್ಟು ಸಾಕು ಅನಿಸುತ್ತದೆ. ನೀವೆನಂತೀರಾ?