Saturday, July 7, 2012

ನಾ ಮಾತ್ರ ಮಿಲ್ಟ್ರೀಗೆ ಹೋಗಂಗಿಲ್ಲ!

ದೇಶಭಕ್ತ ತಂದೆಯೊಬ್ಬನಿಗೆ ತನ್ನ ಮಗ ದೊಡ್ಡವನಾದ ಮೇಲೆ ಮಿಲ್ಟ್ರೀಗೆ ಸೇರಿ ದೇಶವನ್ನು ರಕ್ಷಣೆ ಮಾಡಲಿ ಎಂಬ ಆಸೆಯಿತ್ತು. ಮಗ ದೊಡ್ಡವನಾದ, ಆದರೆ ಮಿಲ್ಟ್ರೀಗೆ ಸೇರು ಅಂದ್ರೆ ಮಾತ್ರ "ಊಹೂಂ!" ಅಂದ! ಅಪ್ಪನಿಗೆ ಚಿಂತೆ ಹತ್ತಿಕೊಂಡಿತು. ಒಂದು ದಿನ ಮಗನನ್ನು ಕೂಡಿಸಿಕೊಂಡು ಕೇಳಿದ,

"ಏನು ಕಾರಣ ಮಗನೇ? ಮಿಲ್ಟ್ರೀಗೆ ಹೋಗೋಕೆ ಯಾಕೆ ಬೇಡ ಅಂತೀಯ?"

"ಆಪ್ಪ, ಹೆಳುತ್ತೇನೆ ಕೇಳು. ಮಿಲ್ಟ್ರೀಗೆ ಹೋದರೆ ಎರಡು ಸಾಧ್ಯತೆಗಳು. ಯುದ್ಧ ಆಗಬಹುದು ಅಥವ ಆಗದೇ ಇರಬಹುದು. ಯುಧ್ಧ ಆಗದಿದ್ದರೆ ಸಮಸ್ಸೆ ಇಲ್ಲ, ಆದರೆ ಮತ್ತೆರಡು ಸಾಧ್ಯತೆಗಳು"

"ಹೇಳಪಾ ಮಗನೆ, ಏನವು?"

"ಯುದ್ಧಕ್ಕೆ ನನ್ನನ್ನ ಕಳಿಸಬಹುದು ಅಥವ ಕಳಿಸದೆ ಇರಬಹುದು. ಕಳಿಸದಿದ್ದರೆ ಸಮಸ್ಸೆ ಇಲ್ಲ, ಕಳಿಸಿದರೆ ಮತ್ತೆರಡು ಸಾಧ್ಯತೆಗಳು!"

"ಮುಂದುವರಿಸು..."

"ಯುದ್ಧದಲ್ಲಿ ನಾನು ಸಾಯಬಹುದು ಅಥವಾ ಸಾಯಲಿಕ್ಕಿಲ್ಲ. ಸತ್ತಿಲ್ಲ ಅಂದ್ರೆ ಪರವಾಗಿಲ್ಲ, ಸತ್ತರೆ ಮತ್ತೆರಡು ಸಾಧ್ಯತೆಗಳು"

"ಹೂಂ...?"

"ಸತ್ತಾಗ ನನ್ನನ್ನು ಸುಡಬಹುದು ಅಥವ ಮಣ್ಣಲ್ಲಿ ಹುಗಿಯಬಹುದು. ಸುಟ್ಟರೆ ತೊಂದರೆ ಇಲ್ಲವೇ ಇಲ್ಲ, ಮಣ್ಣಲ್ಲಿ ಹುಗಿದರೆ ಮತ್ತೆರಡು ಸಾಧ್ಯತೆಗಳು!"

"??"

"ನನ್ನನ್ನು ಮಣ್ಣು ಮಾಡಿದ ಜಾಗದಲ್ಲಿ ಗಂಧದ ಗಿಡ ಹುಟ್ಟಬಹುದು ಅಥವಾ ಹುಟ್ಟಲಿಕ್ಕಿಲ್ಲ. ಗಿಡ ಹುಟ್ಟಿಲ್ಲವೆಂದರೆ no problem, ಹುಟ್ಟಿದರೆ ಮತ್ತೆರಡು ಸಾಧ್ಯತೆಗಳು..."

ಅಪ್ಪನಿಗೆ ಆಗಲೆ ಸುಸ್ತಾಗಿತ್ತು, ಆದರೂ ಕುತುಹಲವಿತ್ತು! "ಏನು?" ಅಂದ

"ಆ ಗಂಧದ ಗಿಡದಲ್ಲಿ ಸಾಬೂನು ತಯರಿಸಬಹುದು ಅಥವಾ ತಯಾರಿಸಲಿಕ್ಕಿಲ್ಲ. ಸಾಬೂನು ತಯಾರಾಗಿಲ್ಲ ಅಂದ್ರೆ ಎನೂ ಪ್ರೊಬ್ಲೆಮ್ ಇಲ್ಲಾಪ್ಪ, ಸಾಬೂನು ರೆಡಿ ಆದ್ರೆ, ಅದನ್ನ ಹುಡುಗಿಯರು ಉಪಯೋಗಿಸಿದ್ರೆ, ನನಗೆ ನಾಚಿಗೆ ಆಗುತ್ತೆ! ಅದಕ್ಕೆ ನಾನು ಮಿಲ್ಟ್ರೀ ಸೇರೋಕೆ ಆಗಂಗಿಲ್ಲ ಅಂತ ಹೇಳಿದ್ದು!!!"

ಅಪ್ಪನಿಗೆ ಸುಸ್ತಾಗಿ, ಮಗನನ್ನ ಮಿಲ್ಟ್ರೀಗೆ ಸೇರಿಸೊ ಆಸೆಗೆ ಅವತ್ತಿನಿಂದ ನೀರು ಬಿಟ್ಟ...!


(ಯಾವಾಗಲೋ ಕೇಳಿದ ಕತೆ, ಇವತ್ತ್ಯಾಕೋ ನೆನಪಾತು. ಹಂಚಿಕೊಳ್ಳೋಣ ಅಂತ ಬರದೆ. ಚೊಲೊ ಅನಿಸಿದ್ರ comment ಬರೀರಿ, ಇಲ್ಲಾಂದ್ರ ಸುಮ್ನ ಇದ್ದುಬಿಡ್ರೀ! ಆಗಬಹುದಾ?)

Monday, June 20, 2011

ಮರೆಗುಳಿಗೆ

                      ಮರೆವು ಒಂದು ಕಾಯಿಲೆಯೇ? ಅನುವಂಶೀಯವೇ? ಅಥವಾ ಬರೀ ನಾಟಕವೇ?! ಪ್ರತಿಯೊಬ್ಬ ಹುಲುಮಾನವನಿಗೂ ಮರೆವು ಅನ್ನೋ ರೋಗ ಬಿಟ್ಟಿಲ್ಲ. ನಮ್ಮ ನಾಗ್ಯಾ ನ್ನೇ ತೊಗೋರಿ. ಮುಂಜಾನೆ ಆಫೀಸ್ ಗೆ ಹೋಗೋವಾಗ ಅವನ ಮನದನ್ನೆ ಹೇಳ್ತಾಳೆ "ರೀ ಸಂಜಿ ಮುಂದ ಬರುವಾಗ, ಎಲ್ಲ ಸಾಮಾನು ತೊಗೊಂಡು ಬರ್ರೀ. ಚೀಟಿ ಕಿಸೆದಾಗ ಹಾಕೀನಿ ಮರೀಬ್ಯಾಡ್ರೀ". ಅವಳು ಚೀಟಿಯಲ್ಲಿ ಸಾಮಾನು ಲಿಸ್ಟ್ ಬರೆದು ಗಂಡನ ಜೇಬಿನಲ್ಲಿ ಇಡುವದು ಯಾಕೆ ಅಂದ್ರೆ, ಗಂಡ ಮರೆಗೂಳಿ ಅನ್ನೋದು ಅವಳಿಗೆ ಚೆನ್ನಾಗಿ ಗೊತ್ತಿರುವುದಕ್ಕೆ. ಆದರೆ ಪತಿ ಮಹಾಶಯ ಸಂಜೆ ಖಾಲಿ ಕೈಯಲ್ಲಿ ವಾಪಸ್ಸಾದಾಗ!!? ಅವನು ಹೇಳುತ್ತಾನೆ "ಅಯ್ಯೋ ಸಾರೀ ಲೇ ಪಾ! ಚೀಟಿ ಕಿಸೆದಾಗ ಇರುದ ಮರ್ತು ಬಿಟ್ಟೆ!". ಮರೆತಾನೆಂದು ಚೀಟಿ ಕೊಟ್ಟರೆ ಚೀಟಿಯನ್ನೇ ನೋಡಲು ಮರೆತರೆ ಏನು ತಾನೇ ಮಾಡಲು ಸಾಧ್ಯ? ನಾಗ್ಯಾಂದು ಚಿಕ್ಕವನಿದ್ದಾಗಿಂದ ಇದೆ ಗೋಳು. ನಾನು ಅವನು ಜಿಗರಿ ದೋಸ್ತ್ ಗಳು. ಚಿಕ್ಕವನಿದ್ದಾಗ ಒಂದು ಸಲ ರೇಶನ್ ಅಂಗಡಿಗೆ ಹೋಗಿ ಸಾಮಾನು ತರುವ ಜವಾಬ್ದಾರಿಯನ್ನು ಹೊತ್ತು ಚೀಲವನ್ನು ಹೆಗಲಿಗೆ ಹೊತ್ತು ಹೊರಟ. ಅಂಗಡಿಯಲ್ಲಿ ಉದ್ದನೆಯ ಕ್ಯೂ ನಲ್ಲಿ ನಿಂತು ಬಳಲಿ ಬೆಂಡಾದ ಪಾಪ. ಕೊನೆಗೂ ಇವನ ಸರದಿ ಬಂತು! ರೇಶನ್ ಅಂಗಡಿ ಕಾಕಾ "ರೇಶನ್ ಕಾರ್ಡ್ ಕೊಡಪ ತಮ್ಮ" ಅಂದಾಗಲೇ ನಾಗ್ಯನಿಗೆ ನೆನಪಾದದ್ದು, ತಾನು ಕಾರ್ಡು ಮನೆಯಲ್ಲಿ ಬಿಟ್ಟು ಬಂದ ವಿಷಯ! ಅಷ್ಟು ಅಗಾಧ ನೆನಪಿನ ಶಕ್ತಿ ಅವನದು. ಒಂದೇ ಉಸುರಿಗೆ ಮನೆಗೆ ಹೋಗಿ ಕಾರ್ಡು ತಂದ. ಬಂದ ಕೆಲಸ ಮುಗುದು ಮನೆಗೆ ವಾಪಸ್ಸು ಬಂದಾಗ ಅಪ್ಪ ಕೇಳಿದ "ಎಲ್ಲಿಲೆ ರೆಷನ್ನು ಮಂಗ್ಯಾನ ಮಗನೆ?", ಪಾಪ ನಾಗ್ಯಾ ಸಾಮಾನು ತುಂಬಿರುವ ಚೀಲವನ್ನು ಅಂಗಡಿಯಲ್ಲೇ ಬಿಟ್ಟು ಬಂದಿದ್ದ. ಮತ್ತೆ ಚೀಲ ತರಲು ಅಂಗಡಿಗೆ ತೆರಳಿದ, ಆದರೆ ದಾರಿಯಲ್ಲಿ ಅಪ್ಪ ತನಗೆ "ಮಂಗ್ಯಾನ ಮಗಾ" ಅಂತ ಬೈದರೆ, "ಮಂಗ್ಯಾ" ಯಾರು ಅನ್ನುವ ಚಿಂತೆ ಅವನಿಗೆ ಕಾಡದೆ ಇರಲಿಲ್ಲ!
 ಹೀಗೆ ನಾಗ್ಯಾ ಬೆಳೆದು ದೊಡ್ಡವನಾದ. ಅವನು ಬೆಳೆದಂತೆ ಮರೆವು ಕೂಡ ಅವನೊಂದಿಗೆ ಬೆಳೆಯಿತು. ಸಣ್ಣವನಿದ್ದಾಗ ಚೀಲ ಮರೆಯುತ್ತಿದ್ದವನು ದೊಡ್ಡವನಾದ ಮೇಲೆ ಮೊಬೈಲ್, ಕಾರ್, ಹೀಗೆ ಏನೇನೋ ಮರೆಯತೊಡಗಿದ. ಆದರೂ ಅದಕ್ಕೊಂದು ಮಿತಿ ಬೇಡವೇ? ಮದುವೆಯಾದ ಹೊಸತು, ಹೆಂಡತಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ. ಎಲ್ಲ ಸುತ್ತಾಡಿ ವಾಪಸ್ಸು ಬರುವಾಗ ಅವಳನ್ನು ಅಲ್ಲೇ ಮರೆತು ಬಿಟ್ಟು ಬಂದಿದ್ದ! ಅವಳನ್ನು ನಿಜವಾಗಿಯೂ ಮರೆತು ಬಿಟ್ಟು ಬಂದಿದ್ದನೇ? ಅದಕ್ಕುತ್ತರ ಅವನೇ ಹೇಳಬೇಕು! ಆಗೆಲ್ಲ ಮೊಬೈಲ್ ಇರ್ಲಿಲ್ಲ, ಪಾಪ ಹೆಂಗೋ ಮನೆಗೆ ವಾಪಸ್ಸು ಬಂದಳು. ಪಾಪ ನಾಗ್ಯಾ!

ಆದರೆ ಈ weekness ನ್ನೇ ಎಷ್ಟೋ ಸಲಾ ಸದುಪಯೋಗ ಪಡಿಸಿಕೊಂಡ. ಹೆಂಡತಿಯ ಹುಟ್ಟಿದ ದಿನವೇ ಮರೆತು ಹೋಯಿತೆಂದು, ಅವನು ಅವಳಿಗೊಂದು gift ತರದಿದ್ದರೂ ಅವಳು ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ, ಯಾಕಂದರೆ ಅವಳಿಗೆ ಇವನು ಮರೆಗುಳಿತನ ಗೊತ್ತು. ನಾಗ್ಯಾ ಬಚಾವು! ಗೆಳೆಯರಿಗೂ ಇವನ ಕಾಯಿಲೆ ಗೊತ್ತಿದ್ದುದರಿಂದ ಅವನಿಗೆ ಯಾವುದೇ ತೆರನಾದ ಜವಾಬ್ದಾರಿಗಳನ್ನು ಕೊಡುತ್ತಿರಲಿಲ್ಲ. "ಯಪ್ಪಾ ನಾಗ್ಯನ ನಂಬಿದರ ಮುಗದು ಹೋತು" ಅನ್ನೋದು ಎಲ್ಲರ ಅಂಬೋಣ ವಾಗಿತ್ತು. ನಾಗ್ಯಾ ಕಣ್ಣು ಮಿಟುಕಿಸುತ್ತಿದ್ದ!

ಒಂದು ಸಲ ಅವರ ಮನೆಗೆ ಹೋದಾಗ, ನಾಗ್ಯನ ಹೆಂಡತಿ ಗೊಳೋ ಅಂತ ಅತ್ತು ಬಿಟ್ಟಳು. "ಇವ್ರ ಮರಿಯೋ ಜಡ್ಡು ಅತೀಯಾಗ್ಯದ್ರೀ, ನನಗ ಸಾಕಾಗಿ ಹೊಗ್ಯದ" ಅಂದ್ಲು. ಅವಳು ಜಡ್ಡು ಅಂದದ್ದೇ ತಡ ನನಗೆ ಒಂದು ಐಡಿಯಾ ಬಂತು. ಬೇರೆ ಕಾಯಿಲೆ ತರಹ ಮರೆವಿಗೂ ಒಂದು ಔಷಧಿ ಇರಬೇಕು ಅಲ್ವೇ? ಅಲ್ಲಿಂದ ಶುರುವಾಯ್ತು ನನ್ನ ಹುಡುಕಾಟ. ಮರೆವಿಗೆ ಚಿಕಿತ್ಸೆ ಕೊಡುವ ಡಾಕ್ಟರ ನ ಹುಡುಕಾಟ. ಈಗೆಲ್ಲ ಹುಡುಕಾಡೋದು ಅಷ್ಟು ಕಷ್ಟದ ವಿಷಯವಲ್ಲ. ಗೂಗಲ್ ನಲ್ಲಿ ನಮಗೆ ಬೇಕಾದ ಪದಗಳನ್ನು ಹಾಕಿ ಒಂದು button ಒತ್ತಿದರಾಯ್ತು ನೂರಾರು ಪೇಜ್ ಗಳು ತೆರೆದುಕೊಳ್ಳುತ್ತೆ. ಒಂದು ಸೂಜಿಯನ್ನು ಹಿಡಿದು ಮನೆಯ ವರೆಗೂ ಎಲ್ಲ ವಿಷಯದ ಮಾಹಿತಿ ಸಿಗುತ್ತೆ. ಹೀಗೆ ಹುಡುಕುತ್ತಿರುವಾಗ ನನಗೆ ಸಿಕ್ಕಿದ್ದು ಡಾಕ್ಟರ ಮರಿಯಪ್ಪ ಅವರ ವಿಳಾಸ. ಅವರು ಮರೆಗುಳಿ ಗಳಿಗೆ ಔಷಧಿ ಕೊಡುವವರು. ಅದಕ್ಕೆ ಅವರ ಹೆಸರು ಮರಿಯಪ್ಪ ಇರಬಹುದಾ? ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ನಾನು ಹೋಗಲಿಲ್ಲ ......

ಡಾ.ಮರಿಯಪ್ಪನವರ ದವಾಖಾನೆಗೆ ತಲುಪಿದೆವು. ಅಲ್ಲಿ ಹುಲು ಮಾನವರ ಸರದಿ ನಿಂತಿರುವ ಪರಿ ಹನುಮಂತನ ಬಾಲವನ್ನು ನೆನಪಿಸುತ್ತಿತ್ತು. ಜಗತ್ತಿನಲ್ಲಿ ಇಷ್ಟೊಂದು ಮರೆಗುಳಿಗಳಿದ್ದಾರೆಯೇ? ನನಗೆ ಆಶ್ಚರ್ಯವಾಗುತ್ತಿತ್ತು.

ಅಂತು ಎರಡು ಗಂಟೆ ಕಾಯ್ದ ಮೇಲೆ ಮರಿಯಪ್ಪನವರ ದರ್ಶನ ಭಾಗ್ಯ ದೊರೆಯಿತು. ನಾಗ್ಯಾನ ಸಮಸ್ಸೆಗಳನ್ನು ತುಂಬಾ ಸಂಯಮದಿಂದ ಕೇಳಿದರು. ಅವನ ಮರೆವಿನಿಂದಾದ ಅನಾಹುತಗಳ ಒಂದಿಷ್ಟು ಉದಾಹರಣೆಗಳನ್ನು ಅವರ ಮುಂದಿಟ್ಟೆ. ಅವರು ವಿಚಲಿತರಾದಂತೆ ಕಾಣಲಿಲ್ಲ. ಇಂಥ ಎಷ್ಟೋ ನಮೂನೆ ಗಳನ್ನು ನೋಡಿದ್ದಾರೋ ಅವರು! ಒಂದಿಷ್ಟು ಪರೀಕ್ಷೆಗಳನ್ನು ಮಾಡಿಸಲು ಹೇಳಿ ಸಧ್ಯಕ್ಕೆ ಕೈ ತೊಳೆದುಕೊಂಡರು. ಮುಂದಿನ ವಾರ ಮತ್ತೆ ಭೇಟಿ ನಿಗದಿಯಾಯ್ತು. ಒಂದು ಸಾವಿರ ರೂಪಾಯಿ ಮರೆಯದೆ ವಸೂಲಿ ಮಾಡಿದರು. ನಾನ್ಯಾಕೆ ಡಾಕ್ಟರ ಆಗಲಿಲ್ಲ ಅಂತ ನಾನು ಮರುಗಿದೆ. ದಿನಕ್ಕೆ ಸುಮಾರು ಐವತ್ತು ಜನ ಬಂದರೂ ಐವತ್ತು ಸಾವಿರ ಆಯಿತಲ್ಲವೇ ಅಂತ ಮನಸಿನಲ್ಲೇ ಲೆಕ್ಕ ಹಾಕಿದಾಗ ಇನ್ನು ಸಂಕಟವಾಯ್ತು.

ಮುಂದಿನ ವಾರ ಎಲ್ಲ ಪರೀಕ್ಷೆಗಳನ್ನು ಮಾಡಿಸಿಕೊಂಡು ಮತ್ತೆ ಡಾಕ್ಟರ ಬಳಿ ಹೋದೆವು. ನಾನು ನಾಗ್ಯನ ಸಮಸ್ಸೆ ಬಗೆಹರಿಸುವ ಪಣ ತೊಟ್ಟಾಗಿತ್ತು. ರಿಪೋರ್ಟ್ ಗಳನ್ನು ಡಾಕ್ಟರ ಮುಂದೆ ಇಟ್ಟೆವು. ಅದರಲ್ಲಿ ವಿಧ ವಿಧವಾದ ಕೋನಗಳಲ್ಲಿ ನಗ್ಯಾನ ತಲೆಯ ಸ್ಕ್ಯಾನ್ ಮಾಡಿಸಿದ ಚಿತ್ರ ಗಳಿದ್ದವು. ಅದನ್ನು ನೋಡಿ ನನಗೆ ಸಮಾಧಾನವಾಯ್ತು. ಯಾಕಂದರೆ ಅದರಿಂದ ನಾಗ್ಯಾನಿಗೆ ಮಿದುಳು ಇರುವುದು ಖಚಿತವಾಗಿತ್ತು! ಎಲ್ಲ ರಿಪೋರ್ಟ್ ಗಳನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯರು ಒಂದಿಷ್ಟು ಗುಳಿಗೆ ಗಳನ್ನು ಕೊಟ್ಟರು. ಎರಡು ತಿಂಗಳ ಅವಧಿಯ ಕೋರ್ಸ್. ಮತ್ತೆ ಐದು ಸಾವಿರ ಬಾಚಿಕೊಂಡರು. ಔಷಧಿ ಮರೆಯದೆ ತೆಗೆದುಕೊಳ್ಳಿ ಅಂತ ಉಪದೇಶಿಸಿದ್ದು ಸ್ವಲ್ಪ ಹಾಸ್ಯಾಸ್ಪದ ವಾಗಿತ್ತು. ದಿನಕ್ಕೆ ಮೂರು ಸರ್ತಿ ಮರೆಯದೆ ಗುಳಿಗೆ ತಿನ್ನುವುದು ಮರೆಗುಳಿ ನಾಗ್ಯನಿಗೆ ಸಾಧ್ಯವೇ? ನನಗದು ಚಿಂತೆಯ ವಿಷಯವೂ ಆಗಿತ್ತು. ಅದಕ್ಕೂ ಪರಿಹಾರವಿತ್ತು. ಸಧ್ಯ ಅವನ ಹೆಂಡತಿ ಮರೆಗುಳಿ ಇರಲಿಲ್ಲವಲ್ಲ! ಅವಳಿಗೆ ಗುಳಿಗೆ ಯಾವಾಗ ಕೊಡಬೇಕು ಅಂತ ತಿಳಿಸಿ ಹೇಳಿ ಮನೆಗೆ ಹೋದೆ.

ಎರಡು ತಿಂಗಳು ಹೀಗೆ ಕಳೆಯಿತು. ಅಲ್ಲಿಯವರೆಗೆ ನಾಗ್ಯಾ ಮತ್ತು ನಾನು ಭೇಟಿಯಾಗುವುದು ಸಾಧ್ಯವಾಗಿರಲಿಲ್ಲ. ಅವತ್ತೊಂದು ದಿನ ನಾಗ್ಯಾನ ಫೋನ್ ಬಂತು. ಮರೆಯದೆ ಫೋನ್ ಮಾಡಿದ್ದು ಕಂಡು ಖುಷಿಯಾಯ್ತು. ಔಷಧಿ ಕೆಲಸ ಮಾಡಿರುವುದು ನಿಚ್ಚಳವಾಗಿತ್ತು. ಮರಿಯಪ್ಪನವರ ಬಗ್ಗೆ ಅಭಿಮಾನ ಮೂಡಿತು.


"ಹೇಳೋ ನಾಗ್ಯಾ ಅರಾಮಿದ್ದಿಯ?" ಅಂತ ಕೇಳಿದೆ.

"ಹೂನಪ್ಪ ನೀ ಹೆಂಗಿದ್ದಿ?" ಅಂತ ಕೇಳಿದ. ಉಭಯ ಕುಶಲೋಪರಿಗಳ ನಂತರ

"ನೀ ಹೋಗಿದ್ದು ಕೆಲಸ ಏನಾತು" ಅಂದ, ಯಾವ ಕೆಲಸ ಅಂತ ನಾನು ಗೊಂದಲದಲ್ಲಿ ಬಿದ್ದೆ. ಅಥವಾ ನಾನೇ ಏನಾದರೂ ಇವನಿಗೆ ಹೇಳಿ ಮರೆತುಬಿಟ್ಟೆನಾ? ಡಾ. ಮರಿಯಪ್ಪನವರ ಬರಿ ಹೋಗುವ ಸರದಿ ಈಗ ನಂದು ಅಂತ ಅನಿಸ್ತು. ಈ ಗೊಂದಲ ಪರಿಹರಿಸಿಕೊಳ್ಳಲು ನಾಗ್ಯಾನಿಗೆ ಕೆಲವು ಪ್ರಶ್ನೆ ಗಳನ್ನು ಕೇಳಲು ತೊಡಗಿದಾಗ, ನಾಗ್ಯಾ ಅರುಹಿದ್ದು ಹೀಗೆ,

"ಓ ಸಾರೀ ಪಾ, ನಾನು ರವಿಗೆ ಒಂದು ಕೆಲ್ಸಾ ಹೇಳಿದ್ದೆ, ಅದರ ಬಗ್ಗೆ ಅವಂಗ ಕೇಳುದು ಬಿಟ್ಟು ನಿನಗ ಫೋನ್ ಮಾಡೀನಿ ನೋಡು" ಅಂದ.

ನಾನು ಫೋನ್ ಕುಕ್ಕರಿಸಿದೆ. ಈ "ಮಂಗ್ಯಾನ ಮಗನಿಗೆ" ಮರೆವು ಈ ಜನ್ಮದಲ್ಲಿ ಬಿಡುವುದಲ್ಲ ಅಂತ ಸ್ವಲ್ಪ ತಡವಾಗಿ ಅರ್ಥ ಮಾಡಿಕೊಂಡೆ. ಆದರೆ ಯಾಕೋ ಮರಿಯಪ್ಪ ಅವರ ನೆನಪು ತುಂಬಾ ಕಾಡಿತು!

Friday, April 22, 2011

ಇ(ಹಿ)ಗೋ ಕನ್ನಡ!

ಅದೊಂದು ಭಾನುವಾರದ ಸುಂದರ ಮುಂಜಾನೆ! ನಾನು ಚಹದ ಲೋಟ ಕೈಗಿಟ್ಟುಕೊಂಡು ಕನ್ನಡ ವೃತ್ತ ಪತ್ರಿಕೆ ಓದುತ್ತಿದ್ದೆ. ನನ್ನ ೩ ವರ್ಷದ ಮಗಳು ತನ್ನ ಮುದ್ದು ಕಂಠದಲ್ಲಿ ಕನ್ನಡದಲ್ಲಿ ಹಾಡು ಹೇಳುತ್ತಿದ್ದಳು. ನನಗದೇ ಸಂಭ್ರಮ! "ಬಾಬಾ ಬ್ಲಾಕ್ ಶೀಪ್ ..." ಹಾಡು ಬಿಟ್ಟು ಕನ್ನಡದ ಹಾಡು ಹೇಳುವುದೆಂದರೇನು ಕಡಿಮೆ ಸಂತಸದ ವಿಷಯವೇ?! ಅವಳ ಶಾಲೆ ಪ್ರವೇಶದ ಸಮಯದಲ್ಲಿ ಅವರ ಹೆಡ್ ಮಿಸ್ (?!) ಗೆ ನಾನು ಖಡಾ ಖಂಡಿತ ವಾಗಿ ಮಗಳಿಗೆ ಕನ್ನಡ ಕಲಿಸಲೇ ಬೇಕು ಅಂತ ತಾಕಿತು ಮಾಡಿದ್ದೆ! ಪಾಪ ಅವರು ಅವಾಗೊಂದು ಇವಾಗೊಂದು ಅಂತ ಕನ್ನಡ ಹಾಡನ್ನಾದರೂ ಹೇಳಿ ಕೊಟ್ಟಿದ್ದಾರೆ. ಅವರಿಗೆ ನಾನು ಚಿರ ಋಣಿ!

ಮಗಳು ಹಾಡುತ್ತಿದ್ದ ಹಾಡು ಹೀಗಿತ್ತು "ಅಮ್ಮ ಅಮ್ಮ ನಂಗೆ ಹಸಿವೆ ಇಲ್ಲಮ್ಮ, ಮೂರೂ ಮೂರೂ ದೋಸೆ ಅಷ್ಟೇ ಸಾಕಮ್ಮ...", ಆದರೆ ಅವಳ್ಯಾಕೋ ಅದನ್ನ ಬೇರೆ ತರಹ ಹಾಡುತ್ತಿದ್ದಾಳೆ ಅನಿಸಿತು. ಇನ್ನೊಮ್ಮೆ ಲಕ್ಷ್ಯ ಕೊಟ್ಟು ಕೇಳಿದಾಗ ಆಘಾತ ವಾಯಿತು! ಅವಳು ಹೀಗೆ ಹಾಡುತ್ತಿದ್ದಳು "ಹಮ್ಮ ಹಮ್ಮ ನಂಗೆ ಅಸಿವೆ ಇಲ್ಲಮ್ಮ...." ನನಗೆ ಕೆಂಡದಂಥ ಕೋಪ ಬಂತು. ಅವಳಿಗೆ ತಿಳಿಸಿ ಹೇಳಿದೆ "ಹ" ಕಾರಕ್ಕೆ "ಅ" ಕರ ಹಚ್ಚಬೇಡ ಎಂದು. ಅವಳು ಕೂಡಲೇ ತಿದ್ದಿಕೊಂಡಳು. ಮುಂದೆ ಯಾವಾಗಲೋ ಅವಳನ್ನು ಶಾಲೆಗೇ ಬಿಡಲು ಹೋದಾಗ ಅವರ ಹೆಡ್ ಮಿಸ್ ಎದುರು ಈ ವಿಷಯ ಪ್ರಸ್ತಾಪಿಸಿದೆ. ಅವರು ತಾವು ಹಾಗೆಲ್ಲ ಕಲಿಸುವುದಿಲ್ಲ ಬೇರೆ ಮಕ್ಕಳು ಮಾತನಾಡುವುದ ಕೇಳಿ ಹಾಗೆ ಮಾತಾಡ್ತಾರೆ ಅಂದರು. ಇದ್ದರು ಇರಬಹುದು ಅನಿಸಿತು. ಆ ವಿಷಯ ಅಲ್ಲಿಗೆ ಬಿಟ್ಟೆ.

ಇದಾಗಿ ಕೆಲ ದಿನಗಳ ನಂತರ, ಹೀಗೆ ಒಂದು ದಿನ ನನ್ನ ಮಗಳ ಜೊತೆ ಆಡಲು, ಅವಳಿಗಿಂತ ೨ ವರ್ಷ ದೊಡ್ಡವಳಾದ ನಮ್ಮ ಅಪಾರ್ಟಮೆಂಟ್ ನ ವಾಚ್ ಮ್ಯಾನ್ ಮಗಳು ಭೂಮಿಕ ಮನೆಗೆ ಬಂದಿದ್ದಳು. ಅವಳು ಆಗಾಗ ಬರುತ್ತಿರುತ್ತಾಳೆ. ನಾನು ಕುತೂಹಲಕ್ಕೆ ಅವರ ಆಟವನ್ನು ವೀಕ್ಷಿಸುತ್ತಿದ್ದೆ. ಅವರಾಡುತ್ತಿದ್ದುದು ಅಡುಗೆ ಮಾಡೋ ಆಟ.

ನನ್ನ ಮಗಳು "ನಂಗೆ ಹಸಿವೆ ಆಗಿದೆ ಊಟ ಕೊಡು" ಅಂದಳು.

ಭೂಮಿಕ "ಸ್ವಲ್ಪ ತಡಿ ಪುಟ್ಟ, ಹನ್ನ ಮಾಡ್ತಾ ಇದ್ದೀನಿ, ಅಲ್ಲಿವರೆಗೆ ಆಲು ಕುಡಿ" ಅಂದಳು.

ನನ್ನ ಎದೆ ಧಸಕ್ಕೆಂದಿತು! ನನ್ನ ಮಗಳಿಗೆ "ಹ" ಕಾರಕ್ಕೆ "ಅ" ಕಾರ ಹಾಗು "ಅ" ಕಾರಕ್ಕೆ "ಹ" ಕಾರ ಹಾಕುವುದ ಕಲಿಸಿದವಳು ಇದೆ ಹುಡುಗಿ ಅಂತ ಗೊತ್ತಾಯಿತು. ನಾನು ವಾಚ್ ಮ್ಯಾನ್ ನನ್ನು ಕರೆದು "ಏನಯ್ಯ ನಿನ್ನ ಮಗಳು ಹೀಗೆ ತಪ್ಪು ತಪ್ಪು ಕನ್ನಡ ಮಾತಾಡ್ತಾಳೆ " ಅಂದೆ.

ಅವನು "ಹೇನ್ ಮಾಡೋದು ಸಾರ್ ನಮ್ಮ ಮನೇಲಿ ಮಾತಾಡೋದೇ ಅಂಗೆ" ಅಂದ! ನನಗೆ ತಲೆ ಸುತ್ತಿದ ಅನುಭವ. ಅವನು ಮುಂದು ವರೆಸಿದ "ನೀವೇ ಏಳಿ ಕೊಡಿ ಹವಳಿಗೆ" ಅಂದ. ಅದೇನೋ ಹೇಳ್ತಾರಲ್ಲ "ಮದುವೆ ಆಗಿದೆಯ ಅಂದ್ರೆ ನೀನೆ ಮದುವೆ ಮಾಡ್ಕೋ " ಅಂದ್ರಂತೆ, ಹಂಗಾಗಿತ್ತು ನನ್ನ ಸ್ಥಿತಿ. ಆದರೂ ಅವನ ಮಗಳನ್ನು ತಿದ್ದುವುದು ನನ್ನ ಕರ್ತವ್ಯ ವಾಗಿತ್ತು. ಅದೂ ಅಲ್ಲದೆ ನನ್ನ ಮಗಳಿಗೆ ಹಾನಿ ಆಗುವುದು ತಪ್ಪಿಸುವುದು ನನ್ನ ಆದ್ಯತೆ ಆಗಿತ್ತು.

"ಆಗಲಿ, ಸಮಯ ಸಿಕ್ಕಾಗಲೆಲ್ಲ ನಿನ್ನ ಮಗಳಿಗೆ ತಿದ್ದುವೆ" ಅಂತ ಭಾಷೆ ಕೊಟ್ಟೆ. ಅದರಂತೆ ನಡೆದುಕೊಂಡೆ ಕೂಡ! ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ತುಂಬಾ ಕಷ್ಟ ಪಟ್ಟು ಅವಳಿಗೆ ಕಲಿಸುತ್ತಿದೆ.

ಸುಮಾರು ದಿನಗಳಾದ ಮೇಲೆ, ಒಂದು ದಿನ ಅವಳು ತನ್ನ ಪಠ್ಯ ಪುಸ್ತಕ ತಂದಿದ್ದಳು. ಅದರಲ್ಲಿನ ಒಂದೊಂದೇ ಕನ್ನಡ ಪದಗಳನ್ನು ಉಚ್ಚರಿಸುತ್ತಿದ್ದಳು, ತಪ್ಪಿದರೆ ನಾನು ತಿದ್ದುತ್ತಿದ್ದೆ. ಹಾಗೆ ಹೇಳುತ್ತಾ ಇದ್ದಾಗ.... "ಹರಸ" ಅಂದಳು. "ಹಾಗಾಲ್ಲಮ್ಮ, ಅರಸ ಅನ್ನು" ಅಂದೆ. ಮತ್ತೆ "ಹರಸ" ಅಂದಳು. ನಾನು ಎಷ್ಟೇ ಸಲ ಹೇಳಿದರೂ ತಪ್ಪಾಗಿಯೇ ಹೇಳಿದಳು, ಅದು ಅಲ್ಲದೆ "ಇಲ್ಲಿ ಹೀಗೆ ಇದೆ" ಅಂತ ವಾದ ಬೇರೆ ಮಾಡತೊಡಗಿದಳು. ನಾನು ಕೋಪದಿಂದ "ಪುಸ್ತಕ ಕೊಡು ಇಲ್ಲಿ" ಅಂದೆ. ನನಗೆ ಹುಚ್ಚು ಹಿಡಿಯುವುದೊಂದೇ ಬಾಕಿ! ಪುಸ್ತಕದಲ್ಲಿ "ಹರಸ" ಅಂತಲೇ ಮುದ್ರಿತವಾಗಿತ್ತು! ಪಕ್ಕಕ್ಕೆ ರಾಜನ ಚಿತ್ರ ಬೇರೆ. ಹಾಗಾಗಿ ಹರಸ ಅಂತ ಬೇರೆ ಯಾವುದೋ ಪದವಿರಬಹುದಾದ ಸಾಧ್ಯತೆಯ ಬಗ್ಗೆ ಯೋಚಿಸುವ ಪ್ರಶ್ನೆಯೇ ಇರಲಿಲ್ಲ! ನಾನು ಪುಸ್ತಕವನ್ನು ಪೂರ್ತಿಯಾಗಿ ಜಾಲಾಡಿಸಿದಾಗ ಇನ್ನು ಅನೇಕ ಕಡೆ ಈ ಥರ ತಪ್ಪು ತಪ್ಪಾಗಿ ಮುದ್ರಿಸಿದ್ದರು! ಪಠ್ಯ ಪುಸ್ತಕವೇ ಹೀಗಿದ್ದರೆ ಅದನ್ನು ಓದಿ ಕಲಿಯುವ ಮಕ್ಕಳ ಗತಿ? ಶಾಲೆಯಲ್ಲಾದರೂ ತಿದ್ದುತ್ತಾರೆಯೇ? ಗೊತ್ತಿಲ್ಲ! ನನ್ನ ಮಗಳ ವಿದ್ಯಾಭ್ಯಾಸದ ಬಗ್ಗೆ ನನಗೆ ನಿಜಕ್ಕೂ ಚಿಂತೆ ಶುರುವಾಗಿದೆ!!





Saturday, March 12, 2011

ಖೊಬ್ರಿ ಹೋಳಿಗೆ

ಸುಮಾರು ಏಳು ವರ್ಷಗಳ ಹಿಂದೆ, ಸಿರಸಿಯ ಬದಿಯ ಚಿಕ್ಕ ಹಳ್ಳಿಯೊಂದರ ಹವ್ಯಕರ ಹುಡುಗಿಯ ಜೊತೆ ನನ್ನ ಮದುವೆ ನಡೆಯಿತು. ನಾನಾಗ ಧಾರವಾಡದಲ್ಲಿದ್ದೆ. ನಾನು ಬಯಲು ಸೀಮೆಯ ಗಂಡು, ಎಲ್ಲಿದೆಲ್ಲಿಯ ಸಂಬಂಧ! ಒಂದೊಂದು ಸರ್ತಿ ವಿಚಿತ್ರ ಅನಿಸುತ್ತೆ. ಅದಕ್ಕೆ ಅಲ್ಲವೇ ಮಾಮರವೆಲ್ಲೋ ಕೋಗಿಲೆ ಎಲ್ಲೊ ಅನ್ನೋದು! ನಿಶ್ಚಯಕ್ಕೆ ನನ್ನ ಆಪ್ತ ಮಿತ್ರರನ್ನು ಕರೆದುಕೊಂಡು ಸಿರಸಿ - ಸಿದ್ಧಾಪುರ ನಡುವೆ ಕಾಡಿನ ಮಧ್ಯೆ ನಾವು ಪಯಣಿಸುತ್ತಿದ್ದರೆ, ನನ್ನ ಬಯಲು ಸೀಮೆಯ ಗೆಳೆಯನೊಬ್ಬ ಭಯಂಕರ ಆಶ್ಚರ್ಯದಿಂದ ಕೇಳಿದ "ಹೆಂಗ ಹುಡಿಕಿದಿಲೆ ಈ ಹುಡುಗೀನ!?".

ನನಗೂ ಹಳ್ಳಿ, ಝರಿ, ಗಿಡ - ಮರ ಕಂಡರೆ ತುಂಬಾ ಇಷ್ಟ. ಹಾಗಿದ್ದಾಗ, ನಮ್ಮ ಕುಟುಂಬದ ಆಪ್ತರೊಬ್ಬರು ಚೆಂದನೆಯ ಹುಡುಗಿಯ ಫೋಟೋ ಮುಖಕ್ಕೆ ಹಿಡಿದು, ಮಲೆನಾಡ ಹುಡುಗಿನ ಮದುವೆ ಆಗ್ತಿಯ ಅಂದಾಗ, ನಾನು "ಇಲ್ಲ" ಅನ್ನುವ ಚಾನ್ಸೇ ಇರಲಿಲ್ಲ! ಹುಡುಗಿಯ ಮನೆಯ ಹಿಂದುಗಡೆಯೇ ಒಂದು ಫಾಲ್ಸ್ ಇದೆ ಅಂತ ಅವರು ಹೇಳಿದಾಗಲಂತೂ ಸ್ವರ್ಗಕ್ಕೆ ಮೂರೇ ಗೇಣು! ಆದರೆ ಅವರು ಹೇಳಿದ್ದು ಸ್ವಲ್ಪ ಅತಿಶಯೋಕ್ತಿ ಅಂತ ಆಮೇಲೆ ಗೊತ್ತಾಯ್ತು. ಫಾಲ್ಸ್ ಅಷ್ಟು ಹತ್ತಿರದಲ್ಲಿ ಇರಲಿಲ್ಲ. ಆದರೆ ನನ್ನ ಮಾವನ ಮನೆಯ ಸುತ್ತ ಮುತ್ತ ಫಾಲ್ಸ್ ಗಳಿಗೆ ಕೊರತೆಯೂ ಇಲ್ಲ. ಅದೇನೇ ಇರಲಿ ನಾನಂತೂ ಹುಡುಗಿನ ನೋಡಿ "ಫಾಲ್" ಆಗಿದ್ದಾಗಿತ್ತು!

ಮದುವೆಯಾದ ಮೊದಲ ವರ್ಷ ಆ ಹಬ್ಬ, ಈ ಹಬ್ಬ ಅಂತ ಮಾವನ ಮನೆಗೆ ಹೋಗುವುದು ಇದ್ದೆ ಇರುತ್ತಿತ್ತು. ಅದು ಮಗಳಿಗಿಂತ ನನಗೆ ಸಂಬ್ರಮ! ಯಾಕಂದರೆ ಆ ನೆಪದಲ್ಲಾದರೂ ಹಳ್ಳಿಯ ಸೊಬಗು ಸವಿಯುವ ಸೌಭಾಗ್ಯ ನನ್ನದು. ಆದರೆ ಮಲೆನಾಡ ಕಡೆಯ ಹಳ್ಳಿಗಳು ಕೆಲವು ವಿಷಯದಲ್ಲಿ ನಮ್ಮ ಬಯಲು ಸೀಮೆಯ ಹಳ್ಳಿಗಳಿಗಿಂತ ವಿಭಿನ್ನ ಅನ್ನುವುದು ನಾನು ಕಂಡುಕೊಂಡ ಸತ್ಯ. ಅದೇನೇ ವಿಭಿನ್ನತೆ ಇದ್ದರೂ ಎರಡೂ ಕಡೆಯ ಉಪಚರಿಸುವ ಪರಿ ಒಂದೇ! ಅಲ್ಲದೇ, ಕೈ ದೊಡ್ಡದು. ಹೋದಾಗಲೋಮ್ಮೆ ನನ್ನ ಬಾವ ತಮ್ಮ ಬಳಗದವರ ಮನೆಗೆಲ್ಲ ಕರೆದೊಯ್ಯುತ್ತಿದ್ದ. ಹಾಗೆ ಹೋಗುವುದು ಮೊದ ಮೊದಲು ಮಜವಾಗಿತ್ತಾದರೂ ನಂತರದ ದಿನಗಳಲ್ಲಿ ತುಂಬಾ ಕಿರಿ ಕಿರಿ ಆಗತೊಡಗಿತು. ನಮ್ಮ ಅತ್ತೆ - ಮಾವರ ಬಳಗ ದೊಡ್ಡದು. ಎಲ್ಲರ ಮನೆಗಳು ಅಲ್ಲೇ ಸುತ್ತ ಮುತ್ತ ಹಳ್ಳಿಗಳಲ್ಲಿವೆ. ಅತ್ತೆಯಂದಿರು, ಚಿಕ್ಕಮ್ಮ - ಚಿಕ್ಕಪ್ಪಗಳು, ಸೋದರ ಮಾವಂದಿರು,... ಹೀಗೆ ಎಲ್ಲರ ಮನೆಗೆ ಭೇಟಿ ಕೊಡಲೇಬೇಕು. ಬಾವ ನಾನು ಬರುವುದು ಗೊತ್ತಾದ ಕೂಡಲೇ ಒಂದು ಮಾಸ್ಟರ್ ಪ್ಲಾನ್ ತಯಾರಿಸಿಕೊಂಡು ಬಿಡುತ್ತಿದ್ದ. ದಿನಕ್ಕೆ ಕನಿಷ್ಠ ನಾಲ್ಕು ಮನೆಗಳಿಗೆ ಭೇಟಿ, ಕೊಡುವುದು ಅವನ ಟಾರ್ಗೆಟ್. ಒಂದು ಮನೆಯಲ್ಲಿ ಆಸರಿಗೆ (ಆಸರಿಗೆ ಅಂದರೆ ನಮ್ಮ ಕಡೆ ಚಹಾ-ಚೂಡ ಇದ್ದಂಗೆ), ಇನ್ನೊಂದು ಮನೆಯಲ್ಲಿ ಮದ್ಯಾನ್ಹದ ಊಟ, ಮತ್ತೊಂದು ಮನೆಯಲ್ಲಿ ಮತ್ತೆ ಆಸರಿಗೆ, ಕೊನೆಗೊಂದು ಮನೆಯಲ್ಲಿ ರಾತ್ರಿಯ ಊಟ! ಅದಲ್ಲದೆ ಮಾಸ್ಟರ್ ಪ್ಲಾನ್ ಬಿಟ್ಟು ಬೇರೆ ಭೇಟಿಗಳೂ ಇರುತ್ತಿದ್ದವು. ದಾರಿಯಲ್ಲಿ ಬರುವಾಗ, "ಇದು ನಮ್ಮ ಅಜ್ಜಿಯ ತವರು ಮನೆ" ಅಂತ ಹೇಳಿ ಅವರ ಮನೆಗೆ ಕರೆದೊಯ್ಯುತ್ತಿದ್ದ! ಬಯಲು ಸೀಮೆಯ ಗಂಡು ನಾನಾದ್ದರಿಂದ, ಮಲೆನಾಡಿನ ಮನೆಗಳಲ್ಲಿ ಕೇಜಿಗಟ್ಟಲೆ ಅನ್ನ ತಿಂದು ಹೈರಾಣಾಗತೊಡಗಿದೆ. ಅದೊಂದೇ ಅಲ್ಲ, ಅದರ ಜೊತೆಗೆ ಎಲ್ಲರ ಮನೆಯಲ್ಲೂ ಸಿಹಿ ತಿನಿಸುಗಳು. ನಿಜಕ್ಕೂ ಸಿಹಿ ತಿನ್ನೋದರಲ್ಲಿ ಅವರದು ಎತ್ತಿದ ಕೈ. ಸಿಹಿಯಾದ ಹೋಳಿಗೆಗೆ ಸಕ್ಕರೆ ಪಾಕ ಹಾಕಿಕೊಂಡು ತಿನ್ನುತ್ತಾರೆ! ನನಗೆ ಅದನ್ನು ನೋಡಿಯೇ ಹೊಟ್ಟೆ ತುಂಬುತ್ತಿತ್ತು, ಇನ್ನು ಹಾಗೆ ತಿನ್ನುವುದಂತೂ ದೂರದ ಮಾತು.

ಅದೂ ಅಲ್ಲದೆ ಯಾರದೇ ಮನೆಯಲ್ಲಿ ಏನಾದರೂ ತಿನ್ನುವುದಿದ್ದರೆ ಅಡಿಗೆ ಮನೆಗೇ ಹೋಗಬೇಕು! ೫ ಫೂಟ್ ಉದ್ದದ ಪ್ರಧಾನ ಬಾಗಿಲಿಗೆ ಎಷ್ಟೋ ಸರ್ತಿ ತಲೆ ಬಡಿಸಿಕೊಂಡದ್ದಿದೆ. ಹಾಗೆ ಬಡಿಸಿಕೊಂಡಾಗಲೊಮ್ಮೆ , ಆ ಮನೆಯ ಯಜಮಾನರು "ತಗ್ಗಿ ಬಗ್ಗಿ ನಡೆಯೋವು ಅಂತ ನಮ್ಮ ಹಿರಿಯರು ಹೀಗೆ ಮಾಡ್ಸಿದ್ದು ನೋಡು ತಮ್ಮಾ" ಅಂತ, ಬುದ್ಧಿ ಹೇಳೋರು. ತಲೆಗೆ ಬಡಿಸಿಕೊಂಡ ನೋವು, ನನಗದು ಕಾಣಲೇ ಇಲ್ಲವಲ್ಲ ಎಂಬ ಅಪಮಾನ, ಅದರ ಮೇಲೆ ಯಜಮಾನರ ಪ್ರವಚನ! ಈ ಥರ ಆದ ಮೇಲೆ ಯಾರ ಮನೆಗೆ ಹೋದರೂ ಮನೆ ತುಂಬಾ ತಲೆ ತಗ್ಗಿಸಿಕೊಂಡೇ ನಡೆಯಲಾರಂಭಿಸಿದೆ!

ನಾನು ಸುಸ್ತಾಗಿ ಹೋಗಿದ್ದೆ! ಮಾವನ ಮನೆಗೆ ಹೋಗಲೇ ಹೆದರಿಕೆ ಬರುವಂತಾಯ್ತು. ಹೀಗೆ ಒಂದು ಬಾರಿ ಹೋದಾಗ, ಬಾವನ ಬಳಿ ನಿಷ್ಟುರನಾಗಿ ಹೇಳಿ ಬಿಟ್ಟೆ.

"ನನಗೆ ಈ ಪರಿ ತಿಂದು ಅಭ್ಯಾಸವಿಲ್ಲ, ಸಿಹಿ ತಿನಿಸಂತೂ ನನಗೆ ತಿನ್ನಲು ಆಗದು. ನೀನು ಹೀಗೆ ಎಲ್ಲರ ಮನೆಯಲ್ಲೂ ತಿನ್ನಿಸಿದರೆ ನಾನು ಎಲ್ಲೂ ಬರುವುದಿಲ್ಲ" ಅಂತ. ಬಾವ ಮೀಸೆಯಡಿಯಲ್ಲೇ ಸಣ್ಣಗೆ ನಗುತ್ತಿದ್ದನೋ ಅಥವಾ ಅದೂ ನನ್ನ ಭ್ರಮೆಯೋ ಗೊತ್ತಿಲ್ಲ!

"ಆಯ್ತು ಬಾವ, ನಾನು ಪ್ರತಿಯೊಬ್ಬರ ಮನೆಗೆ ಭೇಟಿ ಕೊಟ್ಟಾಗ ಈ ರೀತಿ ಅವರಿಗೆ ಹೇಳುವೆ" ಅಂತ ಭಾಷೆ ಕೊಟ್ಟ.

ಸರಿ ಅಂತ ಮತ್ತೆ ನಮ್ಮ ದಂಡ ಯಾತ್ರೆ ಶುರುವಾಯ್ತು. ಆದರೆ ಬಾವ ಮಾತ್ರ ತಾನು ಕೊಟ್ಟ ಮಾತಿಗೆ ತಪ್ಪಲಿಲ್ಲ! ಮೊದಲೇ ಅಡುಗೆ ಮನೆಗೆ ಹೋಗಿ ಹೇಳಿ ಬಿಡುತ್ತಿದ್ದ. ಹೀಗಾಗಿ ಸಿಹಿ ತಿನ್ನಲು ನನಗಾರು ವತ್ತಾಯ ಮಾಡುತ್ತಿರಲಿಲ್ಲ. ಅದೂ ಅಲ್ಲದೆ, ಊಟದಲ್ಲೂ ಕೆಲವರು ಮಾರ್ಪಾಡು ಮಾಡತೊಡಗಿದರು. ಅನ್ನದ ಬದಲು ಚಪಾತಿ, ಪಲ್ಯ ಇರುತ್ತಿತ್ತು. ಹೀಗೆ ಬಯಲು ಸೀಮೆ ಗಂಡಿನ ಅಳೆಯತನ ಸಾಂಗವಾಗಿ ನಡೆದಿತ್ತು!

ಅಂಥದರಲ್ಲಿ ಒಂದು ಸರ್ತಿ ಯಾವುದೋ ಹತ್ತಿರದ ಹಳ್ಳಿಯಲ್ಲಿ ಮಾವನ ಸಂಬಂಧಿಯೊಬ್ಬರ ಮನೆಯಲ್ಲಿ ಉಪನಯನವಿತ್ತು. ಬಾವನ ಸಂಗಡ ನಾನು ಹೋಗಿದ್ದೆ. ಊಟಕ್ಕೆ ಪಂಕ್ತಿಯಲ್ಲಿ ಬಾವನೊಂದಿಗೆ ಪವಡಿಸಿದ್ದೆ. ಮತ್ತೆ ಅನ್ನ, ತಂಬಳಿ, ಹಸಿ... ಅದನ್ನು ಬಿಟ್ಟು ಬೇರೆ ಏನು ಇರಲು ಸಾಧ್ಯ?! ನಾನು ನಿರ್ಲಿಪ್ತನಾಗಿದ್ದೆ. ಒಂದೆರಡು ರೌಂಡ್ ಆದ ಮೇಲೆ, ಸಿಹಿ ತಿನಿಸಿನ ಸಮಯ. ನಾನು ಪೂರ್ತಿ ಟೆನ್ಶನ್ ನಲ್ಲಿದ್ದೆ! ಸಿಹಿ ತಿನಿಸು ನನ್ನ ಎಲೆಗೆ ಬೀಳದಂತೆ ತಡೆಯುವದು ನನ್ನ ದೊಡ್ಡ ಚಾಲೆಂಜ್ ಆಗಿತ್ತು! ಅಷ್ಟರಲ್ಲೇ ಯಾರೋ ಬಾವನ ಪರಿಚಯದವರೇ ಸಿಹಿ ಪದಾರ್ಥ ಬಡಸುತ್ತಿದ್ದರು. ಬಡಸುವವರು ನನ್ನ ಎಲೆ ಹತ್ತಿರ ಬಂದ್ರು. "ಕಾಯಿ ಹೋಳಿಗೆ" ಅಂದ್ರು. ಇದು ಯಾವ ಕಾಯಿಯಿಂದ ಮಾಡಿದ್ದೋ ಅಂತ ನಾನು ಅಸಡ್ಡೆಯಿಂದ "ಬೇಡ" ಅಂದೇ. ಆದರೆ ನನಗಿಂತ ಮೊದಲೇ ಬಾವ ನನ್ನ ಎಲೆಗೆ ಕೈ ಅಡ್ಡ ಹಿಡಿದು, "ಅವ್ನು ಸ್ವೀಟ್ ತಿನ್ತ್ನಿಲ್ಲೇ ಅವನಿಗೆ ಹಾಕಡ" ಅಂತ ಹರ ಸಾಹಸ ಮಾಡಿ ಸಿಹಿ ಪದಾರ್ಥ ನನ್ನ ಎಲೆಗೆ ಬೀಳುವುದ ತಪ್ಪಿಸಿದ್ದ! ಏನೋ ಸಾಧಿಸಿದ ಭಾವ ಅವನ ಮುಖದಲ್ಲಿ ಎದ್ದು ಕುಣಿಯುತ್ತಿತ್ತು. ನಾನು ನಿಟ್ಟುಸಿರಿಟ್ಟೆ. ಆದರೆ ಹಾಗೆ ಕುತೂಹಲಕ್ಕೆ "ಕಾಯಿ ಹೋಳಿಗೆ ಅಂದರೆ ಏನು?" ಅಂತ ಕೇಳಿದೆ, "ಖೊಬ್ರೀ ಹಾಕಿ ಮಾಡಿದ ಹೋಳಿಗೆ" ಅಂದ. ನನ್ನ ಎದೆ ಜ್ಹಲ್ ಎಂದಿತ್ತು. ಯಾಕಂದರೆ, ನನಗೆ ಬಹಳಷ್ಟು ಸಿಹಿ ತಿನಿಸುಗಳು ಇಷ್ಟವಿಲ್ಲವಾದರೂ, ಇಷ್ಟವಾಗುವ ಕೆಲವೇ ಕೆಲವುಗಳಲ್ಲಿ ಖೊಬ್ರೀ ಹೋಳಿಗೆಯು ಒಂದು! ನನಗೇನು ಗೊತ್ತು ಖೊಬ್ರೀ ಹೋಳಿಗೆ ಅಂದ್ರೆ ಇಲ್ಲಿ ಕಾಯಿ ಹೋಳಿಗೆ ಅಂತ! ಅಂತು ಇಂತೂ opportunity ಮಿಸ್ ಆಗಿತ್ತು. ವಾಪಸ್ಸು ಕರೆಸಿ ಹಾಕಿಸಿಕೊಳ್ಳೋಕೆ ಸ್ವಾಬಿಮಾನ ಅಡ್ಡ ಬಂತು. ನನಗೆ ಸ್ವೀಟ್ ಸೇರಲ್ಲ ಅಂತ ಬಡಾಯಿ ಕೊಚ್ಚಿಕೊಂಡವನು ನಾನೇ ಅಲ್ವೇ?!

ಮನೆಗೆ ಬಂದು ಹೆಂಡತಿ ಎದುರು ನನಗಾದ ಫಜೀತಿ ಹಂಚಿಕೊಂಡೆ. ಅವಳು ಬಿದ್ದು ಬಿದ್ದು ನಕ್ಕಳು. ಆದರೆ ಬೆಂಗಳೂರಿಗೆ ಬಂದ ಮೇಲೆ "ಕಾಯಿ ಹೋಳಿಗೆ" ಮಾಡಿ ತಿನ್ನಿಸಿದಳು! ನನ್ನ ಹೆಂಡತಿ ತುಂಬಾ ಒಳ್ಳೆಯವಳು. ಅದಕ್ಕೆ ಅಲ್ವೇ ಅವಳನ್ನ ಮದುವೆಯಾಗಿದ್ದು!

Wednesday, March 2, 2011

ಹಿಂಗ ಒಂದು ವೀಕೆಂಡು... ( ಭಾಗ ೧)

ಇವತ್ತ್ಯಾಕೋ ಮುಂಜಾನೆ ಎದ್ದಾಗ ಒಂಥರ ಹುರುಪು. ಅದಕೊಂದು ಕಾರಣ ಇತ್ತು. ಯಾಕಂದ್ರ ಇವತ್ತ ಶುಕ್ರವಾರ! ನಾನು ಮಾಡೋ ಕೆಲಸಾನ ಅಂಥದ್ದು. ಸೋಮವಾರ ಯಾಕರೆ ಬಂತು ಅಂತ ಎಳ್ತೀನಿ, ವೀಕೆಂಡ್ ಎಲ್ಲೆ ಮುಗುದು ಹೋಗತದೋ ಅಂತ ಹಪಹಪಿಯೊಳಗ ಮತ್ತ ಬಾರೋ ಸೋಮವಾರ ಮರಿಲಿಕ್ಕೆ ಪ್ರಯತ್ನ ಮಾಡ್ತೀನಿ. ವಾರದಾಗ ಎರಡು ದಿವ್ಸ ರಜ, ಹಿಂಗ ಬಂದು ಹಿಂಗ ಹೋಗ್ತಾವು ಅದಂತೂ ನಿಜ!

ಶುಕ್ರವಾರ ಕೆಲಸಕ್ಕ ಹೋಗುದ ಲೇಟು, ಹೋಗುದ್ರಾಗ ಮಧ್ಯಾನ ಊಟದ್ದ ಟೈಮು. ಅವತ್ತ ಯಾವ ಕಾಲ್ ಅಥವಾ ಮೀಟಿಂಗ್ಸ್ ಇರುದಿಲ್ಲ. ಹಿಂಗ ಅಲ್ಲೇ ಇಲ್ಲೇ ಅಡ್ಡಾಡುದ್ರಾಗ ಸಂಜಿ ಆಗಿ ಬಿಡ್ತದ! ಅಮ್ಯಾಲಿನ ಪ್ರೊಗ್ರಾಮ್ ಮೊದಲ ಫಿಕ್ಸ್ ಆಗಿರ್ತದ. ಯಾವಂದೋ ಮನ್ಯಾಗ ಬಾಟಲಿ ವ್ಯವಸ್ಥಾ ಇರತದ. ಹೋಗುದು, ರಾತ್ರಿ ತನಕ ಹೊಟ್ಟಿ ತುಂಬ ಕುಡದು ಮನಿಗೆ ವಾಪಸ್. ಇದೊಂಥರ ಅನ್ನ್ ರಿಟ್ಟನ್ ರೂಲ್! ಒಂದು ಸಲ ರಾಜಾನ ಮನ್ಯಾಗ, ಇನ್ನೊಮ್ಮೆ ವೆಂಕಣ್ಣ ಮತ್ತೊಮ್ಮೆ ಸುಬ್ಬ್ಯ. ನಮ್ಮ ಮನ್ಯಾಗ ಸೇರುದು ಸ್ವಲ್ಪ ಕಷ್ಟ, ಯಾಕಂದ್ರ ನಾನು ಇರೋದು ಅಪ್ಪನ ಜೋಡಿ. ಉಳಕಿದವ್ರಿಗೆಲ್ಲ ಆ ಸಮಸ್ಸೆ ಇರಲಿಲ್ಲ. ಅವರ ಅಪ್ಪಂದ್ರೆಲ್ಲ ಊರಾಗ ಇರ್ತಾರ. ಅದಕ್ಕ ಕಳ್ಳ ನನ ಮಕ್ಳು ಟೈಮ್ ಸಿಕ್ಕಗೊಮ್ಮೆ ಕುಡಿಯೋದ ಕೆಲಸ. ಅವರ ನಸೀಬ್ ನೋಡಿ ನನಗ ಒಂದೊಂದು ಸರ್ತಿ ಹೊಟ್ಟಿ ಕಿಚ್ಚಾಗತಿತ್ತು! ಮುಂದ ನನ್ನ ಲಗ್ನ ಆದ ಮ್ಯಾಲೆ ಇನ್ನೇನು ಗತಿನೋ ಅಂತ ನೆನಿಸಿಕೊಂಡರ ಇನ್ನು ಹೆದರಿಕಿ ಅಗತದ.

ಆಫೀಸ್ ಬಿಟ್ಟಾಗ ಆಗ್ಲೇ ಸಂಜೆ ಆರಾಗಿತ್ತು. ಎಲ್ಲರು ಕೂಡಿ ವೆಂಕಣ್ಣನ ಕಾರಿನ್ಯಾಗ ಅವನ ಮನಿಗೆ ಹೊಂಟಿವಿ. ಅವಂದು ಹೊಸಾ ಕಾರು. ಹೋದ ತಿಂಗಳನ ತೊಗೊಂಡಾನ. ಅಂವ ತೊಗೊಂಡ ಅಂದ್ಕುಡ್ಲೆ ನನ್ಯಾಕ ಬಿಡ್ಲಿ? ನಂದೂ ಹೊಸಾ ಕಾರು ಬುಕ್ ಮಾಡಿನಿ. ಮುಂದಿನ ವಾರ ಬರ್ತದ. ಮನಷ್ಯನ ಅಸೇನ ಹಂಗ. ಯಾವುದು ಇಲ್ಲ ಅದ ಬೇಕು ಅನಸ್ತದ. ಅದು ಬಂದ ಮ್ಯಾಲೆ ಇನ್ನೇನೋ ಬೇಕು! ಮನಷ್ಯ ಸಾಯು ತನಕ ಆಸೆಗಳು ಸಾಯಂಗೆ ಇಲ್ಲ. ಅಪ್ಪಗ ಒಂದು ಫೋನ್ ಹೊಡದು ನನಗ ಇವತ್ತ ರಾತ್ರಿ ಆಫೀಸ್ನ್ಯಾಗ ಕೆಲಸ ಭಾಳ ಅದ ಲೇಟಾಗಿ ಬರ್ತೀನಿ ಅಂತ ಒಂದು ಹಸಿ ಸುಳ್ಳು ಒಗದೆ. ಪಾಪ ಅಪ್ಪ... ನಾ ಹಿಂಗ ಏನೋ ಒಂದು ಸುಳ್ಳು ಹೇಳಿದಾಗೊಮ್ಮೆ ನಂಬತಾನ. ತನ್ನ ಮಗ ಕುಡುದು ಮನಿಗೆ ಬರ್ತಾನ ಅಂತ ಅವಗ ಒಂದು ಸರ್ತಿನು ಸಂಶಯ ಬಂದಿರಲಿಕ್ಕಿಲ್ಲ ಅಂದ್ರ ಆಶ್ಚರ್ಯ ಅಗತದ. ತನ್ನ ಮಗ ಅಂಥದೆಲ್ಲ ಮಾಡಲಿಕ್ಕೆ ಸಾಧ್ಯನ ಇಲ್ಲ ಅನ್ನೋ ಅಭಿಮಾನನೋ ಅಥವಾ ಕುರುಡು ನಂಬಿಕೆನೋ, ನಂಗೊತ್ತಿಲ್ಲ.

ನಮ್ಮ ಕಾರ್ಯಕ್ರಮ ಮಸ್ತ ಆಗಿ ನಡದಿತ್ತು. ಹಿಂಗ ಹರಟಿ ಹೊಡಕೋತ ಇದ್ದಾಗ ಕಾರು ಹೊಡಿಯೋದರ ಮ್ಯಾಲೆ ವಾದ ನಡದಿತ್ತು. ವೆಂಕಣ್ಣ ಅಂದ,

"ನಾನು ನಾರ್ಮಲ್ ಇದ್ದಾಗಿನಕಿಂತ ಕುಡದಾಗ ಕಂಟ್ರೋಲ್ನ್ಯಾಗ ಕಾರ್ ಹೊಡಿತೀನಿ"

ಇದ್ರೂ ಇರಬಹುದು ಅನಿಸ್ತು ನಂಗ. ಯಾಕಂದ್ರ, ಕುಡದ ಮ್ಯಾಲೆ ಕಾರ್ ಹತ್ರ ಹೋಗುದ್ರಾಗ ಎರಡು ಸಲ ಅರೆ ಕೆಳಗ ಬಿಳತಾನ, ಅದ್ರ ಕಾರ್ ಸ್ಟಾರ್ಟ್ ಮಾಡಿದ ಅಂದ್ರ ಆರಾಮ ಮನಿ ಮುಟ್ಟತಾನ.

ಅದ್ರ ಸುಬ್ಬ್ಯ ಯಾಕ ಸುಮ್ನ ಇರ್ತಾನ, ಪಟ್ ಅಂತ ಹೇಳಿದ,

"ದೊಡ್ಡ ಪೋಕಾಕಿ ಮಾತಾಡ್ ಬ್ಯಾಡ್ಲೆ ಮಗನ, ಟೈಮ್ ಸರಿ ಇಲ್ಲ ಅಂದ್ರ ಎಂಥ ಕಂಟ್ರೋಲ್ ನ್ಯಾಗ ಇದ್ರೂ ಸಂಬಂಧ ಇಲ್ಲ...",

ಸುಬ್ಯನ ಈ ವಾದಾನೂ ನನಗ ಸರಿ ಅನಿಸ್ತು. ಆದರ ಅವರಿಬ್ಬರ ನಡುವ ಘನ ಘೋರ ವಾದ ಅಂತು ಸುರು ಆತು. ಅಂತು ಇಂತು ಇಬ್ಬರ್ನು ಸಮಾಧಾನ ಮಾಡುದ್ರಾಗ ಹನ್ನೆರಡು ಆಗಿತ್ತು. ನಾನು ಮನಿಗೆ ಹೋಗಲಿಕ್ಕೆ ಬೇಕಾಗಿತ್ತು. ನಾನು ಮತ್ತ ಸುಬ್ಯ ಆಟೋ ಮಾಡಿಕೊಂಡು ಮನಿಗೆ ಹೊಂಟಿವಿ.


ಮನಿ ಮುಟ್ಟಿದಾಗ ೧.೩೦. ಪಾಪ ಅಪ್ಪ ಬಾಗಲ ತಗದ. ಮಗಾ ಎಷ್ಟೊಂದು ಕೆಲಸ ಮಾಡಿ ಬಂದಾನ ಅನ್ನೋ ಕರುಣಾ ಭಾವ ಅಪ್ಪನ ಮುಖದಾಗ ಎದ್ದು ಕಾಣತಿತ್ತು. ಆದರ ಪಾಪ ಪ್ರಜ್ಞೆ ಒಳಗ ನನ್ನ ಕಣ್ಣು ನೆಲ ನೋಡತಿದ್ವು!

ಅಂತು ಇಂತೂ ಮಲಕೊಂಡಾಗ ೨. ಯಾವಾಗ ಬೆಳಗಾತೋ ಗೊತ್ತ ಆಗಿಲ್ಲ. ಕುಡಿದಾಗ ಅದೆಂಥ ಮೈ ಮರುವೋ ನಾ ಕಾಣೆ. ಎದ್ದ ಕುಡ್ಲೆ ಮೊಬೈಲ್ ನೋಡಿಲ್ಲ ಅಂದ್ರ ಸಮಾಧಾನ ಇಲ್ಲ. ಒಂಥರಾ ಎದ್ದ ಕೂಡ್ಲೆ ಹೆಂಡ್ತಿ ಮಾರಿ ನೋಡಿದಂಗ!

'ಅರೆ ಇದೇನಿದು ಇಷ್ಟು ಮಿಸ್ ಕಾಲ್!' ಅದೆಂಥ ದರಿದ್ರ ನಿದ್ದಿ ಬಂದಿತ್ತೋ. ಮೊಬೈಲ್ ರಿಂಗಾಗಿದ್ದು ಗೊತ್ತಾಗಿಲ್ಲ. ಎಲ್ಲ ಕಾಲ್ ಒಂದ ನಂಬರಿಂದ, ಅದು ವೆಂಕಣ್ಣನ ತಮ್ಮ. ಅಂವ ಫೋನ್ ಮಾಡೊದ ಕಡಿಮಿ, ಇವನ್ಯಾಕ ಮಾಡಿದ ಅವರಪ್ಪ ಏನಾದ್ರು ಹೋಗಿಬಿಟ್ರ? ಬರೇ ಕೆಟ್ಟ ವಿಚಾರ ಬರ್ಲಿಖತ್ತಿದ್ವು. ವಾಪಸ್ಸು ಕಾಲ್ ಮಾಡಿದೆ.

"ಅಣ್ಣ,...... ಅನಾಹುತ ಆಗ್ಯದಪ" ಅಂತ ಒಂದ ಸಮಾನ ಆಳಲಿಕ್ಕೆ ಸುರು ಮಾಡಿದ. ನನಗ ಖಾತ್ರಿ ಆತು ಅಪ್ಪನೋ ಅಮ್ಮನೋ ಹೋಗಿರಬೇಕು ಅಂತ.

"ಸಮಾಧಾನ ಮಾಡ್ಕೋಪಾ, ಏನಾತು ಹೇಳು " ಅಂದೇ.

"ಇನ್ನೇನು ಆಗುದು ಉಳದಿಲ್ಲಪ, ವೆಂಕಣ್ಣ ಹೋಗಿ ಬಿಟ್ಟ" ಅಂದ! ನನಗ ಹುಚ್ಚು ಹಿಡಿಯೊದೊಂದ ಬಾಕಿ. ನಿನ್ನೆ ಇನ್ನ ನಂಜೋತಿ ಕುಡಕೋತ ಕುತಂವ ಹೆಂಗ ಸಾಯಲಿಕ್ಕೆ ಸಾಧ್ಯ? ವೆಂಕ್ಯನ ತಮ್ಮಗ ಹುಚ್ಹ ಹಿಡದಿರಬೇಕು, ಸಿಟ್ಟಿಲೆ ಒದರಿದೆ.

" ಲೇ ಹುಚ್ಹ ಗಿಚ್ಹ ಹಿಡದದೇನು ನಿನಗ!??"

(ಕತಿ ಇನ್ನು ಮುಗದಿಲ್ಲ ಮುಂದುವರಸ್ತಿನಿ ... ಆದರ ಮುಂದುವರಸ್ಲ್ಯೋ ಬ್ಯಾಡೋ ಅಂತ ನೀವ ಹೇಳಬೇಕು ...)



Saturday, April 10, 2010

ಕನ್ನಡ ಸಾಲಿ, ಪಾಟಿ ಚೀಲಾ ಮತ್ತು ಪೆನಶೆ!

ಆ ದಿನಗಳು, ಎಷ್ಟು ಚೊಲೋ ಇದ್ವು! ನನಗಿನ್ನೂ ನೆನಪಿದೆ, ಇದು ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು...

ಅಂದು ನನ್ನ ಮೊದಲನೇ ತರಗತಿಯ ಪರೀಕ್ಷೆ. ನಾನೋ ಆಗ ತಾನೆ ಜ್ವರದಿಂದ ಎದ್ದಿದ್ದೆ. ಅವತ್ತು ಪರೀಕ್ಷೆಗೆ ಅಂತ ಹೆದರುತ್ತಲೇ ಶಾಲೆಗೆ ಹೋದೆ. ನಮ್ಮದು ಮೊದಲೇ ಹಳ್ಳಿ. ಪುರಾತನ ದೇವಾಲಯಗಳ ಬೀಡು! ನಮ್ಮ ಶಾಲೆಗಳು ನಡೆಯುತ್ತಿದ್ದದ್ದು ಅಂಥ ಯಾವುದೊ ಒಂದು ಪಾಳು ಬಿದ್ದ ಗುಡಿಯಲ್ಲಿ. ನಾನು ಒಳಗೆ ಕಾಲು ಇಡಬೇಕು... ಅಷ್ಟರಲ್ಲೇ ನಮ್ಮ ಮಾಸ್ತರು,
"ನೀನು ಪಾಸಾಗಿದಿ ಹೋಗಪ್ಪ" ಅಂದ್ರು!

ನನಗೋ ಖುಷಿ. ಹಾಗೆಯೆ ಓಡಿಕೊಂಡುಮನೆಗೆ ಬಂದಿದ್ದೆ. ಹಾಗಿತ್ತು ನನ್ನ ಜೀವನದ ಮೊದಲನೇ ಪರೀಕ್ಷೆ ಹಾಗು ಅನಿರೀಕ್ಷಿತ ಫಲಿತಾಂಶ! ಅದು ಸರಕಾರೀ ಪ್ರಾಥಮಿಕ ಗಂಡು ಮಕ್ಕಳ ಒಂದನೇ ನಂಬರ್ ಶಾಲೆ. ಅಲ್ಲಿ ಕಲಿಯುವವರೆಲ್ಲ ಬರಿ ಗಂಡು ಮಕ್ಕಳು. ಆಮೇಲೆ ನಾವು ಅದೇ ಊರಲ್ಲಿ, ಮನೆ ಬದಲಾಯಿಸಿ ಬೇರೆ ಕಡೆಗೆ ಹೋದೆವು. ಅಲ್ಲಿ ಎರಡನೇ ನಂಬರ್ ಶಾಲೆಯಲ್ಲಿ ನನ್ನ ಪ್ರವೇಶ. ತಮಾಷೆಯೆಂದರೆ ಅದು ಕೂಡ ಒಂದು ಗುಡಿಯೇ ಆಗಿತ್ತು. ಈಗ ಮಧ್ಯಾನ್ಹದ ಊಟ ಕೊಡುವಂತೆ ಆಗ ಸಂಜೆಗೆ "ಘಾಟೆ" ಅನ್ನುವ ತಿನ್ನುವ ಪದಾರ್ಥ ಕೊಡುತ್ತಿದ್ದರು. ಅದರ ರುಚಿ ನಾನು ಇನ್ನು ಮರೆತಿಲ್ಲ. ವ್ಯವಸ್ಥೆಯ ದೃಷ್ಟಿಯಿಂದ ನೋಡಿದರೆ ಏನೂ ಇಲ್ಲದ ಇಂಥ ಶಾಲೆಗಳಲ್ಲಿನ ಶಿಕ್ಷಕರು ಮತ್ತು ಅವರು ನೀಡುತ್ತಿದ್ದ ಪಾಠಗಳು ಮಾತ್ರ ಅಭಿನಂದನೆಗೆ ಯೋಗ್ಯ.

ನಮ್ಮ ಪಾಠಗಳು ನಡೆಯುತ್ತಿದ್ದದ್ದು "ಭರಮಪ್ಪ" ದೇವರ ಗುಡಿಯಲ್ಲಿ. ಭರಮಪ್ಪ ಅಂದ್ರೆ "ಬ್ರಹ್ಮ" ಅಂತ! ಗರ್ಭ ಗುಡಿಯ ಎದುರು ನಾವೆಲ್ಲಾ ಮಕ್ಕಳು ಕುಳಿತಿರುತ್ತಿದ್ದೆವು. ನಮ್ಮ ಮುಂದೆ ಎರಡು ಕರಿಯ ಹಲಗೆಗಳು. ಈ ಶಾಲೆಯಲ್ಲಿ ಹೆಣ್ಣುಮಕ್ಕಳು ಕೂಡ ಇದ್ದರು. ನಮಗೆ ಇಬ್ಬರು ಮಾಸ್ತರರು! ಒಬ್ಬರು ಗಂಡು ಮಕ್ಕಳಿಗೆ ಇನ್ನೊಬ್ಬರು ಹೆಣ್ಣು ಮಕ್ಕಳಿಗೆ ಅಂತ ನೆನಪು . ಒಬ್ಬರ ಹೆಸರು ಶಿವನಗೌಡ ಪಾಟಿಲ್. ಅವರು ಪಾಠದ ಜೊತೆಗೆ ಪುಂಡ ಮಕ್ಕಳಿಗೆ ಶಿಕ್ಷೆ ಕೊಡುವುದರಲ್ಲಿ ಎತ್ತಿದ ಕೈ! ನನಗೆ ಚೆನ್ನಾಗಿ ನೆನಪಿದೆ. ಸರಿಯಾಗಿ ಗರ್ಭ ಗುಡಿಯ ಎದುರಿಗೆ ಒಂದು ಹಗ್ಗ ಇಳಿಬಿಟ್ಟಿದ್ದರು. ಯಾರಾದರು ಗಲಾಟೆ ಮಾಡಿದರೋ, ಸರಿ,

"ಬಾ ಮಗನ ಭಾರಮಪ್ಪನ್ನ ತೋರಸ್ತೀನಿ" ಅಂತ,

ಆ ಹಗ್ಗಕ್ಕೆ ಹುಡುಗನ ಎರಡೂ ಕೈ ಕುಣಿಕೆ ಹಾಕಿ, ಇಳಿಬಿಟ್ಟು ತಮ್ಮ ಕೈಯಿಂದ ಅವನ ಕೈ ವತ್ತುತ್ತಿದ್ದರು. ಹುಡುಗರು ನೋವಿಗೆ ಕಿರಿಚಾಡುತ್ತಿದ್ದರು. ಇನ್ನೊಮ್ಮೆ ತುಂಟತನ ಮಾಡುವ ಮುನ್ನ ಯೋಚಿಸುತ್ತಿದ್ದರು. ಆದರೆ ಇನ್ನೂ ಕೆಲ ಹುಡುಗರಿದ್ದರು. ಅವರು ಭರಮಪ್ಪ ಬಿಟ್ಟು ಅವರಪ್ಪ ಬಂದರೂ ಹೆದರುತ್ತಿರಲಿಲ್ಲ! ಅಂತ ಹುಡುಗರಿಗೆ ದಿನವೂ ಶಿಕ್ಷೆ. ನಮಗೋ ಅದೊಂದು ಮನರಂಜನೆ ಆಗ. ಈ ತರಹದ ಶಿಕ್ಷೆ ಯಿಂದಲೋ ಏನೋ, ಗುರುಗಳ ಬಗ್ಗೆ ಭಯ ಮಿಶ್ರಿತ ಗೌರವ ಭಾವನೆ ಮೂಡುತ್ತಿತ್ತು.

ಕನ್ನಡ ಶಾಲೆಯಲ್ಲಿ ನನಗೆ ತುಂಬಾ ನೆನಪು ಬರೋದು "ಬಾಯಿ ಲೆಕ್ಕ"; ದಿನವು ಸಂಜೆ ಅ, ಆ, ಇ , ಈ .. , ಮಗ್ಗಿ ಆದ ಮೇಲೆ ಬಾಯಿ ಲೆಕ್ಕದ ಸರದಿ. ಗುರುಗಳು ಯಾವುದೋ ಒಂದು ಲೆಕ್ಕ ಹೇಳೋರು. ಅದನ್ನು ಮನಸ್ಸಿನಲ್ಲೇ ಕೂಡಿಸಿ, ಗುಣಿಸಿ , ಕಳೆದು ಬಂದ ಉತ್ತರವನ್ನು ನಾವು ಪಾಟಿಯಲ್ಲಿ ಬರೆದು, ಮುಚ್ಚಿ ಇಡಬೇಕು. ಮುಚ್ಚಿಡುವುದು ಯಾಕೆಂದರೆ ಬೇರೆಯವರು ನೋಡಬಾರದೆಂದು! ಆಮೇಲೆ ಗುರುಗಳು ಪ್ರತಿಯೊಬ್ಬರ ಉತ್ತರವನ್ನು ನೋಡಿ, ಶಭಾಶ್ ಅಂತಾ ಮೆಚ್ಚಿಗೆ, ಇಲ್ಲ ಉತ್ತರ ತಪ್ಪಾಗಿದ್ದರೆ ಬೆನ್ನಿಗೊಂದು "ಧಬ್" ಅಂತ ಗುದ್ದೋ ಕೊಡುತ್ತಿದ್ದರು. ಆ ಹೊಡೆತದ ಅನುಭವವೇ ಅದ್ಭುತ! ಕರುಳು ಬಾಯಿಗೆ ಬರೋದು ಅಂದ್ರೆ ಇದೆ ಅಂತ ನಮಗೆ ಅರ್ಥವಾಗಿತ್ತು ಆಗ. ನಮ್ಮ ಮಸ್ತರೊಬ್ಬರು ಹೇಳುತ್ತಿದ್ದರು,

"ನಾನು ಒಂದು ಗುದ್ದಿದೆ ಅಂದ್ರ, ಛಡಿ ಛಂ ಛಂ, ವಿದ್ಯಾ ಗೊಂ ಗೊಂ" ಅಂತ. ಮೂಲ ಗಾದೆಯಲ್ಲಿ "... ಘಂ ಘಂ" ಅಂತ ಇದೆ. ಆದರೆ, ಇವರು ಬಿಡುವ ಹೊಡೆತಕ್ಕೆ "...ಗೊಂ ಗೊಂ" ಅಂತ ಹಿಂದೆ ವಾಸನೆ ಬರುತ್ತೆ ಅಂತ, ಅದರರ್ಥ.

ಇದೆಲ್ಲ ಯಾಕೆ ನೆನಪು ಬಂತು ಅಂದ್ರೆ, ಮೊನ್ನೆ ನನಗೆ ಕಲಿಸಿದ ಗುರುಗಳೊಬ್ಬರು ತೀರಿಹೋದ ಸುದ್ದಿ ಕೇಳಿದೆ. ಬೇಜಾರಾಯ್ತು, ಮನಸ್ಸು ಒಂದು ಸಲ ಫ್ಲಾಶ್ ಬ್ಯಾಕ್ ಗೆ ಹೋಗಿ ಬಂತು.

Thursday, February 18, 2010

ಹೆಸರಿಡೋರು...!

ಹೆಸರಿಡೋದೂ ಒಂದು ಕಲೆನಾ? ಹೌದು ಅನ್ಸುತ್ತೆ. ನಾನು ಹೆಳ್ತಿರೋದು ಚಿಕ್ಕ ಮಕ್ಕಳಿಗೆ ಹೆಸರಿಡೋದರ ಬಗ್ಗೆ ಅಲ್ಲ, ದೊಡ್ಡವರಿಗೆ ಇಡೋದರ ಬಗ್ಗೆ! ಕೆಲವರು ಇರ್ತಾರೆ, ಎಲ್ಲರಿಗೂ ಹೆಸರಿಡೋದೇ ಅವರ ಕಾಯಕ. ಬೇರೆಯವರ ಹಾವ ಭಾವ, ಗಾತ್ರ, ಧ್ವನಿ ಹೀಗೆ ಹಲವಾರು ಲಕ್ಷಣಗಳನ್ನು ನಿರಂತರವಾಗಿ ಅಭ್ಯಸಿಸಿ ಒಂದು ಹೆಸರೂ ಅಂತ ಇಟ್ರು ಅಂದ್ರೆ ಮುಗಿತು! ಆ ಮನುಷ್ಯನ ಗತಿ ಅಧೋಗತಿ.

ನಾವು ಹಾಸ್ಟೇಲಲ್ಲಿದ್ದಾಗ ನಮ್ಮ ಮಿತ್ರನೊಬ್ಬ ಹಾಗೆ ಹೆಸರಿಡೋದರಲ್ಲಿ ನಿಷ್ಣಾತನಾಗಿದ್ದ. ನಮ್ಮ ಸಹಪಾಠಿಯಾಗಿದ್ದ ನಾಗರಾಜ ಆಗಾಗ ನನ್ನ ರೂಮ್ ಗೆ ಭೇಟಿ ನೀಡುತ್ತಿದ್ದ. ಅವನದು ಸ್ವಲ್ಪ ನರಿಬುದ್ಧಿ. ಸರಿ ನಮ್ಮ ಹೆಸರಿಡೊ ಮಿತ್ರ ಅವನಿಗೆ ಒಂದ್ಯಾವುದೋ ಶುಭ ಮುಹುರ್ತದಲ್ಲಿ ನರಿ ಅಂತ ನಾಮಕರಣ ಮಾಡಿಯೆ ಬಿಟ್ಟ ನೋಡಿ! ಆಮೆಲೆ ಇದ್ದು ಬಿದ್ದವರೆಲ್ಲ ಅವನಿಗೆ ನರಿ ಅನ್ನೋದಕ್ಕೆ ಶುರು ಮಾಡಿದ್ರು. ಎಷ್ಟೋಸರ್ತಿ ಹಿಂಗಾಗ್ತಿತ್ತು ಅಂದ್ರೆ, ಗುಂಪಿನಲ್ಲಿದ್ದಾಗ ಯಾವನೋ ಒಬ್ಬ್ನು ನರಿ ಅನ್ನೋನು. ಇನ್ನೊಬ್ನು ಲೇ ನಾಗ್ಯಾ ಇಂವಾ ನಿನಗ ನರಿ ಅಂದ ನೋಡ್ಲೆ ಅನ್ನೊನು. ಮತ್ತೊಬ್ಬ ಲೇ ಮಗನ ನರಿ ಅಂದಾ, ಅಂತ ಹೇಳಿ ನೀನು ಇನ್ ಡೈರೆಕ್ಟ್ ಆಗಿ ನರಿ ಅಂತಿಯೇನಲೆ ಅನ್ನುತ್ತಿದ್ದಾಗಲೇ ಮುಗುದೊಬ್ಬ ನೀಯರೆ ಏನ ಕಡಿಮಿ ಇದ್ದಿ, ಅದನ್ನ ಹೇಳಿದಂಗ ಮಾಡಿ ಎರಡು ಸಲಾ ನರಿ ಅಂದ್ಯಲ್ಲ! ಅಂತ ತನ್ನ ತೀಟೆ ತೀರಿಸಿಕೊಳ್ಳೋನು. ಇದು ನಮಗೆಲ್ಲ ಮಜವಾಗಿರ್ತಿತ್ತು. ಆದರೆ ಪಾಪ ನರಿಗೆ ... ಕ್ಷಮಿಸಿ ನಾಗರಾಜನಿಗೆ ಮಾತ್ರ ಪ್ರಾಣ ಸಂಕಟ. ಅವ್ನು ಮಾತ್ರ ಲೇ ಮಕ್ಳ ನಿಮ್ಮನ್ನ ಕೊಂದು ಹಾಕಿ ಬಿಡ್ತೀನಿ ಅಂತ ಮುಖ ಕೆಂಪಗೆ ಮಾಡ್ಕೊಂಡು ಸಿಟ್ಟು ಮಾಡ್ಕೊಳ್ಳೋನು. ಇವತ್ತಿಗೂ ಯಾರಾದರೂ ಹಳೆಯ ಮಿತ್ರರು ಸೇರಿದರೆ ನಾಗರಾಜ ಅಂತ ಯಾರೂ ದೇವರಾಣೆಗೂ ನೆನೆಸೋದಿಲ್ಲ, ನರಿ ಸಿಕ್ಕಿದ್ನಾ? ಅಂತಾನೇ ಕೇಳೋದು. ಪಾಪ ನರಿ!!

ಹೆಸರಿಡೋರು ಇಷ್ಟು ಚೆನ್ನಾಗಿ ವಿಶ್ಲೇಷಣೆ ಮಾಡಿರ್ತಾರೆ ಅಂದ್ರೆ, ಅವರಿಟ್ಟ ಹೆಸರು ಅಯಾ ವ್ಯಕ್ತಿಗೆ ಸರಿಯಾಗಿ ಒಪ್ಪಿರುತ್ತೆ. ಕೆಲವರನ್ನ ನೋಡಿದ ಕೂಡಲೆ ಒಂದು ಪ್ರಾಣಿನೋ, ಕಾಯಿ ಪಲ್ಲೆಯೋ ಅಥವಾ ಇನ್ನೂ ಏನೋ ನೋಡಿದಂಗೆ ಅನಿಸುತ್ತಿರುತ್ತದೆ. ನಮ್ಮ ಬಾಲ್ಯದ ಗೆಳೆಯನೊಬ್ಬನಿಗೆ ಗಜ್ಜರಿ ಅಂತಿದ್ರು. ಅವನು ಕೆಂಪಗೆ ಒಂಥರಾ ಗಜ್ಜರಿ ಥರಾನೇ ಇದ್ದ. ಓಂದಿಬ್ಬರು ಇಜ್ಜೋಡಿ (ಇಬ್ಬರೂ ಒಬ್ಬರಿಗೊಬ್ಬರು ಅನುರೂಪವಾಗಿಲ್ಲದಿರುವುದು) ಪ್ರೇಮಿಗಳು ಇದ್ರೆ, ಅವರಿಗೆ "ಒಂದು ಹಸಿದಿದ್ದು ಇನ್ನೊಂದು ಹಳಿಸಿದ್ದು" ಅಂತೆ! ಇನ್ನು ಕೆಲವರು ಇಂಗ್ಲಿಷ್ ನಲ್ಲಿ ಹೆಸರು ಇಡ್ತಾರೆ. ಒಂದು ವೇಳೆ ಹುಡುಗನಿಗೊ, ಹುಡುಗಿಗೊ ಮದುವೆ ವಯಸ್ಸು ಮೀರಿ ಇನ್ನು ಮದುವೆ ಆಗಿಲ್ಲ ಅಂತ ಇಟ್ಕೊಳ್ಳಿ "ಡೇಟ್ ಬಾರ್ ಅರ್ಜೆಂಟ್ ರಿಕ್ವೈರ್ಡ್" ಅಂತೆ!

ಇದು ಬಹಳಷ್ಟು ಸಲ ತಮಾಷೆಯಾಗಿ ಕಂಡ್ರೂ, ಇದರಿಂದ ಯಾರೋ ಒಬ್ಬರಿಗೆ ಹರ್ಟ್ ಆಗಿರುತ್ತೆ. ಹೆಸರಿಡೊರು ಮಾಮುಲಿಯಾಗಿ ವ್ಯಕ್ತಿಯ ಬೆನ್ನ ಹಿಂದೆಯೇ ಆಡಿಕೊಳ್ಳುತ್ತಾರೆ. ಆ ವಿಷಯ ಹೆಸರಿಟ್ಟುಕೊಂಡವನಿಗೆ ಗೊತ್ತಾದಾಗ ಅವನಿಗೆ ಹಿಂಸೆ ಆಗುವುದು ಸಹಜ. ನಮ್ಮ ಗೆಳೆಯ ಸ್ವಲ್ಪ ಜಾಸ್ತಿಯೆ ಕಪ್ಪಗಿದ್ದ (ಅದರಲ್ಲಿ ಅವನದೇನು ತಪ್ಪಿರಲಿಲ್ಲ, ಪಾಪ!). ಅವನಿಗೆ ಕಪ್ಪು ಮೋಡ ಅಂತ ಒಬ್ಬ ಮಹಾಶಯ ಹೆಸರಿಟ್ಟಿದ್ದ. ಅದು ಅವನಿಗೆ ಯಾರೋ ಹೇಳಿ ಅವನು ತುಂಬಾ ಬೇಜಾರೂ ಮಾಡ್ಕೊಂಡಿದ್ದ. ಹಾಗಂತ ಎಲ್ಲ್ರೂ ಆ ಥರ ಇರೋದಿಲ್ಲ. ಕೆಲವರು ಅದನ್ನು ತಮಾಷೆಯಾಗಿಯೆ ಸ್ವೀಕರಿಸುತ್ತಾರೆ. ಅದೇನೆ ಇರಲಿ, ಯಾವುದು ಅತಿಯಾಗಬಾರದು ಅಲ್ವೆ?