Saturday, July 4, 2009

ಇದು ನ್ಯಾಯಾನಾ?

ಇದು ಒಬ್ಬ ಮುಪ್ಪಾನು ಮುದುಕನ ಕತೆ ಅಥವಾ ವ್ಯಥೆ! ಅವರ ಹೆಸರು ಮಾಧವ ರಾಯರು ಅಂತ ಇಟ್ಕೊಳ್ಳೋಣ ಒಂದು ಊರಲ್ಲಿ ಅವರದೊಂದು ಹಳೆಯ ಮನೆ ಇದೆ. ಅದು ನೂರು ವರ್ಷಕ್ಕಿಂತ ಹಳೆಯದು. ಅವರ ಅಜ್ಜ ಕಟ್ಟಿಸಿದ್ದು. ರಾಯರು, ತಮ್ಮ ದುಡಿಮೆಯ ಕಾಲದಲ್ಲಿ ಒಂದಿಷ್ಟು ಉಳಿತಾಯದ ದುಡ್ಡು ಹಾಗು ಸಾಲ ಸೋಲ ಮಾಡಿ, ತಮಗೆ ವ್ರುಧಾಪ್ಯಕ್ಕೆಇರಲಿ ಅಂತ ಈ ಮನೆಯನ್ನ ತಮ್ಮ ಹೆಸರಿಗೆ ಮಾಡಿಕೊಂಡರು. ಉಳಿದ ಅಣ್ಣ ತಮ್ಮಂದಿರು ಮಾರಿಬಿಡೋಣ ಅಂದರೂ ತನಗೇ ಬೇಕು ಅಂತ ಆ ಮನೆಯನ್ನ ತಮ್ಮ ಹೆಸರಿಗೆ ಮಾಡಿಕೊಂಡರು. ಅವರ ವೃತ್ತಿ ಬೇರೆ ಊರಲ್ಲಿದ್ದ ಕಾರಣ, ನಿವೃತ್ತಿಯ ವರೆಗೂ ಆ ಮನೆಯಲ್ಲಿ ವಾಸಿಸುವ ಭಾಗ್ಯ ಅವರಿಗೆ ಕೂಡಿ ಬರಲಿಲ್ಲ. ನಿವೃತ್ತರಾದ ಮೇಲೆ ಅವರ ಮಕ್ಕಳು ಬೇರೆ ಊರಿನಲ್ಲಿ ತಳ ಊರಿದ ಕಾರಣ, ಮಕ್ಕಳ ಜೊತೆಗೆ ಅವರೂಇರುವ ಹಾಗಾಯ್ತು. ಅಷ್ಟೊತ್ತಿಗೆ ರಾಯರ ಹೆಂಡತಿಯು ದೈವಾಧೀನರಾದರಿಂದ ಅವರೊಬ್ಬರನ್ನೇ ಆ ಮನೆಯಲ್ಲಿ ಬಿಡುವ ತಪ್ಪು ಮಕ್ಕಳಾದರೂ ಹೇಗೆ ಮಾಡಿಯಾರು?
ಸರಿ, ಮನೆಯನ್ನು ಖಾಲಿ ಇಡುವುದೇ? ಯಾರಿಗಾದರು ಬಾಡಿಗೆ ಕೊಡೋಣ ಅಂತ ಒಬ್ಬನಿಗೆ ಬಾಡಿಗೆ ಅಂತ ಕೊಟ್ಟರು. ಆ ಬಾಡಿಗೆದಾರನ ಹೆಸರು ಶೇಷಗಿರಿ ಅಂತ ಇರಲಿ. ಶೇಷಗಿರಿಯನ್ನು ಪರಿಚಯಿಸಿದವರು ರಾಯರ ಪರಮ ಮಿತ್ರರೇ. ಅಲ್ಲಿಗೆ ರಾಯರಿಗೆ ನಿಶ್ಚಿಂತೆ. ಶೇಷ ಮನೆಯನ್ನು ಚೆನ್ನಾಗಿಯೇ ನೋಡಿಕೊಳ್ಳ ತೊಡಗಿದ. ಬಾಡಿಗೆ ಸರಿಯಾಗಿ ಪಾವತಿ ಮಾಡುತ್ತಿದ್ದ. ರಾಯರು ಯಾವಾಗಲಾದರು ಹೋದರೆ ತುಂಬ ಆದರ - ಅತಿಥ್ಯ ಮಾಡುತ್ತಿದ್ದ. ರಾಯರಿಗೂ ಅವನ ಕಂಡರೆ ತುಂಬ ಪ್ರೀತಿ. ವರುಷಗಳು ಕಳೆದಂತೆ, ರಾಯರಿಗೂ ವಯಸ್ಸಾಗುತ್ತ ಬಂತು. ಮನೆಯ ಬಗ್ಗೆ ಮೊದಲಿನ ಉತ್ಸಾಹ ಕಡಿಮೆಯಾಯ್ತು. ಅದು ಅಲ್ಲದೆ ಮನೆಯ ಕಡೆ ದೂರ ಪ್ರಯಾಣ ಮಾಡಿಕೊಂಡು ಹೋಗಿ ಮುತುವರ್ಜಿ ವಹಿಸುವ ಕೆಲಸ ವೃದ್ಧರಾದ ರಾಯರಿಗೆ ಕಷ್ಟವೆನಿಸತೊಡಗಿತು. ಮಕ್ಕಳು ಕೂಡ ತಮ್ಮ ತಮ್ಮ ವೃತ್ತಿಯಲ್ಲಿ ಮಗ್ನರಾದ ಕಾರಣ ಅವರೂ ಕೂಡ ಮನೆಯ ಕಡೆ ಹಾಯಲಿಲ್ಲ. ಅಲ್ಲಿಗೆ ರಾಯರು ಆ ಮನೆಯಯನ್ನು ಮಾರಿ ಬಿಡುವ ನಿರ್ಧಾರ ಮಾಡಿಬಿಟ್ಟರು.
ಅಷ್ಟರಲ್ಲಿ ಏಳು ವರ್ಷಗಳಿಂದ ಅಲ್ಲೇ ತಳ ಊರಿದ ಶೇಷನಿಗೆ ಆ ಮನೆಯ ಮೇಲೆ ವಿಶೇಷ ವ್ಯಾಮೋಹ ಏರ್ಪಟ್ಟಿತು. ಅದು ಅಲ್ಲದೆ, ಆ ಮನೆಗೆ ಬಂದ ಮೇಲೆ ಉದ್ದಾರ ಆಗಿದ್ದ ಆತ ಮನೆಯ ಮೇಲೆ ಒಂದು ಕಣ್ಣು ಹಾಕಿದ್ದ. ಮನೆ ಮಾರುವ ವಿಚಾರ ರಾಯರು ಅವನಿಗೆ ಹೇಳಿದ್ದೆ ತಡ, ಮನೆಯ ಬಗ್ಗೆ ಇಲ್ಲ ಸಲ್ಲದ ಪುಕಾರು ಹೇಳತೊಡಗಿದ. ಆ ಮನೆ ವಾಸಿಸಲು ಯೋಗ್ಯವೇ ಇಲ್ಲವೆಂದು, ತುಂಬಾ ಹಳೆಯದಾಗಿರುವ ಅದು ಯಾವಾಗ ಬೀಳುವುದೋ ನಾನರಿಯೆ ಅಂತ ರಾಯರ ತಲೆ ಕೆಡಿಸಿ ಬಿಟ್ಟ. ಪಾಪ, ಆ ಊರಿನ ಸಂಪರ್ಕವೇ ತಪ್ಪಿಸಿಕೊಂಡಿದ್ದ ರಾಯರಿಗೆ ಇವನ ಮಾತು ಕೇಳಿ ಹೇಗಾಗಿರಬೇಡ?! ಆದರೆ ಮುಗ್ಧ ಮನಸಿನ ರಾಯರಿಗೆ ಶೇಷ ನ ನರಿ ಬುದ್ಧಿ ಅರ್ಥವಾಗಲಿಲ್ಲ. ಶೇಷ ನ ಲೆಕ್ಕಾಚಾರ ಹೇಗಿತ್ತು ಅಂದರೆ, ರಾಯರು ಈ ಮಾತುಗಳಿಂದ ತತ್ತರಿಸಿ ಅತಿ ಕಡಿಮೆ ಬೆಲೆಗೆ ತನಗೇ ಮಾರಿ ಬಿಡಲಿ ಅನ್ನೋದು ಅವನ ದುರುದ್ದೇಶ! ಕೊನೆಗೆ ಅದು ಹಾಗೆ ಆಗುವ ಸಮಯ ಬಂತು! ರಾಯರು ಕಡಿಮೆ ಬೆಲೆಗೆ ಹಚ್ಚಿ ಹಚ್ಚಿ ಕೊಡುತ್ತೇನೆ ಅಂತ ಶೇಷನಿಗೆ ಮಾತು ಕೊಟ್ಟರು. ಆದರು ನನ್ನ ಮಕ್ಕಳ ಸಮಕ್ಷಮ ಮಾತುಕತೆ ಯಾಗಲಿ ಅಂತ ಬಯಸಿದರು. ಶೇಷನು ತನ್ನ ಉಪಾಯ ಫಲಿಸಿದ್ದಕ್ಕೆ ಮನದೊಳಗೆ ಖುಷಿ ಪಡುತ್ತ ರಾಯರಿದ್ದ ಊರಿಗೆ ಒಂದಿಷ್ಟು ಜನ ರನ್ನು ಕರೆದೊಯ್ದ. ರಾಯರು ಹೇಳಿದರ ಅರ್ಧಕ್ಕಿಂತ ಕಡಿಮೆ ಮೌಲ್ಯಕ್ಕೆ ಮನೆಯನ್ನು ೨೫ ವರ್ಷ ಕಬ್ಜಾ ವತ್ತಿ ಬರೆದು ಕೊಡಬೇಕು ಅಂತ ಕೇಳಿದ! ರಾಯರು ಮುಗ್ಧರಾದರೆ ಅವರ ಮಕ್ಕಳೂ ಮುಗ್ಧರೆ? ಅಪ್ಪ ಮಕ್ಕಳು ಸೇರಿ ಅದು ಆಗದು ಅಂತ ನಿರ್ಧರಿಸಿದರು. ಶೇಷನಿಗೆ ಸ್ವಲ್ಪ ದಂತ ಭಗ್ನ ವಾಯ್ತು; ಅಸಮಾಧಾನದ ಕಿಡಿ ಹತ್ತಿಕೊಂಡಿತು. ಆತ ತನ್ನ ಕಂತ್ರಿ ಕೆಲಸ ಶುರು ಮಾಡಿದ . ಬೇರೆ ಯಾರಾದರು ಮನೆ ಕೊಂಡುಕೊಳ್ಳಲು ಬಂದರೆ ಅವರಿಗೆ ಏನೋ ಕತೆ ಹೇಳಿ ವಾಪಸ್ಸು ಕಲಿಸತೊಡಗಿದ. ಅದೆಲ್ಲದರ ಪರಿವೆಯೇ ಇಲ್ಲದ ರಾಯರು, ಯಾರದರೂ ಆ ಮನೆಯನ್ನು ಸೂಕ್ತ ಬೆಲೆಗೆ ಕೊಂಡರೆ ಸಾಕೆಂದು ಕಾಯತೊಡಗಿದರು. ವರ್ಷಗಳು ಕಳೆದರೂ ಯಾವನೊಬ್ಬ ಮುಂದೆ ಬರಲಿಲ್ಲ. ಶೇಷನೆಂಬ ನರಿ ಬುದ್ಧಿಯವನು ಅಲ್ಲಿರುವಾಗ ಯಾರು ತಾನೆ ಮುಂದುವರಿದಾರು? ಕೊನೆಗೆ ಎಷ್ಟೊ ವರ್ಷಗಳ ನಂತರ ಒಬ್ಬ ಪುಣ್ಯಾತ್ಮ ಮುಂದೆ ಬಂದ. ರಾಯರ ಜೊತೆ ಮಾತುಕತೆಆದಿ ಆ ಮನೆಯನ್ನು ಒಂದು ಒಳ್ಳೆ ಬೆಲೆಗೆ ಕೊಂಡ, ಅದಕ್ಕೆ ಅಂತ ಒಂದಿಷ್ಟು ಮುಂಗಡ ಕೊಟ್ಟು ಇಂತಿಷ್ಟು ತಿಂಗಳುಗಳ ನಂತರ ಬಾಕಿ ಹಣ ಕೊಟ್ಟು ಮನೆ ಖರೀದಿ ಮಾಡಿಕೊಳ್ಳುವುದಾಗಿ ಕಗದ ಪತ್ರಗಳಾದವು. ರಾಯರು ನಿಟ್ಟುಸಿರು ಬಿಟ್ಟರು. ಶೇಷನಿಗೆ ತಿಳಿಸಿದರು. ಒಳಗೊಳಗೆ ಸಂಕಟ ಪಟ್ಟ ಶೇಷ ಹೊರಗೆ ಚೆಂದದ ಮಾತುಗಳನ್ನಾಡಿದ. ನಿಮಗೆ ಒಳ್ಳೆ ಬೆಲೆಯೆ ಸಿಕ್ಕಿದೆಯೆಂದೂ, ತನಗೆ ಅದು ತನ್ನ ಕೈಲಾಗದಾಗಿತ್ತೆಮ್ದೂ ಹೇಳಿದ. ಖರೀದಿ ಆಗುವದರೊಳಗಾಗಿ ಮನೆ ಖಾಲಿ ಮಾಡುವೆನೆಂದು ಭರವಸೆಯನ್ನೂ ಕೊಟ್ಟ. ಮುಗ್ಧ ರಾಯರು ಅವನ ಮಾತು ನಂಬಿ ನಿಷ್ಚಿಂತೆಯಾಗಿದ್ದರು. ನಂಬಿಕೆಯ ಮೇಲೆ ಕೊಟ್ಟ ಮನೆಯಾದ್ದರಿಂದ, ಮನೆ ಖಾಲಿ ಮಾಡಲು ನೋಟಿಸು ಕಳಿಸುವುದು ರಾಯರಿಗೆ ಸರಿ ಕಾಣಲಿಲ್ಲ. ಪಾಪ ಅವರಿಗೇನು ಗೊತ್ತು, ಅದೇ ಅವರಿಗೆ ಮುಂದೆ ಮುಳುವಾಗುವದೆಂದು!! ಹೀಗೆ ಒಂದೆರಡು ತಿಂಗಳು ಕಳೆದವು. ಒಂದು ದಿನ ರಾಯರು ಊಟ ಮುಗಿಸಿ ಇನ್ನೇನು ಮಲಗಬೇಕು, ಅಷ್ಟರಲ್ಲಿ ಯಾರೊ ಬಾಗಿಲು ತಟ್ಟಿದರು. ಬಾಗಿಲು ತೆಗೆದು ನೋಡಿದರೆ, ಕೋರ್ಟಿನಿಂದ ಚೆಂದನೆಯ ನೋಟಿಸು ಬಂದಿತ್ತು. ಅದನ್ನ ಶೇಷ ಕಳಿಸಿದ್ದು ಅಂತ ಗೊತ್ತಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ. ಶೇಷ ರಾಯರ ಮೇಲೆಯೇ ಕೇಸು ಹಾಕಿದ್ದ! ಏನು ಅಂದರೆ, ರಾಯರು ಯಾರಿಗೊ ಹೆಚ್ಚಿನ ಬೆಲೆಗೆ ಮನೆ ಮಾರುತ್ತಿದ್ದಾರೆ, ತನಗೆ ಕೊಡುತ್ತೇನೆ ಎಂದು ಹೇಳಿದ್ದರೂ ಕೂಡ ಬೇರೆ ಯಾವನಿಗೋ ಕೊಡುತ್ತಿದ್ದಾರೆ. ಅದೂ ಅಲ್ಲದೆ ನನ್ನನ್ನು ಮನೆಯಿಂದ ಹೊರಗೆ ಹಾಕಲು ರೌಡಿಗಳನ್ನು ಕಳಿಸಿ ನನಗೆ ದಿನವೂ ಕಿರುಕೂಳ ನೀಡುತ್ತಿದ್ದಾರೆ ಇತ್ಯಾದಿ ಇತ್ಯಾದಿಯಾಗಿ ಇಲ್ಲ ಸಲ್ಲದ ಆರೋಪ ಗಳ ಪಟ್ಟೀಯನ್ನೇ ಹಾಕಿದ್ದ! ಎಂದೂ ಒಬ್ಬರ ಮೇಲೆ ಕೈ ಮಾಡಿಯು ಗೊತ್ತಿರದ ರಾಯರಿಗೆ, ಜೀವನದಲ್ಲೆ ಮೊದಲ ಬಾರಿಗೆ ಕೋರ್ಟ್ ನಿಂದ ಈ ಥರದ ನೋಟಿಸು ಬಂದಿತ್ತು. ಅವರು ತತ್ತರಿಸಿ ಹೋದರು. ನೀವು ನಮ್ಮ ತಂದೆಯ ಸಮ ಎಂದು ಮಾತಾಡುತ್ತಿದ್ದ ಶೇಷ ಈ ರೀತಿ ಮಾಡುವನೆಂದು ಅವರೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಮುಂದೆ ಶೇಷನಿಗೆ ಹೋಗಿ ಹೀಗೆಕೆ ಮಾಡಿದೆ ಅಂದರೆ ಬಾಯಿಗೆ ಬಂದಂತೆ ಬೈದು ರಾಯರಿಗೆ ಬೇಸರ ಮೂಡಿಸಿದ. ಅದೆ ಬೆಲೆಗೆ ಕೊಟ್ಟರೆ ಕೇಸು ವಾಪಸ್ಸು ತೆಗೆದುಕೊಳ್ಳುವದಾಗಿ ಬ್ಲ್ಯಾಕ್ ಮೈಲ್ ಮಾಡಿದ. ಈಗಾಗಲೆ ಬೆರೆಯವರ ಬಳಿ ಮುಂಗಡ ತೆಗೆದುಕೊಂಡ ರಾಯರು ಮಧ್ಯದಲ್ಲಿ ಸಿಕ್ಕಿಕೊಂಡರು...

...ಈಗಾಗಲೆ ಒಂದು ವರುಷವಾಗಿದೆ. ಕೇಸು ಹಾಗೆ ನಡೆಯುತ್ತಿದೆ. ಖರಿದಿ ಮಾಡಿಕೊಳ್ಳಲು ಬಂದವನು ತನ್ನ ಹಣ ವಾಪಸ್ಸು ಪಡೆದು ಕೇಸು ಮುಗಿದ ಮೇಲೆ ಮನೆಯನ್ನು ತನಗೆ ಕೊಡಬೇಕು ಅಂತ ಹೇಳಿ ಹೋಗಿದ್ದಾನೆ. ರಾಯರು ಆಟ ಆತ ಅಲೆದಾಡುತ್ತಿದ್ದಾರೆ.


ಇದು ನ್ಯಾಯನಾ? ನ್ಯಾಯಾಲಯವನ್ನು ಈ ಥರ ಕೆಟ್ಟದಾಗಿ ಬಳಸಿಕೊಳ್ಳುವುದು ತಪ್ಪಲ್ಲವೇ? ಶೇಷನ ಉದ್ದೇಷವೇ ಅದು! ಕೋರ್ಟ್ ನಲ್ಲಿ ಕೇಸು ನಡಿಯುತ್ತಿರಬೇಕು, ಬೇರೆ ಯಾರೂ ಆ ಮನೆಯನ್ನು ಕೊಂಡುಕೊಳ್ಳಬಾರದು, ತಾನು ಆರಾಮವಾಗಿ ಅಲ್ಲೆ ಝಂಡಾ ಊರುವುದು. ಇದಕ್ಕೆ ಪರಿಹಾರವೇನು? ರಾಯರಿಗೆ ಅಥವ ಈ ಥರ ಮೋಸ ಹೊಗುವ ಎಷ್ಟೊ ಜನರಿಗೆ ಈ ಪ್ರಶ್ಣೆಯ
ಉತ್ತರ ಸಿಕ್ಕಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ!

3 comments:

 1. ನಿಮ್ಮ ಬರಹ ಓದುತ್ತಾ ಓದುತ್ತಾ ನ೦ಗೆ, ಇವರೇನಾದ್ರೂ ನನ್ನ ಸ೦ಬ೦ಧಿಕರೊಬ್ರು ಬಗ್ಗೆ ಬರೆದಿದ್ದಾರಾ ಅನ್ನುಸ್ತು. ಅವರು almost ಇದೇ ತರ ಮಾಡಿದ್ರು. ವಯಸ್ಸಾದ ದ೦ಪತಿಗಳ ಮನೆ ಸೇರಿಕೊ೦ಡು, ಅವರಿಗೆ ತು೦ಬಾ ಸಾಲ ಇದ್ದಿದ್ದನ್ನ ಹೇಗೋ ತಿಳ್ಕೊ೦ಡು, ಸಾಲಗಾರರಿಗೆ ಇವರೇ ಹಣ ಚುಕ್ತಾ ಮಾಡಿ, ಉಪಾಯವಾಗಿ ಮನೆ papers ಇಸ್ಕೊ೦ಡು, ಕೊನೆಗೆ ಆ ದ೦ಪತಿಗಳನ್ನ ಬಲವ೦ತವಾಗಿ ಮನೆಯಿ೦ದ ಓಡಿಸಿಬಿಟ್ಟರು!!

  ಮಾಡಿದ ಪಾಪ ತೊಳ್ಕೊಳಕ್ಕೆ ರಾಯರ ಮಟದಲ್ಲಿ ಎಲ್ಲಾರಿಗೂ ಊಟ ಹಾಕಿಸಿದ್ರು. ಏನ್ ಮಾಡಿದ್ರೇನ೦ತೆ, ಮಾನವೀಯತೆನೆ ಇಲ್ಲದೆ ಬೇರೆಯವರಿಗೆ ಮೋಸ ಮಡಿದ್ರೆ!! ಏಲ್ಲರೂ ಅಷ್ತೆ ಸ್ವಾಮಿ! ಒಳ್ಳೆಯವರಿಗೆ ಕಾಲ ಅಲ್ಲ!

  ReplyDelete
 2. ಈ ಥರದ ಕತೆಗಳು ಅಥವಾ ವ್ಯಥೆಗಳು ತುಂಬಾ ಇವೆ. ರಾಘವೇಂದ್ರ ಸ್ವಾಮಿಗಳೇ ಅವರಿಗೆಲ್ಲಾ ಬುದ್ಧಿ ಕೊಡಲಿ ಎಂದು ಹಾರೈಸೋಣ. ಆದರೆ ಈ ಥರದ ಮೋಸಗಳನ್ನು ನಿಯಂತ್ರಿಸಲು ಏನಾದರು ಒಂದು ಕಾನೂನು ಇಲ್ಲವೇ? ವ್ರುದ್ಧರಿಗಾದರೂ ತ್ವರಿತವಾಗಿ ನ್ಯಾಯ ದ್ವರಕಿಸಿಕೊಡುವ ಬಗ್ಗೆ ಏನಾದರು ಮಾಡಬೇಕು. ಅದರ ಬಗ್ಗೆ ಜಾಗೃತಿ ಮೂಡಿಸುವದೇ ಈ ಲೇಖನದ ಉದ್ದೇಶ.

  ReplyDelete
 3. dear guruprasad, pls respond to my mail.
  -vk

  ReplyDelete