Sunday, March 31, 2013

ಸಿಂಪಲ್ಲಾಗ್ ಒಂದು ಮುಂಜಾನೆ!

ಇಂದು ಬೆಳಿಗ್ಗೆ ಕೃಷ್ಣಮೂರ್ತಿ ಫೋನು ಮಾಡಿದಾಗ ಸರಿಯಾಗಿ ೪.೨೫. ಅವರ ಕರೆಯನ್ನೇ ನಿರೀಕ್ಷಿಸುತ್ತಿದ್ದೆನೇನೊ ಎಂಬಂತೆ, ಧಡಕ್ಕನೆ ಎಚ್ಚೆತ್ತು ಕರೆಯನ್ನು ಸ್ವೀಕರಿಸಿದೆ. "ಹೂಂ... ಬರ್ತೀರೇನ್ರೀ?" ಅಂದ್ರು. ಎಲ್ಲಿಗೆ ಅಂತ ನನಗೂ ಗೊತ್ತು, ಅವರಿಗೂ ಗೊತ್ತು.  "ಆಯ್ತು... ಐದು ಮೂವತ್ತಕ್ಕೆ ನಿಮ್ಮ ಮನೆ ಮುಂದೆ ಹಾಜರಾಗುವೆ " ಅಂದೆ. ನಾನು ಬರಲಾರೆನೇನೊ ಎಂದುಕೊಂಡಿದ್ದ ಅವರಿಗೆ ಘನಘೋರ ಅಶ್ಚರ್ಯವಾಗಿದ್ದಂತೂ, ಅವರು "ವಾರೆಹ್ ವಾಹ್!" ಅಂದಾಗ ಸ್ಪಷ್ಟವಾಯ್ತು. ಯಾಕೆಂದರೆ ಹಿಂದೆ ಎರಡು ಮೂರು ಸಲ ನಾನು ಕೈ ಕೊಟ್ಟಿದ್ದೆ. ಆದರೆ ಇವತ್ತು ಗಟ್ಟಿ ನಿರ್ಧಾರ ಮಾಡಿದ್ದೆ. ಅಂದ ಹಾಗೆ ನಾವು ಹೊರಟಿದ್ದು ಸಿಂಪಲಾಗ್ ಒಂದು ವಾಕಿಂಗ ಮಾಡೋಕೆ. ಈಗಾಗಲೇ ಎರಡು ವರ್ಷಗಳಿಂದ ದಿನಾಲೂ ತಪ್ಪದೇ ಹೋಗುತ್ತಿರುವ ಗುಂಪಿನ ಜೊತೆಗೆ ನಾನೂ ಇವತ್ತು ಸೇರಿಕೊಳ್ಳುತ್ತಿದ್ದೆ.
 
ಮೂರ್ತಿಯವರ ಮನೆ ನನ್ನ ಮನೆಯಿಂದ ಕೂಗಳತೆಯಲ್ಲಿದೆ ಅಂತ ಹೇಳಬಹುದು. ಈಗ ಬಿಡಿ ಮೊಬೈಲ್ ಬಂದ ಮೇಲೆ ಎಲ್ಲರೂ ಕೂಗಳತೆ ಯಲ್ಲಿಯೇ ಇದ್ದಂತೆ! ಆದರೆ ಇವರ ಮನೆ ನಿಜವಾಗಿಯೂ ಕೂಗಳತೆಯೆ. ನಾನವರ ಮನೆ ತಲುಪಿದಾಗ ಸರಿಯಾಗಿ ೫.೩೦. ನಾನು ನಿಜವಾಗಿಯೂ ಬಂದದ್ದು ನೋಡಿ ಮೂರ್ತಿಗಳು ಸ್ವಲ್ಪ ಹೊತ್ತು ಮಾತೆ ಮರಿತಂತಿತ್ತು! ಅವರು, ಬಂದಿದ್ದು ನಾನೇ ಎಂದು ಖಚಿತ ಪಡಿಸಿಕೊಂಡು, ಪರಸ್ಪರ ನಮಸ್ಕಾರಗಳ ವಿನಿಮಯವಾಗುತ್ತಿರುವಾಗಲೇ, ಶ್ರೀಧರ್ ಅವರು ಬಂದರು. "ನಿಮ್ಮನ್ನು ಆರು ತಿಂಗಳಿನಿಂದ ಕಾಯ್ತಾ ಇದ್ದೀವಿ ಗುರುದತ್ ಅಂದರು"! ಗುರುಪ್ರಸಾದ, ಅವರಿಗೆ ಗುರುದತ್ ಥರ ಕಂಡಿರಬಹುದು, ಪರವಾಗಿಲ್ಲ ಇನ್ನೊಮ್ಮೆ ಗುರುದತ್ ಅಂತ ಕರೆದರೆ ಹೇಳಿದ್ರಾಯ್ತು ಅಂತ "ನನಗೂ ಬರ್ಬೇಕು ಅಂತ ತುಂಬಾ ಇತ್ತು, ಆದರೆ ಹಲವಾರು ಕಾರಣಗಳಿಂದ ಆಗಿರಲಿಲ್ಲ ಬಿಡಿ ಶ್ರಿಧರ್" ಅಂತ ನನ್ನ ಕಷ್ಟ ತೋಡಿಕೊಂಡೆ. ಮತ್ತೇನು? ಬೆಳಿಗ್ಗೆ ಏಳೋದು ಕಷ್ಟ ಮಾರಾಯ್ರೆ ಅಂತ ಸತ್ಯ ಹೇಳೊ ಅಷ್ಟು ಸತ್ಯ ಸಂಧನೇ ನಾನು? ಹೀಗೇ ಮುಂದುವರಿದಾಗ ಕುಮಾರಣ್ಣ ನಮ್ಮನ್ನು ಸೇರಿಕೊಂಡರು. ಮುಂದೆ ರೆಡ್ಡಿಯವರು. ಶುರುವಾಯ್ತು ನಮ್ಮ ಸಿಂಪಲ್ಲಾಗ್ ಒಂದು ವಾಕಿಂಗು...
   
ನಮ್ಮ ಮನೆಯ ಸ್ವಲ್ಪ ಹಿಂದೆ ಹೋದರೆ ಜೀಕೆವೀಕೆ ಕಂಪೌಂಡು. ಅಲ್ಲಿನ ಸಸ್ಯಕಾಶಿ ನೋಡಿ ಖುಷಿಯಾಯ್ತು. ಬೆಂಗಳೂರಿನಲ್ಲಿ ಇಂತಹ ಜಾಗ ಅಪರೂಪವಲ್ಲವೆ? ಇಷ್ಟು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದರೂ, ದಾರಿಗುಂಟ ಇಷ್ಟು ಗಿಡಗಳಿರುವುದೇ ನನಗೆ ಕಂಡಿರಲಿಲ್ಲವಲ್ಲಾ ಅಂತ ಆಷ್ಚರ್ಯ ಚಕಿತನಾದೆ. ಹಕ್ಕಿಗಳ ಚಿಲಿ ಪಿಲಿ ರಂಗನತಿಟ್ಟಿನಲ್ಲಿ ಮಾತ್ರ ಕೇಳಬಹುದು ಅಂದ್ಕೊಂಡಿದ್ದವನಿಗೆ ಇಲ್ಲಿಯೂ ಕಡಿಮೆಯಿಲ್ಲ ಅನಿಸಿತು. ಶ್ರೀಧರ್ ಅಂತೂ ಅವ್ಯಾಹತವಾಗಿ ಮಾತನಾಡುತ್ತಿದ್ದರು. ತುಂಬಾ ವಿಚಾರ ಭರಿತ ಚಿಂತನೆಗಳು! ಅವುಗಳ ಬಗ್ಗೆ ಇನ್ನೊಮ್ಮೆ ಅವರ ಅನುಮತಿ ತೆಗೆದುಕೊಂಡು ಬರೆಯುವೆ. ಶ್ರೀಧರ ಅವರ ವಿಚಾರ ಧಾರೆಗೆ ಮೂರ್ತಿಯವರ ಆಕ್ಷೇಪಗಳು, ಅದಕ್ಕೆ ಶ್ರೀಧರ ಅವರು ಒಪ್ಪದೇ ನೀಡುವ ಸಮಝಾಯಿಶಿಗಳು, ಕೇಳಲು ಒಂಥರ ಚೆನ್ನಾಗಿತ್ತು. ನಮ್ಮ ಮಾತು ಕತೆಗಳಲ್ಲಿ ರಾಜಕೀಯದವರು, ಸೆಲೆಬ್ರಿಟಿಗಳು ಎಲ್ಲರೂ ಬಂದು ಹೋದರು. ಹಾಗೇ ನಡೆಯುತ್ತಾ ಖುಷಿಯಾಗುತ್ತಿತ್ತು. ಏನೋ ಸಾಧನೆ ಮಾಡುತ್ತಿದ್ದಂತೆ ಭಾಸವಾಗುತ್ತಿತ್ತು. ಇನ್ನೂ ಮಲಗಿ ನಿದ್ದೆ ಮಾಡುತ್ತಿರುವವರ ಬಗ್ಗೆ ಕನಿಕರ ಮೂಡುತ್ತಿತ್ತು. ಛೇ ಎಷ್ಟೊಂದು ಮೈಗಳ್ಳರಲ್ಲವೇ ಈ ಜಗತ್ತಿನಲ್ಲಿ ? ಅನಿಸತೊಡಗಿತ್ತು! ನಿನ್ನೆಯವರೆಗೂ ನಾನು ಹಿಂಗೆ ಮಲಗಿದ್ದೆನೆಂಬುದು ಮರೆತಿತ್ತು! ಆದರೆ ಈ ಖುಷಿ ತುಂಬಾ ಹೊತ್ತು ಇರಲಿಲ್ಲ! ಮೊದಲನೇ ದಿನವಲ್ಲವೇ, ನನ್ನ ಕಾಲುಗಳು ಮಾತನಾಡಲು ತೊಡಗಿದವು. ಅದನ್ನು ತೋರ್ಪಡಿಸುವುದಕ್ಕಾಗುತ್ತೆಯೆ? ಅಂತೂ ಒಂದು ಕಡೆ ರೋಡು ಹೊರಳಿದ್ದು ಕಂಡು ವಾಪಸ್ಸು ಹೋಗುತ್ತಿರುವಂತೆ ಖಾತ್ರಿ ಮಾಡಿಕೊಂಡು ಮನಸ್ಸಿಗೆ ಸ್ವಲ್ಪ ಸಮಾಧಾನವಾಯ್ತು. ಆದರೆ ನಮ್ಮ "ಶ್ರೀ" ಗಳು, "ಗುರುದತ್ ನಿಮಗೊಂದು ಎಕ್ಸೈಟ್ಮೆಂಟು ತೋರಿಸ್ತೀನಿ ಇರಿ" ಅಂದಾಗ ನಾನು ಗಾಬರಿಯಾದೆ. ಒಂದು ಚಿಕ್ಕ ಬೆಟ್ಟವನ್ನು ವಿರುದ್ಧ ದಿಕ್ಕಿನಲ್ಲಿ ಏರತೊಡಗಿದರು. ಅವರು ಏರಿದರೆ ಪರವಾಗಿಲ್ಲ ಬಿಡಿ, ನನಗೂ ಹಾಗೇ ನಡೀರಿ ಅಂತ ಒತ್ತಾಯಿಸತೊಡಗಿದರು. ಬೇರೆ ದಾರಿಯಿಲ್ಲದೆ ಒಪ್ಪಿಕೊಂಡೆ. ಸುಪರ್ ಎಕ್ಸೈಟ್ಮೇಂಟು ಬಿಡಿ ಅಂತ ರೀಲು ಬಿಟ್ಟೆ. ಮೂರ್ತಿ ನಗುತ್ತಿದ್ದರು! ನನ್ನಲ್ಲಿದ್ದ ಎನರ್ಜೀ ಮುಗಿಯತೊಡಗಿತ್ತು. ಸ್ವಲ್ಪ ಕುಳಿತುಕೊಳ್ಳೋಣವೇ ಎಂದು ಕೇಳಿದರೆ ಮರ್ಯಾದೆ ಹೋಗಬಹುದೆಂದು, "ಇಲ್ಲಿ ಹತ್ತಿರದಲ್ಲಿ ಕ್ಯಾಂಟೀನ್ ಇಲ್ಲವೇ" ಅಂದೆ. "ಇಲ್ಲೇ ಇದೆ ಗುರುದತ್, ಕಾಫಿ ಕುಡಿಯೋಣ ಇರಿ" ಅಂದಾಗ ಹೋದ ಜೀವ ಬಂದಂತಾಯ್ತು. ಅಲ್ಲಿ ಉಸ್ಸಪ್ಪಾ ಅಂತ ಕುಳಿದು ಕಾಫಿ ಹೀರಿದಾಗ ಸ್ವಲ್ಪ ನೆಮ್ಮದಿಯಾಯ್ತು. ಅಲ್ಲಿ ಕಲ್ಲಿನ ಬೆಂಚಿನ ಮೇಲೆ ಕುಳಿತು ಮತ್ತೊಂದಿಷ್ಟು ಹರಟೆ ಹೊಡೆದದ್ದಾಯ್ತು. ಅದೇ ಕ್ಯಾಂಟೀನಿನಲ್ಲಿ ಇಡ್ಲಿ ಪಾರ್ಸಲ್ ತೊಗೊಂಡೆ. ಹೇಂಡತಿಗೆ ವಾಕಿಂಗ್ ಹೋಗಿದ್ದಕ್ಕೆ ಪ್ರೂಫ್ ಕೊಡಬೇಕಲ್ಲವೆ? ಸ್ವಲ್ಪ ಹೊತ್ತಿಗೆ, ವಾಪಸ್ಸು ಹೊರಟು ಬಂದೆವು. ಶ್ರೀಧರ್ ಅವರು ನಿಮ್ಮ ನಂಬರ್ ಕೊಡಿ ಅಂದರು . ಅವರಿಗೆ ನಂಬರು ಹೇಳಿ, ಅವರು ಗುರುದತ್ ಅಂತ ಸ್ಟೊರ್ ಮಾಡಿಕೊಳ್ಳುವುದರ ಮೊದಲೆ "ಗುರುಪ್ರಸಾದ" ಅಂತ ಹೇಳಿದೆ. "ಧತ್! ನಿಮ್ಮ ಹೆಸರು ಗುರುದತ್ ಅಂದ್ಕೊಂಡು ಬಿಟ್ಟಿದ್ದೆ!" ಅಂದರು. ಪರವಾಗಿಲ್ಲ ಬಿಡಿ ಸರ್ ಅಂದೆ. ಮೂರ್ತಿಗಳಿಗೆ ಬೈ ಹೇಳಿ, ಮನೆಗೆ ಬಂದು ಇಡ್ಲಿ ತಿಂದು ಮಲಗಿದವನು ಊಟದ ಟೈಮಿಗೇ ಎದ್ದಿದ್ದು!!
 
... ಆದರೆ ಮುಂಜಾನೆಯ ಆ ಸೊಬಗು, ಸುಂದರ ವಾತವರಣ, ಹಕ್ಕಿಗಳ ಚಿಲಿ ಪಿಲಿ ಇದನ್ನೆಲ್ಲ ಅನುಭವಿಸಿ ಆರೋಗ್ಯದಿಂದಿರಬೇಕೆಂದರೆ ವಾಕಿಂಗ ಮಾಡಲೇ ಬೇಕು ಅಲ್ಲವೆ? ನಿಯಮಿತವಾಗಿ ಹೋಗೋಣ ಅಂದೊಕೊಂಡಿದ್ದೀನಿ, ನೋಡೋಣ!

12 comments:

 1. ಸೊಗಸಾದ ಲೇಖನ..ನಾನೂ ಮೂರು-ನಾಕ ಸಲ ವಾಕಿಂಗ್ ಸುರು ಮಾಡಿ ಬಂದ ಮಾಡೇನಿ..

  ReplyDelete
  Replies
  1. Umesh Desai ಧನ್ಯವಾದಗಳು . ಕೆಟ್ಟ ಚಟ ಎಷ್ಟ ಲೊಗು ಕಲೀತಿವಿ, ಹಂಗ ಛೊಲೊ ಚಟ ಯಾಕ ಕಲ್ಯುದಿಲ್ಲೊ ಗೊತ್ತಿಲ್ಲ!

   Delete
 2. ಸುಂದರ ನಾಳೆಗಳಿಗೆ ಅಡಿಪಾಯ ಆಗಬಲ್ಲ ನಿಮ್ಮ ವ್ಯಕ್ತಿತ್ವಕ್ಕೆ ಸಿಕ್ಕ ಅವಕಾಶ . ವಾಕಿಂಗ್ -ಈ ವಾಯುವಿಹಾರ . ನಿಮ್ಮ ಬರವಣಿಗೆ ಮನೋಲ್ಲಸವಾಗಿದೆ .

  ReplyDelete
  Replies
  1. ಶ್ರೀಧರ್, ನಿಮ್ಮ ಪ್ರೋತ್ಸಾಹಭರಿತ ಕಮೆಂಟಿಗೆ ಧನ್ಯವಾದಗಳು.

   Delete
 3. ಬರೋಬ್ಬರಿ ಐದು ತಿಂಗಳ ನಂತರ 'ಮಲಗಿದವರನ್ನು ಬಡಿದೆಬ್ಬಿಸಿ' ಬ್ಲಾಗ್ ಬರೆಸಿದ ವಾಕಿಂಗಿಗೆ ನಮೋನ್ನಮಃ. ಸಿಂಪಲ್ಲಾಗಿ ಆಗ್ ಒಂದ್ ವಾಕಿಂಗ್ ಅನ್ನುವ ಸುಂದರ ಲೇಖನಕ್ಕೆ ಸಿಂಪಲ್ಲಾಗಿ ಒಂದು ಕಾಮೆಂಟ್ ಬರಯಬೇಕು ಎನ್ನುವದು ನಮ್ಮ ಬಿಗ್ ಬಾಸ್ ಆಗ್ರಹ. ಹೀಗೆ ಪ್ರತಿ ವಾರ ವಾಕಿಂಗು ಹಾಗೆ ಒಂದು ಒಳ್ಳೆಯ ಲೇಖನ ಅವಿರತವಾಗಿ ಸಾಗಲಿ. ಎಷ್ಟೇ ನಡೆದರೂ ನಮ್ಮ 'ಗುರು ಶ್ರೀ'ಯವರ ಜ್ಞಾನ ಭಂಡಾರ ಹಾಗೂ ಶಬ್ದ ಕೋಶ ನಮ್ಮ ಜತೆಗಿರುವವರೆಗೆ ಯಾವ ಆಯಾಸವೂ ಕಾಡುವುದಿಲ್ಲ ಅನ್ನುವ ಭರವಸೆಯೊಂದಿಗೆ......ಇಂತಿ ನಿಮ್ಮ ವಾಕಿಂಗ್ ಸಂಗಾತಿ- ಮೂರ್ತಿ

  ReplyDelete
  Replies
  1. ಮೂರ್ತಿ, ನನ್ನನ್ನು ಬರಿಯಲೂ ಯಾವಾಗಲೂ ಹುರಿದುಂಬಿಸಿ, ನಾನೊಂದು ಬ್ಲಾಗ್ ಬರೆದಾಗ ಒಂದು ಚೆಂದದ ಕಮೆಂಟು ಬರೆದು ಪ್ರೋತ್ಸಾಹಿಸುವ ತಮಗೆ ಧನ್ಯವಾದಗಳು. ರವಿವಾರದ ಬರುವಿಕೆಯನ್ನೇ ಬಕಪಕ್ಷಿಯಂತೆ ಕಾಯುತ್ತಿರುವೆ! :)

   Delete
 4. ನನ್ನ ದಿನದ ದುಡಿಮೆಗೆ ಚೈತನ್ಯ ತುಂಬೋದು ನನ್ನ ಬೆಳಗಿನ ಮುಕಾಲು ಗಂಟೆಯ ವಾಯು ವಿಹಾರವೇ. ಒಳ್ಳೆಯ ಬರಹ ಗುರುದತ್ ಅವರೇ ! :-D

  ReplyDelete
  Replies
  1. ನೀವು ಹೇಳೋದು ನಿಜ. ಧನ್ಯವಾದಗಳು ಬದರಿಪ್ರಸಾದ್ :)

   Delete
 5. ನಿಮ್ಮ ವಾಕಿ೦ಗ್ ಲೇಖನ ಓದಿ, ನನಗೆ ಜಾಗಿ೦ಗ್ ಮಾಡಿದಷ್ತು ಖುಷಿ ಆತ್ರಿ..!!!!!

  ReplyDelete
 6. hhmm..light bt fresh..njoyed readin it..vl gt bck to ur writing"..n i think dts a complement...

  ReplyDelete