Monday, September 15, 2014

ಬೆಂಬಿಡದ ಭೂತ (ಅತೀಂದ್ರಿಯ ಅನುಭವದ ಕಥೆಗಳು - ಭಾಗ ೬)

(http://www.panjumagazine.com/?p=8489)

---
ಈ ಕಥೆ ನನ್ನ ಸಹೋದ್ಯೋಗಿ ರಮೇಶ ನಾಯಕ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದದ್ದು

---
  
ನಾನು ಹುಟ್ಟಿ ಬೆಳೆದು ದೊಡ್ಡವನಾಗಿದ್ದು ಭಟ್ಕಳದಲ್ಲಿ. ನಮ್ಮ ಮನೆಯಿಂದ ಎಡವಿ ಬಿದ್ದರೆ ಸಮುದ್ರ! ಅಂದರೆ ಅದು ಅಷ್ಟು ಹತ್ತಿರದಲ್ಲಿದೆ ಅಂತ ಅರ್ಥ. ಅದು ಬೇರೆಯವರಿಗೆ ಕೇಳೋಕೆ ಚಂದ. ಪರ ಊರಿನಿಂದ ಒಂದೆರಡು ದಿನಕ್ಕೆ ಅಂತ ನಮ್ಮೂರಿಗೆ ಬಂದವರಿಗೆ ಸಮುದ್ರಕ್ಕೆ ಹೋಗಿ  ಸ್ನಾನ ಮಾಡಲು ಅಡ್ಡಿ ಇಲ್ಲ. ಅಲ್ಲೇ ಇರೋವ್ರಿಗೆ ಕಷ್ಟ. ಅದರ ಪಾಡಿಗೆ ಅದಿರುತ್ತೆ ಆದರೂ, ಸಮುದ್ರ ತೀರದಲ್ಲಿಯ ಊರಿನಲ್ಲಿದ್ದು, ಬಿಸಿಲಿನ ಝಳದಲ್ಲಿ ಬಸಿಯುವ ಬೆವರಿನಲ್ಲಿ ನಿತ್ಯ ಸ್ನಾನ ಮಾಡುವವರಿಗೇ ಗೊತ್ತು ಅದರ ಬವಣೆ. ಅದೇನೆ ಇರಲಿ ನನಗಂತೂ ನನ್ನ ಊರು ಇಷ್ಟ! 
 
ನಮ್ಮೂರಿನ ಬದಿ ಬೇಸಿಗೆಯ ಝಳ ಶುರು ಆಗೋದರ ಜೊತೆ  ಜೊತೆಗೆ ಇನ್ನೊಂದು ಸೆಕೆ ಶುರು ಆಗುತ್ತೆ.... ಅದು ಯಕ್ಷಗಾನದ್ದು! ಅದೂ ಒಂದು ಸೀಸನ್ ತರಹವೇ! ಅದು ಬಂತೆಂದರಂತೂ ಬಣ್ಣ ಹಚ್ಚುವವರ ಸಡಗರ ಹೇಳತೀರದ್ದು.  ಬಾಯಲ್ಲಿ ಕವಳ (ಎಲೆ, ಅಡಿಕೆ ಮತ್ತು ತಂಬಾಕುಗಳ ರಸಾಯನ!), ಅದನ್ನು ಜಗಿದು ಜಗಿದು ಬಾಯಿಯ ಎರಡೂ ಬದಿಗೆ ವಸರುತ್ತಿರುವ ಕೆಂಪು ರಸ, ಅದಕ್ಕೆ ಪೂರಕವಾದ ಮುಖಕ್ಕೆ ಲೇಪಿಸಿಕೊಂಡ ಯಕ್ಷನ ಪಾತ್ರದ ಬಣ್ಣ, ಅದರ ಜೊತೆಗೆ ಸ್ವಲ್ಪ ಜಾಸ್ತಿಯೇ ಹಾವ ಭಾವದೊಂದಿಗೆ ಮಾತಾಡುವ ನಟ ಶಿರೋಮಣಿಗಳ ಹರಟೆಗಳು! ಅದನ್ನು ನೋಡಲು ಎರಡು ಕಣ್ಣು ಸಾಲದು. ಬರೀ ಬಣ್ಣ ಹಚ್ಚುವವರಷ್ಟೇ ಆಲ್ಲ, ಅದನ್ನು ನೋಡಿ ಆನಂದಿಸುವವರೂ ಅದೇ ಸಡಗರದಲ್ಲಿರುತ್ತಾರೆ. ಸಣ್ಣ ಹುಡುಗರಿಂದ ಮುದುಕರವರೆಗೆ ಎಲ್ಲರಿಗೂ ಅದು ಪ್ರಿಯವೇ. ಯಕ್ಷಗಾನ ನಮ್ಮ ಜನರ ರಕ್ತದಲ್ಲಿದೆ. ಅದರ ಬಗೆಗಿನ ಪ್ರೀತಿ ಅವರ ಮುಖದಲ್ಲಿ ಕಣ್ಣಿಗೆ ಕಾಣುವಂತೆ ಕುಣಿಯುತ್ತಿರುತ್ತದೆ. ನನಗಂತೂ ಚಿಕ್ಕಂದಿನಿಂದಲೂ ಅದರ ಬಗ್ಗೆ ಒಲವು ಜಾಸ್ತಿ. 
 
ಒಂದು ಸಲ, ನಮ್ಮ ಊರಿನ ಹತ್ತಿರವೇ ಇರುವ ಶಿರೂರಿನಲ್ಲಿ ಯಕ್ಷಗಾನದ ಆಟವಿತ್ತು. ನಾನಾಗ ಎಂಟನೇ ತರಗತಿಯಲ್ಲಿದ್ದೆನೆಂದು ಕಾಣುತ್ತೆ. ಸಾಮಾನ್ಯವಾಗಿ ಯಕ್ಷಗಾನದ ಆಟ ಶುರುವಾಗೋದು ರಾತ್ರಿನೇ. ಅಮೇಲೆ ಬೆಳಗಿನ ಜಾವದ ವರೆಗೆ ನಡೆಯುತ್ತದೆ. ಶಿರೂರು, ನಮ್ಮೂರಿನಿಂದ ಸುಮಾರು ೧೦ ಕಿಲೋಮೀಟರ್ ಅಂತರದಲ್ಲಿದೆ. ಅದು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದಾದರೂ ನಮ್ಮ ಊರಿಗೆ ಹತ್ತಿರದಲ್ಲಿದೆ. ಒಂಥರ ನಮಗೆ ಗಡಿ ಪ್ರದೇಶವಿದ್ದಂತೆ! ಆ ರಾತ್ರಿಯ ಆಟಕ್ಕೆ ಹೋಗುವುದೆಂದು ನಿರ್ಧರಿಸಿಯಾಗಿತ್ತು. ನನ್ನ ಜೊತೆಗೆ, ನನಗಿಂತ ವಯಸ್ಸಿನಲ್ಲಿ ಎರಡರಿಂದ ಮೂರು ವರ್ಷಗಳ ಅಂತರದಲ್ಲಿ ಹಿರಿಯರಾದ  ನಾಲ್ಕೈದು ಜನ ಹುಡುಗರೂ ಬರುವವರಿದ್ದರು. ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮನೂ ಬರುವೆನೆಂದ. ಈ ತಮ್ಮಂದಿರನ್ನು ಸಂಭಾಳಿಸುವುದು ಕಷ್ಟವೇ ಆದರೂ , ಇರಲಿ ಅಂತ ನಾನು ರಿಸ್ಕ್ ತೊಗೊಂಡಿದ್ದೆ. ಯಾಕೆಂದರೆ, ನಮ್ಮ ತಂಡದಲ್ಲಿ ಅವನೇ ಎಲ್ಲರಿಗಿಂತ ಚಿಕ್ಕವನು.
 
ರಾತ್ರಿ ಎಂಟು ಗಂಟೆಗೆಲ್ಲಾ ಊಟ ಮುಗಿಸಿ ನಡೆಯುತ್ತಾ ಹೊರಟೆವು. ಆಗೆಲ್ಲಾ ಕಾರಿಗಿಂತ ಕಾಲಿನ ಬಳಕೆಯೇ ಜಾಸ್ತಿ ಇತ್ತು. ನಡೆಯುತ್ತ ಆ ದೂರ ಕ್ರಮಿಸಲು ಒಂದು ಗಂಟೆಯ ಮೇಲೆ ಬೆಕಿತ್ತು. ಎಲ್ಲರೂ ಬಿಸಿ ರಕ್ತದ ಹುಡುಗರೇ. ಅದು ಇದು ಹರಟೆ ಹೊಡೆಯುತ್ತಾ ಸಾಗಿತ್ತು ನಮ್ಮ ಪಯಣ. ನನ್ನ ನಿರೀಕ್ಷೆಯಂತೆ ಸ್ವಲ್ಪ ದೂರ ಹೋಗುತ್ತಲೇ ನನ್ನ ತಮ್ಮನ ಕಿರಿ ಕಿರಿ ಶುರುವಾಯ್ತು. ಎಷ್ಟಂದ್ರು ಚಿಕ್ಕವನು. ನಡೆದು ಬರುತ್ತಿದ್ದನಾದ್ದರಿಂದ ಅವನ ಕಾಲು ನೋಯಲು ಶುರುವಾಗಿತ್ತೆಂದು ಕಾಣುತ್ತೆ. ಆದರೆ ನಾವಾಗಲೇ ಊರಿನಿಂದ ಸುಮಾರು ದೂರ ಬಂದಿದ್ದೆವಾದ್ದರಿಂದ ಅವನನ್ನು  ವಾಪಸ್ಸು ಮನೆಗೆ ಬಿಟ್ಟು ಬರುವ ಪರಿಸ್ಥಿತಿಯೂ ಇರಲಿಲ್ಲ. ನನಗೋ ಅದು ಬಿಸಿ ತುಪ್ಪದಂತೆ ಉಗುಳಲೂ ಆಗದೇ ನುಂಗಲೂ ಆಗದಂತಹ ಧರ್ಮಸಂಕಟ! ಅವನಿಗೆ ಏನೋ ಪುಸಲಾಯಿಸಿ ಕರೆದೊಯ್ಯುತ್ತಿದ್ದೆ. ಆದರೂ ಅವನು ಎಲ್ಲರಿಗಿಂತ ಹಿಂದೆಯೇ ಉಳಿದಿದ್ದ.  ಕಾಲೆಳೆಯುತ್ತ ನಡೆಯುತ್ತಿದ್ದ. ಇವನ ಜೊತೆಗೆ ನನಗಿಂತ ವಯಸ್ಸಿನಲ್ಲಿ ದೊಡ್ಡವರಾದ ಹುಡುಗರ ಜೊತೆಗೆ ನಾನೂ ಹರಟೆ ಹೊಡೆಯುತ್ತ ಸಾಗಿದ್ದೆನಾದರೂ ತಮ್ಮನ ಮೇಲೊಂದು ಕಣ್ಣಿಟ್ಟಿದ್ದೆ. ನಾವು ನಡೆಯುತ್ತಿದ್ದುದು ಹೆದ್ದಾರಿ ಆಗಿತ್ತು, ಕತ್ತಲು ಬೇರೆ. ಆದರೆ ಹುಣ್ಣಿಮೆಯಾದ್ದರಿಂದ ಸ್ವಲ್ಪ ಬೆಳಕು ಇತ್ತಾದರೂ ಆ ದಾರಿಯಲ್ಲಿ ಆಗಾಗ ಓಡಾಡುವ ಟ್ರಕ್ಕುಗಳೇ ನಮಗೆ ದಾರಿ ದೀಪಗಳು.
 
ಹಾಗೆ ಸ್ವಲ್ಪ ಮುಂದೆ ಸಾಗಿದರೆ ಅಲ್ಲಿ ಒಂದು ದಿಬ್ಬ ಇದೆ. ಅದಕ್ಕೆ ಗೋಳಿ ಮರದ ಏರು ಅಂತಾರೆ. ಅಲ್ಲಿ ಮೊದಲೇ ಕೆಲವು ದುರ್ಘಟನೆಗಳು ಜರುಗಿ ಕೆಲವು ಜನ ದುರ್ಮರಣ ಹೊಂದಿದ್ದರು. ಅವರಲ್ಲಿ ಕೆಲವರು ಭೂತಗಳಾಗಿದ್ದಾರೆ ಎಂಬ ವದಂತಿಯೂ ಇತ್ತು. ನಾವಾಗಲೇ ಆ ಜಾಗಕ್ಕೆ ಬಂದಾಗಿತ್ತು. ಹಾಗೆ ಕುಂಟುತ್ತ ಸಾಗಿದ್ದ ನನ್ನ ತಮ್ಮ ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎಂಬ ಹೊಸ ರಗಳೆ ಶುರು ಮಾಡಿದ್ದ. ಅದೆಲ್ಲಾ ನಿನ್ನ ನೆಪ ಸುಮ್ಮನೆ ಬಾ ಅಂತ ಗದರಿದೆನಾದರೂ, ಭೂತದ ಭಯವಿದ್ದುದರಿಂದ ಒಂದು ಸಲ ಅವನ ಹಿಂದೆ ತಿರುಗಿ ನೋಡಿದವನಿಗೆ ಎದೆ ಧಸಕ್ಕೆಂದಿತು. ಆ ಬೆಳದಿಂಗಳ ಮಸುಕು ಮಸುಕಾದ ಬೆಳಕಿದ್ದ ಕತ್ತಲಲ್ಲಿ ನನ್ನ ಕಣ್ಣಿಗೆ ಕಂಡದ್ದು ಒಂದು ಬಿಳಿ ಅಕೃತಿ! ನಾನು ನನ್ನ ಮುಂದಿದ್ದ ಹುಡುಗರಿಗೂ ಅದನ್ನು ತಿಳಿಸಿ , ತಮ್ಮನ ಕೈ ಹಿಡಿದು ಲಗು ಬಗೆಯಿಂದ ಎಲ್ಲರೂ ನಡೆಯತೊಡಗಿದೆವು. ಎಲ್ಲರಿಗೂ ಭಯ ಶುರುವಾಗಿತ್ತು. ಆ ದಿಬ್ಬದ ಮೇಲೆ ತಲುಪಿದ್ದೆವು. ಅಲ್ಲಿಂದ ದೂರದಲ್ಲಿ ಯಕ್ಷಗಾನ ನಡೆಯುವ ಸ್ಥಳ ಕಾಣತೊಡಗಿತ್ತು. ಅಲ್ಲಿನ ಸ್ಪೀಕರಿನಲ್ಲಿ ಹಾಕಿದ್ದ ಹಾಡು ಕೇಳುತ್ತಿತ್ತಾದರೂ ಇನ್ನೂ ಸುಮಾರು ದೂರ ನಡೆಯುವುದು ಬಾಕಿ ಇತ್ತು. ಆ ಬೆಂಬಿಡದ ಭೂತವನ್ನು ತಪ್ಪಿಸಿಕೊಳ್ಳಲು ನಾವೆಲ್ಲಾ ಓಡಲು ತೊಡಗಿದೆವು. ಅದರಿಂದ ತಪ್ಪಿಸಿಕೊಂಡೆವಾ ಎಂದು ತಿರುಗಿ ನೋಡಿದರೆ ಅದೂ ಕೂಡ ನಮ್ಮ ಹಿಂದೆಯೇ ಓಡಿ ಬರುತ್ತಿತ್ತು! ಇದು ನಮ್ಮ ಬೆನ್ನ ಬಿಡಲಾರದೆಂದು ನಮಗೆ ಅರಿವಾಯ್ತು. ಈಗ ಓಡುವುದರ ಜೊತೆಗೆ ಎಲ್ಲರೂ ಕೂಗುವುದಕ್ಕೆ ಶುರು ಮಾಡಿದ್ದೆವು. ಹಾಗೆ ಸುಮಾರು ದೂರ ಓಡಿರಬೇಕು. ನಮ್ಮ ಅದೃಷ್ಟಕ್ಕೆ ಮುಂದಿನಿಂದ ಒಂದು ಟ್ರಕ್ಕು ಬರುವುದು ಕಂಡಿತು. ಅದರ ಬೆಳಕಿಗೆ ನಮಗೆ ಸ್ವಲ್ಪ ಧೈರ್ಯ ಬಂತು. ಟ್ರಕ್ಕು ನಮಗೆ ಸ್ವಲ್ಪ ಹತ್ತಿರಕ್ಕೆ ಬರುತ್ತಿದ್ದಂತೆ ಸ್ವಲ್ಪ ಹಿಂತಿರುಗಿ ನೋಡಿದೆವು. ಈಗ ದೆವ್ವದ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು!
 
ಅದೇನಾಗಿತ್ತೆಂದರೆ, ಒಂದು ಪ್ಲ್ಯಾಸ್ಟಿಕ್ಕಿನ ಚೀಲಕ್ಕೆ ಗಾಳಿ ಊದಿ ಯಾವನೋ ಪುಣ್ಣ್ಯಾತ್ಮ ಗಾಳಿ ಪಟದ ತರಹ ಮಾಡಿ ಅದಕ್ಕೊಂದು ದಾರ ಕಟ್ಟಿ ಬಿಟ್ಟಿದ್ದನೆಂದು ಕಾಣುತ್ತೆ. ಆ ಪಟ ಗಾಳಿಗೆ ತಪ್ಪಿಸಿಕೊಂಡು ಅಲ್ಲಿಲ್ಲಿ ಅಲೆದಾಡಿ, ಅದರ ದಾರದ ತುದಿ ಹೇಗೋ ನನ್ನ ತಮ್ಮನ ಚಪ್ಪಲಿಗೆ ಸಿಕ್ಕಿಕೊಂಡು ತೊಡಕಾಗಿದ್ದು ಅವನ ಅರಿವಿಗೆ ಬಾರದೇ ಹೋಗಿತ್ತು. ಅದು ಸಹಜವಾಗಿಯೇ ಇವನು ಹೋದಲ್ಲೇ ಇವನ ಬೆನ್ನಟ್ಟಿತ್ತು. ಅದೂ ಬಿಳಿಯ ಬಣ್ಣದ್ದಾಗಿದ್ದರಿಂದ ಆ ಕತ್ತಲಲ್ಲಿ ಯಾವುದೋ ಭೂತದ ತಲೆಯಂತೆ ಭಾಸವಾಗಿ ನಮ್ಮ ಬೆವರಿಳಿಸಿತ್ತು! ಕೊನೆಗೂ ಅವನ ಕಾಲಿನಿಂದ ಅದನ್ನು ಬಿಡಿಸಿ ನಮ್ಮ ತಲೆಯಿಂದ ಆ ಭೂತವನ್ನು ಓಡಿಸಿ ಯಕ್ಷಗಾನವನ್ನು ಸವಿದು ಬಂದೆವೆನ್ನಿ!                            



 

2 comments:

  1. ಎಂತ ದೈರ್ಯವಂತ ಬಿಸಿ ರಕ್ತದ ಹುಡುಗರು ನೀವು......

    ReplyDelete