Sunday, January 4, 2015

ಆಪ್ತ ರಕ್ಷಕ!

(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು http://www.panjumagazine.com/?p=9571)

ಅವತ್ತು  ಕೆಲಸ ಮುಗಿಸಿ ನಾನು ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆ. ಕೆಲಸದ ಸುಸ್ತು, ತಲೆ ಬೇರೆ ಸಣ್ಣಗೆ ನೋಯುತ್ತಿತ್ತು. ನಮ್ಮ ಅಪಾರ್ಟಮೆಂಟಿನ ಹೊರಗೆ ಕಾರು ನಿಲ್ಲಿಸಿಕೊಂಡು "ಅವನು" ಗೇಟು ತೆಗೆಯಲೆಂದು ಕಾಯುತ್ತಿದ್ದೆ...

ಅವನ ಹೆಸರು ನಂದೀಶ. ಅವನನ್ನು ಏನಂತ ಪರಿಚಯಿಸಬೇಕೆಂದು ಗೊತ್ತಾಗುತ್ತಿಲ್ಲ. ಸೆಕ್ಯುರಿಟಿ ಅನ್ನಲೇ? ಊಹುಂ, ಅವನು ಅದಕ್ಕಿಂತ ಜಾಸ್ತಿ. ವಾಚ್ ಮನ್ ಅನ್ನಲೂ  ಮನಸ್ಸಿಲ್ಲ, ಏಕೆಂದರೆ ವಾಚ್ ಮ್ಯಾನ್ ಗಳು ಬರೀ ವಾಚ್ ಮಾಡುತ್ತಾರೆ ಅಷ್ಟೆ!  ಅವನನ್ನು  ನಮ್ಮ "ಆಪ್ತ ರಕ್ಷಕ" ಅಂತ ಕರೆಯುವುದೇ ಸರಿ ಅನಿಸುತ್ತದೆ. 

... ಗೇಟು ತೆಗೆದವನೆ ಓಡುತ್ತ ನನ್ನ ಕಡೆಗೆ ಬಂದು "ಸಾರ್ ಅಲ್ಲೇ ಇರಿ, ಒಳ್ಗೆ ಬರ್ಬೇಡಿ" ಅಂತ ಸ್ವಲ್ಪ ಎಚ್ಚರಿಸುವ ರೀತಿಯಲ್ಲಿ ಹೇಳಿದ. ಮೊದಲೆ ತಡವಾಗಿ ಬಂದಿದ್ದ ನಾನು ತಾಳ್ಮೆ ಕಳೆದುಕೊಂಡಿದ್ದೆ. 
"ಯಾಕ್ರಿಪಾ?" ಸ್ವಲ್ಪ ಗಂಟು ಮುಖದಿಂದಲೇ ಕೇಳಿದೆ
"ಹಾವ್ ಬಂದೈತೆ ಸಾರ್! ಮಿಡಿ ನಾಗ್ರಾ... ಅಲ್ಲೆ ಇರಿ..." ಹಾವು ಅನ್ನುವ ಶಬ್ಧವೇ ನನ್ನ ಬಾಯಿ ಮತ್ತು ಕಣ್ಣುಗಳನ್ನು ಅಗಲಿಸಿತ್ತು. ನನ್ನ ತಲೆ ನೋವು ಸದ್ದಿಲ್ಲದೇ ಓಡಿ ಹೋಗಿತ್ತು. ಹಾವು ಹಿಡಿಯುವಷ್ಟು ಧೈರ್ಯವಾನನಲ್ಲ ನಾನು. 
"ಹಾವು ಹಿಡಿಯವ್ರಿಗೆ ಫೋನ್ ಮಾಡೋಣ್ ತಡ್ರಿ" ಅಂತ ಅಂದೆ. 
"ಅದ್ಯಾಕೆ ಬುಡಿ ಸಾರ್. ನಾನಿಲ್ವೆ? ಒಂದ್ನಿಮಿಷ ಹಂಗೆ ಇರಿ" ಅಂದವನೆ ಎಲ್ಲಿಂದಲೋ ಒಂದು ಕೋಲು, ಗೋಣಿ ಚೀಲವೊಂದನ್ನು ತಂದು. ಆ ಮಿಡಿನಾಗರವನ್ನು ಆ ಚೀಲದಲ್ಲಿ ಯಶಸ್ವಿಯಾಗಿ ಕಳಿಸಿ, ಚೀಲದ ಬಾಯಿ ಮುಚ್ಚಿ, ಹಾಗೆ ಹಿಡಿದುಕೊಂಡು ಹೋಗಿ ದೂರದಲ್ಲೆಲ್ಲೋ ಬಿಟ್ಟು ಬಂದ. ಇದೆಲ್ಲವನ್ನು ಅವನು ನನ್ನ ಕಣ್ಣ ಮುಂದೆಯೇ ಮಾಡಿದ್ದು, ಅದೂ ಒಂದೆ ಕೈಯಲ್ಲಿ ಅಂದರೆ ನೀವು ನಂಬಲಿಕ್ಕಿಲ್ಲ. ಒಂದೇ ಕೈಯಲ್ಲಿ ಯಾಕೆ ಅಂದರೆ ಅವನ ಎಡಗೈಯನ್ನು ಒಂದು ದುರ್ಘಟನೆಯಲ್ಲಿ ಕಳೆದುಕೊಂಡಿದ್ದಾನೆ! ನಾನು ನನ್ನ ಎರಡೂ ಕೈ ಇಟ್ಟುಕೊಂಡೂ ಮಾಡಲಾಗದ ಕೆಲಸವನ್ನು ಒಂದೇ ಕೈಯಲ್ಲಿ ಮಾಡಿ ನಮ್ಮ ರಕ್ಷಣೆ ಮಾಡುವವನನ್ನು ಆಪ್ತ ರಕ್ಷಕ ಅನ್ನದೆ ಬೇರೇನೂ ಅನ್ನಲು ಸಾಧ್ಯ?        

ಅವತ್ತೊಂದು ದಿನ, ತನಗಾದ ದುರ್ಘಟನೆಯನ್ನು ನೆನಪಿಸಿಕೊಂಡು ಹೇಳುತ್ತಿದ್ದ.  

"... ಇಲ್ಲಿ ಬರೋಕಿಂತ ಮೊದ್ಲು ನಮ್ಮ ಹಳ್ಳಿನಾಗೆ ನಾನು ಗೂಡ್ಸ್ ಗಾಡಿ ಓಡಸ್ತಿದ್ದೆ ಅನ್ನಿ. ಅವೊತ್ತು ಸಾಮಾನು ತುಂಬ್ಕೊಂಡು ಹೊಯ್ತಿದ್ದೆ. ದಾರೀಲಿ ಎಲ್ಲೋ ಎಡವಟ್ಟು ಆಗಿ ಗಾಡಿ ಪಲ್ಟಿ ಹೊಡೀತು ಸಾರ್. ಎರಡು ಮೂರು ಸರ್ತಿ ಉಳ್ಳಿರಬೇಕು. ಎಡಕಿನ ಕೈ ಮ್ಯಾಕೆ ಗಾಡಿ ಬಿದ್ದಿತ್ತು. ನನಗೆ  ಎಚ್ಕಾರಾನೆ ಇರಲಿಲ್ಲ ಅನ್ನಿ. ಆಮ್ಯಾಕೆ ಆಸ್ಪತ್ರೇಲಿ ಎಚ್ಚರಾ ಆದಾಗ್ಲೆ ನಂದೊಂದು ಕೈ ಕಳ್ಕೊಂಡಿದ್ದು ಗೊತ್ತಾಗಿದ್ದು." ತನ್ನ ಕೈಯನ್ನೇ ಕಸಿದುಕೊಂಡ ಆ ವಿಧಿಯಾಟವನ್ನು ವಿವರಿಸಿದ ಅವನ ಮುಖದಲ್ಲಿ ಎಳ್ಳಷ್ಟೂ ಬೇಸರವಿರಲಿಲ್ಲ. ಆದರೆ ಅದನ್ನು ಕೇಳಿ ನನ್ನ ಮನಸ್ಸು ಭಾರವಾಗಿತ್ತು.

ಮೊಳಕೈಯಿಂದ  ಕೆಳಗೆ ಕತ್ತರಿಸಿ ತುಂಡಾಗಿದ್ದ ಕೈಯನ್ನು ಮರು ಜೋಡಿಸುವ ಸಾಧ್ಯತೆಗಳನ್ನು ವೈದ್ಯರು ಅಲ್ಲಗಳೆದರಂತೆ. ಸ್ವಲ್ಪ ದಿನಗಳ ಬಳಿಕ ಈ ಘಟನೆಯಿಂದ ಚೇತರಿಸಿಕೊಂಡ ಮೇಲೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದನಂತೆ. 
 
ನಮ್ಮ ಅಪಾರ್ಟ್ಮೆಂಟಿನ  ರಕ್ಷಣೆಯ ಜವಾಬ್ದಾರಿ ಹೊತ್ತು ಈಗಾಗಲೇ ಐದು ವರ್ಷಗಳು ಸಂದಿದೆ. ದಿನದ ೨೪ ಗಂಟೆಯೂ ನಮ್ಮ ಕಟ್ಟಡದ ಯಾವುದೇ ಒಂದು ಸದ್ದಿಗೂ ಅವನದೊಂದು ಕಿವಿ ಇಟ್ಟಿರುತ್ತಾನೆ! ಅವನು ಯಾವಾಗ ಮಲಗುತ್ತಾನೋ ಆ ದೇವರಿಗೆ ಗೊತ್ತು. ನಮಗಂತೂ ನೆಮ್ಮದಿಯ ನಿದ್ದೆಯನ್ನು ದಯಪಾಲಿಸಿದ್ದಾನೆ.
ಕೆಲವರಿಗೆ ಕಾರ್ ಚಾಲನೆಯನ್ನೂ ಕಲಿಸಿದ್ದಾನೆ. ಯಾವಾಗಲೂ ನಗುಮುಖದಲ್ಲೇ ಮಾತಾಡುತ್ತಾನೆ. ಯಾವುದೇ ಕೆಲಸಕ್ಕೆ ಸಂಬಂದಿಸಿದವರ ಫೋನ್ ನಂಬರು ಅವನ ಬಳಿ ಇರುತ್ತದೆ. ಒಂದು ವೇಳೆ ಕೆಲಸಕ್ಕೆ ಯಾರೂ ಸಿಕ್ಕಿಲ್ಲವೆಂದರೆ ಆ ಕೆಲಸವನ್ನು ಯಾವುದೇ ಅಪೇಕ್ಷೆಯಿಟ್ಟುಕೊಳ್ಳದೆ ಮಾಡುತ್ತಾನೆ. ಅದು ಪ್ಲಂಬಿಂಗ್ ಆಗಿರಬಹುದು, ಇಲೆಕ್ಟ್ರಿಕ್ ಕೂಡಾ ಆಗಿರಬಹುದು!
 
ಯಾರೇ ಅಪರಿಚಿತರು ಯಾವುದೇ ಫ಼್ಲ್ಯಾಟಿಗೆ ಬಂದರೂ ಅವರ ಜೊತೆಗೆ ಆ ಮನೆಯವರೆಗೂ ಬಂದು ಅವರು ನಮಗೆ ಪರಿಚಿತರು ಅಂತ ಗೊತ್ತಾದಾಗಲೇ ಅಲ್ಲಿಂದ ಹೋಗುತ್ತಾನೆ. ಅವನು ಸುಮ್ಮನೆ ಕೂಡೋದೇ ಕಡಿಮೆ. ಕಸ ಗೂಡಿಸುತ್ತಲೋ, ಕಾರು ತೊಳೆಯುತ್ತಲೋ ಏನೋ ಒಂದು ಕೆಲಸ ಮಾಡುತ್ತಾ 'ಕಾಯಕವೇ ಕೈಲಾಸವೆನ್ನುವ' ಬಸವಣ್ಣನ ತತ್ವವನ್ನು ಅಕ್ಷರಶಃ ಮೈಗೂಡಿಸಿಕೊಂಡಿದ್ದಾನೆ.    

 
ಅವನ ಸಹಧರ್ಮಿಣಿ ಕೂಡ ಅವನಿಗೆ ಹೀಗಾಯ್ತಲ್ಲಾ ಅಂತ ಬೇಸರಿಸದೆ, ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾಳೆ. ಅವರಿಗೊಬ್ಬಳು ಮುದ್ದಾದ ಮಗಳಿದ್ದಾಳೆ. ಅವಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾನೆ. ತನ್ನ ಕೈ ಹೋಯಿತಲ್ಲಾ  ಅಂತ ಅಳುತ್ತ ಕೂಡದೆ, ತನ್ನ ಹಣೆಬರಹವನ್ನು ಹಳಿಯದೆ, ಯಾವಾಗಲೂ ನಗುತ್ತಾ, ಸ್ವಾಭಿಮಾನದ ಬದುಕನ್ನು ನಡೆಸುವ ನಂದೀಶ ಖಂಡಿತವಾಗಿಯೂ ಒಂದು ಆದರ್ಶವೇ ಅಂದರೆ ಉತ್ಪ್ರೇಕ್ಷೆಯಾಗಲಾರದು. ಅವನಿಗೆ ಒಳ್ಳೆಯದಾಗಲೆಂದು ಹಾರೈಸುತ್ತಾ...     
 

1 comment:

  1. ಇದು ನಿಜವಾಗಿಯೂ ಅದ್ಭುತ!

    ReplyDelete