Sunday, June 9, 2013

"ಕಡ್ಡಿಪುಡಿ" ಮಿಸ್ ಮಾಡ್ಲೇ ಬೇಡಿ!

"ಕಡ್ಡಿಪುಡಿ" ಎಂಬ ತುಂಬಾ ಇಂಟರೆಸ್ಟಿಂಗಾದ ಹೆಸರಿನ ಚಲನ ಚಿತ್ರದ ಬಿಡುಗಡೆಗೆ ತುಂಬಾ ಕಾಯ್ದಿದ್ದೆವು. ಅಂತೂ ಅದು ಬಿಡುಗಡೆಗೊಂಡ ಮರುದಿನವಾದ ನಿನ್ನೆ ಶನಿವಾರ ರಾತ್ರಿ ಎಂಟು ವರೆಗೆ ರಾಜಮುರಳಿ ಚಿತ್ರಮಂದಿರಕ್ಕೆ ದಾಪುಗಾಲು ಹಾಕಿ ಹೊರಟೆವು. ಒಳ್ಳೆ ರಿವ್ಯು ಬಂದಿದ್ದರಿಂದ ಜನ ಜಾತ್ರೆ ಇರಬಹುದೇನೋ, ಟಿಕೇಟು ಸಿಗುತ್ತದೋ ಇಲ್ಲವೋ ಅಂದುಕೊಂಡು ಹೋದವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಇಲ್ಲಾದ್ದು ಕಂಡು ಟಿಕೇಟು ಸಿಕ್ಕ ಖುಷಿಯ ಜೊತೆಗೆ ಸಿನಿಮಾ ಚೆನ್ನಾಗಿರಲಿಕ್ಕಿಲ್ಲವೇ ಎಂಬ ಸಂಶಯವೂ ಸುಳಿಯಿತು. ಆದರೂ ಕೊಟ್ಟ ದುಡ್ಡಿಗೆ ಸೂರಿ ಮೋಸ ಮಾಡಲಾರರೂ ಎಂಬ ಅಚಲ ನಂಬಿಕೆಯೊಂದಿಗೆ "ರಾಜಮುರಳಿ"ಯ ರಾಜ ಸಿಂಹಾಸನಗಳಲ್ಲಿ ಆಸೀನರಾದೆವು! ಸಧ್ಯ ಚಿತ್ರ ಶುರುವಾಗುವ ಹೊತ್ತಿಗೆ ಚಿತ್ರಮಂದಿರ ತುಂಬಿ ತುಳುಕಾಡುತ್ತಿತ್ತು.
 
ಚಿತ್ರದ ಟೈಟಲ್ ತೋರಿಸುವುದರೊಂದಿಗೇನೆ ಸೂರಿ ತಾನೊಬ್ಬ ಕಲಾವಿದ ಎಂಬುದನ್ನು ತೋರಿಸುವುದಕ್ಕೆ ಶುರುಮಾಡುತ್ತಾರೆ. ಮಳೆಯ ಹನಿಗಳು ಕಾರಿನ ಗ್ಲಾಸಿನ ಮೇಲೆ ಬೀಳುತ್ತಿರುವಂತೆಯೆ ವೈಪರ್ ಅದನ್ನು ಸ್ಲೋ ಮೋಷನ್ನಿನಲ್ಲಿ ಒರೆಸುತ್ತಿರುವಾಗ ಮೂಡುವದೊಂದು ಅದ್ಬುತ ಕಲಾಕೃತಿ! ಹೀಗೆ ಇಂಟರೆಸ್ಟಿಂಗಾಗಿ ಶುರುವಾಗುವ ಸಿನೆಮಾ, ಅನಂತನಾಗ್ ಒಬ್ಬ ಎಸ್ ಐ ಗೆ ಅನಂದ ಅಲಿಯಾಸ್ ಕಡ್ಡಿಪುಡಿ ಯ ವೃತ್ತಾಂತ ಹೇಳುತ್ತಾ ಸಾಗುವಾಗ ಯಾಕೊ ಮಾಮೂಲಿ ನಿರುಪಣಾ ಶೈಲಿ ಅನ್ನಿಸುವುದಕ್ಕೆ ಶುರುವಾಗುತ್ತದೆ. ಹಾಗಂತ ಬೋರು ಹೊಡೆಯುವುದಿಲ್ಲ. ಎರಡನೇ ಅರ್ಧದಲ್ಲಿ ಸಿನಿಮಾ ಅದ್ಭುತವಾಗಿ ಪಿಕ್ ಅಪ್ ಪಡೆದುಕೊಳ್ಲುತ್ತೆ. ಶಿವಣ್ಣ ಅವರ ಮಾಗಿದ ಅಭಿನಯ, ರಾಧಿಕಾ ಪಂಡಿತ ರ ಸಹಜ ಅಭಿನಯ ಮನ ಸೂರೆಗೊಳ್ಳುತ್ತದೆ. ರಾಧಿಕಾ ತುಂಬಾ ಪ್ರತಿಭಾವಂತೆ. ಅವರು ಇರುವ ಪ್ರತಿಯೊಂದು ದೃಶ್ಯಗಳೂ ನೆನಪಿನಲ್ಲುಳಿಯುವಂಥವೆ. ಅಣ್ಣಾಬಾಂಡನಂತೆ ಇಲ್ಲಿ ಹೀರೊನನ್ನು ವೈಭವಿಕರಿಸಿಲ್ಲ. ಇಲ್ಲಿ ಚಿತ್ರದ ಹೀರೋ ಖಂಡಿತವಾಗಿಯೂ ಸೂರಿ ಅವರೇ. ನಿರ್ದೇಶಕ ಹೀರೋ ಆದಾಗಲೇ ಅಲ್ಲವೇ ಚಿತ್ರ ಗೆಲ್ಲೋದು?! ಸ್ವಲ್ಪ ಮಟ್ಟಿಗೆ ಆರ್ ಗೀ ವೀ ಯ "ರಕ್ತ ಚರಿತ್ರ" ದಿಂದ ಪ್ರಭಾವಿತರಾಗಿದ್ದಾರೆಂದು ನನ್ನ ಅನಿಸಿಕೆ. ಕತೆಯಲ್ಲಿ ಏನೂ ಹೊಸತನವಿಲ್ಲದಿದ್ದರೂ ಸೂರಿಯವರ ಹೊಸತನ ಮೋಡಿ ಮಾಡುತ್ತದೆ. ಚಿತ್ರ ವಿಚಿತ್ರ ಮುಖಭಾವ, ಆಕೃತಿಗಳ ಆ ಪಾತ್ರಧಾರಿಗಳನ್ನು ಹುಡುಕುವುದರಲ್ಲಿ ರಾಮಗೋಪಾಲ್ ವರ್ಮಾರ ನಂತರ ಸೂರಿಯವರದೇ ಎತ್ತಿದ ಕೈ ಅಂತ ನನ್ನ ಅಭಿಪ್ರಾಯ. 
 
ಅದ್ಯಾಕೋ ಐಂದ್ರಿತಾಳ "ಬೆಂಗಾವಲು" ಅನಾವಶ್ಯಕ ಅನಿಸುತ್ತದೆ! "ಕಡ್ಡಿಪುಡಿ" ಅನಂದನ ಮೊದಲನೇ ರಾತ್ರಿಯ ಸಂದರ್ಭದಲ್ಲಿ ಕೆಲವೇ ಪೋಲಿ ಸಂಭಾಷಣೆಗಳು, ಸನ್ನಿವೇಶಕ್ಕೆ ಅನುಗುಣವಾಗಿ, ಊಟದ ಜೊತೆಗೆ ಉಪ್ಪಿನ ಕಾಯಿ ತರ ಇದ್ದು, ವಲ್ಗರ್ ಅನ್ನಿಸುವುದಿಲ್ಲ. ನನಗಿಷ್ಟವಾದ ಸನ್ನಿವೇಶವೊಂದರಲ್ಲಿ ರಾಧಿಕಾ ಗಂಡನೊಂದಿಗೆ ಜಗಳ ಮಾಡಿಕೊಂಡು, ಲಾಂಗು ಹಿಡಿದುಕೊಂಡು ಶಿವಣ್ಣನನ್ನು ಮನೆಯ ಮುಂದೆ ಬೆನ್ನಟ್ಟಿರುತ್ತಾಳೆ, ಕೊನೆಗೆ ಲಾಂಗನ್ನು ಅವನತ್ತ ಎಸೆದು ಹುಸಿ ಮುನಿಸಿನೊಂದಿಗೆ ಹಿಂದಿರುಗುತ್ತಾಳೆ. ರೌಡಿಸಂ ಬಿಟ್ಟು ಬದುಕು ನಡೆಸುತ್ತಿರುವ ಕಡ್ಡಿಪುಡಿ, ಕೆಳಗೆ ಬಿದ್ದಿರುವ ಲಾಂಗ್ ಎತ್ತಿ ನಿಲ್ಲುವುದಕ್ಕೂ, ಅವನನ್ನು ಕೊಲ್ಲಲು ಬಂದ ಹಳೆಯ ವೈರಿಗಳು ಅವನ ಮುಂದೆ ಬಂದು ನಿಲ್ಲುವುದಕ್ಕೂ ಸರಿ ಹೋಗುತ್ತದೆ. ಹೊಡೆಯಲು ಕೈ ಎತ್ತಿದವರು ಅವನ ಕೈಯಲ್ಲಿ ಲಾಂಗು ನೋಡಿ ಭಯದಿಂದ ವಾಪಸ್ಸು ಹೋಗುತ್ತಾರೆ. ಕಡ್ಡಿ ಆ ಲಾಂಗನ್ನು ಅಂಗಿಯಲ್ಲಿ ಸೇರಿಸಿಕೊಳ್ಳುತ್ತಾನೆ! ಅದೊಂದು ಕೆಲವೇ ಕ್ಷಣಗಳಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳ, ಮಂತ್ರಮುಗ್ಧಗೊಳಿಸುವ ಒಂದು ದೃಶ್ಯ. ಈ ತರಹದ ಚಿತ್ರಣ ಸೂರಿಯಿಂದ ಮಾತ್ರ ಸಾಧ್ಯ. ಇದೆಲ್ಲದರ ಜೊತೆಗೆ ಚಿತ್ರದ ಮತ್ತೊಬ್ಬ ಹೀರೊ ಅಂದರೆ "ಲಾಂಗು" ಅನ್ನುವ ಆ ವಿಚಿತ್ರ ಆಯುಧ! ಎಷ್ಟೋ ವರುಷಗಳಿಂದ ಇನ್ನೂ ಚಾಲ್ತಿಯಲ್ಲಿದೆಯೆ ಅಂತ ಆಶ್ಚರ್ಯವಾಗುತ್ತೆ. ಲಾಂಗಿಗೋಂದು "ಲಾಂಗ್" ಹಿಸ್ಟರಿ ಇರುವುದಂತೂ ಸತ್ಯ ಹಾಗೂ "ಲಾಂಗ್" ಫ಼್ಯುಚರೂ ಇದೆ ಅನಿಸುತ್ತೆ! ಒಟ್ಟಿನಲ್ಲಿ ಈ ಚಿತ್ರ ಸೂರಿ ಯವರು ತುಂಬಾ ಸೂಕ್ಷ್ಮವಾಗಿ ನೇಯ್ದ ನೇಯ್ಗೆ. ಒಂದೊಂದು ಪಾತ್ರಗಳು ಆವರಿಸಿಕೊಳ್ಲುತ್ತವೆ. ನೋಡಿ ಬನ್ನಿ, ಮಿಸ್ಸ್ ಮಾಡ್ಕೊಳ್ಲೇ ಬೇಡಿ!  

Sunday, March 31, 2013

ಸಿಂಪಲ್ಲಾಗ್ ಒಂದು ಮುಂಜಾನೆ!

ಇಂದು ಬೆಳಿಗ್ಗೆ ಕೃಷ್ಣಮೂರ್ತಿ ಫೋನು ಮಾಡಿದಾಗ ಸರಿಯಾಗಿ ೪.೨೫. ಅವರ ಕರೆಯನ್ನೇ ನಿರೀಕ್ಷಿಸುತ್ತಿದ್ದೆನೇನೊ ಎಂಬಂತೆ, ಧಡಕ್ಕನೆ ಎಚ್ಚೆತ್ತು ಕರೆಯನ್ನು ಸ್ವೀಕರಿಸಿದೆ. "ಹೂಂ... ಬರ್ತೀರೇನ್ರೀ?" ಅಂದ್ರು. ಎಲ್ಲಿಗೆ ಅಂತ ನನಗೂ ಗೊತ್ತು, ಅವರಿಗೂ ಗೊತ್ತು.  "ಆಯ್ತು... ಐದು ಮೂವತ್ತಕ್ಕೆ ನಿಮ್ಮ ಮನೆ ಮುಂದೆ ಹಾಜರಾಗುವೆ " ಅಂದೆ. ನಾನು ಬರಲಾರೆನೇನೊ ಎಂದುಕೊಂಡಿದ್ದ ಅವರಿಗೆ ಘನಘೋರ ಅಶ್ಚರ್ಯವಾಗಿದ್ದಂತೂ, ಅವರು "ವಾರೆಹ್ ವಾಹ್!" ಅಂದಾಗ ಸ್ಪಷ್ಟವಾಯ್ತು. ಯಾಕೆಂದರೆ ಹಿಂದೆ ಎರಡು ಮೂರು ಸಲ ನಾನು ಕೈ ಕೊಟ್ಟಿದ್ದೆ. ಆದರೆ ಇವತ್ತು ಗಟ್ಟಿ ನಿರ್ಧಾರ ಮಾಡಿದ್ದೆ. ಅಂದ ಹಾಗೆ ನಾವು ಹೊರಟಿದ್ದು ಸಿಂಪಲಾಗ್ ಒಂದು ವಾಕಿಂಗ ಮಾಡೋಕೆ. ಈಗಾಗಲೇ ಎರಡು ವರ್ಷಗಳಿಂದ ದಿನಾಲೂ ತಪ್ಪದೇ ಹೋಗುತ್ತಿರುವ ಗುಂಪಿನ ಜೊತೆಗೆ ನಾನೂ ಇವತ್ತು ಸೇರಿಕೊಳ್ಳುತ್ತಿದ್ದೆ.
 
ಮೂರ್ತಿಯವರ ಮನೆ ನನ್ನ ಮನೆಯಿಂದ ಕೂಗಳತೆಯಲ್ಲಿದೆ ಅಂತ ಹೇಳಬಹುದು. ಈಗ ಬಿಡಿ ಮೊಬೈಲ್ ಬಂದ ಮೇಲೆ ಎಲ್ಲರೂ ಕೂಗಳತೆ ಯಲ್ಲಿಯೇ ಇದ್ದಂತೆ! ಆದರೆ ಇವರ ಮನೆ ನಿಜವಾಗಿಯೂ ಕೂಗಳತೆಯೆ. ನಾನವರ ಮನೆ ತಲುಪಿದಾಗ ಸರಿಯಾಗಿ ೫.೩೦. ನಾನು ನಿಜವಾಗಿಯೂ ಬಂದದ್ದು ನೋಡಿ ಮೂರ್ತಿಗಳು ಸ್ವಲ್ಪ ಹೊತ್ತು ಮಾತೆ ಮರಿತಂತಿತ್ತು! ಅವರು, ಬಂದಿದ್ದು ನಾನೇ ಎಂದು ಖಚಿತ ಪಡಿಸಿಕೊಂಡು, ಪರಸ್ಪರ ನಮಸ್ಕಾರಗಳ ವಿನಿಮಯವಾಗುತ್ತಿರುವಾಗಲೇ, ಶ್ರೀಧರ್ ಅವರು ಬಂದರು. "ನಿಮ್ಮನ್ನು ಆರು ತಿಂಗಳಿನಿಂದ ಕಾಯ್ತಾ ಇದ್ದೀವಿ ಗುರುದತ್ ಅಂದರು"! ಗುರುಪ್ರಸಾದ, ಅವರಿಗೆ ಗುರುದತ್ ಥರ ಕಂಡಿರಬಹುದು, ಪರವಾಗಿಲ್ಲ ಇನ್ನೊಮ್ಮೆ ಗುರುದತ್ ಅಂತ ಕರೆದರೆ ಹೇಳಿದ್ರಾಯ್ತು ಅಂತ "ನನಗೂ ಬರ್ಬೇಕು ಅಂತ ತುಂಬಾ ಇತ್ತು, ಆದರೆ ಹಲವಾರು ಕಾರಣಗಳಿಂದ ಆಗಿರಲಿಲ್ಲ ಬಿಡಿ ಶ್ರಿಧರ್" ಅಂತ ನನ್ನ ಕಷ್ಟ ತೋಡಿಕೊಂಡೆ. ಮತ್ತೇನು? ಬೆಳಿಗ್ಗೆ ಏಳೋದು ಕಷ್ಟ ಮಾರಾಯ್ರೆ ಅಂತ ಸತ್ಯ ಹೇಳೊ ಅಷ್ಟು ಸತ್ಯ ಸಂಧನೇ ನಾನು? ಹೀಗೇ ಮುಂದುವರಿದಾಗ ಕುಮಾರಣ್ಣ ನಮ್ಮನ್ನು ಸೇರಿಕೊಂಡರು. ಮುಂದೆ ರೆಡ್ಡಿಯವರು. ಶುರುವಾಯ್ತು ನಮ್ಮ ಸಿಂಪಲ್ಲಾಗ್ ಒಂದು ವಾಕಿಂಗು...
   
ನಮ್ಮ ಮನೆಯ ಸ್ವಲ್ಪ ಹಿಂದೆ ಹೋದರೆ ಜೀಕೆವೀಕೆ ಕಂಪೌಂಡು. ಅಲ್ಲಿನ ಸಸ್ಯಕಾಶಿ ನೋಡಿ ಖುಷಿಯಾಯ್ತು. ಬೆಂಗಳೂರಿನಲ್ಲಿ ಇಂತಹ ಜಾಗ ಅಪರೂಪವಲ್ಲವೆ? ಇಷ್ಟು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದರೂ, ದಾರಿಗುಂಟ ಇಷ್ಟು ಗಿಡಗಳಿರುವುದೇ ನನಗೆ ಕಂಡಿರಲಿಲ್ಲವಲ್ಲಾ ಅಂತ ಆಷ್ಚರ್ಯ ಚಕಿತನಾದೆ. ಹಕ್ಕಿಗಳ ಚಿಲಿ ಪಿಲಿ ರಂಗನತಿಟ್ಟಿನಲ್ಲಿ ಮಾತ್ರ ಕೇಳಬಹುದು ಅಂದ್ಕೊಂಡಿದ್ದವನಿಗೆ ಇಲ್ಲಿಯೂ ಕಡಿಮೆಯಿಲ್ಲ ಅನಿಸಿತು. ಶ್ರೀಧರ್ ಅಂತೂ ಅವ್ಯಾಹತವಾಗಿ ಮಾತನಾಡುತ್ತಿದ್ದರು. ತುಂಬಾ ವಿಚಾರ ಭರಿತ ಚಿಂತನೆಗಳು! ಅವುಗಳ ಬಗ್ಗೆ ಇನ್ನೊಮ್ಮೆ ಅವರ ಅನುಮತಿ ತೆಗೆದುಕೊಂಡು ಬರೆಯುವೆ. ಶ್ರೀಧರ ಅವರ ವಿಚಾರ ಧಾರೆಗೆ ಮೂರ್ತಿಯವರ ಆಕ್ಷೇಪಗಳು, ಅದಕ್ಕೆ ಶ್ರೀಧರ ಅವರು ಒಪ್ಪದೇ ನೀಡುವ ಸಮಝಾಯಿಶಿಗಳು, ಕೇಳಲು ಒಂಥರ ಚೆನ್ನಾಗಿತ್ತು. ನಮ್ಮ ಮಾತು ಕತೆಗಳಲ್ಲಿ ರಾಜಕೀಯದವರು, ಸೆಲೆಬ್ರಿಟಿಗಳು ಎಲ್ಲರೂ ಬಂದು ಹೋದರು. ಹಾಗೇ ನಡೆಯುತ್ತಾ ಖುಷಿಯಾಗುತ್ತಿತ್ತು. ಏನೋ ಸಾಧನೆ ಮಾಡುತ್ತಿದ್ದಂತೆ ಭಾಸವಾಗುತ್ತಿತ್ತು. ಇನ್ನೂ ಮಲಗಿ ನಿದ್ದೆ ಮಾಡುತ್ತಿರುವವರ ಬಗ್ಗೆ ಕನಿಕರ ಮೂಡುತ್ತಿತ್ತು. ಛೇ ಎಷ್ಟೊಂದು ಮೈಗಳ್ಳರಲ್ಲವೇ ಈ ಜಗತ್ತಿನಲ್ಲಿ ? ಅನಿಸತೊಡಗಿತ್ತು! ನಿನ್ನೆಯವರೆಗೂ ನಾನು ಹಿಂಗೆ ಮಲಗಿದ್ದೆನೆಂಬುದು ಮರೆತಿತ್ತು! ಆದರೆ ಈ ಖುಷಿ ತುಂಬಾ ಹೊತ್ತು ಇರಲಿಲ್ಲ! ಮೊದಲನೇ ದಿನವಲ್ಲವೇ, ನನ್ನ ಕಾಲುಗಳು ಮಾತನಾಡಲು ತೊಡಗಿದವು. ಅದನ್ನು ತೋರ್ಪಡಿಸುವುದಕ್ಕಾಗುತ್ತೆಯೆ? ಅಂತೂ ಒಂದು ಕಡೆ ರೋಡು ಹೊರಳಿದ್ದು ಕಂಡು ವಾಪಸ್ಸು ಹೋಗುತ್ತಿರುವಂತೆ ಖಾತ್ರಿ ಮಾಡಿಕೊಂಡು ಮನಸ್ಸಿಗೆ ಸ್ವಲ್ಪ ಸಮಾಧಾನವಾಯ್ತು. ಆದರೆ ನಮ್ಮ "ಶ್ರೀ" ಗಳು, "ಗುರುದತ್ ನಿಮಗೊಂದು ಎಕ್ಸೈಟ್ಮೆಂಟು ತೋರಿಸ್ತೀನಿ ಇರಿ" ಅಂದಾಗ ನಾನು ಗಾಬರಿಯಾದೆ. ಒಂದು ಚಿಕ್ಕ ಬೆಟ್ಟವನ್ನು ವಿರುದ್ಧ ದಿಕ್ಕಿನಲ್ಲಿ ಏರತೊಡಗಿದರು. ಅವರು ಏರಿದರೆ ಪರವಾಗಿಲ್ಲ ಬಿಡಿ, ನನಗೂ ಹಾಗೇ ನಡೀರಿ ಅಂತ ಒತ್ತಾಯಿಸತೊಡಗಿದರು. ಬೇರೆ ದಾರಿಯಿಲ್ಲದೆ ಒಪ್ಪಿಕೊಂಡೆ. ಸುಪರ್ ಎಕ್ಸೈಟ್ಮೇಂಟು ಬಿಡಿ ಅಂತ ರೀಲು ಬಿಟ್ಟೆ. ಮೂರ್ತಿ ನಗುತ್ತಿದ್ದರು! ನನ್ನಲ್ಲಿದ್ದ ಎನರ್ಜೀ ಮುಗಿಯತೊಡಗಿತ್ತು. ಸ್ವಲ್ಪ ಕುಳಿತುಕೊಳ್ಳೋಣವೇ ಎಂದು ಕೇಳಿದರೆ ಮರ್ಯಾದೆ ಹೋಗಬಹುದೆಂದು, "ಇಲ್ಲಿ ಹತ್ತಿರದಲ್ಲಿ ಕ್ಯಾಂಟೀನ್ ಇಲ್ಲವೇ" ಅಂದೆ. "ಇಲ್ಲೇ ಇದೆ ಗುರುದತ್, ಕಾಫಿ ಕುಡಿಯೋಣ ಇರಿ" ಅಂದಾಗ ಹೋದ ಜೀವ ಬಂದಂತಾಯ್ತು. ಅಲ್ಲಿ ಉಸ್ಸಪ್ಪಾ ಅಂತ ಕುಳಿದು ಕಾಫಿ ಹೀರಿದಾಗ ಸ್ವಲ್ಪ ನೆಮ್ಮದಿಯಾಯ್ತು. ಅಲ್ಲಿ ಕಲ್ಲಿನ ಬೆಂಚಿನ ಮೇಲೆ ಕುಳಿತು ಮತ್ತೊಂದಿಷ್ಟು ಹರಟೆ ಹೊಡೆದದ್ದಾಯ್ತು. ಅದೇ ಕ್ಯಾಂಟೀನಿನಲ್ಲಿ ಇಡ್ಲಿ ಪಾರ್ಸಲ್ ತೊಗೊಂಡೆ. ಹೇಂಡತಿಗೆ ವಾಕಿಂಗ್ ಹೋಗಿದ್ದಕ್ಕೆ ಪ್ರೂಫ್ ಕೊಡಬೇಕಲ್ಲವೆ? ಸ್ವಲ್ಪ ಹೊತ್ತಿಗೆ, ವಾಪಸ್ಸು ಹೊರಟು ಬಂದೆವು. ಶ್ರೀಧರ್ ಅವರು ನಿಮ್ಮ ನಂಬರ್ ಕೊಡಿ ಅಂದರು . ಅವರಿಗೆ ನಂಬರು ಹೇಳಿ, ಅವರು ಗುರುದತ್ ಅಂತ ಸ್ಟೊರ್ ಮಾಡಿಕೊಳ್ಳುವುದರ ಮೊದಲೆ "ಗುರುಪ್ರಸಾದ" ಅಂತ ಹೇಳಿದೆ. "ಧತ್! ನಿಮ್ಮ ಹೆಸರು ಗುರುದತ್ ಅಂದ್ಕೊಂಡು ಬಿಟ್ಟಿದ್ದೆ!" ಅಂದರು. ಪರವಾಗಿಲ್ಲ ಬಿಡಿ ಸರ್ ಅಂದೆ. ಮೂರ್ತಿಗಳಿಗೆ ಬೈ ಹೇಳಿ, ಮನೆಗೆ ಬಂದು ಇಡ್ಲಿ ತಿಂದು ಮಲಗಿದವನು ಊಟದ ಟೈಮಿಗೇ ಎದ್ದಿದ್ದು!!
 
... ಆದರೆ ಮುಂಜಾನೆಯ ಆ ಸೊಬಗು, ಸುಂದರ ವಾತವರಣ, ಹಕ್ಕಿಗಳ ಚಿಲಿ ಪಿಲಿ ಇದನ್ನೆಲ್ಲ ಅನುಭವಿಸಿ ಆರೋಗ್ಯದಿಂದಿರಬೇಕೆಂದರೆ ವಾಕಿಂಗ ಮಾಡಲೇ ಬೇಕು ಅಲ್ಲವೆ? ನಿಯಮಿತವಾಗಿ ಹೋಗೋಣ ಅಂದೊಕೊಂಡಿದ್ದೀನಿ, ನೋಡೋಣ!

Saturday, January 26, 2013

ಬೇಟೆ

ಜೇಡ ಕಾದಿತ್ತು ಬೇಟೆ ಬಲೆಗೆ ಬೀಳುವುದನ್ನು
ಆದರೆ ಸೆರೆ ಹಿಡಿದದ್ದು ಏನನ್ನು?
ರವಿಯ ರಶ್ಮಿಯನ್ನು
ಮಂಜಿನ ಹನಿಗಳನ್ನು !

 

Sunday, September 16, 2012

ನಾವು ಕನ್ನಡಿಗರು...?

ಹೀಗೆ ಒಂದು ದಿನ ರವಿವಾರ, ಕುಟುಂಬ ಸಮೇತನಾಗಿ ಸಂಜೆ ಸಹಕಾರ ನಗರದಲ್ಲಿ ಸವಾರಿ ಹೊರಟಿದ್ದೆ. ಮಗಳಿಗೆ ಪಿಝಾ ಅಂಗಡಿ ಕಂಡೇ ಬಿಟ್ಟಿತು. ನಾವು ಅನಿವಾರ್ಯವಾಗಿ ಒಳಗೆ ಹೋಗಲೇಬೇಕಾಯ್ತು. ಅವಳ ನೆಪ ಮಾಡಿಕೋಂಡು ನಮಗೂ ಪೀಝಾ ಸವಿಯುವ ಸದವಕಾಶ! ಪೀಝಾ ಕೌಂಟರ್ ಮುಂದೆ ನಿಂತೆ. ಯುವಕನೊಬ್ಬ ಕಂಪ್ಯುಟರ್ ಮುಂದೆ ನಿಂತಿದ್ದ,

"May I take your order sir?" ಅಂದ.

ಬೆಂಗಳೂರಿನಲ್ಲಿ ಎಲ್ಲ ಅಂಗಡಿಗಳಲ್ಲು ಆಂಗ್ಲ ಭಾಷೆಯಲ್ಲಿಯೆ ಮಾತಾಡಿಸುತ್ತಾರೆ. ಈ ಊರಿನಲ್ಲಿ ಎಲ್ಲ ಭಾಷೆ ಮಾತಡುವ ಜನರಿರುವುದೇ ಅದಕ್ಕೆ ಕಾರಣವಿರಬಹುದು. ಆದರೆ ನಾನು ಕನ್ನಡಿಗ, ಅಂಗಡಿಯವನೂ ಕನ್ನಡಿಗನೇ. ಯಾಕೆಂದರೆ ಅವನು ತನ್ನ ಸಹೋದ್ಯೋಗಿಯ ಜೊತೆ ಕನ್ನಡದಲ್ಲೇ ಮಾತಾಡುತ್ತಿದ್ದ. ನಾನು ಕನ್ನಡದಲ್ಲೆ ಉತ್ತರಿಸಿದೆ. ಆದರೆ ಅವನು ಇಂಗ್ಲಿಷ್ ನಲ್ಲೆ ಮುಂದುವರಿಸಿದ. ನಾನೂ ಪಟ್ಟು ಬಿಡದ ತ್ರಿವಿಕ್ರಮನಂತೆ ಕನ್ನಡದಲ್ಲೇ ವ್ಯವಹರಿಸಿದೆ. ಆದರೆ ಕೊನೆಯವರೆಗೂ ಅವನೇನು ಕನ್ನಡದಲ್ಲಿ ಮಾತಾಡಲಿಲ್ಲ. ನನಗೆ ಬೇಜಾರಾಯ್ತು. ಪೀಝಾ ತಿಂದಾಯ್ತು. ಕೊನೆಗೆ ಮ್ಯಾನೇಜರ್ ಬಂದ. ಅವನಿಗೆ ನನ್ನ ಗೋಳು ಹೇಳಿಕೊಂಡೆ. ಆ ಪುಣ್ಣ್ಯಾತ್ಮ ಯಾಕೋ ಕನ್ನಡದಲ್ಲಿ ಮಾತಾಡಿದ. ನಿಮ್ಮ ಅಭಿಪ್ರಾಯ ಬರೆಯಿರಿ ಅಂತ ಪುಸ್ತಕ ಕೊಟ್ಟು ಹೋದ. ನಾನು ಕನ್ನಡದಲ್ಲೇ ನನ್ನ ಅಭಿಪ್ರಾಯ ಹೀಗೆ ಬರೆದೆ

"ದಯವಿಟ್ಟು ಕನ್ನಡದಲ್ಲಿ ಮಾತನಾಡುವರ ಜೊತೆಗಾದರೂ ಕನ್ನಡದಲ್ಲಿಯೇ ವ್ಯವಹರಿಸಿ ಪುಣ್ಣ್ಯ ಕಟ್ಟಿಕೊಳ್ಳಿ!" ಮನಸ್ಸಿಗೆ ಸ್ವಲ್ಪ ಸಮಾಧಾನವಾದರೂ ಯಾಕೋ ಕಸಿವಿಸಿ.

ಅಂಗಡಿಯಿಂದ ಹೊರಗೆ ಬಂದೆವು. ಹೊರಗೆ ಬಂದಿದ್ದೆ ತಡ, ನನ್ನ ದುರಾದೃಷ್ಟಕ್ಕೆ ಅಲ್ಲೇ ಎದುರಿಗಿರುವ ಅಭರಣದ ಅಂಗಡಿ ನನ್ನ ಹೆಂಡತಿಯ ಕಣ್ಣಿಗೆ ಬೀಳಬೇಕೆ! ಏನೂ ಮಾತನಾಡಲು ಅವಕಾಶ ಕೊಡದೆ ಅವಳು ಅಭರಣದ ಅಂಗಡಿಗೆ ನುಗ್ಗಿಯಾಗಿತ್ತು. ನಾನು ಹಿಂಬಾಲಿಸಿದೆ! ಆದರೆ ಒಳಗೆ ಹೋಗುತ್ತಿದ್ದಂತೆಯೆ, ಅಂಗಡಿಯ ಮಾಲಿಕರು ಅಲ್ಲಿ ತೂಗು ಹಾಕಿದ್ದ ಫಲಕವನ್ನು ಓದಿ ನನ್ನ ಕಣ್ಣುಗಳರಳಿದವು! ಅದನ್ನೋದಿ ಪೀಝಾ ಅಂಗಡಿಯ ಅನುಭವವನ್ನು ಮರೆತೆ. ಆ ಫಲಕದಲ್ಲಿ ಹೀಗೆ ಬರೆದಿತ್ತು

"ನಾವು ಕನ್ನಡಿಗರು. ಕನ್ನಡದಲ್ಲೇ ವ್ಯವಹರಿಸಿ ಪರವಾಗಿಲ್ಲ!"

ನಾನು ಅಂಗಡಿಯ ಮಾಲೀಕರಿಗೆ ಅಭಿನಂದಿಸಿದೆ. ಅವರೂ ತಮ್ಮ ಗೋಳು ಹೇಳಿಕೊಂಡರು. ತಾವು ಕನ್ನಡದಲ್ಲಿ ಮಾತಾಡಿದರೂ ಬೆಂಗಳೂರಿನ ಕನ್ನಡಿಗರು (?) ಇಂಗ್ಲಿಷಿನಲ್ಲೆ ವ್ಯವಹರಿಸುತ್ತಾರಂತೆ. ಅದಕ್ಕೆ ಅವರು ಹೀಗೆ ಬರೆದು ಹಾಕಿಸಿದ್ದಾರಂತೆ! ಈ ಉಪಾಯ ಅದ್ಭುತ ವಾಗಿದೆ. ಕನಿಷ್ಟ ಪಕ್ಷ ಕನ್ನಡ ಮಾತನಾಡಲು ಬಯಸುವರಾದರೂ ಈ ಫಲಕ ನೋಡಿ ಕನ್ನಡದಲ್ಲೇ ಮಾತನಾಡುತಾರಲ್ಲವೆ? ಬೆಂಗಳೂರಿನ ಎಲ್ಲ ಅಂಗಡಿಗಳಲ್ಲಿ ಹೀಗೇ ಫಲಕ ಹಾಕಿಸಿದರೆ ಎಷ್ಟು ಚೆನ್ನಾಗಿರುತ್ತಲ್ಲವೇ? ಆದರೂ ಇಂತದೊಂದು ಪರಿಸ್ಥಿತಿ ಬೆಂಗಳೂರಿನಲ್ಲಿ ಸೃಷ್ಠಿಯಾಗಿರುವುದಕ್ಕೆ ಬೇಜಾರಾಯ್ತು.

Saturday, July 7, 2012

ನಾ ಮಾತ್ರ ಮಿಲ್ಟ್ರೀಗೆ ಹೋಗಂಗಿಲ್ಲ!

ದೇಶಭಕ್ತ ತಂದೆಯೊಬ್ಬನಿಗೆ ತನ್ನ ಮಗ ದೊಡ್ಡವನಾದ ಮೇಲೆ ಮಿಲ್ಟ್ರೀಗೆ ಸೇರಿ ದೇಶವನ್ನು ರಕ್ಷಣೆ ಮಾಡಲಿ ಎಂಬ ಆಸೆಯಿತ್ತು. ಮಗ ದೊಡ್ಡವನಾದ, ಆದರೆ ಮಿಲ್ಟ್ರೀಗೆ ಸೇರು ಅಂದ್ರೆ ಮಾತ್ರ "ಊಹೂಂ!" ಅಂದ! ಅಪ್ಪನಿಗೆ ಚಿಂತೆ ಹತ್ತಿಕೊಂಡಿತು. ಒಂದು ದಿನ ಮಗನನ್ನು ಕೂಡಿಸಿಕೊಂಡು ಕೇಳಿದ,

"ಏನು ಕಾರಣ ಮಗನೇ? ಮಿಲ್ಟ್ರೀಗೆ ಹೋಗೋಕೆ ಯಾಕೆ ಬೇಡ ಅಂತೀಯ?"

"ಆಪ್ಪ, ಹೆಳುತ್ತೇನೆ ಕೇಳು. ಮಿಲ್ಟ್ರೀಗೆ ಹೋದರೆ ಎರಡು ಸಾಧ್ಯತೆಗಳು. ಯುದ್ಧ ಆಗಬಹುದು ಅಥವ ಆಗದೇ ಇರಬಹುದು. ಯುಧ್ಧ ಆಗದಿದ್ದರೆ ಸಮಸ್ಸೆ ಇಲ್ಲ, ಆದರೆ ಮತ್ತೆರಡು ಸಾಧ್ಯತೆಗಳು"

"ಹೇಳಪಾ ಮಗನೆ, ಏನವು?"

"ಯುದ್ಧಕ್ಕೆ ನನ್ನನ್ನ ಕಳಿಸಬಹುದು ಅಥವ ಕಳಿಸದೆ ಇರಬಹುದು. ಕಳಿಸದಿದ್ದರೆ ಸಮಸ್ಸೆ ಇಲ್ಲ, ಕಳಿಸಿದರೆ ಮತ್ತೆರಡು ಸಾಧ್ಯತೆಗಳು!"

"ಮುಂದುವರಿಸು..."

"ಯುದ್ಧದಲ್ಲಿ ನಾನು ಸಾಯಬಹುದು ಅಥವಾ ಸಾಯಲಿಕ್ಕಿಲ್ಲ. ಸತ್ತಿಲ್ಲ ಅಂದ್ರೆ ಪರವಾಗಿಲ್ಲ, ಸತ್ತರೆ ಮತ್ತೆರಡು ಸಾಧ್ಯತೆಗಳು"

"ಹೂಂ...?"

"ಸತ್ತಾಗ ನನ್ನನ್ನು ಸುಡಬಹುದು ಅಥವ ಮಣ್ಣಲ್ಲಿ ಹುಗಿಯಬಹುದು. ಸುಟ್ಟರೆ ತೊಂದರೆ ಇಲ್ಲವೇ ಇಲ್ಲ, ಮಣ್ಣಲ್ಲಿ ಹುಗಿದರೆ ಮತ್ತೆರಡು ಸಾಧ್ಯತೆಗಳು!"

"??"

"ನನ್ನನ್ನು ಮಣ್ಣು ಮಾಡಿದ ಜಾಗದಲ್ಲಿ ಗಂಧದ ಗಿಡ ಹುಟ್ಟಬಹುದು ಅಥವಾ ಹುಟ್ಟಲಿಕ್ಕಿಲ್ಲ. ಗಿಡ ಹುಟ್ಟಿಲ್ಲವೆಂದರೆ no problem, ಹುಟ್ಟಿದರೆ ಮತ್ತೆರಡು ಸಾಧ್ಯತೆಗಳು..."

ಅಪ್ಪನಿಗೆ ಆಗಲೆ ಸುಸ್ತಾಗಿತ್ತು, ಆದರೂ ಕುತುಹಲವಿತ್ತು! "ಏನು?" ಅಂದ

"ಆ ಗಂಧದ ಗಿಡದಲ್ಲಿ ಸಾಬೂನು ತಯರಿಸಬಹುದು ಅಥವಾ ತಯಾರಿಸಲಿಕ್ಕಿಲ್ಲ. ಸಾಬೂನು ತಯಾರಾಗಿಲ್ಲ ಅಂದ್ರೆ ಎನೂ ಪ್ರೊಬ್ಲೆಮ್ ಇಲ್ಲಾಪ್ಪ, ಸಾಬೂನು ರೆಡಿ ಆದ್ರೆ, ಅದನ್ನ ಹುಡುಗಿಯರು ಉಪಯೋಗಿಸಿದ್ರೆ, ನನಗೆ ನಾಚಿಗೆ ಆಗುತ್ತೆ! ಅದಕ್ಕೆ ನಾನು ಮಿಲ್ಟ್ರೀ ಸೇರೋಕೆ ಆಗಂಗಿಲ್ಲ ಅಂತ ಹೇಳಿದ್ದು!!!"

ಅಪ್ಪನಿಗೆ ಸುಸ್ತಾಗಿ, ಮಗನನ್ನ ಮಿಲ್ಟ್ರೀಗೆ ಸೇರಿಸೊ ಆಸೆಗೆ ಅವತ್ತಿನಿಂದ ನೀರು ಬಿಟ್ಟ...!


(ಯಾವಾಗಲೋ ಕೇಳಿದ ಕತೆ, ಇವತ್ತ್ಯಾಕೋ ನೆನಪಾತು. ಹಂಚಿಕೊಳ್ಳೋಣ ಅಂತ ಬರದೆ. ಚೊಲೊ ಅನಿಸಿದ್ರ comment ಬರೀರಿ, ಇಲ್ಲಾಂದ್ರ ಸುಮ್ನ ಇದ್ದುಬಿಡ್ರೀ! ಆಗಬಹುದಾ?)

Monday, June 20, 2011

ಮರೆಗುಳಿಗೆ

                      ಮರೆವು ಒಂದು ಕಾಯಿಲೆಯೇ? ಅನುವಂಶೀಯವೇ? ಅಥವಾ ಬರೀ ನಾಟಕವೇ?! ಪ್ರತಿಯೊಬ್ಬ ಹುಲುಮಾನವನಿಗೂ ಮರೆವು ಅನ್ನೋ ರೋಗ ಬಿಟ್ಟಿಲ್ಲ. ನಮ್ಮ ನಾಗ್ಯಾ ನ್ನೇ ತೊಗೋರಿ. ಮುಂಜಾನೆ ಆಫೀಸ್ ಗೆ ಹೋಗೋವಾಗ ಅವನ ಮನದನ್ನೆ ಹೇಳ್ತಾಳೆ "ರೀ ಸಂಜಿ ಮುಂದ ಬರುವಾಗ, ಎಲ್ಲ ಸಾಮಾನು ತೊಗೊಂಡು ಬರ್ರೀ. ಚೀಟಿ ಕಿಸೆದಾಗ ಹಾಕೀನಿ ಮರೀಬ್ಯಾಡ್ರೀ". ಅವಳು ಚೀಟಿಯಲ್ಲಿ ಸಾಮಾನು ಲಿಸ್ಟ್ ಬರೆದು ಗಂಡನ ಜೇಬಿನಲ್ಲಿ ಇಡುವದು ಯಾಕೆ ಅಂದ್ರೆ, ಗಂಡ ಮರೆಗೂಳಿ ಅನ್ನೋದು ಅವಳಿಗೆ ಚೆನ್ನಾಗಿ ಗೊತ್ತಿರುವುದಕ್ಕೆ. ಆದರೆ ಪತಿ ಮಹಾಶಯ ಸಂಜೆ ಖಾಲಿ ಕೈಯಲ್ಲಿ ವಾಪಸ್ಸಾದಾಗ!!? ಅವನು ಹೇಳುತ್ತಾನೆ "ಅಯ್ಯೋ ಸಾರೀ ಲೇ ಪಾ! ಚೀಟಿ ಕಿಸೆದಾಗ ಇರುದ ಮರ್ತು ಬಿಟ್ಟೆ!". ಮರೆತಾನೆಂದು ಚೀಟಿ ಕೊಟ್ಟರೆ ಚೀಟಿಯನ್ನೇ ನೋಡಲು ಮರೆತರೆ ಏನು ತಾನೇ ಮಾಡಲು ಸಾಧ್ಯ? ನಾಗ್ಯಾಂದು ಚಿಕ್ಕವನಿದ್ದಾಗಿಂದ ಇದೆ ಗೋಳು. ನಾನು ಅವನು ಜಿಗರಿ ದೋಸ್ತ್ ಗಳು. ಚಿಕ್ಕವನಿದ್ದಾಗ ಒಂದು ಸಲ ರೇಶನ್ ಅಂಗಡಿಗೆ ಹೋಗಿ ಸಾಮಾನು ತರುವ ಜವಾಬ್ದಾರಿಯನ್ನು ಹೊತ್ತು ಚೀಲವನ್ನು ಹೆಗಲಿಗೆ ಹೊತ್ತು ಹೊರಟ. ಅಂಗಡಿಯಲ್ಲಿ ಉದ್ದನೆಯ ಕ್ಯೂ ನಲ್ಲಿ ನಿಂತು ಬಳಲಿ ಬೆಂಡಾದ ಪಾಪ. ಕೊನೆಗೂ ಇವನ ಸರದಿ ಬಂತು! ರೇಶನ್ ಅಂಗಡಿ ಕಾಕಾ "ರೇಶನ್ ಕಾರ್ಡ್ ಕೊಡಪ ತಮ್ಮ" ಅಂದಾಗಲೇ ನಾಗ್ಯನಿಗೆ ನೆನಪಾದದ್ದು, ತಾನು ಕಾರ್ಡು ಮನೆಯಲ್ಲಿ ಬಿಟ್ಟು ಬಂದ ವಿಷಯ! ಅಷ್ಟು ಅಗಾಧ ನೆನಪಿನ ಶಕ್ತಿ ಅವನದು. ಒಂದೇ ಉಸುರಿಗೆ ಮನೆಗೆ ಹೋಗಿ ಕಾರ್ಡು ತಂದ. ಬಂದ ಕೆಲಸ ಮುಗುದು ಮನೆಗೆ ವಾಪಸ್ಸು ಬಂದಾಗ ಅಪ್ಪ ಕೇಳಿದ "ಎಲ್ಲಿಲೆ ರೆಷನ್ನು ಮಂಗ್ಯಾನ ಮಗನೆ?", ಪಾಪ ನಾಗ್ಯಾ ಸಾಮಾನು ತುಂಬಿರುವ ಚೀಲವನ್ನು ಅಂಗಡಿಯಲ್ಲೇ ಬಿಟ್ಟು ಬಂದಿದ್ದ. ಮತ್ತೆ ಚೀಲ ತರಲು ಅಂಗಡಿಗೆ ತೆರಳಿದ, ಆದರೆ ದಾರಿಯಲ್ಲಿ ಅಪ್ಪ ತನಗೆ "ಮಂಗ್ಯಾನ ಮಗಾ" ಅಂತ ಬೈದರೆ, "ಮಂಗ್ಯಾ" ಯಾರು ಅನ್ನುವ ಚಿಂತೆ ಅವನಿಗೆ ಕಾಡದೆ ಇರಲಿಲ್ಲ!
 ಹೀಗೆ ನಾಗ್ಯಾ ಬೆಳೆದು ದೊಡ್ಡವನಾದ. ಅವನು ಬೆಳೆದಂತೆ ಮರೆವು ಕೂಡ ಅವನೊಂದಿಗೆ ಬೆಳೆಯಿತು. ಸಣ್ಣವನಿದ್ದಾಗ ಚೀಲ ಮರೆಯುತ್ತಿದ್ದವನು ದೊಡ್ಡವನಾದ ಮೇಲೆ ಮೊಬೈಲ್, ಕಾರ್, ಹೀಗೆ ಏನೇನೋ ಮರೆಯತೊಡಗಿದ. ಆದರೂ ಅದಕ್ಕೊಂದು ಮಿತಿ ಬೇಡವೇ? ಮದುವೆಯಾದ ಹೊಸತು, ಹೆಂಡತಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ. ಎಲ್ಲ ಸುತ್ತಾಡಿ ವಾಪಸ್ಸು ಬರುವಾಗ ಅವಳನ್ನು ಅಲ್ಲೇ ಮರೆತು ಬಿಟ್ಟು ಬಂದಿದ್ದ! ಅವಳನ್ನು ನಿಜವಾಗಿಯೂ ಮರೆತು ಬಿಟ್ಟು ಬಂದಿದ್ದನೇ? ಅದಕ್ಕುತ್ತರ ಅವನೇ ಹೇಳಬೇಕು! ಆಗೆಲ್ಲ ಮೊಬೈಲ್ ಇರ್ಲಿಲ್ಲ, ಪಾಪ ಹೆಂಗೋ ಮನೆಗೆ ವಾಪಸ್ಸು ಬಂದಳು. ಪಾಪ ನಾಗ್ಯಾ!

ಆದರೆ ಈ weekness ನ್ನೇ ಎಷ್ಟೋ ಸಲಾ ಸದುಪಯೋಗ ಪಡಿಸಿಕೊಂಡ. ಹೆಂಡತಿಯ ಹುಟ್ಟಿದ ದಿನವೇ ಮರೆತು ಹೋಯಿತೆಂದು, ಅವನು ಅವಳಿಗೊಂದು gift ತರದಿದ್ದರೂ ಅವಳು ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ, ಯಾಕಂದರೆ ಅವಳಿಗೆ ಇವನು ಮರೆಗುಳಿತನ ಗೊತ್ತು. ನಾಗ್ಯಾ ಬಚಾವು! ಗೆಳೆಯರಿಗೂ ಇವನ ಕಾಯಿಲೆ ಗೊತ್ತಿದ್ದುದರಿಂದ ಅವನಿಗೆ ಯಾವುದೇ ತೆರನಾದ ಜವಾಬ್ದಾರಿಗಳನ್ನು ಕೊಡುತ್ತಿರಲಿಲ್ಲ. "ಯಪ್ಪಾ ನಾಗ್ಯನ ನಂಬಿದರ ಮುಗದು ಹೋತು" ಅನ್ನೋದು ಎಲ್ಲರ ಅಂಬೋಣ ವಾಗಿತ್ತು. ನಾಗ್ಯಾ ಕಣ್ಣು ಮಿಟುಕಿಸುತ್ತಿದ್ದ!

ಒಂದು ಸಲ ಅವರ ಮನೆಗೆ ಹೋದಾಗ, ನಾಗ್ಯನ ಹೆಂಡತಿ ಗೊಳೋ ಅಂತ ಅತ್ತು ಬಿಟ್ಟಳು. "ಇವ್ರ ಮರಿಯೋ ಜಡ್ಡು ಅತೀಯಾಗ್ಯದ್ರೀ, ನನಗ ಸಾಕಾಗಿ ಹೊಗ್ಯದ" ಅಂದ್ಲು. ಅವಳು ಜಡ್ಡು ಅಂದದ್ದೇ ತಡ ನನಗೆ ಒಂದು ಐಡಿಯಾ ಬಂತು. ಬೇರೆ ಕಾಯಿಲೆ ತರಹ ಮರೆವಿಗೂ ಒಂದು ಔಷಧಿ ಇರಬೇಕು ಅಲ್ವೇ? ಅಲ್ಲಿಂದ ಶುರುವಾಯ್ತು ನನ್ನ ಹುಡುಕಾಟ. ಮರೆವಿಗೆ ಚಿಕಿತ್ಸೆ ಕೊಡುವ ಡಾಕ್ಟರ ನ ಹುಡುಕಾಟ. ಈಗೆಲ್ಲ ಹುಡುಕಾಡೋದು ಅಷ್ಟು ಕಷ್ಟದ ವಿಷಯವಲ್ಲ. ಗೂಗಲ್ ನಲ್ಲಿ ನಮಗೆ ಬೇಕಾದ ಪದಗಳನ್ನು ಹಾಕಿ ಒಂದು button ಒತ್ತಿದರಾಯ್ತು ನೂರಾರು ಪೇಜ್ ಗಳು ತೆರೆದುಕೊಳ್ಳುತ್ತೆ. ಒಂದು ಸೂಜಿಯನ್ನು ಹಿಡಿದು ಮನೆಯ ವರೆಗೂ ಎಲ್ಲ ವಿಷಯದ ಮಾಹಿತಿ ಸಿಗುತ್ತೆ. ಹೀಗೆ ಹುಡುಕುತ್ತಿರುವಾಗ ನನಗೆ ಸಿಕ್ಕಿದ್ದು ಡಾಕ್ಟರ ಮರಿಯಪ್ಪ ಅವರ ವಿಳಾಸ. ಅವರು ಮರೆಗುಳಿ ಗಳಿಗೆ ಔಷಧಿ ಕೊಡುವವರು. ಅದಕ್ಕೆ ಅವರ ಹೆಸರು ಮರಿಯಪ್ಪ ಇರಬಹುದಾ? ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ನಾನು ಹೋಗಲಿಲ್ಲ ......

ಡಾ.ಮರಿಯಪ್ಪನವರ ದವಾಖಾನೆಗೆ ತಲುಪಿದೆವು. ಅಲ್ಲಿ ಹುಲು ಮಾನವರ ಸರದಿ ನಿಂತಿರುವ ಪರಿ ಹನುಮಂತನ ಬಾಲವನ್ನು ನೆನಪಿಸುತ್ತಿತ್ತು. ಜಗತ್ತಿನಲ್ಲಿ ಇಷ್ಟೊಂದು ಮರೆಗುಳಿಗಳಿದ್ದಾರೆಯೇ? ನನಗೆ ಆಶ್ಚರ್ಯವಾಗುತ್ತಿತ್ತು.

ಅಂತು ಎರಡು ಗಂಟೆ ಕಾಯ್ದ ಮೇಲೆ ಮರಿಯಪ್ಪನವರ ದರ್ಶನ ಭಾಗ್ಯ ದೊರೆಯಿತು. ನಾಗ್ಯಾನ ಸಮಸ್ಸೆಗಳನ್ನು ತುಂಬಾ ಸಂಯಮದಿಂದ ಕೇಳಿದರು. ಅವನ ಮರೆವಿನಿಂದಾದ ಅನಾಹುತಗಳ ಒಂದಿಷ್ಟು ಉದಾಹರಣೆಗಳನ್ನು ಅವರ ಮುಂದಿಟ್ಟೆ. ಅವರು ವಿಚಲಿತರಾದಂತೆ ಕಾಣಲಿಲ್ಲ. ಇಂಥ ಎಷ್ಟೋ ನಮೂನೆ ಗಳನ್ನು ನೋಡಿದ್ದಾರೋ ಅವರು! ಒಂದಿಷ್ಟು ಪರೀಕ್ಷೆಗಳನ್ನು ಮಾಡಿಸಲು ಹೇಳಿ ಸಧ್ಯಕ್ಕೆ ಕೈ ತೊಳೆದುಕೊಂಡರು. ಮುಂದಿನ ವಾರ ಮತ್ತೆ ಭೇಟಿ ನಿಗದಿಯಾಯ್ತು. ಒಂದು ಸಾವಿರ ರೂಪಾಯಿ ಮರೆಯದೆ ವಸೂಲಿ ಮಾಡಿದರು. ನಾನ್ಯಾಕೆ ಡಾಕ್ಟರ ಆಗಲಿಲ್ಲ ಅಂತ ನಾನು ಮರುಗಿದೆ. ದಿನಕ್ಕೆ ಸುಮಾರು ಐವತ್ತು ಜನ ಬಂದರೂ ಐವತ್ತು ಸಾವಿರ ಆಯಿತಲ್ಲವೇ ಅಂತ ಮನಸಿನಲ್ಲೇ ಲೆಕ್ಕ ಹಾಕಿದಾಗ ಇನ್ನು ಸಂಕಟವಾಯ್ತು.

ಮುಂದಿನ ವಾರ ಎಲ್ಲ ಪರೀಕ್ಷೆಗಳನ್ನು ಮಾಡಿಸಿಕೊಂಡು ಮತ್ತೆ ಡಾಕ್ಟರ ಬಳಿ ಹೋದೆವು. ನಾನು ನಾಗ್ಯನ ಸಮಸ್ಸೆ ಬಗೆಹರಿಸುವ ಪಣ ತೊಟ್ಟಾಗಿತ್ತು. ರಿಪೋರ್ಟ್ ಗಳನ್ನು ಡಾಕ್ಟರ ಮುಂದೆ ಇಟ್ಟೆವು. ಅದರಲ್ಲಿ ವಿಧ ವಿಧವಾದ ಕೋನಗಳಲ್ಲಿ ನಗ್ಯಾನ ತಲೆಯ ಸ್ಕ್ಯಾನ್ ಮಾಡಿಸಿದ ಚಿತ್ರ ಗಳಿದ್ದವು. ಅದನ್ನು ನೋಡಿ ನನಗೆ ಸಮಾಧಾನವಾಯ್ತು. ಯಾಕಂದರೆ ಅದರಿಂದ ನಾಗ್ಯಾನಿಗೆ ಮಿದುಳು ಇರುವುದು ಖಚಿತವಾಗಿತ್ತು! ಎಲ್ಲ ರಿಪೋರ್ಟ್ ಗಳನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯರು ಒಂದಿಷ್ಟು ಗುಳಿಗೆ ಗಳನ್ನು ಕೊಟ್ಟರು. ಎರಡು ತಿಂಗಳ ಅವಧಿಯ ಕೋರ್ಸ್. ಮತ್ತೆ ಐದು ಸಾವಿರ ಬಾಚಿಕೊಂಡರು. ಔಷಧಿ ಮರೆಯದೆ ತೆಗೆದುಕೊಳ್ಳಿ ಅಂತ ಉಪದೇಶಿಸಿದ್ದು ಸ್ವಲ್ಪ ಹಾಸ್ಯಾಸ್ಪದ ವಾಗಿತ್ತು. ದಿನಕ್ಕೆ ಮೂರು ಸರ್ತಿ ಮರೆಯದೆ ಗುಳಿಗೆ ತಿನ್ನುವುದು ಮರೆಗುಳಿ ನಾಗ್ಯನಿಗೆ ಸಾಧ್ಯವೇ? ನನಗದು ಚಿಂತೆಯ ವಿಷಯವೂ ಆಗಿತ್ತು. ಅದಕ್ಕೂ ಪರಿಹಾರವಿತ್ತು. ಸಧ್ಯ ಅವನ ಹೆಂಡತಿ ಮರೆಗುಳಿ ಇರಲಿಲ್ಲವಲ್ಲ! ಅವಳಿಗೆ ಗುಳಿಗೆ ಯಾವಾಗ ಕೊಡಬೇಕು ಅಂತ ತಿಳಿಸಿ ಹೇಳಿ ಮನೆಗೆ ಹೋದೆ.

ಎರಡು ತಿಂಗಳು ಹೀಗೆ ಕಳೆಯಿತು. ಅಲ್ಲಿಯವರೆಗೆ ನಾಗ್ಯಾ ಮತ್ತು ನಾನು ಭೇಟಿಯಾಗುವುದು ಸಾಧ್ಯವಾಗಿರಲಿಲ್ಲ. ಅವತ್ತೊಂದು ದಿನ ನಾಗ್ಯಾನ ಫೋನ್ ಬಂತು. ಮರೆಯದೆ ಫೋನ್ ಮಾಡಿದ್ದು ಕಂಡು ಖುಷಿಯಾಯ್ತು. ಔಷಧಿ ಕೆಲಸ ಮಾಡಿರುವುದು ನಿಚ್ಚಳವಾಗಿತ್ತು. ಮರಿಯಪ್ಪನವರ ಬಗ್ಗೆ ಅಭಿಮಾನ ಮೂಡಿತು.


"ಹೇಳೋ ನಾಗ್ಯಾ ಅರಾಮಿದ್ದಿಯ?" ಅಂತ ಕೇಳಿದೆ.

"ಹೂನಪ್ಪ ನೀ ಹೆಂಗಿದ್ದಿ?" ಅಂತ ಕೇಳಿದ. ಉಭಯ ಕುಶಲೋಪರಿಗಳ ನಂತರ

"ನೀ ಹೋಗಿದ್ದು ಕೆಲಸ ಏನಾತು" ಅಂದ, ಯಾವ ಕೆಲಸ ಅಂತ ನಾನು ಗೊಂದಲದಲ್ಲಿ ಬಿದ್ದೆ. ಅಥವಾ ನಾನೇ ಏನಾದರೂ ಇವನಿಗೆ ಹೇಳಿ ಮರೆತುಬಿಟ್ಟೆನಾ? ಡಾ. ಮರಿಯಪ್ಪನವರ ಬರಿ ಹೋಗುವ ಸರದಿ ಈಗ ನಂದು ಅಂತ ಅನಿಸ್ತು. ಈ ಗೊಂದಲ ಪರಿಹರಿಸಿಕೊಳ್ಳಲು ನಾಗ್ಯಾನಿಗೆ ಕೆಲವು ಪ್ರಶ್ನೆ ಗಳನ್ನು ಕೇಳಲು ತೊಡಗಿದಾಗ, ನಾಗ್ಯಾ ಅರುಹಿದ್ದು ಹೀಗೆ,

"ಓ ಸಾರೀ ಪಾ, ನಾನು ರವಿಗೆ ಒಂದು ಕೆಲ್ಸಾ ಹೇಳಿದ್ದೆ, ಅದರ ಬಗ್ಗೆ ಅವಂಗ ಕೇಳುದು ಬಿಟ್ಟು ನಿನಗ ಫೋನ್ ಮಾಡೀನಿ ನೋಡು" ಅಂದ.

ನಾನು ಫೋನ್ ಕುಕ್ಕರಿಸಿದೆ. ಈ "ಮಂಗ್ಯಾನ ಮಗನಿಗೆ" ಮರೆವು ಈ ಜನ್ಮದಲ್ಲಿ ಬಿಡುವುದಲ್ಲ ಅಂತ ಸ್ವಲ್ಪ ತಡವಾಗಿ ಅರ್ಥ ಮಾಡಿಕೊಂಡೆ. ಆದರೆ ಯಾಕೋ ಮರಿಯಪ್ಪ ಅವರ ನೆನಪು ತುಂಬಾ ಕಾಡಿತು!

Friday, April 22, 2011

ಇ(ಹಿ)ಗೋ ಕನ್ನಡ!

ಅದೊಂದು ಭಾನುವಾರದ ಸುಂದರ ಮುಂಜಾನೆ! ನಾನು ಚಹದ ಲೋಟ ಕೈಗಿಟ್ಟುಕೊಂಡು ಕನ್ನಡ ವೃತ್ತ ಪತ್ರಿಕೆ ಓದುತ್ತಿದ್ದೆ. ನನ್ನ ೩ ವರ್ಷದ ಮಗಳು ತನ್ನ ಮುದ್ದು ಕಂಠದಲ್ಲಿ ಕನ್ನಡದಲ್ಲಿ ಹಾಡು ಹೇಳುತ್ತಿದ್ದಳು. ನನಗದೇ ಸಂಭ್ರಮ! "ಬಾಬಾ ಬ್ಲಾಕ್ ಶೀಪ್ ..." ಹಾಡು ಬಿಟ್ಟು ಕನ್ನಡದ ಹಾಡು ಹೇಳುವುದೆಂದರೇನು ಕಡಿಮೆ ಸಂತಸದ ವಿಷಯವೇ?! ಅವಳ ಶಾಲೆ ಪ್ರವೇಶದ ಸಮಯದಲ್ಲಿ ಅವರ ಹೆಡ್ ಮಿಸ್ (?!) ಗೆ ನಾನು ಖಡಾ ಖಂಡಿತ ವಾಗಿ ಮಗಳಿಗೆ ಕನ್ನಡ ಕಲಿಸಲೇ ಬೇಕು ಅಂತ ತಾಕಿತು ಮಾಡಿದ್ದೆ! ಪಾಪ ಅವರು ಅವಾಗೊಂದು ಇವಾಗೊಂದು ಅಂತ ಕನ್ನಡ ಹಾಡನ್ನಾದರೂ ಹೇಳಿ ಕೊಟ್ಟಿದ್ದಾರೆ. ಅವರಿಗೆ ನಾನು ಚಿರ ಋಣಿ!

ಮಗಳು ಹಾಡುತ್ತಿದ್ದ ಹಾಡು ಹೀಗಿತ್ತು "ಅಮ್ಮ ಅಮ್ಮ ನಂಗೆ ಹಸಿವೆ ಇಲ್ಲಮ್ಮ, ಮೂರೂ ಮೂರೂ ದೋಸೆ ಅಷ್ಟೇ ಸಾಕಮ್ಮ...", ಆದರೆ ಅವಳ್ಯಾಕೋ ಅದನ್ನ ಬೇರೆ ತರಹ ಹಾಡುತ್ತಿದ್ದಾಳೆ ಅನಿಸಿತು. ಇನ್ನೊಮ್ಮೆ ಲಕ್ಷ್ಯ ಕೊಟ್ಟು ಕೇಳಿದಾಗ ಆಘಾತ ವಾಯಿತು! ಅವಳು ಹೀಗೆ ಹಾಡುತ್ತಿದ್ದಳು "ಹಮ್ಮ ಹಮ್ಮ ನಂಗೆ ಅಸಿವೆ ಇಲ್ಲಮ್ಮ...." ನನಗೆ ಕೆಂಡದಂಥ ಕೋಪ ಬಂತು. ಅವಳಿಗೆ ತಿಳಿಸಿ ಹೇಳಿದೆ "ಹ" ಕಾರಕ್ಕೆ "ಅ" ಕರ ಹಚ್ಚಬೇಡ ಎಂದು. ಅವಳು ಕೂಡಲೇ ತಿದ್ದಿಕೊಂಡಳು. ಮುಂದೆ ಯಾವಾಗಲೋ ಅವಳನ್ನು ಶಾಲೆಗೇ ಬಿಡಲು ಹೋದಾಗ ಅವರ ಹೆಡ್ ಮಿಸ್ ಎದುರು ಈ ವಿಷಯ ಪ್ರಸ್ತಾಪಿಸಿದೆ. ಅವರು ತಾವು ಹಾಗೆಲ್ಲ ಕಲಿಸುವುದಿಲ್ಲ ಬೇರೆ ಮಕ್ಕಳು ಮಾತನಾಡುವುದ ಕೇಳಿ ಹಾಗೆ ಮಾತಾಡ್ತಾರೆ ಅಂದರು. ಇದ್ದರು ಇರಬಹುದು ಅನಿಸಿತು. ಆ ವಿಷಯ ಅಲ್ಲಿಗೆ ಬಿಟ್ಟೆ.

ಇದಾಗಿ ಕೆಲ ದಿನಗಳ ನಂತರ, ಹೀಗೆ ಒಂದು ದಿನ ನನ್ನ ಮಗಳ ಜೊತೆ ಆಡಲು, ಅವಳಿಗಿಂತ ೨ ವರ್ಷ ದೊಡ್ಡವಳಾದ ನಮ್ಮ ಅಪಾರ್ಟಮೆಂಟ್ ನ ವಾಚ್ ಮ್ಯಾನ್ ಮಗಳು ಭೂಮಿಕ ಮನೆಗೆ ಬಂದಿದ್ದಳು. ಅವಳು ಆಗಾಗ ಬರುತ್ತಿರುತ್ತಾಳೆ. ನಾನು ಕುತೂಹಲಕ್ಕೆ ಅವರ ಆಟವನ್ನು ವೀಕ್ಷಿಸುತ್ತಿದ್ದೆ. ಅವರಾಡುತ್ತಿದ್ದುದು ಅಡುಗೆ ಮಾಡೋ ಆಟ.

ನನ್ನ ಮಗಳು "ನಂಗೆ ಹಸಿವೆ ಆಗಿದೆ ಊಟ ಕೊಡು" ಅಂದಳು.

ಭೂಮಿಕ "ಸ್ವಲ್ಪ ತಡಿ ಪುಟ್ಟ, ಹನ್ನ ಮಾಡ್ತಾ ಇದ್ದೀನಿ, ಅಲ್ಲಿವರೆಗೆ ಆಲು ಕುಡಿ" ಅಂದಳು.

ನನ್ನ ಎದೆ ಧಸಕ್ಕೆಂದಿತು! ನನ್ನ ಮಗಳಿಗೆ "ಹ" ಕಾರಕ್ಕೆ "ಅ" ಕಾರ ಹಾಗು "ಅ" ಕಾರಕ್ಕೆ "ಹ" ಕಾರ ಹಾಕುವುದ ಕಲಿಸಿದವಳು ಇದೆ ಹುಡುಗಿ ಅಂತ ಗೊತ್ತಾಯಿತು. ನಾನು ವಾಚ್ ಮ್ಯಾನ್ ನನ್ನು ಕರೆದು "ಏನಯ್ಯ ನಿನ್ನ ಮಗಳು ಹೀಗೆ ತಪ್ಪು ತಪ್ಪು ಕನ್ನಡ ಮಾತಾಡ್ತಾಳೆ " ಅಂದೆ.

ಅವನು "ಹೇನ್ ಮಾಡೋದು ಸಾರ್ ನಮ್ಮ ಮನೇಲಿ ಮಾತಾಡೋದೇ ಅಂಗೆ" ಅಂದ! ನನಗೆ ತಲೆ ಸುತ್ತಿದ ಅನುಭವ. ಅವನು ಮುಂದು ವರೆಸಿದ "ನೀವೇ ಏಳಿ ಕೊಡಿ ಹವಳಿಗೆ" ಅಂದ. ಅದೇನೋ ಹೇಳ್ತಾರಲ್ಲ "ಮದುವೆ ಆಗಿದೆಯ ಅಂದ್ರೆ ನೀನೆ ಮದುವೆ ಮಾಡ್ಕೋ " ಅಂದ್ರಂತೆ, ಹಂಗಾಗಿತ್ತು ನನ್ನ ಸ್ಥಿತಿ. ಆದರೂ ಅವನ ಮಗಳನ್ನು ತಿದ್ದುವುದು ನನ್ನ ಕರ್ತವ್ಯ ವಾಗಿತ್ತು. ಅದೂ ಅಲ್ಲದೆ ನನ್ನ ಮಗಳಿಗೆ ಹಾನಿ ಆಗುವುದು ತಪ್ಪಿಸುವುದು ನನ್ನ ಆದ್ಯತೆ ಆಗಿತ್ತು.

"ಆಗಲಿ, ಸಮಯ ಸಿಕ್ಕಾಗಲೆಲ್ಲ ನಿನ್ನ ಮಗಳಿಗೆ ತಿದ್ದುವೆ" ಅಂತ ಭಾಷೆ ಕೊಟ್ಟೆ. ಅದರಂತೆ ನಡೆದುಕೊಂಡೆ ಕೂಡ! ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ತುಂಬಾ ಕಷ್ಟ ಪಟ್ಟು ಅವಳಿಗೆ ಕಲಿಸುತ್ತಿದೆ.

ಸುಮಾರು ದಿನಗಳಾದ ಮೇಲೆ, ಒಂದು ದಿನ ಅವಳು ತನ್ನ ಪಠ್ಯ ಪುಸ್ತಕ ತಂದಿದ್ದಳು. ಅದರಲ್ಲಿನ ಒಂದೊಂದೇ ಕನ್ನಡ ಪದಗಳನ್ನು ಉಚ್ಚರಿಸುತ್ತಿದ್ದಳು, ತಪ್ಪಿದರೆ ನಾನು ತಿದ್ದುತ್ತಿದ್ದೆ. ಹಾಗೆ ಹೇಳುತ್ತಾ ಇದ್ದಾಗ.... "ಹರಸ" ಅಂದಳು. "ಹಾಗಾಲ್ಲಮ್ಮ, ಅರಸ ಅನ್ನು" ಅಂದೆ. ಮತ್ತೆ "ಹರಸ" ಅಂದಳು. ನಾನು ಎಷ್ಟೇ ಸಲ ಹೇಳಿದರೂ ತಪ್ಪಾಗಿಯೇ ಹೇಳಿದಳು, ಅದು ಅಲ್ಲದೆ "ಇಲ್ಲಿ ಹೀಗೆ ಇದೆ" ಅಂತ ವಾದ ಬೇರೆ ಮಾಡತೊಡಗಿದಳು. ನಾನು ಕೋಪದಿಂದ "ಪುಸ್ತಕ ಕೊಡು ಇಲ್ಲಿ" ಅಂದೆ. ನನಗೆ ಹುಚ್ಚು ಹಿಡಿಯುವುದೊಂದೇ ಬಾಕಿ! ಪುಸ್ತಕದಲ್ಲಿ "ಹರಸ" ಅಂತಲೇ ಮುದ್ರಿತವಾಗಿತ್ತು! ಪಕ್ಕಕ್ಕೆ ರಾಜನ ಚಿತ್ರ ಬೇರೆ. ಹಾಗಾಗಿ ಹರಸ ಅಂತ ಬೇರೆ ಯಾವುದೋ ಪದವಿರಬಹುದಾದ ಸಾಧ್ಯತೆಯ ಬಗ್ಗೆ ಯೋಚಿಸುವ ಪ್ರಶ್ನೆಯೇ ಇರಲಿಲ್ಲ! ನಾನು ಪುಸ್ತಕವನ್ನು ಪೂರ್ತಿಯಾಗಿ ಜಾಲಾಡಿಸಿದಾಗ ಇನ್ನು ಅನೇಕ ಕಡೆ ಈ ಥರ ತಪ್ಪು ತಪ್ಪಾಗಿ ಮುದ್ರಿಸಿದ್ದರು! ಪಠ್ಯ ಪುಸ್ತಕವೇ ಹೀಗಿದ್ದರೆ ಅದನ್ನು ಓದಿ ಕಲಿಯುವ ಮಕ್ಕಳ ಗತಿ? ಶಾಲೆಯಲ್ಲಾದರೂ ತಿದ್ದುತ್ತಾರೆಯೇ? ಗೊತ್ತಿಲ್ಲ! ನನ್ನ ಮಗಳ ವಿದ್ಯಾಭ್ಯಾಸದ ಬಗ್ಗೆ ನನಗೆ ನಿಜಕ್ಕೂ ಚಿಂತೆ ಶುರುವಾಗಿದೆ!!