Tuesday, February 24, 2015

ಹಗಲು ರಾತ್ರಿಗಳ ಗೊಂದಲದಲ್ಲಿ...

(http://www.panjumagazine.com/?p=10099)

ವೆಂಕಣ್ಣ ಯಾರೋ ಒದ್ದೆಬ್ಬಿಸಿದಂತೆ ನಿದ್ದೆಯಿಂದ ಎದ್ದು ಕೂತಿದ್ದ. ಅವನ ನಿದ್ರಾ ಭಂಗಕ್ಕೆ ಕಾರಣವಾಗಿದ್ದು ಗಾಳಿಕುಳಿ ಗೆ ಸಿಕ್ಕು ನಡುಗುತ್ತಿದ್ದ ವಿಮಾನವೋ ಅಥವಾ ಅದರ ಪರಿಣಾಮ ಬಿದ್ದ ಕನಸಿನಿಂದಲೋ ಅವನಿಗೆ ಅರ್ಥವಾಗದಾಯ್ತು. ಆದರೂ ಅವನು  ಕಂಡ ಆ ಕನಸು ಬಲೆ ವಿಚಿತ್ರವಾಗಿತ್ತು. ಅದರಲ್ಲಿ, ಅ ದೊಡ್ಡ ವಿಮಾನದ ತುಂಬಾ ಇವನು ಹಾಗೂ ಜರ್ಮನ್ ವಿಮಾನ ಸಖಿ ಇಬ್ಬರೇ ಇದ್ದರು. ಇವನಿಗೆ ಖುಷಿಯಾಯ್ತಾದರೂ ಆಕಾಶದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ತಮ್ಮಿಬ್ಬರ ಬಿಟ್ಟು ಉಳಿದವರೆಲ್ಲಿ ಎಂಬ ಆತಂಕದಲ್ಲಿ, ಎಲ್ರೂ ಎಲ್ಲಿಗೆ ಹೋದ್ರು? ಅಂತ ಕೇಳಿದ್ದಕ್ಕೆ ಆ ಸಖಿ, ಫುಟ್ ಬಾಲ್ ಆಡ್ತೀನಿ ಅಂದ್ರು ಅದಕ್ಕೆ ಎಲ್ರನ್ನೂ ಹೊರಗೆ ಕಳಿಸಿದ್ದೀನಿ, ನೀನು ಮಲಗಿದ್ದೆಯಲ್ಲಾ ಅದಕ್ಕೆ ನಿನ್ನನ್ನ ಎಬ್ಬಿಸಲಿಲ್ಲ ಅಂತ ಗಂಭೀರವಾಗಿ ಹೇಳಿ ಇವನ ಎದೆಯಲ್ಲಿ ಬಡಿತವನ್ನು ಹೆಚ್ಚು ಕಡಿಮೆ ನಿಲ್ಲಿಸಿದ್ದಳು! ಅದೃಷ್ಟ ವಶಾತ್ ಅಷ್ಟಕ್ಕೇ ಆ ಕನಸಿನಿಂದ ಎಚ್ಚರವಾಗಿತ್ತವನಿಗೆ. ವಾಸ್ತವಕ್ಕೆ ಬಂದು ದೀರ್ಘ ಉಸಿರೆಳೆದುಕೊಂಡ. ಪಕ್ಕದಲ್ಲಿ ಹೆಂಡತಿ ಇನ್ನೂ ಇದ್ದಳು ಅನ್ನುವುದೂ ಗಮನಿಸಿ ದೊಡ್ಡ ನಿಟ್ಟುಸಿರು ಬಿಟ್ಟ! ಕನಸುಗಳ ಲೋಕವೇ ಒಂದು ವಿಚಿತ್ರ. ನಾವಿರುವ ಪರಿಸರದ ಮೇಲೆ ನಮಗೆ ಬೀಳುವ ಕನಸುಗಳು ತಮ್ಮ ಸೀನುಗಳಲ್ಲಿ ಮಾರ್ಪಾಡು ಮಾಡಿಕೊಳ್ಳುತ್ತವೆ. ಬೆಂಗಳೂರಿನಲ್ಲಿ ಬೀಳುವ ಕನಸೇ ಬೇರೆ, ವಿಮಾನದಲ್ಲಿ ಕಾಣುವ ಕನಸೇ ಬೇರೆ. ಅದರೂ ಆ ಕನಸಿನ ದೆಸೆಯಿಂದ ಈಗ ನಿಜಕ್ಕೂ ಬಾಯಿ ಒಣಗಿ ನೀರಡಿಕೆ ಆಗಿತ್ತಾದರೂ, ಆ ಸಖಿಯನ್ನು ಕರಿಸಿ ನೀರು ಕೇಳಿ ಮತ್ತೆ ಹೆಂಡತಿಯ ಹತ್ತಿರ ತಿವಿಸಿಕೊಳ್ಳುವ ತೆವಲು ಅವನಿಗಿರಲಿಲ್ಲ. ಅದಕ್ಕೇನೆ ನೀರಿದ್ದ ಕಡೆಯೇ ಕುದುರೆ ಹೋಗಬೇಕು ಎಂಬಂತೆ ತಾನೇ ಎದ್ದು ಸಖಿಯನ್ನು ಹುಡುಕಿಕೊಂಡು ಹೋಗಿ ಮನಃ ಪೂರ್ತಿ ನೀರು ಕುಡಿದು ಅವಳಿಗೊಂದು ತುಂಬು ಹೃದಯದ  ಥ್ಯಾಂಕ್ಸ್ ಹೇಳಿ ವಾಪಸ್ಸು ಬಂದ. 
 
ಅಂತೂ ವಿಮಾನ ಜರ್ಮನಿಯ ಭೂ ಸ್ಪರ್ಶ ಮಾಡಿ, ಒಂದಿಷ್ಟು ಹೊತ್ತು ಅಲ್ಲಿನ ಔಪಚಾರಿಕತೆಗಳ ಮುಗಿಸಿ, ಅಮೆರಿಕಾಕ್ಕೆ ಹೋಗುವ ಮತ್ತೊಂದು ವಿಮಾನವೇರಿ ಕುಳಿತರು. ಮತ್ತದೇ ಏಕತಾನತೆ, ಬಾಯಾರಿಕೆ, ಕನಸುಗಳು ಮುಂದುವರಿದವು… ಆದರೆ ಈ ಬಾರಿ ಕನಸಿನಲ್ಲಿ ಜರ್ಮನ್ ಸುಂದರಿಯ ಬದಲು ಅಮೆರಿಕಾದ ಸ್ವರ್ಣಕೇಶಿ ಚೆಲುವೆ ಪದೆ ಪದೆ ಬಂದು ನಿದ್ದೆ ಕೆಡಿಸತೊಡಗಿದಳು!
                                                       —–
ಸಂಜೆಯಾದರೂ ಯಾರೊಬ್ಬರು ಕುಣಿಯುವುದ ನಿಲ್ಲಿಸುವ ಲಕ್ಷಣಗಳಿರಲಿಲ್ಲ. ಎಲ್ಲರಲ್ಲೂ ಪರಮಾತ್ಮ ಹೊಕ್ಕಿದ್ದನಲ್ಲ! ಸುಜಯ್ ನಂತೂ ಕುಡಿಯುವುದನ್ನೇ ಮರೆತು ನಿಶಾಳ ಧ್ಯಾನದಲ್ಲೇ ಮುಳುಗಿದ್ದ. ಅವಳ ನಗು ಅವನಿಗೆ ಮದ್ಯಕ್ಕಿಂತ ಜಾಸ್ತಿ ಕಿಕ್ಕು ಕೊಟ್ಟಿತ್ತು. ಅವಳು ಕುಣಿಯುತ್ತಿದ್ದುದನ್ನು ತದೇಕ ಚಿತ್ತನಾಗಿ ನೋಡುತ್ತಿದ್ದ. ಇದ್ದಕ್ಕಿದ್ದಂತೆ ಇವನ ಮನವರಿತವಳಂತೆ ಇವನ ಬಳಿಗೆ ಬಂದು 'come on lets dance!' ಅಂತ ಇವನ ಎಳೆದೊಯ್ದಳಲ್ಲ! ಇವನು ಬಿರುಗಾಳಿಗೆ ಸಿಲುಕಿ ತನ್ನ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡ ತರಗೆಲೆಯಂತಾಗಿ ಅವಳ ಹಿಂದೆಯೇ ನಡೆದಿದ್ದ. ಅವಳು ಕುಣಿಸಿದಂತೆ ಇವನೂ ಕುಣಿಯತೊಡಗಿದ …
 
ಅಂತೂ ಔಟಿಂಗ್ ಅನ್ನುವ ಜಾತ್ರೆ ಕೊನೆಯ ಹಂತ ಮುಟ್ಟಿತ್ತು. ಒಬ್ಬಿಬ್ಬರು ಹಪಹಪಿಸಿ ತಮ್ಮ ದೇಹದ ಸಾಮರ್ಥ್ಯಕ್ಕಿಂತ ಹೆಚ್ಚೇ ಕುಡಿದು, ದಕ್ಕಿಸಿಕೊಳ್ಳಲಾಗದೆ  ಔಕ್ ಔಕ್ ಅಂತ ಅಮ್ಲೆಟ್ ಹಾಕಲು ಶುರು ಮಾಡಿದ್ದರು. ಒಬ್ಬನಂತೂ ಟೈಟ್ ಆಗಿ ಎಲ್ಲರ ಜೊತೆಗೂ ಜಗಳ ಶುರು ಹಚ್ಚಿಕೊಂಡಿದ್ದ. ಇನ್ನೊಬ್ಬ ಕುಡಿದಿರದಿದ್ದರೂ ಕುಡಿದಂತೆ ನಟಿಸಿ ತಾನೂ ಯಾರಿಗೆ ಕಡಿಮೆ ಇಲ್ಲ ಅಂತ ತೋರಿಸುವ ಪ್ರಯತ್ನದಲ್ಲಿದ್ದ. ಇನ್ನೊಂದಿಬ್ಬರು 'ಯಾರಿಗೆ ಬೇಕು ಈ ಲೋಕ … ' ಅಂತ ಅಲ್ಲೇ ಜಾಗ ಸಿಕ್ಕಲ್ಲಿ ಗಡದ್ದಾಗಿ ಗೊರಕೆ ಹೊಡೆಯುತ್ತಿದ್ದರು. ಮತ್ತೂ ಕೆಲವರು, ಕುಡಿದಾಯಿತು ಇನ್ನು ಮನೆಗೆ ಹೋಗಿ ತಂತಮ್ಮ ಹೆಂಡದಿರನ್ನು ಎದುರಿಸುವ ಬಗೆಯೆಂತು ಎನ್ನುವ ಗಹನವಾದ ಯೋಚನೆಯಲ್ಲಿ ಮುಳುಗಿದ್ದರು. 
ಸುಜಯ್ ಮಾತ್ರ ಹೊಸ ಗೆಳತಿಯೊಬ್ಬಳು ದೊರಕಿದ ಸಂಭ್ರಮದಲ್ಲಿದ್ದ! ಎಲ್ಲರಿಗೂ ಬೀಳ್ಕೊಟ್ಟು ಶಾಂತನನ್ನು ತನ್ನ ಕಾರಿನಲ್ಲಿ  ಅವನ ಮನೆಗೆ ಬಿಟ್ಟು ತನ್ನ ಗೂಡಿಗೆ ಮರಳಿದವನು ರಾತ್ರಿ ಎಷ್ಟೋ ಹೊತ್ತಿನವರೆಗೆ ಮತ್ತೆ ನಿದ್ರಾಹೀನನಾಗಿ ಹೊರಳಾಡಿದ. ಅವನನ್ನು ನಿಶಾ ಸಂಪೂರ್ಣವಾಗಿ ಆವರಿಸಿದ್ದಳು!
                                                            ——
ಕಡೆಗೂ ಮೂರು ವಿಮಾನಗಳ ಬದಲಿಸಿ, ಹಗಲು ರಾತ್ರಿಗಳ ಲೆಕ್ಕ ಹಾಕುತ್ತಲೇ, ವೆಂಕಣ್ಣ ಕುಟುಂಬ ಸಮೇತನಾಗಿ ಸ್ಯಾಂಡಿಗೆ ಬಂದಿಳಿದಾಗ ಅಲ್ಲಿನ ಕಾಲಮಾನದ ಪ್ರಕಾರ ಗಂಟೆ ಎಂಟಾಗಿತ್ತು. ಮೂವತ್ತು ಗಂಟೆಗಳ ಪ್ರಯಾಣದಲ್ಲಿ ಜಾನು ಮತ್ತು ಖುಷಿ ಬಳಲಿದ್ದರು ಆದರೂ ಅಮೇರಿಕಾ ಖಂಡದ ದರ್ಶನ ಮಾಡಿದ ಸಂಭ್ರಮ ಅವರ ಮುಖದಲ್ಲಿತ್ತು. ಟ್ಯಾಕ್ಸಿ ಯಲ್ಲಿ ಕಂಪನಿಯ ಫ್ಲಾಟ್ ಗೆ ತೆರಳಿ ಗ್ರಹಪ್ರವೇಶ ಮಾಡಿ ಮಲಗಲು ಹವಣಿಸಿದವರಿಗೆ ನಿದ್ರೆ ಬರುತ್ತಿಲ್ಲ. ಕಾರಣವಿಷ್ಟೇ, ಪಾತಾಳದಲ್ಲಿ ರಾತ್ರಿಯಾದರೂ ಈಗ ಭಾರತದಲ್ಲಿ ಬೆಳಗಿನ ಸಮಯ! ಅಮೆರಿಕಾದ ಹಗಲು ರಾತ್ರಿಗಳಿಗೆ ಇವರ ದೇಹ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಿತ್ತು. ಆದರೆ ಮರುದಿನ ಬೆಳಿಗ್ಗೆ ಎದ್ದು ಇವನು ಅಮೆರಿಕಾದ ತನ್ನ ಆಫೀಸಿಗೆ ಹೋಗಲೇಬೇಕಿತ್ತು. ತನ್ನ ಕ್ಲೈಂಟ್ ಜೇಮ್ಸ್ ಗೆ ಮುಖ ತೋರಿಸಬೇಕಿತ್ತು … ಎಷ್ಟೇ ಹೊರಳಾಡಿದರೂ ನಿದ್ದೆ ಮಾತ್ರ ಹತ್ತಿರಕ್ಕೂ ಸುಳಿಯದಾಗಿತ್ತು….    

Thursday, February 5, 2015

'ನಿಶಾ'ಗಮನ!

 
 
ಇಡೀ ರಾತ್ರಿ ನಿದ್ದೆ ಹತ್ತಿರಕ್ಕೂ ಸುಳಿಯದೇ ಒದ್ದಾಡಿ ತನಗೆ ಯಾವಾಗಲೋ ನಿದ್ದೆ ಹತ್ತಿದ್ದು ಬೆಳಿಗ್ಗೆ ಎದ್ದಾಗಲೇ ಸುಜಯ್ ಗೆ ಗೊತ್ತಾಗಿದ್ದು. ಎದ್ದವನೇ ಅತ್ತಿತ್ತ ತಡಕಾಡಿ ತನ್ನ ಸ್ಮಾರ್ಟ್ ಫೋನು ಎಲ್ಲಿಹುದು ಅಂತ ಹುಡುಕಾಡಿದ. ಎದ್ದ ಕೂಡಲೇ ಅದರ ಮುಖ ನೋಡದಿದ್ದರೆ ಸಮಾಧಾನವಿಲ್ಲ ಅವನಿಗೆ. ಅದು ಪಕ್ಕದಲ್ಲಿರದಿದ್ದರೆ ಅವನಿಗೆ ಉಸಿರಾಡುವುದೂ ಕಷ್ಟವೇ! ಹಿಂದಿನ ಕಾಲದ  ಕಥೆಗಳಲ್ಲಿ ರಾಕ್ಷಸರ ಜೀವ ಒಂದು ಗಿಣಿಯಲ್ಲಿ ಇರುತ್ತಿತ್ತಂತೆ ಹಾಗೆಯೇ ಸುಜಯ್ ನ ಜೀವ ಅವನ ಸ್ಮಾರ್ಟ್ ಫೋನ್ ನಲ್ಲೆ ಇದೆ. ಅದನ್ನೊಂದು ಕ್ಷಣವೂ ಬಿಟ್ಟಿರಲಾರದ ಪರಿಸ್ಥಿತಿ. ಅವನ ಸಕಲ ಮಿತ್ರವರ್ಗದ ಸಂಪರ್ಕದ ಕೊಂಡಿ ಅದು. ಅದರ ಜೊತೆಗೆ ಅವನ ಬ್ಯಾಂಕಿನ ವ್ಯವಹಾರಗಳು, ಅಂತರ್ಜಾಲದಲ್ಲಿ ಅವನಿಗೆ ಬೇಕಾದ ಬೇಡವಾದ ಎಲ್ಲ ವಸ್ತುಗಳ ಖರೀದಿ ಗೆ ಅದು ಅನುವು ಮಾಡಿಕೊಟ್ಟಿತ್ತು. ಅಂತಹ ಅದ್ಭುತವಾದ ಪರಿಕರವನ್ನು ಬಿಟ್ಟಿರಲಾದೀತೆ?

ಕೊನೆಗೂ ಕೈಗೆ ಫೋನು ಸಿಕ್ಕು ನಿರಂಬಳವಾಗಿ ಅದರ ಪರದೆಯ ಮೇಲೆ ಕಣ್ಣಾಡಿಸಿದಾಗ ಇವನ ಸಹೋದ್ಯೋಗಿ ಶಾಂತಕುಮಾರ್ ಮಾಡಿದ ಹತ್ತು ಕರೆಗಳು, ನಿದ್ರಾ ದೇವಿಯ ವಶವಾಗಿದ್ದ ತನಗೆ ಗೊತ್ತೇ ಆಗಿರಲಿಲ್ಲ ಎನ್ನುವ ಅರಿವಾಯಿತವನಿಗೆ. ಏನೋ ತುರ್ತು ವಿಷಯವೇ ಇದ್ದಿರಬೇಕೆಂದು ಕ್ಷಣವೂ ತಡ ಮಾಡದೆ ಅವನಿಗೆ ವಾಪಸ್ಸು ಕರೆ ಮಾಡಿದ. ಕುಶಲ ಕ್ಷೆಮಗಳ ವಿಚಾರಿಸಿ, ಏನಯ್ಯ ಫೋನ್ ಮಾಡಿದ್ದು ಅಂತ ಕೇಳಿದ್ದಕ್ಕೆ. ಇವತ್ತು ಕಂಪನಿಯವರು ಟೀಂ ಔಟಿಂಗ್ ಕರೆದೊಯ್ಯುತ್ತಿರುವ ಘನವಾದ ವಿಷಯವನ್ನು ಹೇಳಿದನವನು. 
ಇವನ ಕಂಪನಿಯಲ್ಲಿ ವರ್ಷಕ್ಕೊಮ್ಮೆ ಎಲ್ಲ ಉದ್ಯೋಗಿಗಳಿಗೆ ಬೆಂಗಳೂರಿನ ರೆಸಾರ್ಟ್ ಒಂದಕ್ಕೆ ಕರೆದೊಯ್ಯುವುದು ವಾಡಿಕೆ. ಅಲ್ಲಿ ಸಮಸ್ತ ಉದ್ಯೋಗಿಗಳು ತಮ್ಮ ದಿನನಿತ್ಯದ ಕಿರಿಕಿರಿಗಳ ಮರೆತು ಕುಡಿದು-ಕುಣಿದು-ಕುಪ್ಪಳಿಸಲು ಅನುಕೂಲ ಮಾಡಿಕೊಡುವ ಒಂದು ಪ್ರಕ್ರಿಯೆ ಅದು. ನಿತ್ಯದ ಕೆಲಸಕ್ಕೆ ತೊಂದರೆಯಾಗಬಾರದೆಂದು ಆ ಪ್ರವಾಸವನ್ನು ರವಿವಾರ ಇಲ್ಲವೇ ಅಮೆರಿಕಾ ದೇಶದ ರಜೆಯ ದಿನಗಳಲ್ಲೇ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಅವತ್ತು ಪಾತಾಳದ ಆ ರಾಕ್ಷಸರ ಕಾಟವೂ ಇರುವುದಿಲ್ಲ! ಅವತ್ತು ರವಿವಾರ ಇದ್ದುದರಿಂದ ಆ ಔಟಿಂಗ್ ಏರ್ಪಡಿಸಿದ್ದರು. ಸುಜಯ್ ಗೆ ಅದು ಮೊದಲೇ ಗೊತ್ತಿತ್ತಾದರೂ, ಅಲ್ಲಿ ಹೋಗಿ ದಿನವೂ ಆಫೀಸಿನಲ್ಲಿ ಕಾಣುವ ಅದೇ ಮುಖಗಳನ್ನು ನೋಡುವ ಮನಸ್ಸು ಅವನಿಗಿರಲಿಲ್ಲ. ಅದೂ ಅಲ್ಲದೆ ತನ್ನ ಬದಲಿಗೆ ಆ ವೆಂಕಣ್ಣ ನನ್ನು ಅಮೆರಿಕಾಕ್ಕೆ ಕಳಿಸಿದ ಆ ಬಾಸ್ ನ ಮುಖ ನೋಡುವುದಂತೂ ಅವನಿಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಶಾಂತ ಕುಮಾರ ಬಿಡಬೇಕಲ್ಲ! ಅವನಿಗೆ ಕುಡಿಯಲು ಇವನ ಕಂಪನಿ ಬೇಕು. ಏ ಬಾರಯ್ಯ, ಹೊಟ್ಟೆ ತುಂಬಾ ಕುಡಿದು ಮಜಾ ಮಾಡೋಣ ಅಂತ ಹೇಳಿದ್ದು ಇವನಲ್ಲಿ ಸ್ವಲ್ಪ ಮಟ್ಟಿಗೆ ಆಸಕ್ತಿ ಕೆರಳಿಸಿತಲ್ಲದೆ, ಇತ್ತೀಚೆಗಷ್ಟೇ ಇವನ ಟೀಂ ಗೆ ಸೇರಿಕೊಂಡಿದ್ದ ಬಳಕುವ ಸುಂದರಿ ನಿಶಾನೂ ಬರುತ್ತಿದ್ದಾಳೆ ಅನ್ನುವ ವಿಷಯ ಅಲ್ಲಿಗೆ ಹೋಗಲು ಅವನನ್ನು ಮತ್ತೂ ಪ್ರೇರೇಪಿಸಿತು. ಆಗಲಿ ನಿನಗೋಸ್ಕರ ಬರುವೆ ಅಂತ ಶಾಂತನಿಗೆ ಹೇಳಿ ಲಗುಬಗೆಯಿಂದ ಸ್ನಾನಕ್ಕೆ ತೆರಳಿದ.      
          
                                           ****
ತನ್ನ ಟೊಯೋಟಾ ಕಾರಿನಲ್ಲಿ ಶಾಂತನನ್ನು  ಅವನ ಮನೆಯಿಂದ ಹತ್ತಿಸಿಕೊಂಡು ಆ ರೆಸಾರ್ಟ್ ಗೆ ಬಂದಾಗ ಹೆಚ್ಚು ಕಡಿಮೆ ಎಲ್ಲ  ಸಹೋದ್ಯೋಗಿಗಳು ಸಮಯಕ್ಕೆ ಸರಿಯಾಗಿ ಅಲ್ಲಿ ಹಾಜರಿದ್ದರು. ಕೆಲಸ ಮಾಡುವಾಗ ಇರದಿದ್ದ ಉತ್ಸಾಹ ಇವತ್ತು ಮಾತ್ರ  ಅವರಲ್ಲಿ ಎದ್ದು ಕಾಣುತ್ತಿತ್ತು. ಎಲ್ಲರ ಮುಖಗಳು ನಳನಳಿಸುತ್ತಿದ್ದವು. ಆದರೆ ಇವನ ಕಣ್ಣುಗಳು ನಿಶಾಳ ಹುಡುಕಾಟದಲ್ಲಿ ತೊಡಗಿದ್ದವು. 
ಅಲ್ಲಿಲ್ಲಿ ಅಡ್ಡಾಡಿಕೊಂಡು, ಎದುರಾದವರಿಗೆ ಔಪಚಾರಿಕತೆಯ ನಗೆ ನಕ್ಕು ರೆಸಾರ್ಟ್ ನ ಅಂಗಳದಲ್ಲಿದ್ದ ಚಿಕ್ಕ ಆಟದ ಬಯಲಿಗೆ  ಹೋದಾಗ, ಅಲ್ಲಿಟ್ಟಿದ್ದ ಸೈಕಲ್ಲುಗಳು ಇವನಿಗೆ ಆಕರ್ಷಿಸಿದವು. ಅಲ್ಲಿ ಕೆಲವರು, ಕುಡಿದು ತಿಂದು ಪೊಗದಸ್ತಾಗಿ ಬೆಳೆದು ಜಡವಾಗಿದ್ದ ತಮ್ಮ ದೇಹಗಳನ್ನು ಹೊತ್ತು, ಸೈಕಲ್ಲು ಓಡಿಸಲು ಸಾಧ್ಯವಾಗದೆ ಅದರ ಮೇಲೆ ಕುಳಿತುಕೊಂಡು ತಮ್ಮ ಫೋಟೋ ತೆಗೆಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಸ್ವಲ್ಪ ಸಮಯದ ಬಳಿಕ ಇವನಿಗೂ ಒಂದು ಸೈಕಲ್ಲು ದೊರೆತು ಅದರಲ್ಲೆರಡು ಸುತ್ತು ಓಡಿಸಿದನು. ಸುಜಯ್ ತಿನ್ನುವ, ಕುಡಿಯುವ ವಿಷಯದಲ್ಲಿ ಧಾರಾಳಿಯಾಗಿದ್ದನಾದರೂ, ನಿಯಮಿತವಾಗಿ ವ್ಯಾಯಾಮ ಮಾಡಿಕೊಂಡಿದ್ದು ಕಟ್ಟುಮಸ್ತಿನ ದೇಹವನ್ನು ಹೊಂದಿದ್ದ. ಅದು ಕೆಲವು ಜಡದೇಹಿಗಳ ಈರ್ಶೆಗೂ ಕಾರಣವಾಗಿತ್ತು. ಅವಿವಾಹಿತನೂ ಆಗಿದ್ದನಾದ್ದರಿಂದ ಕಂಪನಿಯಲ್ಲಿದ್ದ ಸುಂದರಿಯರನ್ನು ಆಕರ್ಷಿಸಿಬಿಡುವನೆಂಬ ಹೆದರಿಕೆಯೂ ಅವರನ್ನು ನಿರಂತರವಾಗಿ ಕಾಡುತ್ತಿತ್ತು. ಶಾಂತನಿಗೆ ಮುಂದಿನ ‘ತೀರ್ಥ’ ಸಮಾರಾಧನೆಯ ಬಗ್ಗೆ ಚಿಂತೆಯಿದ್ದುದರಿಂದ, ಸೈಕಲ್ಲು ಹೊಡೆದುಕೊಂಡು ಕಾಲಹರಣ ಮಾಡುತ್ತಿದ್ದ ಸುಜಯ್ ಗೆ ಮೆಲ್ಲಗೆ ತಿವಿದು ಎಚ್ಚರಿಸಿದ. ಇವನಿಗೂ ಅದೇ ಬೇಕಾಗಿತ್ತದ್ದರಿಂದ ಅವನ ಮಾತಿಗೆ ಬೆಲೆ ಕೊಟ್ಟು ಸಕಲ್ಲು ಓಡಿಸುವ ಕಾರ್ಯಕ್ಕೆ ತಡೆ ಹಾಕಿದ. ಅವರು ಅಲ್ಲಿಗೆ ಬಂದದ್ದೆ ಕುಡಿದು ಮಜಾ ಮಾಡಲು ಅಲ್ಲವೇ? ಅದರೂ ಸೈಕಲ್ಲಿನ ಮೇಲೇ ಕುಳಿತ ಒಂದು ಫೋಟೋ ಇರದಿದ್ದರೆ ಹೇಗೆ? ಶಾಂತ ನಿಗೆ ತನ್ನದೊಂದು ಫೋಟೋ ತೆಗೆಯಲು ಹೇಳಿ ಒಂದೊಳ್ಳೆಯ ಭಂಗಿಯಲ್ಲಿ ಸೈಕಲ್ಲಿನ ಮೇಲೆ ಕುಳಿತನಿವನು. ಹಾಗೆ ಕೂತಿದ್ದವನ ಹಿಂದುಗಡೆಗೆ ಯಾರೋ ಬಂದು ನಿಂತು, ಇವನ ಎರಡೂ ಹೆಗಲುಗಳ ಮೇಲೆ ಇಟ್ಟ ಕೈಗಳು ಕೋಮಲವಾಗಿದ್ದವಲ್ಲದೆ, ಅವು ಹುಡುಗಿಯದೆ ಅಂತ ಇವನು ಆ ಸ್ಪರ್ಶದಿಂದಲೇ ಅಂದಾಜಿಸಿದ, ಹಿಂದೆ ನಿಂತವಳು ಹುಡುಗಿ ಅನ್ನುವದಕ್ಕೆ ಇನ್ನೊಂದು ಸಾಕ್ಷಿ ಇವನ ಮೂಗಿಗಡರಿದ, ಅವಳು ಬಳಿದುಕೊಂಡಿದ್ದ ಸುಗಂಧ ದ್ರವ್ಯ! ಅದೂ ಅಲ್ಲದೆ ಇವನ ಎದುರಿಗೆ ನಿಂತು ಫೋಟೋ ತೆಗೆಯುತ್ತಿದ್ದ ಶಾಂತ ಹಾಗೂ ಮತ್ತಿತರ ಸಹೋದ್ಯೋಗಿಗಳು ಆ ಅಂತ ಬಾಯಿ ತೆಗೆದು ಇವನ ಸುದೈವಕ್ಕೆ ಕರುಬುತ್ತಿದ್ದ ಬಗೆ ನೋಡಿ, ಹಿಂದೆ ನಿಂತಿದ್ದು ಹುಡುಗಿಯೇ ಅಂತ ನಿಚ್ಚಳವಾಗಿತ್ತು, ಫೋಟೋ ತೆಗೆಸಿಕೊಂಡಾದ ಮೇಲೆ ಹಿಂತಿರುಗಿ ನೋಡಿದವನಿಗೆ ತೆಳ್ಳಗಿನ, ಬೆಳ್ಳಗಿನ ಚೆಲುವೆ ನಿಶಾ, ಹಾಯ್ ಅಂತ ಕೈ ಕುಲುಕಿದಾಗ ಆದ ಸಂಭ್ರಮ ಹೇಳತೀರದಾಗಿತ್ತು. ಅವಳ ಸ್ನೇಹಕ್ಕೆ ಎಲ್ಲರೂ ಹಾತೊರೆಯುತ್ತಿರುವಾಗ, ಆ ಚೆಲುವೆ ತನ್ನನ್ನ ಹುಡುಕಿಕೊಂಡು ಬಂದಿದ್ದು ಇವನ ತಲೆಯ ಮೇಲೆ ಕೋಡುಗಳನ್ನು ಮೂಡಿಸಿದ್ದವು, 
“ಹೇ ಸುಜಯ್ ಇವತ್ತು ತುಂಬಾ ಸೆಕ್ಸಿ ಕಾಣ್ತಿದೀಯ. ಈ ತರಹ ಡ್ರೆಸ್ ನಲ್ಲಿ ನಿನ್ನನ್ನ ಮೊದಲ ಸಲ ನೋಡ್ತಿರೋದು” ಅಂತ ನಿಶಾ ಹೇಳಿದ್ದಂತೂ ಇವನಿಗೆ ಸ್ವರ್ಗದಲ್ಲಿ ಕುಳಿತ ಅನುಭವ ನೀಡಿತ್ತು. ತಾವು ತೀರ್ಥ ಸೇವನೆಗೆ ಹೋಗುವ ತಯಾರಿಯಲ್ಲಿರುವಾಗಲೇ ಇವನಿಗೆ ನಿಶಾ ಸಿಕ್ಕಿದ್ದು ಶಾಂತನಿಗೆ ಅಪ್ರಿಯವಾದ ಸಂಗತಿಯಾಗಿತ್ತು. ಈ ನಿಶೆಯ ಎದುರು ಮದ್ಯದ ನಿಶೆಯನ್ನು ಇವನು ಕಡೆಗಣಿಸಿಬಿಡಬಹುದಾದ ಸಾಧ್ಯತೆಗಳು ಇಲ್ಲದಿರಲಿಲ್ಲ. ಶಾಂತ ತಮ್ಮ ಮುಂದಿನ ಕಾರ್ಯಕ್ರಮದ ಬಗ್ಗೆ ಇವನಿಗೆ ಸೂಚ್ಯವಾಗಿ ನೆನಪಿಸಿದ. ಆದರೂ ನಿಶಾಳ ಎದುರು ತಾವು  ಮದ್ಯ ಸೇವೆನೆಗೆ ಹೊರಟಿರುವ ವಿಷಯ ಹೇಳಿ ಅವಳಿಗೆ ತನ್ನ ಮೇಲೆ ಮೂಡಿರಬಹುದಾದ ಒಳ್ಳೆಯ ಅಭಿಪ್ರಾಯವನ್ನು ಕೆಡಿಸಿಕೊಳ್ಳುವ ಮನಸ್ಸು ಸುಜಯ್ ಗೆ ಇರಲಿಲ್ಲ. ಇವರ ಮನಸ್ಸನ್ನು ಓದಿದವಳಂತೆ ನಿಶಾ, ಏನು ನಿಮ್ಮ ಮುಂದಿನ ಕಾರ್ಯಕ್ರಮ? ನೀವು ಬಾರ್ ಗೆ ಹೋಗ್ತಾ ಇಲ್ಲವೇ? ಎಂದು ಕೇಳಿ ಇವರಿಗೆ ಅಚ್ಕರಿ ಹುಟ್ಟಿಸಿದಳು. ಶಾಂತನಿಗೆ ಅವಳೇ ಆ ವಿಷಯ ತೆಗೆದದ್ದು ಖುಷಿ ತಂದಿತು. ನಾವು ಅಲ್ಲಿಗೇ ಹೊರಟಿದ್ದು ಅಂತ ತಕ್ಷಣವೇ ಉತ್ತರಿಸಿ ಸುಜಯ್ ನ ಕೆಂಗಣ್ಣಿಗೆ ಗುರಿಯಾದ. 
ಓ ಹೌದಾ? ಏನು ನೀನು ಕುಡಿಯೋದು ಅಂತ ಸುಜಯ್ ಗೆ ಕೇಳಿದಳು. ಸುಜಯ್ ಅವಳ ಎದುರು ಮಾನ ಕಾಯ್ದುಕೊಳ್ಳುವ ಪ್ರಯತ್ನದ ಅಂಗವಾಗಿ ತಾನು ಕುಡಿಯೋದೆ ಅಪರೂಪವೆಂತಲೂ, ಅದೂ ಇಂಥ ಸಂದರ್ಭಗಳಲ್ಲಿ ಮಾತ್ರ, ತಾನು ಕುಡಿಯೋದು ಬರೀ ಬಿಯರ್ ಅಂತ ಹೇಳಿದ. ಅವಳು ಮನಪೂರ್ತಿ ನಕ್ಕಳು. ನಕ್ಕಾಗ ಇನ್ನೂ ಸುಂದರವಾಗಿ ಕಾಣುತ್ತಾಳಲ್ಲ ಅಂತ ಬೆರಗಿನಿಂದ ನೋಡುತ್ತಿದ್ದಂತೆ… “ಈಗೀಗ ಕಾಲದಲ್ಲಿ ಹುಡುಗಿಯರೇ ಬಿಯರ್ ನ ಕುಡಿಯೋದಿಲ್ಲ! ನೀನೇನು ಅದನ್ನ ಕುಡಿತೀಯಾ? ಇವತ್ತು ಬೇರೆ ಟ್ರೈ ಮಾಡೂವಂತೆ ಬಾ… come on guys let us have some special drink today” ಅಂತ ಅವಳಂದದ್ದನ್ನು ಅರಗಿಸಿಕೊಳ್ಳಲು ಇವನಿಗೆ ಸ್ವಲ್ಪ ಸಮಯ ಹಿಡಿಯಿತು. ಇವಳೂ ಕುಡಿಯುತ್ತಾಳೆಯೇ ಅನ್ನುವ ಸಂಗತಿಯೇ ಅವನಿಗೆ ಅಚ್ಚರಿ ತಂದಿತ್ತಾದರೂ, ಜೊತೆಗೆ ಸಾಕಷ್ಟು ಪುಳಕವನ್ನೂ ಉಂಟು ಮಾಡಿತ್ತು!
(ಮುಂದುವರಿಯುವುದು…)

Friday, January 23, 2015

ಪಾತಾಳದೆಡೆಗೆ

(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು  http://www.panjumagazine.com/?p=9851)
-------------------------------------------

ವೆಂಕಣ್ಣ ಪರಿವಾರ ಸಮೇತ ಬೆಂಗಳೂರಿನ ವಿಮಾನಾಲಯದ ಪ್ರವೇಶದ್ವಾರಕ್ಕೆ ಪಾದಸ್ಪರ್ಶ ಮಾಡಿದಾಗ ಗಂಟೆ ರಾತ್ರಿ ಹನ್ನೊಂದಾಗಿತ್ತು. ಮುಂಜಾನೆ ಎರಡು ಗಂಟೆಗೆ ಪ್ಲೇನು ಹೊರಡುವದಿತ್ತಾದರೂ ಆದಕ್ಕಿಂತ ನಾಲ್ಕು ತಾಸು ಮೊದಲೇ ಅಲ್ಲಿರಬೇಕಿತ್ತು. ಎಲ್ಲ ಔಪಚಾರಿಕತೆಗಳನ್ನು ಮುಗಿಸಬೇಕಲ್ಲ. ಅಮೆರಿಕಾಕ್ಕೆ ಹೋಗುವುದೆಂದರೆ ಅಷ್ಟು ಸುಲಭವೇ? ಬೆಂಗಳೂರಿನಿಂದ ಜರ್ಮನ್ ದೇಶಕ್ಕೆ ಮೊದಲ ಫ್ಲೈಟು. ಅಲ್ಲಿಂದ ಅಮೇರಿಕಾದ ಚಿಕ್ಯಾಗೊ ನಗರಕ್ಕೆ ಇನ್ನೊಂದು ಫ಼್ಲೈಟು. ಕೊನೆಗೆ ಇವನು ಹೋಗಬೇಕಾಗಿದ್ದ ಊರಾದ ಸ್ಯಾಂಡಿ ಗೆ ಮತ್ತೊಂದು! ಒಂದೇ ಫ್ಲೈಟಿನಲ್ಲಿ ಅಷ್ಟು ದೂರ ಕ್ರಮಿಸುವುದು ಕಷ್ಟ. ಆ ದೇಶಕ್ಕೆ ಹೋಗೋದು ಅಂದ್ರೆ ಹೆಚ್ಚು ಕಡಿಮೆ ಭೂಗೋಳದ ಅರ್ಧ ಪ್ರದಕ್ಷಿಣೆ ಹಾಕಿದಂತೆ! ವೆಂಕಣ್ಣ ಯೋಚಿಸುತ್ತಿದ್ದ, ಒಂದುವೇಳೆ ಬೆಂಗಳೂರಿನಲ್ಲಿ, ಅದೃಷ್ಟವಶಾತ್ ಒಂದು ಖಾಲಿ ಸೈಟು ಸಿಕ್ಕು, ಅಲ್ಲೊಂದು ಸುರಂಗ ಕೊರೆಯುತ್ತಾ ಹೋದರೆ ಅದು ಅಮೆರಿಕಾಕ್ಕೆ ತೆರೆದುಕೊಳ್ಳುತ್ತದೇನೋ, ಅಷ್ಟು ಸರಿಯಾಗಿ ನಮ್ಮ ಭೂ ಪ್ರದೇಶದ ಕೆಳಗೆ ಇದೆ ಆ ದೇಶ. ಬಹುಶಃ ಪುರಾಣಗಳಲ್ಲಿ ಪ್ರಸ್ತಾಪಿಸಿದ ಪಾತಾಳ ಇದೆ ಆಗಿದ್ದಿರಬೇಕು. ಅದಕ್ಕೆ ಇರಬೇಕು ಅಮೆರಿಕನ್ನರು ರಾಕ್ಷಸರಂತೆ ಹಗಲು ರಾತ್ರಿ ತನ್ನನ್ನು ಕಾಡುತ್ತಾರೆ! ವೆಂಕಣ್ಣ ತನ್ನ ವಿಚಿತ್ರವಾದ ಕಲ್ಪನೆಗೆ ತನ್ನಲ್ಲೇ ನಗುತ್ತಿದ್ದ. ಜಾನುಗೆ ಇದೆಲ್ಲ ಮಾಮೂಲು. ಅವನನ್ನು ಮದುವೆಯಾದ ಹೊಸತಾಗಿ ಸ್ವಲ್ಪ ವಿಚಿತ್ರವಾಗಿ ಕಾಣುತ್ತಿತ್ತು. ಹೊತ್ತಿಲ್ಲದ ಹೊತ್ತಿನಲ್ಲಿ ಅವನು ಆಫೀಸಿನ ಕೆಲಸ ಮಾಡುವುದು, ಮಧ್ಯರಾತ್ರಿ ಅಮೆರಿಕಾದ ಕಸ್ಟಮರುಗಳು ಅವನಿಗೆ ಫೋನ್ ಮಾಡಿ ಎಬ್ಬಿಸುವುದು, ಇವನು ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಕಾನ್ಫರನ್ಸ್ ಕರೆಗಳಲ್ಲಿ ಗಂಟೆಗಟ್ಟಲೆ ಮಾತಾಡೋದು, ಮಲಗಿದಾಗಲೂ ನಿದ್ದೆಗಣ್ಣಲ್ಲಿ ಬಡಬಡಿಸುವುದು... ಇವೆಲ್ಲ ಅವಳಿಗೆ ಕ್ರಮೇಣ ಅಭ್ಯಾಸವಾಯ್ತು. ಹಾಗೆಯೇ ಏನೋ ನೆನಸಿಕೊಂಡು ನಗುತ್ತಿರಬೇಕೆಂದು ಸುಮ್ಮನಾದಳು. ತಮ್ಮ ಬ್ಯಾಗುಗಳ ತೂಕ ನೋಡಿ ಅದಕ್ಕೊಂದು ಚೀಟಿ ಅಂಟಿಸುವ ಕೌಂಟರಿನ ಮುಂದೆ ಸರದಿಯಲ್ಲಿ ನಿಂತಿದ್ದರವರು. ಹೆಚ್ಚುಕಡಿಮೆ ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ಬ್ಯಾಗುಗಳಲ್ಲಿ ತುಂಬಿಸಿದ್ದಳು ಜಾನು. ತಲೆಗೆ ಎರಡು ಬ್ಯಾಗು, ಒಂದೊಂದರಲ್ಲಿ ೨೩ ಕಿಲೋ ಭಾರವನ್ನು ವಿಮಾನದಲ್ಲಿ ಕೊಂಡೊಯ್ಯುವ ಅವಕಾಶವಿತ್ತು. ಹಾಗೆ ಪ್ರಯಾಣಿಕರು ತಂದ ಬ್ಯಾಗುಗಳನ್ನೆಲ್ಲಾ ತೂಕ ಮಾಡಿ, ವಿಶೇಷವಾದ ಸ್ಕ್ಯಾನರಿನ ಒಳಗಣ್ಣಿನಿಂದ ಕಂಪ್ಯೂಟರಿನ ಪರದೆಯ ಮೇಲೆ ಮೂಡುತ್ತಿದ್ದ ಚಿತ್ರಗಳನ್ನು ನೋಡುತ್ತಾ ಕೂತಿದ್ದವನೊಬ್ಬ ಬ್ಯಾಗುಗಳ ಒಳಗೆನಿರಬಹುದು ಅಂತ ತಪಾಸಣೆ ಮಾಡುತ್ತಿದ್ದ. ಅಂತೂ ಇವರ ತಪಾಸಣೆಗಳಲ್ಲ ಮುಗಿದು ವಿಮಾನದೊಳಗೆ ಪ್ರವೇಶ ಪಡೆದು ತಂತಮ್ಮ ಆಸನದಲ್ಲಿ ಉಸ್ಸಪ್ಪಾ ಅಂತ ಕೂತಾಗ ಒಂದು ಗಂಟೆ. ಎರಡು ಗಂಟೆಗೆ ಸರಿಯಾಗಿ ವಿಮಾನ ತನ್ನ ರೆಕ್ಕೆ ಬಿಚ್ಚಿ ಹಾರತೊಡಗಿತ್ತು. ಇನ್ನೂ ಎಂಟು ಗಂಟೆಗಳು ಇವರು ಅಂತರ್ ಪಿಶಾಚಿಗಳಂತೆ ಆಕಾಶದಲ್ಲೇ ಇರುವ ಅನಿವಾರ್ಯತೆಯಿತ್ತು!   
ಬೆಂಗಳೂರಿನಿಂದ ಫ್ರ್ಯಾಂಕ್ ಫ಼ರ್ಟ್ ಗೆ ಪಯಣಿಸುತ್ತಿದ್ದ ಆ ವಿಮಾನದಲ್ಲಿ ಜರ್ಮನ್ ದೇಶದವಳಾದ ಗಗನ ಸಖಿ ಸಖತ್ತಾಗಿದ್ದುದರಿಂದಲೋ ಏನೋ ವೆಂಕಣ್ಣನಿಗೆ ಬಾಯಾರಿಕೆ ಸ್ವಲ್ಪ ಜಾಸ್ತಿನೆ ಆಗತೊಡಗಿತ್ತು. ಆಗಾಗ  ಅವಳನ್ನು ಕರೆದು "can I have water please?" ಅನ್ನೋದು, ಅವಳು ತಂದು ಕೊಟ್ಟಾಗ 'Thank you!" ಅನ್ನೋದು ನಡೆದೇ ಇತ್ತು. ತನಗೆ ಮಾತ್ರ ಒಂದು ಸಲವೂ ಯಾವುದಕ್ಕೂ "Thank you" ಹೇಳದ ಗಂಡ ನೀರು ಕುಡಿಸುತ್ತಿದ್ದ ಈ ಬೆಕ್ಕಿನ ಕಣ್ಣಿನ ಚೆಲುವೆಗೆ ಇಷ್ಟೊಂದು ಆದರ ತೋರಿಸುತ್ತಿದ್ದುದು ಜಾನುಗ್ಯಾಕೋ ಸರಿ ಕಾಣಲಿಲ್ಲ. 
"ನೀರು ಭಾಳ ಕುಡಿಬ್ಯಾಡ್ರಿ, ಅಜೀರ್ಣ ಆದೀತು!" ಅಂತ ಎಚ್ಚರಿಸಿದಳು.
"ಎಲ್ಲಾದಕ್ಕೂ ಕಿರಿಕಿರಿ ನೋಡಲೇ ನಿಂದು. ಏನೂ ತಿನ್ಲಿಕ್ಕಂತೂ ಬಿಡಂಗಿಲ್ಲ, ಕುಡಿಲಿಕ್ಕರೆ ಬಿಡ್ತೀಯಾ ಅದೂ ಇಲ್ಲಾ." ಅಂತ ಸ್ವಲ್ಪ ಜೋರಾಗೆ ಹೇಳಿದ್ದು ಕನ್ನಡದಲ್ಲೇ ಆಗಿದ್ದರು ಜರ್ಮನ್ ಸಖಿಗದು ಹೇಗೋ ಅರ್ಥವಾಗಿ ಅವಳು ಕಣ್ಣು ಮಿಟುಕಿಸಿ ನಕ್ಕಂತೆನಿಸಿತು! ಅಂತೂ ನೀರು ಕುಡಿಯುವುದಕ್ಕೂ ರೇಷನ್ನು ಲಾಗು ಆದ ಮೇಲೆ, ವೆಂಕಣ್ಣ ನಿಗೆ ಇನ್ನೂ ೮ ಗಂಟೆ ಕಾಲಹರಣ ಮಾಡುವ ಬಗೆ ತಿಳಿಯದೆ ಅತ್ತಿತ್ತ ಪಿಳಿ ಪಿಳಿ ನೋಡತೊಡಗಿದ. ಮಗಳು ಖುಷಿ ತನ್ನ ಆಸನದ ಎದುರಿಗಿನ ಸಣ್ಣ  ಟೀವಿ ಪರದೆಯಲ್ಲಿ ಕಾಣುತ್ತಿದ್ದ ಕಾರ್ಟೂನುಗಳನ್ನು ನೋಡುತ್ತಾ ಅನಂದದಿಂದಿದ್ದಳು. ಜಾನು ಕಿವಿಗೆ ಈಯರ್ ಫೋನ್ ಹಾಕಿಕೊಂಡು ಯಾವುದೋ ಸಂಗೀತ ಕೇಳುತ್ತಿದ್ದಳು. ಆದರೂ ಗಂಡನ ಮೇಲೆ ಒಂದು ಕಣ್ಣಿಟ್ಟಿದ್ದಳು! ಪಕ್ಕದ ಕಿಟಕಿಯ ಹೊರಗೆ ಕಣ್ಣು ಹಾಯಿಸಿದವನಿಗೆ ಕೆಳಗೆ ಬರೀ ಮೋಡಗಳು ಕಾಣುತ್ತಿದ್ದವು. ವಿಮಾನಯಾನದ ಏಕತಾನತೆಯಿಂದ ಬೇಸರ ಮೂಡಿತವನಿಗೆ. ಟ್ರೇನು, ಬಸ್ಸಿನಲ್ಲಾದರೆ ನಾವು ಚಲಿಸುತ್ತಿರುವ ಅನುಭವವಾದರೂ ಆಗುತ್ತೆ. ಇಲ್ಲಿ ಅದೂ ಗೊತ್ತಾಗದು. ವಿಮಾನದ ಎದುರಿಗೊಂದಿಷ್ಟು ಗಾಳಿಕುಳಿಗಳು (air packets) ಬಂದಾಗಲಷ್ಟೆ, ಬೆಂಗಳೂರಿನ ಕೆಟ್ಟ ರಸ್ತೆಯ ಮೇಲೆ ಹೋದಂತೆ ವಿಮಾನ ತಡಪಡಿಸಿದಂತಾಗಿ ಧಡಿಕೆಯಾಗಿ ಚಲನೆಯ ಅನುಭವವಾಗುತ್ತಿತ್ತು. ಇಲ್ಲವೆಂದರೆ ಒಂದು ಹವಾನಿಯಂತ್ರಿತ ಕೋಣೆಯೊಳಗೆ ಕುಳಿತುಕೊಂಡ ಅನುಭವ ಅಷ್ಟೇ. ಟ್ರೇನಿನಲ್ಲಿ ಬೇಸರವಾದರೆ ಬಾಗಿಲ ಬಳಿ ಹೋಗಿ ನಿಂತು ಹೊರಗಿನ ಪ್ರಕೃತಿ ಸೌಂದರ್ಯ ನೋಡುತ್ತಾ ತಾಜಾ ಗಾಳಿಯನ್ನು ಸವಿಯಬಹುದು. ವಿಮಾನದಲ್ಲಿ ಅದೂ ಸಾಧ್ಯವಿಲ್ಲವಲ್ಲವಲ್ಲ ಅಂತ ಪೇಚಾಡಿದನವನು. ಇತ್ತೀಚಿಗೆ ಚೈನಾದವರು ತಮ್ಮ ದೇಶದಿಂದ ಅಮೆರಿಕಾದವರೆಗೂ ಟ್ರೇನ್ ಸಂಚಾರ ಶುರು ಮಾಡಿದ್ದಾರೆಂಬ ಸುದ್ದಿ ಕೇಳಿದ್ದ. ಮುಂದಿನ ಸಲ ಅಮೆರಿಕಾಕ್ಕೆ ಹೋದರೆ ಚೈನಾಕ್ಕೆ ಹೋಗಿ ಅಲ್ಲಿಂದ ಟ್ರೇನಿನಲ್ಲೇ ಹೋಗುವುದು ಒಳ್ಳೆಯದು ಅಂತ ನಿರ್ಧರಿಸಿ, ಈಗ ಸಧ್ಯಕ್ಕೆ ನಿದ್ದೆ ಮಾಡುವುದೊಂದೇ ಒಳ್ಳೆಯ ಉಪಾಯ ಅಂತ ಮನಗಂಡು ಕಣ್ಣು ಮುಚ್ಚಿ ನಿದ್ದೆಗೆ ಶರಣಾದ.
---
ಬೆಂಗಳೂರಿನ ತನ್ನ ಸುಸಜ್ಜಿತವಾದ ಫ್ಲ್ಯಾಟಿನಲ್ಲಿ ಮಲಗಿದ್ದ ಸುಜಯ್ ಗೆ, ಗಂಟೆ ಮೂರಾದರೂ ನಿದ್ದೆ ಹತ್ತಿರ ಸುಳಿಯುಲಾರದಾಗಿತ್ತು. ನಿನ್ನೆ ಮೊನ್ನೆ ಕಂಪನಿ ಸೇರಿದ್ದ ವೆಂಕಟ್ ಅಮೆರಿಕಾಕ್ಕೆ ಹೊರಟಿದ್ದಾನೆ ಅನ್ನುವ ಸಂಗತಿಯೇ ಅವನ ನಿದ್ರಾ ಹೀನತೆಗೆ ಕಾರಣವಾಗಿತ್ತು. ಸುಜಯ್ ಹಾಗೂ ವೆಂಕಟ್ ಇಬ್ಬರಿಗೂ ಸುಧೀರ್ ನೆ ಬಾಸ್. ತನ್ನನ್ನು ಅಮೆರಿಕಕ್ಕೆ ಕಳಿಸುತ್ತೇನೆ ಎಂದು ಹೇಳಿದ್ದ ಬಾಸು ಕೊನೆಯ ಕ್ಷಣದಲ್ಲಿ ತನಗೆ ಕೈ ಕೊಟ್ಟಿದ್ದು ಇವನಿಗೆ ಸಿಟ್ಟು ಬರಿಸಿತ್ತು. ಕಸ್ಟಮರ್ರು ವೆಂಕಟ್ ನೇ ಅಲ್ಲಿಗೆ ಬರಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆಂದೂ, ಮುಂದಿನ ಸಲ ನಿನ್ನನ್ನು ಕಳಿಸುವೆನೆಂದೂ ಹೇಳಿದ ಸುಧೀರನ ಮಾತು ಆ ಮಟ್ಟಿಗಿನ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ಉತ್ತರವಾಗಿತ್ತೆಂದು ಅವನಿಗೆ ಸ್ಪಷ್ಟವಾಗಿತ್ತು. ಅದೂ ಅಲ್ಲದೆ ಹೊಸದಾಗಿ ಇವನ ಟೀಮಿಗೆ ಸೇರಿದ್ದ  ನಿಶಾ, ನೀನು ಅಮೆರಿಕಾಕ್ಕೆ ಹೋಗುತ್ತಿಲ್ಲವೇ ಅಂತ ಆಶ್ಚರ್ಯ ಚಕಿತಳಾಗಿ ಕೇಳಿದ್ದು ಇವನಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಆ ದೇಶದ ಮಣ್ಣನ್ನು ಮುಟ್ಟುವ ಸುಜಯ್ ನ ಬಹುದಿನದ ಕನಸು ಸಧ್ಯಕ್ಕೆ ಕನಸಾಗಿಯೇ ಉಳಿದಿತ್ತು. 

(ಮುಂದುವರಿಯುವುದು...)            


         

Sunday, January 4, 2015

ಆಪ್ತ ರಕ್ಷಕ!

(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು http://www.panjumagazine.com/?p=9571)

ಅವತ್ತು  ಕೆಲಸ ಮುಗಿಸಿ ನಾನು ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆ. ಕೆಲಸದ ಸುಸ್ತು, ತಲೆ ಬೇರೆ ಸಣ್ಣಗೆ ನೋಯುತ್ತಿತ್ತು. ನಮ್ಮ ಅಪಾರ್ಟಮೆಂಟಿನ ಹೊರಗೆ ಕಾರು ನಿಲ್ಲಿಸಿಕೊಂಡು "ಅವನು" ಗೇಟು ತೆಗೆಯಲೆಂದು ಕಾಯುತ್ತಿದ್ದೆ...

ಅವನ ಹೆಸರು ನಂದೀಶ. ಅವನನ್ನು ಏನಂತ ಪರಿಚಯಿಸಬೇಕೆಂದು ಗೊತ್ತಾಗುತ್ತಿಲ್ಲ. ಸೆಕ್ಯುರಿಟಿ ಅನ್ನಲೇ? ಊಹುಂ, ಅವನು ಅದಕ್ಕಿಂತ ಜಾಸ್ತಿ. ವಾಚ್ ಮನ್ ಅನ್ನಲೂ  ಮನಸ್ಸಿಲ್ಲ, ಏಕೆಂದರೆ ವಾಚ್ ಮ್ಯಾನ್ ಗಳು ಬರೀ ವಾಚ್ ಮಾಡುತ್ತಾರೆ ಅಷ್ಟೆ!  ಅವನನ್ನು  ನಮ್ಮ "ಆಪ್ತ ರಕ್ಷಕ" ಅಂತ ಕರೆಯುವುದೇ ಸರಿ ಅನಿಸುತ್ತದೆ. 

... ಗೇಟು ತೆಗೆದವನೆ ಓಡುತ್ತ ನನ್ನ ಕಡೆಗೆ ಬಂದು "ಸಾರ್ ಅಲ್ಲೇ ಇರಿ, ಒಳ್ಗೆ ಬರ್ಬೇಡಿ" ಅಂತ ಸ್ವಲ್ಪ ಎಚ್ಚರಿಸುವ ರೀತಿಯಲ್ಲಿ ಹೇಳಿದ. ಮೊದಲೆ ತಡವಾಗಿ ಬಂದಿದ್ದ ನಾನು ತಾಳ್ಮೆ ಕಳೆದುಕೊಂಡಿದ್ದೆ. 
"ಯಾಕ್ರಿಪಾ?" ಸ್ವಲ್ಪ ಗಂಟು ಮುಖದಿಂದಲೇ ಕೇಳಿದೆ
"ಹಾವ್ ಬಂದೈತೆ ಸಾರ್! ಮಿಡಿ ನಾಗ್ರಾ... ಅಲ್ಲೆ ಇರಿ..." ಹಾವು ಅನ್ನುವ ಶಬ್ಧವೇ ನನ್ನ ಬಾಯಿ ಮತ್ತು ಕಣ್ಣುಗಳನ್ನು ಅಗಲಿಸಿತ್ತು. ನನ್ನ ತಲೆ ನೋವು ಸದ್ದಿಲ್ಲದೇ ಓಡಿ ಹೋಗಿತ್ತು. ಹಾವು ಹಿಡಿಯುವಷ್ಟು ಧೈರ್ಯವಾನನಲ್ಲ ನಾನು. 
"ಹಾವು ಹಿಡಿಯವ್ರಿಗೆ ಫೋನ್ ಮಾಡೋಣ್ ತಡ್ರಿ" ಅಂತ ಅಂದೆ. 
"ಅದ್ಯಾಕೆ ಬುಡಿ ಸಾರ್. ನಾನಿಲ್ವೆ? ಒಂದ್ನಿಮಿಷ ಹಂಗೆ ಇರಿ" ಅಂದವನೆ ಎಲ್ಲಿಂದಲೋ ಒಂದು ಕೋಲು, ಗೋಣಿ ಚೀಲವೊಂದನ್ನು ತಂದು. ಆ ಮಿಡಿನಾಗರವನ್ನು ಆ ಚೀಲದಲ್ಲಿ ಯಶಸ್ವಿಯಾಗಿ ಕಳಿಸಿ, ಚೀಲದ ಬಾಯಿ ಮುಚ್ಚಿ, ಹಾಗೆ ಹಿಡಿದುಕೊಂಡು ಹೋಗಿ ದೂರದಲ್ಲೆಲ್ಲೋ ಬಿಟ್ಟು ಬಂದ. ಇದೆಲ್ಲವನ್ನು ಅವನು ನನ್ನ ಕಣ್ಣ ಮುಂದೆಯೇ ಮಾಡಿದ್ದು, ಅದೂ ಒಂದೆ ಕೈಯಲ್ಲಿ ಅಂದರೆ ನೀವು ನಂಬಲಿಕ್ಕಿಲ್ಲ. ಒಂದೇ ಕೈಯಲ್ಲಿ ಯಾಕೆ ಅಂದರೆ ಅವನ ಎಡಗೈಯನ್ನು ಒಂದು ದುರ್ಘಟನೆಯಲ್ಲಿ ಕಳೆದುಕೊಂಡಿದ್ದಾನೆ! ನಾನು ನನ್ನ ಎರಡೂ ಕೈ ಇಟ್ಟುಕೊಂಡೂ ಮಾಡಲಾಗದ ಕೆಲಸವನ್ನು ಒಂದೇ ಕೈಯಲ್ಲಿ ಮಾಡಿ ನಮ್ಮ ರಕ್ಷಣೆ ಮಾಡುವವನನ್ನು ಆಪ್ತ ರಕ್ಷಕ ಅನ್ನದೆ ಬೇರೇನೂ ಅನ್ನಲು ಸಾಧ್ಯ?        

ಅವತ್ತೊಂದು ದಿನ, ತನಗಾದ ದುರ್ಘಟನೆಯನ್ನು ನೆನಪಿಸಿಕೊಂಡು ಹೇಳುತ್ತಿದ್ದ.  

"... ಇಲ್ಲಿ ಬರೋಕಿಂತ ಮೊದ್ಲು ನಮ್ಮ ಹಳ್ಳಿನಾಗೆ ನಾನು ಗೂಡ್ಸ್ ಗಾಡಿ ಓಡಸ್ತಿದ್ದೆ ಅನ್ನಿ. ಅವೊತ್ತು ಸಾಮಾನು ತುಂಬ್ಕೊಂಡು ಹೊಯ್ತಿದ್ದೆ. ದಾರೀಲಿ ಎಲ್ಲೋ ಎಡವಟ್ಟು ಆಗಿ ಗಾಡಿ ಪಲ್ಟಿ ಹೊಡೀತು ಸಾರ್. ಎರಡು ಮೂರು ಸರ್ತಿ ಉಳ್ಳಿರಬೇಕು. ಎಡಕಿನ ಕೈ ಮ್ಯಾಕೆ ಗಾಡಿ ಬಿದ್ದಿತ್ತು. ನನಗೆ  ಎಚ್ಕಾರಾನೆ ಇರಲಿಲ್ಲ ಅನ್ನಿ. ಆಮ್ಯಾಕೆ ಆಸ್ಪತ್ರೇಲಿ ಎಚ್ಚರಾ ಆದಾಗ್ಲೆ ನಂದೊಂದು ಕೈ ಕಳ್ಕೊಂಡಿದ್ದು ಗೊತ್ತಾಗಿದ್ದು." ತನ್ನ ಕೈಯನ್ನೇ ಕಸಿದುಕೊಂಡ ಆ ವಿಧಿಯಾಟವನ್ನು ವಿವರಿಸಿದ ಅವನ ಮುಖದಲ್ಲಿ ಎಳ್ಳಷ್ಟೂ ಬೇಸರವಿರಲಿಲ್ಲ. ಆದರೆ ಅದನ್ನು ಕೇಳಿ ನನ್ನ ಮನಸ್ಸು ಭಾರವಾಗಿತ್ತು.

ಮೊಳಕೈಯಿಂದ  ಕೆಳಗೆ ಕತ್ತರಿಸಿ ತುಂಡಾಗಿದ್ದ ಕೈಯನ್ನು ಮರು ಜೋಡಿಸುವ ಸಾಧ್ಯತೆಗಳನ್ನು ವೈದ್ಯರು ಅಲ್ಲಗಳೆದರಂತೆ. ಸ್ವಲ್ಪ ದಿನಗಳ ಬಳಿಕ ಈ ಘಟನೆಯಿಂದ ಚೇತರಿಸಿಕೊಂಡ ಮೇಲೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದನಂತೆ. 
 
ನಮ್ಮ ಅಪಾರ್ಟ್ಮೆಂಟಿನ  ರಕ್ಷಣೆಯ ಜವಾಬ್ದಾರಿ ಹೊತ್ತು ಈಗಾಗಲೇ ಐದು ವರ್ಷಗಳು ಸಂದಿದೆ. ದಿನದ ೨೪ ಗಂಟೆಯೂ ನಮ್ಮ ಕಟ್ಟಡದ ಯಾವುದೇ ಒಂದು ಸದ್ದಿಗೂ ಅವನದೊಂದು ಕಿವಿ ಇಟ್ಟಿರುತ್ತಾನೆ! ಅವನು ಯಾವಾಗ ಮಲಗುತ್ತಾನೋ ಆ ದೇವರಿಗೆ ಗೊತ್ತು. ನಮಗಂತೂ ನೆಮ್ಮದಿಯ ನಿದ್ದೆಯನ್ನು ದಯಪಾಲಿಸಿದ್ದಾನೆ.
ಕೆಲವರಿಗೆ ಕಾರ್ ಚಾಲನೆಯನ್ನೂ ಕಲಿಸಿದ್ದಾನೆ. ಯಾವಾಗಲೂ ನಗುಮುಖದಲ್ಲೇ ಮಾತಾಡುತ್ತಾನೆ. ಯಾವುದೇ ಕೆಲಸಕ್ಕೆ ಸಂಬಂದಿಸಿದವರ ಫೋನ್ ನಂಬರು ಅವನ ಬಳಿ ಇರುತ್ತದೆ. ಒಂದು ವೇಳೆ ಕೆಲಸಕ್ಕೆ ಯಾರೂ ಸಿಕ್ಕಿಲ್ಲವೆಂದರೆ ಆ ಕೆಲಸವನ್ನು ಯಾವುದೇ ಅಪೇಕ್ಷೆಯಿಟ್ಟುಕೊಳ್ಳದೆ ಮಾಡುತ್ತಾನೆ. ಅದು ಪ್ಲಂಬಿಂಗ್ ಆಗಿರಬಹುದು, ಇಲೆಕ್ಟ್ರಿಕ್ ಕೂಡಾ ಆಗಿರಬಹುದು!
 
ಯಾರೇ ಅಪರಿಚಿತರು ಯಾವುದೇ ಫ಼್ಲ್ಯಾಟಿಗೆ ಬಂದರೂ ಅವರ ಜೊತೆಗೆ ಆ ಮನೆಯವರೆಗೂ ಬಂದು ಅವರು ನಮಗೆ ಪರಿಚಿತರು ಅಂತ ಗೊತ್ತಾದಾಗಲೇ ಅಲ್ಲಿಂದ ಹೋಗುತ್ತಾನೆ. ಅವನು ಸುಮ್ಮನೆ ಕೂಡೋದೇ ಕಡಿಮೆ. ಕಸ ಗೂಡಿಸುತ್ತಲೋ, ಕಾರು ತೊಳೆಯುತ್ತಲೋ ಏನೋ ಒಂದು ಕೆಲಸ ಮಾಡುತ್ತಾ 'ಕಾಯಕವೇ ಕೈಲಾಸವೆನ್ನುವ' ಬಸವಣ್ಣನ ತತ್ವವನ್ನು ಅಕ್ಷರಶಃ ಮೈಗೂಡಿಸಿಕೊಂಡಿದ್ದಾನೆ.    

 
ಅವನ ಸಹಧರ್ಮಿಣಿ ಕೂಡ ಅವನಿಗೆ ಹೀಗಾಯ್ತಲ್ಲಾ ಅಂತ ಬೇಸರಿಸದೆ, ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾಳೆ. ಅವರಿಗೊಬ್ಬಳು ಮುದ್ದಾದ ಮಗಳಿದ್ದಾಳೆ. ಅವಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾನೆ. ತನ್ನ ಕೈ ಹೋಯಿತಲ್ಲಾ  ಅಂತ ಅಳುತ್ತ ಕೂಡದೆ, ತನ್ನ ಹಣೆಬರಹವನ್ನು ಹಳಿಯದೆ, ಯಾವಾಗಲೂ ನಗುತ್ತಾ, ಸ್ವಾಭಿಮಾನದ ಬದುಕನ್ನು ನಡೆಸುವ ನಂದೀಶ ಖಂಡಿತವಾಗಿಯೂ ಒಂದು ಆದರ್ಶವೇ ಅಂದರೆ ಉತ್ಪ್ರೇಕ್ಷೆಯಾಗಲಾರದು. ಅವನಿಗೆ ಒಳ್ಳೆಯದಾಗಲೆಂದು ಹಾರೈಸುತ್ತಾ...     
 

Friday, December 19, 2014

ವಿಮಾನಾಲಯ ಅಂದ್ರ ಏನ್ ಮೀನಿಂಗು?:


(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು >> http://www.panjumagazine.com/?p=9503)

ವೆಂಕಣ್ಣನನ್ನು ಅವನ ಕಂಪನಿಯವರು ಅಮೆರಿಕಾಕ್ಕೆ ಕಳಿಸುವ ನಿರ್ಧಾರ ಮಾಡುತ್ತಾರೆ. ಹೆಂಡತಿ, ಮಗಳನ್ನೂ ಜೊತೆಗೆ ಕರೆದೊಯ್ಯುವ ನಿರ್ಧಾರ ಮಾಡಿ ಅವರಿಗೆ ವೀಸಾ ಮಾಡಿಸಲು ಚೆನ್ನೈಗೆ ಹೋಗುತ್ತಾನೆ. ವಿಸಾ ಕೊಡುವದಕ್ಕೆ ಅಮೇರಿಕದವರು ಕಾಡಿಸುವ ರೀತಿಗೆ ಬೇಸತ್ತು,  ಆ ದೇಶಕ್ಕೆ ಹೋಗುವುದೇ ಬೇಡ ಅನ್ನುವ ನಿರ್ಧಾರ ಮಾಡುತ್ತಾನಾದರೂ ಹೆಂಡತಿ ಮಗಳಿಗೋಸ್ಕರ ನಿರ್ಧಾರ ಬದಲಿಸುತ್ತಾನೆ.  ಮುಂದೆ ಓದಿ… )
 
ಮೊದಲೆಲ್ಲಾ ವಿದೇಶ ಪ್ರಯಾಣ ಮಾಡುವವರ ದೊಡ್ಡದೊಂದು ಫೋಟೊ ಪೇಪರಿನಲ್ಲಿ ಹಾಕಿಸಿ, ಅವರಿಗೆ ಬಂಧು ಮಿತ್ರರು ಶುಭ ಕೋರುತ್ತಿದ್ದರು. ಅದು ಯಾಕೆ ಹಾಗೆ ಮಾಡುತ್ತಿದ್ದರೋ? ಆಗೆಲ್ಲ ಕೆಲವೇ ಕೆಲವು ಜನರು ವಿದೇಶಕ್ಕೆ ಹೋಗುತ್ತಿದ್ದುದರಿಂದ ಅದೂ ಒಂದು ಪ್ರತಿಷ್ಠೆಯ ವಿಷಯವಾಗಿತ್ತೇನೊ? ಹಾಗೆ ಶುಭ ಕೋರುವವರು ಆ ವಿದೇಶ ಪ್ರಯಾಣಿಕರ ಜೊತೆಗೆ ತಮ್ಮನ್ನು ಗುರುತಿಸಿಕೊಂಡು ತಮ್ಮ ಪ್ರತಿಷ್ಠೆ ಮೆರೆಯುತ್ತಿದ್ದರೇನೊ! ಅಥವಾ ಅದಕ್ಕಿದ್ದ ಇನ್ನೊಂದು ಕಾರಣವೆಂದರೆ ಆಗ ಫೆಸ್ ಬುಕ್ ಇರಲಿಲ್ಲವೆಂದೆ?! ಆದರೆ ಈಗ ಇದೆಯಲ್ಲ! 
ಅದಕ್ಕೆ ಜಾನು ತನ್ನ ಫೆಸ್ ಬುಕ್ಕ್ ನ ಮುಖಪುಟದಲ್ಲಿ ದೊಡ್ಡದಾಗಿ "going to miss you India … ನಾವು ಹೊರಟೆವು ಅಮೆರಿಕಾಕ್ಕೆ…   " ಅಂತೇನೊ ಬರೆದದ್ದೇ  ತಡ ಅವಳ ಪೋಸ್ಟಿಗೆ ಬಂಧುಮಿತ್ರರು ಲಗ್ಗೆ ಹಾಕಿ ಲೈಕ್ ಒತ್ತಿದ್ದರು! ಕಮೆಂಟು ಗೀಚಿದರು. ಇದನ್ನು ನೋಡಿ ವೆಂಕಣ್ಣನಿಗೆ ಕೆಂಡದಂಥ ಕೋಪ ಬಂದಿತ್ತು.
"ಹಿಂಗೆಲ್ಲಾ ಸ್ಟೇಟಸ್ ಹಾಕಿ, ಊರಾಗಿನ ಕಳ್ಳರಿಗೆಲ್ಲಾ ನಾವು ಒಂದ ತಿಂಗಳ ನಮ್ಮ ಮನಿ ಬಿಟ್ಟು ಹೊಂಟೇವಿ ಅಂತ ಗೊತ್ತಾಗತದ. ನಾವ್ ವಾಪಸ ಬರೋದರಾಗ ಎಲ್ಲ ಕಳುವು ಮಾಡಿ ಮನಿ ಖಾಲಿ ಮಾಡತಾರ!" ಅಂತ  ಬೈದಿದ್ದಕ್ಕೆ, ಜಾನು ತನ್ನ ಹುಬ್ಬೇರಿಸಿ
"ನಮ್ಮ ಮನ್ಯಾಗ ಅಂಥ ಸಾಮಾನು ಏನೂ ಇಲ್ಲಾ ಬಿಡ್ರಿ. ಕಳ್ಳರು ಬಂದ್ರ ಅವ್ರಿಗೆ ಏನೂ ಸಿಗೂದಿಲ್ಲ." ಅಂದಾಗ ಟ್ರ್ಯಾಕು ಬದಲಿಸುವ ಅವಶ್ಯಕತೆ ಉಂಟಾಗಿ.
"ಅಂಧಂಗ ನಾವು ಹೊಂಟಿದ್ದು ನಿನ್ನ ಅಪ್ಪ ಅಮ್ಮಗ ಹೇಳಿದಿಲ್ಲೊ?" ಅನ್ನುವ ದಡ್ಡತನದ ಪ್ರಶ್ನೆಯೊಂದನ್ನು ಕೇಳಿದನು. ಆಯಾ ದಿನದ ಅಡಿಗೆಯಲ್ಲಿ ಏನು ಮಾಡಿದ್ದೇನೆಂಬುದರಿಂದ ಹಿಡಿದು ಕೆಲಸದವಳು ಇವತ್ತು ಬಂದಿಲ್ಲ ಅನ್ನುವ ಪ್ರತಿಯೊಂದು ವಿಷಯಗಳನ್ನು ಅಮ್ಮನಿಗೆ ಚಾಚುತಪ್ಪದೆ ವರದಿ ಒಪ್ಪಿಸುವ ಜಾನು ವಿದೇಶ ಪ್ರಯಾಣದಂತಹ ದೊಡ್ಡ ವಿಷಯವನ್ನು ಅವರಮ್ಮನಿಗೆ ಹೇಳಿರುವುದಿಲ್ಲವೆ? ಆ ತರಹದ ಪ್ರಶ್ನೆ ಕೇಳುವುದು ದಡ್ಡತನವಲ್ಲದೆ ಮತ್ತೇನು?!    
"ನಿನ್ನೆನ ಹೇಳೇನಿ. ನಾಳೆ ಎಲ್ಲಾರೂ ಬರ್ಲಿಕತ್ತಾರ. ಒಂದ ವಾರ ಇಲ್ಲೇ ಇದ್ದು ನಮ್ಮನ್ನ ವಿಮಾನದಾಗ ಕುಡಿಸಿದ ಮ್ಯಾಲೇ ಊರಿಗೆ ವಾಪಸ್ಸು ಹೋಗ್ತಾರಂತ" ಅಂದಳು.
"ಎಲ್ಲಾರು ಅಂದ್ರ?!" ವೆಂಕಣ್ಣ ಉಗುಳು ನುಂಗುತ್ತ ಕೇಳಿದ.
"ಅಪ್ಪಾ, ಅಮ್ಮಾ, ಇಬ್ಬರೂ  ಅಣ್ಣಂದರು, ಅತ್ತಿಗೆಂದರು ಮತ್ತ ಅವರ ಮಕ್ಕಳು."
"ಒಹ್ ಹೌದಾ?! ಭಾರಿ ಆತಲ್ಲ!" ಅಂತ ಹೇಳಿ, ತನಗಾಗದ ಖುಷಿಯನ್ನು ತೋರಿಸುವ ವ್ಯರ್ಥ ಪ್ರಯತ್ನ ಮಾಡಿ, ಮುಖವನ್ನು ಅರಳಿಸಲು ಸಾಧ್ಯವಾಗದೆ ಬೇರೆ ಕಡೆ ಹೊರಳಿಸಿದ! 
’ಒಂದು ವಾರ ಇಕಿ ತೌರುಮನಿಯವ್ರು ಇಲ್ಲೆ ಟೆಂಟ್ ಹೊಡದರ ಸುದ್ದ ಆತು’ ಅಂತ ಸ್ವಗತದಲ್ಲೆ ಹೇಳಿಕೊಂಡ. ಹೆಂಡತಿಯೆದುರು ಹೇಳಿಕೊಳ್ಳುವ ಧೈರ್ಯಶಾಲಿ ಗಂಡ ಇವನಲ್ಲವಲ್ಲ.
ಅಂತೂ ಇಂತೂ ಇವನು ಅಮೆರಿಕಾಕ್ಕೆ ಹೋಗುವ ಸುದ್ದಿ ಎಲ್ಲಾ ದಿಕ್ಕಿನಲ್ಲೂ ವಿಚಿತ್ರ ರೀತಿಯಲ್ಲಿ ಪಸರಿಸತೊಡಗಿತು. ಹೀಗಿರುವಾಗ ಒಂದು ದಿನ ಇವನ ಫೋನು ರಿಂಗಣಿಸಿ ಹೆಲೋ ವೆಂಕಟ್ ಹಿಯರ್ ಅಂದವನಿಗೆ. 
"ಮತ್ತೇನಪಾ ದೋಸ್ತ, ಭಾರಿ ಧೊಡ್ಡ ಮನಶ್ಯಾ ಆಗಿ ಬಿಡು. ನಾವ ಫೋನ್ ಮಾಡಬೇಕ್ ನೋಡು ನಿನಗ. ನೀನಂತೂ ಮರ್ತಬಿಟ್ಟಿ ನಮ್ಮನ್ನ. ನಾನು ನಿನ್ನ ಗೆಳೆಯಾ ರವಿ ಅನ್ನೋದರೆ ನೆನಪದನೊ ಇಲ್ಲೊ…" ಅಂತ ಬಹಳ ದಿನಗಳ ಮೇಲೆ ಫೋನ್ ಮಾಡಿದ್ದರಿಂದ ಮತ್ತೆ ತನ್ನ ಪರಿಚಯವನ್ನು ಮಾಡಿಕೊಂಡ ಇವನ ಗೆಳೆಯ. ಅದು ಇದು ಮಾತನಾಡಿ ’ಅಮೇರಿಕಾಕ್ಕ ಹೊಂಟಿಯಂತ ಸುದ್ದಿ ಬಂತು…’ ಅಂತ ಅವನಂದಾಗ, ವೆಂಕಣ್ಣ ಹುಷಾರಾದ!
"ಹೌದಪಾ ಒಂದ ತಿಂಗಳಿಗೆ ಹೊಂಟಿನಿ" ಅಂದ.
"ಏ ಅಂಧಂಗ ಅಲ್ಲೆ ಲ್ಯಾಪ್ ಟಾಪ್ ಭಾರಿ ಸಸ್ತಾದಾಗ ಸಿಗತಾವಂತ ಕೇಳ್ದೆ. ನನಗೊಂದು ತೊಗೊಂಬಾ. ಹಂಗ ಒಂದು ಬಾಟಲ್ ವಿಸ್ಕಿನೂ ತೊಗೊಂಡು ಬಾರಪಾ. ಒಮ್ಮೆರೆ ಫಾರಿನದ್ದು ಕುಡ್ಯೋಣಂತ." ಅಂದ. ಗೆಳೆಯ ಬಹಳ ದಿನಗಳ ಮೇಲೆ ಇವನನ್ನು ನೆನಪಿಸಿಕೊಂಡ ಉದ್ದೇಶ ಈಗ ಸ್ಪಷ್ಟವಾಗಿತ್ತು.
"ಆತು ತೊಗೊ ನೋಡೊಣಂತ. ಈಗ ನಂದ ಮೀಟಿಂಗ್ ಅದ, ಅಮ್ಯಾಲೆ ಫೋನ್ ಮಾಡ್ತೀನಿ." ಅಂತ ಹೇಳಿ ಕರೆಯನ್ನು ಮೊಟಕುಗೊಳಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ.
ಹೀಗೆ ಒಬ್ಬೊಬ್ಬರಾಗಿ, ಯಾರ್ಯಾರೊ ಫೋನ್ ಮಾಡಿ, ನನಗೆ ಅದು ಬೇಕು ಇದು ಬೇಕು ಅಂತ ಕೇಳತೊಡಗಿ ಇವನ ಇಂಪೊರ್ಟೆಡ್ ವಸ್ತುಗಳ ಪಟ್ಟಿ ಉದ್ದವಾಗತೊಡಗಿತು! ಅಮೇರಿಕಾದಲ್ಲಿ ಸಿಗೋದೆ ’ಮೇಡ್ ಇನ್ ಚೈನಾ’ ಸಾಮಾನುಗಳು. ಅದನ್ನ ಅಮೇರಿಕಾದಿಂದಲೇ ತರಿಸಿಕೊಳ್ಳಬೇಕೆಂಬ ಜನರ ಬಯಕೆ ಕಂಡು ಬೆರಗಾದನವನು. 
ಇವನ ಇನ್ನೊಬ್ಬ ಗೆಳೆಯ ಇವನ ಜೊತೆಗೆ ತನ್ನ ಸಂಕಟವನ್ನೂ ತೋಡಿಕೊಂಡ. ಏನಾಗಿತ್ತೆಂದರೆ, ಇವನು ತನ್ನ ಪರಿವಾರ ಸಮೇತ ಅಮೇರಿಕಾಕ್ಕೆ ಹೊರಟ ಸುದ್ದಿ ಕೇಳಿ ಆ ಗೆಳೆಯನ ಹೆಂಡತಿ,
"ವೆಂಕಣ್ಣನ್ನ ನೋಡಿ ಸ್ವಲ್ಪ ಕಲೀರಿ. ನಾವಂತೂ ಇಲ್ಲೆ ಭಾಂಡಿ ತೊಳಕೋತ ಕೂಡೊದ ಆತು. ನಾನು ಯಾವಾಗ ಅಮೇರಿಕಾ ಕಾಣತೇನೊ ಏನೊ. ಎಲ್ಲಾ ನಮ್ಮ ಕರ್ಮ" ಅಂತ ಅವನೊಂದಿಗೆ ಜಗಳ ಮಾಡಿದ್ದಳಂತೆ.
"ನೀ ಬರೆ ಇಂಥಾ ಬ್ಯಾಟಾ ಹಚ್ಚತಿ ನೋಡಪಾ. ನೀ ಮಾಡೊ ಕೆಲಸಕ್ಕ ಮನ್ಯಾಗ ನಾವ್ ಬೈಸಿಕೋಬೇಕು." ಅಂತ ಕೋಪಗೊಂಡಿದ್ದ ಇವನ ಮಿತ್ರ.
’ಇದೊಳ್ಳೆ ಕಥೆ ಆಯ್ತಲ್ಲ! ನನ್ನ ಹೆಂಡತೀನ ನಾ ಕರ್ಕೊಂಡು ಹೊಂಟ್ರ ಇವರಿಗೇನ್ ಸಮಸ್ಸೆ’ ಅಂತ ವೆಂಕಣ್ಣ ತಲೆ ಚಚ್ಚಿಕೊಂಡ.
ಇದೆಲ್ಲದರ ಜೊತೆಗೆ ಅಮೇರಿಕಾಕ್ಕೆ ಏನೇನು ಒಯ್ಯುವುದು ಅನ್ನುವ ಬಗ್ಗೆ ಜಾನು ತುಂಬಾ ತಲೆ ಕೆಡಿಸಿಕೊಂಡಳು. ತನ್ನ ಬಳಿ ಇದ್ದ ಬಟ್ಟೆಗಳೆಲ್ಲಾ ಅವಳಿಗೆ ತುಂಬಾ ಹಳೆಯದಾಗಿ ಕಾಣತೊಡಗಿ ಒಂದಿಷ್ಟು ಹೊಸ ಹೊಸ ಮಾಡರ್ನ್ ಬಟ್ಟೆಬರೆಗಳನ್ನು ತನಗೂ ತನ್ನ ಮಗಳಿಗೂ ಅಂತ ಖರಿದಿಸಿ ಇವನ ಕ್ರೆಡಿಟ್ ಕಾರ್ಡಿಗೆ ಕತ್ತರಿ ಹಾಕಿದಳು! ಕಾಯಿ ಪಲ್ಲೆಗಳನ್ನೊಂದು ಬಿಟ್ಟು ಉಳಿದೆಲ್ಲ ದಿನಸಿಗಳನ್ನೂ ಖರಿದಿಸಿ ಅಮೇರಿಕಾಕ್ಕೆ ಒಯ್ಯಲು ಪ್ಯಾಕ್ ಮಾಡಿಟ್ಟುಕೊಂಡಳು.
"ಅಲ್ಲೆ ಹೋಗಿ ಅಂಗಡಿ ಹಾಕು ವಿಚಾರದ ಏನ್ಲೆ? ಅಲ್ಲೆ ಎಲ್ಲಾ ಸಿಗತಾವು. ನಾವು ಮರಭೂಮಿಗೆ ಹೊಂಟಿಲ್ಲ" ಅಂತ ವೆಂಕಣ್ಣ ದಬಾಯಿಸಿದಾಗ,
"ನಿಮಗ ಗೊತ್ತಾಗಂಗಿಲ್ಲ ಸುಮ್ಮನಿರ್ರಿ, ಆಲ್ಲೆ ತೊಗೊಂಡ್ರ ದುಬಾರಿ ಆಗ್ತದ. ಅದೂ ಅಲ್ಲದ ಡಾಲರ್ ಕೊಟ್ಟು ಕೊಂಡಕೊಬೇಕು. ಇದಕ್ಕ ಎಲ್ಲಾ ರೊಕ್ಕಾ ಖರ್ಚು ಮಾಡಿದರ ಅಮ್ಯಾಲೆ ಅಲ್ಲೆ ಶಾಪಿಂಗ್ ಏನ್ ಮಾಡೋದು?" ಅಂತ ಹೇಳಿ, ಇವನ ಎದೆಯ ಕಂಪನಕ್ಕೆ ಕಾರಣಳಾದಳು.

ತೌರು ಮನೆಯವರೆಲ್ಲಾ ಬಂದದ್ದರಿಂದ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಯಾರಿಗೆ? ಜಾನುಗೆ! ವೆಂಕಣ್ಣನಿಗಲ್ಲ!! ಅಂತೂ ಹೊರಡುವ ದಿನ ಬಂದಾಗ ನಿಟ್ಟುಸಿರಿಟ್ಟ. ಟ್ಯಾಕ್ಸಿ ಯಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುತ್ತಿದ್ದಂತೆ "ವಿಮಾನಾಲಯ" ಅನ್ನುವ ಕನ್ನಡದಲ್ಲಿ ಬರೆಸಿಕೊಂಡ ಬೋರ್ಡು ಗೋಚರಿಸಿತು. ಅದನ್ನು ಕಂಡು, "ಅಪ್ಪಾ ವಿಮಾನಾಲಯ ಅಂದ್ರ ಏನ್ ಮೀನಿಂಗು?" ಅಂತ ಸೆಕೆಂಡ್ ಲ್ಯಾಂಗ್ವೇಜ್ ಕನ್ನಡಾ ಓದುತ್ತಿದ್ದ ಮಗಳು ಕೇಳಲಾಗಿ "ಹಂಗಂದ್ರ ಟರ್ಮಿನಲ್ ಅಂತ ಅರ್ಥ ಮಗಳ ಅಂತ ಹೇಳಿ, ಮೇಲೆರುತ್ತಿದ್ದ ವಿಮಾನವೊಂದನ್ನು ಟ್ಯಾಕ್ಸಿಯ ಕಿಟಕಿಯಿಂದಲೆ ನೆಟ್ಟ ದೃಷ್ಟಿಯಿಂದ ನೋಡತೊಡಗಿದನವನು.

Thursday, December 4, 2014

ರೆಡಿ ಸ್ಟೆಡಿ ಪೋ!

(ಪಂಜು  ಪತ್ರಿಕೆಯಲ್ಲಿ ಪ್ರಕಟವಾಗಿತ್ತು http://www.panjumagazine.com/?p=9375)

ಅವತ್ತಿನ ದಿನದಲ್ಲೇನು ಹೇಳಿಕೊಳ್ಳುವಂತಹ ವಿಶೇಷತೆಯಿರಲಿಲ್ಲ. ಪ್ರತಿದಿನದಂತೆ ಅವತ್ತೂ ಬೆಳಗಾಗಿತ್ತು, ವೆಂಕಣ್ಣ  ಎಂದಿನಂತೆ ಬಲ ಮಗ್ಗಲಲ್ಲೇ ಎದ್ದಿದ್ದ! ಅವನ ಹೆಂಡತಿ ಎಂದಿನಂತೆ ಅವತ್ತು ಕೂಡ ಇನ್ನೂ ಎದ್ದಿರಲಿಲ್ಲವಾದ್ದರಿಂದ, ಹಲವು ಬಗೆಯ ರಾಸಾಯನಿಕಗಳ ಆಗರವೆಂದು ಗೊತ್ತಿದ್ದೂ ಕೂಡ ಚಹಾ ಎನ್ನುವ ಕಷಾಯದ ವಿಷವನ್ನು ತನ್ನ ಕೈಯಾರೆ ಕುದಿಸಿಕೊಂಡ. ಎಷ್ಟಂದ್ರೂ ನಮಗೆ ಬೇಕಾದ ವಿಷವನ್ನು ನಾವೇ ಆರಿಸಿಕೊಳ್ಳಬೇಕೆಂದು ಹಿರಿಯರು ಹೇಳಿಬಿಟ್ಟಿದ್ದಾರಲ್ಲ! ಯಾಂತ್ರಿಕವಾಗಿ ಇತರ ಪ್ರಾತಃ ಕರ್ಮಗಳಿಗೂ ಮುಕ್ತಿಯನ್ನು ಕರುಣಿಸಿದ್ದ. ಹಿಂದಿನ ದಿನ ನೋಡಿದ್ದ ನಾಟಕದ ಪಾತ್ರವೊಂದು ಅವನ ತಲೆಯಲ್ಲಿ ಇನ್ನೂ ಗುಂಯ್ ಗುಡುವ ಕಾರ್ಯದಲ್ಲಿ ತೊಡಗಿತ್ತು....  ಏನೇ ಆದರೂ ಅವನು ಅವತ್ತು ಕೆಲಸಕ್ಕೆ ಹೋಗಲೇ ಬೇಕಿತ್ತು. ಪ್ರಳಯವಾದರೂ ಸರಿಯೇ, ಅವನ ಪ್ರಳಯಾಂತಕ ಬಾಸ್ ಗೆ ಇವನನ್ನು ಕಣ್ಣೆದುರಿಗೆ ಕಾಣದಿದ್ದರೆ ಸಮಾಧಾನವೇ ಇಲ್ಲವಲ್ಲ! ಅಷ್ಟು ಲವ್ವು!!

ಅಂತು ಆಫೀಸು ಮುಟ್ಟಿದಾ ಅನ್ನಿ. ಅಲ್ಲೂ ಏನಂಥ ವಿಶೇಷ ಬದಲಾವಣೆಗಳಿರಲಿಲ್ಲ. ಅವೇ ಅತೃಪ್ತ ಆತ್ಮಗಳು,  ತಾವೆ ತಮ್ಮ ಕೈಯ್ಯಾರೆ ಮಾಡಿಕೊಂಡಿದ್ದ ತಮ್ಮ ಸ್ವಂತ ತಪ್ಪು ನಿರ್ಧಾರಗಳಿಂದ ಹೀಗಾಯಿತು ಅಂತ ಪರಿತಪಿಸುತ್ತ, ಇತ್ತ ಕೆಲಸ ಬಿಟ್ಟು ಓಡಿ ಹೋಗಲೂ ಆಗದೇ, ಖುಷಿಯಿಂದ ಕೆಲಸ ಮಾಡಲೂ ಮನಸ್ಸಿಲ್ಲದೆ, ಅಂತರ್ ಪಿಶಾಚಿಗಳಂತೆ ಅಲೆದಾಡುವ ದೃಶ್ಯ ಎಂದಿನಂತೆ ಮಾಮೂಲಿಯಾಗಿತ್ತು. ಆದರೆ ಇವನ ಬಾಸ್ ನ ಮುಖ ಮಾತ್ರ ಮಾಮೂಲಿಯಂತೆ ಸಪ್ಪೆಯಾಗಿರದೆ ಲವಲವಿಕೆಯಿಂದ ತುಂಬಿ ತುಳುಕುತ್ತಿದ್ದುದು ಇವನಿಗೆ ಸ್ವಲ್ಪ ಕುತೂಹಲಕಾರಿಯಾಗಿತ್ತು! ಬಾ ಅಂತ ಸನ್ನೆ ಮಾಡಿ ಕರೆದಾಗಲಂತೂ ಬಹುಷಃ ಅವರು ಕೆಲಸಕ್ಕೆ ರಾಜಿನಾಮೆ ಕೊಟ್ಟಿರಬಹುದೆ? ಅಂತ ಯೋಚನೆ ಬಂದು ಪುಳಕಗೊಂಡು ಅವರ ಬಳಿ ಹೋಗಲಾಗಿ...
Good news! ಅಂದ್ರು! ತಾವು ರಾಜಿನಾಮೆ ಕೊಟ್ರೆ ತನಗೆ ಖುಷಿ ಅಂತ ಇವರಿಗೆ ಹೇಗೆ ಗೊತ್ತಾಯ್ತು ಅಂತ ಇವನು ಬೆರಗು ಗಣ್ಣಿನಿಂದ ನೋಡುತ್ತಿರುವಂತೆ ...
ಅಮೇರಿಕಾಕ್ಕೆ ಕರೀತಿದ್ದಾರೆ ರೆಡಿ ಆಗಿ! ಅನ್ನಬೇಕೆ? ಅದನ್ನು ಕೇಳುತ್ತಲೆ ಇವನು ಖಿನ್ನನಾದ! ಅದಕ್ಕೆ ಕಾರಣಗಳು ಎರಡು. ಬಾಸ್ ರಾಜಿನಾಮೆ ಕೊಡುತ್ತಿರಬಹುದೆಂಬ ತನ್ನ ಊಹೆ ಸುಳ್ಳಾಗಿದ್ದು ಒಂದು! ಇನ್ನೊಂದೆಂದರೆ,  ಬುರ್ಗರ್ ವಾಸ್ನೆ ನೆನಪಾಗಿ!  ಯಾಕಂದ್ರೆ ಕೊನೇ ಬಾರಿ ಅಲ್ಲಿಗೆ ಹೋಗಿದ್ದಾಗ ಸಸ್ಯಾಹಾರಿಯಾಗಿದ ಇವನು ಬೇರೆ ಗತಿಯಿಲ್ಲದೆ, ಹೋದಲ್ಲಿ ಬಂದಲ್ಲಿ ಸುಲಭವಾಗಿ ಸಿಗುತ್ತಿದ್ದ ಬರ್ಗರ್ ತಿಂದು ತಿಂದು, ವಾಪಸ್ಸು ಭಾರತಕ್ಕೆ ಬಂದ ಮೇಲೆ, ಅದನ್ನು ತಿನ್ನುವುದೇ ಬಿಟ್ಟಿ ಬಿಟ್ಟಿದ್ದ. ಅಷ್ಟು ವಾಕರಿಕೆ ಬಂದಿತ್ತು. ಅವನ ಮೂಗಿನಲ್ಲಿ ಅದರ ವಾಸನೆ ಇನ್ನೂ ತಾಜಾ ಇತ್ತು! 
ಯಾಕೆ? ಸಡನ್ನಾಗಿ ಡಿಪ್ರೆಸ್ಸ್ ಆದ್ರೀ? ಅಂತ ಕಂಗ್ಲಿಷ್ ಪಂಡಿತರಾದ ಅವನ ಬಾಸು ಕೇಳಲಾಗಿ.
ನನಗೆ ಹೋಗಲು ಇಷ್ಟವಿಲ್ಲ ಅಂತರುಹಿ ಸೂರನ್ನು ದಿಟ್ಟಿಸುತ್ತ ನಿಂತ. ಅವರು ಇವನಿಂದ ಇಂತಹ ಅಧಿಕ ಪ್ರಸಂಗಿ  ಉತ್ತರವನ್ನು ನಿರೀಕ್ಷಿಸಿರಲಿಲ್ಲವೇನೋ...
ಕಮಾನ್ ಮ್ಯಾನ್! ಎಲ್ರೂ ಅಲ್ಲಿ ಹೋಗೋಕೆ ಸಾಯ್ತಾರೆ. ನೀವೇನ ಹಿಂಗ್ ಅಂತೀರ? ಹೋಗ್ತೀರೊ ಇಲ್ವೋ ಅಂತ ನಾ ಕೇಳಿಲ್ಲ. ನೀವು ಹೋಗ್ಲೆ ಬೇಕು, ಇದು ತುಂಬಾ ಇಂಪಾರ್ಟಂಟ್ ಪ್ರಾಜೆಕ್ಟು ನಮಗೆ. ಅದೂ ಅಲ್ದೆ ಕಸ್ಟಮರ್ರೆ ಕರೆತಿದ್ದಾರ್ರಿ, ನೀವೆ ಬರ್ಬೇಕಂತೆ ಅವ್ರಿಗೆ!
ಓಹೊ! ಇದು ವ್ಯವಸ್ಥಿತ ಸಂಚು! ತಮಗೆ ಬೇಕಾದ ಕುರಿಯನ್ನು ಅವರೆ ಆರಿಸಿಕೊಂಡಿದ್ದರು ಇವನ ಕಷ್ಟಮಾರಾಯ್ರು (customer).

ಬಾಸ್ ನ ನಿರ್ಧಾರ ಅಚಲವಾಗಿತ್ತು. ಕೋಳಿ ಕೇಳಿ ಯಾರಾದರೂ ಸಾಂಬಾರ ಅರಿಯುತ್ತಾರೆಯೇ? ಆದರೂ ತನ್ನ ನಖರಾ ತೋರಿಸಲು ಒಂದು ದಿನದ ಸಮಯ ತೆಗೆದುಕೊಂಡ. 


ಈ ಸಲ ಪರಿವಾರ ಸಮೇತನಾಗಿ ಹೋದರೆ ಹೇಗೆ ಅನ್ನುವ ಒಂದು ಯೋಚನೆ ಬಂತು. ಮನೆಗೆ ಹೋಗಿ ಜಾನುಗೆ ಆ ವಿಚಾರ ಹೇಳಲಾಗಿ ಅವಳು ಮನಸ್ಸಿದ್ದರೂ, ಒಲ್ಲೆ ಒಲ್ಲೆ ಅನ್ನುತ್ತಲೇ ಹೂಂ ಗುಟ್ಟಿದಳು!
  
ಮರುದಿನ ಬಾಸಿಗೆ ತಾನು ತನ್ನ ಹೆಂಡತಿ ಮಗಳನ್ನೂ ಕರೆದುಕೊಂಡು ಹೋಗಲು ಒಪ್ಪುವುದಾದರೆ ನಾ ಹೋಗಲು ಸಿದ್ಧ, ಅಂದಿದ್ದಕ್ಕೆ 'ನಿಮ್ಮ ಹೆಂಡ್ತಿನ್ನ ನಿಮ್ಮ ಜೊತೆ ಕರ್ಕೊಂಡು ಹೋಗಲು ಬೇಡಾ ಅನ್ನಲು ನಾನ್ಯಾರ್ರೀ!?' ಅಂತಂದು ತಮ್ಮ ಅದ್ಭುತ ಜೋಕಿಗೆ ಪಕ ಪಕ ಅಂತ ನಕ್ಕರು. ಆದರೆ ಮುಂದಿನ ಕ್ಷಣವೇ ಗಂಭೀರವಾಗಿ ನಿಮ್ಮ ಮನೆಯವರ ಟಿಕೇಟ್ ಖರ್ಚು ನೀವೇ ನೋಡ್ಕೋಬೇಕು ಅಂದ್ರು. ಅದಕ್ಕೆ ನಗಬೇಕೋ ಅಳಬೇಕೋ ಗೊತ್ತಾಗದ ವೆಂಕಣ್ಣ ಸುಮ್ಮನೆ ಕೈಕಟ್ಟಿಕೊಂಡು ನಿಂತಿದ್ದನ್ನು ಅವನ ಟೀಮಿನ ಹುಡುಗಿ ನೋಡಿದ್ದಂತು ನಿಜ!

ಬರುತ್ತೇನೆ ಅಂದಾಗ ಬಾ ಅಂತ ಬರಸೆಳೆದುಕೊಳ್ಳುವ ದೇಶವಂತೂ ಅಲ್ಲಾ ಅದು. ಎಲ್ಲರೂ ತನ್ನ ದೇಶಕ್ಕೆ ಬರಲು ಹಪಹಪಿಸುತ್ತಾರೆ, ಹಾಗೆ ಬಂದವರು ತಮ್ಮ ದೇಶದಲ್ಲೇ ಬೇರು ಬಿಡುತ್ತಾರೆ ಎಂದು ಅನವಶ್ಯಕವಾದ ತಪ್ಪು ನಂಬಿಕೆಯಲ್ಲಿರುವ,  ದೇಶವದು! ಅಲ್ಲಿಗೆ ಹೋಗಲೇ ಮನಸ್ಸಿಲ್ಲದ ವೆಂಕಣ್ಣನಂತವರೂ ಇರುವರೆನ್ನುವ ವಿವೇಕವಿಲ್ಲವೇ ಆ ದೇಶಕ್ಕೆ? ಅದರೂ ಬೇಲಿ ಹಾರಿ ಬಂದವರಿಗೆಲ್ಲಾ ಜೀವನಕ್ಕೆ 'ಅಧಾರ' ಮಾಡಿಕೊಡುವ ಭಾರತೀಯರಷ್ಟು ಉದಾರಿಗಳೆ ಅವರು?

ಇವನ ತಯ್ಯಾರಿ ಶುರುವಾಗಿತ್ತು. ಇವನ ವೀಸಾ ಮೊದಲೇ ಇತ್ತಾದರೂ ಹೆಂಡತಿ ಮಗಳದು ಮಾಡಿಸಬೇಕಿತ್ತು. ಏಜಂಟೊಬ್ಬಳ ಬಳಿ ಹೋಗಲಾಗಿ, ಅಮೇರಿಕಾದವ್ರು  ವೀಸಾ ದಯಪಾಲಿಸಬೇಕೆಂದರೆ ಏನೇನು ತಯಾರಿ ಬೇಕೆಂದು ಅವಳು ಖಡಾ ಖಂಡಿತವಾಗಿ ಇಂಗ್ಲೀಷಿನಲ್ಲೇ ಹೇಳತೊಡಗಿದಳು. ಆ ಪ್ರೂಫು ಈ ಪ್ರೂಫು ಅಂತೆಲ್ಲಾ ಹೇಳಿ ಬ್ಯಾಂಕಿನಲ್ಲಿರುವ ಎಲ್ಲಾ ಡೆಪಾಸಿಟ್ಟು ತೋರಿಸ್ಬೇಕು ಅಂದು ಇವನ ಕಣ್ಣುಗಳು ಉಪೇಂದ್ರನ ಶೈಲಿಯಲ್ಲಿ ತಿರುಗುವ ಹಾಗೆ ಮಾಡಿದಳು. ಇವನಿಗೆ ಕೆಂಡದಂಥ ಕೋಪ ಬಂತು. ಇದೆಲ್ಲಾ ಯಾಕೆ ತೋರಿಸಬೇಕು ಅನ್ನೊ ಸಿಟ್ಟು ಒಂದಾದರೆ, ಇದ್ದ ಬದ್ದ ದುಡ್ಡನ್ನೆಲ್ಲಾ ಹಾಕಿ  ಹೆಂಡತಿ ಮಗಳನ್ನು  ಅಮೇರಿಕಾ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಇಲ್ಲದ ಡೆಪಾಸಿಟ್ಟು ಎಲ್ಲಿಂದ ತೋರಿಸುವುದು ಅಂತ! ಆದ್ರೂ ಏಜಂಟ್ ಬಳಿ ಅದೆಲ್ಲ ಹೇಳೋಕಾಗುತ್ತದೆಯೆ? ಏನೇನಿದೆಯೋ ಅದನ್ನು ತೋರಿಸಿದರಾಯ್ತು ಅಂತ ಸುಮ್ಮನಾದ. ಎಲ್ಲಾ ತಯ್ಯಾರಿ ಮಾಡಿಟ್ಟುಕೊಂಡು, ವೀಸಾ ಸಂದರ್ಶನ ಚೆನ್ನೈ ನಲ್ಲಿ ನಿಗದಿಯಾದ ಹಿಂದಿನ ದಿನ ಕಾರಿನಲ್ಲಿ ಪರಿವಾರ ಸಮೇತ ಹೊರಟ. ಕಾರಿನಲ್ಲಿ ಹೋದರೆ ಕೆಲಸ ಮುಗಿದ ತಕ್ಷಣ ಬೆಂಗಳೂರಿಗೆ ಬಂದು ಬಿಡಬಹುದಲ್ಲ ಅನ್ನುವ ದೂರ ದೃಷ್ಟಿ ವೆಂಕಣ್ಣನದು!


ದಾರಿಯಲ್ಲಿ ಕಾಂಚಿಪುರಮ್ ಅನ್ನುವ ಸೀರೆ ಮಾರಾಟಕ್ಕೆ ಪ್ರಸಿದ್ಧಿ ಪಡೆದ ಊರನ್ನು ಕಂಡ. ಜಾನುಗೆ, ಬೇಕಾದರೆ ನಿನಗೊಂದು ಸೀರೆ ತೊಗೋಳೋದಿದ್ರೆ ತೊಗೊ ಅಂತ ಹೇಳುವಾಗ, ಅದು ತನ್ನ ಜೀವನದ ಅಸಂಖ್ಯಾತ ತಪ್ಪು ನಿರ್ಧಾರಗಳಲ್ಲಿ ಇನ್ನೊಂದಾದೀತು ಅನ್ನುವ ಕಲ್ಪನೆ ಅವನಿಗಿರಲಿಲ್ಲ! ಆ ಊರೊಳಗೆ ತಲಪುತ್ತಲೇ ಒಳ್ಳೆಯ ಸೀರೆ ಅಂಗಡಿ ಎಲ್ಲಿದೆ ಅಂತ ಒಬ್ಬ ಹುಡುಗನಿಗೆ ಕೇಳಿದ. ಅವನು ತಮಿಳಿನಲ್ಲೇನೋ ಹೇಳಿದ. "ತಮಿಳು ತೆರಿಯಾದು" ಅಂದನಿವನು. ಇವಗೆ ಗೊತ್ತಿದ್ದ ತಮಿಳು ಅಷ್ಟೆ! "ತಮಿಳ ತೆರಿಯಾದಾ?" ಅಂದ ಹುಡುಗ ಮತ್ತೆ ತಮಿಳಿನಲ್ಲೇ ಮಾತಾಡಿದ. ಅವನ ಭಾಶಾಭಿಮಾನಕ್ಕೊಂದು ಮೆಚ್ಚಿಗೆಯ ನಗೆ ನಕ್ಕು ಮುಂದೆ ಸಾಗಿದ. ಮತ್ತೆ ತಮ್ಮ ಅದೃಷ್ಟ ಪರೀಕ್ಷಿಸಲು ಇನ್ನೊಬ್ಬನ ಕೇಳಲಾಗಿ ಮತ್ತೆ ತಮಿಳು ಕಿವಿಗಪ್ಪಳಿಸಿ, ಇವನು ನಿರಾಸೆಯಿಂದ ಮತ್ತೆ "ತೆರಿಯಾದು" ಅನ್ನಲಾಗಿ ಆ ಮನುಷ್ಯ "ಬೆಂಗಳೂರಾ? ಕನ್ನಡ ಮಾತಾಡ್ತೀರಾ?" ಅಂಥೆಳಿ ಇವನ ಕಿವಿಯಲ್ಲಿ  ಜೀವ ತರಿಸಿದ!

ಅವನೇ ಖುದ್ದಾಗಿ ಅಲ್ಲೊಂದು ಸೀರೆ ಅಂಗಡಿಗೆ ಕರೆದೊಯ್ದ. ಅಲ್ಲೂ ಸುಮಾರು ಜನ ಕನ್ನಡ ಮಾತಾಡುತ್ತಿದ್ದರು. ಅಲ್ಲಿ ತುಂಬಾ ಕನ್ನಡಿಗರು ಸೀರೆ ಕೊಳ್ಳಲು ಬರುತ್ತಿದ್ದುದಕ್ಕೆ ಕನ್ನಡ ಮಾತಾಡುವವರು ಜಾಸ್ತಿ ಇರಬೇಕೆ? ಅಥವ ಗಡಿಯಲ್ಲಿದ್ದುದಕ್ಕೆ ಹೀಗಿರಬಹುದೆ? ಅದೇನೆ ಇರಲಿ, ಇವನ ಹೆಂಡತಿ ಮಾತ್ರ ತನಗೊಂದಲ್ಲದೆ ಅಮ್ಮನಿಗೆ, ಚಿಕ್ಕಮ್ಮಗಳಿಗೆ, ಆಪ್ತ ಗೆಳತಿಯರಿಗೆ ಅಂಥೇಳಿ ಹತ್ತು ಸೀರೆ ತೊಗೊಂಡು, ತಮಿಳುನಾಡಿನಲ್ಲಿ ಕನ್ನಡ ಕೇಳಿ ಕುಣಿದಾಡುತ್ತಿದ್ದ ಇವನೆದೆಯ ಝಲ್ ಎನಿಸಿದಳು! ಸೀರೆಗಳ ಗಂಟು ಕಾರಿನಲ್ಲಿ ಒಟ್ಟಿಕೊಂಡು ಮತ್ತೆ ಇವರ ಪಯಣ ಮುಂದುವರಿದು ರಾತ್ರಿಗೆ ಚೆನ್ನೈ ತಲುಪಿದರು. ಕೊತ ಕೊತ ಕುದಿಯುವ ಸೆಕೆಯಲ್ಲಿ ಬೆವೆತು ಮಿಂದವರಿಗೆ ರಾತ್ರಿ ಹವಾನಿಯಂತ್ರಿತ ಹೋಟೇಲಿನಲ್ಲಿ ಮಲಗಿದ್ದೊಂದೇ ನೆನಪು!

ಬೆಳಿಗ್ಗೆ ಎದ್ದು ಅಮೇರಿಕಾದ ವೀಸಾ ಕಚೇರಿಗೆ ಹೋದವರಿಗೆ ಸ್ವಾಗತಿಸಿದ್ದು ಉದ್ದನೆಯ ಪಾಳಿ.  ಹೆಚ್ಚು ಕಡಿಮೆ  ಸಂಜೆಯವರೆಗೆ ಸುಡು ಬಿಸಿಲಿನಲ್ಲಿ ಬೆಂದದ್ದಾಯ್ತು. ಎಲ್ಲ ಕೈ ಬೆರಳುಗಳ  ಮುದ್ರಣವನ್ನು ದಾಖಲಿಸಿಕೊಂಡರು. ಮರುದಿನ ಮತ್ತೊಂದು ಕಡೆಗೆ ಇನ್ನೂ ಉದ್ದದ ಪಾಳಿ. ಅಲ್ಲೆಲ್ಲಾ ದಾಖಲೆಗಳ ಪರಿಶೀಲಿಸಿದ ಅಮೇರಿಕದವರು ನೀವು ಹೋಗಲು ಅಡ್ಡಿ ಇಲ್ಲ ಅಂತ ಸೀಲು ಹೊಡೆದು ಅಸ್ತು ಅಂದಾಗ ಸುಸ್ತಾಗಿ ಹೋಗಿದ್ದರಿವರು. 
 
ಅಲ್ಲಿಂದ ತಿರುಗಿ ಬೆಂಗಳೂರಿಗೆ ಪ್ರಯಾಣಿಸುವಾಗ ದಾರಿಯಲ್ಲಿ ವೆಂಕಣ್ಣ ಯೋಚನೆಗೆ ಬಿದ್ದಿದ್ದ. ನಾವು ವಾಪಸ್ಸು ಬಂದೇ ಬರುತ್ತೇವೆ, ನಮ್ಮನ್ನು ನಂಬಿ ಅಂತ ಇಷ್ಟೊಂದು ಗೋಗರೆದು ವೀಸಾ ಪಡೆಯಬೇಕೆ? ಈ ಪರಿಯ ಕಷ್ಟ ಪಟ್ಟು ಅವರ ಒಂದು ಸೀಲಿಗೆ ಕಾಯಬೇಕೆ? ಇಲ್ಲಿ ವೀಸಾ ಸಿಕ್ಕಿತೆಂದ ಮಾತ್ರಕ್ಕೆ ಆ ದೇಶಕ್ಕೆ ಹೋದಾಗ ಒಳಗೆ ಬಿಡುವರೆಂಬ ಭರವಸೆಯೂ ಇಲ್ಲಾ. ಯಾವುದೋ ಕಾರಣಕ್ಕೆ ಅವರಿಗೆ ಬೇಡವೆನಿಸಿದರೆ,  ಅಮೇರಿಕಾ ಪ್ರವೇಶಿಸುತ್ತಿದ್ದಂತೆಯೇ ಭಾರತಕ್ಕೆ ವಾಪಸ್ಸು ಕಳಿಸುವ ಸಾಧ್ಯತೆಗಳೂ ಇರುತ್ತವೆ. ಮೂವತ್ತಕ್ಕೂ ಹೆಚ್ಚು ಗಂಟೆಗಳ ಕಾಲ ಪಯಣಿಸಿ ಮತ್ತೆ ಅಷ್ಟೇ ಗಂಟೆಗಳ ಪ್ರಯಾಣ ಮಾಡಿ ವಾಪಸ್ಸು ಬರುವುದೆಂದರೆ? ಅದೇನು ತಮಾಷೆಯೇ? ಇಷ್ಟೆಲ್ಲಾ ಕಾರಣಗಳಿಂದ ತಾನು ಆ ದೇಶಕ್ಕೆ ಯಾಕೆ ಹೋಗಬೇಕು ಅನ್ನುವ ಪ್ರಶ್ನೆ ಅವನಲ್ಲಿ ಬಲವಾಗಿ ಕಾಡತೊಡಗಿ ಅಲ್ಲಿಗೆ ಹೋಗುವದೇ ಬೇಡವೆನಿಸಿತವನಿಗೆ. ಬಾಸ್ ಗೆ ಏನೋ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುವುದೆಂದು ನಿರ್ಧರಿಸಿದ.    

ಹೀಗೆ ತೀರಾ ಯೋಚನೆಯಲ್ಲಿ ಮಗ್ನನಾದವನನ್ನು ಮಗಳು ತಿವಿದು ಎಚ್ಚರಿಸಿ ಕೇಳಿದಳು 
'ಅಪ್ಪಾ ಅಲ್ಲಿ ಸ್ನೋ ಇರ್ತದ ಅಂತ ಹೇಳಿದ್ದ್ಯಲ್ಲಾ? ಎಷ್ಟ ಮಜಾ ಬರ್ತದ. ನಂಗ ಸ್ನೋ ದಾಗ ಆಡಲಿಕ್ಕೆ ಕರಕೊಂಡು ಹೋಗ್ತಿಯಲ್ಲಾ?'
ಇವನು ಅದಕ್ಕೆ ಏನು ಹೇಳುವುದೆಂದು ತಿಳಿಯದೇ ಪೇಚಾಡುತ್ತಿರುವಾಗಲೇ  ಜಾನು  
'ಅಂತೂ ವೀಸಾ ಸಿಕ್ತು. ಎಲ್ಲಾರಿಗೂ ಫೋನ್ ಮಾಡಿ ಹೇಳಬೇಕು.  ಇನ್ನೂ ಏನೂ ಪ್ಯಾಕಿಂಗ್ ಮಾಡಿಲ್ಲಾ. ಭಾಳ ಕೆಲಸಾ ಬಾಕಿ ಅವ ....' ಅಂತ ತನ್ನ ಉಳಿದಿರುವ ಕೆಲಸಗಳ ಪಟ್ಟಿ ಮಾಡತೊಡಗಿದಳು.  
ಅದರರ್ಥ, ಜಾನು ಮತ್ತು ಮರಿ ಜಾನು ಇಬ್ಬರೂ ಅಲ್ಲಿಗೆ ಹೋಗುವುದಕ್ಕೆ ಆಗಲೇ ಸಿದ್ಧರಾಗಿದ್ದರು. ಅವರ ಉಮೇದಿ ಕಂಡು ವೆಂಕಣ್ಣನಿಗೆ ಆಶ್ಚರ್ಯವಾಗಿತ್ತು.  ಅವರಿಗೋಸ್ಕರವಾದರೂ ತನ್ನ 'ಅಲ್ಲಿಗೆ ಹೋಗುವುದು ಬೇಡಾ' ಅನ್ನುವ ನಿರ್ಧಾರ ಬದಲಿಸಲೇ ಬೇಕಾಗಿತ್ತು. ಅವರಿಗೂ ಬೇರೊಂದು ದೇಶವನ್ನು ನೋಡಿದಂತಾಗುತ್ತೆ. ಅಲ್ಲದೇ ತಾನೊಬ್ಬ ಕೋಪದಿಂದ ಅಲ್ಲಿಗೆ ಹೋಗದಿದ್ದರೆ ಆ ದೇಶಕ್ಕೇನು ವ್ಯತ್ಯಾಸವಾದೀತು? ಅಲ್ಲಿಗೆ ಹೋಗಲು ಇನ್ನೂ ಒಂದೆ ವಾರ ಬಾಕಿ ಇತ್ತು. ಯಾವುದೇ ತಯ್ಯಾರಿಗಿಂತಲೂ ಮಾನಸಿಕವಾಗಿ ಸಿಧ್ಧವಾಗುವುದು ಅತೀ ಮುಖ್ಯವಾಗಿತ್ತು. ಕಾರಿನ ಡೆಕ್ಕಿನಲ್ಲಿ ಚೆನ್ನೈ ಎಕ್ಸ್ಪ್ರೆಸ್ಸ್ ಸಿನೆಮಾದ "ರೆಡಿ ಸ್ಟೆಡಿ ಪೊ ಪ್ಪೊ ಪ್ಪೊ ಪ್ಪೊ" ಹಾಡು ಸಾಂದರ್ಭಿಕವೆನಿಸುತ್ತಿತ್ತು!   
 

Monday, September 29, 2014

ವಿಸ್ಮಯದ ಮಾಯಾಲೋಕ!

(http://www.panjumagazine.com/?p=8609)

ಕಾರ್ಪೊರೇಟ್ ಜಗತ್ತಿನಲ್ಲಿ, ವರ್ಷಕ್ಕೊಮ್ಮೆಯೋ, ಎರಡು ಸರ್ತಿಯೋ ಟೀಮ್ ಔಟಿಂಗ್ (team outing) ಅಂತ ಮಾಡುತ್ತಾರೆ. ಒಂದು ದಿನದ ಮಟ್ಟಿಗೆ ಕಚೇರಿಯ ಸಹೋದ್ಯೋಗಿಗಳೆಲ್ಲರೂ ಬೆಂಗಳೂರಿನಿಂದ ಸ್ವಲ್ಪ ಹೊರ ವಲಯದಲ್ಲಿರುವ ರಿಸಾರ್ಟ ಒಂದರಲ್ಲಿ ಕಾಲ ಕಳೆದು ಬರುತ್ತಾರೆ. ಅಲ್ಲಿ ಆಟವಾಡಿಸುತ್ತಾರೆ, ಅಬ್ಬರದ ಸಂಗೀತವಿರುತ್ತೆ, ನೃತ್ಯವಿರುತ್ತೆ. ತಮ್ಮ ಒತ್ತಡದ ಕೆಲಸದ ಮಧ್ಯೆ ದಣಿದ ಜೀವಗಳಿಗೆ ಒಂದಿಷ್ಟು ವಿರಾಮ ಕೊಡಿಸುವ ಪ್ರಯತ್ನ ಅದು. ಅದರ ಘೋಷಣೆಯಾಗುತ್ತಲೇ ಎಲ್ಲರಿಗೂ ಖುಷಿ, ಇನ್ನೂ ಕೆಲವು ಆತ್ಮಗಳಂತೂ ಸಂತಸದಿಂದ ಅರಳುತ್ತವೆ. ಆ ಆತ್ಮಗಳ ನೆಲೆಯಾಗಿರುವ ದೇಹಗಳಿಗೊಂದು, ವಿಶಿಷ್ಠವಾದ ಅವಕಾಶ ಆ ಔಟಿಂಗಿನ ನೆಪದಲ್ಲಿ ಲಭ್ಯವಾಗುತ್ತದೆ. ಅದು ಕಂಠ ಪೂರ್ತಿ ಮದ್ಯಪಾನ ಮಾಡುವ ಒಂದು ಸುವರ್ಣ(?) ಅವಕಾಶ. ಒಟ್ಟಿನಲ್ಲಿ ಎಲ್ಲಾ ಆತ್ಮಗಳ ಸಂತೃಪ್ತಿಗಾಗಿಯೇ ಕಂಪನಿಗಳು ಈ ತರಹದ ಔಟಿಂಗುಗಳನ್ನು ಆಗಾಗ ನಡೆಸುತ್ತಾರೆ. ಅದರ  ಬಗ್ಗೆ ವಿವರವಾಗಿ ಮುಂದೆ ಯಾವಾಗಲಾದರೂ ಬರೆಯುವ ಮನಸ್ಸಿದೆ.

ಮೊನ್ನೆ ೧೯ ನೇ ದಿನಾಂಕಕ್ಕೆ ಇಂಥದೊಂದು ಔಟಿಂಗಿಗೆ ನಾನು ಹೋಗುವದಿತ್ತು. ನನಗೊಳ್ಳೆಯ ಧರ್ಮ ಸಂಕಟ! ಅದಕ್ಕೆ ಕಾರಣವೆಂದರೆ, ಅದೇ ದಿನ ಸಂಜೆ ನಮ್ಮ ನಾಟಕ ತಂಡವಾದ 'ರಂಗ ವಿಸ್ಮಯ' ದ ನಾಟಕವೊಂದರ ಮೊಟ್ಟ ಮೊದಲ ಪ್ರದರ್ಶನವಿತ್ತು. ನನಗೆ ಔಟಿಂಗು ತಪ್ಪಿಸಲಾಗದು, ನಾಟಕವನ್ನಂತೂ ಬಿಡುವ ಚಾನ್ಸೇ ಇರಲಿಲ್ಲಾ. ಇದು ಬೆಂಗಳೂರಿನ ಉತ್ತರ ದಿಕ್ಕಿಗಿದ್ದರೆ, ನಾಟಕದ ಪ್ರದರ್ಶನವಿದ್ದದ್ದು ದಕ್ಷಿಣಕ್ಕೆ! ಆದರೆ ಇದು ಬೆಳಿಗ್ಗೆ, ಅದು ಸಂಜೆ ಇದ್ದದ್ದು ಒಂದು ರೀತಿಯಲ್ಲಿ ಅನುಕೂಲ ವಾಗಿತ್ತು. ಔಟಿಂಗಿನಲ್ಲಿ ದೈಹಿಕವಾಗಿ ಹಾಜರಾಗಿದ್ದೆನಾದರೂ ನನ್ನ ಗಮನವೆಲ್ಲಾ ಸಂಜೆ ನಡೆಯುವ ನಾಟಕದ ಕಡೆಗೇ  ಇತ್ತು. ಇಲ್ಲಿ ಮದ್ಯಾಹ್ನದ ಊಟ ಮುಗಿಸಿ, ಅಂತೂ ಇಂತೂ ಎಲ್ಲರ ಕಣ್ಣು ತಪ್ಪಿಸಿಕೊಂಡು ಕೆಂಗಲ್ ಹನುಮಂತಯ್ಯ ಕಲಾಸೌಧಕ್ಕೆ ಆಗಮಿಸಿದಾಗ ಸಂಜೆ ೫:೩೦.

ಅದು ಶ್ರೀ. ಪೂರ್ಣಚಂದ್ರ ತೇಜಸ್ವಿ ಬರೆದ ಮಾಯಾಲೋಕ ಕೃತಿಯ ನಾಟಕ ರೂಪ. ಅದಕ್ಕೆ ಆ ರೂಪ ಕೊಟ್ಟು ನಿರ್ದೇಶಿಸಿದವರು 'ರಂಗ ವಿಸ್ಮಯ' ದ ರುವಾರಿ ಹಾಗೂ ಸತತ ಮೂರು ದಶಕಗಳಿಂದ ವಿವಿಧ ರೀತಿಯಲ್ಲಿ ರಂಗ ಸೇವೆ ಮಾಡಿಕೊಂಡಿರುವ ಅ. ನಾ. ರಾವ್ ಜಾಧವ್. ಅವರು ನನ್ನ ಗುರುಗಳು. ನಾನು  ಕಳೆದ ಕೆಲವು ತಿಂಗಳಿನಿಂದ ರಂಗ ವಿಸ್ಮಯದಲ್ಲಿ ರಂಗ ತರಬೇತಿ ಪಡೆಯುತ್ತಿದ್ದೇನೆ. ಪ್ರತಿ ಭಾನುವಾರ ಅಲ್ಲಿ ನಾನು ಭಾಗವಹಿಸುವ ನಾಲ್ಕು ಗಂಟೆಗಳು ಕಳೆದು ಹೋದದ್ದೇ ಗೊತ್ತಾಗುವುದಿಲ್ಲ.               

ಅವರು ಕೊಡುವ ತರಬೇತಿ ವಿಶಿಷ್ಠವಾದದ್ದು. ಅಲ್ಲಿ ಅವರು ಮೊಟ್ಟ ಮೊದಲು ಕಲಿಸೋದು ಕನ್ನಡ ಓದುವುದನ್ನ! ಅದೂ ಗಟ್ಟಿಯಾಗಿ, ಸ್ಫುಟವಾಗಿ ಓದಬೇಕು. ಅಲ್ಲಿಯವರೆಗೆ ಅವರು ಬಿಡುವುದಿಲ್ಲ! ಜಾಧವ್ ಅವರು ಹೇಳುವಂತೆ, ನಾವು ಮನದೊಳಗೆ ಓದಿಕೊಳ್ಳುವುದನ್ನು ಎಷ್ಟು ಬಳಕೆ ಮಾಡಿಕೊಂಡಿದ್ದೇವೆಂದರೆ, ನಮ್ಮ ನಾಲಿಗೆಗೆ ಕೆಲವು ಅಕ್ಷರಗಳ ಉಚ್ಚಾರದ ರೂಢಿಯೇ ತಪ್ಪಿ ಹೋಗಿರುತ್ತದೆ. ಅದಕ್ಕೆ, ಸರಿಯಾದ ಸಮಯದಲ್ಲದು ಕೈ ಕೊಡುತ್ತದೆ! ಅವರು ಹೇಳೋದು ಸರಿಯೆ. ಇದರ ಜೊತೆಗೆ ಪೇಪರ್ ಓದಿಸುತ್ತಾರೆ, ಅಲ್ಲಿ ಬಂದವರೆಲ್ಲರೂ ಒಂದೊಂದು ಹಾಡು ಹೇಳಲೇಬೇಕು. ಈ ಎಲ್ಲ ವಿಧಾನಗಳಿಂದ ನಮ್ಮಲ್ಲಿನ ನಾಚಿಕೆ ಹೆದರಿ ಓಡಿ ಹೋಗುತ್ತೆ! ಇದೆಲ್ಲ ಆದ ಮೇಲೆ ಸಂಭಾಷಣೆಯನ್ನು ವಿವಿಧ ಹಾವಭಾವಗಳೊಂದಿಗೆ ಹೇಳುವದನ್ನು ಕಲಿಸಿಕೊಡುತ್ತಾರೆ. ತುಂಬಾ ಜನರು ಅವರಿಂದ ತರಬೇತಿ ಪಡೆದು ಬರೀ ನಾಟಕದಲ್ಲಷ್ಟೇ ಅಲ್ಲ, ಶಾಲೆಗಳಲ್ಲಿ ಹಾಗೂ ವೃತ್ತಿಯಲ್ಲಿ ಒಳ್ಳೆ ಪ್ರಗತಿ ಹೊಂದಿದ್ದಾರೆ. ಅಲ್ಲಿ ಬರುವವರು ವಿವಿಧ ಸ್ತರಗಳಿಂದ ಬಂದವರೂ, ಬೇರೆ ಬೇರೆ ವಯೋಮಾನದವರೂ ಇರುತಾರೆ. ಅಲ್ಲಿ ಯಾವುದೇ ಭೇದವಿಲ್ಲ. ಎಲ್ಲರೂ ಕಲಾವಿದರೇ!

ಶ್ರೀಯುತ. ಜಾಧವ್ ಅವರ ಬಗ್ಗೆ ಇನ್ನಷ್ಟು ಹೇಳಬೇಕೆಂದರೆ, ಅವರು ತುಂಬಾ ಓದಿಕೊಂಡಿದ್ದಾರೆ. ತೇಜಸ್ವಿಯವರ ನಿಕಟವರ್ತಿಗಳು, ಹಾಗೂ ಅವರ ಹಲವು ಕೃತಿಗಳಿಗೆ ನಾಟಕದ ರೂಪ ಕೊಟ್ಟು ಯಶಸ್ವಿಯಾಗಿ ಪ್ರದರ್ಶನ ಮಾಡಿಸಿದ್ದಾರೆ. ಅವರ ಇನ್ನೊಂದು ವಿಶೇಷತೆಯೆಂದರೆ, ಅವರ ನಾಟಕಗಳಲ್ಲೆಲ್ಲ ಅವರ ವಿದ್ಯಾರ್ಥಿಗಳೇ ಇರುತ್ತಾರೆ. ಕೆಲವು ಹಳೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರೆಲ್ಲಾ ಹೊಸಬರೇ! ಅವರಿಗೆಲ್ಲ ಅದೊಂದು ವಿಬಿನ್ನ ಅನುಭವ ಹಾಗೂ ಕಲಿಕೆ.

ಅವತ್ತಿನ ನಾಟಕ  'ಮಾಯಾ ಲೋಕ' ದಲ್ಲಿ ಗುರುಗಳು ನನಗೂ ಒಂದು ಪಾತ್ರ ವಹಿಸಿದ್ದರು. ಆದರೆ ಪ್ರತಿ ದಿನ ಸಂಜೆ ೭ ಗಂಟೆಗೆ ರಿಹರ್ಸಲ್ ಇರುತ್ತಿತ್ತು. ನನಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನಮ್ಮ ಕಂಪನಿಯಲ್ಲಿ ನಮ್ಮ ಅಸಲಿ ನಾಟಕ ಶುರುವಾಗುವುದೇ ಸಂಜೆಗೆ! ಅದೇನೆ ಇರಲಿ, ನಾನು ಅದರಲ್ಲಿಲ್ಲದಿದ್ದರೂ ನಮ್ಮ ತಂಡದ ನಾಟಕ ನೋಡುವ ಸೌಭಾಗ್ಯವನ್ನಾದರೂ ತಪ್ಪಿಸಿಕೊಳ್ಳದೆ ಅಲ್ಲಿಗೆ ಹೋಗಿದ್ದೆ.  

ಆ ನಾಟಕದ ವಿಶೇಷವೆಂದರೆ, ಅದರಲ್ಲಿದ್ದ ಒಟ್ಟು ಪಾತ್ರಗಳು ೪೦! ಹದಿನಾರು ದೃಶ್ಯಗಳು. ಇಷ್ಟೆಲ್ಲ ಪಾತ್ರಗಳ ಜೊತೆಗೆ, ಹೆಚ್ಚು ಕಡಿಮೆ  ಮುಕ್ಕಾಲು ಪ್ರತಿಶತ ಜನ ಹೊಸಬರನ್ನು ಹಾಕಿಕೊಂಡು ನಾಟಕ ಮಾಡಿಸುವುದೆಂದರೆ ಅದೊಂದು ಸಾಹಸವೇ ಸರಿ! ಅದೂ ಅಲ್ಲದೆ ಅವತ್ತು ಡಾ. ಚಂದ್ರಶೇಖರ್ ಕಂಬಾರ್ ಹಾಗೂ ಡಾ. ಬಿ.ವಿ. ರಾಜಾರಾಮ್ ವಿಶೇಷ ಅಹ್ವಾನಿತರು. ಸಭಾಂಗಣವಂತೂ  ಕಿಕ್ಕಿರಿದು ತುಂಬಿತ್ತು. ನಾಟಕವಂತೂ ಅದ್ಭುತವಾಗಿ ಮೂಡಿ ಬಂತು. 'ವೇಷಧಾರಿಗಳ ಅಸಲಿ ನಾಟಕ' ಅನ್ನುವ ಟ್ಯಾಗ್ ನೊಂದಿಗೆ ಸುಂದರ ನಿರೂಪಣೆ, ತೆಳುವಾದ ಹಾಸ್ಯ, ವ್ಯಂಗ್ಯಗಳಿಂದ ಒಳ್ಳೆ ಮನರಂಜನೆ ಕೊಡುವಂತಹ ನಾಟಕವದು. ಹಿನ್ನೆಲೆ ಗಾಯನವಂತೂ ಮನೆಗೆ ಹೋಗುವ ತನಕವೂ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಅವರ ಹಾಗೂ ತಂಡದ ಪ್ರಯತ್ನ ಅದ್ಭುತ ಯಶಸ್ಸು ಕಂಡಿತು! ಪ್ರೇಕ್ಷಕರ ನಗು ಹಾಗೂ ಚಪ್ಪಾಳೆಗಳಲ್ಲೇ ಅದು ಸ್ಪಷ್ಟವಾಗಿತ್ತು.

ಆ ಯಶಸ್ವಿ ಪ್ರದರ್ಶನದ ಬಳಿಕ ಆ ತಂಡದಲ್ಲಿ ಪ್ರತ್ಯಕ್ಷವಾಗಿ  ಹಾಗೂ ಪರೋಕ್ಷವಾಗಿ ಭಾಗವಹಿಸಿದ ತಂಡದ ಸದಸ್ಯರ ಮುಖದಲ್ಲಿ ಮೂಡಿದ್ದ ಧನ್ಯತಾ ಭಾವ, ಏನೋ ಸಾಧಿಸಿದ ತೃಪ್ತಿ ಇದೆಯಲ್ಲ, ಅದನ್ನು ನೋಡಿ ಖುಷಿಯಾಯ್ತು. ಆ ಖುಷಿ ನಮ್ಮ ಕಾರ್ಪೋರೇಟ್ ಔಟಿಂಗಿನಲ್ಲಿ ದೊರೆಯುವ ಖುಷಿಗಿಂತ ಮೇಲು ಅನಿಸಿತು. ಇದು ಮತ್ತೆ ಮತ್ತೆ ನೆನಪು ಮಾಡಿಕೊಂಡು ಮನಸ್ಸಿಗೆ ಮುದ ನೀಡುತ್ತ ಶಾಶ್ವತವಾಗಿರುತ್ತದೆ. ಅದೇ, ಔಟಿಂಗು ಆ ಮಟ್ಟಿಗಿನ ತಾತ್ಕಾಲಿಕ, ಕ್ಷಣಿಕ ಸುಖವೆನಿಸಿ, ಮತ್ತೆ ಸೋಮವಾರ ಕೆಲಸಕ್ಕೆ ಹೋಗುವ ಚಿಂತೆಯೊಂದಿಗೆ ಮುಗಿಯುತ್ತೆ. ಅದರ ಬದಲು ಔಟಿಂಗುಗಳು ಕೂಡ ಇದೇ ತರಹ ಸೃಜನ ಶೀಲವಾಗಿದ್ದರೆ ಅದಕ್ಕೊಂದು ಸಾರ್ಥಕತೆ ಇರುತ್ತದಲ್ಲವೆ? ಇದು ಅವತ್ತು ನನ್ನ ಮನದಲ್ಲಿ ಮೂಡಿದ ಪ್ರಶ್ನೆ.