Sunday, January 4, 2015

ಆಪ್ತ ರಕ್ಷಕ!

(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು http://www.panjumagazine.com/?p=9571)

ಅವತ್ತು  ಕೆಲಸ ಮುಗಿಸಿ ನಾನು ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆ. ಕೆಲಸದ ಸುಸ್ತು, ತಲೆ ಬೇರೆ ಸಣ್ಣಗೆ ನೋಯುತ್ತಿತ್ತು. ನಮ್ಮ ಅಪಾರ್ಟಮೆಂಟಿನ ಹೊರಗೆ ಕಾರು ನಿಲ್ಲಿಸಿಕೊಂಡು "ಅವನು" ಗೇಟು ತೆಗೆಯಲೆಂದು ಕಾಯುತ್ತಿದ್ದೆ...

ಅವನ ಹೆಸರು ನಂದೀಶ. ಅವನನ್ನು ಏನಂತ ಪರಿಚಯಿಸಬೇಕೆಂದು ಗೊತ್ತಾಗುತ್ತಿಲ್ಲ. ಸೆಕ್ಯುರಿಟಿ ಅನ್ನಲೇ? ಊಹುಂ, ಅವನು ಅದಕ್ಕಿಂತ ಜಾಸ್ತಿ. ವಾಚ್ ಮನ್ ಅನ್ನಲೂ  ಮನಸ್ಸಿಲ್ಲ, ಏಕೆಂದರೆ ವಾಚ್ ಮ್ಯಾನ್ ಗಳು ಬರೀ ವಾಚ್ ಮಾಡುತ್ತಾರೆ ಅಷ್ಟೆ!  ಅವನನ್ನು  ನಮ್ಮ "ಆಪ್ತ ರಕ್ಷಕ" ಅಂತ ಕರೆಯುವುದೇ ಸರಿ ಅನಿಸುತ್ತದೆ. 

... ಗೇಟು ತೆಗೆದವನೆ ಓಡುತ್ತ ನನ್ನ ಕಡೆಗೆ ಬಂದು "ಸಾರ್ ಅಲ್ಲೇ ಇರಿ, ಒಳ್ಗೆ ಬರ್ಬೇಡಿ" ಅಂತ ಸ್ವಲ್ಪ ಎಚ್ಚರಿಸುವ ರೀತಿಯಲ್ಲಿ ಹೇಳಿದ. ಮೊದಲೆ ತಡವಾಗಿ ಬಂದಿದ್ದ ನಾನು ತಾಳ್ಮೆ ಕಳೆದುಕೊಂಡಿದ್ದೆ. 
"ಯಾಕ್ರಿಪಾ?" ಸ್ವಲ್ಪ ಗಂಟು ಮುಖದಿಂದಲೇ ಕೇಳಿದೆ
"ಹಾವ್ ಬಂದೈತೆ ಸಾರ್! ಮಿಡಿ ನಾಗ್ರಾ... ಅಲ್ಲೆ ಇರಿ..." ಹಾವು ಅನ್ನುವ ಶಬ್ಧವೇ ನನ್ನ ಬಾಯಿ ಮತ್ತು ಕಣ್ಣುಗಳನ್ನು ಅಗಲಿಸಿತ್ತು. ನನ್ನ ತಲೆ ನೋವು ಸದ್ದಿಲ್ಲದೇ ಓಡಿ ಹೋಗಿತ್ತು. ಹಾವು ಹಿಡಿಯುವಷ್ಟು ಧೈರ್ಯವಾನನಲ್ಲ ನಾನು. 
"ಹಾವು ಹಿಡಿಯವ್ರಿಗೆ ಫೋನ್ ಮಾಡೋಣ್ ತಡ್ರಿ" ಅಂತ ಅಂದೆ. 
"ಅದ್ಯಾಕೆ ಬುಡಿ ಸಾರ್. ನಾನಿಲ್ವೆ? ಒಂದ್ನಿಮಿಷ ಹಂಗೆ ಇರಿ" ಅಂದವನೆ ಎಲ್ಲಿಂದಲೋ ಒಂದು ಕೋಲು, ಗೋಣಿ ಚೀಲವೊಂದನ್ನು ತಂದು. ಆ ಮಿಡಿನಾಗರವನ್ನು ಆ ಚೀಲದಲ್ಲಿ ಯಶಸ್ವಿಯಾಗಿ ಕಳಿಸಿ, ಚೀಲದ ಬಾಯಿ ಮುಚ್ಚಿ, ಹಾಗೆ ಹಿಡಿದುಕೊಂಡು ಹೋಗಿ ದೂರದಲ್ಲೆಲ್ಲೋ ಬಿಟ್ಟು ಬಂದ. ಇದೆಲ್ಲವನ್ನು ಅವನು ನನ್ನ ಕಣ್ಣ ಮುಂದೆಯೇ ಮಾಡಿದ್ದು, ಅದೂ ಒಂದೆ ಕೈಯಲ್ಲಿ ಅಂದರೆ ನೀವು ನಂಬಲಿಕ್ಕಿಲ್ಲ. ಒಂದೇ ಕೈಯಲ್ಲಿ ಯಾಕೆ ಅಂದರೆ ಅವನ ಎಡಗೈಯನ್ನು ಒಂದು ದುರ್ಘಟನೆಯಲ್ಲಿ ಕಳೆದುಕೊಂಡಿದ್ದಾನೆ! ನಾನು ನನ್ನ ಎರಡೂ ಕೈ ಇಟ್ಟುಕೊಂಡೂ ಮಾಡಲಾಗದ ಕೆಲಸವನ್ನು ಒಂದೇ ಕೈಯಲ್ಲಿ ಮಾಡಿ ನಮ್ಮ ರಕ್ಷಣೆ ಮಾಡುವವನನ್ನು ಆಪ್ತ ರಕ್ಷಕ ಅನ್ನದೆ ಬೇರೇನೂ ಅನ್ನಲು ಸಾಧ್ಯ?        

ಅವತ್ತೊಂದು ದಿನ, ತನಗಾದ ದುರ್ಘಟನೆಯನ್ನು ನೆನಪಿಸಿಕೊಂಡು ಹೇಳುತ್ತಿದ್ದ.  

"... ಇಲ್ಲಿ ಬರೋಕಿಂತ ಮೊದ್ಲು ನಮ್ಮ ಹಳ್ಳಿನಾಗೆ ನಾನು ಗೂಡ್ಸ್ ಗಾಡಿ ಓಡಸ್ತಿದ್ದೆ ಅನ್ನಿ. ಅವೊತ್ತು ಸಾಮಾನು ತುಂಬ್ಕೊಂಡು ಹೊಯ್ತಿದ್ದೆ. ದಾರೀಲಿ ಎಲ್ಲೋ ಎಡವಟ್ಟು ಆಗಿ ಗಾಡಿ ಪಲ್ಟಿ ಹೊಡೀತು ಸಾರ್. ಎರಡು ಮೂರು ಸರ್ತಿ ಉಳ್ಳಿರಬೇಕು. ಎಡಕಿನ ಕೈ ಮ್ಯಾಕೆ ಗಾಡಿ ಬಿದ್ದಿತ್ತು. ನನಗೆ  ಎಚ್ಕಾರಾನೆ ಇರಲಿಲ್ಲ ಅನ್ನಿ. ಆಮ್ಯಾಕೆ ಆಸ್ಪತ್ರೇಲಿ ಎಚ್ಚರಾ ಆದಾಗ್ಲೆ ನಂದೊಂದು ಕೈ ಕಳ್ಕೊಂಡಿದ್ದು ಗೊತ್ತಾಗಿದ್ದು." ತನ್ನ ಕೈಯನ್ನೇ ಕಸಿದುಕೊಂಡ ಆ ವಿಧಿಯಾಟವನ್ನು ವಿವರಿಸಿದ ಅವನ ಮುಖದಲ್ಲಿ ಎಳ್ಳಷ್ಟೂ ಬೇಸರವಿರಲಿಲ್ಲ. ಆದರೆ ಅದನ್ನು ಕೇಳಿ ನನ್ನ ಮನಸ್ಸು ಭಾರವಾಗಿತ್ತು.

ಮೊಳಕೈಯಿಂದ  ಕೆಳಗೆ ಕತ್ತರಿಸಿ ತುಂಡಾಗಿದ್ದ ಕೈಯನ್ನು ಮರು ಜೋಡಿಸುವ ಸಾಧ್ಯತೆಗಳನ್ನು ವೈದ್ಯರು ಅಲ್ಲಗಳೆದರಂತೆ. ಸ್ವಲ್ಪ ದಿನಗಳ ಬಳಿಕ ಈ ಘಟನೆಯಿಂದ ಚೇತರಿಸಿಕೊಂಡ ಮೇಲೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದನಂತೆ. 
 
ನಮ್ಮ ಅಪಾರ್ಟ್ಮೆಂಟಿನ  ರಕ್ಷಣೆಯ ಜವಾಬ್ದಾರಿ ಹೊತ್ತು ಈಗಾಗಲೇ ಐದು ವರ್ಷಗಳು ಸಂದಿದೆ. ದಿನದ ೨೪ ಗಂಟೆಯೂ ನಮ್ಮ ಕಟ್ಟಡದ ಯಾವುದೇ ಒಂದು ಸದ್ದಿಗೂ ಅವನದೊಂದು ಕಿವಿ ಇಟ್ಟಿರುತ್ತಾನೆ! ಅವನು ಯಾವಾಗ ಮಲಗುತ್ತಾನೋ ಆ ದೇವರಿಗೆ ಗೊತ್ತು. ನಮಗಂತೂ ನೆಮ್ಮದಿಯ ನಿದ್ದೆಯನ್ನು ದಯಪಾಲಿಸಿದ್ದಾನೆ.
ಕೆಲವರಿಗೆ ಕಾರ್ ಚಾಲನೆಯನ್ನೂ ಕಲಿಸಿದ್ದಾನೆ. ಯಾವಾಗಲೂ ನಗುಮುಖದಲ್ಲೇ ಮಾತಾಡುತ್ತಾನೆ. ಯಾವುದೇ ಕೆಲಸಕ್ಕೆ ಸಂಬಂದಿಸಿದವರ ಫೋನ್ ನಂಬರು ಅವನ ಬಳಿ ಇರುತ್ತದೆ. ಒಂದು ವೇಳೆ ಕೆಲಸಕ್ಕೆ ಯಾರೂ ಸಿಕ್ಕಿಲ್ಲವೆಂದರೆ ಆ ಕೆಲಸವನ್ನು ಯಾವುದೇ ಅಪೇಕ್ಷೆಯಿಟ್ಟುಕೊಳ್ಳದೆ ಮಾಡುತ್ತಾನೆ. ಅದು ಪ್ಲಂಬಿಂಗ್ ಆಗಿರಬಹುದು, ಇಲೆಕ್ಟ್ರಿಕ್ ಕೂಡಾ ಆಗಿರಬಹುದು!
 
ಯಾರೇ ಅಪರಿಚಿತರು ಯಾವುದೇ ಫ಼್ಲ್ಯಾಟಿಗೆ ಬಂದರೂ ಅವರ ಜೊತೆಗೆ ಆ ಮನೆಯವರೆಗೂ ಬಂದು ಅವರು ನಮಗೆ ಪರಿಚಿತರು ಅಂತ ಗೊತ್ತಾದಾಗಲೇ ಅಲ್ಲಿಂದ ಹೋಗುತ್ತಾನೆ. ಅವನು ಸುಮ್ಮನೆ ಕೂಡೋದೇ ಕಡಿಮೆ. ಕಸ ಗೂಡಿಸುತ್ತಲೋ, ಕಾರು ತೊಳೆಯುತ್ತಲೋ ಏನೋ ಒಂದು ಕೆಲಸ ಮಾಡುತ್ತಾ 'ಕಾಯಕವೇ ಕೈಲಾಸವೆನ್ನುವ' ಬಸವಣ್ಣನ ತತ್ವವನ್ನು ಅಕ್ಷರಶಃ ಮೈಗೂಡಿಸಿಕೊಂಡಿದ್ದಾನೆ.    

 
ಅವನ ಸಹಧರ್ಮಿಣಿ ಕೂಡ ಅವನಿಗೆ ಹೀಗಾಯ್ತಲ್ಲಾ ಅಂತ ಬೇಸರಿಸದೆ, ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾಳೆ. ಅವರಿಗೊಬ್ಬಳು ಮುದ್ದಾದ ಮಗಳಿದ್ದಾಳೆ. ಅವಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾನೆ. ತನ್ನ ಕೈ ಹೋಯಿತಲ್ಲಾ  ಅಂತ ಅಳುತ್ತ ಕೂಡದೆ, ತನ್ನ ಹಣೆಬರಹವನ್ನು ಹಳಿಯದೆ, ಯಾವಾಗಲೂ ನಗುತ್ತಾ, ಸ್ವಾಭಿಮಾನದ ಬದುಕನ್ನು ನಡೆಸುವ ನಂದೀಶ ಖಂಡಿತವಾಗಿಯೂ ಒಂದು ಆದರ್ಶವೇ ಅಂದರೆ ಉತ್ಪ್ರೇಕ್ಷೆಯಾಗಲಾರದು. ಅವನಿಗೆ ಒಳ್ಳೆಯದಾಗಲೆಂದು ಹಾರೈಸುತ್ತಾ...     
 

Friday, December 19, 2014

ವಿಮಾನಾಲಯ ಅಂದ್ರ ಏನ್ ಮೀನಿಂಗು?:


(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು >> http://www.panjumagazine.com/?p=9503)

ವೆಂಕಣ್ಣನನ್ನು ಅವನ ಕಂಪನಿಯವರು ಅಮೆರಿಕಾಕ್ಕೆ ಕಳಿಸುವ ನಿರ್ಧಾರ ಮಾಡುತ್ತಾರೆ. ಹೆಂಡತಿ, ಮಗಳನ್ನೂ ಜೊತೆಗೆ ಕರೆದೊಯ್ಯುವ ನಿರ್ಧಾರ ಮಾಡಿ ಅವರಿಗೆ ವೀಸಾ ಮಾಡಿಸಲು ಚೆನ್ನೈಗೆ ಹೋಗುತ್ತಾನೆ. ವಿಸಾ ಕೊಡುವದಕ್ಕೆ ಅಮೇರಿಕದವರು ಕಾಡಿಸುವ ರೀತಿಗೆ ಬೇಸತ್ತು,  ಆ ದೇಶಕ್ಕೆ ಹೋಗುವುದೇ ಬೇಡ ಅನ್ನುವ ನಿರ್ಧಾರ ಮಾಡುತ್ತಾನಾದರೂ ಹೆಂಡತಿ ಮಗಳಿಗೋಸ್ಕರ ನಿರ್ಧಾರ ಬದಲಿಸುತ್ತಾನೆ.  ಮುಂದೆ ಓದಿ… )
 
ಮೊದಲೆಲ್ಲಾ ವಿದೇಶ ಪ್ರಯಾಣ ಮಾಡುವವರ ದೊಡ್ಡದೊಂದು ಫೋಟೊ ಪೇಪರಿನಲ್ಲಿ ಹಾಕಿಸಿ, ಅವರಿಗೆ ಬಂಧು ಮಿತ್ರರು ಶುಭ ಕೋರುತ್ತಿದ್ದರು. ಅದು ಯಾಕೆ ಹಾಗೆ ಮಾಡುತ್ತಿದ್ದರೋ? ಆಗೆಲ್ಲ ಕೆಲವೇ ಕೆಲವು ಜನರು ವಿದೇಶಕ್ಕೆ ಹೋಗುತ್ತಿದ್ದುದರಿಂದ ಅದೂ ಒಂದು ಪ್ರತಿಷ್ಠೆಯ ವಿಷಯವಾಗಿತ್ತೇನೊ? ಹಾಗೆ ಶುಭ ಕೋರುವವರು ಆ ವಿದೇಶ ಪ್ರಯಾಣಿಕರ ಜೊತೆಗೆ ತಮ್ಮನ್ನು ಗುರುತಿಸಿಕೊಂಡು ತಮ್ಮ ಪ್ರತಿಷ್ಠೆ ಮೆರೆಯುತ್ತಿದ್ದರೇನೊ! ಅಥವಾ ಅದಕ್ಕಿದ್ದ ಇನ್ನೊಂದು ಕಾರಣವೆಂದರೆ ಆಗ ಫೆಸ್ ಬುಕ್ ಇರಲಿಲ್ಲವೆಂದೆ?! ಆದರೆ ಈಗ ಇದೆಯಲ್ಲ! 
ಅದಕ್ಕೆ ಜಾನು ತನ್ನ ಫೆಸ್ ಬುಕ್ಕ್ ನ ಮುಖಪುಟದಲ್ಲಿ ದೊಡ್ಡದಾಗಿ "going to miss you India … ನಾವು ಹೊರಟೆವು ಅಮೆರಿಕಾಕ್ಕೆ…   " ಅಂತೇನೊ ಬರೆದದ್ದೇ  ತಡ ಅವಳ ಪೋಸ್ಟಿಗೆ ಬಂಧುಮಿತ್ರರು ಲಗ್ಗೆ ಹಾಕಿ ಲೈಕ್ ಒತ್ತಿದ್ದರು! ಕಮೆಂಟು ಗೀಚಿದರು. ಇದನ್ನು ನೋಡಿ ವೆಂಕಣ್ಣನಿಗೆ ಕೆಂಡದಂಥ ಕೋಪ ಬಂದಿತ್ತು.
"ಹಿಂಗೆಲ್ಲಾ ಸ್ಟೇಟಸ್ ಹಾಕಿ, ಊರಾಗಿನ ಕಳ್ಳರಿಗೆಲ್ಲಾ ನಾವು ಒಂದ ತಿಂಗಳ ನಮ್ಮ ಮನಿ ಬಿಟ್ಟು ಹೊಂಟೇವಿ ಅಂತ ಗೊತ್ತಾಗತದ. ನಾವ್ ವಾಪಸ ಬರೋದರಾಗ ಎಲ್ಲ ಕಳುವು ಮಾಡಿ ಮನಿ ಖಾಲಿ ಮಾಡತಾರ!" ಅಂತ  ಬೈದಿದ್ದಕ್ಕೆ, ಜಾನು ತನ್ನ ಹುಬ್ಬೇರಿಸಿ
"ನಮ್ಮ ಮನ್ಯಾಗ ಅಂಥ ಸಾಮಾನು ಏನೂ ಇಲ್ಲಾ ಬಿಡ್ರಿ. ಕಳ್ಳರು ಬಂದ್ರ ಅವ್ರಿಗೆ ಏನೂ ಸಿಗೂದಿಲ್ಲ." ಅಂದಾಗ ಟ್ರ್ಯಾಕು ಬದಲಿಸುವ ಅವಶ್ಯಕತೆ ಉಂಟಾಗಿ.
"ಅಂಧಂಗ ನಾವು ಹೊಂಟಿದ್ದು ನಿನ್ನ ಅಪ್ಪ ಅಮ್ಮಗ ಹೇಳಿದಿಲ್ಲೊ?" ಅನ್ನುವ ದಡ್ಡತನದ ಪ್ರಶ್ನೆಯೊಂದನ್ನು ಕೇಳಿದನು. ಆಯಾ ದಿನದ ಅಡಿಗೆಯಲ್ಲಿ ಏನು ಮಾಡಿದ್ದೇನೆಂಬುದರಿಂದ ಹಿಡಿದು ಕೆಲಸದವಳು ಇವತ್ತು ಬಂದಿಲ್ಲ ಅನ್ನುವ ಪ್ರತಿಯೊಂದು ವಿಷಯಗಳನ್ನು ಅಮ್ಮನಿಗೆ ಚಾಚುತಪ್ಪದೆ ವರದಿ ಒಪ್ಪಿಸುವ ಜಾನು ವಿದೇಶ ಪ್ರಯಾಣದಂತಹ ದೊಡ್ಡ ವಿಷಯವನ್ನು ಅವರಮ್ಮನಿಗೆ ಹೇಳಿರುವುದಿಲ್ಲವೆ? ಆ ತರಹದ ಪ್ರಶ್ನೆ ಕೇಳುವುದು ದಡ್ಡತನವಲ್ಲದೆ ಮತ್ತೇನು?!    
"ನಿನ್ನೆನ ಹೇಳೇನಿ. ನಾಳೆ ಎಲ್ಲಾರೂ ಬರ್ಲಿಕತ್ತಾರ. ಒಂದ ವಾರ ಇಲ್ಲೇ ಇದ್ದು ನಮ್ಮನ್ನ ವಿಮಾನದಾಗ ಕುಡಿಸಿದ ಮ್ಯಾಲೇ ಊರಿಗೆ ವಾಪಸ್ಸು ಹೋಗ್ತಾರಂತ" ಅಂದಳು.
"ಎಲ್ಲಾರು ಅಂದ್ರ?!" ವೆಂಕಣ್ಣ ಉಗುಳು ನುಂಗುತ್ತ ಕೇಳಿದ.
"ಅಪ್ಪಾ, ಅಮ್ಮಾ, ಇಬ್ಬರೂ  ಅಣ್ಣಂದರು, ಅತ್ತಿಗೆಂದರು ಮತ್ತ ಅವರ ಮಕ್ಕಳು."
"ಒಹ್ ಹೌದಾ?! ಭಾರಿ ಆತಲ್ಲ!" ಅಂತ ಹೇಳಿ, ತನಗಾಗದ ಖುಷಿಯನ್ನು ತೋರಿಸುವ ವ್ಯರ್ಥ ಪ್ರಯತ್ನ ಮಾಡಿ, ಮುಖವನ್ನು ಅರಳಿಸಲು ಸಾಧ್ಯವಾಗದೆ ಬೇರೆ ಕಡೆ ಹೊರಳಿಸಿದ! 
’ಒಂದು ವಾರ ಇಕಿ ತೌರುಮನಿಯವ್ರು ಇಲ್ಲೆ ಟೆಂಟ್ ಹೊಡದರ ಸುದ್ದ ಆತು’ ಅಂತ ಸ್ವಗತದಲ್ಲೆ ಹೇಳಿಕೊಂಡ. ಹೆಂಡತಿಯೆದುರು ಹೇಳಿಕೊಳ್ಳುವ ಧೈರ್ಯಶಾಲಿ ಗಂಡ ಇವನಲ್ಲವಲ್ಲ.
ಅಂತೂ ಇಂತೂ ಇವನು ಅಮೆರಿಕಾಕ್ಕೆ ಹೋಗುವ ಸುದ್ದಿ ಎಲ್ಲಾ ದಿಕ್ಕಿನಲ್ಲೂ ವಿಚಿತ್ರ ರೀತಿಯಲ್ಲಿ ಪಸರಿಸತೊಡಗಿತು. ಹೀಗಿರುವಾಗ ಒಂದು ದಿನ ಇವನ ಫೋನು ರಿಂಗಣಿಸಿ ಹೆಲೋ ವೆಂಕಟ್ ಹಿಯರ್ ಅಂದವನಿಗೆ. 
"ಮತ್ತೇನಪಾ ದೋಸ್ತ, ಭಾರಿ ಧೊಡ್ಡ ಮನಶ್ಯಾ ಆಗಿ ಬಿಡು. ನಾವ ಫೋನ್ ಮಾಡಬೇಕ್ ನೋಡು ನಿನಗ. ನೀನಂತೂ ಮರ್ತಬಿಟ್ಟಿ ನಮ್ಮನ್ನ. ನಾನು ನಿನ್ನ ಗೆಳೆಯಾ ರವಿ ಅನ್ನೋದರೆ ನೆನಪದನೊ ಇಲ್ಲೊ…" ಅಂತ ಬಹಳ ದಿನಗಳ ಮೇಲೆ ಫೋನ್ ಮಾಡಿದ್ದರಿಂದ ಮತ್ತೆ ತನ್ನ ಪರಿಚಯವನ್ನು ಮಾಡಿಕೊಂಡ ಇವನ ಗೆಳೆಯ. ಅದು ಇದು ಮಾತನಾಡಿ ’ಅಮೇರಿಕಾಕ್ಕ ಹೊಂಟಿಯಂತ ಸುದ್ದಿ ಬಂತು…’ ಅಂತ ಅವನಂದಾಗ, ವೆಂಕಣ್ಣ ಹುಷಾರಾದ!
"ಹೌದಪಾ ಒಂದ ತಿಂಗಳಿಗೆ ಹೊಂಟಿನಿ" ಅಂದ.
"ಏ ಅಂಧಂಗ ಅಲ್ಲೆ ಲ್ಯಾಪ್ ಟಾಪ್ ಭಾರಿ ಸಸ್ತಾದಾಗ ಸಿಗತಾವಂತ ಕೇಳ್ದೆ. ನನಗೊಂದು ತೊಗೊಂಬಾ. ಹಂಗ ಒಂದು ಬಾಟಲ್ ವಿಸ್ಕಿನೂ ತೊಗೊಂಡು ಬಾರಪಾ. ಒಮ್ಮೆರೆ ಫಾರಿನದ್ದು ಕುಡ್ಯೋಣಂತ." ಅಂದ. ಗೆಳೆಯ ಬಹಳ ದಿನಗಳ ಮೇಲೆ ಇವನನ್ನು ನೆನಪಿಸಿಕೊಂಡ ಉದ್ದೇಶ ಈಗ ಸ್ಪಷ್ಟವಾಗಿತ್ತು.
"ಆತು ತೊಗೊ ನೋಡೊಣಂತ. ಈಗ ನಂದ ಮೀಟಿಂಗ್ ಅದ, ಅಮ್ಯಾಲೆ ಫೋನ್ ಮಾಡ್ತೀನಿ." ಅಂತ ಹೇಳಿ ಕರೆಯನ್ನು ಮೊಟಕುಗೊಳಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ.
ಹೀಗೆ ಒಬ್ಬೊಬ್ಬರಾಗಿ, ಯಾರ್ಯಾರೊ ಫೋನ್ ಮಾಡಿ, ನನಗೆ ಅದು ಬೇಕು ಇದು ಬೇಕು ಅಂತ ಕೇಳತೊಡಗಿ ಇವನ ಇಂಪೊರ್ಟೆಡ್ ವಸ್ತುಗಳ ಪಟ್ಟಿ ಉದ್ದವಾಗತೊಡಗಿತು! ಅಮೇರಿಕಾದಲ್ಲಿ ಸಿಗೋದೆ ’ಮೇಡ್ ಇನ್ ಚೈನಾ’ ಸಾಮಾನುಗಳು. ಅದನ್ನ ಅಮೇರಿಕಾದಿಂದಲೇ ತರಿಸಿಕೊಳ್ಳಬೇಕೆಂಬ ಜನರ ಬಯಕೆ ಕಂಡು ಬೆರಗಾದನವನು. 
ಇವನ ಇನ್ನೊಬ್ಬ ಗೆಳೆಯ ಇವನ ಜೊತೆಗೆ ತನ್ನ ಸಂಕಟವನ್ನೂ ತೋಡಿಕೊಂಡ. ಏನಾಗಿತ್ತೆಂದರೆ, ಇವನು ತನ್ನ ಪರಿವಾರ ಸಮೇತ ಅಮೇರಿಕಾಕ್ಕೆ ಹೊರಟ ಸುದ್ದಿ ಕೇಳಿ ಆ ಗೆಳೆಯನ ಹೆಂಡತಿ,
"ವೆಂಕಣ್ಣನ್ನ ನೋಡಿ ಸ್ವಲ್ಪ ಕಲೀರಿ. ನಾವಂತೂ ಇಲ್ಲೆ ಭಾಂಡಿ ತೊಳಕೋತ ಕೂಡೊದ ಆತು. ನಾನು ಯಾವಾಗ ಅಮೇರಿಕಾ ಕಾಣತೇನೊ ಏನೊ. ಎಲ್ಲಾ ನಮ್ಮ ಕರ್ಮ" ಅಂತ ಅವನೊಂದಿಗೆ ಜಗಳ ಮಾಡಿದ್ದಳಂತೆ.
"ನೀ ಬರೆ ಇಂಥಾ ಬ್ಯಾಟಾ ಹಚ್ಚತಿ ನೋಡಪಾ. ನೀ ಮಾಡೊ ಕೆಲಸಕ್ಕ ಮನ್ಯಾಗ ನಾವ್ ಬೈಸಿಕೋಬೇಕು." ಅಂತ ಕೋಪಗೊಂಡಿದ್ದ ಇವನ ಮಿತ್ರ.
’ಇದೊಳ್ಳೆ ಕಥೆ ಆಯ್ತಲ್ಲ! ನನ್ನ ಹೆಂಡತೀನ ನಾ ಕರ್ಕೊಂಡು ಹೊಂಟ್ರ ಇವರಿಗೇನ್ ಸಮಸ್ಸೆ’ ಅಂತ ವೆಂಕಣ್ಣ ತಲೆ ಚಚ್ಚಿಕೊಂಡ.
ಇದೆಲ್ಲದರ ಜೊತೆಗೆ ಅಮೇರಿಕಾಕ್ಕೆ ಏನೇನು ಒಯ್ಯುವುದು ಅನ್ನುವ ಬಗ್ಗೆ ಜಾನು ತುಂಬಾ ತಲೆ ಕೆಡಿಸಿಕೊಂಡಳು. ತನ್ನ ಬಳಿ ಇದ್ದ ಬಟ್ಟೆಗಳೆಲ್ಲಾ ಅವಳಿಗೆ ತುಂಬಾ ಹಳೆಯದಾಗಿ ಕಾಣತೊಡಗಿ ಒಂದಿಷ್ಟು ಹೊಸ ಹೊಸ ಮಾಡರ್ನ್ ಬಟ್ಟೆಬರೆಗಳನ್ನು ತನಗೂ ತನ್ನ ಮಗಳಿಗೂ ಅಂತ ಖರಿದಿಸಿ ಇವನ ಕ್ರೆಡಿಟ್ ಕಾರ್ಡಿಗೆ ಕತ್ತರಿ ಹಾಕಿದಳು! ಕಾಯಿ ಪಲ್ಲೆಗಳನ್ನೊಂದು ಬಿಟ್ಟು ಉಳಿದೆಲ್ಲ ದಿನಸಿಗಳನ್ನೂ ಖರಿದಿಸಿ ಅಮೇರಿಕಾಕ್ಕೆ ಒಯ್ಯಲು ಪ್ಯಾಕ್ ಮಾಡಿಟ್ಟುಕೊಂಡಳು.
"ಅಲ್ಲೆ ಹೋಗಿ ಅಂಗಡಿ ಹಾಕು ವಿಚಾರದ ಏನ್ಲೆ? ಅಲ್ಲೆ ಎಲ್ಲಾ ಸಿಗತಾವು. ನಾವು ಮರಭೂಮಿಗೆ ಹೊಂಟಿಲ್ಲ" ಅಂತ ವೆಂಕಣ್ಣ ದಬಾಯಿಸಿದಾಗ,
"ನಿಮಗ ಗೊತ್ತಾಗಂಗಿಲ್ಲ ಸುಮ್ಮನಿರ್ರಿ, ಆಲ್ಲೆ ತೊಗೊಂಡ್ರ ದುಬಾರಿ ಆಗ್ತದ. ಅದೂ ಅಲ್ಲದ ಡಾಲರ್ ಕೊಟ್ಟು ಕೊಂಡಕೊಬೇಕು. ಇದಕ್ಕ ಎಲ್ಲಾ ರೊಕ್ಕಾ ಖರ್ಚು ಮಾಡಿದರ ಅಮ್ಯಾಲೆ ಅಲ್ಲೆ ಶಾಪಿಂಗ್ ಏನ್ ಮಾಡೋದು?" ಅಂತ ಹೇಳಿ, ಇವನ ಎದೆಯ ಕಂಪನಕ್ಕೆ ಕಾರಣಳಾದಳು.

ತೌರು ಮನೆಯವರೆಲ್ಲಾ ಬಂದದ್ದರಿಂದ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಯಾರಿಗೆ? ಜಾನುಗೆ! ವೆಂಕಣ್ಣನಿಗಲ್ಲ!! ಅಂತೂ ಹೊರಡುವ ದಿನ ಬಂದಾಗ ನಿಟ್ಟುಸಿರಿಟ್ಟ. ಟ್ಯಾಕ್ಸಿ ಯಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುತ್ತಿದ್ದಂತೆ "ವಿಮಾನಾಲಯ" ಅನ್ನುವ ಕನ್ನಡದಲ್ಲಿ ಬರೆಸಿಕೊಂಡ ಬೋರ್ಡು ಗೋಚರಿಸಿತು. ಅದನ್ನು ಕಂಡು, "ಅಪ್ಪಾ ವಿಮಾನಾಲಯ ಅಂದ್ರ ಏನ್ ಮೀನಿಂಗು?" ಅಂತ ಸೆಕೆಂಡ್ ಲ್ಯಾಂಗ್ವೇಜ್ ಕನ್ನಡಾ ಓದುತ್ತಿದ್ದ ಮಗಳು ಕೇಳಲಾಗಿ "ಹಂಗಂದ್ರ ಟರ್ಮಿನಲ್ ಅಂತ ಅರ್ಥ ಮಗಳ ಅಂತ ಹೇಳಿ, ಮೇಲೆರುತ್ತಿದ್ದ ವಿಮಾನವೊಂದನ್ನು ಟ್ಯಾಕ್ಸಿಯ ಕಿಟಕಿಯಿಂದಲೆ ನೆಟ್ಟ ದೃಷ್ಟಿಯಿಂದ ನೋಡತೊಡಗಿದನವನು.

Thursday, December 4, 2014

ರೆಡಿ ಸ್ಟೆಡಿ ಪೋ!

(ಪಂಜು  ಪತ್ರಿಕೆಯಲ್ಲಿ ಪ್ರಕಟವಾಗಿತ್ತು http://www.panjumagazine.com/?p=9375)

ಅವತ್ತಿನ ದಿನದಲ್ಲೇನು ಹೇಳಿಕೊಳ್ಳುವಂತಹ ವಿಶೇಷತೆಯಿರಲಿಲ್ಲ. ಪ್ರತಿದಿನದಂತೆ ಅವತ್ತೂ ಬೆಳಗಾಗಿತ್ತು, ವೆಂಕಣ್ಣ  ಎಂದಿನಂತೆ ಬಲ ಮಗ್ಗಲಲ್ಲೇ ಎದ್ದಿದ್ದ! ಅವನ ಹೆಂಡತಿ ಎಂದಿನಂತೆ ಅವತ್ತು ಕೂಡ ಇನ್ನೂ ಎದ್ದಿರಲಿಲ್ಲವಾದ್ದರಿಂದ, ಹಲವು ಬಗೆಯ ರಾಸಾಯನಿಕಗಳ ಆಗರವೆಂದು ಗೊತ್ತಿದ್ದೂ ಕೂಡ ಚಹಾ ಎನ್ನುವ ಕಷಾಯದ ವಿಷವನ್ನು ತನ್ನ ಕೈಯಾರೆ ಕುದಿಸಿಕೊಂಡ. ಎಷ್ಟಂದ್ರೂ ನಮಗೆ ಬೇಕಾದ ವಿಷವನ್ನು ನಾವೇ ಆರಿಸಿಕೊಳ್ಳಬೇಕೆಂದು ಹಿರಿಯರು ಹೇಳಿಬಿಟ್ಟಿದ್ದಾರಲ್ಲ! ಯಾಂತ್ರಿಕವಾಗಿ ಇತರ ಪ್ರಾತಃ ಕರ್ಮಗಳಿಗೂ ಮುಕ್ತಿಯನ್ನು ಕರುಣಿಸಿದ್ದ. ಹಿಂದಿನ ದಿನ ನೋಡಿದ್ದ ನಾಟಕದ ಪಾತ್ರವೊಂದು ಅವನ ತಲೆಯಲ್ಲಿ ಇನ್ನೂ ಗುಂಯ್ ಗುಡುವ ಕಾರ್ಯದಲ್ಲಿ ತೊಡಗಿತ್ತು....  ಏನೇ ಆದರೂ ಅವನು ಅವತ್ತು ಕೆಲಸಕ್ಕೆ ಹೋಗಲೇ ಬೇಕಿತ್ತು. ಪ್ರಳಯವಾದರೂ ಸರಿಯೇ, ಅವನ ಪ್ರಳಯಾಂತಕ ಬಾಸ್ ಗೆ ಇವನನ್ನು ಕಣ್ಣೆದುರಿಗೆ ಕಾಣದಿದ್ದರೆ ಸಮಾಧಾನವೇ ಇಲ್ಲವಲ್ಲ! ಅಷ್ಟು ಲವ್ವು!!

ಅಂತು ಆಫೀಸು ಮುಟ್ಟಿದಾ ಅನ್ನಿ. ಅಲ್ಲೂ ಏನಂಥ ವಿಶೇಷ ಬದಲಾವಣೆಗಳಿರಲಿಲ್ಲ. ಅವೇ ಅತೃಪ್ತ ಆತ್ಮಗಳು,  ತಾವೆ ತಮ್ಮ ಕೈಯ್ಯಾರೆ ಮಾಡಿಕೊಂಡಿದ್ದ ತಮ್ಮ ಸ್ವಂತ ತಪ್ಪು ನಿರ್ಧಾರಗಳಿಂದ ಹೀಗಾಯಿತು ಅಂತ ಪರಿತಪಿಸುತ್ತ, ಇತ್ತ ಕೆಲಸ ಬಿಟ್ಟು ಓಡಿ ಹೋಗಲೂ ಆಗದೇ, ಖುಷಿಯಿಂದ ಕೆಲಸ ಮಾಡಲೂ ಮನಸ್ಸಿಲ್ಲದೆ, ಅಂತರ್ ಪಿಶಾಚಿಗಳಂತೆ ಅಲೆದಾಡುವ ದೃಶ್ಯ ಎಂದಿನಂತೆ ಮಾಮೂಲಿಯಾಗಿತ್ತು. ಆದರೆ ಇವನ ಬಾಸ್ ನ ಮುಖ ಮಾತ್ರ ಮಾಮೂಲಿಯಂತೆ ಸಪ್ಪೆಯಾಗಿರದೆ ಲವಲವಿಕೆಯಿಂದ ತುಂಬಿ ತುಳುಕುತ್ತಿದ್ದುದು ಇವನಿಗೆ ಸ್ವಲ್ಪ ಕುತೂಹಲಕಾರಿಯಾಗಿತ್ತು! ಬಾ ಅಂತ ಸನ್ನೆ ಮಾಡಿ ಕರೆದಾಗಲಂತೂ ಬಹುಷಃ ಅವರು ಕೆಲಸಕ್ಕೆ ರಾಜಿನಾಮೆ ಕೊಟ್ಟಿರಬಹುದೆ? ಅಂತ ಯೋಚನೆ ಬಂದು ಪುಳಕಗೊಂಡು ಅವರ ಬಳಿ ಹೋಗಲಾಗಿ...
Good news! ಅಂದ್ರು! ತಾವು ರಾಜಿನಾಮೆ ಕೊಟ್ರೆ ತನಗೆ ಖುಷಿ ಅಂತ ಇವರಿಗೆ ಹೇಗೆ ಗೊತ್ತಾಯ್ತು ಅಂತ ಇವನು ಬೆರಗು ಗಣ್ಣಿನಿಂದ ನೋಡುತ್ತಿರುವಂತೆ ...
ಅಮೇರಿಕಾಕ್ಕೆ ಕರೀತಿದ್ದಾರೆ ರೆಡಿ ಆಗಿ! ಅನ್ನಬೇಕೆ? ಅದನ್ನು ಕೇಳುತ್ತಲೆ ಇವನು ಖಿನ್ನನಾದ! ಅದಕ್ಕೆ ಕಾರಣಗಳು ಎರಡು. ಬಾಸ್ ರಾಜಿನಾಮೆ ಕೊಡುತ್ತಿರಬಹುದೆಂಬ ತನ್ನ ಊಹೆ ಸುಳ್ಳಾಗಿದ್ದು ಒಂದು! ಇನ್ನೊಂದೆಂದರೆ,  ಬುರ್ಗರ್ ವಾಸ್ನೆ ನೆನಪಾಗಿ!  ಯಾಕಂದ್ರೆ ಕೊನೇ ಬಾರಿ ಅಲ್ಲಿಗೆ ಹೋಗಿದ್ದಾಗ ಸಸ್ಯಾಹಾರಿಯಾಗಿದ ಇವನು ಬೇರೆ ಗತಿಯಿಲ್ಲದೆ, ಹೋದಲ್ಲಿ ಬಂದಲ್ಲಿ ಸುಲಭವಾಗಿ ಸಿಗುತ್ತಿದ್ದ ಬರ್ಗರ್ ತಿಂದು ತಿಂದು, ವಾಪಸ್ಸು ಭಾರತಕ್ಕೆ ಬಂದ ಮೇಲೆ, ಅದನ್ನು ತಿನ್ನುವುದೇ ಬಿಟ್ಟಿ ಬಿಟ್ಟಿದ್ದ. ಅಷ್ಟು ವಾಕರಿಕೆ ಬಂದಿತ್ತು. ಅವನ ಮೂಗಿನಲ್ಲಿ ಅದರ ವಾಸನೆ ಇನ್ನೂ ತಾಜಾ ಇತ್ತು! 
ಯಾಕೆ? ಸಡನ್ನಾಗಿ ಡಿಪ್ರೆಸ್ಸ್ ಆದ್ರೀ? ಅಂತ ಕಂಗ್ಲಿಷ್ ಪಂಡಿತರಾದ ಅವನ ಬಾಸು ಕೇಳಲಾಗಿ.
ನನಗೆ ಹೋಗಲು ಇಷ್ಟವಿಲ್ಲ ಅಂತರುಹಿ ಸೂರನ್ನು ದಿಟ್ಟಿಸುತ್ತ ನಿಂತ. ಅವರು ಇವನಿಂದ ಇಂತಹ ಅಧಿಕ ಪ್ರಸಂಗಿ  ಉತ್ತರವನ್ನು ನಿರೀಕ್ಷಿಸಿರಲಿಲ್ಲವೇನೋ...
ಕಮಾನ್ ಮ್ಯಾನ್! ಎಲ್ರೂ ಅಲ್ಲಿ ಹೋಗೋಕೆ ಸಾಯ್ತಾರೆ. ನೀವೇನ ಹಿಂಗ್ ಅಂತೀರ? ಹೋಗ್ತೀರೊ ಇಲ್ವೋ ಅಂತ ನಾ ಕೇಳಿಲ್ಲ. ನೀವು ಹೋಗ್ಲೆ ಬೇಕು, ಇದು ತುಂಬಾ ಇಂಪಾರ್ಟಂಟ್ ಪ್ರಾಜೆಕ್ಟು ನಮಗೆ. ಅದೂ ಅಲ್ದೆ ಕಸ್ಟಮರ್ರೆ ಕರೆತಿದ್ದಾರ್ರಿ, ನೀವೆ ಬರ್ಬೇಕಂತೆ ಅವ್ರಿಗೆ!
ಓಹೊ! ಇದು ವ್ಯವಸ್ಥಿತ ಸಂಚು! ತಮಗೆ ಬೇಕಾದ ಕುರಿಯನ್ನು ಅವರೆ ಆರಿಸಿಕೊಂಡಿದ್ದರು ಇವನ ಕಷ್ಟಮಾರಾಯ್ರು (customer).

ಬಾಸ್ ನ ನಿರ್ಧಾರ ಅಚಲವಾಗಿತ್ತು. ಕೋಳಿ ಕೇಳಿ ಯಾರಾದರೂ ಸಾಂಬಾರ ಅರಿಯುತ್ತಾರೆಯೇ? ಆದರೂ ತನ್ನ ನಖರಾ ತೋರಿಸಲು ಒಂದು ದಿನದ ಸಮಯ ತೆಗೆದುಕೊಂಡ. 


ಈ ಸಲ ಪರಿವಾರ ಸಮೇತನಾಗಿ ಹೋದರೆ ಹೇಗೆ ಅನ್ನುವ ಒಂದು ಯೋಚನೆ ಬಂತು. ಮನೆಗೆ ಹೋಗಿ ಜಾನುಗೆ ಆ ವಿಚಾರ ಹೇಳಲಾಗಿ ಅವಳು ಮನಸ್ಸಿದ್ದರೂ, ಒಲ್ಲೆ ಒಲ್ಲೆ ಅನ್ನುತ್ತಲೇ ಹೂಂ ಗುಟ್ಟಿದಳು!
  
ಮರುದಿನ ಬಾಸಿಗೆ ತಾನು ತನ್ನ ಹೆಂಡತಿ ಮಗಳನ್ನೂ ಕರೆದುಕೊಂಡು ಹೋಗಲು ಒಪ್ಪುವುದಾದರೆ ನಾ ಹೋಗಲು ಸಿದ್ಧ, ಅಂದಿದ್ದಕ್ಕೆ 'ನಿಮ್ಮ ಹೆಂಡ್ತಿನ್ನ ನಿಮ್ಮ ಜೊತೆ ಕರ್ಕೊಂಡು ಹೋಗಲು ಬೇಡಾ ಅನ್ನಲು ನಾನ್ಯಾರ್ರೀ!?' ಅಂತಂದು ತಮ್ಮ ಅದ್ಭುತ ಜೋಕಿಗೆ ಪಕ ಪಕ ಅಂತ ನಕ್ಕರು. ಆದರೆ ಮುಂದಿನ ಕ್ಷಣವೇ ಗಂಭೀರವಾಗಿ ನಿಮ್ಮ ಮನೆಯವರ ಟಿಕೇಟ್ ಖರ್ಚು ನೀವೇ ನೋಡ್ಕೋಬೇಕು ಅಂದ್ರು. ಅದಕ್ಕೆ ನಗಬೇಕೋ ಅಳಬೇಕೋ ಗೊತ್ತಾಗದ ವೆಂಕಣ್ಣ ಸುಮ್ಮನೆ ಕೈಕಟ್ಟಿಕೊಂಡು ನಿಂತಿದ್ದನ್ನು ಅವನ ಟೀಮಿನ ಹುಡುಗಿ ನೋಡಿದ್ದಂತು ನಿಜ!

ಬರುತ್ತೇನೆ ಅಂದಾಗ ಬಾ ಅಂತ ಬರಸೆಳೆದುಕೊಳ್ಳುವ ದೇಶವಂತೂ ಅಲ್ಲಾ ಅದು. ಎಲ್ಲರೂ ತನ್ನ ದೇಶಕ್ಕೆ ಬರಲು ಹಪಹಪಿಸುತ್ತಾರೆ, ಹಾಗೆ ಬಂದವರು ತಮ್ಮ ದೇಶದಲ್ಲೇ ಬೇರು ಬಿಡುತ್ತಾರೆ ಎಂದು ಅನವಶ್ಯಕವಾದ ತಪ್ಪು ನಂಬಿಕೆಯಲ್ಲಿರುವ,  ದೇಶವದು! ಅಲ್ಲಿಗೆ ಹೋಗಲೇ ಮನಸ್ಸಿಲ್ಲದ ವೆಂಕಣ್ಣನಂತವರೂ ಇರುವರೆನ್ನುವ ವಿವೇಕವಿಲ್ಲವೇ ಆ ದೇಶಕ್ಕೆ? ಅದರೂ ಬೇಲಿ ಹಾರಿ ಬಂದವರಿಗೆಲ್ಲಾ ಜೀವನಕ್ಕೆ 'ಅಧಾರ' ಮಾಡಿಕೊಡುವ ಭಾರತೀಯರಷ್ಟು ಉದಾರಿಗಳೆ ಅವರು?

ಇವನ ತಯ್ಯಾರಿ ಶುರುವಾಗಿತ್ತು. ಇವನ ವೀಸಾ ಮೊದಲೇ ಇತ್ತಾದರೂ ಹೆಂಡತಿ ಮಗಳದು ಮಾಡಿಸಬೇಕಿತ್ತು. ಏಜಂಟೊಬ್ಬಳ ಬಳಿ ಹೋಗಲಾಗಿ, ಅಮೇರಿಕಾದವ್ರು  ವೀಸಾ ದಯಪಾಲಿಸಬೇಕೆಂದರೆ ಏನೇನು ತಯಾರಿ ಬೇಕೆಂದು ಅವಳು ಖಡಾ ಖಂಡಿತವಾಗಿ ಇಂಗ್ಲೀಷಿನಲ್ಲೇ ಹೇಳತೊಡಗಿದಳು. ಆ ಪ್ರೂಫು ಈ ಪ್ರೂಫು ಅಂತೆಲ್ಲಾ ಹೇಳಿ ಬ್ಯಾಂಕಿನಲ್ಲಿರುವ ಎಲ್ಲಾ ಡೆಪಾಸಿಟ್ಟು ತೋರಿಸ್ಬೇಕು ಅಂದು ಇವನ ಕಣ್ಣುಗಳು ಉಪೇಂದ್ರನ ಶೈಲಿಯಲ್ಲಿ ತಿರುಗುವ ಹಾಗೆ ಮಾಡಿದಳು. ಇವನಿಗೆ ಕೆಂಡದಂಥ ಕೋಪ ಬಂತು. ಇದೆಲ್ಲಾ ಯಾಕೆ ತೋರಿಸಬೇಕು ಅನ್ನೊ ಸಿಟ್ಟು ಒಂದಾದರೆ, ಇದ್ದ ಬದ್ದ ದುಡ್ಡನ್ನೆಲ್ಲಾ ಹಾಕಿ  ಹೆಂಡತಿ ಮಗಳನ್ನು  ಅಮೇರಿಕಾ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಇಲ್ಲದ ಡೆಪಾಸಿಟ್ಟು ಎಲ್ಲಿಂದ ತೋರಿಸುವುದು ಅಂತ! ಆದ್ರೂ ಏಜಂಟ್ ಬಳಿ ಅದೆಲ್ಲ ಹೇಳೋಕಾಗುತ್ತದೆಯೆ? ಏನೇನಿದೆಯೋ ಅದನ್ನು ತೋರಿಸಿದರಾಯ್ತು ಅಂತ ಸುಮ್ಮನಾದ. ಎಲ್ಲಾ ತಯ್ಯಾರಿ ಮಾಡಿಟ್ಟುಕೊಂಡು, ವೀಸಾ ಸಂದರ್ಶನ ಚೆನ್ನೈ ನಲ್ಲಿ ನಿಗದಿಯಾದ ಹಿಂದಿನ ದಿನ ಕಾರಿನಲ್ಲಿ ಪರಿವಾರ ಸಮೇತ ಹೊರಟ. ಕಾರಿನಲ್ಲಿ ಹೋದರೆ ಕೆಲಸ ಮುಗಿದ ತಕ್ಷಣ ಬೆಂಗಳೂರಿಗೆ ಬಂದು ಬಿಡಬಹುದಲ್ಲ ಅನ್ನುವ ದೂರ ದೃಷ್ಟಿ ವೆಂಕಣ್ಣನದು!


ದಾರಿಯಲ್ಲಿ ಕಾಂಚಿಪುರಮ್ ಅನ್ನುವ ಸೀರೆ ಮಾರಾಟಕ್ಕೆ ಪ್ರಸಿದ್ಧಿ ಪಡೆದ ಊರನ್ನು ಕಂಡ. ಜಾನುಗೆ, ಬೇಕಾದರೆ ನಿನಗೊಂದು ಸೀರೆ ತೊಗೋಳೋದಿದ್ರೆ ತೊಗೊ ಅಂತ ಹೇಳುವಾಗ, ಅದು ತನ್ನ ಜೀವನದ ಅಸಂಖ್ಯಾತ ತಪ್ಪು ನಿರ್ಧಾರಗಳಲ್ಲಿ ಇನ್ನೊಂದಾದೀತು ಅನ್ನುವ ಕಲ್ಪನೆ ಅವನಿಗಿರಲಿಲ್ಲ! ಆ ಊರೊಳಗೆ ತಲಪುತ್ತಲೇ ಒಳ್ಳೆಯ ಸೀರೆ ಅಂಗಡಿ ಎಲ್ಲಿದೆ ಅಂತ ಒಬ್ಬ ಹುಡುಗನಿಗೆ ಕೇಳಿದ. ಅವನು ತಮಿಳಿನಲ್ಲೇನೋ ಹೇಳಿದ. "ತಮಿಳು ತೆರಿಯಾದು" ಅಂದನಿವನು. ಇವಗೆ ಗೊತ್ತಿದ್ದ ತಮಿಳು ಅಷ್ಟೆ! "ತಮಿಳ ತೆರಿಯಾದಾ?" ಅಂದ ಹುಡುಗ ಮತ್ತೆ ತಮಿಳಿನಲ್ಲೇ ಮಾತಾಡಿದ. ಅವನ ಭಾಶಾಭಿಮಾನಕ್ಕೊಂದು ಮೆಚ್ಚಿಗೆಯ ನಗೆ ನಕ್ಕು ಮುಂದೆ ಸಾಗಿದ. ಮತ್ತೆ ತಮ್ಮ ಅದೃಷ್ಟ ಪರೀಕ್ಷಿಸಲು ಇನ್ನೊಬ್ಬನ ಕೇಳಲಾಗಿ ಮತ್ತೆ ತಮಿಳು ಕಿವಿಗಪ್ಪಳಿಸಿ, ಇವನು ನಿರಾಸೆಯಿಂದ ಮತ್ತೆ "ತೆರಿಯಾದು" ಅನ್ನಲಾಗಿ ಆ ಮನುಷ್ಯ "ಬೆಂಗಳೂರಾ? ಕನ್ನಡ ಮಾತಾಡ್ತೀರಾ?" ಅಂಥೆಳಿ ಇವನ ಕಿವಿಯಲ್ಲಿ  ಜೀವ ತರಿಸಿದ!

ಅವನೇ ಖುದ್ದಾಗಿ ಅಲ್ಲೊಂದು ಸೀರೆ ಅಂಗಡಿಗೆ ಕರೆದೊಯ್ದ. ಅಲ್ಲೂ ಸುಮಾರು ಜನ ಕನ್ನಡ ಮಾತಾಡುತ್ತಿದ್ದರು. ಅಲ್ಲಿ ತುಂಬಾ ಕನ್ನಡಿಗರು ಸೀರೆ ಕೊಳ್ಳಲು ಬರುತ್ತಿದ್ದುದಕ್ಕೆ ಕನ್ನಡ ಮಾತಾಡುವವರು ಜಾಸ್ತಿ ಇರಬೇಕೆ? ಅಥವ ಗಡಿಯಲ್ಲಿದ್ದುದಕ್ಕೆ ಹೀಗಿರಬಹುದೆ? ಅದೇನೆ ಇರಲಿ, ಇವನ ಹೆಂಡತಿ ಮಾತ್ರ ತನಗೊಂದಲ್ಲದೆ ಅಮ್ಮನಿಗೆ, ಚಿಕ್ಕಮ್ಮಗಳಿಗೆ, ಆಪ್ತ ಗೆಳತಿಯರಿಗೆ ಅಂಥೇಳಿ ಹತ್ತು ಸೀರೆ ತೊಗೊಂಡು, ತಮಿಳುನಾಡಿನಲ್ಲಿ ಕನ್ನಡ ಕೇಳಿ ಕುಣಿದಾಡುತ್ತಿದ್ದ ಇವನೆದೆಯ ಝಲ್ ಎನಿಸಿದಳು! ಸೀರೆಗಳ ಗಂಟು ಕಾರಿನಲ್ಲಿ ಒಟ್ಟಿಕೊಂಡು ಮತ್ತೆ ಇವರ ಪಯಣ ಮುಂದುವರಿದು ರಾತ್ರಿಗೆ ಚೆನ್ನೈ ತಲುಪಿದರು. ಕೊತ ಕೊತ ಕುದಿಯುವ ಸೆಕೆಯಲ್ಲಿ ಬೆವೆತು ಮಿಂದವರಿಗೆ ರಾತ್ರಿ ಹವಾನಿಯಂತ್ರಿತ ಹೋಟೇಲಿನಲ್ಲಿ ಮಲಗಿದ್ದೊಂದೇ ನೆನಪು!

ಬೆಳಿಗ್ಗೆ ಎದ್ದು ಅಮೇರಿಕಾದ ವೀಸಾ ಕಚೇರಿಗೆ ಹೋದವರಿಗೆ ಸ್ವಾಗತಿಸಿದ್ದು ಉದ್ದನೆಯ ಪಾಳಿ.  ಹೆಚ್ಚು ಕಡಿಮೆ  ಸಂಜೆಯವರೆಗೆ ಸುಡು ಬಿಸಿಲಿನಲ್ಲಿ ಬೆಂದದ್ದಾಯ್ತು. ಎಲ್ಲ ಕೈ ಬೆರಳುಗಳ  ಮುದ್ರಣವನ್ನು ದಾಖಲಿಸಿಕೊಂಡರು. ಮರುದಿನ ಮತ್ತೊಂದು ಕಡೆಗೆ ಇನ್ನೂ ಉದ್ದದ ಪಾಳಿ. ಅಲ್ಲೆಲ್ಲಾ ದಾಖಲೆಗಳ ಪರಿಶೀಲಿಸಿದ ಅಮೇರಿಕದವರು ನೀವು ಹೋಗಲು ಅಡ್ಡಿ ಇಲ್ಲ ಅಂತ ಸೀಲು ಹೊಡೆದು ಅಸ್ತು ಅಂದಾಗ ಸುಸ್ತಾಗಿ ಹೋಗಿದ್ದರಿವರು. 
 
ಅಲ್ಲಿಂದ ತಿರುಗಿ ಬೆಂಗಳೂರಿಗೆ ಪ್ರಯಾಣಿಸುವಾಗ ದಾರಿಯಲ್ಲಿ ವೆಂಕಣ್ಣ ಯೋಚನೆಗೆ ಬಿದ್ದಿದ್ದ. ನಾವು ವಾಪಸ್ಸು ಬಂದೇ ಬರುತ್ತೇವೆ, ನಮ್ಮನ್ನು ನಂಬಿ ಅಂತ ಇಷ್ಟೊಂದು ಗೋಗರೆದು ವೀಸಾ ಪಡೆಯಬೇಕೆ? ಈ ಪರಿಯ ಕಷ್ಟ ಪಟ್ಟು ಅವರ ಒಂದು ಸೀಲಿಗೆ ಕಾಯಬೇಕೆ? ಇಲ್ಲಿ ವೀಸಾ ಸಿಕ್ಕಿತೆಂದ ಮಾತ್ರಕ್ಕೆ ಆ ದೇಶಕ್ಕೆ ಹೋದಾಗ ಒಳಗೆ ಬಿಡುವರೆಂಬ ಭರವಸೆಯೂ ಇಲ್ಲಾ. ಯಾವುದೋ ಕಾರಣಕ್ಕೆ ಅವರಿಗೆ ಬೇಡವೆನಿಸಿದರೆ,  ಅಮೇರಿಕಾ ಪ್ರವೇಶಿಸುತ್ತಿದ್ದಂತೆಯೇ ಭಾರತಕ್ಕೆ ವಾಪಸ್ಸು ಕಳಿಸುವ ಸಾಧ್ಯತೆಗಳೂ ಇರುತ್ತವೆ. ಮೂವತ್ತಕ್ಕೂ ಹೆಚ್ಚು ಗಂಟೆಗಳ ಕಾಲ ಪಯಣಿಸಿ ಮತ್ತೆ ಅಷ್ಟೇ ಗಂಟೆಗಳ ಪ್ರಯಾಣ ಮಾಡಿ ವಾಪಸ್ಸು ಬರುವುದೆಂದರೆ? ಅದೇನು ತಮಾಷೆಯೇ? ಇಷ್ಟೆಲ್ಲಾ ಕಾರಣಗಳಿಂದ ತಾನು ಆ ದೇಶಕ್ಕೆ ಯಾಕೆ ಹೋಗಬೇಕು ಅನ್ನುವ ಪ್ರಶ್ನೆ ಅವನಲ್ಲಿ ಬಲವಾಗಿ ಕಾಡತೊಡಗಿ ಅಲ್ಲಿಗೆ ಹೋಗುವದೇ ಬೇಡವೆನಿಸಿತವನಿಗೆ. ಬಾಸ್ ಗೆ ಏನೋ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುವುದೆಂದು ನಿರ್ಧರಿಸಿದ.    

ಹೀಗೆ ತೀರಾ ಯೋಚನೆಯಲ್ಲಿ ಮಗ್ನನಾದವನನ್ನು ಮಗಳು ತಿವಿದು ಎಚ್ಚರಿಸಿ ಕೇಳಿದಳು 
'ಅಪ್ಪಾ ಅಲ್ಲಿ ಸ್ನೋ ಇರ್ತದ ಅಂತ ಹೇಳಿದ್ದ್ಯಲ್ಲಾ? ಎಷ್ಟ ಮಜಾ ಬರ್ತದ. ನಂಗ ಸ್ನೋ ದಾಗ ಆಡಲಿಕ್ಕೆ ಕರಕೊಂಡು ಹೋಗ್ತಿಯಲ್ಲಾ?'
ಇವನು ಅದಕ್ಕೆ ಏನು ಹೇಳುವುದೆಂದು ತಿಳಿಯದೇ ಪೇಚಾಡುತ್ತಿರುವಾಗಲೇ  ಜಾನು  
'ಅಂತೂ ವೀಸಾ ಸಿಕ್ತು. ಎಲ್ಲಾರಿಗೂ ಫೋನ್ ಮಾಡಿ ಹೇಳಬೇಕು.  ಇನ್ನೂ ಏನೂ ಪ್ಯಾಕಿಂಗ್ ಮಾಡಿಲ್ಲಾ. ಭಾಳ ಕೆಲಸಾ ಬಾಕಿ ಅವ ....' ಅಂತ ತನ್ನ ಉಳಿದಿರುವ ಕೆಲಸಗಳ ಪಟ್ಟಿ ಮಾಡತೊಡಗಿದಳು.  
ಅದರರ್ಥ, ಜಾನು ಮತ್ತು ಮರಿ ಜಾನು ಇಬ್ಬರೂ ಅಲ್ಲಿಗೆ ಹೋಗುವುದಕ್ಕೆ ಆಗಲೇ ಸಿದ್ಧರಾಗಿದ್ದರು. ಅವರ ಉಮೇದಿ ಕಂಡು ವೆಂಕಣ್ಣನಿಗೆ ಆಶ್ಚರ್ಯವಾಗಿತ್ತು.  ಅವರಿಗೋಸ್ಕರವಾದರೂ ತನ್ನ 'ಅಲ್ಲಿಗೆ ಹೋಗುವುದು ಬೇಡಾ' ಅನ್ನುವ ನಿರ್ಧಾರ ಬದಲಿಸಲೇ ಬೇಕಾಗಿತ್ತು. ಅವರಿಗೂ ಬೇರೊಂದು ದೇಶವನ್ನು ನೋಡಿದಂತಾಗುತ್ತೆ. ಅಲ್ಲದೇ ತಾನೊಬ್ಬ ಕೋಪದಿಂದ ಅಲ್ಲಿಗೆ ಹೋಗದಿದ್ದರೆ ಆ ದೇಶಕ್ಕೇನು ವ್ಯತ್ಯಾಸವಾದೀತು? ಅಲ್ಲಿಗೆ ಹೋಗಲು ಇನ್ನೂ ಒಂದೆ ವಾರ ಬಾಕಿ ಇತ್ತು. ಯಾವುದೇ ತಯ್ಯಾರಿಗಿಂತಲೂ ಮಾನಸಿಕವಾಗಿ ಸಿಧ್ಧವಾಗುವುದು ಅತೀ ಮುಖ್ಯವಾಗಿತ್ತು. ಕಾರಿನ ಡೆಕ್ಕಿನಲ್ಲಿ ಚೆನ್ನೈ ಎಕ್ಸ್ಪ್ರೆಸ್ಸ್ ಸಿನೆಮಾದ "ರೆಡಿ ಸ್ಟೆಡಿ ಪೊ ಪ್ಪೊ ಪ್ಪೊ ಪ್ಪೊ" ಹಾಡು ಸಾಂದರ್ಭಿಕವೆನಿಸುತ್ತಿತ್ತು!   
 

Monday, September 29, 2014

ವಿಸ್ಮಯದ ಮಾಯಾಲೋಕ!

(http://www.panjumagazine.com/?p=8609)

ಕಾರ್ಪೊರೇಟ್ ಜಗತ್ತಿನಲ್ಲಿ, ವರ್ಷಕ್ಕೊಮ್ಮೆಯೋ, ಎರಡು ಸರ್ತಿಯೋ ಟೀಮ್ ಔಟಿಂಗ್ (team outing) ಅಂತ ಮಾಡುತ್ತಾರೆ. ಒಂದು ದಿನದ ಮಟ್ಟಿಗೆ ಕಚೇರಿಯ ಸಹೋದ್ಯೋಗಿಗಳೆಲ್ಲರೂ ಬೆಂಗಳೂರಿನಿಂದ ಸ್ವಲ್ಪ ಹೊರ ವಲಯದಲ್ಲಿರುವ ರಿಸಾರ್ಟ ಒಂದರಲ್ಲಿ ಕಾಲ ಕಳೆದು ಬರುತ್ತಾರೆ. ಅಲ್ಲಿ ಆಟವಾಡಿಸುತ್ತಾರೆ, ಅಬ್ಬರದ ಸಂಗೀತವಿರುತ್ತೆ, ನೃತ್ಯವಿರುತ್ತೆ. ತಮ್ಮ ಒತ್ತಡದ ಕೆಲಸದ ಮಧ್ಯೆ ದಣಿದ ಜೀವಗಳಿಗೆ ಒಂದಿಷ್ಟು ವಿರಾಮ ಕೊಡಿಸುವ ಪ್ರಯತ್ನ ಅದು. ಅದರ ಘೋಷಣೆಯಾಗುತ್ತಲೇ ಎಲ್ಲರಿಗೂ ಖುಷಿ, ಇನ್ನೂ ಕೆಲವು ಆತ್ಮಗಳಂತೂ ಸಂತಸದಿಂದ ಅರಳುತ್ತವೆ. ಆ ಆತ್ಮಗಳ ನೆಲೆಯಾಗಿರುವ ದೇಹಗಳಿಗೊಂದು, ವಿಶಿಷ್ಠವಾದ ಅವಕಾಶ ಆ ಔಟಿಂಗಿನ ನೆಪದಲ್ಲಿ ಲಭ್ಯವಾಗುತ್ತದೆ. ಅದು ಕಂಠ ಪೂರ್ತಿ ಮದ್ಯಪಾನ ಮಾಡುವ ಒಂದು ಸುವರ್ಣ(?) ಅವಕಾಶ. ಒಟ್ಟಿನಲ್ಲಿ ಎಲ್ಲಾ ಆತ್ಮಗಳ ಸಂತೃಪ್ತಿಗಾಗಿಯೇ ಕಂಪನಿಗಳು ಈ ತರಹದ ಔಟಿಂಗುಗಳನ್ನು ಆಗಾಗ ನಡೆಸುತ್ತಾರೆ. ಅದರ  ಬಗ್ಗೆ ವಿವರವಾಗಿ ಮುಂದೆ ಯಾವಾಗಲಾದರೂ ಬರೆಯುವ ಮನಸ್ಸಿದೆ.

ಮೊನ್ನೆ ೧೯ ನೇ ದಿನಾಂಕಕ್ಕೆ ಇಂಥದೊಂದು ಔಟಿಂಗಿಗೆ ನಾನು ಹೋಗುವದಿತ್ತು. ನನಗೊಳ್ಳೆಯ ಧರ್ಮ ಸಂಕಟ! ಅದಕ್ಕೆ ಕಾರಣವೆಂದರೆ, ಅದೇ ದಿನ ಸಂಜೆ ನಮ್ಮ ನಾಟಕ ತಂಡವಾದ 'ರಂಗ ವಿಸ್ಮಯ' ದ ನಾಟಕವೊಂದರ ಮೊಟ್ಟ ಮೊದಲ ಪ್ರದರ್ಶನವಿತ್ತು. ನನಗೆ ಔಟಿಂಗು ತಪ್ಪಿಸಲಾಗದು, ನಾಟಕವನ್ನಂತೂ ಬಿಡುವ ಚಾನ್ಸೇ ಇರಲಿಲ್ಲಾ. ಇದು ಬೆಂಗಳೂರಿನ ಉತ್ತರ ದಿಕ್ಕಿಗಿದ್ದರೆ, ನಾಟಕದ ಪ್ರದರ್ಶನವಿದ್ದದ್ದು ದಕ್ಷಿಣಕ್ಕೆ! ಆದರೆ ಇದು ಬೆಳಿಗ್ಗೆ, ಅದು ಸಂಜೆ ಇದ್ದದ್ದು ಒಂದು ರೀತಿಯಲ್ಲಿ ಅನುಕೂಲ ವಾಗಿತ್ತು. ಔಟಿಂಗಿನಲ್ಲಿ ದೈಹಿಕವಾಗಿ ಹಾಜರಾಗಿದ್ದೆನಾದರೂ ನನ್ನ ಗಮನವೆಲ್ಲಾ ಸಂಜೆ ನಡೆಯುವ ನಾಟಕದ ಕಡೆಗೇ  ಇತ್ತು. ಇಲ್ಲಿ ಮದ್ಯಾಹ್ನದ ಊಟ ಮುಗಿಸಿ, ಅಂತೂ ಇಂತೂ ಎಲ್ಲರ ಕಣ್ಣು ತಪ್ಪಿಸಿಕೊಂಡು ಕೆಂಗಲ್ ಹನುಮಂತಯ್ಯ ಕಲಾಸೌಧಕ್ಕೆ ಆಗಮಿಸಿದಾಗ ಸಂಜೆ ೫:೩೦.

ಅದು ಶ್ರೀ. ಪೂರ್ಣಚಂದ್ರ ತೇಜಸ್ವಿ ಬರೆದ ಮಾಯಾಲೋಕ ಕೃತಿಯ ನಾಟಕ ರೂಪ. ಅದಕ್ಕೆ ಆ ರೂಪ ಕೊಟ್ಟು ನಿರ್ದೇಶಿಸಿದವರು 'ರಂಗ ವಿಸ್ಮಯ' ದ ರುವಾರಿ ಹಾಗೂ ಸತತ ಮೂರು ದಶಕಗಳಿಂದ ವಿವಿಧ ರೀತಿಯಲ್ಲಿ ರಂಗ ಸೇವೆ ಮಾಡಿಕೊಂಡಿರುವ ಅ. ನಾ. ರಾವ್ ಜಾಧವ್. ಅವರು ನನ್ನ ಗುರುಗಳು. ನಾನು  ಕಳೆದ ಕೆಲವು ತಿಂಗಳಿನಿಂದ ರಂಗ ವಿಸ್ಮಯದಲ್ಲಿ ರಂಗ ತರಬೇತಿ ಪಡೆಯುತ್ತಿದ್ದೇನೆ. ಪ್ರತಿ ಭಾನುವಾರ ಅಲ್ಲಿ ನಾನು ಭಾಗವಹಿಸುವ ನಾಲ್ಕು ಗಂಟೆಗಳು ಕಳೆದು ಹೋದದ್ದೇ ಗೊತ್ತಾಗುವುದಿಲ್ಲ.               

ಅವರು ಕೊಡುವ ತರಬೇತಿ ವಿಶಿಷ್ಠವಾದದ್ದು. ಅಲ್ಲಿ ಅವರು ಮೊಟ್ಟ ಮೊದಲು ಕಲಿಸೋದು ಕನ್ನಡ ಓದುವುದನ್ನ! ಅದೂ ಗಟ್ಟಿಯಾಗಿ, ಸ್ಫುಟವಾಗಿ ಓದಬೇಕು. ಅಲ್ಲಿಯವರೆಗೆ ಅವರು ಬಿಡುವುದಿಲ್ಲ! ಜಾಧವ್ ಅವರು ಹೇಳುವಂತೆ, ನಾವು ಮನದೊಳಗೆ ಓದಿಕೊಳ್ಳುವುದನ್ನು ಎಷ್ಟು ಬಳಕೆ ಮಾಡಿಕೊಂಡಿದ್ದೇವೆಂದರೆ, ನಮ್ಮ ನಾಲಿಗೆಗೆ ಕೆಲವು ಅಕ್ಷರಗಳ ಉಚ್ಚಾರದ ರೂಢಿಯೇ ತಪ್ಪಿ ಹೋಗಿರುತ್ತದೆ. ಅದಕ್ಕೆ, ಸರಿಯಾದ ಸಮಯದಲ್ಲದು ಕೈ ಕೊಡುತ್ತದೆ! ಅವರು ಹೇಳೋದು ಸರಿಯೆ. ಇದರ ಜೊತೆಗೆ ಪೇಪರ್ ಓದಿಸುತ್ತಾರೆ, ಅಲ್ಲಿ ಬಂದವರೆಲ್ಲರೂ ಒಂದೊಂದು ಹಾಡು ಹೇಳಲೇಬೇಕು. ಈ ಎಲ್ಲ ವಿಧಾನಗಳಿಂದ ನಮ್ಮಲ್ಲಿನ ನಾಚಿಕೆ ಹೆದರಿ ಓಡಿ ಹೋಗುತ್ತೆ! ಇದೆಲ್ಲ ಆದ ಮೇಲೆ ಸಂಭಾಷಣೆಯನ್ನು ವಿವಿಧ ಹಾವಭಾವಗಳೊಂದಿಗೆ ಹೇಳುವದನ್ನು ಕಲಿಸಿಕೊಡುತ್ತಾರೆ. ತುಂಬಾ ಜನರು ಅವರಿಂದ ತರಬೇತಿ ಪಡೆದು ಬರೀ ನಾಟಕದಲ್ಲಷ್ಟೇ ಅಲ್ಲ, ಶಾಲೆಗಳಲ್ಲಿ ಹಾಗೂ ವೃತ್ತಿಯಲ್ಲಿ ಒಳ್ಳೆ ಪ್ರಗತಿ ಹೊಂದಿದ್ದಾರೆ. ಅಲ್ಲಿ ಬರುವವರು ವಿವಿಧ ಸ್ತರಗಳಿಂದ ಬಂದವರೂ, ಬೇರೆ ಬೇರೆ ವಯೋಮಾನದವರೂ ಇರುತಾರೆ. ಅಲ್ಲಿ ಯಾವುದೇ ಭೇದವಿಲ್ಲ. ಎಲ್ಲರೂ ಕಲಾವಿದರೇ!

ಶ್ರೀಯುತ. ಜಾಧವ್ ಅವರ ಬಗ್ಗೆ ಇನ್ನಷ್ಟು ಹೇಳಬೇಕೆಂದರೆ, ಅವರು ತುಂಬಾ ಓದಿಕೊಂಡಿದ್ದಾರೆ. ತೇಜಸ್ವಿಯವರ ನಿಕಟವರ್ತಿಗಳು, ಹಾಗೂ ಅವರ ಹಲವು ಕೃತಿಗಳಿಗೆ ನಾಟಕದ ರೂಪ ಕೊಟ್ಟು ಯಶಸ್ವಿಯಾಗಿ ಪ್ರದರ್ಶನ ಮಾಡಿಸಿದ್ದಾರೆ. ಅವರ ಇನ್ನೊಂದು ವಿಶೇಷತೆಯೆಂದರೆ, ಅವರ ನಾಟಕಗಳಲ್ಲೆಲ್ಲ ಅವರ ವಿದ್ಯಾರ್ಥಿಗಳೇ ಇರುತ್ತಾರೆ. ಕೆಲವು ಹಳೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರೆಲ್ಲಾ ಹೊಸಬರೇ! ಅವರಿಗೆಲ್ಲ ಅದೊಂದು ವಿಬಿನ್ನ ಅನುಭವ ಹಾಗೂ ಕಲಿಕೆ.

ಅವತ್ತಿನ ನಾಟಕ  'ಮಾಯಾ ಲೋಕ' ದಲ್ಲಿ ಗುರುಗಳು ನನಗೂ ಒಂದು ಪಾತ್ರ ವಹಿಸಿದ್ದರು. ಆದರೆ ಪ್ರತಿ ದಿನ ಸಂಜೆ ೭ ಗಂಟೆಗೆ ರಿಹರ್ಸಲ್ ಇರುತ್ತಿತ್ತು. ನನಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನಮ್ಮ ಕಂಪನಿಯಲ್ಲಿ ನಮ್ಮ ಅಸಲಿ ನಾಟಕ ಶುರುವಾಗುವುದೇ ಸಂಜೆಗೆ! ಅದೇನೆ ಇರಲಿ, ನಾನು ಅದರಲ್ಲಿಲ್ಲದಿದ್ದರೂ ನಮ್ಮ ತಂಡದ ನಾಟಕ ನೋಡುವ ಸೌಭಾಗ್ಯವನ್ನಾದರೂ ತಪ್ಪಿಸಿಕೊಳ್ಳದೆ ಅಲ್ಲಿಗೆ ಹೋಗಿದ್ದೆ.  

ಆ ನಾಟಕದ ವಿಶೇಷವೆಂದರೆ, ಅದರಲ್ಲಿದ್ದ ಒಟ್ಟು ಪಾತ್ರಗಳು ೪೦! ಹದಿನಾರು ದೃಶ್ಯಗಳು. ಇಷ್ಟೆಲ್ಲ ಪಾತ್ರಗಳ ಜೊತೆಗೆ, ಹೆಚ್ಚು ಕಡಿಮೆ  ಮುಕ್ಕಾಲು ಪ್ರತಿಶತ ಜನ ಹೊಸಬರನ್ನು ಹಾಕಿಕೊಂಡು ನಾಟಕ ಮಾಡಿಸುವುದೆಂದರೆ ಅದೊಂದು ಸಾಹಸವೇ ಸರಿ! ಅದೂ ಅಲ್ಲದೆ ಅವತ್ತು ಡಾ. ಚಂದ್ರಶೇಖರ್ ಕಂಬಾರ್ ಹಾಗೂ ಡಾ. ಬಿ.ವಿ. ರಾಜಾರಾಮ್ ವಿಶೇಷ ಅಹ್ವಾನಿತರು. ಸಭಾಂಗಣವಂತೂ  ಕಿಕ್ಕಿರಿದು ತುಂಬಿತ್ತು. ನಾಟಕವಂತೂ ಅದ್ಭುತವಾಗಿ ಮೂಡಿ ಬಂತು. 'ವೇಷಧಾರಿಗಳ ಅಸಲಿ ನಾಟಕ' ಅನ್ನುವ ಟ್ಯಾಗ್ ನೊಂದಿಗೆ ಸುಂದರ ನಿರೂಪಣೆ, ತೆಳುವಾದ ಹಾಸ್ಯ, ವ್ಯಂಗ್ಯಗಳಿಂದ ಒಳ್ಳೆ ಮನರಂಜನೆ ಕೊಡುವಂತಹ ನಾಟಕವದು. ಹಿನ್ನೆಲೆ ಗಾಯನವಂತೂ ಮನೆಗೆ ಹೋಗುವ ತನಕವೂ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಅವರ ಹಾಗೂ ತಂಡದ ಪ್ರಯತ್ನ ಅದ್ಭುತ ಯಶಸ್ಸು ಕಂಡಿತು! ಪ್ರೇಕ್ಷಕರ ನಗು ಹಾಗೂ ಚಪ್ಪಾಳೆಗಳಲ್ಲೇ ಅದು ಸ್ಪಷ್ಟವಾಗಿತ್ತು.

ಆ ಯಶಸ್ವಿ ಪ್ರದರ್ಶನದ ಬಳಿಕ ಆ ತಂಡದಲ್ಲಿ ಪ್ರತ್ಯಕ್ಷವಾಗಿ  ಹಾಗೂ ಪರೋಕ್ಷವಾಗಿ ಭಾಗವಹಿಸಿದ ತಂಡದ ಸದಸ್ಯರ ಮುಖದಲ್ಲಿ ಮೂಡಿದ್ದ ಧನ್ಯತಾ ಭಾವ, ಏನೋ ಸಾಧಿಸಿದ ತೃಪ್ತಿ ಇದೆಯಲ್ಲ, ಅದನ್ನು ನೋಡಿ ಖುಷಿಯಾಯ್ತು. ಆ ಖುಷಿ ನಮ್ಮ ಕಾರ್ಪೋರೇಟ್ ಔಟಿಂಗಿನಲ್ಲಿ ದೊರೆಯುವ ಖುಷಿಗಿಂತ ಮೇಲು ಅನಿಸಿತು. ಇದು ಮತ್ತೆ ಮತ್ತೆ ನೆನಪು ಮಾಡಿಕೊಂಡು ಮನಸ್ಸಿಗೆ ಮುದ ನೀಡುತ್ತ ಶಾಶ್ವತವಾಗಿರುತ್ತದೆ. ಅದೇ, ಔಟಿಂಗು ಆ ಮಟ್ಟಿಗಿನ ತಾತ್ಕಾಲಿಕ, ಕ್ಷಣಿಕ ಸುಖವೆನಿಸಿ, ಮತ್ತೆ ಸೋಮವಾರ ಕೆಲಸಕ್ಕೆ ಹೋಗುವ ಚಿಂತೆಯೊಂದಿಗೆ ಮುಗಿಯುತ್ತೆ. ಅದರ ಬದಲು ಔಟಿಂಗುಗಳು ಕೂಡ ಇದೇ ತರಹ ಸೃಜನ ಶೀಲವಾಗಿದ್ದರೆ ಅದಕ್ಕೊಂದು ಸಾರ್ಥಕತೆ ಇರುತ್ತದಲ್ಲವೆ? ಇದು ಅವತ್ತು ನನ್ನ ಮನದಲ್ಲಿ ಮೂಡಿದ ಪ್ರಶ್ನೆ.    

           

Monday, September 15, 2014

ಬೆಂಬಿಡದ ಭೂತ (ಅತೀಂದ್ರಿಯ ಅನುಭವದ ಕಥೆಗಳು - ಭಾಗ ೬)

(http://www.panjumagazine.com/?p=8489)

---
ಈ ಕಥೆ ನನ್ನ ಸಹೋದ್ಯೋಗಿ ರಮೇಶ ನಾಯಕ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದದ್ದು

---
  
ನಾನು ಹುಟ್ಟಿ ಬೆಳೆದು ದೊಡ್ಡವನಾಗಿದ್ದು ಭಟ್ಕಳದಲ್ಲಿ. ನಮ್ಮ ಮನೆಯಿಂದ ಎಡವಿ ಬಿದ್ದರೆ ಸಮುದ್ರ! ಅಂದರೆ ಅದು ಅಷ್ಟು ಹತ್ತಿರದಲ್ಲಿದೆ ಅಂತ ಅರ್ಥ. ಅದು ಬೇರೆಯವರಿಗೆ ಕೇಳೋಕೆ ಚಂದ. ಪರ ಊರಿನಿಂದ ಒಂದೆರಡು ದಿನಕ್ಕೆ ಅಂತ ನಮ್ಮೂರಿಗೆ ಬಂದವರಿಗೆ ಸಮುದ್ರಕ್ಕೆ ಹೋಗಿ  ಸ್ನಾನ ಮಾಡಲು ಅಡ್ಡಿ ಇಲ್ಲ. ಅಲ್ಲೇ ಇರೋವ್ರಿಗೆ ಕಷ್ಟ. ಅದರ ಪಾಡಿಗೆ ಅದಿರುತ್ತೆ ಆದರೂ, ಸಮುದ್ರ ತೀರದಲ್ಲಿಯ ಊರಿನಲ್ಲಿದ್ದು, ಬಿಸಿಲಿನ ಝಳದಲ್ಲಿ ಬಸಿಯುವ ಬೆವರಿನಲ್ಲಿ ನಿತ್ಯ ಸ್ನಾನ ಮಾಡುವವರಿಗೇ ಗೊತ್ತು ಅದರ ಬವಣೆ. ಅದೇನೆ ಇರಲಿ ನನಗಂತೂ ನನ್ನ ಊರು ಇಷ್ಟ! 
 
ನಮ್ಮೂರಿನ ಬದಿ ಬೇಸಿಗೆಯ ಝಳ ಶುರು ಆಗೋದರ ಜೊತೆ  ಜೊತೆಗೆ ಇನ್ನೊಂದು ಸೆಕೆ ಶುರು ಆಗುತ್ತೆ.... ಅದು ಯಕ್ಷಗಾನದ್ದು! ಅದೂ ಒಂದು ಸೀಸನ್ ತರಹವೇ! ಅದು ಬಂತೆಂದರಂತೂ ಬಣ್ಣ ಹಚ್ಚುವವರ ಸಡಗರ ಹೇಳತೀರದ್ದು.  ಬಾಯಲ್ಲಿ ಕವಳ (ಎಲೆ, ಅಡಿಕೆ ಮತ್ತು ತಂಬಾಕುಗಳ ರಸಾಯನ!), ಅದನ್ನು ಜಗಿದು ಜಗಿದು ಬಾಯಿಯ ಎರಡೂ ಬದಿಗೆ ವಸರುತ್ತಿರುವ ಕೆಂಪು ರಸ, ಅದಕ್ಕೆ ಪೂರಕವಾದ ಮುಖಕ್ಕೆ ಲೇಪಿಸಿಕೊಂಡ ಯಕ್ಷನ ಪಾತ್ರದ ಬಣ್ಣ, ಅದರ ಜೊತೆಗೆ ಸ್ವಲ್ಪ ಜಾಸ್ತಿಯೇ ಹಾವ ಭಾವದೊಂದಿಗೆ ಮಾತಾಡುವ ನಟ ಶಿರೋಮಣಿಗಳ ಹರಟೆಗಳು! ಅದನ್ನು ನೋಡಲು ಎರಡು ಕಣ್ಣು ಸಾಲದು. ಬರೀ ಬಣ್ಣ ಹಚ್ಚುವವರಷ್ಟೇ ಆಲ್ಲ, ಅದನ್ನು ನೋಡಿ ಆನಂದಿಸುವವರೂ ಅದೇ ಸಡಗರದಲ್ಲಿರುತ್ತಾರೆ. ಸಣ್ಣ ಹುಡುಗರಿಂದ ಮುದುಕರವರೆಗೆ ಎಲ್ಲರಿಗೂ ಅದು ಪ್ರಿಯವೇ. ಯಕ್ಷಗಾನ ನಮ್ಮ ಜನರ ರಕ್ತದಲ್ಲಿದೆ. ಅದರ ಬಗೆಗಿನ ಪ್ರೀತಿ ಅವರ ಮುಖದಲ್ಲಿ ಕಣ್ಣಿಗೆ ಕಾಣುವಂತೆ ಕುಣಿಯುತ್ತಿರುತ್ತದೆ. ನನಗಂತೂ ಚಿಕ್ಕಂದಿನಿಂದಲೂ ಅದರ ಬಗ್ಗೆ ಒಲವು ಜಾಸ್ತಿ. 
 
ಒಂದು ಸಲ, ನಮ್ಮ ಊರಿನ ಹತ್ತಿರವೇ ಇರುವ ಶಿರೂರಿನಲ್ಲಿ ಯಕ್ಷಗಾನದ ಆಟವಿತ್ತು. ನಾನಾಗ ಎಂಟನೇ ತರಗತಿಯಲ್ಲಿದ್ದೆನೆಂದು ಕಾಣುತ್ತೆ. ಸಾಮಾನ್ಯವಾಗಿ ಯಕ್ಷಗಾನದ ಆಟ ಶುರುವಾಗೋದು ರಾತ್ರಿನೇ. ಅಮೇಲೆ ಬೆಳಗಿನ ಜಾವದ ವರೆಗೆ ನಡೆಯುತ್ತದೆ. ಶಿರೂರು, ನಮ್ಮೂರಿನಿಂದ ಸುಮಾರು ೧೦ ಕಿಲೋಮೀಟರ್ ಅಂತರದಲ್ಲಿದೆ. ಅದು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದಾದರೂ ನಮ್ಮ ಊರಿಗೆ ಹತ್ತಿರದಲ್ಲಿದೆ. ಒಂಥರ ನಮಗೆ ಗಡಿ ಪ್ರದೇಶವಿದ್ದಂತೆ! ಆ ರಾತ್ರಿಯ ಆಟಕ್ಕೆ ಹೋಗುವುದೆಂದು ನಿರ್ಧರಿಸಿಯಾಗಿತ್ತು. ನನ್ನ ಜೊತೆಗೆ, ನನಗಿಂತ ವಯಸ್ಸಿನಲ್ಲಿ ಎರಡರಿಂದ ಮೂರು ವರ್ಷಗಳ ಅಂತರದಲ್ಲಿ ಹಿರಿಯರಾದ  ನಾಲ್ಕೈದು ಜನ ಹುಡುಗರೂ ಬರುವವರಿದ್ದರು. ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮನೂ ಬರುವೆನೆಂದ. ಈ ತಮ್ಮಂದಿರನ್ನು ಸಂಭಾಳಿಸುವುದು ಕಷ್ಟವೇ ಆದರೂ , ಇರಲಿ ಅಂತ ನಾನು ರಿಸ್ಕ್ ತೊಗೊಂಡಿದ್ದೆ. ಯಾಕೆಂದರೆ, ನಮ್ಮ ತಂಡದಲ್ಲಿ ಅವನೇ ಎಲ್ಲರಿಗಿಂತ ಚಿಕ್ಕವನು.
 
ರಾತ್ರಿ ಎಂಟು ಗಂಟೆಗೆಲ್ಲಾ ಊಟ ಮುಗಿಸಿ ನಡೆಯುತ್ತಾ ಹೊರಟೆವು. ಆಗೆಲ್ಲಾ ಕಾರಿಗಿಂತ ಕಾಲಿನ ಬಳಕೆಯೇ ಜಾಸ್ತಿ ಇತ್ತು. ನಡೆಯುತ್ತ ಆ ದೂರ ಕ್ರಮಿಸಲು ಒಂದು ಗಂಟೆಯ ಮೇಲೆ ಬೆಕಿತ್ತು. ಎಲ್ಲರೂ ಬಿಸಿ ರಕ್ತದ ಹುಡುಗರೇ. ಅದು ಇದು ಹರಟೆ ಹೊಡೆಯುತ್ತಾ ಸಾಗಿತ್ತು ನಮ್ಮ ಪಯಣ. ನನ್ನ ನಿರೀಕ್ಷೆಯಂತೆ ಸ್ವಲ್ಪ ದೂರ ಹೋಗುತ್ತಲೇ ನನ್ನ ತಮ್ಮನ ಕಿರಿ ಕಿರಿ ಶುರುವಾಯ್ತು. ಎಷ್ಟಂದ್ರು ಚಿಕ್ಕವನು. ನಡೆದು ಬರುತ್ತಿದ್ದನಾದ್ದರಿಂದ ಅವನ ಕಾಲು ನೋಯಲು ಶುರುವಾಗಿತ್ತೆಂದು ಕಾಣುತ್ತೆ. ಆದರೆ ನಾವಾಗಲೇ ಊರಿನಿಂದ ಸುಮಾರು ದೂರ ಬಂದಿದ್ದೆವಾದ್ದರಿಂದ ಅವನನ್ನು  ವಾಪಸ್ಸು ಮನೆಗೆ ಬಿಟ್ಟು ಬರುವ ಪರಿಸ್ಥಿತಿಯೂ ಇರಲಿಲ್ಲ. ನನಗೋ ಅದು ಬಿಸಿ ತುಪ್ಪದಂತೆ ಉಗುಳಲೂ ಆಗದೇ ನುಂಗಲೂ ಆಗದಂತಹ ಧರ್ಮಸಂಕಟ! ಅವನಿಗೆ ಏನೋ ಪುಸಲಾಯಿಸಿ ಕರೆದೊಯ್ಯುತ್ತಿದ್ದೆ. ಆದರೂ ಅವನು ಎಲ್ಲರಿಗಿಂತ ಹಿಂದೆಯೇ ಉಳಿದಿದ್ದ.  ಕಾಲೆಳೆಯುತ್ತ ನಡೆಯುತ್ತಿದ್ದ. ಇವನ ಜೊತೆಗೆ ನನಗಿಂತ ವಯಸ್ಸಿನಲ್ಲಿ ದೊಡ್ಡವರಾದ ಹುಡುಗರ ಜೊತೆಗೆ ನಾನೂ ಹರಟೆ ಹೊಡೆಯುತ್ತ ಸಾಗಿದ್ದೆನಾದರೂ ತಮ್ಮನ ಮೇಲೊಂದು ಕಣ್ಣಿಟ್ಟಿದ್ದೆ. ನಾವು ನಡೆಯುತ್ತಿದ್ದುದು ಹೆದ್ದಾರಿ ಆಗಿತ್ತು, ಕತ್ತಲು ಬೇರೆ. ಆದರೆ ಹುಣ್ಣಿಮೆಯಾದ್ದರಿಂದ ಸ್ವಲ್ಪ ಬೆಳಕು ಇತ್ತಾದರೂ ಆ ದಾರಿಯಲ್ಲಿ ಆಗಾಗ ಓಡಾಡುವ ಟ್ರಕ್ಕುಗಳೇ ನಮಗೆ ದಾರಿ ದೀಪಗಳು.
 
ಹಾಗೆ ಸ್ವಲ್ಪ ಮುಂದೆ ಸಾಗಿದರೆ ಅಲ್ಲಿ ಒಂದು ದಿಬ್ಬ ಇದೆ. ಅದಕ್ಕೆ ಗೋಳಿ ಮರದ ಏರು ಅಂತಾರೆ. ಅಲ್ಲಿ ಮೊದಲೇ ಕೆಲವು ದುರ್ಘಟನೆಗಳು ಜರುಗಿ ಕೆಲವು ಜನ ದುರ್ಮರಣ ಹೊಂದಿದ್ದರು. ಅವರಲ್ಲಿ ಕೆಲವರು ಭೂತಗಳಾಗಿದ್ದಾರೆ ಎಂಬ ವದಂತಿಯೂ ಇತ್ತು. ನಾವಾಗಲೇ ಆ ಜಾಗಕ್ಕೆ ಬಂದಾಗಿತ್ತು. ಹಾಗೆ ಕುಂಟುತ್ತ ಸಾಗಿದ್ದ ನನ್ನ ತಮ್ಮ ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎಂಬ ಹೊಸ ರಗಳೆ ಶುರು ಮಾಡಿದ್ದ. ಅದೆಲ್ಲಾ ನಿನ್ನ ನೆಪ ಸುಮ್ಮನೆ ಬಾ ಅಂತ ಗದರಿದೆನಾದರೂ, ಭೂತದ ಭಯವಿದ್ದುದರಿಂದ ಒಂದು ಸಲ ಅವನ ಹಿಂದೆ ತಿರುಗಿ ನೋಡಿದವನಿಗೆ ಎದೆ ಧಸಕ್ಕೆಂದಿತು. ಆ ಬೆಳದಿಂಗಳ ಮಸುಕು ಮಸುಕಾದ ಬೆಳಕಿದ್ದ ಕತ್ತಲಲ್ಲಿ ನನ್ನ ಕಣ್ಣಿಗೆ ಕಂಡದ್ದು ಒಂದು ಬಿಳಿ ಅಕೃತಿ! ನಾನು ನನ್ನ ಮುಂದಿದ್ದ ಹುಡುಗರಿಗೂ ಅದನ್ನು ತಿಳಿಸಿ , ತಮ್ಮನ ಕೈ ಹಿಡಿದು ಲಗು ಬಗೆಯಿಂದ ಎಲ್ಲರೂ ನಡೆಯತೊಡಗಿದೆವು. ಎಲ್ಲರಿಗೂ ಭಯ ಶುರುವಾಗಿತ್ತು. ಆ ದಿಬ್ಬದ ಮೇಲೆ ತಲುಪಿದ್ದೆವು. ಅಲ್ಲಿಂದ ದೂರದಲ್ಲಿ ಯಕ್ಷಗಾನ ನಡೆಯುವ ಸ್ಥಳ ಕಾಣತೊಡಗಿತ್ತು. ಅಲ್ಲಿನ ಸ್ಪೀಕರಿನಲ್ಲಿ ಹಾಕಿದ್ದ ಹಾಡು ಕೇಳುತ್ತಿತ್ತಾದರೂ ಇನ್ನೂ ಸುಮಾರು ದೂರ ನಡೆಯುವುದು ಬಾಕಿ ಇತ್ತು. ಆ ಬೆಂಬಿಡದ ಭೂತವನ್ನು ತಪ್ಪಿಸಿಕೊಳ್ಳಲು ನಾವೆಲ್ಲಾ ಓಡಲು ತೊಡಗಿದೆವು. ಅದರಿಂದ ತಪ್ಪಿಸಿಕೊಂಡೆವಾ ಎಂದು ತಿರುಗಿ ನೋಡಿದರೆ ಅದೂ ಕೂಡ ನಮ್ಮ ಹಿಂದೆಯೇ ಓಡಿ ಬರುತ್ತಿತ್ತು! ಇದು ನಮ್ಮ ಬೆನ್ನ ಬಿಡಲಾರದೆಂದು ನಮಗೆ ಅರಿವಾಯ್ತು. ಈಗ ಓಡುವುದರ ಜೊತೆಗೆ ಎಲ್ಲರೂ ಕೂಗುವುದಕ್ಕೆ ಶುರು ಮಾಡಿದ್ದೆವು. ಹಾಗೆ ಸುಮಾರು ದೂರ ಓಡಿರಬೇಕು. ನಮ್ಮ ಅದೃಷ್ಟಕ್ಕೆ ಮುಂದಿನಿಂದ ಒಂದು ಟ್ರಕ್ಕು ಬರುವುದು ಕಂಡಿತು. ಅದರ ಬೆಳಕಿಗೆ ನಮಗೆ ಸ್ವಲ್ಪ ಧೈರ್ಯ ಬಂತು. ಟ್ರಕ್ಕು ನಮಗೆ ಸ್ವಲ್ಪ ಹತ್ತಿರಕ್ಕೆ ಬರುತ್ತಿದ್ದಂತೆ ಸ್ವಲ್ಪ ಹಿಂತಿರುಗಿ ನೋಡಿದೆವು. ಈಗ ದೆವ್ವದ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು!
 
ಅದೇನಾಗಿತ್ತೆಂದರೆ, ಒಂದು ಪ್ಲ್ಯಾಸ್ಟಿಕ್ಕಿನ ಚೀಲಕ್ಕೆ ಗಾಳಿ ಊದಿ ಯಾವನೋ ಪುಣ್ಣ್ಯಾತ್ಮ ಗಾಳಿ ಪಟದ ತರಹ ಮಾಡಿ ಅದಕ್ಕೊಂದು ದಾರ ಕಟ್ಟಿ ಬಿಟ್ಟಿದ್ದನೆಂದು ಕಾಣುತ್ತೆ. ಆ ಪಟ ಗಾಳಿಗೆ ತಪ್ಪಿಸಿಕೊಂಡು ಅಲ್ಲಿಲ್ಲಿ ಅಲೆದಾಡಿ, ಅದರ ದಾರದ ತುದಿ ಹೇಗೋ ನನ್ನ ತಮ್ಮನ ಚಪ್ಪಲಿಗೆ ಸಿಕ್ಕಿಕೊಂಡು ತೊಡಕಾಗಿದ್ದು ಅವನ ಅರಿವಿಗೆ ಬಾರದೇ ಹೋಗಿತ್ತು. ಅದು ಸಹಜವಾಗಿಯೇ ಇವನು ಹೋದಲ್ಲೇ ಇವನ ಬೆನ್ನಟ್ಟಿತ್ತು. ಅದೂ ಬಿಳಿಯ ಬಣ್ಣದ್ದಾಗಿದ್ದರಿಂದ ಆ ಕತ್ತಲಲ್ಲಿ ಯಾವುದೋ ಭೂತದ ತಲೆಯಂತೆ ಭಾಸವಾಗಿ ನಮ್ಮ ಬೆವರಿಳಿಸಿತ್ತು! ಕೊನೆಗೂ ಅವನ ಕಾಲಿನಿಂದ ಅದನ್ನು ಬಿಡಿಸಿ ನಮ್ಮ ತಲೆಯಿಂದ ಆ ಭೂತವನ್ನು ಓಡಿಸಿ ಯಕ್ಷಗಾನವನ್ನು ಸವಿದು ಬಂದೆವೆನ್ನಿ!                            



 

Tuesday, September 2, 2014

ಪವಾಡ? (ಅತೀಂದ್ರಿಯ ಅನುಭವದ ಕಥೆಗಳು - ಭಾಗ ೫)

(http://www.panjumagazine.com/?p=8368)

ಈ ಸಲ ಒಂದು ಚಿಕ್ಕ ಘಟನೆಯ ಬಗ್ಗೆ ಹೇಳುತ್ತೇನೆ. ಇದು ನನ್ನ ಅಜ್ಜ (ಅಮ್ಮನ ತಂದೆ) ಅವರಿಗಾದ ಅನುಭವ. ಸುಮಾರು ಐದು ದಶಕಗಳ ಹಿಂದೆ ನಡೆದದ್ದು. ಆಗ ನನ್ನಜ್ಜ ಮಧ್ಯ ವಯಸ್ಕ. ಅವರ ಹೆಂಡತಿ, ಅಂದರೆ ನನ್ನ ಅಜ್ಜಿ, ರಾಘವೇಂದ್ರ ಸ್ವಾಮಿಗಳ ಭಕ್ತಳು. ಅಂತಿಂಥ ಭಕ್ತಳಲ್ಲ, ಘನಘೋರ ಭಕ್ತಳು! ರಾಯರ ಬಗ್ಗೆ ಅವಳಿಗೆ ಸಿಕ್ಕಾಪಟ್ಟೆ ನಂಬಿಕೆ. ಅದೇ ರೀತಿಯಾಗಿ ಅವರ ಸೇವೆಯನ್ನೂ ಚಾಚು ತಪ್ಪದೇ ಮಾಡುತ್ತಿದ್ದಳು. ಅದು ಪೂಜೆ-ಪುನಸ್ಕಾರವೋ, ಉಪವಾಸವೋ ಅಥವಾ ಉರುಳುಸೇವೆಯೋ ಹೀಗೆ ಯಾವುದೋ ಒಂದು ರೀತಿಯಲ್ಲಿ ವ್ಯಕ್ತವಾಗುತ್ತಿತ್ತು. ಅದರಲ್ಲೊಂದು ಶೃದ್ಧೆಯೂ ಇತ್ತು. ರಾಯರು ತನ್ನ ರಕ್ಷಣೆಗಿರುವರೆಂಬ ಬಲವಾದ ನಂಬಿಕೆಯೂ ಅವಳಲ್ಲಿತ್ತು. ರಾಯರ ಮೇಲಿನ ಈ ಪ್ರೀತಿಯಿಂದಾಗಿ ಮನೆಯಲ್ಲಿ ತನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಅವಳು  ಇಟ್ಟಿದ್ದ ಹೆಸರುಗಳಲ್ಲಿ ಬುಹುತೇಕವು ರಾಯರಿಗೆ ಸಂಬಧಿಸಿದವೇ! ಅಮ್ಮನ ಹೆಸರು ಪರಿಮಳ, ಒಬ್ಬ ಮಾಮಾ ರಾಘವೇಂದ್ರ, ಇನ್ನೊಬ್ಬ ಸುಧೀಂದ್ರ, ನಾನು ಗುರುಪ್ರಸಾದ...! 

ಹೀಗೆ ಅವಳು ಮಾಡುತ್ತಿದ್ದ ಅಸಂಖ್ಯಾತ ಸೇವೆಗಳು ಗದಗಿನ ಮಠದಲ್ಲಿ ಅಥವಾ ಮನೆಯಲ್ಲಿ ನಡೆಯುತ್ತಿದ್ದವು. ಆದರೆ  ಕೆಲವು ಸೇವೆಗಳನ್ನು ರಾಯರ ಸನ್ನಿಧಿಯಾದ ಮಂತ್ರಾಲಯಕ್ಕೆ ಹೋಗಿಯೇ ಮಾಡುತ್ತಿದ್ದಳು. ಗಂಡ ಹೆಂಡತಿಯರಿಬ್ಬರೂ ವರ್ಷಕ್ಕೊಮ್ಮೆ ಎರಡೋ ಮೂರೋ ದಿನಗಳು ಅಲ್ಲಿಯೇ ಉಳಿದುಕೊಂಡು, ಸೇವೆಗಳ ಮುಗಿಸಿಕೊಂಡು ಹಿಂತಿರುಗಿ ಬರುತ್ತಿದ್ದರು. ಹೀಗೇ ಒಂದು ಸಲ ಅಜ್ಜ ಅಜ್ಜಿ ಇಬ್ಬರೂ ಮಂತ್ರಾಲಯದಲ್ಲಿದ್ದರು. ಅಜ್ಜಿಯ ಸ್ವಭಾವಕ್ಕೆ ವಿರುದ್ಧವಾಗಿ ನನ್ನ ಅಜ್ಜ. ಅವರು ತುಂಬಾ ನಾಸ್ತಿಕರು ಹಾಗೂ ನಿರ್ಲಿಪ್ತ. ದೇವರು ದಿಂಡರೆಂದರೆ ಅವರಿಗಷ್ಟಕ್ಕಷ್ಟೆ. ಆದರೆ ಅಜ್ಜಿಯ ಭಕ್ತಿಗೆ ಎಂದೂ ಅಡ್ಡಿ ಮಾಡುತ್ತಿರಲಿಲ್ಲ. ಅಜ್ಜಿ ತನ್ನ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದರೆ, ಇವರು ತಮ್ಮಷ್ಟಕ್ಕೆ ತಾವು ಅಲ್ಲಿ ಇಲ್ಲಿ ಅಡ್ಡಾಡಿಕೊಂಡಿರುತ್ತಿದ್ದರು. ಮಂತ್ರಾಲಯದಲ್ಲಿ ಎಷ್ಟು ಹೊತ್ತು ತಾನೇ ಅಡ್ಡಾಡಬಹುದು? ಅದೇ ಕಾರಣಕ್ಕೆ ಅವರು ಹೊತ್ತು ಕಳೆಯುವ ಬೇರೆ ಬೇರೆ ಉಪಾಯಗಳನ್ನು ಕಂಡುಕೊಳ್ಳುತ್ತಿದ್ದರು. ಅವರಿಗೆ ನೀರಿನಲ್ಲಿ ಈಜುವುದು ಚೆನ್ನಾಗಿ ಗೊತ್ತಿತ್ತು. ಮಠದ ಪಕ್ಕದಲ್ಲೇ ತುಂಗೆ ಮೈದುಂಬಿ ಹರಿಯುತ್ತಿದ್ದಳಲ್ಲವೇ? ನನ್ನಜ್ಜನಿಗೆ ಅದೊಂದು ಒಳ್ಳೆ ವಿಹಾರ ಧಾಮವಾಗಿ ಕಂಡಿರಬೇಕು.  ಆರಾಮವಾಗಿ ನದಿಯಲ್ಲಿ ಈಜಾಡಿಕೊಂಡಿರುತ್ತಿದ್ದರು. ಮದ್ಯಾಹ್ನ ಈಜಲು ಶುರು ಮಾಡಿ ಸಂಜೆಯವರೆಗೂ ಹಾಗೆ ವಿಹರಿಸುತ್ತಿದ್ದರು. ಅದೂ ಆಗ ಬೇಸಿಗೆ  ಕಾಲವಾಗಿದ್ದರಿಂದ ನೀರಿನಿಂದ ಎದ್ದು ಬರಲು ಮನಸ್ಸೇ ಆಗುತ್ತಿರಲಿಲ್ಲ.

ಹೀಗೆ ಒಂದು ದಿನ ನೀರಿನಲ್ಲಿ ಈಜಾಡಿಕೊಂಡಿದ್ದರು. ಅವತ್ತು ಗುರುವಾರ ಬೇರೆ. ಅಜ್ಜಿಯ ಸೇವೆಗಳು ಸ್ವಲ್ಪ ಜಾಸ್ತಿಯೇ ಇದ್ದವೆಂದು ಕಾಣುತ್ತದೆ. ಅವಳು ಇನ್ನೂ ಮಠದಲ್ಲೇ ಇದ್ದಳು. ಆಗಲೇ ಸಂಜೆ ಆಗಿತ್ತು, ಬೆಳಕು ಕೂಡ ಕಡಿಮೆಯಾಗುತ್ತಿತ್ತು. ಇವರೂ ಉಮೇದಿಯಲ್ಲಿ, ನದಿಯಲ್ಲಿ ಮುಂದೆ ಮುಂದೆ ಈಜಿಕೊಂಡು ಹೋಗುತ್ತಿದ್ದರು. ದಡದಿಂದ ಸುಮಾರು ದೂರ ಹೋಗಿದ್ದರು. ಅಷ್ಟರಲ್ಲೇ ಅವರ ಎದುರಿನಿಂದ ಒಬ್ಬ ವ್ಯಕ್ತಿ ಈಜಿಕೊಂಡು ಬಂದರಂತೆ. ಅವರು ಸುಮಾರು ವಯಸ್ಸಾದವರೆ. ನನ್ನಜ್ಜನಿಗೆ
'ಇನ್ನೂ ಮುಂದ ಹೋಗಬ್ಯಾಡ್ರೀ. ಅಲ್ಲ್ಯೊಂದು ಸುಳಿ ಅದ.' ಅಂದು ಹಾಗೆ ಮುಂದೆ ಹೋದರಂತೆ. ಸುಳಿಯಲ್ಲಿ ಸಿಕ್ಕರೆ  ಬದುಕುವುದು ಸಾಧ್ಯವಾಗದ ಮಾತು. ಅಜ್ಜ ಅವರ ಮಾತಿಗೆ ಬೆಲೆ ಕೊಟ್ಟು ದಡಕ್ಕೆ ವಾಪಸ್ಸಾದರು. ಮೈ ಒರೆಸಿಕೊಳ್ಳುತ್ತ , ಆ ವ್ಯಕ್ತಿಯನ್ನು ಹುಡುಕಿದರೆ ಅವರಲ್ಲಿರಲಿಲ್ಲ. ಆಮೇಲೆ ಅಜ್ಜ ಯೋಚಿಸಿದಾಗ ಅವರಿಗೆ ರೋಮಾಂಚನವಾಗಿತ್ತು! ಯಾಕೆಂದರೆ ಆ ವ್ಯಕ್ತಿ, ಯಾವ ಕಡೆ ಸುಳಿ ಇದೆ ಅತ್ತ ಹೋಗಬೇಡಾ ಅಂತ ಹೇಳಿದ್ದರೋ ಅದೇ ಜಾಗದಿಂದಲೇ ಈಜಿಕೊಂಡು ಬಂದಿದ್ದರು! ಅದೂ ಅಲ್ಲದೇ ಅವರು ತೋರಿಸಿದ್ದ ಜಾಗದಲ್ಲಿ ನಿಜವಾಗಿಯೂ ಸುಳಿ ಇರುವದನ್ನು ಜನ ಮರುದಿನ ಹೇಳಿದರಂತೆ!

ಅಂದರೆ? ರಾಘವೇಂದ್ರ ಸ್ವಾಮಿಗಳು ನನ್ನ ಅಜ್ಜಿಯ ಸೇವೆಗೆ ಮೆಚ್ಚಿ, ಮಾನವ ರೂಪದಲ್ಲಿ ಬಂದು ನನ್ನಜ್ಜನನ್ನು ಉಳಿಸಿದರೆ. ಅಜ್ಜಿಯ ಮಾಂಗಲ್ಯ ರಕ್ಷಣೆ ಮಾಡಿ, ಅವಳ ಸೇವೆಗೊಂದು ಪುರಸ್ಕಾರ ನೀಡಿದರೆ? ಅಲ್ಲೊಂದು ಪವಾಡ ನಡೆದಿರಬಹುದೇ? ಪವಾಡವೇ ನಡೆದಿದ್ದರೆ ಬೇರೆ ಯಾರೋ ಮನುಷ್ಯನ ಮುಖಾಂತರ ಹೇಳಿಸಬಹುದಿತ್ತಲ್ಲವೆ? ಅಥವಾ ಅಷ್ಟು ಸಮಯವಿಲ್ಲವೆಂದು ತಾವೇ ಖುದ್ದಾಗಿ ದೇವರು ಬಂದು ಕಾಪಾಡಿರಬೇಕೆ?

ಈ ಪ್ರಶ್ನೆಗಳಿಗೆ ಉತ್ತರ ರಾಯರೇ ಹೇಳಬೇಕು!!   


 

ಬಂಧು ಮಿತ್ರರು!

http://surahonne.com/?p=4108

ಫೇಸ್ ಬುಕ್ ಜನಪ್ರೀಯವಾಗುದಕ್ಕಿಂತ ಮೊದಲು ಆರ್ಕುಟ್ ಅನ್ನುವ  ಒಂದು ಸಾಮಾಜಿಕ ಜಾಲ  ತಾಣವಿದ್ದದ್ದು  ಬಹುತೇಕ ಎಲ್ಲರಿಗೂ  ಗೊತ್ತಿರಲೇಬೇಕು.  ಅದರಲ್ಲಿ ಫೇಸ್ ಬುಕ್ಕಿನಲ್ಲಿರದ ಆಯ್ಕೆ ಒಂದಿತ್ತು. ಅದೇನಪಾ ಅಂದ್ರೆ ನಾವು ನಮ್ಮ ಗೆಳೆಯರ ಬಗ್ಗೆ ಹಾಗೂ ಗೆಳೆಯರು ನಮ್ಮ ಬಗ್ಗೆ ಪ್ರಶಂಸೆ (Testimonial) ಬರೆದುಕೊಳ್ಳುವ ಅವಕಾಶ. ಹೆಚ್ಚಾಗಿ ಎಲ್ಲರೂ ಬೇರೆಯವರ ಬಗ್ಗೆ ಒಳ್ಳೆಯದೇ ಬರೆಯುತ್ತಿದ್ದರೆನ್ನಿ. ಪ್ರಶಂಸೆ ಅಂದರೆ ಒಳ್ಳೆಯದೇ ಅಲ್ಲವೇ? ಅದೂ ಅಲ್ಲದೆ, ಕೆಟ್ಟದ್ದು ಬರೆದರೆ ಕೇಳುವವರ್ಯಾರು? ಹಾಗೆ ಬರೆದದ್ದೆ ಆದರೆ ಅದನ್ನು ನಿರಾಕರಿಸುವ ಅಧಿಕಾರ ಬರೆಸಿಕೊಂಡವರಿಗಿರುತ್ತಿತ್ತು! ಆದರೆ  ಫೇಸ್ ಬುಕ್ಕಿನ ಅಬ್ಬರದಲ್ಲಿ ಆರ್ಕುಟ್ ಬದುಕುಳಿಯಲಿಲ್ಲ. ಸಧ್ಯದಲ್ಲೇ ಅದನ್ನು ಮುಚ್ಚುತ್ತಿದ್ದಾರೆ. ಅದೇ ಕಾರಣಕ್ಕೆ ಮೊನ್ನೆ ಅದರೊಳಗೆ ಹೊಕ್ಕು ಹಳೆಯ ಪೋಸ್ಟ್ ಗಳನ್ನು  ನೋಡುತ್ತಿದ್ದಾಗ ನನ್ನ ಬಗ್ಗೆ ಬರೆದ ಎರಡು ಪ್ರಶಂಸಾಬರಹಗಳು ಕುತೂಹಲ ಕೆರಳಿಸಿದವು! ಅದರಲ್ಲಿ ಒಂದು ನನ್ನ ತಮ್ಮ ಗಿರೀಶ ಬರೆದಿದ್ದು. ಅವನು ನನ್ನ ಬಗ್ಗೆ ಅಕ್ಕರೆಯಿಂದ ಬರೆದು ಕೊನೆಗೆ 'ಇವ ನನ್ನ ಅಣ್ಣನಿಗಿಂತ ಹೆಚ್ಚಾಗಿ ನನ್ನ ಮಿತ್ರನ ಹಾಗೆ' ಅಂತ ಬರೆದಿದ್ದ. ಇನ್ನೊಂದು, ನನ್ನ ಕಿರಿಯ ಮಿತ್ರನಾದ ಪವನ ಶಹಪುರ ಬರೆದದ್ದು. ಅವನೂ ಎಲ್ಲ ಬರೆದಾದಮೇಲೆ 'ಇವನು ನನ್ನ ಮಿತ್ರನಿಗಿಂತ ಮಿಗಿಲಾಗಿ ನನ್ನ ಅಣ್ಣನ ಹಾಗೆ' ಅಂತ ಬರೆದಿದ್ದ! ಅಂದರೆ ತಮ್ಮನಿಗೆ ನಾನು ಗೆಳೆಯನಾಗಿದ್ದೆ ಹಾಗೂ ಗೆಳೆಯನಿಗೆ  ಅಣ್ಣನಾಗಿದ್ದೆ!

ಮನುಷ್ಯನ ವರ್ತನೆಯೇ ವಿಚಿತ್ರ ಅಲ್ಲವೇ. ನಾವು ಬೇರೆಯವರಲ್ಲಿ ಅವರಿರುವುದಕ್ಕಿಂತ ಭಿನ್ನವಾದವರನ್ನು  ಕಾಣಲು ಬಯಸುತ್ತೇವೆ. ಎಷ್ಟೋ ಜನ  ಅಪ್ಪನನ್ನು ಗೆಳೆಯನಂತೆ ಕಾಣುತ್ತಾರೆ. ಅದಕ್ಕೆ ಕಾರಣಗಳು ಹಲವಿರಬಹುದು. ನಮ್ಮಲ್ಲೊಬ್ಬ ಹೇಳುತ್ತಿದ್ದ "ನನ್ನಪ್ಪ, ನಾನು ಭಾರಿ ಕ್ಲೋಸ್ ನೋಡಪಾ. ಒಂಥರಾ ಗೆಳ್ಯಾರ್ ಇದ್ದಂಗ. ಇಬ್ಬರೂ ಒಟ್ಟಿಗೆ ಕುಡೀತೀವಿ, ಸಿಗರೇಟ್ ಸೇದತೀವಿ"! ಅಂದರೆ? ಒಟ್ಟಿಗೆ ಕುಡಿದರಷ್ಟೇ ಗೆಳೆಯರೇ? ಅವನ ಅಪ್ಪನಿಗೂ ಕುಡಿಯಲು ಬೇರೆ ಯಾರೂ ಕಂಪನಿ ಇಲ್ಲದಿರಬಹುದು. ಅನಿವಾರ್ಯವಾಗಿ ಮಗನನ್ನು ಗೆಳೆಯನ ಸ್ಥಾನದಲ್ಲಿ ಕೂಡಿಸಿರಬಹುದು. ಈ ವಿಷಯದಲ್ಲಿ ಹಾಗಿರುವ ಸಾಧ್ಯತೆಗಳಿವೆಯಾದರೋ, ಎಷ್ಟೋ ಅಪ್ಪಂದಿರು ನಿಜವಾಗಿಯೂ ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ  ನಡೆದುಕೊಳ್ಳುತ್ತಾರೆ. ಅವರಿಬ್ಬರ ನಡುವೆ ಸಂಬಂಧ ಗಟ್ಟಿಯೂ ಇರುತ್ತದೆ. ಅದೇ ಒಬ್ಬ ಅಪ್ಪ, ಅಪ್ಪನಂತೆ ಅಬ್ಬರಿಸಿದರೆ ಮಕ್ಕಳ ವರ್ತನೆ ಬೇರೆಯದೇ ಆಗಿರುತ್ತದೆ. ಹಾಗಂತ ಅಪ್ಪ ಮಕ್ಕಳೊಟ್ಟಿಗೆ ಕುಡಿಯಬೇಕು ಅಂತ ನಾನು ಹೇಳುತ್ತಿಲ್ಲ!

ಇನ್ನೊಂದು ಸಂದರ್ಭದಲ್ಲಿ, ಒಬ್ಬ ತನ್ನ ಗೆಳೆಯನಿಗೆ ಯಾವುದೋ ವಿಷಯಕ್ಕೆ ಬುದ್ಧಿ ಹೇಳಿದರೆ  ಇನ್ನೊಬ್ಬ ಅವನ ಮೇಲೆ ಕೆಂಗಣ್ಣು ಬಿಟ್ಟು ಎಚ್ಚರಿಸುತ್ತಾನೆ 'ನನಗ ಏನ್ ಮಾಡಬೇಕು ಮಾಡಬಾರದು ಅಂತ ಗೊತ್ತದ, ನೀ ನನ್ನ ಅಪ್ಪನಂಗ ಬುದ್ಧಿ ಹೇಳಬ್ಯಾಡಾ ತಿಳಿತಾ!?' ಅಂದರೆ ಇಲ್ಲಿ ಗೆಳೆಯ ಬಂಧುವಾದಾಗ ರಗಳೆ ಶುರು! ಅದೇ ಒಂದು ವೇಳೆ  ಅಪ್ಪ ಗೆಳೆಯನಾದಾಗ ಆತ ಆತ್ಮೀಯ. ವಿಚಿತ್ರ ಅಲ್ಲವೇ?

ಇನ್ನು ಪತಿ ಪತ್ನಿಯರಲ್ಲಿ ನೋಡೋಣ. ಒಬ್ಬ ಗಂಡ ತನ್ನ ಹೆಂಡತಿಯನ್ನು ಗೆಳತಿಯಂತೆಯೂ, ಹೆಂಡತಿ ಗಂಡನನ್ನು ಗೆಳೆಯನಂತೆಯೂ ಕಂಡರೆ, ಅವರಿಬ್ಬರ ನಡುವೆ ಅನ್ಯೋನ್ಯತೆ ಇರುತ್ತದೆ,  ಸರಸವಿರುತ್ತದೆ ಇಲ್ಲವಾದರೆ ಸಂಸಾರ ನೀರಸವಾಗುತ್ತದೆ! ನಾವು ದಿನನಿತ್ಯ ನೋಡುವ ಎಷ್ಟೋ ಸಂಬಂಧಗಳು ಮುರಿದುಬಿದ್ದಿರುವುದಕ್ಕೆ ಹಲವಾರು ಕಾರಣಗಳಲ್ಲಿ ಇದೂ ಒಂದು ಇರಬಹುದು. ಒಳ್ಳೆಯ ಗೆಳೆಯರಾಗಿದ್ದು, ಪ್ರೇಮಿಸಿ ಮದುವೆಯಾದ ಕೆಲವೇ ದಿನಗಳಲ್ಲಿ ಅಥವಾ ವರ್ಷಗಳಲ್ಲಿ ಜಗಳವಾಡಿ ಒಬ್ಬರ ಮುಖ ಇನ್ನೊಬ್ಬರು ನೋಡದಂತಾಗಿ, ವಿಚ್ಛೇದನದ ಮಟ್ಟಿಗೆ ಹೋಗಬೇಕಾದರೆ, ಆಲ್ಲಿ ಮೊದಲಿದ್ದ ಗೆಳೆತನ ಸತ್ತು ಹೋಗಿರುವುದೂ ಒಂದು ಕಾರಣವಿರಬೇಕಲ್ಲವೆ? ಅವರ ಗೆಳೆತನ ಮುಂದಿನ ಘಟ್ಟಕ್ಕೆ ಹೋದಾಗ ಹೊಸದಾದ "ಗಂಡ ಹೆಂಡತಿ" ಅನ್ನುವ ಪಾತ್ರ ನಿರ್ವಹಿಸುವ ಭರದಲ್ಲಿ ಗೆಳೆತನ ಕಳೆದು ಹೋಗುತ್ತದೆಯೆ? ಅದೂ ಅಲ್ಲದೆ ಮದುವೆ ಆದ ಮೇಲೆ ಇಬ್ಬರ ಬಂಧುಗಳೂ ಇವರ ಮಿತ್ರರಾಗುವುದಿಲ್ಲ ಅಥವಾ ಅವರಿಗೆ ಇವರು ಮಿತ್ರರಾಗುವುದಿಲ್ಲ. ಹೀಗೆ ಭಿನ್ನಾಭಿಪ್ರಾಯಗಳು ಮೂಡಿ ಎಲ್ಲಾ ಬಂಧುಗಳು ಶತ್ರುಗಳಾಗಿ ಅದೂ ಇವರ ವಿರಸಕ್ಕೆ ಕಾರಣವಾಗಬಹುದು! ಗೆಳೆತನ ಗಟ್ಟಿ ಇರುವ ದಂಪತಿಗಳು ಇಂತಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬಲ್ಲರು.       

ಇನ್ನೊಂದು ದಿಕ್ಕಿನಿಂದ ಯೋಚಿಸೋಣ. ನಾನು ಈ ಮೊದಲು ಹೇಳಿದಂತೆ ನನ್ನ ಗೆಳೆಯನೊಬ್ಬ ನನ್ನನ್ನು ಅಣ್ಣನ ತರಹ ಕಾಣುತ್ತಾನೆ. ಅದು ನನಗೆ ಸಂತಸದ ವಿಷಯವೇ. ನಾವಿಬ್ಬರೂ ಯಾವಾಗಲೋ ಒಂದು ಸಲ ಫೋನಿನಲ್ಲಿ ಖುಷಿಯಿಂದಲೇ ಮಾತಾಡುತ್ತೇವೆ. ಆತ ನನ್ನ ಗೆಳೆಯನಾಗಿದ್ದು, ನನ್ನಲ್ಲಿ ಬಂಧುವನ್ನು ಕಂಡರೂ ನಮ್ಮ ನಡುವೆ ಒಂದು ಪ್ರೀತಿಯಿದೆ. ಅದೇ ಮುಂದುವರಿದು 'ನೀನು ನನ್ನ ಅಣ್ಣನ ಸಮಾನ, ಅದಕ್ಕೆ ನಿನ್ನ ಮನೆಯಲ್ಲೇ ನಿನ್ನೊಟ್ಟಿಗೆ ಇರುತ್ತೇನೆ' ಅಂತ ಅವನು ನನ್ನ ಜೊತೆ ಇರಲು ತೊಡಗಿದರೆ? ಅಥವಾ ಒಂದು ವೇಳೆ ಅವನು ನನ್ನ ಮನೆಯ ಪಕ್ಕದಲ್ಲೇ ಮನೆ ಮಾಡಿಕೊಂಡ ಅಂದುಕೊಳ್ಳೋಣ. ಆಗಲೂ ನಾವು ಪ್ರೀತಿಯಿಂದ ಇರಬಹುದೇ? ಇಬ್ಬರು ವ್ಯಕ್ತಿಗಳು ದೂರದಲ್ಲಿದ್ದಾಗ ಎಲ್ಲವೂ ಸರಿಯೇ ಇರುತ್ತದೆ. ಹತ್ತಿರವಾದಾಗ ಒಬ್ಬರನ್ನೊಬ್ಬರು ಸಹಿಸದಾಗುತ್ತಾರೆಯೇ? ಇರಬಹುದೇನೋ!

ಒಟ್ಟಿನಲ್ಲಿ ಒಬ್ಬ ಬಂಧು ಗೆಳೆಯನಂತಿದ್ದರೆ ಆ ಸಂಬಂಧ ಗಟ್ಟಿ ಇರುತ್ತದೆ. ಗೆಳೆಯ, ಗೆಳೆಯನಂತಿರದೆ ಬಂಧುವಿನಂತಾದರೆ  ತುಸು ಕಷ್ಟ! ಒಂದು ವೇಳೆ ಹಾಗಾದರೂ, ಇಬ್ಬರೂ ಸ್ವಲ್ಪ ದೂರದಲ್ಲಿದ್ದರೇ ಚೆನ್ನ! ಇದು ಸಾರ್ವತ್ರಿಕವಾಗಿ ಅನ್ವಯವಾಗುವುದಿಲ್ಲವಾದರೂ, ಎಷ್ಟೋ ಸಂದರ್ಭಗಳಲ್ಲಿ ಸರಿ ಎನಿಸುತ್ತದೆ. ಏನಂತೀರಿ?

-ಗುರುಪ್ರಸಾದ ಕುರ್ತಕೋಟಿ